ಚೇಂಬರ್ನಿಂದ ಹೊರ ಬಂದ ಸುಶಾಂತನ ಕಂಗಳು ನಂದಿತಾಳಿಗಾಗಿ ಅರಸಿದ್ದವು. ಅವಳಾಗಲೇ ಇಷ್ಟೊತ್ತಿಗೆ ರಾತ್ರಿಯ ಶಿಫ್ಟ್ಗೆ ಬರಬೇಕಿತ್ತು. ಅವಳ ತಂಡದವರಾಗಲೇ ತಂತಮ್ಮ ಕುರ್ಚಿಗಳಲ್ಲಿ ಆಸೀನರಾಗಿ ಅಂತರಜಾಲದಲ್ಲಿ ತಮ್ಮಿಷ್ಟದ ವೆಬ್ಸೈಟ್ಗಳಿಗೆ ಭೇಟಿ ನೀಡುತ್ತಿದ್ದರು. ಮತ್ತೆ ಕೆಲವರು ಹಿಂದಿನ ದಿನ ತಾವು ಕೆಲಸ ಮಾಡಿದ ಫೈಲ್ಗಳು ಪ್ರೂಫ್ ರೀಡರ್ರಿಂದ ಮೌಲ್ಯಮಾಪನಕ್ಕೆ ಒಳಪಟ್ಟು ಫಲಿತಾಂಶದೊಂದಿಗೆ ಬಂದಿರುವುದನ್ನು ವೀಕ್ಷಿಸುತ್ತಿದ್ದರು.

ಎಲ್ಲರೂ ಬಂದವರೇ ಒಬ್ಬರಿನ್ನೊಬ್ಬರೊಂದಿಗೆ ಒಂದೈದು ನಿಮಿಷ ಕುಶಲೋಪರಿ ಮಾತಾಡಿ ಒಮ್ಮೆ ಆಸೀನರಾದೊಡನೆಯೇ ತಮ್ಮದೇ ವೈದ್ಯಕೀಯ ಲೋಕಕ್ಕೆ ಇಳಿಯುತ್ತಿದ್ದರು. ಸುಶಾಂತನ `ಮಿನರ್ವಾ~ ತಂಡದವರು ಕುಳಿತ ಹತ್ತು ನಿಮಿಷಗಳಲ್ಲೇ ಸ್ಟೀರಿಯೋ ಫೋನಿಕ್ ಹೆಡ್ಸೆಟ್ನ್ನು ತಲೆಗೇರಿಸಿ ತಮಗೆ ನಿಗದಿಪಡಿಸಿದ ವಿದೇಶಿ ಆಸ್ಪತ್ರೆಗಳಿಂದ ಫೈಲ್ಗಳನ್ನು ಒಂದೊಂದಾಗಿ ತಮ್ಮ ಕಂಪ್ಯೂಟರ್ಗಳಿಗೆ ಡೌನ್ಲೋಡ್ ಮಾಡಿಕೊಳ್ಳುತ್ತಿದ್ದರು. ಫುಟ್ಪೆಡಲ್ ಅದುಮುತ್ತಲೇ ವಿದೇಶಿ ವೈದ್ಯರು ತಮ್ಮ ರೋಗಿಯ ವೈದ್ಯಕೀಯ ವರದಿಯ ಕುರಿತಾಗಿ ನೀಡಿದ ಉಕ್ತಲೇಖನದ ಧ್ವನಿಸುರುಳಿಗಳಲ್ಲಿರುವ ಮಾತುಗಳು ಹೆಡ್ಸೆಟ್ನಲ್ಲಿ ಕೇಳಿ ಬಂದು ಅದನ್ನು ತಲ್ಲೆನರಾಗಿ ಆಲಿಸುತ್ತಾ ಪಠ್ಯರೂಪಕ್ಕೆ ಲಿಪ್ಯಂತರ ಮಾಡಲು ಸಜ್ಜಾಗುತ್ತಿದ್ದರು. ಸುಶಾಂತನ ತಂಡದ ಮಂದಿ ಉತ್ತರದಲ್ಲಿ ಆಸೀನರಾಗಿದ್ದರೆ ನಂದಿತಾಳ `ಭೂಮಿಕಾ~ ತಂಡಕ್ಕೆ ದಕ್ಷಿಣದಲ್ಲಿ ಸ್ಥಾನ ನೀಡಿದ್ದರು. ಉತ್ತರ-ದಕ್ಷಿಣವಾದರೂ ಭೇಟಿಯಾಗಿ ಮಾತಾಡಲು ಆ ವಿಶಾಲ ಕೋಣೆಯಲ್ಲಿ ಯಾವ ಅಡಚಣೆಯೂ ಇರಲಿಲ್ಲ.

ನಂದಿತಾಳಿಗಾಗಿ ಹುಡುಕಾಡಿದ ಕಂಗಳು ಕಡೆಗೆ ಅವಳನ್ನು ಗುರುತಿಸಿದೊಡನೆ ಅರಳಿದ್ದವು. ಕೈ ಬೀಸಿ ಅವಳ ಸಮೀಪ ಹೋಗಿ ಮ್ಯಾನೇಜರ್ರವರನ್ನು ಈರ್ವರೂ ಕಾಣಬೇಕಾದ ವಿಷಯ ನುಡಿದ.

ಓಹ್. ವಾರದ ಫಲಿತಾಂಶ ಕುರಿತಾಗಿ ಚರ್ಚಿಸೋದಿಕ್ಕೆ ತಾನೇ?
ಹಾಗ್ಲ್ಲಲ. ಹೊಸ ಆಸ್ಪತ್ರೆಗಳು ಈ ಸಂಸ್ಥೆಯ `ಹೊರಗುತ್ತಿಗೆ~ಗೆ ಸೇರ್ಪಡೆಯಾಗಿರಬೇಕೇನೋ? ವಿಷಯ ಗೊತ್ತಿಲ್ಲ. ಇ-ಮೇಲ್ ಬಂದ್ದದ್ದನ್ನು ನೋಡಿದೆ.

ಈಗಷ್ಟೇ ಅವರ ಚೇಂಬರ್ನಿಂದ ಬಂದೆ. ಅವರಿನ್ನೂ ಬಂದಿರಲಿಲ್ಲ. ಇಬ್ಬರೂ ಒಟ್ಟಿಗೆ ಹೋದರಾಯ್ತೆಂದು ಬಂದೆ. ನಿನಗಾಗಿ ವಿಚಾರಿಸಿದೆ. ಎಲ್ಲೂ ಕಾಣಿಸಲ್ಲ್ಲಿಲ. ಈಗ ಬಂದೆಯೇನು? ಮನೆಯಲ್ಲಿ ಎಲ್ಲರೂ ಕ್ಷೇಮ ತಾನೆ?

ಹತ್ತು ದಿನಗಳ ರಜೆಯ ಬಳಿಕ ಬಂದ ಅವಳನ್ನು ಕಾಳಜಿಯಿಂದ ವಿಚಾರಿಸಿದ್ದ.
ಹೌದು ಸುಶಾಂತ. ಮನೆಯಲ್ಲಿ ಸ್ವಲ್ಪ ಪ್ರಾಬ್ಲಂ ಇತ್ತು.

ಸಮಸ್ಯೆ ಇದ್ದರೆ ಇನ್ನೊಂದಿಷ್ಟು ದಿನ ರಜೆ ಹಾಕಬಹುದಾಗಿತ್ತಲ್ಲಾ. ನಿನ್ನ ಟೀಮ್ ಅನ್ನು ನಾನು ನಿಭಾಯಿಸ್ತಿದ್ದೆ.

ಥ್ಯಾಂಕ್ಯೂ. ಅಂಥಹದ್ದೇನು ಇಲ್ಲಾ ಬಿಡು. ತನ್ನ ಕಚೇರಿಯಲ್ಲಿರುವ ಆಪ್ತ ಗೆಳೆಯನ ಸಲಹೆಯನ್ನು ಹಿತವಾಗಿ ಸರಿಸಿದ್ದಳು.

ಅವರಿಬ್ಬರೂ ಪ್ರತ್ಯೇಕ ತಂಡಗಳ ಟೀಮ್ ಲೀಡರ್ಗಳಾಗಿದ್ದರಿಂದ ಒಬ್ಬರು ಮತ್ತೊಬ್ಬರೊಂದಿಗೆ ಸ್ಪರ್ಧೆಗಿಳಿಯಬೇಕಾಗಿತ್ತಾದರೂ ಸಂಕಷ್ಟದ ವೇಳೆ ಒಬ್ಬರಿನ್ನೊಬ್ಬರಿಗೆ ಸಹಾಯಕ್ಕೆ ಬರದಿರುತ್ತಿರಲಿಲ್ಲ. ಅವರಿಬ್ಬರೂ ಮ್ಯಾನೇಜರ್ರವರ ಚೇಂಬರ್ ಕಡೆ ಹೆಜ್ಜೆ ಹಾಕುತ್ತಲೇ ವಿಶಾಲವಾದ ಆ ಹವಾನಿಯಂತ್ರಿತ ಕೋಣೆಯಲ್ಲಿ ಮೆಲು ದನಿಯಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು.

ಜಯಪ್ರಭು ಚೆನ್ನಾಗಿದ್ದಾರಾ? ರೋಹಿಣಿ ಪಾಪು ಹೇಗಿದ್ದಾಳೆ? ನಾನು ಕೇಳ್ದೇಂತಾ ಹೇಳು. ತುಂಬಾ ದಿನಗಳಾಗಿತ್ತು ಅವಳನ್ನು ನೋಡಿ. ನೀವುಗಳು ಮೂರು ತಿಂಗಳ ಹಿಂದೆ ನಡೆದ ಫ್ಯಾಮಿಲಿ ಪಾರ್ಟಿಗೆ ಬಂದಾಗಷ್ಟೇ ಅವರನ್ನು ಮಾತಾಡಿಸಿದ್ದು.

ಅವನ ಮಾತಿನ ಲಯಕ್ಕೆ ಸರಿಸಮವಾಗಿ ಉತ್ತರಿಸಲಾಗದೆ ನಂದಿತಾ ತನ್ನದೇ ಸಮಯವನ್ನು ತೆಗೆದುಕೊಂಡಳು.

ಹೂಂ. ಜಯ್ ಚೆನ್ನಾಗಿದ್ದಾರೆ. ರೋಹಿಣಿ... ಅವಳೂ ಚೆನ್ನಾಗಿದ್ದಾಳೆ... ಮಿತವಾಗಿ ನುಡಿದವಳೇ ಚೇಂಬರ್ ಬಾಗಿಲತ್ತಲೇ ದೃಷ್ಟಿ ನೆಟ್ಟು ಬಾಯಿಗೆ ಬೀಗ ಹಾಕಿದಂತೆ ಮೌನ ತಾಳಿದಳು.

ಅವಳ ಮುಖವನ್ನು ನೋಡಿದ ಸುಶಾಂತನಿಗೆ ಯಾಕೋ ಎಲ್ಲವೂ ಸರಿಯಾಗಿಲ್ಲವೆಂಬ ಅನುಮಾನ ಕಾಡಿತ್ತು.

ಅಷ್ಟರಲ್ಲಾಗಲೇ ಮ್ಯಾನೇಜರ್ರವರ ಚೇಂಬರ್ ಬಾಗಿಲನ್ನು ಸಮೀಪಿಸಿದ್ದರು.
ಮ್ಯಾನೇಜರ್ ನಿಗುಡಗಿ ಅವರಿಬ್ಬರಿಗೆ ಕುಳಿತುಕೊಳ್ಳುವಂತೆ ಸೂಚನೆ ನೀಡುತ್ತಾ ಕಂಪ್ಯೂಟರ್ನಲ್ಲಿ ಯಾವುದೋ ವಿಷಯವನ್ನು ವೀಕ್ಷಿಸುತ್ತಿದ್ದವರು ತಮ್ಮ ಕಾರ್ಯ ಮುಗಿದೊಡನೆ ಸ್ಪ್ರಿಂಗ್ಚೇರ್ನ್ನು ಇವರಿಬ್ಬರಿಗೆ ಎದುರಾಗಿ ತಿರುಗಿಸಿ ವಿಷಯ ಪ್ರಸ್ತಾಪಿಸಿದರು.

ನಂದಿತಾ. ಸುಶಾಂತ. ನಿಮ್ಮನ್ನು ಬರಹೇಳಿದ್ದು ಯಾಕೆಂದರೆ ನಮ್ಮ ಸಂಸ್ಥೆಯಲ್ಲಿ ಬಹಳಷ್ಟು ಮೆಡಿಕಲ್ ಟ್ರಾನ್ಸ್ಕ್ರಿಪ್ಶನಿಸ್ಟ್ಗಳಿಗೆ ಇತ್ತೀಚೆಗೆ ಅನೇಕ ಆಸ್ಪತ್ರೆಗಳ ಫೈಲ್ಗಳನ್ನು ಒಪ್ಪಿಸಲಾಗ್ತಿದೆ. ಅದರೊಂದಿಗೆ ವೇಗವಾಗಿ ಯಾವ ತಪ್ಪೂ ಇಲ್ಲದೆ ನುಡಿದದ್ದನ್ನು ಟೈಪ್ ಮಾಡಿ ಕೆಲಸ ಮುಗಿಸಲು ಆದ್ಯತೆ ನೀಡಲಾಗ್ತಿದೆ. ಅವರ ಉತ್ತಮ ಸೇವೆಗೆ ಪ್ರೋತ್ಸಾಹ ಧನ ಇನ್ಕ್ರಿಮೆಂಟ್ ಹಾಗೂ ಪ್ರೊಮೋಷನ್ಗಳನ್ನು ನೀಡುತ್ತಿದ್ದರೂ ಅವರ ಸೇವೆಯನ್ನು ಮತ್ತಷ್ಟು ಉತ್ತಮಪಡಿಸುವ ದೃಷ್ಟಿಯಿಂದ ಒಂದು `ಔಟಿಂಗ್~ ಪ್ಲಾನ್ ಮಾಡೋಣವೆಂದು ಮೇನೇಜ್ಮೆಂಟ್ ನಿರ್ಧಾರ ತಳೆದಿದೆ. ಬೆಂಗಳೂರಿನ ಹೊರವಲಯದಲ್ಲಿರುವ `ಜೆನ್ನಿ ರಿಸಾರ್ಟ್~ಗೆ ಹೋಗೋದಿಕ್ಕೆ ಈ ಭಾನುವಾರವೇ ಸೂಕ್ತ ಸಮಯ ಅನ್ನಿಸ್ತು. ನಮ್ಮ ಫ್ಲೋರ್ನಲ್ಲಿರುವ ಒಂದೊಂದು ಶಿಫ್ಟ್ನವರಿಗೆ ಒಂದೊಂದು ದಿನ ನಿಗದಿ ಪಡಿಸಿದ್ದೇವೆ. ನೀವೇನು ಹೇಳ್ತೀರಾ?

ನಂದಿತಾ ಹಾಗೂ ಸುಶಾಂತ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ತಮ್ಮ ಸಂಸ್ಥೆಯಲ್ಲಿ ತಿಂಗಳಿಗೊಂದು ಹೊಸ ಯೋಜನೆ ತಯಾರಿಸಲೆಂದೇ ಸೃಜನಶೀಲ ತಂಡವೊಂದಿತ್ತು. ಒತ್ತಡದ ನಡುವೆಯೂ ಆರಾಮವಾಗಿ ಉಸಿರಾಡಲು ಯೋಜನೆಗಳನ್ನು ತಯಾರಿಸುವುದೇ ಅವರ ಕಾರ್ಯ. ಈ ಯೋಜನೆಯೇನೂ ತೆಗೆದುಹಾಕುವ ಹಾಗಿರಲಿಲ್ಲ.
ನಂತರ ಅವರ ಮಾತುಕತೆ ತಂಡದ ಸದಸ್ಯರ ಕಾರ್ಯ ಪ್ರಗತಿಯತ್ತ ಸಾಗಿತ್ತು.

ಮಾತುಕತೆ ಮುಗಿಸಿ ಹೊರಬಂದಾಗ ಆಗಲೇ ಅವರ ತಂಡದವರು ಇವರ ಸಹಾಯಕ್ಕಾಗಿ ಕೆಲವು ಫೈಲ್ಗಳನ್ನು `ಪೋಸ್ಟ್~ ಮಾಡದೆ ಹಾಗೆಯೇ ಇರಿಸಿ ಇನ್ನೊಂದಕ್ಕೆ ಕೈ ಹಾಕಿದ್ದರು. ಸುಶಾಂತ ತನ್ನ ತಂಡದ ಹುಡುಗಿಯೊಬ್ಬಳು ಹೆಡ್ಸೆಟ್ನಲ್ಲಿ ಆಲಿಸಿದ ಉಕ್ತಲೇಖನವನ್ನು ಲಿಪ್ಯಂತರ ಮಾಡುವಾಗ ಅದರಲ್ಲಿ ಹಲವು ಪದಗಳನ್ನು ಗ್ರಹಿಸಲಿಕ್ಕಾಗದೆ ಹಾಗೆಯೇ ಖಾಲಿ ಬಿಟ್ಟು ಹಳದಿ ಬಣ್ಣದಲ್ಲಿ ಗೆರೆಗಳನ್ನು ಎಳೆದುಬಿಟ್ಟಿರುವುದು ಕಂಡು ಅತ್ತ ಧಾವಿಸಿದ್ದ.

ನಂದಿತಾ. ಬ್ರೇಕ್ನಲ್ಲಿ ಸಿಗೋಣ. ನಮ್ಮವರಲ್ಲಿ ಕೆಲವರಿಗೆ `ಜಾಂಡಿಸ್~ ಬಂದಿದೆ ಎಂದು ಕಾಣುತ್ತೆ ಎಂದು ನಗುತ್ತಾ ಹೊರಟ. ನಂದಿತಾ ಮುಗುಳು ನಕ್ಕು ಹೊರಟಳು. ಅವಳ ಮನದಲ್ಲಿ ಮೂಡಿದ್ದೇ ಬೇರೆ ವಿಚಾರಗಳು.

`...ಕೆಲವರಿಗೆ ಪದಗಳು ಸರಿಯಾಗಿ ಕೇಳಿಸದೆ ಬ್ಲಾಂಕ್ಸ್ ಹೆಚ್ಚಾಗಿ `ಜಾಂಡಿಸ್~ ಕಾಣಿಸಿಕೊಳ್ಳುತ್ವೆ. ಇನ್ನೂ ಕೆಲವರಿಗೆ ಲಿವರ್ ಸರಿಯಾಗಿ ಕೆಲಸ ಮಾಡದೆ ಆರೋಗ್ಯ ಕೆಟ್ಟು ಜಾಂಡಿಸ್ ಬರುತ್ತೆ. ಮತ್ತೆ ಕೆಲವರಿಗೆ ಕಿವಿ, ಕಣ್ಣು, ದೇಹ ಚೆನ್ನಾಗಿ ಕೆಲಸ ಮಾಡ್ತಿದ್ದರೂ ಅವರು ಪ್ರಪಂಚವನ್ನು ನೋಡುವ ದೃಷ್ಟಿಯೇ ಭಿನ್ನವಾಗಿ ಕಾಮಾಲೆ ಕಣ್ಣಿಂದ ನೋಡಿದಂತೆ ವಿಕೃತ ಭಾವನೆಗಳು...~

ಅವಳು ತನ್ನ ತಂಡದ ಸದಸ್ಯರಿಗೆ ಫೈಲ್ಗಳನ್ನು ಕೇಳಿಸಿ ಪದಗಳನ್ನು ಹುಡುಕಿ ಕೊಡಲು ಬಹಳವೇ ಶ್ರಮಪಟ್ಟಳು. ಅವಳು ಎಂದಿನಂತಿಲ್ಲವೆಂದು ಅವರ ತಂಡದವರೂ ಮನಗಂಡಿದ್ದರು. ಇದರ ಜೊತೆಗೆ ತಾವು ಕೆಲಸ ಮಾಡುತ್ತಿದ್ದ ಆಸ್ಪತ್ರೆಯವರು ಕೆಲವು ತುರ್ತು ವರದಿಗಳನ್ನು ಶೀಘ್ರವಾಗಿ ರವಾನೆ ಮಾಡಲು ಕೇಳಿಕೊಂಡಿದ್ದರು.

ತುರ್ತಾಗಿ ರವಾನೆ ಮಾಡಬೇಕಂತೆ. ಒಂದಷ್ಟು ಸ್ಪಷ್ಟವಾಗಿ ಮಾತಾಡಿದ್ದರೆ ಅವರ ಬೇಡಿಕೆ ಈಡೇರಿಸಲು ಸುಲಭವಾಗ್ತಿತ್ತು. ಈ `ಆಪರೇಷನ್ ಪ್ರೊಸೀಜರ್~ ಅನ್ನು ಆ ದೇವರೇ ಅರ್ಥೈಸಬೇಕಷ್ಟೇ. ಆ ವೈದ್ಯರು ಮತ್ತವರ `ಉಚ್ಚಾರಣೆ!~. ಅಬ್ಬಾ! ಬ್ರೇಕ್ನಲ್ಲಿ ಸುಶಾಂತನೊಂದಿಗೆ ಕ್ಯಾಂಟೀನಿಗೆ ಹೆಜ್ಜೆ ಹಾಕುತ್ತಾ ನಂದಿತಾ ಏರ್ಕಂಡೀಷನ್ಡ್ ಕೋಣೆಯಾದರೂ ಬಿಸಿ ಹಂಡೆಯಿಂದ ಕೂತು ಹೊರಬಂದಂತೆ ಈಗ ಸರಾಗವಾಗಿ ಉಸಿರಾಡಿದಳು. ಸುಶಾಂತನಿಗೆ ಈಗ ಆ ಫೈಲ್ಗಳ ವಿಚಾರವಾಗಿ ಮಾತು ತೆಗೆಯುವುದು ಬೇಡವಾಗಿತ್ತು. ಒಂದೆಡೆ ಪ್ರತ್ಯೇಕವಾಗಿ ಕುಳಿತು `ಟೀ~ ಹೀರುತ್ತಾ ಅವಳು ಮರೆಯಬೇಕೆಂದಿದ್ದ ವಿಚಾರವನ್ನೇ ಕೆದಕಿದಾಗ ಗಾಯದ ಮೇಲೆ ಖಾರ ಸುರಿದಂತಾಗಿತ್ತು.

ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರಲ್ವೇ. ಪಾಪು ಆರೋಗ್ಯ ಹೇಗಿದೆ?
ರೋಹಿಣಿ ಚೆನ್ನಾಗಿದ್ದಾಳೆ. ಒಂದೆರಡು ಸಲ ನಿಮ್ಮ ಬಗ್ಗೆ ಕೇಳಿದ್ದಳು. ಆಫೀಸಿನಲ್ಲಿರುವ ಅಂಕಲ್ ಚಾಕಲೇಟ್ ಕೊಡ್ತಾರೆ. ಒಳ್ಳೆಯವರು ಅಂತಾ. ಭೇಷ್. ಆದರೂ ಮಗುವಿನಿಂದ ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆ ಏನಿದೆ ನಿಮಗೆ? ಹೋದ ವರ್ಷವಷ್ಟೇ ನಮ್ಮ ಕಂಪನಿಯಿಂದ ಅತ್ಯುತ್ತಮ ಸಾಧನೆಗಾಗಿ ಪ್ರಶಂಸಾ ಪತ್ರ ಸಿಕ್ಕಿದೆಯಲ್ವೇ?.

ವಿಷಯ ಮರೆಮಾಚಲು ಪ್ರಯತ್ನಿಸಬೇಡ ನಂದಿತಾ. ನಾನು ನಿನ್ನನ್ನು ದಿನವೂ ನೋಡ್ತಾ ಇದ್ದೀನಿ. ದಿನ ಕಳೆದಂತೆಲ್ಲಾ ಹೆಚ್ಚು ಹೆಚ್ಚು ಅಂತರ್ಮುಖಿಯಾಗುತ್ತಿರುವುದು ಇನ್ನೂ ಜೀವಮಾನದ ಶೇ 30ರಷ್ಟು ಭಾಗ ಕಂಡ ನಿಮಗೆ ಶೋಭೆ ತರುವ ವಿಷಯವಲ್ಲ. ನನ್ನೊಂದಿಗೆ ಹೇಳಲಾಗದಷ್ಟು ಗುಟ್ಟಿನ ವಿಚಾರವೇ. ಅಥವಾ ನಾನು ತಲೆ ಹಾಕದಷ್ಟು ತೀರಾ ವೈಯಕ್ತಿಕವೇ.

ಸುಶಾಂತ. ಪ್ಲೀಸ್. ಜಾಸ್ತಿ ವಿಷಯ ಅಗೆಯಲು ಪ್ರಯತ್ನಿಸಬೇಡಿ. ಸಮಯ ಬಂದಾಗ ನಾನೇ ಹೇಳುವೆ ಎಂದವಳೇ ವಿಶಾಲವಾದ ಗಾಜಿನ ಕಿಟಕಿಗಳ ಮೂಲಕ ಹೊರಗೆ ದೃಷ್ಟಿ ಹಾಯಿಸಿದಳು.

ಹೌದು. ಸುಶಾಂತನಿಗೆ ತನ್ನ ವಿಚಾರಗಳನ್ನು ಹೇಳಿ ಎದೆ ಹಗುರಮಾಡಿಕೊಳ್ಳಬಹುದಿತ್ತು. ಆದರೆ ತನ್ನ ವೈಯಕ್ತಿಕ ಸಮಸ್ಯೆಗೆ ಅವನೇನು ಮಾಡಬಲ್ಲ? ಜಯಪ್ರಭು ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಾ ಸಮಯ ಸಂದರ್ಭಕ್ಕನುಸಾರವಾಗಿ ರಾತ್ರಿ ಹಗಲು ದುಡಿಯಬೇಕಾದುದು ಅನಿವಾರ್ಯವೇ. ಅವನಿಗೆ ನನಗಿಂತಲೂ ಹೆಚ್ಚು ಕೆಲಸದ ಒತ್ತಡಗಳುಂಟು. ಈ ನಡುವೆ ಅವನ ಒತ್ತಡದ ಬದುಕಿಗೆ ಆರಾಮವಾಗಿ ಮನೆಯಲ್ಲಿ ಕೂತು ಗೃಹಿಣಿಯಾಗಿ ಕಾರ್ಯ ನಿರ್ವಹಿಸುವವರು ಸೂಕ್ತವಾಗಿದ್ದರೇನೋ. ನನ್ನ ಒತ್ತಡದ ಬದುಕಿಗೂ ಅವನದಕ್ಕೂ ತಾಳೆಯಾಗುತ್ತಲೇ ಇಲ್ಲ. ಮೂರು ವರ್ಷದ ಮಗಳು ರೋಹಿಣಿಯನ್ನು ಪ್ಲೇ ಹೋಮ್ನಲ್ಲಿ ಬಿಡುತ್ತಾ ಹೇಗೋ ಸಂಸಾರ ನಿಭಾಯಿಸುವುದಾಯ್ತು.

ಈ ಕಂಪನಿಯಲ್ಲಿ ಶಿಫ್ಟ್ ಆಧಾರದ ಮೇಲೆ ಕಾರ್ಯ ನಿರ್ವಹಿಸುವುದು ಒಂದು ರೀತಿಯಲ್ಲಿ ವರದಾನವಾಗಿದ್ದರೆ ಮತ್ತೊಂದು ರೀತಿಯಲ್ಲಿ ತನ್ನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡದೆ ಇರಲಿಲ್ಲ. ಬೆಳಗ್ಗೆ ಐದಕ್ಕೆ ತನ್ನ ಒಂದು ಪಾಳಿ ಪ್ರಾರಂಭವಾಗಿ ಮಧ್ಯಾಹ್ನ ಎರಡು ಗಂಟೆಗೆ ಮುಗಿಯುವಷ್ಟರಲ್ಲಿ ಅದಕ್ಕೆ ತಕ್ಕಂತೆ ಜಯಪ್ರಭುವಿಗೆ ರೋಹಿಣಿಯನ್ನು ಬೆಳಗ್ಗೆ ಎಬ್ಬಿಸಿ, ಸ್ನಾನ ಮಾಡಿಸಿ, ಹಾಲು ಕುಡಿಸಿ, ಒಂದಿಷ್ಟು ತಿಂಡಿ ತಿನ್ನಿಸಿ ಪ್ಲೇಹೋಮ್ನಲ್ಲಿ ಬಿಡುವ ಜವಾಬ್ದಾರಿ ಹೆಗಲ ಮೇಲಿತ್ತು. ಮತ್ತೊಂದು ಪಾಳಿ ಮಧ್ಯಾಹ್ನ ಎರಡು ಗಂಟೆಗೆ ಪ್ರಾರಂಭವಾದರೆ ಮುಗಿಯುವುದು ರಾತ್ರಿ ಹತ್ತು ಗಂಟೆಗಷ್ಟೇ.
ಹದಿನೈದು ದಿನಕ್ಕೊಮ್ಮೆ ಬದಲಾಗುವ ಈ ಪಾಳಿ ಕೆಲಸಕ್ಕೆ ಹೊಂದಿಕೊಳ್ಳಲು ಜಯಪ್ರಭು ತನ್ನ ಸಾಫ್ಟ್ವೇರ್ ಕಂಪನಿಯಲ್ಲಿ ಕೊಂಚ ಮಾತಿನ ಚಕಮಕಿಯನ್ನೆದುರಿಸಬೇಕಿತ್ತು. ಅನಿವಾರ್ಯವಾದಾಗ ಕೆಲವೊಮ್ಮೆ ಮನೆಯಿಂದಲೇ ಅಂತರ್ಜಾಲದ ಮೂಲಕ ಕಾರ್ಯ ನಿರ್ವಹಿಸುತ್ತಿದ್ದರೂ ಎಲ್ಲಾ ದಿನಗಳಲ್ಲಿ ಅದು ಅಸಾಧ್ಯವಾಗಿತ್ತು.

ನಂದಿತಾ, ನೀನು ಹೋಮ್ ಟ್ರಾನ್ಸ್ಕ್ರಿಪ್ಶನ್ಗೆ ಪ್ರಯತ್ನಿಸಬಾರದೇಕೆ? ನನಗೆ ಪ್ರತಿ ಬಾರಿ ಮನೆಯ ಕಡೆ ಗಮನ ಹರಿಸಲು ನಮ್ಮ ಆಫೀಸಿನಲ್ಲಿ ಅನುಮತಿ ಕೇಳಿ ಕೇಳಿ ಸಾಕಾಗಿದೆ.

ಕೆಲಸಕ್ಕೆ ಸೇರಿ ಐದು ವರ್ಷವೂ ಆಗಿಲ್ಲ ಜಯ್. ಕೆಲಸದಲ್ಲಿ ಪ್ರಾವೀಣ್ಯತೆ ಗಳಿಸಿದರೆ ಮನೆಯಲ್ಲೇ ಮಾಡಬಹುದು. ಅಲ್ಲೆವರೆಗೂ ಅಡ್ಜೆಸ್ಟ್ ಮಾಡಿಕೋ ಎಂದು ಅವನ ಚಿಂತಿತ ಮೊಗವನ್ನು ತನ್ನೆಡೆ ತಿರುಗಿಸುತ್ತಾ ಸಮಾಧಾನಪಡಿಸಲು ಪ್ರಯತ್ನಿಸಿದರೂ ಅವನ ಹಣೆಯ ಮೇಲಿನ ಗೆರೆಗಳು ತಿಳಿಯಾಗಿರಲಿಲ್ಲ. ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂದೆನಿಸಿದರೂ ತನ್ನ ಕಡೆಯಿಂದ ಸದ್ಯಕ್ಕೆ ಬದಲಾವಣೆ ಸಾಧ್ಯವೇ ಇರಲಿಲ್ಲ.

ಜಯಪ್ರಭುವಿನ ಕೆಲಸದ ಒತ್ತಡದ ನಡುವೆ ಮನೆಯ ಜವಾಬ್ದಾರಿ ಕೊಂಚ ಅವನ ಪ್ರಗತಿಗೆ ಪೆಟ್ಟಾಗಿತ್ತೆಂಬುದು ದಿಟವಾಗಿತ್ತು. ಅವನ ಬಡ್ತಿಗೆ ಹಿನ್ನಡೆ ಉಂಟಾಗಿದ್ದನ್ನು ಅವನೇ ಒಮ್ಮೆ ರಾತ್ರಿ ಕಹಿಯಾಗಿ ವಿಷಯ ಬಿಚ್ಚಿಟ್ಟಾಗ ಅವಳಿಗೂ ಪಿಚ್ಚೆನಿಸಿತ್ತು.

ಐ ಯಾಮ್ ಸಾರಿ ಟು ಹಿಯರ್ ಅಬೌಟ್ ಇಟ್ ಜಯ್. ಚಿಯರ್ ಅಪ್ ಎಂದಾಕೆಯ ಕೈಯನ್ನು ಒದರಿ ಅವನು ಮಗ್ಗುಲು ಬದಲಾಯಿಸಿದ್ದ. ಅವನು ಇತ್ತೀಚೆಗೆ ಮಾತು ಕಮ್ಮಿ ಮಾಡಿದ್ದು ಅವಳಿಗೆ ನುಂಗಲಾರದ ಬಿಸಿ ತುಪ್ಪದಂತಾಗಿತ್ತು.

ಭಾನುವಾರ ತಮ್ಮ ಕಂಪನಿಯು ಬೆಂಗಳೂರಿನ ಹೊರವಲಯದಲ್ಲಿ ಹಮ್ಮಿಕೊಂಡಿರುವ ವಿಹಾರ ಕಾರ್ಯಕ್ರಮದ ಬಗ್ಗೆ ಹೇಳಲು ಸಮಯವೇ ಕೂಡಿ ಬರದಾಗಿತ್ತು. ಹಿಂದಿನ ದಿನವಷ್ಟೇ ಅವಳು ಬಾಯ್ಬಿಟ್ಟು ಕಾರ್ಯಕ್ರಮದ ಬಗ್ಗೆ ಹೇಳಿದಾಗ ಅವನು ವ್ಯಂಗ್ಯವಾಗಿ ಅಣಕವಾಡಿದ್ದ. ಅಥವಾ ಆ ರೀತಿ ಅವಳಿಗೆ ಅನಿಸಿತ್ತೇನೋ...

ನೀನು ಹಾಯಾಗಿ ಹೊರಗಡೆ ಮಜಾ ಮಾಡು. ನಾನು ಮನೆಯಲ್ಲಿ ಅಡಿಗೆ ಮಾಡಿಕೊಂಡು ಮಗೂನಾ ನೋಡ್ಕೊಂಡಿರ್ತೀನಿ.

ನಿನಗೆ ಒಪ್ಪಿಗೆಯಿಲ್ಲವೆಂದ ಮೇಲೆ ಬೇಡ. ವಾರಕ್ಕೊಂದು ದಿನವಷ್ಟೇ ನಮಗೆ ಬಿಡುವು. ಆ ದಿನವೂ ಮನೆಯಲ್ಲಿರದಿದ್ದರೆ ಹೇಗೆ ಅನ್ನೋದೇ ನಿನ್ನ ಅಸಮಾಧಾನವಲ್ಲವೇ? ಅರ್ಥವಾಯಿತು.

ನಿನಗೂ ನಿನ್ನ ಕಚೇರಿಯಲ್ಲಿ ಒತ್ತಡವಿರುತ್ತದೆ. ಅದರಿಂದ ಹೊರಬರಲಿಕ್ಕಾಗಿಯೇ ಯಾವಾಗಲೋ ಒಮ್ಮೆ ಬರುವ ಇಂತಹ ಕಾರ್ಯಕ್ರಮಗಳನ್ನು ಯಾಕೆ ಮಿಸ್ ಮಾಡಿಕೊಳ್ತೀಯಾ. ಐ ವಿಲ್ ಮ್ಯಾನೇಜ್ ದಿ ಹೌಸ್ ಎಂದಾಗ ಅವನ ಮಾತಿನಲ್ಲಿ ವ್ಯಂಗ್ಯವಿದೆಯೇ ಎಂದು ಪರೀಕ್ಷಿಸಿದಳು. ಆದರೆ ಅವನು ಅವಳ ಕಣ್ಣೋಟದಿಂದ ತಪ್ಪಿಸಿಕೊಳ್ಳುತ್ತಾ ಟೀವಿ ನೋಡತೊಡಗಿದ್ದ.

ಅವಳಿಗೆ ಮರುದಿನ ಮನೆ, ಕಚೇರಿ ಎಲ್ಲವನ್ನೂ ಮರೆಯುವಂತೆ ಮಾಡಿತ್ತು ಆ ಹೊರವಲಯದ `ಔಟಿಂಗ್~ ಎನ್ನಬಹುದು. ನಡುನಡುವೆ ವಿರಾಮದ ವೇಳೆ ಜಯಪ್ರಭುವಿನ ಮೊಬೈಲ್ಗೆ `ಎಸ್.ಎಂ.ಎಸ್~ ಮಾಡುತ್ತಾ ಮಗಳು ರೋಹಿಣಿಯ ಕುರಿತು ವಿಚಾರಿಸುತ್ತಿದ್ದಳು. ಇದನ್ನು ನೋಡಿ ಸುಶಾಂತ ಲೇವಡಿ ಮಾಡದಿರಲಿಲ್ಲ.

ನಂದಿತಾ ಮೇಡಂನವರ ಮನಸ್ಸಿನ್ನೂ ಮನೆಯಲ್ಲೇ ಬಿಟ್ಟು ಬಂದಿದ್ದಾರೆಂದು ಕಾಣುತ್ತೆ ಎಂದು ತನ್ನ ಇತರ ಸಹೋದ್ಯೋಗಿಗಳ ಕಡೆ ತಿರುಗಿ ತಮಾಷೆ ಮಾಡುವವನಂತೆ ಕಣ್ಣು ಹೊಡೆದಿದ್ದ. ಆದರೆ ಇದರ ಅರಿವಿಲ್ಲದಂತೆ ನಂದಿತಾ `ಎಸ್.ಎಂ.ಎಸ್~ ಸಂವಹನದಲ್ಲಿ ಬಿಜಿಯಾಗಿದ್ದಳು.

ಸಹೋದ್ಯೋಗಿಗಳೆಲ್ಲರೂ ತಮ್ಮ ಮುಂದಿನ ಹಂತವಾದ `ರಾಕ್ ಕ್ಲೈಂಬಿಂಗ್~ ಮಾಡಲು ಸನ್ನದ್ಧರಾದಾಗ ನಂದಿತಾ ಎಚ್ಚೆತ್ತು ತನ್ನ ಮೊಬೈಲ್ನ್ನು ಅಲ್ಲಿನ ಸಿಬ್ಬಂದಿಯೋರ್ವರ ವಶಕ್ಕೆ ನೀಡಿ ತಾನೂ ಗುಡ್ಡ ಹತ್ತಲು ಸನ್ನದ್ಧಳಾಗಿದ್ದಳು. ಅವಳು ಮೇಲೆ ಹತ್ತಿ ಕೆಳಗಿಳಿದು ಬರುವಷ್ಟರಲ್ಲಿ ಮೊಬೈಲ್ನಲ್ಲಾಗಲೇ ಮೂರ್ನಾಲ್ಕು ಮಿಸ್ಡ್ ಕಾಲ್ಗಳಿದ್ದವು. ಅದಕ್ಕೆ ಮರುಕರೆ ಮಾಡಿ ಮಾಹಿತಿ ತಿಳಿದುಕೊಳ್ಳುತ್ತಿದ್ದಂತೆಯೇ ಅವಳ ಮುಖ ಕಳೆಗುಂದಿತ್ತು.

ಕಾರ್ಯಕ್ರಮದ ಸಂಚಾಲಕರಿಗೆ ತಾನು ತುರ್ತಾಗಿ ಹೊರಡುವ ವಿಷಯ ತಿಳಿಸಿ ತನ್ನ ದ್ವಿಚಕ್ರ ವಾಹನದಲ್ಲಿ ಹೊರಡುತ್ತಿದ್ದಂತೆಯೇ ಸುಶಾಂತನಿಗೂ ವಿಷಯ ತಿಳಿದು ತಾನೂ ಅವಳೊಂದಿಗೆ ಹೊರಡಲು ಮುಂದಾಗಿದ್ದ.

ನಿಮಗ್ಯಾಕೆ ತೊಂದರೆ. ನಾನೇ ನೋಡ್ಕೋತೀನಿ ಎಂದವಳೇ ನವಿರಾಗಿ ನಿರಾಕರಿಸಿದ್ದಳು.

ಆದರೂ ಸಂಭಾಷಣೆಯನ್ನು ತೆರೆದೇ ಇಟ್ಟಿದ್ದ. ಅವಶ್ಯಕತೆ ಇದ್ದಾಗ ನನಗೆ ಒಂದು ಫೋನ್ ಮಾಡು ಎಂದಿದ್ದ. `ಔಟಿಂಗ್~ ಈ ರೀತಿ ಕೊನೆಗೊಳ್ಳುತ್ತದೆಂದು ಯಾರು ಬಲ್ಲರು.
ನಂದಿನಿ ನೇರವಾಗಿ ತನ್ನ ಮನೆಯ ಬಳಿಯಿದ್ದ ಆಸ್ಪತ್ರೆಗೆ ಹೋದಾಗ ಆಗಷ್ಟೇ ವೈದ್ಯರು ತುರ್ತು ವಿಭಾಗದಲ್ಲಿ ರೋಹಿಣಿಯ ಹಣೆಗೆ ಆದ ಗಾಯದ ಮೇಲೆ ಐದಾರು ಹೊಲಿಗೆಗಳನ್ನು ಹಾಕಿಯಾಗಿತ್ತು. ವೈದ್ಯರು ಚೀಟಿಯಲ್ಲಿ ಬರೆದ ಔಷಧಿಯನ್ನು ತರಲು ಹೊರಟ ಜಯಪ್ರಭುವನ್ನು ಹಿಂಬಾಲಿಸುತ್ತಾ ಕೇಳಿದ್ದಳು.

ಇದೆಲ್ಲಾ ಹೇಗಾಯ್ತು?
ಜಯಪ್ರಭು ವಿವರಿಸಿ ಹೇಳುವುದರಲ್ಲಿ ಸ್ವಲ್ಪ ಹಿಂದೆ ಎಂಬುದನ್ನು ಬಲ್ಲಳು. ಆದರೂ ಅವನ ಬಾಯಿಯಿಂದಲೇ ಮಾಹಿತಿ ಹೊರಬರಬೇಕಿತ್ತು.

ಪುಟ್ಟಿಯನ್ನು ಹಾಲಿನಲ್ಲಿ ಆಡಲು ಬಿಟ್ಟು ಯಾವುದೋ ಒಂದು ಫೋನ್ ಕರೆ ಅಟೆಂಡ್ ಮಾಡೋದಿಕ್ಕೆ ಹೋದಾಗ ಅವಳು ಸೋಫಾದಿಂದ ಕೆಳಗಿಳಿಯಲು ಹೋಗಿ ಎಡವಿ ಎದುರಿಗಿದ್ದ ಟೀಪಾಯಿಯ ಗಾಜಿನ ಮೊನೆ ಅವಳ ಹಣೆಗೆ ಚುಚ್ಚಿ ದೊಡ್ಡ `ಕಟ್~ ಆಯ್ತು. ಈಗ ಡಾಕ್ಟರ್ ಹೊಲಿಗೆ ಹಾಕಿದ್ದಾರೆ. ಅಪಾಯವೇನೂ ಇಲ್ಲಾ ಎಂದಿದ್ದಾರೆ. ಒತ್ತಡದ ಸಂದರ್ಭದಲ್ಲೂ ಅವನು ಅರ್ಥವಾಗುವಂತೆ ನಿಧಾನವಾಗಿ ಪರಿಸ್ಥಿತಿಯನ್ನು ವಿವರಿಸಿ ಹೇಳಿದ್ದ. ಅವನು ತಪ್ಪು ಮಾಡಿದವನಂತೆ ಅವಳ ಕಣ್ಣೋಟದಿಂದ ತಪ್ಪಿಸಿಕೊಳ್ಳುತ್ತಾ ಕಳಾಹೀನನಾಗಿ ಎತ್ತಲೋ ನೋಡುತ್ತಾ ಮೆಡಿಕಲ್ ಸ್ಟೋರ್ ಕಡೆ ಬಿರುಸಾಗಿ ಹೆಜ್ಜೆ ಹಾಕುತ್ತಿದ್ದ. ಅವನ ವೇಗಕ್ಕೆ ತನ್ನ ಹೆಜ್ಜೆಗಳನ್ನು ಹೊಂದಿಸಿಕೊಳ್ಳಲು ಪ್ರಯಾಸಪಡುತ್ತಾ ನಂತರ ಹಿಂದೆ ಬಿದ್ದಿದ್ದಳು.

ತಿರುಗಿ ತುರ್ತು ವಿಭಾಗದ ಕಡೆ ಹೋಗಿ ರೋಹಿಣಿಗೆ ಚಿಕಿತ್ಸೆ ನೀಡಿ ಹೊರ ಬಂದ ವೈದ್ಯರನ್ನು ವಿಚಾರಿಸಿದ್ದಳು. ಅವರಿಂದ ಭರವಸೆಯ ಮಾತುಗಳು ಹೊರಬಂದಾಗಲಷ್ಟೇ ಅವಳ ಡವಗುಟ್ಟುತ್ತಿದ್ದ ಹೃದಯ ಬಡಿತ ಸಾಮಾನ್ಯಕ್ಕೆ ಮರಳಿತ್ತು. ಅತ್ತೂ ಅತ್ತೂ ಮುಖ ಕಣ್ಣು ಕೆಂಪಾದ ರೋಹಿಣಿಯನ್ನು ಹೆಗಲ ಮೇಲೆ ಒರಗಿಸಿಕೊಂಡು ಮನೆಗೆ ಹೋದಾಗ ಒಂದು ರೀತಿಯ ಸ್ಮಶಾನ ಮೌನ ಆವರಿಸಿತ್ತು.

ಜಯಪ್ರಭುವನ್ನು ಹೆಚ್ಚಿಗೆ ಮಾತಾಡಿಸಲಿಕ್ಕೆ ಹೋಗದೆ ರೋಹಿಣಿಯ ಶುಶ್ರೂಷೆ ಮಾಡುತ್ತಾ ರಾತ್ರಿ ನಿದ್ದೆಗೆ ಜಾರಿದ್ದಳು.

ಅವಳು ಬಯಸಿ ಬಯಸಿ ಜಯಪ್ರಭುವನ್ನು ಮದುವೆಯಾಗಿರಲಿಲ್ಲ. ತನ್ನ ತಂದೆ ತಾಯಿ ಅಂತರಜಾಲದಲ್ಲಿ ಬರುವ ವಿವಾಹ ಸಂಬಂಧೀ ಜಾಲದ ತಾಣಗಳಲ್ಲಿ ತನ್ನ ವಿವರಗಳನ್ನು ನೀಡಿದಾಗ ಅದಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಜಯಪ್ರಭುವಿನದೂ ಒಂದಾಗಿತ್ತು. ಮದುವೆ ಮಾತುಕತೆಯ ಬಳಿಕ ಕಡೆಯದಾಗಿ ತಮ್ಮ ಕುಟುಂಬದವರೆಲ್ಲರಿಗೂ ಬಂದ ವರಗಳಲ್ಲಿ ಆತನೇ ಪರವಾಗಿಲ್ಲವೆನಿಸಿ ಹಸೆಮಣೆ ಏರಿದ್ದಾಗಿತ್ತು. ವರ್ಷಕ್ಕೆಲ್ಲಾ ಪುಟ್ಟ ಕೂಸಿನ ಆಗಮನದಿಂದ ಅವಳ ಕೆಲಸಕ್ಕೆ ಒಂದಿಷ್ಟು ಬ್ರೇಕ್ ಸಿಕ್ಕಿತ್ತಾದರೂ ತುಮಕೂರಿನಲ್ಲಿರುವ ತೌರಿನಿಂದ ಬೆಂಗಳೂರಿನಲ್ಲಿನ ಗಂಡನ ಮನೆಗೆ ಬಂದಾಗ ಅತ್ತೆ ಮಾವಂದಿರು ಇರದ ಮನೆಯಲ್ಲಿ ಹಿಂದೆಂದಿಗಿಂತ ಮನೆ ಹಾಗೂ ವೃತ್ತಿಯ ಸಮತೋಲನ ಸ್ಥಾಪಿಸುವುದು ಎಷ್ಟು ಕಷ್ಟವೆಂದು ಮನದಟ್ಟಾಗಿತ್ತು.

ನಂದಿತಾ ಈಗೀಗಷ್ಟೇ ರೋಹಿಣಿ ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಹತ್ತು ದಿನ ರಜೆ ಹಾಕಿದವಳು ಈಗ ಮತ್ತೆ ಅವಳು ಒಂದೆರಡು ದಿನ ರಜೆ ಹಾಕಬೇಕಿತ್ತು. ಪರಿಸ್ಥಿತಿ ಬಲ್ಲ ತನ್ನ ಕಂಪನಿಯ ಮುಖ್ಯಸ್ಥರು ಅವಳ ಕೋರಿಕೆ ಮನ್ನಿಸಿದ್ದರು. ಅವಳಿಗೆ ಈ ರೀತಿ ತಾನು ಪದೇ ಪದೇ ರಜೆ ಪಡೆಯುತ್ತಿರುವುದು ತನ್ನ ವೃತ್ತಿಯ ಪ್ರಗತಿಗೆ ಹಿನ್ನಡೆ ಎಂಬುದೂ ಗೊತ್ತಿತ್ತು. ಆದರೆ ಅದು ಅಷ್ಟು ಬೇಗ ತನ್ನ ಪ್ರಭಾವ ಬೀರುತ್ತದೆ ಎಂಬುದನ್ನು ಅವಳು ನಿರೀಕ್ಷಿಸಿರಲಿಲ್ಲವೇನೋ. ಸತತವಾಗಿ ಅಲ್ಲಿನ ನೌಕರರ ಪ್ರಗತಿಯನ್ನು ತುಲನೆ ಮಾಡುತ್ತಾ ಅಂಕಗಳನ್ನು ನೀಡಿ ಅದರ ಆಧಾರದ ಮೇಲೆ ಇನ್ಕ್ರಿಮೆಂಟ್ ಇಲ್ಲವೇ ಬಡ್ತಿ ನೀಡುತ್ತಿದ್ದ ಕಂಪನಿಯದು. ಟೀಮ್ ಲೀಡರ್ಗಳ ಕೆಲಸದ ಮೇಲೆ ಸದಾ ನಿಗಾ ಇಟ್ಟು ಹೆಚ್ಚು ಫಲಿತಾಂಶವನ್ನು ಕಡಿಮೆ ಅವಧಿಯಲ್ಲಿ ಪಡೆಯುವ ಉದ್ದೇಶದಿಂದ ಅತ್ಯುತ್ತಮ ಕಾರ್ಯ ನಿರ್ವಾಹಕರಿಗೆ ಬಹುಮಾನ ನೀಡುತ್ತಿದ್ದುದೂ ಉಂಟು. ಇದರಿಂದಾಗಿ ಒಬ್ಬರು ಮತ್ತೊಬ್ಬರೊಂದಿಗೆ ಸ್ಪರ್ಧೆಗಿಳಿದು ತುದಿಗಾಲಿನ ಮೇಲೆ ನಿಂತು ಪ್ರತಿ ಬಾರಿಯೂ ತಮ್ಮ ಪ್ರದರ್ಶನವನ್ನು ಉತ್ತಮಪಡಿಸುವತ್ತ ಗಮನ ಕೊಡುವಂತಾಗಿತ್ತು. ಆದರೆ ತಿಂಗಳ ಕಡೆಯಲ್ಲಿ ತನಗೆ ದೊರೆತ ಪ್ರಗತಿಯ ಅಂಕಗಳು ಪಾತಾಳ ಮುಟ್ಟಿ ಒಂದು ಬಡ್ತಿಯನ್ನು ಹಿಂದಕ್ಕೆ ಹಾಕಿಸಿದ್ದು ನಿರಾಸೆ ಮೂಡಿಸಿತ್ತು. ಮಂಕಾಗಿ ಕೂತವಳಿಗೆ ಸುಶಾಂತ ಅತಿ ಹೆಚ್ಚು ಅಂಕಗಳೊಂದಿಗೆ ಬಡ್ತಿ ಪಡೆದಾಗ ಒಳಗಿನ ನಿರಾಶೆ ಅದುಮಿಟ್ಟು ಮುಖದ ಮೇಲೆ ನಗು ತರಿಸಿಕೊಂಡು ಅವನಿಗೆ ಅಭಿನಂದನೆಗಳನ್ನು ತಿಳಿಸಿದ್ದಳು.

ಅಂದು ಅವರ ಫ್ಲೋರಿಗೆ ಬಂದ ದೈಹಿಕ ವ್ಯಾಯಾಮದ ಅಭ್ಯಾಸ ನೀಡುವವರು ಎಲ್ಲರಿಗೂ ಎದ್ದು ನಿಂತು ಕೈಕಾಲುಗಳಿಗೆ ತಾಲೀಮು ನೀಡುವ ಆದೇಶಗಳನ್ನು ನೀಡುತ್ತಿದ್ದರೂ ನಂದಿತಾಳೇಕೋ ಆಲಸ್ಯದಿಂದಾಗಿ ಕುಳಿತೇ ಇದ್ದಳು. ಯಾಕೋ ಈ ಪರಿ ಹೊಸತಾಗಿತ್ತು. ಅದು ಮಾನಸಿಕ ಪೆಟ್ಟು ನೀಡಿದ ಪ್ರಭಾವವೋ ಅಥವಾ ಹಿಂದಿನ ಎರಡು ದಿನಗಳಿಂದ ಮನೆಯಲ್ಲಿನ ಒತ್ತಡ ತಂದ ಪರಿಣಾಮವೋ ತಿಳಿಯದಾಗಿತ್ತು. ಸರಳವಾದ ವ್ಯಾಯಾಮವನ್ನಾದರೂ ಮಾಡೋಣವೆಂದು ಕೈಗಳಿಗೆ ತಾಲೀಮು ನೀಡಿ ಕತ್ತನ್ನು ತಿರುಗಿಸಬೇಕೆನ್ನುವಾಗ ತಲೆ ಸುತ್ತು ಬಂದಿತ್ತು. ಅಕ್ಕಪಕ್ಕ ಇದ್ದವರು ಕುಸಿದು ಬಿದ್ದವಳ ಆರೈಕೆಗೆ ಮುಂದಾಗಿದ್ದರು. ಅವಳನ್ನು ಕುರ್ಚಿಯಲ್ಲಿ ಕೂಡಿಸಿ ಮುಖಕ್ಕೆ ನೀರು ಚಿಮುಕಿಸಿದಾಗ ಎಚ್ಚೆತ್ತು, ತನ್ನ ಸುತ್ತಲೂ ಹೊಸ ಪ್ರಪಂಚವನ್ನು ನೋಡುವಂತೆ ನಿರುಕಿಸಿದ್ದಳು. ನಂತರ ಏನಾಯಿತೆಂದು ತಿಳಿದೊಡನೆ ಸಂಕೋಚ ಕಾಡಿ `ಎಕ್ಸ್ಕ್ಯೂಸ್ ಮೀ~ ಎನ್ನುತ್ತಾ ರೆಸ್ಟ್ ರೂಮ್ ಕಡೆ ಧಾವಿಸಿದ್ದಳು.

ಮರುದಿನ ಮನೆಯ ಬಳಿ ಇದ್ದ ಸ್ತ್ರೀರೋಗ ತಜ್ಞೆಯ ಬಳಿ ತೋರಿಸಿಕೊಂಡಾಗ ಅವಳಿಗೆ ತಾನು ಎರಡೂವರೆ ತಿಂಗಳ ಗರ್ಭಿಣಿಯಾಗಿರುವ ವಿಷಯ ಗೊತ್ತಾಗಿದ್ದು. ಯಾಕೋ ಈ ಸುದ್ದಿ ತಿಳಿದೊಡನೆ ಖುಷಿಯ ಬದಲು ಇನ್ನೂ ಒಂದೆರಡು ವರ್ಷಗಳ ನಂತರವಾಗಿದ್ದರೆ ಚೆನ್ನಿತ್ತೇನೋ ಎನಿಸಿತ್ತು. ಅಷ್ಟರಲ್ಲಿ ತಾನು ಮನೆಯಲ್ಲೇ ವಿದೇಶಿ ವೈದ್ಯರ ಮಾತನ್ನು ಆಲಿಸಿ ಟೈಪ್ ಮಾಡುವ ಲಿಪ್ಯಂತರ ಕೆಲಸಕ್ಕೆ ತೊಡಗಿಸಿಕೊಂಡು ಆರಾಮವಾಗಿ ಕೂಸನ್ನು ಒಂಬತ್ತು ತಿಂಗಳು ಹೊತ್ತು ನಂತರ ಬಾಣಂತನವೆರಡನ್ನೂ ಮುಗಿಸಬಹುದಾಗಿತ್ತೆನಿಸದಿರಲಿಲ್ಲ. ತಾವಿಬ್ಬರೂ ಎಷ್ಟೇ ಮುಂಜಾಗ್ರತೆ ವಹಿಸಿದ್ದರೂ ತಾನು ಕೆಲದಿನಗಳಿಂದ ವಿಪರೀತ ಚಂಡಿ ಹಿಡಿಯುತ್ತಿದ್ದ ರೋಹಿಣಿಯನ್ನು ಸಮಾಧಾನಪಡಿಸುತ್ತಾ ರಾತ್ರಿ ವೇಳೆ ಕಳೆದಿದ್ದುದರ ಅಸಹನೆಯಿಂದಲೋ ಏನೋ ಜಯಪ್ರಭು ಒಂದೆರಡು ಸಲ ತಾಳ್ಮೆಗೆಟ್ಟು ಸುರಕ್ಷತಾ ಕ್ರಮಗಳೆಲ್ಲವನ್ನೂ ಬದಿಗೊತ್ತಿ ಅವಳೊಂದಿಗೆ ಒಂದಾಗಿದ್ದ. ಅವರಿಬ್ಬರೂ ಅಷ್ಟು ದಿನ ಕಾಯ್ದಿರಿಸಿಕೊಂಡಿದ್ದ ಯೋಜನೆ ಅವರಿಗರಿವಾಗುವ ಮುನ್ನವೇ ದಿಕ್ಕಾಪಾಲಾಗಿತ್ತು. ನಂದಿತಾ ಏನಾಗಬಹುದೆಂದು ಹೆದರಿದ್ದಳೋ ಅದಾಗಿತ್ತು.

ಜಯಪ್ರಭುವಿಗೆ ವಿಷಯ ತಿಳಿಸುವುದು ಹೇಗೆ ಎಂಬುದು ಈಗ ಅವಳಿಗೆ ಜಟಿಲ ಸಮಸ್ಯೆಯಂತೆ ತೋರಿತ್ತು. ರೋಹಿಣಿಯನ್ನು ಮಲಗಿಸಿದ ಬಳಿಕ ನಿದ್ದೆ ಸುಳಿಯದೆ ತನ್ನೊಳಗೆ ಅದುಮಿಟ್ಟ ವಿಷಯವನ್ನು ಇನ್ನು ತಡೆಹಿಡಿಯಲಾರೆ ಎಂದೆನಿಸಿ ತಾನಿದ್ದ ಮಲಗುವ ಕೋಣೆಯಿಂದೆದ್ದು ಹಾಲಿಗೆ ಬಂದು ಸೋಫಾದ ಮೇಲೆ ಕುಸಿದು ಕುಳಿತಳು.
ಬಿ.ಪಿ.ಓ. ಮತ್ತು ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸ ಮಾಡುವವರು ಒತ್ತಡದ ಬದುಕನ್ನು ಸವೆಸುವರೇಕೆ ಎಂಬುದಕ್ಕೆ ಉತ್ತರವಿಲ್ಲಿತ್ತು. ಅವಳು ಮುಖ ಮುಚ್ಚಿಕೊಂಡು ಹಾಗೆಯೇ ತೂಕಡಿಸುವಾಗ ಇದ್ದಕ್ಕಿದ್ದಂತೆ ತನ್ನ ಹೆಗಲ ಮೇಲೆ ಸ್ಪರ್ಶದ ಅನುಭವವಾಗಿ ಬೆಚ್ಚಿ ತಲೆ ಮೇಲೆತ್ತಿ ನೋಡಿದಾಗ ಜಯಪ್ರಭು ತನ್ನ ರಾತ್ರಿ ಉಡುಪಿನಲ್ಲಿ ನಿದ್ದೆಗಣ್ಣುಳಿಂದ ಅವಳನ್ನೇ ನೋಡುತ್ತಿದ್ದ.

ಏನಿದು ನಂದಿತಾ. ರಾತ್ರಿ ದೀಪ ಹಚ್ಕೊಂಡು ಇಲ್ಲಿ ಕೂತಿದ್ದೀ?

ಅವಳಿಗಾಗಲೇ ದುಃಖದಿಂದ ಗಂಟಲುಬ್ಬಿ ಬಂದಿತ್ತು. ಅವಳಿಗೆ ಚಿಕ್ಕಂದಿನಿಂದ ತನ್ನ ತಾಯಿ ಹೆಣ್ಣುಮಕ್ಕಳು ಅತ್ತು ತಮ್ಮಲ್ಲಿರುವ ದುರ್ಬಲತೆಯನ್ನು ತೋರಿಸಬಾರದೆಂದು ಹೇಳುತ್ತಿದ್ದುದು ನೆನಪಿಗೆ ಬಂದಿತ್ತು. ತನ್ನನ್ನು ಹಾಗೆಯೇ ಗಟ್ಟಿ ಎದೆಗಾರ್ತಿಯಂತೆ ಬೆಳೆಸಿದ್ದರು ಸಹಾ. ಆದರೆ ಈಚೆಗ್ಯಾಕೋ ಮನೆ ಹಾಗೂ ವೃತ್ತಿಯ ತೂಗುಯ್ಯಾಲೆಯಾಡುತ್ತಾ ದೇಹದೊಂದಿಗೆ ಮನಸ್ಸೂ ದುರ್ಬಲವಾಗುತ್ತಿದೆಯೇ ಅಥವಾ ಅದು ತನ್ನ ಭ್ರಮೆಯೇ?

ತನ್ನ ಸ್ಥಿತಿಯ ಬಗ್ಗೆ ಕೇಳುತ್ತಲೇ ಜಯಪ್ರಭುವಿನಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದು ಅಸಾಧ್ಯವೆನಿಸಿತ್ತು. `ಗರ್ಭಪಾತ ಮಾಡಿಸಿಕೋ~ ಎಂದು ಹೇಳುವನೇನೋ ಎಂಬುವ ನಿರೀಕ್ಷೆಯಲ್ಲೇ ಅವನಿಗೆ ತಡೆದು ತಡೆದು ವಿಷಯ ಹೇಳಿದ್ದಳು.

ಆದರೆ ಜಯಪ್ರಭು ಅವಳ ಕೆನ್ನೆ ಹಿಂಡುತ್ತಾ- ಹೇಯ್. ನಮ್ಮ ಕುಟುಂಬವನ್ನು ಹೆಚ್ಚಿಸುವ ಆಸೆ ಯಾವಾಗ ಬಂತೇ ಪೋರಿ. ನಾನು ಮತ್ತೊಂದು ಮಗುವಿಗೆ ತಂದೆಯಾಗುವ ದಿನಗಳು ದೂರವಿಲ್ಲ ತಾನೇ ಎಂದು ಕೆಳ ಕೂತು, ಅವಳ ಮಡಿಲ ಮೇಲೆ ಮಗುವಿನಂತೆ ತಲೆ ಇಟ್ಟ. ಆ ಕ್ಷಣ ಅವಳಿಗೆ ಅವನಿಂದ ಸಹಕಾರ ಸಿಗುವ ಭರವಸೆ ಸಿಕ್ಕಂತಾಗಿ, ಕಚೇರಿಯಲ್ಲಿ ಆದ ತಾತ್ಕಾಲಿಕ ಹಿನ್ನೆಡೆಯ ನೋವನ್ನು ಮರೆಸಿತ್ತು ಆ ಒಂದು ನಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.