ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀನು ಹೋದ ಮೇಲೆ

Last Updated 7 ಮೇ 2016, 19:33 IST
ಅಕ್ಷರ ಗಾತ್ರ

ಈ ಮರದಲ್ಲಿ ಹೂವು ಅರಳುವುದೇ
ಅಥವಾ
ಎಲೆಯ ಕುಡಿಯಾದರೂ ಮೂಡಬಹುದೆ
ಕಪ್ಪೆ ಮೀನು
ಮಾಂಟೆಸರಿ ಮಕ್ಕಳ ಚಿತ್ರಗಳಾಗಿವೆ
ಬತ್ತಿದ ಮೇಲೆ ಜಲ
ಕೆರೆಗಳು ನದಿಗಳು ಅಜ್ಜನ ಬಾಯಲ್ಲಿ ಪುರಾಣಕತೆಗಳು
ಅಜ್ಜ ಸುಮ್ಮನೆ ಇದ್ದಾನೆ ಅಂಗಳದಲ್ಲಿ ಕೂತು
ಇತ್ತೀಚೆಗೆ
ಸೂರ್ಯಚಂದ್ರ ತಾರೆಗಳು ಹೋಗುತ್ತಿವೆ ನೋಡಿಕೊಂಡು
ನಿತ್ಯ
ಮಂಕಾಗಿ
ಎಲೆಯ ಕುಡಿ ಮೂಡುವುದಿಲ್ಲ ಹೂವಿನ ಮಾತೆಲ್ಲಿ

ನೀನು ಹೋದ ಮೇಲೆ ಹೂವು ಪರಿಮಳ ಕಳೆದುಕೊಂಡಿದೆ

ಎಲ್ಲವೂ ಬದಲಾಗುತ್ತಿದೆ
ಅಜ್ಜ ಕತೆಯನ್ನೇ ನಿಲ್ಲಿಸಿ ಸುಮ್ಮನೆ ದಿಟ್ಟಿಸಿ ನೋಡುತ್ತ
ಕೂತಿರುವಂತೆ ಅಥವಾ ಊಟದ ಮಧ್ಯೆ
ವಾಟ್ಸಾಪಿನಲಿ ಬಂದ ಕೊಲೆಯ ದೃಶ್ಯದಂತೆ
ಕಣ್ಣ ಮಿಟುಕಿಸುವುದರೊಳಗೆ ಇದ್ದುದು ಇಲ್ಲವಾಗುತ್ತಿದೆ
ಬದಲಾಗಿ ಮತ್ತಿನ್ನೇನೋ ಆಗಿ
ಬದಲಾಗಿಲ್ಲದೆ ಉಳಿದಿದೆಯಾ ಹೂವು ಒಣಗಿ
ನಿನ್ನ ಮೈಯಂತೆ ಇದ್ದುದು

ನೀನು ಹೋದ ಮೇಲೆ ಹೂವು ಪರಿಮಳ ಕಳೆದುಕೊಂಡಿದೆ
ಕೊಯ್ದ ಭತ್ತ ಹೊಲದಲ್ಲಿಯೇ ಬಿದ್ದಿದೆ ರಾಗಿಯೂ
ಸಮಾವೇಶಕ್ಕೆ ಬಂದಿರುವವರು
ಪ್ಲಾಸ್ಟಿಕ್ ಪಾಕೇಟಿನ ರೈಸಿಗಾಗಿ ಸಾಯುತ್ತಿದ್ದಾರೆ
ಒಬ್ಬರ ಮೇಲೆ ಬಿದ್ದು
ಊರು ಬಿಕೋ ಎನ್ನುತ್ತಿದೆ ಸ್ಮಶಾನವಾಗಿ
ಬದಲಾವಣೆಯಾಗುತ್ತಿರುವುದ ನೋಡುತ್ತಿವೆ ನಾಯಿಗಳು
ನಿನಗೆ ಬರೆದ ಸಾಲುಗಳ ಕದ್ದು
ಹೆಸರ ಬದಲಾಯಿಸಿಕೊಂಡಿದ್ದಾರೆ
ಹೂವು ಅರಳುವುದೇ ಈ ಮರದಲ್ಲಿ
ಹೆದ್ದಾರಿಯೋ ಅಥವಾ ಶಾಪಿಂಗ್ ಮಾಲೋ ಅದನ್ನು ನುಂಗಬಹುದು

ನೀನು ಹೋದ ಮೇಲೆ ಹೂವು ಪರಿಮಳ ಕಳೆದುಕೊಂಡಿರುವುದಂತೂ
ಸತ್ಯಾಗ್ರಹಿಗಳನ್ನು ಸರ್ಕಾರಿ ಬಂದೂಕುಗಳಿಂದ
ಹತ್ಯೆಗೈದಷ್ಟೇ
ದಿಟ
ಇಲ್ಲಿ ಏನೇನೋ ಆಗುತ್ತಿದೆ
ಅಗಾಧ ವಿಶ್ವದಲ್ಲಿ
ಪುಟ್ಟ ಕಣ್ಣುಗಳೆದುರು
ಕೋಪವೂ ತಣ್ಣಗಾದಂತಿದೆ ತನ್ನ ಸತ್ವವ ಕಳೆದುಕೊಂಡು
ಮಂಕಾಗಿದ್ದಾರೆ ಜನ
ಅಥವಾ
ನಿಸ್ತೇಜನಗೊಂಡಂತಿದ್ದಾರೆ
ಇಲ್ಲಿ ಏನೋ ಆಗುತ್ತಿದೆ
ದುರಂತ ಎರುಗುತ್ತಿದೆ ಅರಿವಾಗದೆ
ರಾಷ್ಟ್ರನಾಯಕರು
ಅಪ್ಪನ ಥರ ಮಾತಾಡುತ್ತಿಲ್ಲ ಅಜ್ಜನ ಥರ ಹೇಳುತ್ತಿಲ್ಲ
ಅಮ್ಮನ ಥರ ಸಿಟ್ಟಾಗುತ್ತಿಲ್ಲ
ಒಂದೇ ಸಮ ಭಾಷಣಮಾಡುತ್ತಿದ್ದಾರೆ
ಬಂಗಾರದ ದಾರದಲ್ಲಿ ತಮ್ಮ ಹೆಸರ ನೇಯ್ಸಿಕೊಂಡು

ನೀನು ಹೋದ ಮೇಲೆ ಹೂವು ಪರಿಮಳ ಕಳೆದುಕೊಂಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT