ಕರ್ನಾಟಕ ಇತಿಹಾಸವನ್ನು ಜನಪ್ರಿಯಗೊಳಿಸುವ, ಸಂಶೋಧನೆಗೆ ಪ್ರೋತ್ಸಾಹ ನೀಡುವ ಮತ್ತು ಐತಿಹಾಸಿಕ ಪರಂಪರೆಯ ರಕ್ಷಣೆಗೆ ಎಚ್ಚರ ವಹಿಸುವ ನಿಟ್ಟಿನಲ್ಲಿ 1986ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತವಾದ ನೋಂದಾಯಿತ ಖಾಸಗಿ ಸಂಸ್ಥೆ `ಕರ್ನಾಟಕ ಇತಿಹಾಸ ಅಕಾಡೆಮಿ~. ಸಭೆಗಳು, ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳ ಮೂಲಕ ಅಧ್ಯಯನ ಮತ್ತು ಸಂಶೋಧನೆಗೆ ಆದ್ಯತೆ ನೀಡುತ್ತಾ ಬಂದಿದೆ.

ಈ ವರ್ಷ ಅಕಾಡೆಮಿ ತನ್ನ ರಜತೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಆರಂಭದ ಹತ್ತು ವರ್ಷಗಳು ಇತಿಹಾಸ ಪ್ರಾಧ್ಯಾಪಕರಾಗಿ ವೃತ್ತಿಯಿಂದಷ್ಟೇ ನಿವೃತ್ತರಾಗಿದ್ದ ಡಾ.ಜಿ.ಎಸ್.ದೀಕ್ಷಿತ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. ನಂತರ ಹಲವು ವರ್ಷಗಳ ಅವಧಿಗೆ ಅವರನ್ನು ಗೌರವಾಧ್ಯಕ್ಷರನ್ನಾಗಿ ಉಳಿಸಿಕೊಳ್ಳಲಾಯಿತು.

ಡಿಸೆಂಬರ್ 14, 1986ರಂದು ಆಗ ಕರ್ನಾಟಕದ ಸಚಿವರಲ್ಲಿ ಒಬ್ಬರಾಗಿದ್ದ ವಿ.ಲಕ್ಷ್ಮೀಸಾಗರ್ ಔಪಚಾರಿಕವಾಗಿ ಸಂಸ್ಥೆಯನ್ನು ಉದ್ಘಾಟಿಸಿದರು. ಅದೇ ಸಂದರ್ಭದಲ್ಲಿ ಡಾ.ಎಂ.ಚಿದಾನಂದ ಮೂರ್ತಿ ಸಂಸ್ಥೆಯ ವಾರ್ಷಿಕ ನಿಯತಕಾಲಿಕ `ಇತಿಹಾಸ ದರ್ಶನ~ದ ಮೊದಲ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ಸಂಸ್ಥೆ ಆರಂಭಗೊಂಡ ತರುಣದಲ್ಲೇ ಬಿಜಾಪುರದ ಆದಿಲ್ಷಾಹಿ ಮನೆತನದ ಸಾಧನೆ ಕುರಿತು ಬೆಂಗಳೂರಿನಲ್ಲಿ ಒಂದು ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.

ಅಕಾಡೆಮಿಯು ಇತಿಹಾಸ ಬೋಧಕರಿಗೆ ಮತ್ತು ಸಂಶೋಧಕರಿಗೆ ಪ್ರತ್ಯೇಕ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಸಂಶೋಧನೆ ಮತ್ತು ಇತಿಹಾಸ ಬೋಧನೆಗೆ ಬಲ ನೀಡುತ್ತಿದೆ. ಪ್ರಾಚೀನ ಕನ್ನಡ ಶಾಸನಗಳು, ಕರ್ನಾಟಕ ಏಕೀಕರಣಕ್ಕೆ ದುಡಿದ ಕೆಲವು ಮಹನೀಯರು, ಇತ್ಯಾದಿ ಹಲವು ವಿಷಯಗಳನ್ನು ಕುರಿತ ವಿಚಾರ ಸಂಕಿರಣಗಳನ್ನು ನಡೆಸಿದೆ.

1987ರಲ್ಲಿ ಬೆಂಗಳೂರಿನಲ್ಲೇ ನಡೆದ ಅಕಾಡೆಮಿಯ ಮೊದಲ ವಾರ್ಷಿಕ ಸಮ್ಮೇಳನವನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಕವಿ ಮತ್ತು ಶಿಕ್ಷಣ ತಜ್ಞ ಡಾ.ವಿ.ಕೃ.ಗೋಕಾಕ ಉದ್ಘಾಟಿಸಿದರು.

ಡಾ.ಎಂ.ಚಿದಾನಂದ ಮೂರ್ತಿ ಮೊದಲ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಆ ಸಮ್ಮೇಳನದಲ್ಲಿ ಮಂಡಿತವಾದ 36 ಸಂಪ್ರಬಂಧಗಳನ್ನು ಒಳಗೊಂಡ `ಇತಿಹಾಸ ದರ್ಶನ~ದ ಮೂರನೆಯ ಸಂಚಿಕೆಯನ್ನು 1988ರಲ್ಲಿ ನಡೆದ ಅಕಾಡೆಮಿಯ ಎರಡನೆಯ ವಾರ್ಷಿಕ ಸಮ್ಮೇಳನದ ಸಂದರ್ಭ ಬಿಡುಗಡೆ ಮಾಡಲಾಯಿತು.

`ಇತಿಹಾಸ ದರ್ಶನ~ದ ಮೊದಲ ಐದು ಸಂಚಿಕೆಗಳನ್ನು ಡಾ.ಸೂರ್ಯನಾಥ ಕಾಮತ್ ಮತ್ತು ಲಕ್ಷ್ಮಣ್ ತೆಲಗಾವಿ ಸಂಪಾದಿಸಿದ್ದರು. ನಂತರದ ಎರಡು ಸಂಚಿಕೆಗಳನ್ನು ಡಾ.ಸೂರ್ಯನಾಥ ಕಾಮತರ ಜೊತೆಗೆ ಡಾ.ದೇವರಕೊಂಡಾರೆಡ್ಡಿ ಮತ್ತು ಎಸ್.ಎ.ಜಗನ್ನಾಥ್ ಸಂಪಾದಿಸಿದರು.

12ನೆಯ ಸಂಚಿಕೆಯಿಂದ ಈವರೆಗಿನ 26 ಸಂಚಿಕೆಗಳು, ಅಂದರೆ 15 ಸಂಚಿಕೆಗಳನ್ನು ಡಾ.ಎಂ.ಜಿ.ನಾಗರಾಜ್ ಮತ್ತು ಡಾ.ಪಿ.ವಿ.ಕೃಷ್ಣಮೂರ್ತಿ ಸಂಪಾದಿಸಿದ್ದಾರೆ. ಆಯಾ ವರ್ಷದ ವಾರ್ಷಿಕ ಸಮ್ಮೇಳನಗಳಲ್ಲಿ ಮಂಡಿತವಾದ ಸಂಪ್ರಬಂಧಗಳನ್ನು ನಂತರದ ವಾರ್ಷಿಕ ಸಮ್ಮೇಳನದ ಸಂದರ್ಭ ಬಿಡುಗಡೆಯಾಗುವ `ಇತಿಹಾಸ ದರ್ಶನ~ ಸಂಚಿಕೆಯಲ್ಲಿ ಸೇರಿಸಲಾಗುತ್ತದೆ. ಈ ವರ್ಷ `ಇತಿಹಾಸ ದರ್ಶನ~ದ 26ನೆಯ ಸಂಚಿಕೆ ಬಿಡುಗಡೆ ಆಗುತ್ತಿದೆ. ಇದರಲ್ಲಿ ಕಳೆದ ವರ್ಷ ಆದಿಚುಂಚನಗಿರಿಯಲ್ಲಿ ಮಂಡಿತವಾದ ಸಂಪ್ರಬಂಧಗಳು ಸೇರಿರುತ್ತವೆ.

ಅಕಾಡೆಮಿಯು ವಿದ್ಯಾರ್ಥಿಗಳಲ್ಲಿ ಇತಿಹಾಸದ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಲು ದ್ವಿತೀಯ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ, ಅವರ ನಿಗದಿತ ಪಠ್ಯವನ್ನೇ ಆಧರಿಸಿ, ಕರ್ನಾಟಕ ಇತಿಹಾಸಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರಾಜ್ಯದ ಆರು ಕೇಂದ್ರಗಳಲ್ಲಿ (ಬೆಂಗಳೂರು, ಮೈಸೂರು, ಧಾರವಾಡ, ಗುಲಬರ್ಗಾ, ಮಂಗಳೂರು ಮತ್ತು ತುಮಕೂರು) ನಡೆಸುತ್ತಿತ್ತು. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಒಂದು ಸಾವಿರ ರೂಪಾಯಿ ನಗದು ಬಹುಮಾನ ಕೊಡಲಾಗುತ್ತಿತ್ತು.

ಜೊತೆಗೆ ತೇರ್ಗಡೆಯಾದ ಎಲ್ಲರಿಗೂ ಪ್ರಶಸ್ತಿ ಪತ್ರಗಳನ್ನು ಕೊಡಲಾಗುತ್ತಿತ್ತು. ಮೊದಲ ವರ್ಷ ಪರೀಕ್ಷೆಗೆ 1,500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಕೊನೆಯ ವರ್ಷ (2003) 7,000 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 2004ರಿಂದ ಪದವಿಪೂರ್ವ ವಿದ್ಯಾರ್ಥಿಗಳ ಇತಿಹಾಸ ಪಠ್ಯ ಬದಲಾದ ಕಾರಣದಿಂದ ಪರೀಕ್ಷೆಗಳನ್ನು ನಿಲ್ಲಿಸಲಾಯಿತು.

ಅಕಾಡೆಮಿಯ ಮತ್ತೊಂದು ವಿಶಿಷ್ಠ ಹಾಗೂ ವ್ಯಾಪಕ ಕಾರ್ಯಕ್ರಮ `ಐತಿಹಾಸಿಕ ಪರಂಪರೆ~ ಉಳಿಸಿ ಸಪ್ತಾಹ. ದೇವಾಲಯ, ಮಸೀದಿ, ದರ್ಗಾ ಇತ್ಯಾದಿ ಪ್ರಾಚೀನ ಸ್ಮಾರಕಗಳು, ಶಾಸನಗಳು, ಓಲೆಗರಿಗಳು, ಹಸ್ತಪ್ರತಿ ದಾಖಲೆಗಳು ಮತ್ತು ನಾಣ್ಯಗಳ ರಕ್ಷಣೆಯ ಸಲುವಾಗಿ ರಾಜ್ಯದಾದ್ಯಂತ ಪ್ರತಿ ವರ್ಷ ಆಗಸ್ಟ್ 16ರಿಂದ ಒಂದು ವಾರ `ಐತಿಹಾಸಿಕ ಪರಂಪರೆ ಉಳಿಸಿ~ ಸಪ್ತಾಹವನ್ನು ಆಚರಿಸಲಾಗುತ್ತದೆ. ಆ ಸಲುವಾಗಿಯೇ ಆಕರ್ಷಕ ಭಿತ್ತಿಪತ್ರಗಳನ್ನು ಸಿದ್ಧಪಡಿಸಲಾಗುತ್ತದೆ.

ರಾಜ್ಯದಾದ್ಯಂತ ಕನಿಷ್ಠ 250ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯುತ್ತವೆ. ಇಂತಹ ಕಾರ್ಯಕ್ರಮದ ಸಂದರ್ಭದಲ್ಲೇ ಉಲ್ಲಾಳದ ಅಬ್ಬಕ್ಕ ಕಟ್ಟಿಸಿದ್ದ ಬಸದಿ ಬೆಳಕಿಗೆ ಬಂದಿತು. ಅನೇಕ ಸ್ಥಳಗಳಲ್ಲಿನ ಪ್ರಾಚೀನ ಸ್ಮಾರಕಗಳು ಸ್ಥಳೀಯ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳ ಮೂಲಕ ಶುಚಿಗೊಳ್ಳುತ್ತಿವೆ.

ಜನರಿಗೆ ತಮ್ಮ ಪರಂಪರೆಯ ಬಗ್ಗೆ ಅರಿವು ಮೂಡುತ್ತಿದೆ. ತಮ್ಮ ಪ್ರದೇಶದ ಸ್ಮಾರಕಗಳ ದುರವಸ್ಥೆ, ದುರಾಕ್ರಮಣ ಇತ್ಯಾದಿಯ ಬಗ್ಗೆ ಸಂಬಂಧಿಸಿದ ಇಲಾಖೆಗಳಿಗೆ ತಿಳಿಸುತ್ತಿದ್ದಾರೆ ಮತ್ತು ಪತ್ರಿಕೆಗಳಲ್ಲಿ ಬರೆಯುತ್ತಿರುತ್ತಾರೆ. ಹಂಪಿಯಲ್ಲಿ ನಿರ್ಮಾಣವಾಗುತ್ತಿದ್ದ ಸೇತುವೆಯ ಕಾರ್ಯ ನಿಲ್ಲುವಲ್ಲಿ ಅಕಾಡೆಮಿಯ ಪಾತ್ರವೂ ಇದೆ.
`ಐತಿಹಾಸಿಕ ಪರಂಪರೆ ಉಳಿಸಿ~ ಸಪ್ತಾಹ ಮತ್ತು `ಇತಿಹಾಸ ದರ್ಶನ~ ಸಂಚಿಕೆಯ ಮುದ್ರಣಕ್ಕೆ ಪ್ರತಿ ವರ್ಷ ಕರ್ನಾಟಕ ರಾಜ್ಯ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯ ನಿರ್ದೇಶನಾಲಯವು ಉದಾರ ಧನ ಸಹಾಯ ನೀಡುತ್ತಿದೆ. `ಇತಿಹಾಸ ದರ್ಶನ~ ಸಂಚಿಕೆಯ ಪ್ರಕಟಣೆಗೆ ಕೆಲವು ವರ್ಷಗಳಿಂದ ಬಾಳೆಹೊನ್ನೂರಿನ ರಂಭಾಪುರಿ ಮಹಾಸಂಸ್ಥಾನವು ಆಂಶಿಕವಾಗಿ ಧನ ಸಹಾಯ ಮಾಡುತ್ತಿದೆ.

ತುಮಕೂರು, ಗದಗ, ಚಿತ್ರದುರ್ಗ, ಹರಪನಹಳ್ಳಿ, ಸೊಂಡೂರು, ಶಿರಸಿ, ಉಡುಪಿ, ಸೇಡಂ, ರಾಮಚಂದ್ರಾಪುರ, ಹಗರಿಬೊಮ್ಮನಹಳ್ಳಿ, ಧರ್ಮಸ್ಥಳ, ಬಾಳೆಹೊನ್ನೂರು, ಆದಿಚುಂಚನಗಿರಿ ಇತ್ಯಾದಿ ಸ್ಥಳಗಳಲ್ಲೂ ನಡೆದಿರುವ ಅಕಾಡೆಮಿಯ ವಾರ್ಷಿಕ ಸಮ್ಮೇಳನಗಳಲ್ಲಿ ಅನೇಕ ಹಿರಿಯ ಇತಿಹಾಸ ಮತ್ತು ಕನ್ನಡ ವಿದ್ವಾಂಸರು ಅಧ್ಯಕ್ಷತೆ ವಹಿಸಿ ತರುಣರಿಗೆ ಮಾರ್ಗದರ್ಶನ ನೀಡಿದ್ದಾರೆ.

ಪ್ರತಿ ವರ್ಷ ಕನಿಷ್ಠ 250 ಪ್ರತಿನಿಧಿಗಳು ಭಾಗವಹಿಸುವ ಸಮ್ಮೇಳನದಲ್ಲಿ ಸರಾಸರಿ 120 ಸಂಪ್ರಬಂಧಗಳು ಮಂಡನೆ ಆಗುತ್ತವೆ. ಅವುಗಳಲ್ಲಿ ಹೊಸ ಪ್ರಾಗಿತಿಹಾಸದ ನೆಲೆಗಳು, ಹೊಸ ಶಾಸನಗಳು ಹೊಸ ಹಸ್ತಪ್ರತಿಗಳು ಸೇರಿರುತ್ತವೆ.

ಅಕಾಡೆಮಿಯ 11ನೆಯ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿದ್ದ ಕೆ.ಅಭಿಶಂಕರ್ ಅವರ ಹೆಸರಿನಲ್ಲಿ ಅವರ ಕುಟುಂಬವು ಸಮ್ಮೇಳನಾಧ್ಯಕ್ಷರಿಗೆ ನೀಡುವ ಸ್ಮರಣಿಕೆಗೆ ಪುದುವಟ್ಟನ್ನು ಇಟ್ಟಿದೆ. ಹಾಗೆಯೇ ಅಕಾಡೆಮಿಯ 5ನೆಯ ವಾರ್ಷಿಕ ಸಮ್ಮೇಳನಾಧ್ಯಕ್ಷರಾಗಿದ್ದ ಡಾ.ಬಾ.ರಾ.ಗೋಪಾಲ್ ಅವರ ಹೆಸರಿನಲ್ಲಿ ಅವರ ಕುಟುಂಬದವರು ಇಟ್ಟಿರುವ ಪುದುವಟ್ಟಿನ ಮೂಲಕ ಪ್ರತಿ ವರ್ಷ ಒಬ್ಬ ಶಾಸನ ತಜ್ಞರಿಗೆ ಪ್ರಶಸ್ತಿಯ ಜೊತೆಗೆ ಹತ್ತು ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುತ್ತಿದೆ.

ಮೊದಲ 10 ವರ್ಷಗಳು ಪ್ರೊ.ಜಿ.ಎಸ್.ದೀಕ್ಷಿತ್ ಮತ್ತು ನಂತರದ 14 ವರ್ಷಗಳು ಡಾ.ಸೂರ್ಯನಾಥ ಕಾಮತ್ ಅವರ ಕಾರ್ಯಾಧ್ಯಕ್ಷತೆಯಲ್ಲಿ ಮುನ್ನಡೆದ ಅಕಾದೆಮಿಗೆ ಈಗ ಡಾ.ದೇವರಕೊಂಡಾ ರೆಡ್ಡಿ ಕಾರ್ಯಾಧ್ಯಕ್ಷರಾಗಿದ್ದಾರೆ. ಡಾ.ಸೂರ್ಯನಾಥ ಕಾಮತ್ ಗೌರವಾಧ್ಯಕ್ಷರಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.

- ಡಾ. ಎಚ್.ಎಸ್.ಗೋಪಾಲ ರಾವ್
ಲೇಖಕರು ಸೆಪ್ಟೆಂಬರ್ 9, 10 ಮತ್ತು 11ರಂದು ನಿಗದಿಯಾಗಿರುವ ಇತಿಹಾಸ ಅಕಾಡೆಮಿಯ ಸಮ್ಮೇಳನಾಧ್ಯಕ್ಷರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.