ಒಂದು ದೇಶದ, ರಾಜ್ಯದ ಸರ್ಕಾರದಿಂದ ಸ್ಥಾಪಿತವಾದ, ಸಾರ್ವಜನಿಕ ನೆಲೆ ಇರುವ, ಸಮಿತಿಗಳು, ಮಂಡಳಿಗಳು, ಅಕಾಡೆಮಿಗಳು ಎಲ್ಲಾ ಜನ ಸಮುದಾಯಗಳನ್ನು ಪ್ರತಿನಿಧಿಸಲೇಬೇಕು.

ಸಾರ್ವಜನಿಕ ಸಂಸ್ಥೆಗಳ, ಸಮಿತಿಗಳ ವಿನ್ಯಾಸಗಳನ್ನು ಕೆಲವೇ ಕೆಲವು ಅಧಿಕಾರಿಗಳು, ಶಕ್ತಿಯುತ ಬಂಡವಾಳಶಾಹಿಗಳು, ಸ್ವಂತ ಲಾಭವನ್ನು ಮಾತ್ರ ಗಳಿಸುವ ಉದ್ದೇಶ ಹೊಂದಿರುವ ಉದ್ದಿಮೆದಾರರು, ಅಧಿಕಾರಿಗಳ ಮೇಲೆ ಒತ್ತಡ ತರುವ ಶಕ್ತಿ ಇರುವ ಲಾಬಿಗಳು ರೂಪಿಸುವುದು ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಧ್ವಂಸಗೊಳಿಸಿದಂತೆ.

ಎಲ್ಲರನ್ನೂ ಆಕರ್ಷಿಸುವ ಶಕ್ತಿ ಇರುವ ಚಲನಚಿತ್ರದಂತಹ ಪ್ರಬಲವಾದ ಮಾಧ್ಯಮ ದೊಡ್ಡ ಪ್ರಮಾಣದ ಬಂಡವಾಳವನ್ನು ಹೂಡುವ ಶಕ್ತಿ ಇರುವವರ ಖಾಸಗಿ ಕ್ಷೇತ್ರವಾಗುತ್ತಿರುವುದನ್ನು ಇತ್ತೀಚಿನ ದಶಕಗಳಲ್ಲಿ ನಾವು ಕಂಡಿದ್ದೇವೆ.

ಉದ್ದಿಮೆ ಆಗಿರುವ ಚಲನಚಿತ್ರ ಕ್ಷೇತ್ರ ಸಣ್ಣಪುಟ್ಟ ಪ್ರಮಾಣದಲ್ಲಿ ಬಂಡವಾಳವನ್ನು ಹಾಕಿ ಯಾವ ಮಾರುಕಟ್ಟೆಯಲ್ಲೂ ಯಾರೊಡನೆಯೂ ಸ್ಪರ್ಧೆಗೆ ಇಳಿಯದೆ ತಮ್ಮ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಸಂವೇದನೆಗಳನ್ನು ಸಾಮುದಾಯಿಕ ವಿಷಯಗಳೆಂದು ನಂಬಿ ಕ್ರಿಯಾಶೀಲವಾಗಿ ಅವುಗಳನ್ನು ಸಂವಹನ ಮಾಡುವ ನಿರ್ದೇಶಕರುಗಳು, ಅದನ್ನು ಪ್ರೋತ್ಸಾಹಿಸಬೇಕೆಂಬ ಇಚ್ಛೆ ಇರುವ ನಿರ್ಮಾಪಕರುಗಳು ನಗಣ್ಯರಾಗುತ್ತಿರುವ ಸಂಗತಿಯನ್ನು ಇತ್ತೀಚಿನ ದಶಕಗಳಲ್ಲಿ ನಾವು ಕಾಣುತ್ತಿದ್ದೇವೆ.

ಇದ್ದ ಸ್ವಲ್ಪ ಸ್ಥಳಾವಕಾಶಗಳನ್ನು ಇಂತಹ ಸೃಜನಶೀಲ ವ್ಯಕ್ತಿಗಳು ಕಳೆದುಕೊಳ್ಳುತ್ತಾ ಬರುತ್ತಿದ್ದಾರೆ. ಜನಪ್ರಿಯತೆಯ ಹೆಸರಿನಲ್ಲಿ, ಗಲ್ಲಾಪೆಟ್ಟಿಗೆಯ ಯಶಸ್ಸಿನ ನೆಪದಲ್ಲಿ ಒಂದು ರೀತಿಯ ಸಿನಿಮಾವನ್ನು ಮಾತ್ರ ಜನಪರ ಎಂದು ಬಣ್ಣಿಸಿ ಬೇರೊಂದು ರೀತಿಯಲ್ಲಿ ರಚಿಸಲ್ಪಟ್ಟ ಚಲನಚಿತ್ರಗಳನ್ನು ಅಪ್ರಸ್ತುತ, ಅಸಂಗತ ಎಂದು ತಳ್ಳಿ ಹಾಕುವುದು ಚಲನಚಿತ್ರ ಉದ್ದಿಮೆಯ ಮೂಲಭೂತ ಗುಣವಾಗುತ್ತಾ ಬರುತ್ತಿದೆ.

ಮಾರುಕಟ್ಟೆಯ ನಿಯಮಗಳನ್ನು ಬಂಡವಾಳವೇ ನಿರ್ಧರಿಸುವುದನ್ನು ಯಾರೂ ಆದರ್ಶದ ತಾತ್ವಿಕತೆಯಿಂದ, ಸೈದ್ಧಾಂತಿಕ ನಿಲುವಿನಿಂದ ಬದಲಿಸಲು ಸಾಧ್ಯವಿಲ್ಲ. ಹೀಗೆ ಸಾಧ್ಯವಿಲ್ಲದೇ ಇರುವುದರಿಂದಲೇ ಸರ್ಕಾರ ಮಾರುಕಟ್ಟೆಯ ಹೊರಗೆ ನಿಂತಿರುವ ಸಾಂಸ್ಕೃತಿಕ ವಲಯಗಳನ್ನು ರಕ್ಷಿಸುವ, ಪೋಷಿಸುವ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.

ಇಲ್ಲಿ ಲಾಭ, ನಷ್ಟ, ಜನಪ್ರಿಯತೆ ಎಂಬ ಸೂತ್ರಗಳು ಯಾವ ರೀತಿಯಲ್ಲೂ ಯಾವ ಪ್ರಮಾಣವನ್ನೂ ಒದಗಿಸುವಂತಿಲ್ಲ. ಒಂದು ಸಂಸ್ಕೃತಿಯನ್ನು ನಾನಾ ನೆಲೆಗಳಲ್ಲಿ, ನಾನಾ ರೀತಿಗಳಲ್ಲಿ ಎತ್ತಿ ಹಿಡಿಯುವ ಎಲ್ಲಾ ಸೃಜನಶೀಲ ಯತ್ನಗಳನ್ನು ಸರ್ಕಾರ ಸಮರ್ಥಿಸಬೇಕು, ಕಾಪಾಡಬೇಕು. ಈ ಕಾರಣದಿಂದಲೇ ಚಲನಚಿತ್ರ ಅಕಾಡೆಮಿಯ ಸ್ಥಾಪನೆ, ಸಹಾಯಧನ ನೀಡುವ ಪದ್ಧತಿ ಸರ್ಕಾರದ ನೀತಿಯಾಗಿ ಚಾಲನೆ ಪಡೆಯುತ್ತವೆ.

ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟಗಳಲ್ಲಿ ನೀಡುವ ಪ್ರಶಸ್ತಿಗಳ ಹಿಂದೆಯೂ ಇದೇ ತಾತ್ವಿಕ ನೆಲೆ ಕೆಲಸ ಮಾಡುವುದು. ಪ್ರಶಸ್ತಿಗಳ ಹಿಂದೆ ಇರುವ ಸೈದ್ಧಾಂತಿಕ ಪ್ರಮೇಯವೂ ಇದೇ. ಆದರೆ ಕಳೆದ ಐದಾರು ವರ್ಷಗಳಿಂದ ಕರ್ನಾಟಕ ಸರ್ಕಾರ ಕೊಡುವ ಚಲನಚಿತ್ರ ಪ್ರಶಸ್ತಿಗಳನ್ನು ನಿರ್ಧರಿಸುವ ಸಮಿತಿಗಳಿಗೆ ಈ ತಾತ್ವಿಕತೆಯನ್ನು ಸಿದ್ಧಾಂತವನ್ನು ಗೌರವದಿಂದ ಕಾಣುವ ಗುಣ ಇದ್ದಂತೆ ಅನಿಸುತ್ತಿಲ್ಲ. ಪೂರ್ವಗ್ರಹ ಮತ್ತು ಹೊರಗಿನ ಒತ್ತಡಗಳಿಗೆ ಮಣಿದು ಚಿತ್ರಗಳನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡುವ ಪ್ರವೃತ್ತಿಯೇ ಈ ಸಮಿತಿಗಳಿಗೆ ಇರುವಂತೆ ಇದೆ.

ಈ ಬಾರಿಯ ಪ್ರಶಸ್ತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಈ ವಾದಕ್ಕೆ ಸಮರ್ಪಕವಾದ ಸಮರ್ಥನೆ ದೊರೆಯುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮನ್ನಣೆ ಪಡೆದ `ಬೆಟ್ಟದ ಜೀವ~ ಚಿತ್ರಕ್ಕೆ ಯಾವ ಪ್ರಶಸ್ತಿಯೂ ಇಲ್ಲವೆಂದರೆ ಏನು ಅರ್ಥ?

ಕಳೆದ ಬಾರಿ ಗೋವಾದ ಅಂತಾರಾಷ್ಟ್ರೀಯ ಚಿತ್ರೋತ್ಸವದ ಪನೋರಾಮಾಗೆ ಆಯ್ಕೆಯಾದ ಏಕೈಕ ಕನ್ನಡ ಚಿತ್ರ `ಬೆಟ್ಟದ ಜೀವ~. ಶಿವರಾಮ ಕಾರಂತರ ಕಾದಂಬರಿ ಆಧಾರಿತ ಈ ಚಿತ್ರ ಏಕಕಾಲದಲ್ಲಿ ಕನ್ನಡ ಸಾಹಿತ್ಯ ಮತ್ತು ಚಲನಚಿತ್ರ ಸಂಸ್ಕೃತಿಗಳ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತದೆ. ಇದನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದು ಏನನ್ನು ಸೂಚಿಸುತ್ತದೆ? ಇದರ ಹಿಂದೆ ಬಹಳ ವಿಶಿಷ್ಟವಾದ ಚಲನಚಿತ್ರ ಮೀಮಾಂಸೆ ಈ ಬಾರಿಯ ಆಯ್ಕೆ ಸಮಿತಿಗೆ ಇತ್ತೆಂದು ಎಲ್ಲರೂ ತಿಳಿಯಬೇಕೇ?

ಶ್ರೇಷ್ಠ ಚಿತ್ರವೆಂದು ಆಯ್ಕೆಯಾದ `ಸೂಪರ್~ ನಿಜವಾಗಲೂ ಒಂದು ಸೂಪರ್ ಕಲಸುಮೇಲೋಗರದ ಬಾಲಿಶ ಕೃತಿ. ಅಪಕ್ವವಾದ ಸಂಸ್ಕೃತಿ ಪರಂಪರೆಗಳ ಪ್ರತೀಕಗಳು, ಅರ್ಥಹೀನ ಭೂತಭವಿಷ್ಯಗಳ ಪ್ರತಿಮೆಗಳು, ಮಾಸಲಾದ ನಿರೂಪಣಾ ಶೈಲಿ, ತಂತ್ರಗಾರಿಕೆ ಮತ್ತು ಕೆಳದರ್ಜೆಯ ತಾಂತ್ರಿಕ ಚಮತ್ಕಾರಗಳಿಂದ ತುಂಬಿದ `ಸೂಪರ್~ ಚಿತ್ರ ಎಲ್ಲವನ್ನೂ ಲೇವಡಿ ಮಾಡುತ್ತಾ ಕೊನೆಗೆ ತನ್ನ ಗಂಭೀರ ನೆಲೆಯನ್ನೇ ಅಳಿಸಿ ಹಾಕಿಕೊಳ್ಳುವ ಪೊಳ್ಳು ಚಿತ್ರ.

ಗಂಭೀರವಾದ ರಾಜಕೀಯ, ಸಾಮಾಜಿಕ, ಐತಿಹಾಸಿಕ ನೋಟವೇ ಇಲ್ಲದ ಈ ಚಿತ್ರ ಕರ್ನಾಟಕದ ಅತ್ಯುತ್ತಮ ಚಿತ್ರವೆಂದು ಈ ನಾಡಿನ ಜನರು ಸ್ವೀಕರಿಸಬೇಕಾದದ್ದು ಒಂದು ದುರಂತವೇ ಸರಿ. ಹಾಗೆ ನೋಡಿದರೆ ಗಂಭೀರವಾದ ರಾಜಕೀಯ ಚಿಂತನೆ ಮತ್ತು ಸಾಮಾಜಿಕ ಬದ್ಧತೆ ಇರುವ `ಪೃಥ್ವಿ~ ನಿಜವಾಗಲೂ ಒಂದು ಧೀಮಂತ ಚಿತ್ರ.

ಗಣಿದೊರೆಗಳು ಈ ರಾಜ್ಯವನ್ನೇ ಅಲ್ಲಾಡಿಸುತ್ತಿದ್ದ ಕಾಲದಲ್ಲಿ ಬಳ್ಳಾರಿಯ ಗಣಿಗಾರಿಕೆಯ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ಮಾಡಿ ಅಧಿಕಾರಶಾಹಿಯನ್ನು ಮತ್ತು ರಾಜಕಾರಣಿಗಳನ್ನು ನೇರವಾಗಿ ಮುಖಾಮುಖಿ ಮಾಡಿದ ಚಿತ್ರ `ಪೃಥ್ವಿ~. ಯಾವ ಕಾರಣದಿಂದ ಯಾವ ಹುನ್ನಾರಗಳಿಂದಾಗಿ `ಪೃಥ್ವಿ~ಗೆ ಪ್ರಶಸ್ತಿ ಲಭಿಸಲಿಲ್ಲ ಎಂದು ಕೇಳಲೇಬೇಕಾಗಿದೆ. ನಾಡನ್ನು ನುಂಗುತ್ತಿರುವ ಹೆದ್ದಾರಿಗಳು, ಹೆದ್ದಾರಿ ದರೋಡೆಕೋರರ ಷಡ್ಯಂತ್ರಗಳನ್ನು ಬಿಂಬಿಸುವ `ಪುಟ್ಟಕ್ಕನ ಹೈವೇ~ (ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿದ ಚಿತ್ರ) ಯಾಕೆ

ಮೂಲೆಗುಂಪಾಯಿತು? ಪುನೀತ್ ರಾಜ್ಕುಮಾರ್ಮತ್ತು ಬಿ. ಸುರೇಶ್ ಅವರಿಗೆ ವೈಯಕ್ತಿಕ ಪ್ರಶಸ್ತಿಯನ್ನು ಕೊಟ್ಟು `ಪೃಥ್ವಿ~ ಮತ್ತು `ಪುಟ್ಟಕ್ಕನ ಹೈವೇ~ ಚಿತ್ರಗಳನ್ನು ಕಡೆಗಣಿಸುವುದು ತಿಪ್ಪೆಸಾರಿಸುವ ಕೆಲಸ ಮತ್ತು ಒಂದು ಬಗೆಯ ಮೋಸವೇ ಸರಿ. ಹಾಗೆ ನೋಡಿದರೆ ತಾಂತ್ರಿಕವಾಗಿ ಮತ್ತು ರಚನಾ ಶೈಲಿಯಲ್ಲಿ ಒಂದು ವಿಶಿಷ್ಟ ಪ್ರಯೋಗವಾದ `ಐದೊಂದ್ಲ ಐದು~ ಚಿತ್ರಕ್ಕೆ `ಸೂಪರ್~ ಯಾವ ರೀತಿಯಲ್ಲೂ ಸಾಟಿಯಿಲ್ಲ. ಕಳೆದ ಬಾರಿ ಮಕ್ಕಳ ಚಿತ್ರಗಳ ವಿಭಾಗದಲ್ಲಿ ಸ್ವರ್ಣ ಕಮಲ ಗಳಿಸಿದ `ಹೆಜ್ಜೆಗಳು~ ಚಿತ್ರ ಇದೇ ರೀತಿಯ ಹುನ್ನಾರಕ್ಕೆ ಒಳಗಾಗಿದೆ.

ಎಲ್ಲವನ್ನೂ ಕ್ರೋಡೀಕರಿಸಿ ಹೇಳುವುದಾದರೆ ಪ್ರಶಸ್ತಿ ಪಡೆದಿರುವ ಚಿತ್ರಗಳು ನಿಜವಾದ ಅರ್ಥದಲ್ಲಿ ಕರ್ನಾಟಕದ ಚಲನಚಿತ್ರ ಸಂಸ್ಕೃತಿಯನ್ನು ಶಕ್ತಿಯುತವಾಗಿ ಪ್ರತಿನಿಧಿಸುವುದಿಲ್ಲ. ಹಾಗೆಯೇ, ಆಯ್ಕೆ ಸಮಿತಿಗೆ ಗಟ್ಟಿಯಾದ ಸೈದ್ಧಾಂತಿಕ ಮತ್ತು ತಾತ್ವಿಕ ಚೌಕಟ್ಟಿನ ಸಿನಿಮಾ ಮೀಮಾಂಸೆ ಇರುವ ಯಾವ ಸೂಚನೆಯೂ ಕಂಡು ಬರುತ್ತಿಲ್ಲ.

ಆದ್ದರಿಂದ ಸದಭಿರುಚಿಯ, ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಾಣದ ಚಿತ್ರಗಳನ್ನು, ಅದನ್ನು ಸೃಷ್ಟಿಸುವ ಸಾಹಸಕ್ಕೆ ಇಳಿಯುವ ನಿರ್ದೇಶಕರುಗಳನ್ನು, ನಿರ್ಮಾಪಕರುಗಳನ್ನು ಎದುರಾಳಿಗಳು ಮತ್ತು ಶತ್ರುಗಳೆಂದು ಕಂಡು ಅವರನ್ನು ನಾಶಮಾಡುವ ಶಕ್ತಿಗಳು ಇಲ್ಲಿ ಕೆಲಸ ಮಾಡಿರಬಹುದೆಂಬ ಗುಮಾನಿ ಹುಟ್ಟುತ್ತದೆ.

ಐದು ರಾಷ್ಟ್ರೀಯ ಹಾಗು ಎರಡು ರಾಜ್ಯ ಪ್ರಶಸ್ತಿಗಳನ್ನು ಶ್ರೇಷ್ಠ ನಿರ್ಮಾಪಕನೆಂದು ಗಳಿಸಿದವರನ್ನು ನಿರ್ನಾಮ ಮಾಡುವ ಸಂಚೇ ಇದು ಎಂಬ ಅನುಮಾನ ಹುಟ್ಟುತ್ತದೆ. ಮೊದಲೇ ಅವಕಾಶಗಳನ್ನು ಕಳೆದುಕೊಳ್ಳುತ್ತಾ ಬರುತ್ತಿರುವ ಸೃಜನಶೀಲ ಪ್ರಯತ್ನಗಳಿಗೆ ಪ್ರಜಾತಾಂತ್ರಿಕ ಸರ್ಕಾರದಿಂದ ನೇಮಿಸಲ್ಪಟ್ಟ ಸಮಿತಿಗಳಿಂದಲೂ ಅನ್ಯಾಯವಾಗಬೇಕೆ?

ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಯಾವ ಲಾಬಿಯೂ ಇಲ್ಲದೆ ಆಹ್ವಾನ ಪಡೆದು ಪ್ರಶಸ್ತಿಗಳಿಸಿದ `ಕನಸೆಂಬ ಕುದುರೆಯನೇರಿ~ ಚಿತ್ರಕ್ಕೆ ಕಳೆದ ಬಾರಿ ರಾಜ್ಯ ಪ್ರಶಸ್ತಿ ಬರದೇ ಇರುವ ಸಂಗತಿಯನ್ನೂ ಕೂಡ ಇಲ್ಲಿ ಸ್ಮರಿಸಿಕೊಳ್ಳಬೇಕು. ಹೀಗೆಯೇ ಹಿಂದಿನ ವರ್ಷಗಳಿಗೆ ಹೋಗುತ್ತಾ ಬಂದರೆ ಎಲ್ಲೆಡೆ ಮನ್ನಣೆ ಗಳಿಸಿದ ಕನ್ನಡ ಚಿತ್ರಗಳು ಕರ್ನಾಟಕದಲ್ಲಿ ಮಾತ್ರ ಗಳಿಸಿದ್ದು ಶೂನ್ಯವನ್ನು.

ಅಂದರೆ ಕರ್ನಾಟಕದಲ್ಲಿ ಪ್ರಶಸ್ತಿಗೆ ಚಿತ್ರಗಳನ್ನು ಆಯ್ಕೆ ಮಾಡುವ ಸಮಿತಿಗಳಿಗೆ ಎಲ್ಲೂ ಇಲ್ಲದ ವಿಶಿಷ್ಟವಾದ ಸಿನಿಮಾ ಸಂವೇದನೆ ಮತ್ತು ಮೀಮಾಂಸೆ ಒದಗಿಬಂದು ಬಿಟ್ಟಿದೆ ಎಂದು ಎಲ್ಲರೂ ಒಪ್ಪಿಕೊಂಡುಬಿಡಬೇಕೆ? ಅಥವಾ ಇದರಲ್ಲಿ ಕೆಲವು ವರ್ಗಗಳ, ಲಾಬಿಗಳ ಪ್ರಭಾವ ಒತ್ತಡ ಇರುವ ಸತ್ಯವನ್ನು ಕಾಣಬೇಕೆ?

ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಗಳಿಸಿದ ಮಾತ್ರಕ್ಕೆ ಅಂತಹ ಚಿತ್ರಗಳನ್ನು ಮಾತ್ರ ಕರ್ನಾಟಕದ ಶ್ರೇಷ್ಠ ಚಿತ್ರಗಳೆಂದು ನಿರ್ವಿವಾದವಾಗಿ ಎಲ್ಲರೂ ಒಪ್ಪಿಕೊಂಡುಬಿಡಬೇಕೆ? ಹಾಗೆ ನೋಡಿದರೆ ಸದಭಿರುಚಿಯ ಚಿತ್ರಗಳು ಅಪಾರ ಯಶಸ್ಸನ್ನು ಕಾಣದೇ ಇರುವುದು ಕನ್ನಡ ಜನರ ದುರದೃಷ್ಟವನ್ನು ದುರಂತವನ್ನು ದಾಖಲಿಸುತ್ತವೆ ಅಷ್ಟೇ, ತಮ್ಮ ಸೋಲನ್ನಲ್ಲ.
ಈ ಕಾರಣಕ್ಕಾಗಿಯೇ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸುಗಳಿಸದ ಉತ್ತಮ ಚಿತ್ರಗಳಿಗೆ ಸರ್ಕಾರದ ಹೆಚ್ಚಿನ ಪ್ರೋತ್ಸಾಹ ದಕ್ಕಬೇಕು. ಸರ್ಕಾರ ಇರುವುದು ಉತ್ತಮ ಯತ್ನಗಳನ್ನು ಪೋಷಿಸಲು, ಮಾರುಕಟ್ಟೆಯಲ್ಲಿ ಗೆದ್ದ ಕುದುರೆಗಳನ್ನು ಸನ್ಮಾನಿಸುವುದಕ್ಕಲ್ಲ. ಇಲ್ಲಿ ಸಾಮಾಜಿಕ ಜವಾಬ್ದಾರಿಯ ಪ್ರಶ್ನೆಯೂ ಅಡಗಿದೆ. ಇನ್ನೊಂದು ನೆಲೆಯಲ್ಲಿ ಇದನ್ನು ವಿವರಿಸುವುದಾದರೆ ರಾಜಕೀಯ ವ್ಯವಸ್ಥೆಯನ್ನು,

ನೀತಿ ಇಲ್ಲದ ಮಾರುಕಟ್ಟೆಯನ್ನು ಬಂಡವಾಳಶಾಹಿ ಹುಟ್ಟುಹಾಕುವ ಅಸಮಾನತೆ ಮತ್ತು ಅನ್ಯಾಯ ಹಾಗೂ ಅಧಿಕಾರಶಾಹಿಯ ಜನವಿರೋಧಿ ಧೋರಣೆಯನ್ನು ವಿಭಿನ್ನ ನೆಲೆಯ ಚಿತ್ರಗಳು ಪ್ರಶ್ನಿಸುವುದರಿಂದ ಇದು ತಮ್ಮ ಮೇಲೆ ಆದ ಹಲ್ಲೆ ಮತ್ತು ಆಕ್ರಮಣ ಎಂದು ಕನ್ನಡ ಚಲನಚಿತ್ರಗಳ ಸ್ವರೂಪವನ್ನು ನಿರ್ಧರಿಸುತ್ತಿರುವ ಪ್ರಭಾವಶಾಲಿ ನಿರ್ಮಾಪಕರುಗಳ, ವಿತರಕರ, ಪ್ರದರ್ಶಕರ ಭಯ ಈ ರೀತಿ ಪ್ರಶಸ್ತಿಗಳ ಆಯ್ಕೆಯ ವಿಷಯದಲ್ಲಿ ಕೆಲಸ ಮಾಡುತ್ತಿದೆಯೇ ಎಂಬ ಗುಮಾನಿ ಎಲ್ಲರನ್ನೂ ಕಾಡುವುದು ಸಹಜ.

ಲಾಭದ ಕಡೆ ವಿಶೇಷ ಗಮನವಿಲ್ಲದೆ ಸೂಕ್ಷ್ಮವಾದ ಸಂವೇದನೆಯಿಂದ ರೂಪಿಸಲ್ಪಟ್ಟ ಪ್ರಯೋಗಗಳಿಗೆ, ವಿಶಿಷ್ಟವಾದ ಕಲ್ಪನೆಯೊಂದಿಗೆ ಸೃಷ್ಟಿಸಿದ ಕೃತಿಗಳಿಗೆ ಯಾವ ಜಾಗವೂ ಈ ನಾಡಿನಲ್ಲಿಲ್ಲ ಎಂಬ ಸಂಗತಿ ಭಯಾನಕವಾದದ್ದು. ವಿರಾಟ್ ಸ್ವರೂಪದ ಬಂಡವಾಳ ಚಿಕ್ಕಪುಟ್ಟ ನೆಲೆಗಳನ್ನು ಸಂಹಾರ ಮಾಡುವುದನ್ನು ಅನಿವಾರ್ಯವೆಂದು ಸುಮ್ಮನೆ ಒಪ್ಪಿಕೊಳ್ಳುವುದು ಯಾವ ಸಂಸ್ಕೃತಿಗೂ ಒಳ್ಳೆಯದಲ್ಲ.

ಒಂದು ಜೀವಂತ ಸಂಸ್ಕೃತಿಯು ತನ್ನ ಆರೋಗ್ಯದ ದೃಷ್ಟಿಯಿಂದ ಈ ದಬ್ಬಾಳಿಕೆಗೆ ಪ್ರತಿರೋಧವನ್ನು ಒಡ್ಡಲೇಬೇಕು. ಅಂತಹ ಕಾಲ ಇಂದು ಕನ್ನಡ ಚಲನಚಿತ್ರ ಸಂಸ್ಕೃತಿಗೆ ಬಂದಿದೆ. ಜನಪ್ರಿಯವಾದ ಚಿತ್ರಗಳು, ಮಾರುಕಟ್ಟೆಯಲ್ಲಿ ಗೆದ್ದ ಚಿತ್ರಗಳೆಲ್ಲವೂ ಜನಪರವಾದ ಚಿತ್ರಗಳೇನಲ್ಲ.

ಹಾಗೆ ನೋಡಿದರೆ ಹಿಂಸೆ, ಕ್ರೌರ್ಯಗಳನ್ನು ತೋರಿಸುತ್ತ ವಿಕ್ಷಿಪ್ತವಾದ ವ್ಯಕ್ತಿಗಳನ್ನು ವಿಜೃಂಭಣೆಯಿಂದ ಅಭಿವ್ಯಕ್ತಿಸುವ ಚಿತ್ರಗಳು ನಿಜವಾದ ಅರ್ಥದಲ್ಲಿ ಜನವಿರೋಧಿ ಚಿತ್ರಗಳು. ಅಂತಹ ಚಿತ್ರಗಳನ್ನು ಸಮರ್ಥಿಸುವುದು ಮಾನಸಿಕ ರೋಗದ ಲಕ್ಷಣ. ಮಚ್ಚು, ಲಾಂಗು ಮೆರೆಸಿ, `ಮೆಂಟಲ್~ಗಳ ಬಗ್ಗೆ ಸಂಭ್ರಮಪಡುವುದು ಹೇಸಿಗೆಯ ವಿಷಯ. ಕನ್ನಡ ಚಲನಚಿತ್ರಗಳ ಈ ಹೊಸ ಪರಂಪರೆಯನ್ನು ವೈಭವೀಕರಿಸುವುದು ನಮ್ಮ ನಾಡಿನ ದೊಡ್ಡ ದುರಂತಗಳಲ್ಲಿ ಒಂದು.

ಎಲ್ಲ ರೀತಿಯಲ್ಲೂ ತತ್ತರಿಸುತ್ತಿರುವ ಕನ್ನಡ ಜನ ಸಮುದಾಯ ತನ್ನ ಭವಿಷ್ಯದ ಬಗ್ಗೆ ಸ್ವಲ್ಪವಾದರೂ ಕಾಳಜಿಯನ್ನು ಇನ್ನಾದರೂ ಇಟ್ಟುಕೊಳ್ಳಬೇಕು. ಕನ್ನಡ ಚಲನಚಿತ್ರ ಪ್ರಶಸ್ತಿಗಳು ಸಂಕೇತಿಸುವುದು ನಾಡಿನ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಪ್ರಜ್ಞೆಯ ಗುಣಮಟ್ಟವನ್ನು, ನಾಡಿನ ಸಮುದಾಯಗಳ ಆಯ್ಕೆಗಳನ್ನು. ಇದನ್ನು ಕೇವಲ ಚಲನಚಿತ್ರಗಳಿಗೆ ಸಂಬಂಧಪಟ್ಟ ಕ್ಷುಲ್ಲಕ ವಿಷಯವೆಂದು ಕಡೆಗಣಿಸುವಂತಿಲ್ಲ.

ಪ್ರಜಾಪ್ರಭುತ್ವದಲ್ಲಿ ಎಲ್ಲ ಬಗೆಯ ಬದುಕಿನ ಕ್ರಮಗಳಿಗೆ, ಸೃಜನಶೀಲ ಪ್ರಯತ್ನಗಳಿಗೆ ಅವಕಾಶವಿರಲೇಬೇಕು. ಅದನ್ನು ಸಾಧ್ಯವಾಗಿಸುವ ಪ್ರಯತ್ನಗಳು ಆಗಲೇಬೇಕು. ತಮ್ಮ ಸಂವೇದನೆಗಳಿಗೆ, ಕಾಳಜಿಗಳಿಗೆ, ಸೃಜನಶೀಲತೆಗೆ ಅವಕಾಶಗಳು ಮತ್ತು ಮನ್ನಣೆ ಇರಲೇಬೇಕೆಂಬ ಹಟ ಪರ್ಯಾಯ ಸಂಸ್ಕೃತಿಯ ಬಗ್ಗೆ ಗೌರವವಿರುವ ಎಲ್ಲರಲ್ಲೂ ಇರಲೇಬೇಕು.

ಇದನ್ನೇನೂ ಸರ್ಕಾರದ ಬಳಿ ಅತಿ ವಿನಯದಿಂದ ಭಿಕ್ಷೆಯೆಂಬಂತೆ ಪಡೆಯಬೇಕಿಲ್ಲ. ಸಿನಿಮಾದ ಆರೋಗ್ಯದ ಬಗ್ಗೆ ಕಾಳಜಿಯಿರುವ ಎಲ್ಲರೂ ಮುಕ್ತವಾದ, ಪಾರದರ್ಶಕತೆಯಿರುವ ಆಯ್ಕೆಯ ವಿಧಾನವನ್ನು ರೂಪಿಸುವ ಪ್ರಯತ್ನ ಮಾಡಲೇಬೇಕು. ಈ ರೀತಿಯ ಆಂದೋಲನವನ್ನು ಕನ್ನಡ ಚಲನಚಿತ್ರ ಸಂಸ್ಕೃತಿ ಅಪೇಕ್ಷಿಸುತ್ತಿದೆ. ಇದಕ್ಕಾಗಿ ಹಿರಿಯ ನಿರ್ದೇಶಕರು, ನಿರ್ಮಾಪಕರು ಸಂಘಟಿತರಾಗಬೇಕು.

ಯಾವ ಒಳಿತೂ ತಾನೇತಾನಾಗಿ ಯಾವ ಸಂಸ್ಕೃತಿಗೂ ಅದೃಷ್ಟದಿಂದ ದಕ್ಕುವುದಿಲ್ಲ. ಕನ್ನಡ ಚಲನಚಿತ್ರ ಸಂಸ್ಕೃತಿಗೆ ಬೇರೊಂದು ಭವಿಷ್ಯದ ಅಗತ್ಯವಿದೆ. ಇದನ್ನು ನಿರ್ಭಿಡೆಯಿಂದ ನಡೆಸುವ ಆಂದೋಲನದಿಂದ ಮಾತ್ರ ಗಳಿಸಲು ಸಾಧ್ಯ.
ಒಟ್ಟಿನಲ್ಲಿ ಕರ್ನಾಟಕ ರಾಜ್ಯದ ಚಲನಚಿತ್ರ ಪ್ರಶಸ್ತಿಗಳು ತಮ್ಮ ಮೂಲಭೂತ ಸಿಂಧುತ್ವವನ್ನೇ ಕಳೆದುಕೊಂಡಿರುವುದು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಕಾಳಜಿ ಇರುವ ಎಲ್ಲರನ್ನು ಇನ್ನಾದರೂ ಎಚ್ಚರಿಸಬೇಕು.

ಲೇಖಕರು ಸಂಸ್ಕೃತಿ ಚಿಂತಕರು ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ ವಿಮರ್ಶಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.