ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುಜದ ಮೇಲೆ ಮಗ ಮಗನ ಕೈಲಿ ಆಕಾಶ!

Last Updated 26 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಕಾಲಚಕ್ರ ಉರುಳುತ್ತಿರುತ್ತದೆ. ಕೆಲವೇ ವರ್ಷಗಳ ಹಿಂದೆ ಹೆಚ್ಚು ತೆರಿಗೆ ಕಟ್ಟಿದ ಚಿತ್ರೋದ್ಯಮಿ ಈಗ ಚಿಂತಾಕ್ರಾಂತ. ಮಡಿಚಿಟ್ಟ ಬೆರಳುಗಳ ಮಧ್ಯೆ ನಿರೀಕ್ಷೆ ಬೆಚ್ಚಗೆ.

ಎಂಥ ಆತಂಕದಲ್ಲೂ ಹನ್ನೆರಡನೇ ಮಹಡಿಯ ಹೋಟೆಲ್‌ನಿಂದ ಬಡಬಡಿಸಿ ಮೆಟ್ಟಿಲಿಳಿದು ಕಾರನ್ನು ತಲುಪಿ ಹಣೆಮೇಲಿನ ಬೆವರ ಸಾಲನ್ನು ತೋರುಬೆರಳಿನಿಂದ ತೀಡಿ ನಿಟ್ಟುಸಿರಿಡುವ ಅಭ್ಯಾಸ ಹೋಗಿಲ್ಲ. ಜಿಮ್‌ನಲ್ಲಿ ಕಳೆಯುವ ಕಾಲಾವಧಿ ಕಡಿಮೆ ಕೂಡ ಆಗಿಲ್ಲ.
 
ಸಹಿ ಹಾಕುತ್ತಿರುವ ಚಿತ್ರಗಳ ಸಂಖ್ಯೆ ಇಳಿದಿದ್ದರೂ ಖಾಲಿ ಕೂತ ದಿನಗಳು ಹೆಚ್ಚೇನಲ್ಲ.
ನಟ ಅಕ್ಷಯ್ ಕುಮಾರ್ `ಬಂದೇ ಬರತಾವ ಕಾಲ~ ಎಂದು ನಂಬಿರುವ ಆಶಾವಾದಿ.

`ನಾನು ಜೀವನದಲ್ಲಿ ಕಷ್ಟ ಪಡದ ದಿನವೇ ಇಲ್ಲ. ಸುಮ್ಮನೆ ಕೂತು ತಿನ್ನಲು ಮನಸ್ಸು ಒಪ್ಪುವುದಿಲ್ಲ. ಪ್ರೌಢನಾಗಿದ್ದಾಗ, ಯೌವನಕ್ಕೆ ಕಾಲಿಟ್ಟಾಗ ನಾನು ಅನುಭವಿಸಿರುವ ಕಷ್ಟ ಬದುಕಿನ ಅನೇಕ ಪಾಠಗಳನ್ನು ಕಲಿಸಿದೆ. ಸಿಂಗ್ ಈಸ್ ಕಿಂಗ್ ಸಿನಿಮಾ ಬಂದ ಕಾಲದಲ್ಲಿ ಅದೃಷ್ಟ ನನ್ನ ಕಡೆಗಿತ್ತು.

ಈಗ ಸಲ್ಮಾನ್ ಖಾನ್ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಕಾಲ ಹೀಗೆಯೇ. ಇಲ್ಲಿ ಶ್ರಮವಷ್ಟೇ ಸಾಲದು; ಅದೃಷ್ಟ ಹೆಗಲೇರಬೇಕು. ಅದು ಹಿಂದೆ ನನ್ನ ಮೇಲಿತ್ತು.

ಈಗ ಸಲ್ಮಾನ್‌ಗೆ ಒಲಿದಿದೆ. ಮತ್ತೆ ನನ್ನ ಹೆಗಲೇರುತ್ತದೆಂಬ ವಿಶ್ವಾಸವೂ ಇದ್ದೇಇದೆ, ನೋಡುತ್ತಾ ಇರಿ...~ ಹೀಗೆ ಅಕ್ಷಯ್ ಮಾತನಾಡಲು ಕಾರಣ ಅವರ ಕೈಲಿರುವ `ದೇಸಿ ಬಾಯ್ಸ~ ಸಿನಿಮಾ.

ಡೇವಿಡ್ ಧವನ್ ಮಗ ರೋಹಿತ್ ಧವನ್ ಮೊದಲ ಬಾರಿಗೆ ನಿರ್ದೇಶಕನ ಟೋಪಿ ತೊಟ್ಟಿರುವ ಚಿತ್ರ `ದೇಸಿ ಬಾಯ್ಸ~. ತಲೆಬುಡವಿಲ್ಲದ ಹಾಸ್ಯದ ಮೂಲಕ ರಂಜನೆ ಒದಗಿಸುವುದಕ್ಕೆ ಹೆಸರಾದ ಡೇವಿಡ್ ಧವನ್ ಧಾಟಿಯ ಚಿತ್ರವೇ ಇದೂ ಆಗಿರುತ್ತದಾ ಎಂದರೆ ಅಕ್ಷಯ್, ಖಂಡಿತ ಇಲ್ಲ ಅಂತಾರೆ.

`ತನ್ನ ತಂದೆಯ ಸಾಧನೆಯನ್ನು ಬೆನ್ನಿಗಿಟ್ಟುಕೊಂಡರೂ ರೋಹಿತ್ ಅವರನ್ನು ಅನುಕರಿಸುವುದಿಲ್ಲ. ತನ್ನ ಮೊದಲ ಚಿತ್ರ ಹೀಗೇ ಇರಬೇಕು ಎಂಬ ಸ್ಪಷ್ಟ ಕಲ್ಪನೆ ಆತನಿಗಿದೆ.

ಚಿತ್ರೀಕರಣದ ಸಂದರ್ಭದಲ್ಲೇ ರೋಹಿತ್ ಸಾಮರ್ಥ್ಯ ಎಂಥದೆಂಬುದು ಅರಿವಿಗೆ ಬಂದಿದೆ. ಸಾಹಸಪ್ರೇಮಿಗಳ ನಿರೀಕ್ಷೆ ತಣಿಸಲು ಜಾನ್ ಅಬ್ರಹಾಂ, ನಾನು ಇದ್ದೇವೆ. ದೀಪಿಕಾ ಪಡುಕೋಣೆ ಕಣ್ಣೋಟ ಬೋನಸ್ಸು. ಒಟ್ಟಿನಲ್ಲಿ ರೋಹಿತ್ ಜಾಣ ನಿರ್ದೇಶಕ~ ಎಂಬುದು ಅಕ್ಷಯ್ ಕೊಡುವ ಸರ್ಟಿಫಿಕೇಟ್.

ಜಾನ್ ಅಬ್ರಹಾಂ ತರಹದ ಅದ್ಭುತ ದೇಹ ಇರುವ ನಟನ ಜೊತೆ ಅಭಿನಯಿಸುವುದು ಸವಾಲೇ ಹೌದಲ್ಲವೇ ಎಂಬ ಪ್ರಶ್ನೆಗೆ ಅಕ್ಷಯ್ ಕೊಡುವ ಉತ್ತರ ಹೀಗಿದೆ:

`ತರಬೇತುದಾರನ ಸಮ್ಮುಖದಲ್ಲಿ ನಾನು ಜಾನ್ ಸಾಮರ್ಥ್ಯಕ್ಕೆ ಶಹಬ್ಬಾಸ್ ಹೇಳಿದರೆ, ಆತ ನನ್ನನ್ನು ಕೊಂಡಾಡುತ್ತಿದ್ದ. ಒಬ್ಬೊಬ್ಬರಿಗೆ ಒಂದೊಂದು ಕಲೆ ಗೊತ್ತಿರುತ್ತದೆ.

ಜಾನ್ ಜೊತೆಗೆ ನಿಂತು ನನ್ನ ನಿಲುವು, ನಟನೆಯನ್ನು ತೋರಿಸಿಕೊಳ್ಳುವುದು ಸವಾಲು ಅಂತ ನನಗನ್ನಿಸಿಲ್ಲ. ನಮ್ಮಿಬ್ಬರ ನಡುವಿನ ಕೆಮಿಸ್ಟ್ರಿ ಒಳ್ಳೆಯ ಗೆಳೆಯರಷ್ಟೇ ಚೆನ್ನಾಗಿರುವುದರಿಂದ ನಾವಿಬ್ಬರೂ ಇರುವ ದೃಶ್ಯಗಳು ಚೆನ್ನಾಗಿ ಮೂಡಿಬಂದಿದೆ.

ದೈಹಿಕವಾಗಿ ಸಮರ್ಥನಾದ, ವಯಸ್ಸಿನಲ್ಲಿ ಚಿಕ್ಕವನಾದ ನಟನ ಜೊತೆ ಅಭಿನಯಿಸುವುದರಿಂದ ನಾವು ಇನ್ನಷ್ಟು ಬೆಳೆಯಲು ಸಾಧ್ಯವಿದೆ~.

ಎತ್ತರದ ಜಾಗವನ್ನು ಹತ್ತುವುದು, ಕೈಗಳ ಮೇಲೆ ನಡೆಯುವುದು, ದೀರ್ಘ ಕಾಲ ಶೀರ್ಷಾಸನ ಹಾಕಿ ನಗುವುದು, ದೊಡ್ಡ ಎತ್ತರದಿಂದ ಜಿಗಿಯುವುದು ಇವೆಲ್ಲಾ ಅಕ್ಷಯ್‌ಗೆ ಇಷ್ಟವಾದ ಕಸರತ್ತುಗಳು.

ವಾರಕ್ಕೊಮ್ಮೆ ಹೆಂಡತಿ ಟ್ವಿಂಕಲ್ ಹಾಗೂ ಮಗ ಆರವ್ ಜೊತೆಯಲ್ಲಿ ಈಜುಕೊಳಕ್ಕಿಳಿಯುವುದೂ ಅಭ್ಯಾಸವಾಗಿದೆ. ಒಂದಿಷ್ಟು ಹೊತ್ತು ಈಜಿ ದಣಿದ ನಂತರ ಮಗನಿಗೆ ಹೋಂವರ್ಕ್ ಮಾಡಿಸುವ ಎಲ್ಲಾ ಅಪ್ಪಂದಿರಂತೆ ತಾವೂ ಆಗಿಬಿಡುವುದು ಅಕ್ಷಯ್‌ಗೆ ತುಂಬಾ ಸಹಜ ಪ್ರಕ್ರಿಯೆಯಂತೆ. ಸಂಸಾರಸ್ಥನಾಗಿರುವುದು ಸ್ವರ್ಗಸುಖ ಎನ್ನುವುದು ಅವರ ಅನುಭವದ ಮಾತು.

`ನಲವತ್ತನಾಲ್ಕನೇ ವಯಸ್ಸಿನಲ್ಲಿ ಎತ್ತರ ಬೆಳೆಯುತ್ತಿರುವ ಮಗನನ್ನು ಅನಾಮತ್ತು ಎತ್ತಿ ಭುಜದ ಮೇಲೆ ಕೂರಿಸಿಕೊಂಡು ಬೆಟ್ಟ ಹತ್ತಬಲ್ಲ ಅಪ್ಪ ನಾನು. ಆ ಬೆಟ್ಟದ ಮೇಲೆ ನಿಂತಾಗ ಅವನ ಕಣ್ಣು ಅರಳುತ್ತದೆ.

ಕೈಚಾಚು, ಆಕಾಶ ಸಿಕ್ಕೀತು ಎಂದು ನಾನು ಹುರಿದುಂಬಿಸಿದೊಡನೆ ಅವನ ಮುಗ್ಧ ಕೈಗಳು ಬಾನಿನತ್ತ ಚಾಚಿಕೊಳ್ಳುತ್ತವೆ. ನನ್ನ ಮೇಲೆ ಅವನು, ಅವನ ಕೈಲಿ ಆಕಾಶ. ನಾನು ಫ್ಲಾಪ್ ಹೀರೋ ಅಲ್ಲವೇ ಅಲ್ಲ ಎಂಬುದಕ್ಕೆ ಇದಕ್ಕಿಂತ ಇನ್ನೊಂದು ಅನುಭವ ಬೇಕೆ?~- ಅಕ್ಷಯ್ ಹೀಗೆ ಕೇಳಿದಾಗ ನಿರುತ್ತರರಾದವರೇ ಹೆಚ್ಚು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT