ನನ್ನ ಜೀವನದ ಕಥೆ ಬಹುತೇಕ ಹೆಣ್ಣುಮಕ್ಕಳ ಕಥೆ ಇದ್ದರೂ ಇರಬಹುದು. ನನ್ನ ಹದಿವಯಸ್ಸಿನಲ್ಲಿ ಮದುವೆ ಎನ್ನುವ ಘಟನೆ ಬಹಳ ನೋವನ್ನು ತಂದಿದ್ದು ಸತ್ಯ. ನನ್ನ ತಾಯಿಯ ಜೀವನದಲ್ಲಾದ ದುರಂತವೇ ನನ್ನ ಜೀವನದಲ್ಲೂ ಘಟಿಸಿದ್ದು ಮಾತ್ರ ವಿಪರ್ಯಾಸ. ಮದುವೆಯ ನಂತರ ನನ್ನ ಗಂಡ ರಾಜಣ್ಣನಿಗೆ ನಾನು ಆಕ್ಟ್ ಮಾಡುವುದು, ನಾಟಕ ನೋಡುವುದು ಬಿಟ್ಟರೆ ನಾಟಕಕ್ಕೆ ಸಂಬಂಧಪಟ್ಟ ಇನ್ಯಾವ ಕೆಲಸಗಳಲ್ಲಿ ಪಾಲ್ಗೊಳ್ಳುವುದು ಇಷ್ಟ ಇರಲಿಲ್ಲ.

ಹಾಗಂತ ಅವರು ಮೊದಲೇ ಸ್ಪಷ್ಟವಾಗಿ ಹೇಳಿದ್ದರಿಂದ ನಾನು ನನಗೆ ಅತೀ ಪ್ರಿಯವಾದ ರಂಗಭೂಮಿಯನ್ನು ಬಿಡಲೇಬೇಕಾಯಿತು. ಆದರೆ, ಸ್ವಲ್ಪ ಕಾಲದಲ್ಲೇ ಇಸ್ಪೀಟ್ ಮತ್ತು ಕ್ಲಬ್ ಪ್ರಿಯ ರಾಜಣ್ಣ ತನ್ನ ಹೊಣೆಗೇಡಿತನದಿಂದ, ಮಗುವಿದ್ದ ಸಂಸಾರಕ್ಕೆ ಬೇಕಾದ ಆದಾಯವನ್ನು ಸಂಪಾದಿಸಲು ವಿಫಲರಾದಂತೆಲ್ಲ ಅವರ ಮುಂಗೋಪಿತನ ಇನ್ನೂ ಹೆಚ್ಚು ವಿಕೃತಿಗೆ ತಿರುಗಿತು.

ನಾನು ಯಾರೊಂದಿಗೂ ಮಾತಾಡುವಂತಿರಲಿಲ್ಲ. ಗಂಡಸರೊಂದಿಗಂತೂ ಇಲ್ಲವೇ ಇಲ್ಲ. ನಾನು ಎಲ್ಲರಿಂದ ದೂರವಾಗತೊಡಗಿದೆ. ಮದುವೆಗೆ ಮುಂಚೆ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದೆನಲ್ಲ – ಆ ಸ್ನೇಹದಿಂದ, ಅದಕ್ಕೂ ಹೆಚ್ಚಾಗಿ ನಾನು ‘ಎನ್ಎಸ್ಡಿ’ ಗ್ರಾಜುಯೇಟ್ ಆದದ್ದರಿಂದ ನನ್ನ ಸ್ನೇಹಿತರು, ಸ್ನೇಹಿತೆಯರು ನನ್ನನ್ನು ಪಾತ್ರ ಮಾಡಲು ಕೇಳಿಕೊಂಡು ಬರುತ್ತಿದ್ದರು. ಮನೆಯಲ್ಲಿ ಕೂತು ತಿನ್ನಲು ನಮ್ಮ ಮನೆಗೆ ಗಂಡು ದಿಕ್ಕಿರಲಿಲ್ಲ.

ನಾನು ಮೊದಲಿನಿಂದಲೂ ದುಡಿಮೆಗೆ ನಿಂತಿದ್ದರಿಂದ ಕೆಲವು ಒಳ್ಳೆಯ ಮನಸ್ಸಿನವರು ನೌಕರಿಯ ಆಫರ್ ಕೂಡ ತರುತ್ತಿದ್ದರು. ಅವೆಲ್ಲವನ್ನೂ ನಾನು ಮದುವೆಯ ಕಾರಣಕ್ಕಾಗಿ ತಿರಸ್ಕರಿಸಿದೆ. ಕೆಲವರು ನನ್ನ ಮಾತನ್ನು ನಂಬದೆ, ಬಹಳ ಒಳ್ಳೆಯತನದಿಂದಲೇ ಮತ್ತು ನನ್ನ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ರಾಜಣ್ಣನ ಹತ್ತಿರ ಸೀದಾ ಹೋಗಿ “ರಾಜೂ ಇಂಥದ್ದೊಂದು ಕೆಲಸ ಇದೆ. ಜಯ ಮಾಡಲ್ಲ ಅಂತಾಳೆ.

ನೀನಾದ್ರೂ ಹೇಳು ಅವಳಿಗೆ” ಅಂತ ಹೇಳಿದ ಸಂದರ್ಭದಲ್ಲಿ “ನನಗೇನೂ ಅಭ್ಯಂತರ ಇಲ್ಲ. ಅವಳಿಗೆ ಬೇಕಾದರೆ ಕೆಲಸ ಮಾಡಲಿ” ಅಂತ ಹೇಳಿಬಿಡುತ್ತಿದ್ದರು. ಆದರೆ, ಅದಾದ ತಕ್ಷಣ ಮನೆಗೆ ಬಂದು ರೌದ್ರಾವತಾರ ಶುರು ಮಾಡುತ್ತಿದ್ದರು.

ಹೊರಗೆ ನೋಡಲು ಸಂಭಾವಿತ ಮನುಷ್ಯ. ಆದರೆ ನಾನು ಕಂಡ ರಾಜಣ್ಣ ಮಾತ್ರ ಸಂಪೂರ್ಣವಾಗಿ ತದ್ವಿರುದ್ಧ ಮನುಷ್ಯ. ನನ್ನ ಬೆಂಬಲಕ್ಕಾದರೂ ಹೆಚ್ಚು ಜನ ಇರಲಿಲ್ಲ. ಬಹಳ ಹತ್ತಿರದ ಸಂಬಂಧಿಗಳು ಏನೇ ಹೇಳಿದರೂ ರಾಜಣ್ಣನಿಗೆ ಪಥ್ಯವಾಗುತ್ತಿರಲಿಲ್ಲ. ಒಟ್ಟಿನಲ್ಲಿ ಬರುಬರುತ್ತಾ ರಾಜಣ್ಣನಿಗೆ ನಾನು ಕೀಲಿ ಕೊಟ್ಟು ನಡೆಸುವ ಗೊಂಬೆಯಾದೆ.

ಆತನ ಜೂಜು, ಕುಡಿತ ಹೆಚ್ಚಿದಂತೆಲ್ಲ ನನ್ನ ಮೇಲಿನ ದೌರ್ಜನ್ಯವೂ ಹೆಚ್ಚುತ್ತಿತ್ತು. ಆದರೆ ನಾನು ಅಸಹಾಯಕಳಾಗಿದ್ದೆ. ಕೈಯಲ್ಲಿ ನನ್ನ ಅಮ್ಮು, ಅಂದರೆ ಪುಟ್ಟ ಸುಷ್ಮಾ ಬೇರೆ ಇದ್ದಳು. ಅವಳ ಮುಖ ನೋಡಿಕೊಂಡು ಬಹಳ ಸಹನೆ ತಂದುಕೊಂಡರೂ ವಿಧಿ ನನ್ನನ್ನು ಬಿಡದೆ ಅಟ್ಟಾಡಿಸುತ್ತಿತ್ತು.

ನನ್ನ ಮದುವೆ ಚಾಮರಾಜ ನಗರದ ಸಿ. ರಾಜಣ್ಣ ಎಂಬುವವರ ಜೊತೆ ಜೂನ್ 11, 1974ಕ್ಕೆ ಗಾಂಧೀನಗರದ ನಮ್ಮ ಮನೆ (No 9, 3rd cross, 4th Main, Gandhinagar, Bengaluru) ಎದುರಿಗೆ ಆಗ ಇದ್ದ ಗುರುಸಿದ್ದಪ್ಪನವರ ಛತ್ರದಲ್ಲಿ ನಡೆಯಿತು.

ಮದುವೆ ಆದ ಕೆಲವು ತಿಂಗಳುಗಳ ಕಾಲ ಗಾಂಧೀನಗರದ ಮನೆಯಲ್ಲೇ ಇದ್ದೆವು. ನಂತರ ರಾಜಣ್ಣ ವಸಂತನಗರದಲ್ಲಿ ಮನೆ ಮಾಡಿ ನನ್ನನ್ನೂ ಅಮ್ಮನನ್ನೂ ಕರೆದುಕೊಂಡು ಹೋದರು. ಅಮ್ಮ ಜೊತೆಯಲ್ಲಿ ಇದ್ದುದರಿಂದ ನನಗೆ ಮನೆ ನಿಭಾಯಿಸುವುದು ಕಷ್ಟ ಎನ್ನಿಸಲಿಲ್ಲ. ಆ ಮನೆಗೆ ಹೋಗಿ ಕೆಲವೇ ತಿಂಗಳುಗಳಾಗಿದ್ದವು. ಒಂದು ದಿನ ಬೆಳಿಗ್ಗೆ 10.30 ಆಗಿತ್ತೇನೋ, ಸರ್ಪ್ರೈಸ್ ಎಂಬಂತೆ ನನ್ನ ‘ಎನ್ಎಸ್ಡಿ’ಯ ಸಹಪಾಠಿ ಓಂಪುರಿ ಬಂದರು. ಅಷ್ಟು ಹೊತ್ತಿಗಾಗಲೇ ಸುಷ್ಮಾ ಹುಟ್ಟಿದ್ದಳಾದರೂ ಬಹಳ ಪುಟ್ಟ ಕೂಸು.

ಓಂಪುರಿಗೆ ನನ್ನ ಮದುವೆಯ ಇನ್ವಿಟೇಷನ್ ಕಳಿಸಿದ್ದೆ. ಆದರೆ ಆಗೆಲ್ಲ ದೆಹಲಿ, ಮುಂಬೈ ಇಂದ ಬೆಂಗಳೂರಿಗೆ ಮದುವೆಗೆ ಬರುವಷ್ಟು ದುಡ್ಡು ಸಾಮಾನ್ಯವಾಗಿ ಇರುತ್ತಿರಲಿಲ್ಲ. ಪಾಪ, ಅವನೂ ಆಕ್ಟಿಂಗ್ ಅವಕಾಶಗಳಿಗಾಗಿ ಕಷ್ಟ ಪಡುತ್ತಿದ್ದ ಕಾಲವದು. ಆದರೆ ಒಳ್ಳೇ ನಟನೆಂದು ಹೆಸರು ಮಾಡಿದ್ದ. ಮುಂದೆ ಬಹಳ ಒಳ್ಳೆಯ ಅವಕಾಶಗಳು ಅವನಿಗಾಗಿ ಕಾದಿದ್ದವು.

ಓಂ ಹಾಗೆ ದಿಢೀರಂತ ಮನೆಗೆ ಬಂದವನೇ “Sorry yaar, I couldn’t come for your wedding. Congratulations! Here is a small gift from my side. Where is your husband?” ಅಂತ ಹೇಳುತ್ತಾ ನನ್ನ ಕೈಗೆ ‘ಬೇಬಿ ಕೇರ್’ ಎನ್ನುವ ಪುಸ್ತಕವನ್ನು, ರಾಜಣ್ಣನಿಗೆ ಅಂತ ತಂದ ‘555’ ಸಿಗರೇಟಿನ ಪ್ಯಾಕೆಟ್ಟನ್ನೂ ಕೊಟ್ಟರು.

ನನಗೆ ನನ್ನ ಗಂಡ ಕ್ಲಬ್ಬಿಗೆ ಇಸ್ಪೀಟಾಡಲು ಹೋಗಿದ್ದಾನೆ ಅಂತ ಹೇಳಲು ಸಂಕೋಚವಾಗಿ “ಇನ್ನೇನು ಇನ್ನು ಸ್ವಲ್ಪ ಹೊತ್ತಿನಲ್ಲೇ ಬಂದು ಬಿಡುತ್ತಾರೆ. ಇರು, ಒಟ್ಟಿಗೇ ಊಟ ಮಾಡುವಿರಂತೆ” ಅಂತ ಹೇಳಿದೆ.

ಓಂ ಮತ್ತು ನಾನು ನಮ್ಮ ವಿದ್ಯಾರ್ಥಿ ದಿನಗಳ ಬಗ್ಗೆ ಮೆಲುಕು ಹಾಕಿದೆವು. ನಂತರ ಅವರು ನನ್ನ ಮದುವೆ ಆಲ್ಬಂ ಅನ್ನು ನೋಡುತ್ತಾ ಕುಳಿತರು. ನಾನು ಅಡುಗೆ ಮಾಡಲಿಕ್ಕೆಂದು ಒಳಗೆ ಹೋದೆ. ಮನೆಯಲ್ಲಿದ್ದ ಅಮ್ಮನೂ ಓಂ ಹತ್ತಿರ ಸ್ವಲ್ಪ ಮಾತಾಡಿ, ನಾನು ಅಡುಗೆ ಮನೆಯೊಳಗೆ ಹೋದ ಕೂಡಲೇ ನನ್ನ ಸಹಾಯಕ್ಕೆ ಬಂದರು.

ಬೆಳಗ್ಗೆ ಬಂದ ಓಂ ರಾಜಣ್ಣನನ್ನು ಭೇಟಿಯಾಗಿ ಮಾತನಾಡಿಸಲು ಮಧ್ಯಾಹ್ನ 2 ಗಂಟೆಯವರೆಗೆ ಕಾದರೂ ರಾಜಣ್ಣ ಮನೆಗೆ ಬರುವ ಸುಳಿವೇ ಸಿಗಲಿಲ್ಲ. ಕಡೆಗೆ ಓಂ ಹೊರಟು ನಿಂತರು. “Jaya, sorry but I have to leave. I am getting delayed” ಎನ್ನುತ್ತಾ ಊಟ ಮಾಡಿ ಹೊರಟರು.

ಓಂಪುರಿ ಅತ್ತ ಹೋದ ಸ್ವಲ್ಪ ಹೊತ್ತಿಗೇ ರಾಜಣ್ಣ ಮನೆಗೆ ಬಂದರು. ನಾನು ಅವರಿಗೆ ವಿಷಯ ತಿಳಿಸಿ ಸಿಗರೇಟು ಕೊಟ್ಟು ಊಟಕ್ಕೆ ಬಡಿಸಿದೆ. ಆಗಲೇ ಮುಖ ಧುಮುಧುಮು ಎನ್ನುತ್ತಿತ್ತು. ನನಗೆ ಯಾಕೆ ಎಂದು ಅರ್ಥವಾಗಲಿಲ್ಲ. ರಾಜಣ್ಣನೂ ಏನೂ ಹೇಳಲಿಲ್ಲ. ಸಂಜೆಯಾದದ್ದೇ ತಡ ಗುಂಡು ಹಾಕುತ್ತಾ ಕೂತರು. ಗುಂಡು ಒಳಗೆ ಹೋದ ಮೇಲೆ ಗಂಡಸ್ತನ, ಅನುಮಾನಗಳು ಹೊರಗೆ ಬಂದವು.

“ನಾನು ಇಲ್ಲದಿದ್ದಾಗ ಯಾಕೆ ಬಂದಿದ್ದ ನಿನ್ನ ಸ್ನೇಹಿತ?” ಎಂದು ಶುರುವಾಗಿ ಮಾತುಗಳು ಬಹಳ ಕೆಟ್ಟದಾಗಿ ನಡೆದವು. “ಗಂಡ ಮನೆಯಲ್ಲಿಲ್ಲ ಅಂತ ಗೊತ್ತಾದ ಮೇಲೆ ಯಾಕೆ ನಿಲ್ಲಬೇಕಿತ್ತು ಅಷ್ಟು ಹೊತ್ತು? ಇದು ಸಂಸಾರಸ್ಥರ ಮನೆ ಅಂತ ಗೊತ್ತಿಲ್ಲವಾ?” ಎಂದು ಜೋರು ಜೋರಾಗಿ ಮಾತನಾಡಿದರು.

ಮೊದಲಿಗೆ ಈ ತೆರನ ಆಲೋಚನೆಯೇ ಬರದೆ ಇದ್ದುದರಿಂದ ನಾನು ಮಾತುಗಳಿಗೆ ತಯಾರಾಗಿರಲಿಲ್ಲ. ಆದರೆ, ಯಾವಾಗ ಮಾತು ಮಿತಿಮೀರಿತೋ ನಾನೂ ಉತ್ತರ ಕೊಟ್ಟೆ. ನಾನು ಯಾವ ತಪ್ಪೂ ಮಾಡಿಲ್ಲವಲ್ಲ, ಬಾಯಿ ಮುಚ್ಚಿಕೊಂಡು ಕೂರಲು?

“ನಾವಿಬ್ಬರೂ ದೆಹಲಿಯಲ್ಲಿ ಕ್ಲಾಸ್ಮೇಟ್ಸ್. ಒಳ್ಳೆಯ ಸ್ನೇಹಿತರು. ಹಾಗಿದ್ದಾಗ ಅವರು ನನ್ನನ್ನು ಬಂದು ಭೇಟಿ ಮಾಡಿದರೆ ತಪ್ಪೇನು? ಮದುವೆಗೆ ಬರಲು ಆಗಲಿಲ್ಲಾಂತ ತಾನೇ ಪಂಜಾಬಿನಿಂದ ಇಲ್ಲೀ ತನಕ ಬಂದಿದ್ದು? ನನಗೆ ಮದುವೆ ಆಗಿ ಮಗು ಇರೋದು ಅವರಿಗೂ ಗೊತ್ತು. ನನಗೂ ಬೇಕಾದಷ್ಟು ಜವಾಬ್ದಾರಿ ಇದೆ” ಅಂತ ಸಮರ್ಥಿಸಿಕೊಂಡೆ.

ರಾಜಣ್ಣ ಇನ್ನೂ ಕೆಟ್ಟದಾಗಿ ಮಾತನಾಡಿದರು. “ಹೀಗೆಲ್ಲ ಯಾಕೆ ಮಾತಾಡ್ತಿದೀರಾ? ನಾನೇನು ಮನೆಯಲ್ಲಿ ಒಬ್ಬಳೇ ಇದ್ದೆನೆ? ಅಮ್ಮನೂ ಇದ್ದರಲ್ಲ ಜೊತೆಯಲ್ಲಿ? ಅಷ್ಟೂ ನಂಬಿಕೆ ಬೇಡವಾ?” ಎಂದು ಸಿಡಿದು ಮಾತನಾಡಿದೆ.

ಮಾತಿಗೆ ಮಾತು ಬೆಳೆಯಿತು. ಬೆಂಕಿ ಹತ್ತಿತು. ಆದರೆ ನಾನೂ ಈ ಮನುಷ್ಯನ ಬೇಜವಾಬ್ದಾರಿ ನಡತೆಯಿಂದ ಬೇಸತ್ತು ಹೋಗಿದ್ದೆ. ಸಾಲದ್ದಕ್ಕೆ ಹೊಸ ಹೊಸ ವಿಕೃತಿಗಳು ಆಗಾಗ ಅನಾವರಣಗೊಳ್ಳುತ್ತಿದ್ದವು. ಜನಗಳನ್ನು ಮಾತಾಡಿಸುವುದು ಅತ್ತ ಇರಲಿ, ನಾನು ಮನೆಯಿಂದ ಹೊರಗೆ ಬರುವಂತೆಯೂ ಇರಲಿಲ್ಲ. ತಲೆ ಕೆಟ್ಟ ದಿನ ಆತ ಹೊರಗೆ ಹೋದಾಗಲೆಲ್ಲ ಮನೆಗೆ ಹೊರಗಿನಿಂದ ಚಿಲಕ ಹಾಕಿ ಬೀಗ ತಗುಲಿಸಿ ಹೋಗುತ್ತಿದ್ದ. ನಾನು ಅಕ್ಷರಶಃ ಮನೆಯಲ್ಲಿ ಬಂಧಿಯಾಗಿರುತ್ತಿದ್ದೆ.

ರಾತ್ರಿ ಊಟದ ಸಮಯದವರೆಗೂ ಮಾತು ನಡೆಯಿತು. ರಾಜಣ್ಣನೇ ಊಟಕ್ಕೆ ಚಪಾತಿ ಬೇಕು ಅಂತ ಹೇಳಿದ್ದರಿಂದ ನಾನು ಚಪಾತಿ ಮಾಡುತ್ತಿದ್ದೆ. ಊಟಕ್ಕೆ ಬಾ ಅಂದರೂ ಬರದೇ ಮಾತಾಡುತ್ತಲೇ ಇದ್ದರು. ನಾನು ಅವರಿದ್ದಲ್ಲೇ ತಟ್ಟೆ ಇಟ್ಟು ಚಪಾತಿ ಹಾಕಿದೆ. “ಇನ್ನೂ ಹಾಕು, ಮತ್ತೂ ಹಾಕು” ಅಂತ ತಲೆಕೆಟ್ಟವರ ಥರಾ ಹೇಳುತ್ತಾ ಇದ್ದರು. ಚಪಾತಿ ಹೆಚ್ಚುತ್ತಲೇ ಹೋದವೇ ಹೊರತೂ ಒಂದು ಚಪಾತಿ ತುಂಡನ್ನೂ ರಾಜಣ್ಣ ಬಾಯಿಗಿಟ್ಟುಕೊಳ್ಳಲಿಲ್ಲ.

ನನಗೆ ಹೆದರಿಕೆ ಆಗಲು ಪ್ರಾರಂಭವಾಯಿತು. ಬಹಳ ಸಮಾಧಾನದಿಂದಲೇ ಹೋಗಿ “ಇದೇನು, ಒಂದೂ ಚಪಾತಿ ತಿಂತಾ ಇಲ್ಲವಲ್ಲ? ತಣ್ಣಗಾಗುತ್ತೆ ಊಟ ಮಾಡಿ” ಎಂದು ಹೇಳಿದೆ. ರಾಜಣ್ಣ “ಬಾಯಿ ಮುಚ್ಚಿಕೊಂಡು ನಾನು ಹೇಳಿದಷ್ಟು ಮಾಡು. ಹಾಕೋದು ನಿನ್ ಕೆಲ್ಸ. ಸುಮ್ನೆ ಹಾಕು” ಎಂದು ಸಿಟ್ಟಿನಿಂದ ಹೇಳಿದರು. ಸರಿ, ಇನ್ನು ಇದಕ್ಕೆ ಎದುರಾಡಿದರೆ ಕಷ್ಟ ಅಂತ ಚಪಾತಿ ತಂದು ಹಾಕುತ್ತಲೇ ಹೋದೆ.

ಮಧ್ಯೆ ಅದೇನನಿಸಿತೋ ಆ ಮನುಷ್ಯನಿಗೆ, ಸೀದಾ ಎದ್ದು ಅಮ್ಮನ ಬಳಿ ಹೋಗಿ “ನೋಡಿ, ನಿಮ್ಮ ಮಗಳು ಹೇಗೆ ಊಟಕ್ಕೆ ಬಡಿಸ್ತಾ ಇದಾಳೆ? ನಾನೇನು ರಾಕ್ಷಸನಾ ಇಷ್ಟು ಚಪಾತಿ ತಿನ್ನಕ್ಕೆ? ಸುಮ್ಮನೆ ತಂದು ತಂದು ಪೇರಿಸ್ತಾ ಇದಾಳೆ” ಅಂತ ಹೇಳಿದರು. ಅಮ್ಮನಿಗೂ ನಮ್ಮ ವಾದ–ಪ್ರತಿವಾದ ಕೇಳಿಸಿತ್ತು.

ಮಗಳ ತಪ್ಪಿಲ್ಲದಿದ್ದರೂ ವಿಧಿಯಿಲ್ಲದೇ ಅಳಿಯನ ಪರ ವಹಿಸಲೇಬೇಕಾದ ಅಸಹಾಯಕತೆ ಒಂದು ಕಡೆ, ಮಗಳ ಮದುವೆ ಹೆಚ್ಚು ಕಡಿಮೆ ಆದರೆ ಸಮಾಜ ಏನನ್ನುತ್ತೆ ಎನ್ನುವ ಆತಂಕ ಇನ್ನೊಂದು ಕಡೆ – ಎರಡರ ಮಧ್ಯೆ ಸಿಲುಕಿದ ಅಮ್ಮ ತಮ್ಮ ವಾಕಿಂಗ್ ಸ್ಟಿಕ್ ಅನ್ನು ತೆಗೆದುಕೊಂಡು ನನಗೆ ಹಿಗ್ಗಾಮುಗ್ಗಾ ಹೊಡೆದರು.

ಚಕ್ರವ್ಯೂಹದಲ್ಲಿ ಸಿಲುಕಿದ್ದ ಭಾವನೆ ನನಗೆ. ನಾನು ಏಟು ತಪ್ಪಿಸಿಕೊಳ್ಳುವ ಯಾವ ಯತ್ನವನ್ನೂ ಮಾಡಲಿಲ್ಲ. ರಾಜಣ್ಣ ನನ್ನನ್ನು ಬಿಡಿಸುವ ಗೋಜಿಗೆ ಹೋಗುವುದಿರಲಿ, ನನ್ನ ರಕ್ಷಣೆಗೂ ಬರಲಿಲ್ಲ. ಕುಡಿಯುವುದನ್ನು ಮುಂದುವರೆಸಿದ. ಆವತ್ತು ಕೆಲವು ಸತ್ಯಗಳು ನನಗೆ ಮನವರಿಕೆಯಾದವು.
ಅಷ್ಟೆಲ್ಲಾ ಅನಾಹುತಕ್ಕೆ ಕಾರಣನಾಗಿದ್ದ ರಾಜಣ್ಣ ಸುಮ್ಮನೆ ರೂಮಿಗೆ ಹೋಗಿ ಮಲಗಿಬಿಟ್ಟ.

ನನಗೆ ರೂಮಿಗೆ ಹೋಗಿ ಮಲಗಲು ಹೇಸಿಗೆ ಅನ್ನಿಸಿ ಸೋಫಾ ಮೇಲೆ ಮಲಗಿದೆ. ಅಮ್ಮ ಅಂದು ನನ್ನನ್ನು ತಬ್ಬಿ “ಯಾಕೆ ಎದುರು ವಾದಿಸಿದೆ?” ಎಂದು ಅತ್ತರು. ನಾನು ಏನೂ ಮಾತಾಡಲಿಲ್ಲ. ಉಸಿರಾಡುತ್ತಿದ್ದೆ ಅಷ್ಟೇ.

ಮೈಯೆಲ್ಲಾ ಬಾಸುಂಡೆ ಎದ್ದಿದ್ದವು. ಮುಟ್ಟಿಕೊಂಡರೆ ಪ್ರಾಣ ಹೋಗುವಷ್ಟು ನೋವು. ಕಣ್ಣಲ್ಲಿ ನೀರು ಹರಿಯುತ್ತಿತ್ತು; ಮನಸ್ಸು ಕಲ್ಲಾಗಿಬಿಟ್ಟಿತ್ತು. ಬೆಳಗ್ಗೆ ಎದ್ದು ತಿಂಡಿ ಮಾಡಿದೆ. ರಾಜಣ್ಣನೂ ತಡವಾಗಿ ಎದ್ದ. ತಿಂಡಿ ತಿನ್ನದೆ ಹಾಗೇ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋದ. ಮಧ್ಯಾಹ್ನ ಊಟದ ಸಮಯಕ್ಕೆ ಬಂದ. ಊಟ ಮಾಡಿ ಸಂಜೆ ಕಾರ್ಡ್ಸ್ ಆಡಲು ಕ್ಲಬ್ಬಿಗೆ ಹೋದ. ಹೀಗೇ, ಮಾತುಕತೆಯಿಲ್ಲದೆ ಒಂದು ವಾರ ಜೀವನ ನಡೆಯಿತು. ಯಾರೂ ಯಾರ ಹತ್ತಿರವೂ ಮಾತಾಡುತ್ತಿರಲಿಲ್ಲ.

ಒಂದು ದಿನ ರಾಜಣ್ಣ ಮನೆಯಿಂದ ಹೊರಗೆ ಹೋಗುವ ಹೊತ್ತಿಗೆ ಅಮ್ಮ ಅವರ ಹತ್ತಿರ “ನಾನು ಗಾಂಧೀನಗರಕ್ಕೆ ವಾಪಾಸು ಹೋಗುತ್ತೇನಪ್ಪ. ನನ್ನ ಕೈಲಿ ಇಲ್ಲಿ ಇರಲು ಆಗುವುದಿಲ್ಲ” ಅಂತ ಹೇಳಿದ್ದಕ್ಕೆ ರಾಜಣ್ಣ ಮರುಮಾತಿಲ್ಲದೆ “ಹೂಂ” ಎಂದರು. ಆವತ್ತು ಮಾತ್ರ ಮನೆ ಬಾಗಿಲಿಗೆ ಬೀಗ ಬೀಳಲಿಲ್ಲ.

ನನಗೂ ಈ ಜೀವನ ಬೇಸತ್ತು ಹೋಗಿತ್ತು. “ಅಮ್ಮ, ನಾನೂ ನಿನ್ನ ಜೊತೆ ಬರುತ್ತೇನಮ್ಮ. ನನಗೆ ಇಲ್ಲಿರಲು ಆಗಲ್ಲ” ಅಂತ ಹೇಳಿ, ಎಳೇ ಮಗೂನ ಎತ್ತಿಕೊಂಡು ಮನೆ ಬಿಟ್ಟೆ. ಉಟ್ಟ ಬಟ್ಟೆಯಲ್ಲೇ ಹೊರಟೆ. ಯಾವ ವಸ್ತು, ದುಡ್ಡು ಕಾಸು, ಸುರಕ್ಷತೆ ಯಾವುದೂ ನನ್ನ ಮನಸ್ಸಿಗೆ ಬರಲಿಲ್ಲ. ಗಾಂಧೀನಗರದ ಮನೆ ಮತ್ತೆ ನಮಗೆ ಆಶ್ರಯವಾಯಿತು.

ನಂತರ ನಾನೂ ರಾಜಣ್ಣನೊಂದಿಗೆ ಸಂಸಾರ ಮಾಡಲು ಹೋಗಲಿಲ್ಲ. ಆತನೂ ಕರೆಯಲು ಬರಲಿಲ್ಲ. ಸುಮಾರು ತಿಂಗಳುಗಳ ನಂತರ ನನಗೆ ಕೋರ್ಟಿನಿಂದ ಒಂದು ಪತ್ರ ಬಂತು. ಅದರಲ್ಲಿ ರಾಜಣ್ಣ ನನ್ನಿಂದ ವಿಚ್ಛೇದನ ಕೋರಿದ್ದರು. ಲಾಯರನ್ನು ಇಡಲೂ ನನ್ನ ಹತ್ತಿರ ದುಡ್ಡಿರಲಿಲ್ಲ.

ಆ ಪತ್ರದಲ್ಲಿ ತಿಳಿಸಿದ ದಿನಾಂಕಕ್ಕೆ ಕೋರ್ಟಿಗೆ ಹೋಗಿ ಕಟಕಟೆಯಲ್ಲಿ ನಿಂತೆ. ವಕೀಲರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸಿದೆ. ಆದರೆ, ರಾಜಣ್ಣ ಮಾತ್ರ ಯಾವ ಪ್ರಶ್ನೆಗೂ ಉತ್ತರಿಸದೆ ಮಾತು ಮಾತಿಗೂ “ಅವಳನ್ನೇ ಕೇಳಿ” ಎಂದು ಉಡಾಫೆ ಮಾಡುತ್ತಿದ್ದರು. ನಾನು ತಲೆ ತಗ್ಗಿಸಿ ಸುಮ್ಮನೆ ನಿಂತಿದ್ದೆ. ಈ ಮನುಷ್ಯನ ಈ ಬೇಜವಾಬ್ದಾರಿ ನಡವಳಿಕೆ ಲಾಯರಿಗೂ ಬೇಸರ ತರಿಸಿತು.

ಜಡ್ಜ್ ಮಾತ್ರ “ಜೀವನಾಂಶ ಏನಾದರೂ ಕೇಳಿಕೊಳ್ಳುತ್ತೀಯಾ ತಾಯೀ?” ಅಂತ ನನ್ನನ್ನು ಕೇಳಿದರು. ನಾನು “ಇಲ್ಲ ಸರ್, ಈ ಮನುಷ್ಯನಿಂದ ನನಗೇನೂ ಬೇಡ. ಯಾವ ಹಂಗೂ ಬೇಡ. ನನ್ನ ಮಗುವನ್ನು ನಾನೇ ಸಾಕುತ್ತೇನೆ” ಅಂತ ಹೇಳಿದೆ.

ಹೀಗೆ ನನ್ನ ಕಷ್ಟಕಾಲದಲ್ಲಿ ನನ್ನನ್ನು ಸಲಹಿದ್ದು ರಂಗಭೂಮಿ. ರಾಜಣ್ಣನ ಬಂಧನದಿಂದ ಹೊರಗೆ ಬಂದ ಮೇಲೆ ಮೊದಲು ನಾನು ಅಭಿನಯಿಸಿದ್ದು ಮ್ಯಾಕ್ಸಿಮ್ ಗಾರ್ಕಿಯ ‘ತಾಯಿ’ ನಾಟಕದಲ್ಲಿ. ಕೇಸು ನಡೆಯುವ ಹೊತ್ತಿಗಾಗಲೇ ನಾನು ರಿಹರ್ಸಲ್ಲಿಗೆ ಹೋಗುತ್ತಿದ್ದೆ. ಸಮುದಾಯ ತಂಡಕ್ಕಾಗಿ ಪ್ರಸನ್ನ ‘ತಾಯಿ’ ನಾಟಕವನ್ನು ನಿರ್ದೇಶಿಸಿದ್ದರು.

ಮುಂದೆ ನನ್ನ ಮದುವೆ ಕೋರ್ಟಿನಲ್ಲಿ ಮುರಿದು ಬಿತ್ತು. ಒಂದು ದಿನ ಬೆಳಿಗ್ಗೆ ರಾಜಣ್ಣ ಮತ್ತು ನನ್ನ ಮದುವೆ ವಿಚ್ಛೇದನವಾಯಿತು ಎನ್ನುವ ಸಾರಾಂಶವಿದ್ದ ಪತ್ರ ಮನೆಗೆ ಬಂತು. ಮದುವೆ, ಮನಸ್ಸು ಎಂದೋ ಮುರಿದಿದ್ದವು. ಈ ಕಾಗದದ ತುಂಡು ಮಾತ್ರ ಅಷ್ಟೇಕೆ ನೋವು ಕೊಟ್ಟಿತು? ಆ ಪತ್ರವನ್ನು ಓದುವಾಗ ನನ್ನ ಕಣ್ಣು ಹನಿಗೂಡಿದವು. ಈ ವಿಷಯವನ್ನು ಬರೆಯುತ್ತಿರುವಾಗಲೂ ಹನಿಗೂಡುತ್ತಿವೆ. ಕ್ಷೋಭೆಗಳು ಹೀಗೇಕೆ ಹೊಸ ಅವತಾರ ಧರಿಸಿ ಮತ್ತೆ ಮತ್ತೆ ಕಣ್ಣೀರು ತರಿಸುತ್ತವೋ ದೇವರೇ ಬಲ್ಲ.

ಮುಂದೆ ನಾನು ಮದುವೆಯಾದ ಆನಂದ್ (ಆನಂದ ರಾಜು) ಅವರು ಆವತ್ತು ಬಹಳ ಒಳ್ಳೆಯ ಸ್ನೇಹಿತರಾಗಿದ್ದರು. ಅವರೊಂದಿಗೆ ಬಹಳ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೆ ನಾನು. ಆಗ ಅವರದ್ದು ಎರಡು ಮುದ್ದಾದ ಹೆಣ್ಣು ಮಕ್ಕಳು ಮತ್ತು ಬಹಳ ಪ್ರತಿಭಾವಂತೆಯಾದ ಹೆಂಡತಿ–ಹರ್ಷ್ ಇವರಿಂದ ಕೂಡಿದ ತುಂಬು ಸಂಸಾರ.

ವಿಚ್ಛೇದನದ ಪತ್ರ ಬಂದ ದಿವಸ ಆನಂದ್ ನನಗೆ ಕಲಾಕ್ಷೇತ್ರದ ಮೆಟ್ಟಿಲ ಮೇಲೆ ಸಿಕ್ಕು ಪತ್ರ ಕೊಟ್ಟು, ‘ಕೋರ್ಟಿನಿಂದ ಬಂದಿದೆ’ ಎಂದರು. ಅದನ್ನು ತೆರೆದು ಓದಿದೆ. ದುಃಖ ಉಮ್ಮಳಿಸಿ ಬಂತು. ಆನಂದ್ ‘ಏನದು’ ಅಂತ ಕೇಳಿದರು. ಕಣ್ಣಲ್ಲಿ ನೀರು ಹನಿಗೂಡುತ್ತಿದ್ದರೂ ಸುಮ್ಮನೆ ನಕ್ಕುಬಿಟ್ಟೆ.

ಕೆಲವೊಮ್ಮೆ ಬಹಳ ಉತ್ಕಟವಾಗಿ ನೆನಪಾದಾಗಲೆಲ್ಲ ನನಗೆ ಕಣ್ಣು ತುಂಬುತ್ತವೆ. ಯಾಕೆ ಹೀಗೆ? ಎಷ್ಟೆಲ್ಲಾ ಕಷ್ಟಪಟ್ಟರೂ ನನ್ನ ಮಗಳು ನನ್ನ ಹತ್ತಿರ ಇಲ್ಲ ಎನ್ನುವ ನೋವೇ ಇರಬೇಕು. ಅದು ನನ್ನ ಬಹು ದೊಡ್ಡ ಗಾಯ. ಎಲ್ಲೇ ಇರಲಿ. ಅವಳು ಸುಖವಾಗಿದ್ದರೆ ಅಷ್ಟೇ ಸಾಕು.

ಆಕೆ ಬಹಳ ಬುದ್ಧಿವಂತೆ. ಬಹಳ ಕ್ರಿಯಾಶೀಲ ಮನಸ್ಸು ಅವಳದ್ದು. ಎಲ್ಲಕ್ಕಿಂತಲೂ ನನಗೆ ಖುಷಿ ಕೊಡುವ ವಿಷಯವೆಂದರೆ ಆಕೆ ಬಹಳ ಒಳ್ಳೆಯ ನಟಿ. ಕಂಠವಂತೂ ಇನ್ನೂ ಶ್ರೀಮಂತವಾಗಿದೆ!

ಆದರೆ, ಅಂದಿನ ನನ್ನ ಜೀವನ ಹೇಗೆ ಅಂತ ಯೋಚಿಸಿದಾಗ ನನ್ನ ಕಷ್ಟಗಳಿಗೆ ಕೊನೆಯೇ ಇಲ್ಲ ಅನ್ನಿಸಿದ್ದುಂಟು. ಆ ದಿನಗಳಲ್ಲಿ ನನಗೆ ಬಹಳ ಆಧಾರದ ಅವಶ್ಯಕತೆ ಬಹಳ ಇತ್ತು. ಆದರೆ ಎಲ್ಲರೂ ಓಡುತ್ತಿರುವ ಜಗತ್ತಿನಲ್ಲಿ ಅಂತಃಕರಣ ತೋರಿಸಲು ಯಾರಿಗೆ ಸಮಯವಿದೆ? ಸುಷ್ಮಾಳ ಹಾಲಿಗೆ, ಅವಳ ಬೇಬಿ ಫುಡ್ಡಿಗೆ ಎಲ್ಲದಕ್ಕೂ ನಾನು ದುಡಿಯಲೇಬೇಕಿತ್ತು.

ಅಮ್ಮ ವೈಯರ್ ಬ್ಯಾಗ್ ಹಾಕುತ್ತಿದ್ದರು. ಅದನ್ನು ಹೋಗಿ ನಾನು ರಾಜಾ ಮಾರ್ಕೆಟ್ಟಿನ ಅಂಗಡಿಯೊಂದಕ್ಕೆ ಮಾರಿ ದುಡ್ಡು ತೆಗೆದುಕೊಂಡು ಬರುತ್ತಿದ್ದೆ. ಒಂದು ಬ್ಯಾಗಿಗೆ 15–20 ರೂಪಾಯಿಗೆ ಕೊಳ್ಳುತ್ತಿದ್ದ ಅಂತ ನೆನಪು. ಪೈಸೆಗೆ ಪೈಸೆ ಕೂಡಿಟ್ಟು ಮಗುವನ್ನು ಮುಚ್ಚಟೆಯಾಗಿ ಸಾಕಿದೆವು, ನಮ್ಮ ಸಾಮರ್ಥ್ಯಾನುಸಾರ.
(ಮುಂದುವರೆಯುವುದು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.