ಮಲ್ಲಿಗೆ ಎನ್ನುವುದು ಬರಿಯ ಹೂವೇ? ಉಹುಂ, ಅದು ಪ್ರೇಮದ ಸಂಕೇತ ಹಾಗೂ ಕನ್ನಡ ಸಂಸ್ಕೃತಿಯ ರೂಪಕ. ಎಷ್ಟೋ ಕಾಲದಿಂದ ಕಾವ್ಯಕ್ಕೆ ವಸ್ತುವಾಗಿ, ಹೆಣ್ಣಿನ ಸೌಂದರ್ಯ ಮತ್ತು ಶುದ್ಧ ಮನಸ್ಸಿಗೆ ಸಂಕೇತವಾಗಿ ಎಲ್ಲರಿಂದ ಮನ್ನಣೆ ಪಡೆದಿದೆ. ಅದರ ಹೊರ ಸೌಂದರ್ಯ ಮಾತ್ರವಲ್ಲದೆ ಅದರ ಬೇರು, ಹೂವು, ಎಲೆ, ತೊಗಟೆಗಳಲ್ಲಿ ಔಷಧೀಯ ಗುಣವಿದೆ.

ತಾಯಂದಿರ ಸ್ತನಗಳಲ್ಲಿ ಹಾಲುತುಂಬಿ ಬಾತು ಕಲ್ಲಿನಂತಾದರೆ ಪೂರ್ಣ ಅರಳಿದ ಹಿಡಿಮಲ್ಲಿಗೆ ಹೂಗಳನ್ನು ಎರಡೂ ಸ್ತನಗಳ ಮೇಲಿಟ್ಟು ಕಟ್ಟಬೇಕು. ಮಾನವನ ದೇಹದ ಯಾವುದೇ ಭಾಗದಲ್ಲಿ ಬಾವು ಬಂದಾಗ ಅಥವಾ ಪಾದಗಳು ಬಾತುಕೊಂಡಾಗ ಮಲ್ಲಿಗೆಯ ಚಿಗುರೆಲೆಗಳನ್ನು ನುಣ್ಣಗೆ ಅರೆದು ಪಟ್ಟು ಹಾಕಿದರೆ ನೋವು ನಿವಾರಣೆಯಾಗುತ್ತದೆ.

ಋತುಚಕ್ರ ನಿಯಮಿತ ಇರದಿದ್ದಾಗ ಅರಳಿದ ಮಲ್ಲಿಗೆ ಹೂಗಳನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿ, ದಿನಕ್ಕೆರಡು ವೇಳೆ ಸೇವಿಸುತ್ತಾ ಬಂದರೆ ಮುಟ್ಟು ಕ್ರಮಗೊಳ್ಳುವುದು.

ಈ ಮಲ್ಲಿಗೆ ಹೆಣ್ಣು ಜೀವಕ್ಕೆ ನಿಜವಾದ ಗೆಳತಿಯಲ್ಲವೇ ಮತ್ತೆ? ಇನ್ನು ಅದನ್ನು ಸುಗಂಧ ದ್ರವ್ಯವಾಗಿ ಉಪಯೋಗಿಸುವುದು ಸರ್ವವಿದಿತ. ಅಚ್ಚ ಬಿಳಿಯ ಘಮಘಮಿಸುವ ಹೂಗಳನ್ನು ಧರಿಸಿ ನಮ್ಮ ಮನೆಯ ಅಂಗಳದಲ್ಲಿ ನಗುವ ಮಲ್ಲಿಗೆ ಬಳ್ಳಿಯನ್ನು ನೋಡಿದರೆ ನಾವು ಭಾಗ್ಯವಂತರು ಎನಿಸುತ್ತದೆ! ಹಸುರಿನ ಮೇಲೆ ಮೊಸರು ಚೆಲ್ಲಿದಂತೆ, ನಕ್ಷತ್ರಗಳ ಹಾಗೆ– ಮುಂತಾಗಿ ಕವಿಗಳಿಂದ ಬಣ್ಣನೆಗೊಳಗಾದ ಹೂವಿದು. ಕವಿ ಜಿ.ಎಸ್. ಶಿವರುದ್ರಪ್ಪ ಅವರು ಮಲ್ಲಿಗೆಯ ನಗುವನ್ನು ಕಂಡ ಪರಿ ಅನನ್ಯ.

ಇಗೋ ಇಲ್ಲರಳಿ ನಗುತಿದೆ
ಏಳು ಸುತ್ತಿನ ಮಲ್ಲಿಗೆ
ಇಂತು ಹಚ್ಚನೆ ಹಸಿರು ಗಿಡದಿಂ
ದೆಂತು ಮೂಡಿತು ಬೆಳ್ಳಗೆ

ಅಂದಹಾಗೆ, ನಮ್ಮ ಮನೆಗೀಗ ‘ಮಲ್ಲಿಗೆ ಮನೆ’ ಎಂಬ ಅಡ್ಡ ಅಭಿದಾನದ ಹೆಚ್ಚುಗಾರಿಕೆಯೂ ದೊರೆತಿದೆ. ನಮ್ಮದೋ ‘ಮೂಲೆ ಮನೆ’– ಆ ಕಡೆ ರಸ್ತೆ, ಈ ಕಡೆ ರಸ್ತೆ... ಓಡಾಡುವವರು ಅಂದರೆ ಪಾದಚಾರಿಗಳು, ವಾಹನಚಾರಿಗಳು ಬಹಳ.

‘ಮನೆಯ ಅಂಗಳದಲ್ಲಿ’ ಎಂಬ ಪದ ಉಪಯೋಗಿಸಿದ್ದರೂ, ಬೆಂಗಳೂರಿನಂಥ ನಗರದಲ್ಲಿ ನಮ್ಮ ಹಳ್ಳಿಗಾಡುಗಳ, ಅಂಗಳ, ಹಿತ್ತಲುಗಳನ್ನು ಕಲ್ಪನೆ ಮಾಡಿಕೊಳ್ಳುವುದೂ ಸಾಧ್ಯವಿಲ್ಲದ ಮಾತು! ನಿಜ ಹೇಳಬೇಕೆಂದರೆ ನಮ್ಮ ಮಲ್ಲಿಗೆ ಗಿಡ, ಅದರ ಪಕ್ಕದಲ್ಲಿರುವ ನಂದಿಬಟ್ಟಲು ಗಿಡ, ಕಾಂಪೌಂಡು ಮತ್ತು ಮನೆಯ ನಡುವೆ ಬಿಡಬೇಕಾಗಿರುವ ಎರಡು ಅಡಿಗಳ ಸ್ವಲ್ಪ ಜಾಗದಲ್ಲೇ ಬೆಳೆದು ಕಾಂಪೌಂಡಿನಿಂದ ಆಚೆಗೂ ವಿಶಾಲವಾಗಿ ರೆಂಬೆ ಕೊಂಬೆಗಳನ್ನು ಚಾಚಿಕೊಂಡಿವೆ.

ಅಂದಮೇಲೆ ರಸ್ತೆಗೆ ಚಾಚಿದ ಕೊಂಬೆಗಳಲ್ಲಿ ಬಿಡುವ ಹೂಗಳನ್ನು ನಮ್ಮವು ಎಂದು ಹೇಗೆ ಹೇಳುವುದು? ಆರೋಗ್ಯ ಕಾಪಾಡಿಕೊಳ್ಳುವ ಕಾಯಕದಲ್ಲಿ ಬೆಳಗಿನ ಹಿತವಾದ ಹವೆಯಲ್ಲಿ ಕಾಯ ದಂಡಿಸಲು ಓಡಾಡುವ ಪಾದಚಾರಿಗಳು ಕೆಲವರು, ಕೈಯಲ್ಲಿ ಒಂದು ಚೀಲವನ್ನೂ ಸಿದ್ಧಮಾಡಿಕೊಂಡು ಬಂದಿರುವುದರಿಂದ ಯಾವ ಯಾವ ಮನೆಗಳ ಕಾಂಪೌಂಡಿನ ಆಚೆಗೆ ಗಿಡ ಚಾಚಿಕೊಂಡಿರುತ್ತದೋ ಅಂಥ ಹೂಗಳನ್ನು ಕೀಳಲು ನಿರ್ದಾಕ್ಷಿಣ್ಯವಾಗಿ ಕೈಚಾಚುತ್ತಾರೆ.

ಒಂದೆಡೆ ಹೂವು ಸಿಗುತ್ತದೆ, ಇನ್ನೊಂದು ಥರ ವ್ಯಾಯಾಮವೂ ಆಗುತ್ತದೆ. ಒಂದೇ ಏಟಿಗೆ ಎರಡು ಹಕ್ಕಿ! ಅವರು ಹೂ ಕಿತ್ತುಕೊಳ್ಳುವುದರ ಬಗ್ಗೆ ನಮ್ಮದೇನೂ ತಕರಾರಿಲ್ಲ. ಆದರೆ ಹೂಕೀಳುವ ರಭಸದಲ್ಲಿ ಸ್ವಲ್ಪ ಮೇಲಿರುವ ಹೂಗಳಿಗಾಗಿ ಕತ್ತು ನಿಗುರಿಸಿ ಕೈಗಳು ಉದ್ದ ಚಾಚಿ ಹೆಚ್ಚಿಗೆ ವ್ಯಾಯಾಮ ಮಾಡಬೇಕಾದಾಗ, ಒಮ್ಮೊಮ್ಮೆ ಹೂಗಳ ಜೊತೆಗೆ ಎಳೆ ರೆಂಬೆಗಳೂ ಮುರಿದುಬೀಳುತ್ತವೆ. ಅದಕ್ಕೇ ಬೇಸರ!

ಪರರ ಮನೆಯ ಹೂ ಕೀಳುವ ಇವರು ಇನ್ನೂ ಸ್ವಲ್ಪ ಕತ್ತಲಿರುವ ಹಾಗೆಯೇ, ಅಂದರೆ ಐದು ಐದೂವರೆಯ ಹೊತ್ತಿನಲ್ಲಿ ಮೆಲ್ಲಗೆ ಹೆಜ್ಜೆಯಿಡುತ್ತಾ ಹೂಗಳ ಅನ್ವೇಷಣೆಗೆ ತೊಡಗುತ್ತಾರೆ. ಅಲ್ಲಲ್ಲಿ ಬೆಳಕು ನೀಡುವ ಲೈಟ್ ಕಂಬಗಳು ಈ ಪುಷ್ಪಚೋರರಿಗೆ ನೆರವು ನೀಡುತ್ತವೆ.

ಮೇಲಕ್ಕೆ ಹಬ್ಬಿಹೋಗಿರುವ ನಮ್ಮ ಮನೆಯ ಮಲ್ಲಿಗೆ ಕೆಳಗೆ ಹೆಚ್ಚಾಗಿ ಬಿಡುವುದಿಲ್ಲ. ನಮ್ಮ ಕಾಂಪೌಂಡಿಗೆ ಅಂಟಿಕೊಂಡೇ ಚರಂಡಿ ಇದೆ. ಅದರ ಮೇಲೆ ದೊಡ್ಡ ಚಪ್ಪಡಿ ಕಲ್ಲುಗಳನ್ನು ಜೋಡಿಸಿದ್ದಾರೆ. ಒಂದು ದೊಡ್ಡ ಕಲ್ಲನ್ನು ಯಾರೋ ಹೊತ್ತೊಯ್ದಿರುವುದರಿಂದ ಅಲ್ಲಿ ನಿಂತು ಹೂ ಕೀಳಲು ಹೋದವರು ಆಯ ತಪ್ಪಿಬಿದ್ದರೆ, ಪಕ್ಕದ ಕಲ್ಲುಗಳ ತುದಿಭಾಗ ತಲೆಗೆ ತಾಕಿ, ಪೆಟ್ಟಾಗಿ ಆಸ್ಪತ್ರೆಗೆ ಹೋಗುವ ಸಾಧ್ಯತೆಯೂ ಇದೆ.

ಒಂದು ದಿನ ಬೆಳಗ್ಗೆ ಐದೂವರೆಗೆ ಹೂ ಕೀಳಲು ಬಂದವರೊಬ್ಬರು ಸ್ವಲ್ಪ ಮೇಲಿದ್ದ ಹೂವಿಗಾಗಿ ಬಳ್ಳಿ ಎಳೆದುಕೊಂಡು ಎಟುಕಿಸಿಕೊಳ್ಳಲು ಹೋಗಿ ಚರಂಡಿಗೇ ಸಾಷ್ಟಾಂಗ ನಮನ ಮಾಡಿದ್ದರು. ಬೆಳಗಿನ ಹವಾವಿಹಾರದ ನಡಿಗೆಗೆ ಬಂದಿದ್ದ ನಾಲ್ಕು ಜನ ಅವರನ್ನು ಎತ್ತಿ ಆಸ್ಪತ್ರೆಗೆ ಸೇರಿಸಿದರಂತೆ. ಇಷ್ಟೆಲ್ಲಾ ನಡೆಯುತ್ತಿದ್ದರೂ– ಅದೂ ತನ್ನ ದೆಸೆಯಿಂದ– ತನಗೇನೂ ಗೊತ್ತಿಲ್ಲವೆಂಬಂತೆ ಮಲ್ಲಿ ಮುದ್ದಿನ ನಗೆ ಬೀರುತ್ತಾ ಗಾಂಭೀರ್ಯದಿಂದ ಇದ್ದಳು!

ನಮಗೆ ಭಯವಾಯಿತು. ಈ ಪ್ರಸಂಗ ನಡೆದ ಮೇಲೆ ನಾನು ಬಹಳ ಯೋಚಿಸಿ ಒಂದು ಬೋರ್ಡು ಬರೆದು ತಗುಲಿ ಹಾಕಿದೆ. ‘ಎಚ್ಚರ! ಹೂಕೀಳುವ ಆಸೆಗೆ ಹೋಗಿ, ಮೀಸೆ ಮಣ್ಣಾಗುವುದು ಹಾಗಿರಲಿ, ಚರಂಡಿಗೆ ಬಿದ್ದು ಆಸ್ಪತ್ರೆ ಸೇರುತ್ತೀರಿ. ಮಲ್ಲಿಗೆಯಿಂದ ದೂರವಿರಿ’.

ಒಂದೆರಡು ದಿನಗಳ ನಂತರ ಅದರ ಕೆಳಗೆ ಕೆಲವು ವಾಕ್ಯಗಳು ಕಂಡವು. ‘ನಿಮ್ಮ ಮನೆಯ ಬಳಿ ಬಿದ್ದರೆ ಸುಮ್ಮನೆ ನಿಮಗೆ ಶಾಪ ತಟ್ಟುತ್ತದೆ. ದಯಮಾಡಿ ಒಂದು ಚಪ್ಪಡಿ ಕಲ್ಲು ಹಾಕಿಸಿಬಿಡಿ’. ನಾನು ಈ ವಿಷಯವನ್ನು ನನ್ನವರಿಗೆ ಹೇಳಿದೆ. ಅವರು ನಗುತ್ತ ‘ಹಾಕಿಸು ಈಗ ಚಪ್ಪಡಿ!’ ಎಂದು ಕೆಣಕಿದರು. ನಾನು ‘ಹೂಂ. . .ಹೂಂ ನಾನೇಕೆ ಹಾಕಿಸಲಿ?’ ಎಂದು ಅದರ ಕೆಳಗೆ ಹೀಗೆ ಬರೆದೆ: ‘ಕಳ್ಳತನದ ಪಾಪ ನಿಮಗೆ ಮೊದಲು ಸುತ್ತಿಕೊಳ್ಳುತ್ತದೆ ಎಂಬುದನ್ನು ಮರೆಯದಿರಿ. ಬೇಕಾದರೆ ನೀವೇ ಚಪ್ಪಡಿ ಹಾಕಿಸಿ’.

ಒಂದು ವಾರವಾಯಿತು. ಮಲ್ಲಿಗೆಯ ಆಸೆಯನ್ನು ಬಿಟ್ಟರೆಂದು ಕಾಣುತ್ತದೆ. ಹೂಗಳನ್ನು ಯಾರೂ ಕೀಳದೆ ಗಿಡದಲ್ಲೇ ಶೋಭಿಸುತ್ತಿದ್ದವು. ‘ನೋಡಿದಿರಾ, ಮಾತಿನ ಶೂರರು, ಎಲ್ಲಾ ಸುಮ್ಮನಾದರು’ ಎಂದು ಅವರ ಬಳಿ ಹೇಳಿಕೊಂಡೆ.

ಮತ್ತೊಂದು ವಾರವಾಯಿತು. ಒಂದು ದಿನ ಬೆಳಗ್ಗೆ ಆಚೆಗೆ ಬಂದು ನೋಡುತ್ತೇನೆ. ಹೊಸದಾದ ದೊಡ್ಡ ಚಪ್ಪಡಿ ಚರಂಡಿಯ ತೆರೆದ ಭಾಗವನ್ನು ಮುಚ್ಚಿತ್ತು. ‘ವಾಹ್! ಇಲ್ಲಿಗೆ ಬನ್ನಿ’ ಎಂದು ಕೂಗಿದೆ. ‘ಏನಾಯಿತು? ಏನಾಯಿತು?’ ಎಂದು ಅವರು ಓಡಿ ಬಂದರು. ಅವರಿಗೂ ಆಶ್ಚರ್ಯವಾಯಿತು. ‘ಹೂವಿನ ಆಸೆಗೆ ನೋಡು ಚಪ್ಪಡಿ ತಂದು ಮುಚ್ಚಿದ್ದಾರೆ. ಪಾಪ! ಸಿಗುವಷ್ಟು ಕಿತ್ತುಕೊಳ್ಳಲಿ ಬಿಡು’ ಎಂದರು.

ನನಗೂ ಮನಸು ಕರಗಿತು. ಸರಿ, ಹೋಗಲಿ ಬಿಡಿ. ನಾವೂ ದೇವರಿಗೇ ತಾನೇ ಮುಡಿಸುವುದು. ನಮ್ಮ ಮನೆಯ ಹೂಗಳಾದ್ದರಿಂದ, ನಮ್ಮ ಮುಡಿಗೆ ಆ ದೇವರು ‘ಪುಣ್ಯ ಕುಸುಮ’ಗಳನ್ನು ಮುಡಿಸುತ್ತಾನೆ ಎಂದುಕೊಂಡು ಹೀಗೆ ಬರೆದೆ. ‘ಚಪ್ಪಡಿ ಹಾಕಿಸಿದವರಿಗೆ ಧನ್ಯವಾದಗಳು. ಅದರ ಮೇಲೆ ನಿಂತು ಎಷ್ಟು ಸಾಧ್ಯವೋ ಅಷ್ಟು ಹೂಗಳನ್ನು ಕಿತ್ತುಕೊಳ್ಳಿ’. ಮಾರನೆಯ ದಿನ ಅದರ ಕೆಳಗೆ ಈ ಅಕ್ಷರಗಳು ಶೋಭಿಸುತ್ತಿದ್ದವು. ‘ಕೈಗೆ ಎಟುಕದ ಹೂಗಳನ್ನು ಬಿಡಿಸಿಕೊಳ್ಳಲು ಏಣಿ ತಂದು ಹಾಕಿ ಕಿತ್ತುಕೊಳ್ಳಬಹುದೇ?’.

ಹೂಗಳ ಆಸೆಗಿಂತ ತಮಾಷೆ, ತುಂಟತನಗಳೇ ಇಲ್ಲಿ ಹೆಚ್ಚಾದ ಹಾಗೆ ಕಂಡಿತು. ಏನು ಬರೆಯುವುದೆಂದು ತಿಳಿಯದೆ ಅದೇ ಹೊಸ ಚಪ್ಪಡಿಯ ಮೇಲೆ ನಿಂತು ಕಾಂಪೌಂಡಿಗೆ ಸುಸ್ತಾಗಿ ಒರಗಿ ನಿಂತೆ!

ಈಗ ನಮ್ಮ ಮನೆಯ ಮಲ್ಲಿಗೆ, ನಮ್ಮದು ಮಾತ್ರವಲ್ಲ, ನಮ್ಮ ಬಡಾವಣೆಗೇ ಸೇರಿದ್ದಾಗಿದೆ. ಏಣಿ ತಂದು ಹಾಕಿ ಯಾರಾದರೂ ಒಂದಿಬ್ಬರು ಹೂ ಬಿಡಿಸಿ, ಎಲ್ಲ ಮನೆಗಳವರಿಗೂ ಸರದಿ ಪ್ರಕಾರ ಹಂಚಿ ಖುಷಿ ಪಡುತ್ತಾರೆ. ಯಾರಾದರೂ ನೀರು–ಗೊಬ್ಬರವನ್ನೂ ಹಾಕುತ್ತಾರೆ. ಆ ಹಂಚುವುದರಲ್ಲಿರುವ ಸುಖ ಬಣ್ಣಿಸಲಾಗದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.