ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನಿಂತಮೇಲೆ...

Last Updated 5 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಅದು ಮೊಟ್ಟ ಮೊದಲ ಮಳೆ... ಮುಂಗಾರಿನ ಬೆನ್ನು ಭಾರವಾಗುವ ಹಾಗೆ ಸುರಿದ ಮಳೆ. ಚುರ‍್ಗುಡುವ ಬಿಸಿಲಿಗೆ ತಂಪೆರೆವ ಹಂಬಲದಿ ಹೊಯ್ದಂತ ಮಳೆ. ಅಂಥಾ ಮಳೆಯೊಂದಿಗೆ ಸಿಟ್ಟು... ಸೆಡವು... ಒತ್ತಡ... ಅಬ್ಬರ... ಎಲ್ಲವೂ ಮೇಳೈಸಿದ್ದವು ಎಂದರೆ ನೀವು ನಂಬಲೇಬೇಕು. ಕಟ್ ಕಟ್ ಕಡಲ್! ಅನ್ನೋ ಸದ್ದು ಅಳ್ಳೆದೆಯವರು ಕಂಪಿಸಿ ಬೆಚ್ಚಿಬೀಳುವಂತಿತ್ತು. ಹಾಗೆ ಸುರಿದ ಮಳೆಗೆ ಇಳೆಯ ಬಿಸಿಯುಸಿರು, ಹದವಾದ ವಾಸನೆಯ ಹಬೆಯಾಗಿ ಅಡರುತ್ತಿತ್ತು. ಸೊಂಯ್... ಎಂದು ಸೀಟಿ ಹೊಡೆಯುವಂತೆ ಊದುವ ಜೋರಾದ ಗಾಳಿ ಮತ್ತು ಟಪ್ ಟಪ್ ಎಂದು ಆಣೆಕಲ್ಲಿನೊಂದಿಗೆ ಆರಂಭವಾಗಿ, ಧೋ..ಧೋ..ಎಂದು ಸುರಿದ ಮಳೆಗೆ ಇಡೀ ಊರೆಲ್ಲಾ ತತ್ತರ. ಹಾಗೆ ಮತ್ತೆ ಮತ್ತೆ ಕಟ್ ಕಟ್ ಕಡಲ್! ಎಂದು ಅಬ್ಬರಿಸುವ ಸಿಡಿಲು, ವಿಜಯಪುರದ ಶಾಂತಿ ಕಾಲೋನಿಯ ಪರಮೇಶಿ ಪಾಟೀಲನ ನೆಮ್ಮದಿಯನ್ನು ಕಸಿದುಕೊಂಡಿತ್ತು.

ಶಾಂತಿ ಕಾಲೊನಿ ಹೆಸರಿಗೆ ತಕ್ಕಂತೆ ತುಂಬಾ ಪ್ರಶಾಂತವಾಗಿತ್ತು. ಅದೇ ಕಾರಣಕ್ಕೆ ತನ್ನ ಹುಟ್ಟೂರು ಸಿಂಧಗಿಯಲ್ಲಿರುವ ಮನೆಯನ್ನು ಮಾರಿ, ಪರಮೇಶಿ ಇಲ್ಲೊಂದು ಮನೆ ಕಟ್ಟಿಸಿದ್ದ. ವಿಜಯಪುರದ ಪ್ರತಿಷ್ಠಿತ ಖಾಸಗಿ ಹೈಸ್ಕೂಲಲ್ಲಿ ಕನ್ನಡ ಶಿಕ್ಷಕನಾಗಿರುವ ಪರಮೇಶಿ, ಆ ಭಾಗದಲ್ಲಿ ಮಕ್ಕಳ ಕವಿ ಎಂದು ಗುರುತಿಸಿಕೊಂಡವನು. ಶಾಲೆಯಲ್ಲಾಗಲೀ, ಮನೆಯಲ್ಲಾಗಲೀ, ಕೇರಿಯಲ್ಲಾಗಲೀ ಗದ್ದಲವೆಂದರೆ ತುಂಬಾ ದೂರವೇ ಉಳಿಯುವ ಅವನು, ಮನೆಯಲ್ಲಿ ಮಕ್ಕಳು ಚೂರು ಪಾರು ಗದ್ದಲ ಮಾಡಿದರೂ ಸಹಿಸದ ವ್ಯಕ್ತಿ. ಅಡುಗೆ ಮನೆಯಲ್ಲಿ ಪಾತ್ರೆ ಪಗಡಿ ಬಿದ್ದು ಸದ್ದಾದರೂ ಹೆಂಡತಿಯೆಡೆಗೆ ಕೆಂಗಣ್ಣಿನಿಂದ ನೋಡುತ್ತಿದ್ದ. ಅದೇನೋ ಗೊತ್ತಿಲ್ಲ ಅವನು ಮುಂಚಿನಿಂದಲೂ ಹಾಗೆಯೇ. ಸದಾ ಪ್ರಶಾಂತ ವಾತಾವರಣ ಬಯಸುವವನು ಎನ್ನುವುದು ಅವರಮ್ಮನ ಮಾತು.

ಆ ಮೊದಲ ಮಳೆಯ ಹೊಡೆತವೇ ಹಾಗಿತ್ತು. ಬಿಟ್ಟೂ ಬಿಡದೇ ಹೊಡೆಯುವ ಗುಡುಗು, ಸಿಡಿಲು ಪರಮೇಶಿಯನ್ನು ಮಳೆ ಬರುವಾಗಲೂ ಬೆವರುವಂತೆ ಮಾಡಿತ್ತು. ಬೆದರುವ ಹೋರಿಯೊಂದು ಪಟಾಕಿ ಸಿಡಿಸುವ ಸಂತೆಯೊಳಗೆ ಹೊಕ್ಕಂಗಿತ್ತು ಅವನ ಸ್ಥಿತಿ. ಆ ಮಳೆಯೋ ಇವನನ್ನು ಹೆದರಿಸಲೆಂಬಂತೆ ಆರ್ಭಟಿಸಿ ಬರುತ್ತಿತ್ತು. ಕಿಡಕಿಯಲ್ಲಿ ಕುಳಿತುಕೊಳ್ಳಲು ಇಟ್ಟಿದ್ದ ಆರಾಮ ಖುರ್ಚಿಯನ್ನು ಸ್ವಲ್ಪ ಒಳಕ್ಕೆ ಎಳೆದುಕೊಂಡು, ಅದರ ಮೇಲೆ ಕುಳಿತು ಗೋಡೆ ಕಟ್ಟಿದಂತೆ ಹೊಡೆಯುತ್ತಿದ್ದ ಮಳೆಯನ್ನು ದಿಟ್ಟಿಸುತ್ತಿದ್ದ. ಹೆಂಡತಿ ಮಕ್ಕಳು ಖುಷಿಯಿಂದ ಅಂತೂ ಧಗೆಯ ಧಿಮಾಕಿಗೆ ಉತ್ತರವಾಗಿ ಬಂತು ಮಳೆ ಎನ್ನುವ ಸಮಾಧಾನದಲ್ಲಿ ಹೊರಗಡೆ ಸುರಿಯುವ ಮಳೆಯನ್ನು ಇನ್ನೊಂದು ಕಿಡಕಿಯಲ್ಲಿ ನಿಂತು ಆನಂದಿಸುತ್ತಿದ್ದರೆ, ಪರಮೇಶಿ ಮಾತ್ರ ’ದೂರ ಸರೀರಿ... ಕಿವಿ ಮುಚ್ಕೊರಿ ಸಿಡಿಲು... ಸಿಡಿಲು...’ ಅಂತ ಮತ್ತೂ ಸ್ವಲ್ಪ ಖುರ್ಚಿಯನ್ನು ಒಳಗೆ ಎಳೆದುಕೊಳ್ಳುತ್ತಿದ್ದ. ಹೆಂಡತಿ ನಗುತ್ತ ಮಕ್ಕಳಿಗೆ ’ನಿಮ್ಮ ಅಪ್ಪ ಆ ಸಿಡಿಲಿಗೆ ಅದೆಷ್ಟು ಹೆದರ್ತಾರ ನೋಡ್ರಿ’ ಅಂತ ನಕ್ಕಳು.

ಪರಮೇಶಿ ಜೋರಾಗಿ ತನ್ನ ಎರಡೂ ಕಿವಿ ಮುಚ್ಚಿಕೊಂಡಿದ್ದ. ಹೆಂಡತಿಯ ಯಾವ ಮಾತೂ ಅವನಿಗೆ ಕೇಳಿಸದಿದ್ದರೂ ಮಕ್ಕಳು ಮತ್ತು ಹೆಂಡತಿ ತನ್ನೆಡೆಗೆ ನೋಡಿ ನಕ್ಕಿದ್ದರ ಅಧಾರದ ಮೇಲೆ ಆಕೆ ಮಾತನಾಡಿದ್ದನ್ನು ಅವನು ಗ್ರಹಿಸಿದ್ದ. ಬರೀ ಮಳೆ ಮಾತ್ರವಲ್ಲ, ಅದರ ಜೊತೆಗೆ ಜೋರಾದ ಗಾಳಿ, ಆ ಗಾಳಿಯೊಂದಿಗೆ ಕಿಡಕಿಯ ಮೂಲಕ ತೂರಿ ಬರುವ ತುಂತುರು ಹನಿಗಳು ಮುಖಕ್ಕೆ ತಾಕಿ ಮೈ ಜುಮ್ಮೆಂದು, ಹಾಯ್ ಎನ್ನುವಂತಾದರೂ ಆಗಾಗ ಮತ್ತೆ ಕಟ್ ಕಟ್ ಕಡಲ್ ಎಂದು ಗರ್ಜಿಸುವ ಗುಡುಗು, ಸಿಡಿಲು ಮಾತ್ರ ಅವನಿಗೆ ಕಿರಿಕಿರಿ ಎನಿಸುತ್ತಿತ್ತು. ಮಕ್ಕಳಾದ ರಜನಿ ಮತ್ತು ಹರ್ಷ ಅಪ್ಪನ ವಾರ್ನಿಂಗ್ ನಡುವೆಯೂ ಕಿಡಕಿಯ ಹೊರಗೆ ಕೈಹಾಕಿ ಬೊಗಸೆಯಲ್ಲಿ ಮಳೆ ನೀರು ಹಿಡಿದು ಖುಷಿ ಪಟ್ಟದ್ದೇ ಪಟ್ಟದ್ದು. ಅವರ ಆ ಅಗಲ ಮುಖ ಕಂಡು ಪರಮೇಶಿಗೂ ಒಳಗೊಳಗೆ ಖುಷಿಯಾಗಿತ್ತು. ಅವನಿಗೂ ಮಳೆಯೆಂದರೆ ಖುಷಿಯೇ. ಸಂಕಟ ಮಾತ್ರ ಈ ಗುಡುಗು, ಸಿಡಿಲಿನ ಆರ್ಭಟದ್ದು. ಏನು ಮಾಡುವುದು? ಅವುಗಳನ್ನು ಹೊರತುಪಡಿಸಿದ ಮೊದಲ ಮಳೆ ನಿಸರ್ಗಕ್ಕೂ ಸಹ್ಯವಾಗುವದಿಲ್ಲವಲ್ಲ!

ಗಾಳಿ ಮತ್ತು ಮಳೆಯ ಆರ್ಭಟ ಹೆಚ್ಚಾಗುತ್ತಲೇ ಹೋಯಿತು. ದೂರದಲ್ಲಿಯ ಗಿಡದ ಟೊಂಗೆಗಳು ಮೈಯಲ್ಲಿ ದೆವ್ವ ಹೊಕ್ಕಿರುವಂತೆ ತಲೆ ಅಲ್ಲಾಡಿಸುತ್ತಿದ್ದವು. ಆ ಗಾಳಿಯ ಎದುರು ಎದೆ ಸೆಟೆಸಿ ನಿಂತ ಕೆಲ ಹಳೆಯ ಗಿಡಗಳು ಸೊಂಟ ಕತ್ತರಿಸಿಕೊಂಡು ಮುಗುಚಿ ನೆಲಕ್ಕುರುಳಿದವು. ಮತ್ತೆ ಕೆಲವು ಬುಡಮೇಲು ಮಾಡಿಕೊಂಡು ಅಂಗಾತ ಬಿದ್ದಿದ್ದವು. ಗಾಳಿಯ ರಭಸಕ್ಕೆ ಶಾಂತಿ ಕಾಲನಿಯ ಲೈಟುಗಳು ಕಣ್ಣು ಮಿಟುಕಿಸಿದಂತೆ ಮಾಡಿ ಮುಚ್ಚಿಯೇ ಬಿಟ್ಟವು. ಆಗ ಸಮಯ ಸಾಯಂಕಾಲ ಏಳು ಗಂಟೆ. ಸುತ್ತಲೂ ಮೋಡ ಕವಿದದ್ದರಿಂದ ಅದಾಗಲೇ ಕತ್ತಲು ಆವರಿಸಿದಂಗಿತ್ತು. ಪರಮೇಶಿಯ ಮನೆಯ ಎದುರಿರುವ ಸಣ್ಣ ಗಿಡವೊಂದು ಬೊಡ್ಡೆಯಲ್ಲಿ ಯಾವುದೋ ಹುಳ ಹಿಡಿದು ಒಣಗಿ ನಿಂತಿತ್ತು.

ಮನೆಯ ಮುಂದೆ ಹಾಗೆ ಒಣಗಿದ ಗಿಡ ಇರಬಾರದು ಅದು ಒಳ್ಳೆಯದಲ್ಲ, ಅರಿಷ್ಟ ಎಂದೆಲ್ಲಾ ಓಣಿಯ ಹಿರಿಯರು ಹೇಳಿದ ಮೇಲೂ ಕವಿ ಹೃದಯದ ಪರಮೇಶಿ ಅದನ್ನು ಕತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಆ ಗಾಳಿಯನ್ನು ಎದುರಿಸುವ ತ್ರಾಣ ಅದಕ್ಕಿಲ್ಲ ಎನ್ನುವುದು ಪರಮೇಶಿಗೆ ಗೊತ್ತಿತ್ತು. ಜೊತೆಗೆ ಆ ಗಿಡಕ್ಕೆ ಆ ದೈತ್ಯ ಗಾಳಿಯ ಎದುರಾಗಿ ನಿಲ್ಲುವ ಯಾವ ಸೊಕ್ಕೂ ಸೆಡವೂ ಇರಲಿಲ್ಲ. ಗಾಳಿಯ ರಭಸ ಮಳೆಗಿಂತಲೂ ಜೋರಾಯಿತು. ಮನೆಯ ಎದುರು ಯರ್ರಾಬಿರ್ರಿಯಾಗಿ ಹಾಕಿದ್ದ ಟಿ.ವಿ. ಕೇಬಲ್ ಗಳು ಆ ಗಾಳಿಯ ರಭಸಕ್ಕೆ ಹೆದರಿ ಕೆಳಕ್ಕಿಳಿಯತೊಡಗಿದವು. ಕತ್ತಲು ಕವಿಯತೊಡಗಿತು. ಹೆಚ್ಚೂ ಕಡಿಮೆ ಎರಡು ಘಂಟೆ ಧೋ... ಧೋ... ಎಂದು ಸುರಿದ ಆ ಮಳೆಗೆ ಕೇರಿಯಲ್ಲೆಲ್ಲಾ ನೀರೋ ನೀರು. ಮನೆಯ ಮುಂದಿರುವ ಗಟಾರು ಸಮುದ್ರಕ್ಕೆ ಅಬ್ಬರ ಬಂದಾಗ ಅಲೆಗಳು ಒತ್ತರಿಸುವಂತೆ ತುಂಬಿ ಹರಿಯುತ್ತಿತ್ತು. ಅಷ್ಟಾದರೂ ಮಳೆ ನಿಲ್ಲುವ ಲಕ್ಷಣಗಳೇ ತೋರಲಿಲ್ಲ. ರಸ್ತೆಯ ತುಂಬಾ ನೀರು. ಅದರಲ್ಲಿಯೇ ರಿಕ್ಷಾಗಳು, ಕಾರುಗಳು, ಬಸ್ ಗಳು ಓಡಾಡುತ್ತಿದ್ದವು.

ಮನೆಯ ಮುಂದೆ ಹಾದು ಹೋಗುವ ಒಬ್ಬಾತ ಸಿಟಿಯಲ್ಲಿ ಹತ್ತಾರು ಗಿಡಗಳು ಬಿದ್ದಿವೆ ಬಹುಷ: ಇವತ್ತು ವಿದ್ಯುತ್ ಬರುವುದು ಡೌಟು ಎಂದು ಯಾರದೋ ಮುಂದೆ ಹೇಳುವುದು ಪರಮೇಶಿಯ ಕಿವಿಗೆ ಬಿತ್ತು. ಹೆಂಡತಿಗೆ ಕ್ಯಾಂಡಲ್ ಮತ್ತು ಟಾರ್ಚ್ ಎಲ್ಲಾ ರೆಡಿಯಾಗಿಟ್ಟುಕೊಳ್ಳುವಂತೆ ಹೇಳಿದ. ಗಾಳಿ ಸೊಂಯ್ ಎಂದು ಜೋರಾಗಿ ಸೀಟಿ ಹೊಡೆಯುವದನ್ನು ಬಿಟ್ಟಿರಲಿಲ್ಲ. ಅಷ್ಟರಲ್ಲಿ ಒಂದೆರಡು ಕೇಬಲ್‌ಗಳು ರಸ್ತೆಗೆ ಬಿದ್ದವು. ಕೈಯಲ್ಲಿ ಬ್ಯಾಟರಿ ಹಿಡಿದುಕೊಂಡು ಹೋಗುವವರು ಜೋರಾಗಿ ಇಲ್ಲಿ ಯಾವುದೋ ಒಂದೆರಡು ಕೇಬಲ್‌ಗಳು ಬಿದ್ದಿವೆ. ಕರೆಂಟ್ ಬೇರೆ ಇಲ್ಲ ನೋಡಕೊಂಡು ಬರ್ರಿ ಅಂತ ಹೇಳತಾ ಮುಂದೆ ಹೋಗತಿದ್ದರು. ಅಷ್ಟರಲ್ಲಿ ಒಬ್ಬ ತಳ್ಳುವ ಗಾಡಿಯಲ್ಲಿ ಬೇಲ್ ಪುರಿ ಮಾರುವವನು ಚೀರಿದಂತೆ ಕೇಳಿಸಿತು. ಅವನಿಗೆ ಶಾಕ್! ಏನಾದರೂ ಹೊಡಿಯಿತೆ? ಸಾಧ್ಯವಿಲ್ಲ. ಕರಂಟೇ ಇಲ್ಲವಲ್ಲ ಎನ್ನುತ್ತ ಬ್ಯಾಟರಿ ಹಿಡಿದು ನೋಡಿದ.

ಆ ಗಾಡಿಯ ಗಾಲಿಗೆ ಕೇಬಲ್ ಸುತ್ತಿ ಪರದಾಡುತ್ತಿದ್ದ. ಆಗ ಪರಮೇಶಿ ನೀನು ಈ ಕಡೆ ಬರೋದು ಬಿಟ್ಟು ಆ ಕೇಬಲ್ ಕಡೆಗೆ ಯಾಕ ಹೋದಿ ಮಾರಾಯಾ. ಮೊದಲು ನಿನ್ನ ಗಾಡಿ ತುಸು ಹಿಂದೆ ತಗೊ.. ಆಮೇಲೆ ಈ ಬದಿಯಿಂದ ಹೋಗು ಎಂದು ಅವನ ಕಡೆ ಬ್ಯಾಟರಿ ಹಿಡಿದ. ಅವನು ಮೆಲ್ಲಗೆ ಪರಮೇಶಿ ಹೇಳಿದಂತೆ ಮಾಡಿ ಪಾರಾದ. ಪರಮೇಶಿ ಬ್ಯಾಟರಿ ಹಿಡಿದು ಮತ್ತೊಮ್ಮೆ ಆ ಕೇಬಲ್ ಕಡೆ ನೋಡಿದ. ಅವು ನೋಡಲಿಕ್ಕೆ ಟಿ.ವಿ. ಕೇಬಲ್ ಥರಾನೇ ಇವೆ. ವಿದ್ಯುತ್ ತಂತಿಗಳಿದ್ದರೂ ಇರಬಹುದು ಹೇಳಲಿಕ್ಕಾಗಲ್ಲ. ಆ ಕೇಬಲ್‌ಗಳೆರಡೂ ತನ್ನ ಮನೆಯ ಮುಂದೇ ಬಿದ್ದಿವೆ. ಹಾಗೆ ನೋಡಿದರೆ ಅವು ಎದುರಿನ ಮನೆಯವರಿಗೆ ಸಂಬಂಧಿಸಿದ್ದವು. ಆ ಮನೆಯ ಕಡೆ ಬ್ಯಾಟರಿ ಹಿಡಿದು ನೋಡಿದ. ಅವರು ಕಂಡೂ ಕಾಣದಂತೆ ಬಾಗಿಲು, ಕಿಡಕಿ ಹಾಕಿಕೊಂಡು ಬೆಚ್ಚಗೆ ಕುಳಿತಿದ್ದರು. ಇನ್ನೊಂದು ಕೇಬಲ್ ಅವರ ಪಕ್ಕದ ಮನೆಯವರದ್ದು. ಅವರಂತೂ ಬಿದ್ದಿರುವದನ್ನು ನೋಡಲಿಕ್ಕೂ ಹೊರಗೆ ಬರಲಿಲ್ಲ. ಆಗ ಇನ್ನೊಬ್ಬ ಅಲ್ಲಿಂದ ಹೋಗುವಾತ ’ಅದೇನು ಜನ ಅಂತೀನಿ, ಕಾಲಾಗ ಕೇಬಲ್ ಬಿದ್ದರೂ ಹಂಗೇ ಬಿಟ್ಟಾರ’ ಅನ್ಕೊಂತ ಅದನ್ನೇ ತುಳ್ಕೊಂತ ಮುಂದೆ ಹೋದ.

ಎಲ್ಲರೂ ಹಾಗೆ ಮಾತಾಡಿದವರೇ ಹೊರತು, ಯಾರೂ ಅದನ್ನು ಎತ್ತಿ ಬದಿಗೆ ಹಾಕುವ ಮನಸು ಮಾಡಿದವರಲ್ಲ. ಪರಮೇಶಿ ಬಹಳ ಹೊತ್ತು ಅಲ್ಲಿ ಹಾದು ಹೋಗುವವರನ್ನು ಗಮನಿಸಿದ. ಎಲ್ಲರೂ ಇಲ್ಲಿ ಕೇಬಲ್ ಬಿದ್ದಿದೆ ಹುಷಾರು..! ಅನ್ಕೊಂತ ಹೋದರೇ ಹೊರತು ಅದನ್ನು ಯಾರೊಬ್ಬರೂ ಬದಿಗೆ ಸರಿಸಲಿಲ್ಲ. ಒಂದು ದೀರ್ಘ ನಿಟ್ಟುಸಿರು ಬಿಟ್ಟು ನಿರಾಶೆಯಿಂದ ಹೆಂಡತಿಯ ಕಡೆಗೆ ನೋಡಿದ. ಆಗ ಪಲ್ಲವಿ ’ಇದೇ ನಿಮ್ಮ ಸಮಾಜ... ಹೇಗಿದೆ ನೋಡಿ... ಸಂಬಂಧಿಸಿದವರು ನೆಮ್ಮದಿಯಿಂದಿದ್ದಾರೆ. ಅಲ್ಲಿ ತಿರುಗಾಡುವವರಿಗೂ ಅದು ಸಂಬಂಧವಿಲ್ಲ. ನಾವು ಮಾತ್ರ ಪರದಾಡತಾ ಇದ್ದೀವಿ’ ಅಂದಳು. ಇರಲಿ ಬಿಡು ಏನು ಮಾಡೋದು.. ಯಾವಾಗಲೂ ಇಂಥಾ ವಿಷಯಗಳಲ್ಲಿ ಸೆನ್ಸಿಟಿವ್ ಇದ್ದವರೇ ಪರದಾಡೋದು ಅಂದಾಗ ಹೆಂಡತಿ ಪಲ್ಲವಿಗೂ ಅದು ಹೌದೆನಿಸಿತು. ಆಕೆಗೂ ಸಮಾಧಾನವಾಗಲಿಲ್ಲ. ರಾತ್ರಿಯಿಡೀ ಕರೆಂಟ್ ಇರೋದಿಲ್ಲ. ಪಕ್ಕದಲ್ಲೇ ಗಟಾರು, ಪಾಪ ಯಾರಾದರೂ ಕತ್ತಲಲ್ಲಿ ಕೇಬಲ್ ಕಾಲಿಗೆ ಸಿಲುಕಿ ಬಿದ್ದರೆ ತೊಂದರೆ. ವಿದ್ಯುತ್ ಇಲಾಖೆಗಾದರೂ ಪೋನ್ ಮಾಡಿ ಎಂದು ಗಂಡನಿಗೆ ಹೇಳಿದಳು. ಅವನು ಅನೇಕ ಬಾರಿ ಪೋನ್ ಮಾಡಿದರೂ ಆ ಬದಿಯಿಂದ ಯಾವುದೇ ಬಗೆಯ ರೆಸ್ಪಾನ್ಸ್ ಬರಲಿಲ್ಲ. ರಸ್ತೆಗೆ ಅಡ್ಡಲಾಗಿಯೇ ಅವೆರಡೂ ತಂತಿಗಳು ಬಿದ್ದಿರುವುದರಿಂದ ಪರಮೇಶಿ ಕಿಡಕಿಯಲ್ಲಿ ಕುಳಿತು ರಸ್ತೆಯ ಮೇಲೆ ಹೋಗುವವರಿಗೆ ಬರುವವರಿಗೆ ಕಾಣುವಂತೆ ಬ್ಯಾಟರಿ ಹಿಡದು ಓ ಇವರೇ, ಹುಷಾರ್ರಿ ಅಲ್ಲಿ ಕೇಬಲ್ ಬಿದ್ದಿವೆ, ತುಸು ಸೈಡ್ ಹಾಯ್ದು ಹೋಗಿ ಎನ್ನುತ್ತಲಲಿದ್ದ.

ಹೆಂಡತಿ ಪಲ್ಲವಿ, ’ಎಷ್ಟು ಹೊತ್ತು ಹೀಗೇ ಬ್ಯಾಟರಿ ಹಿಡ್ಕೊಂಡು ಹೇಳ್ತಾ ಕೂಡ್ತೀರಿ...’

’ಏನು ಮಾಡೋದು, ಯಾರಾದ್ರೂ ಬಿದ್ದು ಏನಾದ್ರೂ ಮಾಡಿಕೊಂಡರೆ ಒಣ ಲಿಗಾಡು.. ಅವೆರಡೂ ಕೇಬಲ್ ನಮ್ಮದಲ್ಲ.. ಖರೆ, ಆದರೆ ಬಿದ್ದದ್ದು ನಮ್ಮ ಮನಿ ಮುಂದೆ...’

’ಆಯ್ತು ಈಗೇನು ಮಾಡೂದು..?’

’ಸ್ವಲ್ಪ ಹೊತ್ತು ನೋಡೋಣ ಮಳೆ ನಿಲ್ಲಲಿ.. ಆಮೇಲೆ ಅದನ್ನ ಎತ್ತಿ ನಮ್ಮ ಗಿಡಕ್ಕ ಸುತ್ತದರ ಆಯ್ತು.’

’ಅದೇನಾದರೂ ಕರಂಟ್ ಕೇಬಲ್ ಆಗಿದ್ದರೆ...?’ ಅಂತ ಪಲ್ಲವಿ ಗಾಬರಿಯಿಂದ ಕೇಳಿದ್ದಕ್ಕೆ ಪರಮೇಶಿ ಮತ್ತೆ ಬ್ಯಾಟರಿ ಹಿಡಿದು ಇಲ್ಲ ಇಲ್ಲ ಅವೆರಡೂ ವಿದ್ಯುತ್‌ದಲ್ಲ. ಇದ್ದರೆ ಎರಡೂ ಟಿ.ವಿ. ಕೇಬಲ್ ಇರಬೇಕು, ಇಲ್ಲಾಂದ್ರ ಒಂದು ಟೆಲಿಫ಼ೋನ್‌ದಿರಬೇಕು ಇನ್ನೊಂದು ಟಿ.ವಿ. ಕೇಬಲ್ ಇರಬೇಕು ಎಂದ.

‘ಅದ್ಯಾಂಗ ಹೇಳ್ತೀರಿ..’

‘ವಿದ್ಯುತ್ ತಂತಿ ಹಂಗ ಇರಲ್ಲ’

‘ಆದರೂ ನನಗ ಹೆದರಿಕೆನೇ...’

‘ಮಳೆ ನಿಲ್ಲಲಿ ನಾನೇ ಹೋಗಿ ಹಾಕಿ ಬರ್ತೀನಿ’

‘ಕೈಯಿಂದ ಸರ್ಕಸ್ ಮಾಡೂದು ಬ್ಯಾಡ, ಒಂದು ಬಡಗಿ ತಗೊಂಡು ಹಾಕರಿ’

‘ಮೊದಲು ಮಳೆ ಗಾಳಿ ಕಡಿಮೆ ಆಗಲಿ, ಆಮ್ಯಾಗ ನೋಡೊಣ’

ಮಕ್ಕಳು ಕ್ಯಾಂಡಲ್ ಲೈಟಲ್ಲಿ ಹೋಮ್ ವರ್ಕ್ ಮಾಡತಿದ್ದರು. ಮಗಳು ರಜನಿ ತಂದೆಯ ಸ್ಕೂಲಲ್ಲೇ ಮೆಟ್ರಿಕ್ ಓದತಿದ್ದಳು. ಮಗ ಹರ್ಷ ಆರನೇ ತರಗತಿ, ಕಾನ್ವೆಂಟ್ ಸ್ಕೂಲಲ್ಲಿ ಓದುತ್ತಿದ್ದ. ಮಗಳು ಅಪ್ಪನಂತೆ ಅದಾಗಲೆ ಕವಿತೆಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಳು. ಹಿಂದಿನ ಬಾರಿ ತನ್ನ ಸ್ಕೂಲಲ್ಲಿ ಜರುಗಿದ ಮಕ್ಕಳ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಆಕೆ ವಹಿಸಿ ಸೈ ಅನಿಸಿಕೊಂಡಿದ್ದಳು. ಮಳೆ-ಗಾಳಿ ಸ್ವಲ್ಪ ಕಡಿಮೆಯಾಗತಾ ಬಂತು. ಕಿಡಕಿಯಲ್ಲಿ ಕುಳಿತು ತುಂಬಾ ಹೊತ್ತಿನಿಂದ ಪರಮೇಶಿ ಹುಷಾರಿಂದ ಹೋಗರಿ ಅಂತ ಹೇಳುತ್ತಲಿದ್ದ. ವಾಹನಗಳು ತಮ್ಮ ಲೈಟ್ ಬೆಳಕಲ್ಲಿ ಮೆಲ್ಲಗೆ ಪಕ್ಕಕ್ಕೆ ಸರಿದು ಹೋಗುತ್ತಿದ್ದವು. ಒಬ್ಬ ಸೈಕಲ್ ಮೇಲೆ ಬೆಲ್ ಬಾರಿಸುತ್ತಾ ಬರುವುದು ಕೇಳಿಸಿ, ಪರಮೇಶಿ ಬಾಗಿಲು ತೆಗೆದು ಹೊರಬಂದು ಏ ಸೈಕಲ್, ಅಲ್ಲಿ ಅಡ್ಡಲಾಗಿ ಕೇಬಲ್ ಬಿದ್ದಿವೆ, ತುಸು ನೋಡಕೊಂಡು ಬಾ ಎಂದು ಬ್ಯಾಟರಿ ಹಿಡಿದ. ಹೆಂಡತಿ ರಜನಿ ಇದು ಮಳೆರಾಯ ನಿಮಗೆ ನೀಡಿರುವ ಹೆಚ್ಚುವರಿ ಪ್ರಮೋಶನ್ ಎಂದು ನಗತೊಡಗಿದಳು. ಮಳೆ ಸಂಪೂರ್ಣವಾಗಿ ನಿಂತಿರಲಿಲ್ಲ. ಗಾಳಿಯ ಅಬ್ಬರ ತುಸು ಕಡಿಮೆಯಾಗಿತ್ತು ಪರಮೇಶಿ ಹೆಂಡತಿಯ ಕೈಯಲ್ಲಿ ಬ್ಯಾಟರಿ ಕೊಟ್ಟು ನೀನು ಇಲ್ಲೇ ನಿಂತು ಹಿಡದಿರು ನಾನು ಆ ಎರಡೂ ಕೇಬಲ್ ಗಳನ್ನು ಎತ್ತಿ ನಮ್ಮ ಗಿಡಕ್ಕೆ ಸುತ್ತಿ ಬರ್ತೇನೆ ಅಂದ. ಪಲ್ಲವಿ ’ಬಡಿಗೆಯಿಂದ ಎತ್ತಿ ಗಿಡದ ಮೇಲೆ ಹಾಕರಿ’

’ಡೋಂಟ್ ವರಿ ಅವೆರಡೂ ಟಿ.ವಿ.ಕೇಬಲ್ ಇವೆ ಏನೂ ಆಗಲ್ಲ’

’ಹುಷಾರಿ, ಗಡಬಿಡಿ ಮಾಡಬ್ಯಾಡ್ರಿ ಕಾಲಾಗ ಸ್ಲೀಪರ್ ಚಪ್ಪಲಿ ಹಾಕೊಳ್ಳರಿ’

’ಮಾರಾಯ್ತಿ ಅದೆಷ್ಟು ಹೆದರತಿ..? ಅವು ಟಿ.ವಿ.ಕೇಬಲ್ ಅಂತ ಹೇಳಲಿಲ್ಲಾ..?’

’ಆದರೂ..’

’ನೀ ಮೊದಲು ಕರೆಕ್ಟಾಗಿ ಬ್ಯಾಟರಿ ಹಿಡಿ’ ಎಂದು ತಲೆಯ ಮೇಲೊಂದು ಟವಲ್ ಹಾಕಿಕೊಂಡು ಪರಮೇಶಿ ಹೊರಗೆ ನಡೆದ. ಮಳೆ ಇನ್ನೂ ನಿಂತಿರಲಿಲ್ಲ. ಅಳಕುತ್ತಲೇ ಮೆಲ್ಲಗೆ ರಸ್ತೆಗೆ ಬಂದು ಹೆದರುತ್ತ ಒಂದು ಕೇಬಲ್ ಕೈಗೆತ್ತಿಕೊಂಡು ಮನೆಯ ಎದುರಿನ ಒಣಗಿದ ಗಿಡಕ್ಕೆ ಸುತ್ತಿದ. ಆ ಕಡೆ ಈ ಕಡೆ ನೋಡಿ ಎರಡನೆಯದನ್ನು ಹೆದರುತ್ತಲೇ ಎತ್ತುವದರೊಳಗೆ, ಕಟ್...ಕಟ್... ಕಡಲ್... ಅಂತ ಭಾರೀ ಸಿಡಿಲೊಂದು ಅಪ್ಪಳಿಸಿತು. ಅದನ್ನಲ್ಲೇ ಬಿಟ್ಟು ಪರಮೇಶಿ ಹೌಹಾರಿ ಒಳಗೆ ಓಡಿಬಂದ. ಹೆಂಡತಿ ನಗುತ್ತಾ ಹಿಡೀರಿ ಇದನ್ನ ನಾ ಹಾಕಿ ಬರ್ತೆನಿ ಅಂತ ಬ್ಯಾಟರಿ ಅವನ ಕೈಯಾಗ ಕೊಟ್ಟು ಹೊರಗ ನಡದಳು. ಪರಮೇಶಿ ಕಿಡಕಿಯಲ್ಲಿ ಹಗೂರಕ ಎನ್ನುತ್ತಿದ್ದ. ಆಕೆ ಮೆಲ್ಲಗೆ ಬಲಗೈಯಿಂದ ಕೇಬಲ್ ಹಿಡಿದು ಎತ್ತಿದಳು. ಇನ್ನೇನು ಗಿಡಕ್ಕೆ ಹಾಕಬೇಕು ಎನ್ನುವಷ್ಟರಲ್ಲಿ ಲೈಟ್ ಬಂತು. ಆಕೆ ಜೋರಾಗಿ ಚೀರಿ ದೊಪ್ಪನೇ ಕೆಳಗೆ ಬಿದ್ದಳು.

ಪರಮೇಶಿ ಮಕ್ಕಳು ಓಡಿ ಹೋಗುವದರೊಳಗೆ ಆಕೆಯ ಶರೀರ ಸೆಟೆದು ಕರ್ರಗಾಗಿತ್ತು. ಮತ್ತೆ ಲೈಟ್ ಹೋಯಿತು. ಮಕ್ಕಳಿಬ್ಬರಿಗೂ ಕಣ್ಣು ಮುಚ್ಚಿ ಕಣ್ಣು ತೆಗೆಯುವದರೊಳಗೆ ಏನು ನಡೀತು ಎನ್ನುವುದೇ ತಿಳಿಯಲಿಲ್ಲ. ಅವರಿಬ್ಬರೂ ತಾಯಿಯ ಬಳಿ ಕುಳಿತು, ಆಕೆಯ ಕೈ ಹಿಡಿದು ಅಲ್ಲಾಡಿಸಿ, ಜೋರಾಗಿ ಒಂದೇ ಸವನೇ ಬಿಕ್ಕಿಬಿಕ್ಕಿಸಿ ಅಳುತ್ತಿದ್ದರು. ಓಣಿಯ ಜನ ಓಡಿ ಬಂದರು. ಪರಮೇಶಿಯೂ ಮಕ್ಕಳನ್ನು ತೆಕ್ಕೆಗೆ ಬಡಿದುಕೊಂಡು ಗೊಳಾಡುತ್ತಿದ್ದ. ತಾನೇ ಅವಳಿಗೆ ಟಿ.ವಿ. ಕೇಬಲ್ ಅಂತ ಹೇಳಿದ್ದು.. ಅಂತ ಹಣೆ ಬಡಕೊಂಡು ಅಳತಿದ್ದ. ಸರ್ ಸಮಾಧಾನ ಮಾಡ್ಕೊರಿ..

ನೆರೆದ ಮಂದಿಯ ನಡುವೆ ಸಣ್ಣಗೆ ಮಾತು ಮೂಡಲು ಸುರು ಆಗಿದ್ದವು. ಅದಕೇ ಹೇಳೋದು, ಊರಿಗಿ ಉಪಕಾರ ಮಾಡಬಾರದು, ಹೆಣಕ್ಕ ಸಿಂಗಾರ ಮಾಡಬಾರದು ಅಂತ.. ಒಣ ಉಸಾಬರಿ ಯಾಕ ಬೇಕಿತ್ತು..? ಯಾರ ನಸೀಬದೊಳಗ ಏನ ಬರದೈತಿ ಯಾರಿಗೊತ್ತು ಒಣಗಿದ ಗಿಡ ಮನಿ ಮುಂದ ಇರಬಾರದಂತ ಹೇಳದರೂ ಕೇಳಲಿಲ್ಲ... ಪಾಪ ಅವಳ ಟೈಮೇ ಸುಮಾರಿತ್ತು.. ಆಕಿ ಎತ್ತೂಮುಂದೇ ಕರೆಂಟ್ ಬರಬೇಕಂದ್ರ.. ಹ್ಯಾಂಗಿರಬೇಕು ನೋಡ್ರಿ ಪಾಪ..! ಆಕಿ ಟಿ.ವಿ. ಕೇಬಲ್ ಅಂತ ತಿಳಕೊಂಡಾಳ ಅವಳ ಋಣ ಅಟ್ಟೇ ಇತ್ತು. ಯಾರಿಗಂದು ಏನು ಮಾಡೂದೈತಿ ಅಕ್ಕಿನ್ನ ನುಂಗಾಕೇ ಕರೆಂಟ್ ಬಂದಂಗಾಯ್ತು ಹಿಂಗ ಮಳೆ ನಿಂತರೂ ಹನಿ ನಿಲ್ಲಲಿಲ್ಲ ಅನ್ನೂವಂಗ ಮಾತಿಗೊಂದು ಮಾತು. ಹತ್ತು ಬಾಯಿ ನೂರು ಮಾತು.. ಕೊನೆಗೂ ಉಳಿದದ್ದು ಬರೀ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT