ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂತ್ರಿಕ ವಾಸ್ತವ

ಕವಿತೆ
Last Updated 15 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಮಾರ್ಕ್ವೆಜ್ ಎಂದೇ ಓದುತ್ತ ಬಂದು ಆತ ಸತ್ತಾಗ
ಮಾರಕೇಸ್ ಎಂದು ಕೆಲವರು ಬರೆದು ಅದೇ ಸರಿಯೆಂದಾಗ
ನಮ್ಮ ಮಾರ್ಕ್ವೆಜ್ ಸತ್ತಿರಲಿಕ್ಕಿಲ್ಲ ಎಂಬ ಒಂದು ಕ್ಷಣದ ಭಾವ

ಬದುಕಿದ್ದ ಮಾರ್ಕ್ವೆಜ್ ಮಾರ್ಕ್ವೆಜ್ ಆಗಿಯೇ ಸಾಯಬೇಕಿತ್ತು
ಆದರೆ ಇದ್ದದ್ದು ಮಾರಕೇಸ್ ಅವನು ಹಾಗೆಯೇ ಸತ್ತದ್ದು
ಅವರಿಗೆ ಹಾಗೆ ಇವರಿಗೆ ಹೀಗೆ
ಮುಗಿಯದ ವಾದ ಚರಿತೆಯ ಪೂರ

ಭೂಮಿ ಚಪ್ಪಟೆಯೆಂದು ನಂಬಿ ಸತ್ತ ಟಾಲೆಮಿಗೆ
ಅದು ಚಪ್ಪಟೆಯಾಗೇ ಉಳಿಯಿತಲ್ಲ
ಪ್ಲೂಟೋ ಗ್ರಹವೆಂದೇ ಓದಿದವರು ಪಾಸಾದರಲ್ಲ
ಹಂಸಗೀತೆಯ ವೆಂಕಟಸುಬ್ಬಯ್ಯ ಇತಿಹಾಸವಾದನಲ್ಲ

ನಂಬಿಕೆಯೂ ಎಲ್ಲೋ ಜೀವಂತವಿರುತ್ತದೆ
ಸುಳಿಪ ಕನಸು ಕಲಿಪ ಕಲ್ಪನೆ ನೆರಳ ನಿಜದಂತೆ
ನನ್ನ ವಿಶ್ವವ ನಾನು ಕಟೆದಂತೆ
ನಮ್ಮ ರೂಪವ ಯಾರೋ ತಿದ್ದಿಕೊಂಡಂತೆ
ಅದಕ್ಕೆ ಬೆಳದಿಂಗಳ ಬಾಲೆ ನೋಡಲು ಕೊನೆಗೂ
ರೇವಂತನಿಗೆ ಬಿಡಲಿಲ್ಲ ಯಂಡಮೂರಿ ಎಂಬ ಹಠಮಾರಿ

ಹೊರಗೆ ಹೇಗೋ ಹಾಗೆ ಒಳಗೆಂಬುದಲ್ಲ
ಒಳಗೂ ಇನ್ನೊಂದು ಒಳಗೆ ಮತ್ತೂ ಮಗದೊಂದು ಒಳಗೆ
ಯಾರು ಯಾರಿಗೆ ಹೇಗೋ
ಭಾವಿಸಿಕೊಳ್ಳುವ ಹೇಗೋ
ಹೇಳಲಾಗದ ಹೇಗೋ

ಇರವ ಇಕ್ಕಟ್ಟಿನಲ್ಲಿ
ಸೂಪ ಎಂಬ ಊರೇ ಮುಳುಗಿದರೂ
ಕೆಲವರಿಗೆ ಇನ್ನೂ ಸೂಪ ತಾಲೂಕು
ಸರಸ್ವತೀಪುರ ಎಂದರೂ ಅದು ಕನ್ನೇಗೌಡ ಕೊಪ್ಪಲು
ಅಂಕಲ್ ಎಂದು ಕರೆದರೂ ನಾನು ಇನ್ನೂ ಯುವಕ
ಬೇಂದ್ರೆಗೆ ತಾನೆಂದರೆ ಒಂದು ಸಂಖ್ಯೆ

ಕೊನೆಗೂ ಸತ್ತದ್ದು ಮಾರ್ಕ್ವೇಜೋ ಮಾರಕೇಸೋ
ಎಂಬುದೇ ಮಾಂತ್ರಿಕ ವಾಸ್ತವ
ಅವನೂ ಅವನಂಥವರೂ ಕಟೆದ ಪಾತ್ರಗಳಂತೆ
ಮನುಷ್ಯರು ಹುಳುವಾಗಿ ಗೋಡೆ ಕನ್ನಡಿ ತೆಂಗಿನಮರವಾಗಿ
ಅವೆಲ್ಲವೂ ಏನೋ ಹೇಳುವ ಚಿತ್ರವಾಗಿ ಆತ್ಮವಾಗಿ
ಆಮೇಲೆ ಇಲ್ಲವಾಗಿ
ಇಲ್ಲವೆಂಬ ಇರುವಿಕೆಯ ಸೂಚಿಯಾಗಿ
ಯಾರಾಗಿ ಅಳಿವೆವೋ ಕೊನೆಗೆ ಏನಾಗಿ ಉಳಿವೆವೋ

ಯಾಕೋ ಯಾರೂ ತಲೆಕೆಡಿಸಿಕೊಂಡಂತಿಲ್ಲ
ಸುಮ್ಮನೆ ನೋಡುತ್ತಿದ್ದಾರೆ ದಿನವೂ ಸಿನಿಮಾದಂತೆ
ಸ್ವಲ್ಪ ಕಾಲ ತೆರೆಯ ಒಳಗೆ
ಅಷ್ಟು ಕಾಲ ಹೊರಗೆ
ನಮ್ಮ ಹಾಗೆ ನಮ್ಮ ಜೊತೆಗೆ

ಯಾರು ನಗುತ್ತಿರುವುದು
ಮಾರ್ಕ್ವೇಜೋ ಮಾರಕೇಸೋ ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT