ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಆಗಬಹುದಾದ ಕೆಲಸ

ನನ್ನ ಇಷ್ಟದ ಪುಸ್ತಕ 2014
Last Updated 10 ಜನವರಿ 2015, 19:30 IST
ಅಕ್ಷರ ಗಾತ್ರ

ಮೊದಲಿನಿಂದಲೂ ಜನಪರತೆ ಮತ್ತು ಪ್ರಯೋಗಶೀಲತೆಗಳನ್ನು ಕಾಪಾಡಿಕೊಂಡು ಬಂದಿರುವ ‘ಪ್ರಜಾವಾಣಿa’ ಪತ್ರಿಕೆಯು, ‘ವಚನ ಸಂವಾದ’ ಮತ್ತು ‘ಜಾತಿ ಸಂವಾದ’ಗಳನ್ನು ಮಾಲಿಕೆಯಾಗಿ ಪ್ರಕಟಿಸಿತು. ಈಗ ಅವುಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದೆ. ಇವುಗಳ ಇನ್ನಷ್ಟು ದೊಡ್ಡ ಆವೃತ್ತಿಯು ಅಂತರ್ಜಾಲದಲ್ಲಿಯೂ ದೊರಕುತ್ತದೆ.

‘ಜಾತಿಸಂವಾದ’ವು ಇಪ್ಪತ್ತಾರು ವಾರಗಳಲ್ಲಿ ಹರಡಿಕೊಂಡಿದೆ. ಇದು ಓದುಗರು, ವಿದ್ವಾಂಸರು, ಆಹ್ವಾನಿತರು, ಖುದ್ದು ಖುಷಿಯಿಂದ ಬರೆದವರು, ಬರೆಯದೆ ಮೌನವಹಿಸಿ ಸುಮ್ಮನೆ ಓದಿದವರು– ಎಲ್ಲರೂ ಸೇರಿ ಮಾಡಿರುವ ಕೂಡು ಕೆಲಸ. ಪ್ರಸಿದ್ಧ ಚಿಂತಕರಾದ ಗೋಪಾಲ ಗುರು ಮತ್ತು ಸುಂದರ ಸಾರುಕ್ಕೈ ಅವರು ಈ ಕೆಲಸದ ಮುಂದಾಳುತನ ವಹಿಸಿದ್ದಾರೆ. ಆದರೆ, ಪ್ರತಿಕ್ರಿಯೆಗಳ ಸರಣಿಯನ್ನು ಅವರು ‘ನಿರ್ದೇಶಿಸಿರುವಂತೆ’ ತೋರುವುದಿಲ್ಲ. 

ಈ ಪುಸ್ತಕವು ಹೊಸ ಆಲೋಚನೆ, ಅನುಭವ ಕಥನ, ‘ಪೊಲಿಟಿಕಲಿ ಕರೆಕ್ಟ್’ ಆದ ಮಾತುಗಳು, ಗಂಭೀರವಾದ ಅಧ್ಯಯನಗಳು ಇವೆಲ್ಲದರ ಒಟ್ಟು ಸಂಕಲನ. ಆಭಿಪ್ರಾಯಗಳು ಸರಿಯಿರಲಿ, ತಪ್ಪಿರಲಿ ಎಲ್ಲ ಬರಹಗಳ ಹಿಂದೆಯೂ, ಪ್ರಾಮಾಣಿಕತೆ ಇದೆ. ಪರಸ್ಪರ ವಿರುದ್ಧವಾದ ಹಲವು ಛಾಯೆಗಳ ಅಭಿಪ್ರಾಯಗಳನ್ನು ನಿಷ್ಪಕ್ಷಪಾತವಾಗಿ ಆರಿಸಿ ಪ್ರಕಟಿಸಲಾಗಿದೆ. ಲೋಹಿಯಾ, ಅಂಬೇಡ್ಕರ್, ಗಾಂಧಿ, ಎಂ.ಎನ್. ಶ್ರೀನಿವಾಸ್ ಮುಂತಾದವರ ಹಳೆಯದಾದರೂ ಎಂದಿಗೂ ಪ್ರಸ್ತುತವಾದ ಬರಹಗಳು ಚರ್ಚೆಗೆ ಸೂಕ್ತವಾದ ಹಿನ್ನೆಲೆ ನೀಡುತ್ತವೆ.

ಚರ್ಚೆಗಳನ್ನು ಇಂದಿಗೆ ಮುಖ್ಯವಾಗುವ ಹಾಗೆ ಅಪ್‌ಡೇಟ್ ಮಾಡುವ ಕೆಲಸವನ್ನು ಗೋಪಾಲ ಗುರು ಮತ್ತು ಸಂದರ ಸಾರುಕ್ಕೈ ಅವರು ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ, ಶಿವಸುಂದರ್ ಮತ್ತು ಎಚ್.ಎ. ಅನಿಲ್ ಕುಮಾರ್‌ ಅವರ ಲೇಖನಗಳು ಅಪರೂಪದ ಒಳನೋಟಗಳನ್ನು ನೀಡುತ್ತದೆ. ಸಾಹಿತ್ಯದ ಹಿನ್ನೆಲೆಯಿಂದ ಬಂದ/ಬರದ ದಲಿತ-ಬಂಡಾಯ ಚಳವಳಿಯ ಮುಖಂಡರ ಗೈರುಹಾಜರಿಯು ಆಶ್ಚರ್ಯ ಹುಟ್ಟಿಸುತ್ತದೆ. ಹಾಗೆಯೇ ಖಚಿತವಾಗಿ ಎಡಪಂಥೀಯರೆಂದು ಗುರುತಿಸಿಕೊಂಡಿರುವವರು ಕೂಡ ಇಲ್ಲಿ ಬರೆದಿರುವಂತೆ ತೋರುವುದಿಲ್ಲ. ಅವರು ಬರೆಯಲಿಲ್ಲವೋ ಇವರು ಕೇಳಲಿಲ್ಲವೋ ಹೇಗೆ ಹೇಳುವುದು? ಇಷ್ಟಕ್ಕೂ ಕೇಳಿಯೇ ಬರೆಯಬೇಕೆಂಬುದೂ ಕಡ್ಡಾಯವಲ್ಲ.

ಹಾಗೆ ನೋಡಿದರೆ, ಈ ವಿಷಯದಲ್ಲಿ ಚರ್ಚೆಯ ಅಗತ್ಯವೇನಿದೆ, ಪರ-ವಿರೋಧ ಯಾಕೆ ಇರಬೇಕು ಎನ್ನಿಸುತ್ತದೆ. ಅದು ಹಾಗೆ ಅಲ್ಲ. ಜಾತಿಸಮಸ್ಯೆಯು ತಪ್ಪು-ಸರಿಗಳನ್ನು ಮೀರಿದ ಸಂಕೀರ್ಣ ಆಯಾಮಗಳನ್ನು ಹೊಂದಿದೆ. ಅವುಗಳನ್ನು ಇಲ್ಲಿ ಅನಾವರಣ ಮಾಡಲಾಗಿದೆ. ‘ಬಾಯಿಮಾತಿನ ಜಾತ್ಯತೀತತೆ’ ಮತ್ತು ‘ಸೂಕ್ಷ್ಮವಾದ/ಸೂಕ್ಷ್ಮವಾಗುತ್ತಿರುವ ಜಾತೀಯತೆ’ಗಳು ತುಂಬಿರುವ ನಮ್ಮ ಸಮಾಜದ ಸ್ಪಷ್ಟ ನೋವುಗಳು, ಗುಪ್ತ ಗಾಯಗಳು, ಕೋಪ, ವ್ಯಂಗ್ಯ, ಅಹಂಕಾರ, ಅಜ್ಞಾನ ಎಲ್ಲವೂ ಇಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಕಾಣಿಸಿಕೊಂಡಿವೆ. ತಮ್ಮ ‘ಸಾರ್ವಜನಿಕ ಇಮೇಜ್’ ಅನ್ನು ಕಾಪಾಡಿಕೊಳ್ಳುವ ದರ್ದು ಇಲ್ಲದವರಂತೂ ನೇರವಾಗಿ ಕೆಲವೊಮ್ಮೆ ಅತಿ ಆಕ್ರಮಣಶೀಲವಾಗಿ ಬರೆದಿದ್ದಾರೆ.

ಜಾತಿಗೆ ಸಂಬಂಧಿಸಿದ ಮುಖ್ಯವಾದ ಸಂಗತಿಗಳನ್ನು ಗುರುತಿಸಿ, ಅವುಗಳ ಬಗ್ಗೆ ಬಿಡಿಬಿಡಿಯಾಗಿ ಚರ್ಚಿಸಿರುವುದರಿಂದ, ಪುನರುಕ್ತಿಯು ಕಡಿಮೆಯಾಗಿದೆ. ಮೀಸಲಾತಿ, ನಗರೀಕರಣ ಮತ್ತು ಜಾತಿ, ಸಂಗೀತದಲ್ಲಿ ಅಡಗಿರುವ ಜಾತಿಯ ವಾಸನೆ, ಜಾತಿಯನ್ನು ಮೀರಿಯೂ ಮೀರದ ಸಿನಿಮಾ, ಹೆಣ್ಣು ಮತ್ತು ಜಾತಿ, ಕನ್ನಡದಲ್ಲಿ ಮಾಂಸಾಹಾರ ಮುಂತಾದ ಪರಿಚಿತ ಅಪರಿಚಿತ ವಿಷಯಗಳು ತಮ್ಮ ಒಟ್ಟಂದದಲ್ಲಿ ಮತ್ತು ಅನುಭವಗಳ ಮೂಲಕವೇ ಬಯಲಿಗೆ ಬರುವ ಸತ್ಯಗಳಲ್ಲಿ ನಿರೂಪಿತವಾಗಿವೆ. ಇದು ಬಹಳ ಒಳ್ಳೆಯದು.

ಜಾತಿಯ ನಿರ್ಮೂಲನ ಮತ್ತು ಸ್ಥಿರೀಕರಣದಲ್ಲಿ ಕನ್ನಡ ಸಾಹಿತ್ಯವು ವಹಿಸಿರುವ ಪಾತ್ರದ ಬಗ್ಗೆ ಚರ್ಚೆಯು ಕೂಡ ಇಲ್ಲಿ ಇರಬಹುದಿತ್ತೆಂದು ನನಗೆ ತೋರುತ್ತದೆ. ಕುವೆಂಪು, ಕಾರಂತ, ಲಂಕೇಶ್ ಅಂಥವರು ಮೂಡಿಸಿದ ಎಚ್ಚರಗಳು ಸಾಮಾನ್ಯವಲ್ಲ. ಆದರೆ, ಈ ಬರಹಗಳ ಸರಣಿಯಲ್ಲಿ ಸಾಹಿತಿಗಳ ವೈಚಾರಿಕ ಚಿಂತನೆಗಳಿಗೆ ಅತಿಯಾದ ಮಹತ್ವ ಕೊಡದೆ ಸಮಾಜಶಾಸ್ತ್ರಜ್ಞರು, ಇತಿಹಾಸಕಾರರು, ರಾಜಕೀಯ ಚಿಂತಕರು ಮುಂತಾದ ಹಲವು ನೆಲೆಗಳಿಂದ ಬಂದ ವಿದ್ವಾಂಸರಿಗೆ ಅವಕಾಶ ಕೊಡಲಾಗಿದೆ. ಇದು ಬಹಳ ಸರಿ. ಸಾಹಿತಿಗಳು ಸರ್ವಜ್ಞರಲ್ಲ. ಪ್ರತಿಯೊಂದು ಅಧ್ಯಾಯಕ್ಕೂ ಬಂದಿರುವ ಪ್ರತಿಕ್ರಿಯೆಗಳು ಅದಕ್ಕೆ ಮಾತ್ರ ಸೀಮಿತವಾಗಿಲ್ಲ. ಅವುಗಳಲ್ಲಿ ಸಹಜವಾಗಿಯೇ ದಿಟವಾದ ಭಾವನೆ–ಭಾವುಕತೆಗಳ ಕೈಮೇಲಾಗಿರುತ್ತದೆ.

ಈ ಬರಹಗಳನ್ನು ಓದಿದಾಗ ಸ್ಪಷ್ಟವಾಗುವ ಒಂದು ಸಂಗತಿಯೆಂದರೆ, ವ್ಯಕ್ತಿಯಾಗಿ ಜಾತಿಯನ್ನು ಮೀರಬಲ್ಲ ಮನುಷ್ಯ ಜೀವಿಗಳು ಕೂಡ ಸಾಮೂಹಿಕವಾದ ವರ್ತನೆಯಲ್ಲಿ ಅದಕ್ಕೆ ಶರಣಾಗುತ್ತಾರೆ ಎಂಬುದು. ಕೊನೆಗೂ ಅ-ಸಮಾನ ಇರುವಿಕೆ ಅನಿವಾರ್ಯವಾದಾಗ ಸಮಾನ ಟ್ರೀಟ್‌ಮೆಂಟುಗಳು ಬರುವುದು ಬಹಳ ಕಷ್ಟ. ಜಾತಿಗೂ ಆರ್ಥಿಕ ಸ್ಥಿತಿ-ಗತಿಗಳಿಗೂ ಇರುವ ಸಂಬಂಧವು ಮತ್ತು ಒಂದರಿಂದ ಇನ್ನೊಂದು ತೀವ್ರವಾಗುವುದೇ ಎಂಬ ಸಂಗತಿಗೆ ಉತ್ತರ ಇಲ್ಲಿಯೂ ಸ್ಪಷ್ಟವಾಗುವುದಿಲ್ಲ.

ಶಿಕ್ಷಣವು ಜಾತೀಯತೆಯಿಂದ ‘ಬಿಡುಗಡೆ’ ಕೊಡುತ್ತದೆ ಎಂಬ ತಿಳಿವಳಿಕೆಯು ಹುಸಿಯಾಗುತ್ತಿದೆ. ಅದು ನಮಗೆ ಕೊಡಲಾಗುತ್ತಿರುವ ಶಿಕ್ಷಣದ ಸ್ವರೂಪಕ್ಕೆ ಹಿಡಿದ ಕನ್ನಡಿ. ನಿಜವಾದ ದುರಂತವೆಂದರೆ ಶೋಷಣೆ ಮಾಡುತ್ತಿರುವವರು ಮತ್ತು ಅದಕ್ಕೆ ಬಲಿಯಾದವರು ಇಬ್ಬರಿಗೂ ದೈವ/ಧರ್ಮ/ನಂಬಿಕೆಗಳು ಹಾಕಿರುವ ಸಂಕೋಲೆಯನ್ನು ಬಿಡಿಸಿಕೊಳ್ಳುವುದು ಕಷ್ಟವಾಗಿದೆಯೆಂದು ತೋರುತ್ತದೆ. ನಾಸ್ತಿಕತೆ ಮತ್ತು ಆಸ್ತಿಕತೆಗಳ ವಾಸ್ತವಕ್ಕೂ ಧರ್ಮ/ಜಾತಿಗಳಿಗೂ ಹುಟ್ಟಿಕೊಳ್ಳುವ ನಂಟು ಬಹು ದೊಡ್ಡ ಸಮಸ್ಯೆ.

‘ಪ್ರಜಾವಾಣಿ’ಯು ಇಂಥ ಪ್ರಯತ್ನಗಳನ್ನು ಮುಂದುವರಿಸುವುದು ಖಂಡಿತ ಅಗತ್ಯವಿದೆ. ಇದರ ಸಂಗಾತಿಯಾಗಿ ವಚನ ಸಾಹಿತ್ಯವನ್ನು ಕುರಿತ ಸಂವಾದವೂ ಪ್ರಕಟವಾಗಿದೆ. ಸಂವಾದಗಳನ್ನು ರೂಪಿಸುವವರಲ್ಲಿ ಸಮಾನಮನಸ್ಕರ ಹಾಗೆಯೇ ಭಿನ್ನಮತೀಯರೂ ಇದ್ದರೆ ಚೆನ್ನು. ಅದೇನೇ ಇರಲಿ, ಇದೊಂದು ಮಾದರಿಯಾಗಬಹುದಾದ ಕೆಲಸ.
 

ಜಾತಿ ಸಂವಾದ
ಪು: 282; ಬೆ: ರೂ. 200
ಪ್ರ: ‘ಪ್ರಜಾವಾಣಿ’ ಪ್ರಕಾಶನ
ನಂ. 75, ಮಹಾತ್ಮ ಗಾಂಧಿ ರಸ್ತೆ,
ಬೆಂಗಳೂರು– 560 001
ವಿತರಕರು: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು–560001

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT