ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿಯುವುದು...

Last Updated 31 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
‘ಏಯ್’
‘ಏನ್?’
 
‘ನಾವ್ ಹಕ್ಕಿಯಾಗಿದ್ರೆಷ್ಟ್ ಚೆನಾಗಿರ್ತಿತ್ತು ಅನ್ಸಲ್ವಾ?’
‘ಯಾಕೆ ನಾವೂ ಆಕಾಶದಲಿ ಹಾರಬೋದೂಂತನಾ?’ 
‘ಅಲ್ವಾ? ಹಾರುತ್ತಾ... ಹಾರುತ್ತಾ... ಹಾರುತ್ತಾ’
 
‘ಕೊನೆಗಾದ್ರೂ ಎಲ್ಲಾದ್ರೂ ಇಳೀಬೇಕಲ್ವಾ?’
‘ಯಾರೂ ಕಂಡಿರ್ದ, ಕೇಳಿರ್ದ, ನೋಡಿರ್ದ ನಿಗೂಢ ಜಾಗದಲ್ಲಿ, ನಾನೂ ನೀನೂ ಇಬ್ರೇ’.
 
‘ಇಳಿದ್ಮೇಲೇನ್ ಮಾಡೋದ್? ಊಟಕ್ಕೇ?’
‘ಊಟಯಿಲ್ದೇ ನಿಂಗ್ ಬದ್ಕೋಕಾಗೋದಿಲ್ವೇನ್?’
‘ನೀ ಬದ್ಕುತೀಯೇನ್?’
‘ಏನೋ ಒಂದಪಾ... ಅಲ್ಲೇನಿರುತ್ತೋ ಅದನ್ನ್ ತಿನ್ನೋದ್! ಹಣ್ಣು ಹಂಪಲು... ಜೊತ್ಗೆ ನೀ ಇರಬೇಕಾದ್ರೆ ಅವೆಲ್ಲಾ ಏನ್ ಮಹಾ?’
‘ಒಳ್ಳೇ ಕಾಡ್ ಮನುಷ್ಯರಂಗೆ! ಬ್ಯಾಕ್ ಟು ಸ್ಟೋನ್ ಏಜ್!’
 
‘ಹಣ್ಣ್ ತಿನ್ನೋರೆಲ್ಲಾ ಸ್ಟೋನ್ ಏಜವ್ರಾ?’
‘ಹಾಗೆಲ್ಲೆಂದೆ? ಬದುಕೋಕ್ಕೇನ್ ದುಡ್ಡ್ ಬೇಡ್ವಾ?’
‘ಅಯ್ಯೋ, ನಿಮ್ಮನೇಲಿರೋದ್ ನೀ ಎತ್ತಾಕ್ಕೊಂಬಾ. ನಮ್ಮನೇಲಿರೋದ್ ನಾನು!’
 
‘ವಾರಕ್ಕೆ ಇಪ್ಪತ್ತನಾಲ್ಕ್ ಸಾವ್ರವಷ್ಟೇ. ಹಾರಕ್ಕೇನ್ ವಿಂಗ್ಸ್ ಇದ್ಯಾ?’ 
‘ಒಂದ್ ಏರೋಪ್ಲೇನ್ ಹತ್ತ್‌ಬಿಡೋಣ. ಸುಯ್ಯ...ಂತಾ..’
 
‘ಯಾರ್ದು? ನಿಮ್ಮಜ್ಜಂದಾ?’
‘ಕಿಂಗ್‌ಫಿಷರ್ರೇ ಮುಳುಗೋದ್ ಮೇಲ್ ನಮ್ಮಜ್ಜನ್ ಕತೆಯೇನ್ ಬಿಡು... ಬದುಕ್ ಪೂರಾ ಬೀದಿ ಗುಡ್‌ಸ್ದಾ..!  ಏರೋಪ್ಲೇನಿಲ್ಲಾಂದ್ರೆ ಶಿಪ್‌ನಲ್ಲಿ?’
‘ಮುಂದಿನ್ ಜನ್ಮಕ್ಕ್ ತಲ್ಪತೀವಿ‘.
’ಸೋ ನೈಸ್. ಶಿಪ್‌ನಲ್ ಕೂತ್ ಮುಂದಿನ್ ಜನ್ಮದ್‌ವರ್ಗೂ ನೀರ್ನಲ್ಲಿ ತೇಲ್ತಾ...’
 
‘ಮುಂದಿನ್ ಜನ್ಮದಲ್ಲಾದ್ರೂ ದಡ ಸೇರ್‌ತೀವಾ?’
‘ಏಯ್ ಕಟುಕಿ, ಯಾಕ್ ಕನಸ್ನ ರೆಕ್ಕೆ ಕತ್ತರ್ಸ್ತಾ ಇರ್ತ್ತೀಯಾ’.
 
‘ನಾಯೆಲ್ಲಿ ಕತ್ತರಿ ಹಿಡ್ಕಂಡಿದೀನಿ?’
‘ಆಕಾಶ ಕಾಣಿಸ್ತಾಯಿದೀಯಾ?’
‘ಯಾಕೆ ಭೂಮಿ ಬೇಜಾರಾಯ್ತಾ?’
‘ಒಂದ್ ದಿನ ಆಕಾಶಕ್ಕೋಗಿ ಅಲ್ಲೊಂದ್ ಚಿಕ್ಕ ಮನೆ ಮಾಡ್ಕಂಡ್ ಬದ್ಕಬೇಕೂಂತ್ ಅನ್ಸೋಲ್ವಾ?’
‘ಅಲ್ಲಿಂದ್ ಭೂಮಿ ಸುಂದರವಾಗಿ ಕಾಣ್‌ತ್ತಾ?’
‘ಎತ್ರ, ಎತ್ರ, ಆಕಾಶ ಕೈಗೆಟುಕೊಷ್ಟ್ ಎತ್ರಕ್ಕೇರಿ, ಮೋಡಗಳ್ನೆಲ್ಲಾ ಅಗ್ದ್, ಮಳೆ ನೀರ್ನ್ನೆಲ್ಲಾ ಹಿಂಡಿ, ಹಾಸುಗಲ್ಲಾಗ್ ಹಾಸಿ, ಮಲ್ಗೆ ಮಂಟಪ ಕಟ್ಟಿ, ಬದೀಲಿ ಮಲ್ಗೆ ಬಳ್ಳಿ ಹಬ್ಸಿ, ಜೋಕಾಲೀಲಿ ಜೀಕಿಕೊಳ್ಳುತ್ತಾ... ಜೀಕಿಕೊಳ್ಳುತ್ತಾ ಕೆಳ್ಗ್ ನೋಡೋ ಹಂಗಿದ್ರೇ?’
‘ಒಂದಷ್ಟ್ ಮಂತ್ರಾಕ್ಷತೆ ಇಲ್ಲಿಂದ್ಲೇ ಕಲ್ಸಿಕೊಂಡ್ ಹೋಗೋಣ’.
‘ಯಾಕೆ?’
 
‘ಭೂಮಿ ಸುಂದರವಾಗ್ ಬಾಳ್ಲೀಂತಾ ಮೇಲಿಂದಾ ಮಂತ್ರಾಕ್ಷತೆ ಪ್ರೋಕ್ಷಿಸೋಣ’.
‘ಥತ್! ಕನಸ್ ಹುಟ್ದ ತಲೆಯೊಳಗ್ ಕನಸು ಇಳಿಬಿಡ್‌ತಿದೀನಿ ನೋಡು.!’
‘ಆಮೇಲೆ ಚಂದಿರ ಕೋಪಿಸಿಕೊಂಡಾನ್!’
‘ಯಾಕೆ?’
 
‘ಅವನ್ ಕನಸ್ನ ನೀನ್ ಕಸಿದುಕೊಂಡೇಂತಾ!’
‘ಅರ್ಥವಾಗಲಿಲ್ಲ’.
‘ಚಂದಿರ್ನ ಅಂಗಳದಲ್ಲಿಳಿದ್ ಅವ್ನ್ ಬೆನ್ನಿನ ದಿಣ್ಣೆ, ದಿಬ್ಬಗಳ್ನೆಲ್ಲಾ ಏರ್ದ್ ಮೇಲೆ ಕನಸು ಉಳಿದಿರುತ್ತೇನ್?’
‘ಒಂದ್ ಕೆಲ್ಸಾ ಮಾಡೋಣ. ಕನಸ್ನ ಒಂದ್ ಗಾಳೀಪಟದಲ್ ಕಟ್ಟಿ ಹಾರ್ಸೋಣ!’
‘ಎಲ್ಲಿ? ಕೆಳ್ಗೆ ನೆಲಕ್ಕಾ?’
 
‘ಇಲ್ಲಾ ಬೇಡಾ! ಒಂದ್ ಪ್ಲಾಸ್ಟಿಕ್ ಚೀಲದಲ್ ಸುತ್ತಿ ಕಪಾಟಿನಲ್ ಬಚ್ಚಿಡೋಣ!’
‘ಪ್ಲಾಸ್ಟಿಕ್ ಬಿಟ್ಟ್ ಬೇರೆ ಸಿಗಲ್ವಾ? ಅದೆಂದೋ ಬ್ಯಾನ್ ಆಗಿದೆ!’ 
‘ಸಮುದ್ರದ ಉಸುಕಿನೊಳ್ಗ್ ಹುಗಿದಿಡೋಣ!’
‘ಸಮುದ್ರದಬ್ಬರ ಗೊತ್ತಿಲ್ವೇ? ಅಲೆಯುಕ್ಕಿ ಒಂದೇ ಹೊಡೆತಕ್ಕ್ ಕುರುಹಿಲ್ಲದಂಗ್ ಎಲ್ಲವೂ ಕೊಚ್ಚಿಕೊಂಡ್ ಹೋಗುತ್ತೆ!’
‘ಮರದ್ ಪೊಟರೆಯೊಳ್ಗ್ ಅಡಗಿಸಿಡೋಣ’.
 
‘ಮರದ್ ಸ್ಥಿತಿ ತಿಳ್ಯದೇ? ರಸ್ತೆ ಅಗಲೀಕರಣದಲಿ ಮರ ಉರುಳಿಹೋಗುತ್ತೆ!’
‘ಬಂಡೆ ಕೊರೆದ್ ತೂತಿನಲ್ಲ್ ಮುಚ್ಚಿಡೋಣ!’
‘ರಿಯಲ್ ಎಸ್ಟೇಟ್ ಕಾಳದಂಧೆ ಗೊತ್ತಿಲ್ವೇ? ಬಂಡೆಗಳೆಲ್ಲಾ ಸಿಡಿದ್ ಹೋಳುಗಳಾಗುತ್ತೆ!’
‘ನೆಲದೊಳಗ್ ಹುಗಿದಿಡೋಣ..!’
 
‘ನೆಲವೇ? ಭೂಕಂಪ ಬಂದ್ ನೆಲ ಬಿರುಕುಬಿಡುತ್ತೆ!’
‘ಭಾಷೆ ಕೊಡ್, ಕನಸ್ನ ಕೈ ಬಿಡೋದಿಲ್ಲಾಂತಾ!’
‘ಯಾವ್ ಭಾಷೆ? ಆಡು ಭಾಷೆಯೇ, ಮನೆ ಭಾಷೆಯೇ, ಊರ ಭಾಷೆಯೇ? ಭಾಷೆಯೂ ಸುಭದ್ರವಲ್ಲ!’
‘ಆಣೆ ಮಾಡ್, ನಾ ನಿನ್ನ್ ಕನಸ್ ಜೊತ್ಗೇ ಬಾಳ್ವೇಂತಾ!’
‘ಎಲ್ಲಿಯ ಆಣೆ? ಆಣೆ ಮಾಡಲು ದುಡ್ಡೂ ಅಪಮೌಲ್ಯವಾಗಿದೆ!’
‘ಹಾಗಾದ್ರೇ ಕನಸ್ನ ಹಾರ್‌ಬಿಡೋಣವೇ? ಬೇಕಾದ್ದು ಬೇಕಾದವ್ರು ಎತ್ತಿಕೊಳ್ಳಲಿ!’
‘ಕನಸೇ? ಮೊದಲದ್ನ ಹುಡುಕ್‌ಕೊಂಡು ಬಾ! ಆಮೇಲೆ ನೋಡೋಣ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT