ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಮಳ ಯಕ್ಷಸಂಭ್ರಮ

Last Updated 3 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕಾಲದ ಒತ್ತಡ, ಪ್ರೇಕ್ಷಕನ ನಿರೀಕ್ಷೆಯ ಭಾರಕ್ಕೆ ಮಣಿದು ಯಕ್ಷಗಾನ ತನ್ನನ್ನು ತಾನು ಮಾರ್ಪಾಟು ಮಾಡಿಕೊಳ್ಳುತ್ತಾ ನಡೆದಿದೆ. ಪ್ರಖ್ಯಾತ ಸಿನಿಮಾ ಕತೆಗಳನ್ನು ಹೋಲುವಂತಹ ಪ್ರಸಂಗಗಳು, ಭಾವಗೀತೆ, ಜಾನಪದ ಗೀತೆಗಳನ್ನು ಯಕ್ಷಗಾನದ ಮಟ್ಟುಗಳಿಗೆ ಅಳವಡಿಸಿಕೊಳ್ಳುವ ಪ್ರಯೋಗಶೀಲತೆಯನ್ನು ಹೊಸಕಾಲದ ಯಕ್ಷಗಾನ ಮೈಗೂಡಿಸಿಕೊಳ್ಳುತ್ತಿದೆ. ಈ ಬದಲಾವಣೆಗೆ ಮೇಳದ ಬದುಕಿನ ಪ್ರಶ್ನೆಯೂ ಮುಖ್ಯವಾಗಿದೆ. ಇಡೀ ರಾತ್ರಿ ಕೂತು ಆಟ ನೋಡುವ ವ್ಯವಧಾನ ಕರಾವಳಿಯ ಪ್ರೇಕ್ಷಕನಿಗಿಲ್ಲ!

ಹಾಗಾಗಿಯೂ ಯಕ್ಷಗಾನ ತನ್ನನ್ನು ಮಾರ್ಪಾಡು ಮಾಡಿಕೊಂಡಿದೆ; ಕಾಲಮಿತಿಯ ಯಕ್ಷಗಾನ. ಹವ್ಯಾಸಿ ಕಲಾವಿದರು, ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಅಲ್ಲಲ್ಲಿ ಇಂತಹ ಪ್ರಯೋಗಗಳು ನಡೆಯುತ್ತಾ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವ ಹೊಸಪ್ರಯತ್ನಗಳು ಯಶಸ್ವಿಯೂ ಆಗುತ್ತಿವೆ.

ಇತ್ತೀಚೆಗೆ ಇಂತದ್ದೊಂದು ಕಾಲಮಿತಿಯ ವಿಶಿಷ್ಟ ಯಕ್ಷಪ್ರಯೋಗವೊಂದು ಕುಂದಾಪುರ ತಾಲೂಕಿನ ತಲ್ಲೂರು ಗುಡ್ಡಿಯಂಗಡಿಯಲ್ಲಿ ಜರುಗಿತು. ‘ಭೂಮಿ’ ಸಂಸ್ಥೆಯಲ್ಲಿ ವೃತ್ತಿ ತರಬೇತಿ ಪಡೆದು ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದ ಒಂದಷ್ಟು ಯಕ್ಷಗಾನಪ್ರೇಮಿ ಯುವಕ ಯುವತಿಯರು, ಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರ ನೇತೃತ್ವದಲ್ಲಿ ಯಕ್ಷಗಾನ ಮಾಡುತ್ತಾ, ಕಳೆದ ವರುಷ ಕಟ್ಟಿಕೊಂಡ ತಂಡ ‘ಯಕ್ಷಭೂಮಿ (ರಿ) ಕನ್ಯಾನ’. ಈ ತಂಡದ ಮೊದಲ ವಾರ್ಷಿಕೋತ್ಸವ ಇತ್ತೀಚೆಗೆ ಅದ್ದೂರಿ ಯಕ್ಷಪ್ರಯೋಗದೊಂದಿಗೆ ಜರುಗಿತು.

ಒಂದು ಹವ್ಯಾಸಿ ತಂಡ ಏಕಕಾಲಕ್ಕೆ ಸಾಂಪ್ರದಾಯಿಕ ಮತ್ತು ಆಧುನಿಕ ಯಕ್ಷಗಾನ ಪ್ರದರ್ಶನವನ್ನು ಆಡಿದ್ದು ಬಹುಶಃ ಕರಾವಳಿಯ ಇತಿಹಾಸದಲ್ಲೇ ಮೊದಲೇನೋ! ಕಣ್ಣು ಕೋರೈಸುವ ಬೆಳಕಿನಿಂದ ರಂಗಸ್ಥಳವನ್ನು ಸಿಂಗರಿಸಿ ಆಟವಾಡುವ ಇಂದಿನ ಕಾಲದಲ್ಲಿ, ವಿದ್ಯುತ್ ಬೆಳಕನ್ನು ಸಂಪೂರ್ಣ ಅಮಾನ್ಯ ಮಾಡಿ, ದೊಂದಿ ಬೆಳಕಿನಲ್ಲಿ ತೆಂಗಿನ ಗರಿಯ ಹಸಿರು ರಂಗಮಂಚ ನಿರ್ಮಿಸಿ ಅರಗಿನ ಅರಮನೆ ಪ್ರಸಂಗವನ್ನು ಪ್ರಸ್ತುತಪಡಿಸಿದ್ದು ವಿಶೇಷ.

ಅರಗಿನ ಅರಮನೆಯ ದೊಡ್ಡ ರಂಗಸಜ್ಜಿಕೆಯನ್ನು ಹಾಕಿ ಬೆಂಕಿ ಇಟ್ಟು ಸುಡುವ ರೋಚಕ ಕ್ಷಣವನ್ನು ಕಣ್ತುಂಬಿಸಿಕೊಳ್ಳುವುದಕ್ಕಾಗಿಯೇ ಸಾವಿರಾರು ಯಕ್ಷಗಾನ ಪ್ರೇಮಿಗಳು ಅಂದು ಸೇರಿದ್ದರು. ಹಿಂದಿನ ಕಾಲದಲ್ಲಿ ಹೇಗೆ ಆಟವನ್ನು ಆಡುತ್ತಿದ್ದರು ಎಂಬ ಸಂಪೂರ್ಣ ಚಿತ್ರಣವನ್ನು ಈ ‘ಅರಗಿನ ಅರಮನೆ’ ಪ್ರಯೋಗವು ಕಟ್ಟಿಕೊಟ್ಟಿತು.

ಯಕ್ಷಗಾನ ಒಂದು ಶೈಲೀಕೃತ ಕಲಾಪ್ರಕಾರ. ಅಲ್ಲಿನ ವೇಷಭೂಷಣಗಳು, ಕುಣಿತ, ಹಾಡುಗಾರಿಕೆ, ಸಂಭಾಷಣೆ ಎಲ್ಲವೂ ವಿಶಿಷ್ಟ. ಕೆಂಪು, ಹಳದಿ, ಬಿಳಿ ಬಣ್ಣವನ್ನು ಯಕ್ಷಗಾನದ ಮುಖವರ್ಣಿಕೆ, ವೇಷಭೂಷಣದಲ್ಲಿ ಪ್ರಧಾನವಾಗಿ ಬಳಸಲಾಗುತ್ತದೆ. ದೊಂದಿ ಬೆಳಕಲ್ಲಿ ಈ ಬಣ್ಣಗಳು ಹೆಚ್ಚು ಸ್ಫುಟವಾಗಿ ಕಾಣುತ್ತವೆ. ಸಾಂಪ್ರದಾಯಿಕ ವೈಭವ, ಒನಪು, ವಯ್ಯಾರಗಳನ್ನು ಇಂದಿನ ಪೀಳಿಗೆಗೆ ತೆರೆದು ಕಾಣಿಸಿದ್ದು ಅರಗಿನ ಅರಮನೆ ಯಕ್ಷಪ್ರಯೋಗ.

ಬೇಬಿ ಕನ್ಯಾನ ಅಧ್ಯಕ್ಷರಾಗಿರುವ ‘ಯಕ್ಷಭೂಮಿ ಕಲಾತಂಡ’ದಲ್ಲಿ ಯುವತಿಯರೇ ಹೆಚ್ಚು. ತಿಂಗಳುಗಳಿಂದಲೇ ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಯಕ್ಷಪ್ರಯೋಗಕ್ಕೆ ಪ್ರಸಾದ್ ಕುಮಾರ್ ಮೊಗೆಬೆಟ್ಟು ಸಾರಥ್ಯದಲ್ಲಿ ಅಣಿಯಾಗಿದ್ದರು. ಧನಸಂಗ್ರಹ–ಪ್ರಚಾರಕ್ಕೆ ಫೇಸ್ಬುಕ್, ವಾಟ್ಸಾಪ್‌ನಂತಹ ಸಾಮಾಜಿಕ ತಾಣಗಳನ್ನು ಬಳಸಿಕೊಂಡರು.

ತಮ್ಮ ಕಾರ್ಯಕ್ರಮವೊಂದು ಮೈಲಿಗಲ್ಲಾಗಬೇಕೆಂಬ ಮಹದಾಸೆಯಿಂದ ಅಕ್ಕಪಕ್ಕದಲ್ಲಿ ಒಂದು ಸಾಂಪ್ರದಾಯಿಕ ಶೈಲಿಯ ರಂಗಸ್ಥಳ, ಬೆಳಕು ಬೆಡುಗುಗಳ ಹೊತ್ತ ಆಧುನಿಕ ರಂಗಸ್ಥಳದ ಜೊತೆಗೆ ಅರಗಿನ ಅರಮನೆಯ ಬೃಹತ್ ರಂಗಸಜ್ಜಿಕೆಯನ್ನು ನಿರ್ಮಿಸಿದ್ದರು. 

ಅರಗಿನ ಅರಮನೆ
ಪಾಂಡವರು ವನವಾಸದಲ್ಲಿರುವಾಗ ಅರಗಿನಿಂದ ನಿರ್ಮಿಸಿದ ಅರಮನೆಯಲ್ಲಿ ವಾಸ ಮಾಡುವ ಮತ್ತು ಅದಕ್ಕೆ ಬೆಂಕಿಯಿಟ್ಟು ಪಾಂಡವರ ನಿರ್ನಾಮ ಮಾಡುವ ಯತ್ನ ಹಾಗೂ ಭೀಮನಿಂದಾಗಿ ಪಾಂಡವರು ಉಳಿಯುವ ಕಥೆಯನ್ನು ಪ್ರಧಾನವಾಗಿಟ್ಟುಕೊಂಡರೂ – ಜೊತೆಗೆ ಹಿಡಿಂಬಾ ವಿವಾಹವನ್ನೂ ಸೇರಿಸಿ ಪ್ರಸಂಗವನ್ನು ಸ್ವಲ್ಪ ದೀರ್ಘವಾಗಿಸಲಾಗಿತ್ತು.

ಮುಂದಿನ ಗದಾಯುದ್ಧ ಪ್ರಸಂಗದ ಭೀಮನಿಗೆ ಹೆಚ್ಚು ಬಲವನ್ನು ತುಂಬುವ ಕಲಾವಿದರ ನೈಪುಣ್ಯತೆಯನ್ನು ಒರೆಗೆ ಹಚ್ಚುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು.ಧರ್ಮರಾಯನಾಗಿ ಮಂಜುನಾಥ ಗುಡ್ಡಿಯಂಗಡಿ, ಅರ್ಜುನನಾಗಿ ಶಾಂತಿ ಗುಡ್ಡಿಯಂಗಡಿ, ಭೀಮನಾಗಿ ಜಗನ್ನಾಥ, ನಕುಲ ಕಲಾವತಿ ಮಾರಣಕಟ್ಟೆ, ಸಹದೇವ ಅಶೋಕ ಉಪ್ಪುಂದ, ಕುಂತಿ ಕವಿತಾ ಚನ್ನಪಟ್ಟಣ, ಪುರೋಚನ ಮಂಜುನಾಥ ದಾವಣಗೆರೆ, ಹಿಡಿಂಬೆಯಾಗಿ ಸುನಿಲ್ ಕಾವ್ರಾಡಿ, ಮಾಯಾ ಹಿಡಿಂಬೆ ನಿರ್ಮಲ ಸಿದ್ಧಾಪುರ, ಹಿಡಿಂಬಾಸುರನಾಗಿ ನಾಗರಾಜ ಶೆಟ್ಟಿ ಸಬ್ಲಾಡಿ ಅಭಿನಯಿಸಿದರು.

ಗದಾಯುದ್ಧ
ಸಾಂಪ್ರದಾಯಿಕ ಯಕ್ಷಗಾನ ಮುಗಿಯುತ್ತಿದಂತೆ ಪಕ್ಕದಲ್ಲಿ ಹಾಕಿದ ಅತ್ಯಾಧುನಿಕ ವಿದ್ಯುತ್ ಬೆಳಕುಗಳಿಂದ ಅಲಂಕೃತವಾದ ರಂಗಸ್ಥಳದಲ್ಲಿ ಗದಾಯುದ್ಧ ಪ್ರಸಂಗ ಆರಂಭವಾಯಿತು. ಆಧುನಿಕತೆಯೆನ್ನುವುದು ತನ್ನ ಹದವನ್ನು ಕಳೆದುಕೊಂಡರೆ ಹೇಗೆ ಮಾರಕವಾಗಬಹುದು ಎನ್ನುವುದಕ್ಕೆ ಈ ಪ್ರಯೋಗ ಸ್ಪಷ್ಟ ನಿದರ್ಶನವಾಯಿತು.

ಎಲ್ಲಿಯವರೆಗೂ ಪ್ರೇಕ್ಷಕ ಕಣ್ಣಿಗೆ ಹಿತವಾದ ಬೆಳಕಿನಲ್ಲಿ, ಕಿವಿಗೆ ಹಿತವಾದ ಧ್ವನಿಯಲ್ಲಿ, ಮನಸ್ಸಿಗೆ ಹಿಡಿಸುವ ಕಲೆಯನ್ನು ಆಸ್ವಾದಿಸುತ್ತಿದ್ದನೋ ಅವೆಲ್ಲ ತಕ್ಷಣವೇ ಬದಲಾದ ಚಿತ್ರಣ.

ಗದಾಯುದ್ಧ ಪ್ರಸಂಗದಲ್ಲಿ ‘ಯಕ್ಷಭೂಮಿ’ಯ ಕಲಾವಿದರು ಭಾಗವಹಿಸಿದ್ದರೂ ಪ್ರಧಾನವೇಷಗಳಾದ ಭೀಮ ಮತ್ತು ಸುಯೋಧನನ ಪಾತ್ರಗಳನ್ನು ಅತಿಥಿ ಕಲಾವಿದರು ನಿರ್ವಹಿಸಿದ್ದರು. ಯಕ್ಷಗಾನದ ಸಂಭಾಷಣೆಯೆಂದರೆ ಅದೊಂದು ಆಶುವಿಸ್ತರಣೆ. ಭಾಗವತಿಕೆಯನ್ನು ಅರ್ಥ ಮಾಡಿಕೊಂಡು ಅದಕ್ಕೆ ಮಾತನ್ನು ಪೋಣಿಸುವುದು. ಸಹನಟನ್ನು ಹೀಗಳೆಯುವುದು, ಹೊಗಳುವುದು, ಟೀಕಿಸುವುದು ಎಲ್ಲವೂ ಸಂಭಾಷಣೆಯಲ್ಲಿ ಸಂಭವಿಸಬಹುದು. ಇದು ರಾತ್ರಿಯನ್ನು ಬೆಳಗು ಮಾಡುವ ಪ್ರಯತ್ನವೂ ಆಗಿರುತ್ತದೆ ಕೆಲವೊಮ್ಮೆ. ಆದರಿಲ್ಲಿ ಅತಿಥಿ ಕಲಾವಿದರಾಗಿ ಬಂದವರಲ್ಲಿ ಸುಯೋಧನ ಪಾತ್ರಧಾರಿ ತನ್ನನ್ನು ತಾನು ವಿಜೃಂಭಿಸಿಕೊಂಡಿದ್ದು ಹಿತಕರವಾಗಿರಲಿಲ್ಲ.

ಧರ್ಮರಾಯನಾಗಿ ಬೇಬಿ ಕನ್ಯಾನ, ಕೃಷ್ಣನಾಗಿ ಸುಮಲತಾ ಇಡೂರು, ಪಾರ್ಥ ಪ್ರದೀಪ್, ನಕುಲ ಸಹದೇವ ಕಲಾವತಿ ಮಾರಣಕಟ್ಟೆ, ಕಲಾವತಿ ಕಾಂಚನ್ ಕುಂದಾಪುರ, ಸಂಜಯನಾಗಿ ಪತ್ರಕರ್ತರಾದ ಜಾನ್ ಡಿಸೋಜ, ಅಶ್ವತ್ಥಾಮನಾಗಿ ಶರತ್ ಮೊವಾಡಿ, ಸುಯೋಧನ ಶಶಾಂಕ್ ಪಟೇಲ್ ಹೆಗ್ಗೋಡು, ಭೀಮ ಪ್ರಶಾಂತ್ ಗಾಣಿಗ, ಹಾಸ್ಯ ಸತೀಶ್ ಹಟ್ಟಿಯಂಗಡಿ. ಎರಡೂ ಪ್ರಸಂಗಗಳಿಗೆ ಹಿಮ್ಮೇಳ ಭಾಗವತರಾಗಿ ಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಚಂಡೆ ಕೃಷ್ಣನಾಥ ಶೈಣೈ. ಮದ್ದಳೆ ಚಂದ್ರಯ್ಯ ಆಚಾರ್.

ಯಕ್ಷಗಾನದಲ್ಲಿ ರಂಗಸಜ್ಜಿಕೆಯನ್ನು ನಿರ್ಮಿಸುವುದಿಲ್ಲ. ಮಾತಿನಲ್ಲೇ ಅರಮನೆ, ಕಾಡು, ಸಮುದ್ರ ಎಲ್ಲವನ್ನೂ ಕಟ್ಟಿಕೊಡುವ ಕಲೆಯಿದು. ಆ ಮಾತುಗಾರಿಕೆಗೆ ಅಂತಹ ಶಕ್ತಿಯಿದೆ. ಆದರಿಲ್ಲಿ ಅರಗಿನ ಅರಮನೆಯನ್ನು ನಿರ್ಮಿಸಿ ಪ್ರೇಕ್ಷಕನ ಕಣ್ಣೆದುರಿನಲ್ಲೇ ಆ ಅರಗಿನ ಅರಮನೆ ಧಗಧಗನೆ ಹೊತ್ತಿಕೊಂಡುರಿದು ಭಸ್ಮವಾಗುವ ಪರಿ ವಿಸ್ಮಯವನ್ನು ಹುಟ್ಟಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT