ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲಾಸ - ವಿರಾಗದ ಪಟ್ಟಾಯ

Last Updated 22 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಸೋಮವಾರದ ಬುದ್ಧ ಶಾಂತಿಗೆ, ಮಂಗಳವಾರದ ಬುದ್ಧ ಸುಖನಿದ್ರೆಗೆ, ಬುಧವಾರದ ಬುದ್ಧ ಪರೋಪಕಾರ ಗುಣಕ್ಕೆ, ಗುರುವಾರದ ಬುದ್ಧ ಧ್ಯಾನಸ್ಥ ಮನಸ್ಥಿತಿಗೆ, ಶುಕ್ರವಾರದ ಬುದ್ಧ ಸಂತಸಕ್ಕೆ, ಶನಿವಾರದ ಬುದ್ಧ ದುಷ್ಟಶಕ್ತಿಗಳ ನಿರೋಧಕ್ಕೆ, ಭಾನುವಾರದ ಬುದ್ಧ ಸಂಕಷ್ಟದಲ್ಲಿ ಇರುವವರನ್ನು ಕಾಪಾಡುವ ಮನೋಬಲ ನೀಡಲಿಕ್ಕೆ

 ಹೀಗೆ, ವಾರದೊಂದಿಗೆ ತಳುಕು ಹಾಕಿಕೊಂಡಿರುವ ಬುದ್ಧ ಮೂರ್ತಿಗಳನ್ನು ನೋಡಲಿಕ್ಕೆ ಪಟ್ಟಾಯಕ್ಕೆ ಹೋಗಬೇಕು.

ಪಟ್ಟಾಯ ಥಾಯ್ಲೆಂಡ್‌ನ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲೊಂದು. ಆ ನಗರದ ಬೆಟ್ಟದ ಮೇಲೆ `ಬಿಗ್ ಬುದ್ಧ~ ಎಂದೇ ಕರೆಯಲ್ಪಡುವ ಚಿನ್ನದ ಬಣ್ಣದ ಲೇಪನವಿರುವ ಎತ್ತರದ ಬುದ್ಧನ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಮೂರ್ತಿಯ ಸುತ್ತ ವಾರದ ಏಳೂ ದಿನಗಳ ಬುದ್ಧ ಪ್ರತಿಮೆಗಳನ್ನು ಇಡಲಾಗಿದೆ.

ತಮ್ಮ ಹುಟ್ಟಿದ ದಿನದ ವಾರದಂದು ಆಯಾ ಬುದ್ಧನ ವಿಗ್ರಹವನ್ನು ಪೂಜಿಸಿದರೆ ಆಯಾ ಶಕ್ತಿಯು ನಮಗೆ ಲಭಿಸುತ್ತದೆ ಎನ್ನುವುದು ಥಾಯ್ ಜನರ ನಂಬಿಕೆ. ಆ ನಂಬಿಕೆಯೇ ಪಟ್ಟಾಯದ ಬೆಟ್ಟದ ಮೇಲೆ ಮೈತಳೆದಂತಿದೆ.

ಮೂರು ಶತಮಾನಗಳ ಹಿಂದಿನ ಕಥೆ ಕೇಳಿ. ಫ್ರಾಯಾಟಕ್ ಎಂಬಾತ ತನ್ನ ಸೈನ್ಯದೊಂದಿಗೆ ಸ್ಥಳೀಯ ರಾಜ ನೈಕ್ಲೋಂಗೆ ಮುಖಾಮುಖಿಯಾದ. ಫ್ರಾಯಾಟಕ್‌ನ ಘನತೆ, ಆತನ ಅಗಾಧ ಸೈನ್ಯ ಮತ್ತದರ ಶಿಸ್ತನ್ನು ಕಂಡು ನೈಕ್ಲೋಂ ಶರಣು ಎಂದ.
 
ಸೇನೆಗಳು ಎದುರುಬದುರಾದ ಈ ಸ್ಥಳಕ್ಕೆ `ಥಪ್ ಫ್ರಾಯಾ~ ಎಂಬ ಹೆಸರು ಬಂದಿತು. ಮುಂದೆ ಈ ಊರನ್ನು ಮಳೆಮಾರುತ `ಫಟ್ಟಾಯ~ ಹೆಸರಿನಿಂದ ಕರೆಯಲಾಯಿತು. ಆ ಫಟ್ಟಾಯವೇ ಅಪಭ್ರಂಶಗೊಂಡು ಜನರ ನಾಲಿಗೆಗಳಲ್ಲಿ ಪಟ್ಟಾಯ ಆಗಿದೆ.

1960ರವರೆಗೂ ಸಾಮಾನ್ಯ ಮೀನುಗಾರರ ಗ್ರಾಮವಾಗಿದ್ದ ಪಟ್ಟಾಯ, ವಿಯೆಟ್ನಾಂ ಯುದ್ಧದಲ್ಲಿ ಭಾಗವಹಿಸಿದ್ದ ಅಮೆರಿಕಾ ಯೋಧರ ತಂಗುದಾಣವಾಗಿತ್ತು. ಕ್ರಮೇಣ ಸಮುದ್ರ ದಂಡೆಯಲ್ಲಿರುವ ಈ ನಗರ ಬೆಳೆಯುತ್ತಾ ಸಾಗಿತು. ಈಗ ಪ್ರತಿವರ್ಷ ನಲವತ್ತು ಲಕ್ಷ ಪ್ರವಾಸಿಗರನ್ನು ಆಕರ್ಷಿಸುತ್ತಾ ತನ್ನ ದೇಶಕ್ಕೆ ಹೆಚ್ಚಿನ ಆದಾಯವನ್ನು ತರುತ್ತಿದೆ.

ಇಲ್ಲಿನ ನಿವಾಸಿಗಳು ಥಾಯ್ ಮತ್ತು ಚೀನಾ ಮೂಲದವರು. ಉದ್ಯೋಗವನ್ನು ಅರಸಿ ಥಾಯ್ಲೆಂಡ್‌ನ ಹಲವಾರು ಪ್ರದೇಶಗಳಿಂದ ಬಂದಿರುವ ಜನರು ಇಲ್ಲಿ ನೆಲೆಸಿದ್ದಾರೆ. ಐವತ್ತು ವರ್ಷ ಮೇಲ್ಪಟ್ಟ ವಿದೇಶೀಯರು ಇಲ್ಲಿಗೆ ಬಂದು ನೆಲೆಸುವ ಅವಕಾಶವಿದೆ.
 
ಆ ಕಾರಣದಿಂದಲೇ   ಹಲವು ನಿವೃತ್ತ ವಿದೇಶೀಯರು ಥಾಯ್ಲೆಂಡ್-ಪಟ್ಟಾಯಕ್ಕೆ ಆಕರ್ಷಿತರಾಗುತ್ತಾರೆ. ಅಲ್ಲದೆ, ಹಿತವಾದ ಹವಾಗುಣ ಮತ್ತು ಅನುಕೂಲಕರ ಜೀವನಶೈಲಿಯೂ ಜನಾಕರ್ಷಣೆಗೆ ಕಾರಣವಾಗಿದೆ.

ಸುಂದರ ಸಮುದ್ರ ತೀರ, 240 ಮೀಟರ್ ಎತ್ತರದ ಪಟ್ಟಾಯ ಪಾರ್ಕ್ ಟವರ್, ತೇಲುವ ಮಾರುಕಟ್ಟೆ, ಮರದಲ್ಲೇ ನಿರ್ಮಿಸಿರುವ ಸ್ಯಾಂಕ್ಚುರಿ ಆಫ್ ಟ್ರೂತ್ ದೇವಾಲಯ, ನೊಂಗ್ ನೂಚ್ ಉದ್ಯಾನವನ, ಟಿಫ್ಯಾನಿ ಶೋ, ಮಿನಿ ಸಯಾಂ ಮುಂತಾದ ಹಲವಾರು ಪ್ರವಾಸಿಗರ ಆಕರ್ಷಣೆಗಳನ್ನು ಹೊಂದಿರುವ ಪಟ್ಟಾಯ ವಿಶ್ವದ ಎಲ್ಲ ಭಾಗಗಳ ಪ್ರವಾಸಿಗರನ್ನೂ, ವಿಶೇಷವಾಗಿ ಭಾರತೀಯರನ್ನು ಸೆಳೆಯುತ್ತಿದೆ.

ಸಾಮಾನ್ಯವಾಗಿ ಥಾಯ್ಲೆಂಡ್-ಪಟ್ಟಾಯಕ್ಕೆ ಹೋಗುವವರೆಲ್ಲ ಅಲ್ಲಿನ ವಿಲಾಸಿ ತಾಣಗಳಿಂದ ಆಕರ್ಷಿತರಾಗುವುದಿದೆ. ಆದರೆ, ವಿಲಾಸದ ಜೊತೆಗೆ ವಿರಾಗದ ಬುದ್ಧನಿಗೂ ಪಟ್ಟಾಯ ಹೆಸರುವಾಸಿ. ಈ ಬುದ್ಧ ಬೋಧಿಸುವುದು ಅತ್ಯಂತ ಸರಳವಾದ ಮನುಷ್ಯಪ್ರೀತಿಯನ್ನು!


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT