ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಮುಲ

ಕವಿತೆ
Last Updated 30 ಜನವರಿ 2016, 19:30 IST
ಅಕ್ಷರ ಗಾತ್ರ

ನೇಣಿಗೇರಿಸಿದವರನ್ನು
ನೀನು ಪ್ರಶ್ನಿಸಿದ್ದಲ್ಲದೆ
ಕೇರಿಗಳಿಂದ, ಗಲ್ಲಿಗಳಿಂದ, ಹಟ್ಟಿಗಳಿಂದ
ಬಂದವರ ದುರುಗುಟ್ಟಿ ನೋಡುತ್ತಿದ್ದವರನ್ನು
ನೀನು ನಿನ್ನ ಸೂರ್ಯ ನೋಟದಲಿ ದಿಟ್ಟಿಸಿದೆ
ರಾಷ್ಟ್ರದ್ರೋಹದ ಪಟ್ಟಕಟ್ಟಿ
ಉಣ್ಣುವ ಗಂಗಳವನ್ನು ಕಿತ್ತುಕೊಂಡು ಹೊರಗಟ್ಟಿದರು
ನಕ್ಷತ್ರಗಳ ನೋಡಿ ಬಯಲಲಿ ಬೆಳೆದ ನಿನಗೆ
ಮತ್ತು ನಿನ್ನ ಸ್ನೇಹಿತರಿಗೆ ಇದೇನು ಕಷ್ಟವಲ್ಲ ಬಿಡು.
ಮಲಗಿದೆ ಚಳಿಯಲಿ ನಡುಗುತ್ತ
ಉರಿವ ನಕ್ಷತ್ರಗಳ ತುಂಬಿಕೊಳ್ಳುತ್ತ ಕಣ್ಣಲಿ
ಬಾಬಾ ಸಾಹೇಬನ ಹೊತ್ತಿಗೆಯ ಮಡಿಲಲಿ ಇಟ್ಟುಕೊಂಡು.
ಕಟ್ಟುವ ಮಂದಿರಕ್ಕೆ ಇಟ್ಟಿಗೆಯ ತಂದಿದ್ದರೆ
ಅಥವಾ ದೊರೆಗಳ ಮಾತಿಗೆ ತಲೆದೂಗಿ
ಅವರ ಸ್ವಚ್ಚ ಫೋಟೋಗಳ ಫೇಸ್‌ಬುಕ್ಕಿನ ಮೇಲೆ ಮಿಂಚಿಸಿದ್ದಿದ್ದರೆ
ಒಳಗೆ ಹಾಕಿಕೊಂಡು ರಾಷ್ಟ್ರಭಕ್ತನ ಬಿರುದು ಕೊಡುತ್ತಿದ್ದರು.
ಅವರ ನಿಘಂಟಿನಲಿ ಜಾತಿ ದಪ್ಪ ಅಕ್ಷರಗಳಲಿ ಅಚ್ಚಾಗಿದೆ.
ಅಚ್ಚುಮಾಡಿಸಿದ್ದಾರೆ.

ಗ್ರಂಥಗಳನ್ನಷ್ಟೇ ಅಲ್ಲ ಪುರಾಣಗಳನ್ನೂ ತಮ್ಮ ಪೇಟೆಂಟಿಗೆ, ಲೈಸನ್ಸಿಗೆ
ತೆಗೆದುಕೊಂಡಿರುವ ಅವರು ಇಷ್ಟು ಮಾಡದಿಹರೆ.
ನಿನ್ನ ಸಾವು ಕೇವಲ ಒಂದು ಲೆಕ್ಕ ರೈತರ (ಆತ್ಮ)ಹತ್ಯೆಗಳಂತೆ.
ನೋವು, ಹತಾಶೆ, ಅವಮಾನ ಅರ್ಥವಾಗದ ಕ್ರಿಟಿಕಲ್ ಟರ್ಮುಗಳು.
ಮುಟ್ಟದರೆ ಮಲಿನರಾಗುವೆರೆನ್ನುವ ಭಯದಿ ಮುಟ್ಟದೆ ಸಾಯಿಸಿದರು
ನೀನು ಅಸ್ಪೃಶ್ಯ
ಧರ್ಮಗ್ರಂಥಗಳನ್ನೋದಿಕೊಂಡಿರುವ ಆ ನಾಗರೀಕರ ಮುಂದೆ.
ನೀನು ಸಾಯುವಾಗ ನಮ್ಮ ದೊರೆಗಳು ಮತ್ತೊಂದು ಸಮಾವೇಶಕ್ಕೆ
ಹೊಸ ವಸ್ತ್ರದ ಅಳತೆ ಕೊಡುವಲ್ಲಿ ಬ್ಯುಸಿಯಾಗಿದ್ದರು.

ನಕ್ಷತ್ರಗಳ ಮಣ್ಣಲಿ ಬಿತ್ತುವ ಕನಸ ಕಾಣುವ ನೀನು ಸಾಯಬಾರದಿತ್ತು.
ಕಾಣದ ಅಸ್ತ್ರಗಳಲಿ ಮುಗಿಸುವ
ಕಣ್ಕಟ್ಟ್ ವಿದ್ಯೆಯ ಶತಮಾನಗಳಿಂದ ತಾಲೀಮು ಮಾಡಿಕೊಂಡು ಮುಗಿಸಿದರು.
ನಿನ್ನ ಕೈಯಿಂದಲೇ ನಿನ್ನ
ನೀನು ಇರಬೇಕಿತ್ತು ಅವರ ವಿರುದ್ಧ ಸೆಣೆಸಲು.
ಬಾಬಾ ಸಾಹೇಬರು ಸಾವಿರ ಸಲ ಸತ್ತು ಬದುಕಿದರು
ಹೋರಾಡುತ್ತ.

ಗಾಂಧಿಯ ಜೊತೆಗಂತೂ ಸೆಣಸಿ ಹೈರಾಣಾಗಿ
ಮುನಿದರು, ಸಿಟ್ಟಾದರು, ಕೋಪಗೊಂಡರು.
ಜಗದ ಯಾವ ಯುದ್ಧಕಿಂತ ಕಡಿಮೆ ಅವರ ಸೆಣೆಸಾಟ
ಗಾಂಧಿಯನ್ನೂ ಬಿಟ್ಟರಾ ಅವರು
ಅವನ ರಾಮ
ಅವನ ಗೀತೆ
ಅವನ ಕಾಪಾಡಲಿಲ್ಲ.

ಸುಸ್ತಾದ ಬಾಬಾರ ಆವರಿಸಿತು ತಥಾಗತನ ಬೆಳದಿಂಗಳು.
ನೀನು ಇರಬೇಕಿತ್ತು.
ನಿನಗಾಗಿ
ನಿನ್ನ ಅಮ್ಮ ಅನ್ನವ ಬೇಯಿಸುತ್ತಿದ್ದರು
ಸಿಮೆಂಟ್ ಶೀಟಿನಡಿಯ ಧಗೆಯಲಿ.
ನಿನಗಾಗಿ
ನಿನ್ನ ಸ್ನೇಹಿತರು ನಿನ್ನ ಗೆಳತಿಯರು
ಹೊಸ ಪುಸ್ತಕಗಳ ಕೊಂಡಿದ್ದರು.

ಇಲ್ಲಿ ಗಾಂಧಿಯಾದರೆ ಕೊಲೆ ಮಾಡುತ್ತಾರೆ
ಬಾಬಾ ಸಾಹೇಬರಾದರೆ ಸರ್ಕಲ್ ಮಧ್ಯೆ ನಿಲ್ಲಿಸಿ ಪ್ರತಿಮೆ ಮಾಡುತ್ತಾರೆ.
ನೀನು ಇರಬೇಕಿತ್ತು.
ಅಥವಾ
ಕೋಟಿ ನಕ್ಷತ್ರಗಳಲಿ ನೀನು
ಎಲ್ಲೋ ಒಂದು ಮೂಲೆಯಲಿ ಚುಕ್ಕಿಯಾಗಿ ಮೂಡಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT