ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಕ್ಕಿಗಳ ದೀಪಾವಳಿ ಮದುವೆ

Last Updated 18 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ದೀಪಾವಳಿ ಹಬ್ಬ ಎಂದರೆ ಸಿಡಿಮದ್ದು, ಬಾಣಬಿರುಸುಗಳ ಸಂಭ್ರಮ ಕಣ್ಣಮುಂದೆ ಬರುತ್ತದೆ. ಕಜ್ಜಾಯದ ಸಿಹಿ, ಎಣ್ಣೆಸ್ನಾನದ ಸವಿಯೂ ಹಬ್ಬದೊಂದಿಗೆ ತಳಕು ಹಾಕಿಕೊಂಡಿದೆ. ಆದರೆ, ಹಾಲಕ್ಕಿ ಸಮುದಾಯದ ದೀಪಾವಳಿಯ ಗಮ್ಮತ್ತೇ ಬೇರೆಯದು. ಇದು ಮದುವೆಯ ರೂಪದಲ್ಲಿ ಹಬ್ಬವನ್ನು ಸ್ಮರಣೀಯವಾಗಿಸುವ ಸಂಭ್ರಮ.

ಹಾಲಕ್ಕಿಗಳ ದೀಪಾವಳಿಯ ಮದುವೆಯಲ್ಲಿ ಸಾಕಷ್ಟು ವಿಶೇಷಗಳಿವೆ. ಇಲ್ಲಿ ಯುವಕರೇ ವಧು, ವರ. ಕಾಕದಂಡೆ ಗಿಡದ ಬಳ್ಳಿಯೇ ಬಾಸಿಂಗ. ಸೋರೆಕಾಯಿ ಗಿಡದ ಎಲೆಯೇ ಬೀಸಣಿಕೆ. ಗೊಂಡೆ (ಚೆಂಡು) ಹೂವಿನ ಎಲೆ ವೀಳ್ಯ! ಜಾನಪದ ಗೀತೆಗಳು ಮಂತ್ರವಾದರೆ, ಗೆರಸಿ, ತಟ್ಟೆಗಳು ಮಂಗಳವಾದ್ಯ. ಗ್ರಾಮದೇವತೆ ಈ ವಿಶಿಷ್ಟ ವಿವಾಹಕ್ಕೆ ಸಾಕ್ಷಿ. ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಸಮುದಾಯದ ಜನರು ಅನಾದಿಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯವಿದು. ಕಾರವಾರದ ಕೀಳಕೋಣ, ಬಿಣಗಾ, ಸಾಣೆಮಕ್ಕಿ, ಅಲಿಗದ್ದಾ, ಮುದಗಾ ದೇವತಕೋಣ, ಸಕಲಬೇಣ, ತೋಡೂರ, ಬರಗಾಲ, ಶಿರವಾಡ ಮತ್ತಿತರ ಗ್ರಾಮಗಳಲ್ಲಿ ದೀಪಾವಳಿ ಹಬ್ಬದ ದಿನ ಈ ವಿಶೇಷ ಮದುವೆಯನ್ನು ಕಾಣಬಹುದು.

ದೀಪಾವಳಿ ಹಬ್ಬದ ಬಲಿಪಾಡ್ಯಮಿ ದಿನ ಹಾಲಕ್ಕಿಗಳಿಗೆ ದೊಡ್ಡ ಹಬ್ಬ. ಆ ದಿನ ಎಲ್ಲರು ಮುಂಜಾನೆಯೇ ಎದ್ದು, ಗೋವುಗಳಿಗೆ ಪೂಜೆ ಮಾಡಿ, ಕಡುಬು ಕಟ್ಟಿ ಕೊಟ್ಟಿಗೆಯಿಂದ ಬಿಡುತ್ತಾರೆ. ರಾತ್ರಿಯಾಗುತ್ತಿದ್ದಂತೆಯೇ ಗ್ರಾಮಸ್ಥರೆಲ್ಲರೂ ಊಟ ಮುಗಿಸಿ ಊರಿನ ಮುಖಂಡ ಅಥವಾ ಗುನಗ (ಪೂಜಾರಿ) ಅವರ ಮನೆಯಲ್ಲಿ ಸೇರುತ್ತಾರೆ. ಇಲ್ಲಿಂದ ಮದುವೆ ಸಡಗರ ಪ್ರಾರಂಭವಾಗುತ್ತದೆ.

ಮೊದಲು ಮಹಿಳೆಯರೆಲ್ಲ ಸೇರಿ ಎರಡು ಗುಂಪು ಮಾಡಿಕೊಳ್ಳುತ್ತಾರೆ. ಜಾನಪದ ಗೀತೆಯ ಮೂಲಕ ಹೆಣ್ಣು ಕೇಳುವ ಶಾಸ್ತ್ರ ನಡೆಯುತ್ತದೆ. ಬೇರೆ ಬೇರೆ ಬಳಗದ (ರಕ್ತ ಸಂಬಂಧವಿಲ್ಲದ) ಇಬ್ಬರನ್ನು ಮದುಮಕ್ಕಳಾಗಿ ಆಯ್ಕೆಮಾಡುತ್ತಾರೆ. ಇವರ ಪಾತ್ರಕ್ಕೆ ಅವಿವಾಹಿತ ಯುವಕರೇ ಆಯ್ಕೆಯಾಗುತ್ತಾರೆ. ಇವರಲ್ಲಿ ವರನಾಗುವವನಿಗೆ ಬಲೀಂದ್ರ ಹಾಗೂ ವಧು ಆಗುವವನಿಗೆ ಗೃಹದೇವಿ ಎಂದು ಕರೆಯಲಾಗುತ್ತದೆ. ಮದುವೆ ನಿಶ್ಚಯವಾದ ಖುಷಿಯಲ್ಲಿ ಎಲ್ಲರೂ ರಾತ್ರಿಯೆಲ್ಲಾ ಕುಣಿಯುತ್ತ ಜಾಗರಣೆ ಮಾಡುತ್ತಾರೆ. ಪುರುಷರು, ಮಹಿಳೆಯರೆನ್ನದೆ ಎಲ್ಲರೂ ಸೇರಿ ಈ ಮನರಂಜನೆಯಲ್ಲಿ ಭಾಗವಹಿಸುತ್ತಾರೆ. ಇವರು ಮಾಡುವ ಹಗರಣ, ಛದ್ಮವೇಷಗಳು ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತವೆ. ಈ ಸಂಭ್ರಮವನ್ನು ನೋಡುವುದೇ ಒಂದು ಖುಷಿ.

ಬೆಳಗಿನ ಜಾವ ನಾಲ್ಕರವರೆಗೆ ಮದುವೆಯ ನೆಪದ ಈ ಹಾಸ್ಯ ಪ್ರಹಸನ ನಡೆಯುತ್ತದೆ. ನಂತರ ಮಹಿಳೆಯರೆಲ್ಲ ಸೇರಿ ‘ತೈ ತೈ ತೋ... ಕಾಕ್ದಂಡೆ ಬಳ್ಳಿ ಬಾಸಿಂಗಾ... ಸೋರೆಕಾಯಿ ಎಲೆ ಬೀಸಣಿಗಿ; ತೈ ತೈ ತೋ... ತೈ ತೈ ತೋ...’ ಎಂದು ತಮ್ಮದೇ ಧಾಟಿಯಲ್ಲಿ ಹಾಡುತ್ತ ವಧು–ವರರನ್ನು ಮದುವೆಗೆ ಸಿದ್ಧಗೊಳಿಸುತ್ತಾರೆ.

ಪ್ರತೀ ವರ್ಷವೂ ಊರಿನ ಯಾರಾದರೊಬ್ಬರು ಮದುವೆ ನಡೆಸಿಕೊಡುವ ಹರಕೆ ಹೊತ್ತಿರುತ್ತಾರೆ. ಮದುವೆ ದಿಬ್ಬಣ ಮೊದಲು ಅವರ ಮನೆಯ ದನದ ಕೊಟ್ಟಿಗೆಗೆ ಹೋಗುತ್ತದೆ. ಅಲ್ಲಿ ಶಾಸ್ತ್ರ ಸಂಪ್ರದಾಯಗಳನ್ನು ನೆರವೇರಿಸಿ, ಹರಕೆ ಹೊತ್ತ­ವರ ಮನೆಯಲ್ಲಿ ಸೋರೆಕಾಯಿ ಪಲ್ಯದ ಊಟ ಮಾಡಿ ಗುನ­ಗರ ಮನೆಗೆ ದಿಬ್ಬಣ ಹಿಂತಿರುಗುತ್ತದೆ. ಅಲ್ಲಿಂದ ಗ್ರಾಮ­ದೇವರ ದೇವಸ್ಥಾನದ ಕಡೆ ದಿಬ್ಬಣ ಸಾಗುತ್ತದೆ. ಆಗಿನ್ನೂ ನಸುಕಿನ ಕತ್ತಲು ಪೂರ್ಣವಾಗಿ ಜಾರಿರುವುದಿಲ್ಲ. ಮಹಿಳೆ­ಯರು ‘ತೈ ತೈ ತೋ... ಸೋಮನ ಹುಡುಗ ಮದು­ಮಗ, ಸುಕ್ರಿಯ ಮಗಳು ಮದುವಳ್ತಿ...’ ಎಂದು ಹಾಡುತ್ತ ಹೋಗುತ್ತಾರೆ. ಹಾಡಿಗೆ ತಕ್ಕಂತೆ ಗೆರಸಿ, ತಟ್ಟೆಯಿಂದ ನಾದ ಮೊಳಗುತ್ತದೆ.

ನವ ಜೋಡಿಯನ್ನು ದೇವರ ಎದುರು ನಿಲ್ಲಿಸಿ ಇಬ್ಬರ ನಡುವೆ ಪರದೆ ಹಿಡಿಯಲಾಗುತ್ತದೆ. ಗುನಗರು ಹಿಂದೂ ಸಂಪ್ರದಾಯದಂತೆ ಮದುವೆ ಶಾಸ್ತ್ರ ನಡೆಸುತ್ತಾರೆ. ಸೂರ್ಯೋದಯದ ಗೋಧೂಳಿ ಲಗ್ನದ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ನೆರವೇರುತ್ತದೆ. ವಧು–ವರರ ಅಕ್ಕ, ಭಾವಂದಿರು ಯಜಮಾನಿಕೆ ವಹಿಸಿಕೊಂಡು ಶಾಸ್ತ್ರ ನೆರವೇರಿ­ಸುವುದು ಈ ಮದುವೆಯ ಪದ್ಧತಿ. ‘ತೈ ತೈ ತೋ... ಬೆಳಗಾಯ್ತೋ... ಮದುವೆ ಎಲ್ಲಾ ಮುಗಿದೋಯ್ತೋ...’ ಎಂದು ಮಹಿಳೆಯರು ಹಾಡಿ ಕುಣಿದ ನಂತರ ದೇವರ ಪೂಜೆ ಪ್ರಾರಂಭವಾಗುತ್ತದೆ. ಯುವಕರ ತಂಡದಿಂದ ವಾದ್ಯಗಳು ಮೊಳಗುತ್ತವೆ. ಹಿಂದಿನ ವರ್ಷ ಮದುವೆಯಾದವರು ಈ ವಿವಾಹ ಕಾರ್ಯದಲ್ಲಿ ಪಾಲ್ಗೊಂಡು ಹಿರಿಯರ ಆಶೀರ್ವಾದ ಪಡೆಯುತ್ತಾರೆ.

ಮದುವೆಗೆ ಬಂದವರೆಲ್ಲ ನೂತನ ದಂಪತಿಗೆ ಮಾವಿನ ಎಲೆ, ಕಲ್ಲು, ಕಾಗದದ ಪೊಟ್ಟಣ, ಹಳೆಯ ಪಾತ್ರೆ, ಒಡೆದ ಕೊಡ, ಹರಕು ಚೀಲದಂತಹ ವಸ್ತುಗಳನ್ನು ಉಡುಗೊರೆ ನೀಡಿ ತಮಾಷೆ ಮಾಡುತ್ತಾರೆ. ಬಳಿಕ ಎಲ್ಲರಿಗೂ ಅವಲಕ್ಕಿ ಹಂಚಲಾಗುತ್ತದೆ. ಇದನ್ನೇ ಮದುವೆಯ ಭೋಜನ ಎಂದುಕೊಳ್ಳಬೇಕು.

ಕೊನೆಯಲ್ಲಿ ದೇವಸ್ಥಾನದ ಗುನಗ, ನೂತನ ದಂಪತಿಗಳ ಬಾಸಿಂಗ ಬಿಚ್ಚಿ ಮದುವೆ ಮುಕ್ತಾಯ ಮಾಡುತ್ತಾರೆ. ಮದುವೆಗೆ ಬಂದವರು ಮನೆಗೆ ಮರಳುವಾಗ ಕಡ್ಡಾಯವಾಗಿ ಅಗ್ನಿಯನ್ನು ದಾಟಿ ಹಿಂತಿರುಗಿ ನೋಡದೇ ಹೋಗಬೇಕು, ಇಲ್ಲವಾದರೆ ಶಾಪ ಅಂಟುತ್ತದೆ ಎನ್ನುವುದು ನಂಬಿಕೆ. ಈ ಮದುವೆ ಹಬ್ಬಕ್ಕಷ್ಟೇ ಸೀಮಿತವಾಗಿದ್ದು, ಇದರ ನಂತರವೇ ಊರಿನಲ್ಲಿ ಮಂಗಳಕಾರ್ಯಗಳು ಪ್ರಾರಂಭವಾಗುತ್ತವೆ ಎನ್ನುವುದು ಹಾಲಕ್ಕಿ ಸಮುದಾಯದಲ್ಲಿರುವ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT