ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೀರ ಬಯಲು ಒಡೆಯ

ಕವಿತೆ
Last Updated 6 ಜುಲೈ 2013, 19:59 IST
ಅಕ್ಷರ ಗಾತ್ರ

ಮುಳ್ಳಯ್ಯನಗಿರಿ ಗಜಗರ್ಭದಲ್ಲುಟ್ಟಿ
ಗೊರೂರು ಹೇಮೆಯ
ಒಡಲು ಸೇರುವ ಯಗಚಿ
ಹಾಲುವಾಗಿಲು ಒಡ್ಡಲ್ಲಿ
ದಣಿವಾರಿಸಿ
ನೀರು ಕುಡಿಸುತ್ತದೆ
ಹಾಸನ ಪಟ್ಟಣಕ್ಕೆ

ಈ ಹಿನ್ನೀರು ಬಯಲು ಒಡೆಯ
ನನ್ನಜ್ಜ ಕೆಂಪಯ್ಯ
ಕೂಡು ಕುಟುಂಬ ಕೂಡಿ
ಹೀರೆ, ಹಾಗಲ, ಪಡುವಲ
ತೊಂಡೆ-ಬೆಂಡೆ, ದಂಡು-ದಿಂಡಿ ಬೆಳೆದು
ಬಲ ಪಕ್ಕೆ ಹಾಸನಕ್ಕೆ
ಜೋಡೆತ್ತು ಗಾಡಿ ಸಾಗಿಸಿ
ಕಾಂಚಾಣ ಕೂಡಿ
ಸೀಮೆಗೆ ಪಂಪ್ಸೆಟ್ಟಿಟ್ಟಿ
ಬೆಳೆಮೇಲೆ ಬೆಳೆ ಬೆಳೆದು
ಗಗನಚುಂಬಿ ಅಡಿಕೆ
ತೆಂಗು ಬಾಳೆ ತೋಟ ಮಾಡಿ
ಶ್ವೇತಧಾರಿ ಗರಿಗೆದರು ನವಿಲಾಗಿ
ನೊರನೊರ ಜೋಡುಮೆಟ್ಟಿ
ಫ್ರೀಡಮ್ ಫೈಟಿಗೆ ಧುಮುಕಿ
ಜೈಲು ಸೇರಿದ ನೀನು, ಪದ್ಮಾಸನ ಹಾಕಿ
ಸ್ವಾಮಿದೇವನೆ ಲೋಕಪಾಲನೆ ಪಾಡಿ
ಬೆವರು ಬರಿಸಿದ್ದೆಯಂತೆ ಜೈಲಿಗನಿಗೆ

ಘನಕುಳುವಾಡಿ ತೆಂಡೆ
ಮೂರು ತಾಯಕಂದ ನನ್ನಪ್ಪನಿಗೆ
ಡಜನ್ ಸರದಿಯ ನಿನ್ನ ಕೊನೆಕರುಳು
ನನ್ನವ್ವನನ್ನು ಧಾರೆ ಎರೆದು
ಅಳಿಯನ ಗುಣಕ್ಕೆ ನಭಮೆಚ್ಚಿ
ನಿನ್ನ ದಾರಿ ತುಳಿಯದ
ಪುಂಡು ಗಂಡುಮಕ್ಕಳ
ಉಗಿದು ಉಪ್ಪಾಕುತ್ತಿದ್ದೆಯಂತೆ

ಅದು ಸರಿ; ಸೆಂಚುರಿ ಮೇಲೆ
ಹತ್ತು ಬಾರಿಸಿದ ನೀನು
ತೊಂಬತ್ತರ ಗಡಿ ನನ್ನವ್ವನನ್ನು
ನಿನ್ನಗೂಡಿಗೆ ಕರೆದುಕೊಂಡೆಯಲ್ಲಾ
ಇದು: ಸುತರಾಂ ಒಪ್ಪುವ ವಿಚಾರವಲ್ಲ ಬಿಡು.

ನನ್ನವ್ವನೂ ಅಷ್ಟೆ
ನಿನ್ನ ಫ್ರೀಡಮ್ ಫೈಟಿನ
ಗಾಂಧಿ ಸೆಳೆತದ ಚಂಡಿ ಹಟ
ನಾನು ಕೊಡುವ ಯುಜಿಸಿ ಪಗಾರದ
ಕೋಸು ಕಾಸಿಗೂ ನೆಚ್ಚದೆ
ಗೂಡಂಗಡಿ ಗೂಡುಕಟ್ಟಿ ಕಾಸುಕೂಡಿ
ನನ್ನ ದುಡ್ಡಲ್ಲೆ ನನ್ನ ತಿಥಿ ರವಾನಿಸಿ
ನಾನು ಎರಡು ಕಿವಿ ಹಿಡಿದು
ಬಸ್ಕಿ ಹೊಡೆದರೂ
ಬೆಂದ ಎದೆಯ ಗೂಡೊಳಗೆ
ಏನೋ ಹೇಳಬಾರದ್ದನ್ನು ಕಾಪಿಟ್ಟು
ಸಲ್ಲೇಖನ ವ್ರತ ಮಾಡಿ
ತಬ್ಬಲಿ ಮಾಡುವುದೇ ನನ್ನ
ಇದು ನ್ಯಾಯವಲ್ಲ ಬಿಡು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT