ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶೆ: ವಸ್ತುನಿಷ್ಠ ಅಮಾನುಷ ಅನುಭವ ಕಥನ

 ರಾಜೇಂದ್ರ ಚೆನ್ನಿ
Published 3 ಮಾರ್ಚ್ 2024, 0:01 IST
Last Updated 3 ಮಾರ್ಚ್ 2024, 0:01 IST
ಅಕ್ಷರ ಗಾತ್ರ

ಶ್ರೀಧರ ಬಳಗಾರರು ದಶಕಗಳಿಂದ ತಮ್ಮದೇ ಕಥಾ ಜಗತ್ತನ್ನು ನಿರ್ಮಿಸಿಕೊಂಡಿದ್ದಾರೆ. ಒಂದು ಪ್ರದೇಶದ ದಟ್ಟವಾದ ವಿವರಗಳನ್ನು ಮಾತ್ರವಲ್ಲ, ಆ ಪರಿಸರಕ್ಕೆ ಅಂಟಿಕೊಂಡಿರುವ ಮನುಷ್ಯರ ವಿಶಿಷ್ಟವಾದ ದೈನಂದಿನ ಜೀವನವನ್ನು ಕತೆಗಳ ವಸ್ತುಗಳನ್ನಾಗಿ ಮಾಡಿಕೊಂಡಿದ್ದಾರೆ. ಈ ವ್ಯಕ್ತಿಗಳು ಹಾಗೂ ಪರಿಸರದ ನಡುವಿನ ಅವಿನಾ ಸಂಬಂಧದ ಆಚೆಗೆ ಅವರಿಗೆ ಅಸ್ತಿತ್ವವೇ ಇಲ್ಲ. ಕೆಲವೊಮ್ಮೆ ಯಾವುದೋ ಒಂದು ಕಾಲದ ಚೌಕಟ್ಟಿನಲ್ಲಿ ಇವರ ಬದುಕು ಸ್ಥಗಿತವಾಗಿಬಿಟ್ಟಂತೆ ಕಾಣುತ್ತದೆ. ಹಳೆಯ ಫೋಟೋ ನೋಡಿದಾಗ ಅನ್ನಿಸುವಂತೆ. ಈ ಸಂಕಲನದ ಕತೆಗಳಲ್ಲಂತೂ ವಾಸಿಸುವ ಮನೆಗಳೇ ಪಳೆಯುಳಿಕೆಗಳಂತಿವೆ. ಅನೇಕ ಮನೆಗಳು ಅವಶೇಷಗಳಂತೆ ಅಲೌಕಿಕ ಸಂಗತಿಗಳಿಗೆ ನೆಲೆಯಾಗಿವೆ. ಭಯವೇ ಇಲ್ಲಿಯ ಬಹುಪಾಲು ಕತೆಗಳ ಸ್ಥಾಯೀ ಅನುಭವವಾಗಿದೆ. ‘ಉಪಲಬ್ಧ’ ಕತೆಯ ನಚ್ಚಣ್ಣನಿಗೆ ತಾನು ಯಾವ ಮನೆಗೆ ಸೇರಿದವನು ಎನ್ನುವುದೇ ಸಂದಿಗ್ಧವಾಗಿದೆ. ಅವನಿಗಿರುವ ಆಸ್ತಿಗಾಗಿ ಅನೇಕರು ಅವನ ಮೇಲೆ ತಮ್ಮ ಹಕ್ಕು ಚಲಾಯಿಸುತ್ತಾರೆ. ತಾನು ಸತ್ತಮೇಲೆ ತನ್ನ ಆಸ್ತಿ ಮಾರಿ ಹಣವನ್ನು ಬ್ಯಾಂಕಿನಲ್ಲಿಟ್ಟು ತಾನು ವಾಸಿಸುತ್ತಿದ್ದ ಕುಟೀರದಲ್ಲಿ ಸದಾ ದೀಪ ಉರಿಯಲು ವಿನಿಯೋಗಿಸತಕ್ಕದ್ದು ಎಂದು ಉಯಿಲು ಬರೆದ ಮೇಲೆ ಬಿಡುಗಡೆ ಸಿಕ್ಕುತ್ತದೆ.

ಎಂಬತ್ತರ ಆಸುಪಾಸಿನ ಕೋದಂಡ ಹೆಂಡತಿ ತೀರಿಹೋದ ಮೇಲೆ ಏಕಾಂಗಿಯಾಗಿದ್ದಾನೆ. ಕಠೋರ ನಡುವಳಿಕೆಯಿಂದಾಗಿ ಮಕ್ಕಳು ದೂರವಾಗಿದ್ದಾರೆ. ಬದುಕಿದ್ದಾಗ ಮೂಕಾಂಬೆಯನ್ನು ಹಂಗಿಸಿ ದೂರ ಇಟ್ಟವನು ಈಗ ಮನೆಗೆಯಲ್ಲಿ ಅವಳನ್ನು ಅನುಕರಿಸಿ ಅವಳಂತೆ ಆಗತೊಡಗಿದ್ದಾನೆ. ಕತೆಯ ಅನಿರೀಕ್ಷಿತ ಅಂತ್ಯದಲ್ಲಿ ಅವಳ ಆಭರಣಗಳನ್ನು ತೊಟ್ಟುಕೊಂಡು ಕನ್ನಡಿಯಲ್ಲಿ ನೋಡಿಕೊಳ್ಳುವ ವಿದ್ಯಮಾನವಿದೆ. ಬದುಕಿದ್ದಾಗ ಮೂಕಾಂಬೆಗೆ ಆಗುವ ಅಲೌಕಿಕ ಅನುಭವವು ಕತೆಯ ಸಶಕ್ತ ಭಾಗವಾಗಿದೆ. ಹಾವಿನ ಶಿರಮಣಿಯಿಂದ ವಜ್ರದಂತೆ ಉರಿಯುವ ಬೆಳಕನ್ನು ಅವಳು ಕಾಣುತ್ತಾಳೆ. ಮುದಿಗಂಡನಿಂದ ಭಾವನಾತ್ಮಕವಾಗಿ ದೂರವಿದ್ದ ಅವಳಿಗೆ ಮಕ್ಕಳಿಗೂ ಒಳ್ಳೆಯದನ್ನು ಮಾಡಲಾಗುವುದಿಲ್ಲ. ಆದರೆ ಕೋದಂಡನಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಆವರಿಸಿಕೊಳ್ಳುತ್ತಾಳೆ. ಬಳಗಾರರ ಇಲ್ಲಿಯ ಕತೆಗಳ ವಿದ್ಯಮಾನಗಳು ಸಂದಿಗ್ಧವಾಗಿಯೇ ಉಳಿದು ಕೆಣಕುತ್ತವೆ. ‘ಅನುಕ್ತ’ ಇದೇ ಮಾದರಿಯ ಪ್ರಭಾವಿ ಕತೆಯಾಗಿದೆ. ಮಾಚಣ್ಣ ತನ್ನ ಹೆಂಡತಿಯನ್ನು ಅನಂತಪ್ಪನ ಮಾತು ಕೇಳಿ ದೇವತೆ ಎಂದುಕೊಂಡು ಅನೈತಿಕ ಸಂಬಂಧ ಬೆಳೆಯಲು ಕಾರಣನಾಗುತ್ತಾನೆ. ಅವಳ ಆಸೆಗಳನ್ನು ಪೂರೈಸಲು ತನಗೆ ಆಗುತ್ತಿರಲಿಲ್ಲವೆಂದು ಗೊತ್ತು. ಸಾಯುವ ಮೊದಲು ಏನು ಹೇಳಬಹುದು, ಚಿನ್ನದ ನಾಣ್ಯಗಳ ಗುಟ್ಟನ್ನು ಹೇಳಬಹುದು ಎಂದು ಕಾದಿದ್ದವರಿಗೆ ನಿರಾಸೆಗೊಳಿಸಿ ಸತ್ತು ಹೋಗುತ್ತಾನೆ. ಅಥವಾ ಏನೂ ಹೇಳಬಾರದೆಂದು ನಿರ್ಧರಿಸಿ ಮಾತು ನಿಂತು ಹೋದಂತೆ ನಟಿಸಿದನೆ? ಉಳಿಯುವುದು ಸಂದಿಗ್ಧವೇ. ಬಳಗಾರರ ಕಥನಗಳು ಈ ಸಂದಿಗ್ಧಗಳ ಶಕ್ತಿಶಾಲಿ ನಿರೂಪಣೆಗಳಾಗಿವೆ. ಅಂತಿಮವಾಗಿ ಮನುಷ್ಯರ ಅಸ್ತಿತ್ವದ ಬಗೆಗೆ ಸತ್ಯವೆಂಬುದು ಕೈಗೆ ಸಿಕ್ಕುವುದೇ ಇಲ್ಲ. ಓದಿಗೆ ದಕ್ಕುವುದೆಂದರೆ ಮಾಚಣ್ಣನಂಥ ಜೀವಿಗಳ ದುರಂತ ಮಾತ್ರ. ಈ ಕತೆಯಲ್ಲಿಯೂ ಭಯ, ದುಃಸ್ವಪ್ನಗಳೇ ಸ್ಥಾಯಿಯಾಗಿವೆ. ‘ಲೋಪಸಂಧಿ’ ಕತೆ ವಾಚ್ಯವಾಗದಂತೆ ಸೂಕ್ಷ್ಮವಾಗಿ ಧ್ವನ್ಯಾರ್ಥಗಳನ್ನು ಬಳಸುವ ಕಲೆಯ ದ್ಯೋತಕವಾಗಿದೆ. 58ರ ಪ್ರಾಯದ ಹಬ್ಬುರಾಯರು ಲಕ್ವಾ ಹೊಡೆದು ಆಸ್ಪತ್ರೆಗೆ ಸೇರಿದಾಗ ಅಲ್ಲಿ ಸಫಾಯಿ ನೌಕರಳಂತೆ ದುಡಿಯುವ ಸುಂದರಿ ಸಾವನಿ ಉತ್ತಮ ಜಾತಿಯ ನತದೃಷ್ಟೆಯೆಂದು ಭಾವಿಸಿ ಅವಳ ಸಾಮೀಪ್ಯವನ್ನು ಬಯಸತೊಡುತ್ತಾರೆ. ವಾಸ್ತವವು ಬೇರೆ ಎಂದು ಗೊತ್ತಾದಾಗ ಅವರಲ್ಲಾಗುವ ಬದಲಾವಣೆಯೇ ಕತೆಯ ವಸ್ತುವಾಗಿದೆ. ಕತೆಯು ನಿರೀಕ್ಷಿತ ಅಂತ್ಯದಲ್ಲೂ ನಿರೂಪಣೆಯ ಸೂಕ್ಷ್ಮತೆಯಿಂದಾಗಿ ನೆನಪಿನಲ್ಲಿ ಉಳಿಯುತ್ತದೆ.

‘ಮಾಲತಿ ಮಾತಾಡಿದಳು’ ಕತೆಯಲ್ಲಿ ಸ್ವಾರ್ಥ, ಲೈಂಗಿಕ ಕಿರುಕುಳ, ಭಯಗಳಿಂದಾಗಿ ಅಸಹಾಯಕಳಾದ ಮಾಲತಿ ಎಲ್ಲವನ್ನೂ ಎದುರಿಸುವ ಆತ್ಮವಿಶ್ವಾಸವನ್ನು ಪಡೆಯುತಾಳೆ. ಸಾವಿನ ಮೊದಲು ಗಂಡ ಮನೆಯನ್ನು ಬಿಟ್ಟುಹೋಗೆಂದು ಹೇಳಿದ್ದನ್ನೂ ಧಿಕ್ಕರಿಸಿ ಇಲ್ಲಿಯೇ ಇರುತ್ತಾಳೆ. ‘ನಾಗಬಂಧ’ ಈ ಸಂಗ್ರಹದ ಅತ್ಯಂತ ಸಂಕೀರ್ಣವಾದ ಕತೆಯಾಗಿದೆ. ಸಣ್ಣುಭಟ್ಟರೂ ನಾಗಬಂಧದಲ್ಲಿ ಸಿಲುಕಿದ್ದಾರೆ. ಕತೆಯ ಕೊನೆಗೆ ಅವರು ಪಡೆಯುವ ಬಿಡುಗಡೆ ಎಂದಿನಂತೆ ಅನಿರೀಕ್ಷಿತವಾಗಿದೆ, ಸಂದಿಗ್ಧವಾಗಿದೆ.

ಒಟ್ಟಾರೆ ಈ ಸಂಗ್ರಹದ ಕತೆಗಳು ಮನುಷ್ಯರ ಬದುಕಿನ ಬಗ್ಗೆ ಆಶಾವಾದಿಯಾಗಿಲ್ಲ. ಅಥವಾ ನಿಷ್ಠುರವಾದ ವಸ್ತುನಿಷ್ಠತೆ ಇವುಗಳ ಹಿಂದೆ ದುಡಿದಿದೆ. ಅರ್ಥವಾಗದ ನೋವುಗಳು, ಭಯ, ಅರಿವನ್ನು ಮೀರಿದ ವಿದ್ಯಮಾನಗಳೆಲ್ಲವೂ ಮನುಷ್ಯರನ್ನು ಹಿಂಸಿಸುತ್ತವೆ. ಹಾಗೆ ಹುಡುಕಿದರೆ ಎಲ್ಲದಕ್ಕೂ ಕಾರ್ಯಕಾರಣ ಸಂಬಂಧಗಳು ಗೋಚರಿಸಬಹುದು. ಬದುಕುವವರಿಗೆ ಇದೆಲ್ಲಾ ಹೊಳೆಯದು. ಕತೆಗಳು ವ್ಯಾಖ್ಯಾನದ ಎರಡು ಪಾತಳಿಗಳನ್ನು ನಮ್ಮೆದುರಿಗೆ ಇಡುತ್ತವೆ. ಒಂದು, ಅನುಭವವನ್ನು ಸ್ವತಃ ಅನುಭವಿಸುತ್ತಿರುವವರದು; ಇನ್ನೊಂದು ಅನುಭವಿಸುತ್ತಿರುವ ಅವರನ್ನು ಮೀರಿದ ಇನ್ನೊಂದು ದೃಷ್ಟಿಕೋನದ ವ್ಯಾಖ್ಯಾನ. ಬಳಗಾರರ ಸಾಧನೆಯೆಂದರೆ ಇವೆರಡೂ ಪಾತಳಿಗಳನ್ನು ಸಮರ್ಥವಾಗಿ ನಿರ್ವಹಿಸುವುದು. ‘ಅನುಕ್ತ’ ಕತೆಯಲ್ಲಿ ಮಾಚಣ್ಣ ಈ ಎರಡೂ ಪಾತಳಿಗಳಲ್ಲಿತ್ತಾನೆ. ಮನುಷ್ಯರನ್ನೇ ತಿನ್ನುವ ಮರಗಳಿರುವ ಬಗ್ಗೆ ಅವನಿಗೆ ಗೊತ್ತು. ಇವುಗಳಿಗೆ ಅನಂತಪ್ಪ ಬಲಿಯಾದನೇ ಎಂದು ಗುಮಾನಿಯಿದೆ. ಅಪೂರ್ವ ಸುಂದರಿಯಾದ ಮಾಚಣ್ಣನ ಹೆಂಡತಿ ದೇವತೆಯೆ? ಹಾದರಕ್ಕೆ ಬಲಿ ಬಿದ್ದ ಹೆಣ್ಣೆ? ಚಿನ್ನದ ನಾಣ್ಯಗಳಿಗಾಗಿ ಜಗಳ ಮಾಡುವ ಹೆಣ್ಣೆ? ಬಳಗಾರರ ಲೋಕದೃಷ್ಟಿಯಲ್ಲಿ ಇವೆಲ್ಲವೂ ನಿಜ.

ಬಳಗಾರರು ಪ್ರಯೋಗಶೀಲ ಕತೆಗಾರರು. ವಾಸ್ತವವಾದಿ ಕತೆಗಳಲ್ಲಿ ಅತಿವಾಸ್ತವಿಕತೆಯನ್ನು ಬಳಸಬಲ್ಲರು. ನಿರಾಲಂಕರವಾದ ಶೈಲಿಯಲ್ಲಿ ಗಹನವಾದುದನ್ನು ಹೇಳಬಲ್ಲರು. ಈ ಸಂಕಲನದಲ್ಲಿ ‘ಹದ’ ಸರಳವಾದ ನಿರೂಪಣೆಯಲ್ಲಿ ಸಂಕೀರ್ಣವಾದ ವಿಷಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ಬೆಳೆ ಕಟಾವಿನ ‘ಹತ್ಯಾರು’ಗಳಿಗೆ ಹದಬರುವ ಹಾಗೆ ಮಾಡಬಲ್ಲವನು ಮಂಜಪ್ಪಾಚಾರಿ ಮಾತ್ರ. ಸಾವಿರಾರು ವರ್ಷಗಳಿಂದ ಈ ನೈಪುಣ್ಯವನ್ನು ಕಾಪಾಡಿಕೊಂಡು ಬಂದ ಸಮುದಾಯದ ಪ್ರತಿನಿಧಿ. ಅವನ ತಂದೆ ತಯ್ಯಾರಿಸುತ್ತಿದ್ದ ಬೀಗಗಳು ಅದ್ಭುತ ತಂತ್ರಜ್ಞಾನದ ದೇಸೀ ಉತ್ಪನ್ನಗಳಾಗಿದ್ದವು. ಆದರೆ ಬೀಗಗಳನ್ನು ಉತ್ಪಾದಿಸುವ ಕಾರ್ಖಾನೆಗಳು ಬಂದ ಮೇಲೆ ಈ ಕೌಶಲ್ಯ ನಗಣ್ಯವಾಯಿತು. ಆದರೆ ಜನರು ಈಗಲೂ ಹದಕ್ಕೆ ಮಂಜಪ್ಪಾಚಾರಿಯನ್ನೇ ಬಯಸುತ್ತಾರೆ. ಅವನು ಊರನ್ನು ಬಿಟ್ಟು ಕಣ್ಮರೆಯಾಗುವುದರ ಹಿಂದೆ ಒಂದು ದುರಂತವಿದೆ. ನೆರೆಯಲ್ಲಿ ಉಳಿಸಿದ ಅವನನ್ನು ಊರಿನ ಜನರು ಮರೆತದಕ್ಕೆ ಖೇದವಿದೆ. ಎಲ್ಲರನ್ನೂ ಉಳಿಸಿದ ಮಂಜಪ್ಪಾಚಾರಿ ನೆರೆ ಇಳಿವವರೆಗೆ ನಾಯಿಯೊಂದರ ಸಂಗಾತಿತನದಲ್ಲಿರುತ್ತಾನೆ. ಬೇಸರಗೊಂಡು ಊರನ್ನೇ ಬಿಟ್ಟು ಹೋಗುತ್ತಾನೆ. ಕತೆಯ ನಿರೂಪಕನು ಅವನನ್ನು ವಾಪಸ್ಸು ಬಂದು ಹತ್ಯಾರುಗಳನ್ನು ಹದಗೊಳಿಸಲು ಒಪ್ಪಿಸುತ್ತಾನೆ. ಈ ಕತೆಯು ಆಧುನೀಕರಣದಿಂದ ಅನಾಥರಾದ ಕಸುಬುಗಾರರ ಚರಿತ್ರೆಯಾಗಿದೆ; ಆಧುನಿಕತೆಯ ವಿಮರ್ಶೆಯಾಗಿದೆ. ಬಳಗಾರರು ‘ಅಭಿವೃದ್ಧಿ’, ‘ಆಧುನಿಕತೆ’, ಮಾರುಕಟ್ಟೆಗಳು ನೆಲ ಸಮುದಾಯಗಳನ್ನು ನಾಶಮಾಡುತ್ತಿರುವ ಬಗ್ಗೆ ಬರೆಯುತ್ತಿದ್ದಾರೆ.

ಅವರು ಉತ್ತರ ಕನ್ನಡದ ಪ್ರಾದೇಶಿಕತೆಗೆ ಬಂದಿರುವ ಅವಕಾಶ ಹಾಗೂ ದುರಂತಗಳ ಚರಿತ್ರೆಕಾರರಾಗಿ ಮುಖ್ಯವಾಗಿದ್ದಾರೆ. ಪ್ರಾದೇಶಿಕತೆಯನ್ನು ವಿಜೃಂಭಿಸುವ ಬದಲಾಗಿ ಬದಲಾವಣೆ ಬಗ್ಗೆ ವಸ್ತುನಿಷ್ಠ ವಿಮರ್ಶೆ ಮಾಡಿದ್ದಾರೆ. ಬಳಗಾರರ ಒಟ್ಟು ಬರಹವು ಕಣ್ಣಿಗೆ ಎದ್ದು ಕಾಣುವ ಆದರೆ ಸಮುದಾಯದ ಆಂತರ್ಯವನ್ನೇ ಬದಲಾಯಿಸುವ ವಿದ್ಯಮಾನಗಳ ಬಗ್ಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT