ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ರಂಗನಟಿಯರ ದಾರುಣ ಬದುಕಿಗೆ ಕನ್ನಡಿ

Published 7 ಜನವರಿ 2024, 0:26 IST
Last Updated 7 ಜನವರಿ 2024, 0:26 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಜನಪದ ರಂಗಭೂಮಿಯನ್ನು ಹೊರತುಪಡಿಸಿ ‘ಹವ್ಯಾಸಕ್ಕೆ’ ಹಳ್ಳಿಗಳಲ್ಲಿ ಹಬ್ಬ, ಜಾತ್ರೆಗಳಿಗೆ ಸಾಮಾಜಿಕ ನಾಟಕ ಆಡುವ ಪರಂಪರೆ ಇದೆ. ಹೀಗೆ ಪುರುಷರ ನಾಟಕ ಆಡುವ ಹವ್ಯಾಸಕ್ಕೆ ನಟನೆಯನ್ನೇ ವೃತ್ತಿಯನ್ನಾಗಿಸಿಕೊಂಡ ಮಹಿಳೆಯರೂ ಇದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ಇಂತಹ ನಟಿಯರ ತವರೂರು. ಆದರೆ ಈ ನಟಿಯರನ್ನು ಸಮಾಜ ಕಲಾವಿದೆಯರು ಎನ್ನುವ ಗೌರವಕ್ಕಿಂತ ಅವಮಾನಕಾರಿ ನುಡಿಗಟ್ಟುಗಳಲ್ಲಿ ಗುರುತಿಸುವುದೇ ಹೆಚ್ಚು. ಹೀಗಾಗಿ ಇವರನ್ನು ಕಲಾವಿದೆಯರನ್ನಾಗಿ ಸರ್ಕಾರ ಗುರುತಿಸಿದ್ದು ತುಂಬಾ ಕಡಿಮೆ. ಇಂತಹ ಅಲಕ್ಷಿತ ನಟಿಯರ ಪುಟ್ಟ ಜೀವನ ಚರಿತ್ರೆಗಳನ್ನು ಪತ್ರಕರ್ತ ಭೀಮಣ್ಣ ಗಜಾಪುರ ‘ಬಣ್ಣ ಮಾಸಿದ ಬದುಕು’ ಕೃತಿಯಲ್ಲಿ ದಾಖಲಿಸಿದ್ದಾರೆ.

ಸುಜಾತ ಅಕ್ಕಿ ಅವರ ‘ಬಳ್ಳಾರಿ ಜಿಲ್ಲೆಯ ರಂಗನಟಿಯರು’ ಸಂಶೋಧನೆಯಲ್ಲಿ ಕೂಡ್ಲಿಗಿಯ ಆಯ್ದ ನಟಿಯರ ಪರಿಚಯ ಬಿಟ್ಟರೆ, ನಿರ್ದಿಷ್ಟವಾಗಿ ಕೂಡ್ಲಿಗಿ ಪರಿಸರದ ರಂಗನಟಿಯರ ಕಲೆ ಮತ್ತು ಬದುಕನ್ನು ಆಧರಿಸಿ ಬರೆದ ಮಹತ್ವದ ದಾಖಲೆ ಇದು.

ಈ ಕೃತಿಯಲ್ಲಿ 40 ರಂಗನಟಿಯರ ಸಂಕ್ಷಿಪ್ತ ಪರಿಚಯವಿದೆ. ಉಳಿದ 40 ನಟಿಯರ ಹೆಸರುಗಳಿವೆ. ಕಾರಣ, ಇವರು ತಮ್ಮ ಪರಿಚಯ ಹೇಳಿಕೊಳ್ಳಲು ಹಿಂಜರಿದಿರುವುದು. ನಟಿಯರ ಪರಿಚಯದಲ್ಲಿ ಗಮನಸೆಳೆಯುವುದು, ಅವರು ಅಭಿನಯಿಸಿದ ನಾಟಕಗಳ ಸಂಖ್ಯೆ ಕನಿಷ್ಠ ಮುನ್ನೂರರಿಂದ 2 ಸಾವಿರ ಪ್ರದರ್ಶನ ದಾಟುತ್ತದೆನ್ನುವುದು. ಇದರಲ್ಲಿನ ಬಹುತೇಕ ನಟಿಯರು ಕೆಳಸ್ತರದ ಪರಿಶಿಷ್ಟ ಜಾತಿ/ಪಂಗಡ ಹಿಂದುಳಿದ ವರ್ಗಗಳಿಗೆ ಸೇರಿದವರು. ಕೆಲವರು ದೇವದಾಸಿಯರು. ಓದುವ ವಯಸ್ಸಿನಲ್ಲಿಯೇ ನಟಿಯರಾಗುವುದರಿಂದ ರಂಗಭೂಮಿ ಪಾಠಶಾಲೆಯಾಗಿ, ಇವರ ಶಾಲಾ ವಿದ್ಯಾಭ್ಯಾಸ ಕಡಿಮೆ. ನಾಟಕಕ್ಕೆ ಸಿಗುವ ಸಂಭಾವನೆ ದಿನದ ಬದುಕಿಗೆ ಸಾಕಾಗಿ ಉಳಿತಾಯ ಆಗುವುದಿಲ್ಲ. ವಯಸ್ಸಾದಂತೆ ನಾಟಕಗಳಿಗೆ ಬೇಡಿಕೆ ಕುಗ್ಗುತ್ತಲೂ ಅಕಾಲಿಕ ಮುಪ್ಪು ಆವರಿಸಿ ಬದುಕು ದುಸ್ತರವಾಗುತ್ತದೆ. ಕೆಲವರಿಗೆ ಮದುವೆಯೂ ಆಗದೆ ಮಾತೃಪ್ರಧಾನ ಕುಟುಂಬದ ಭಾರ ಹೊರುತ್ತಾರೆ. ಮುಂದುವರಿದು ಈ ನಟಿಯರ ಮಕ್ಕಳ ಶಿಕ್ಷಣ/ಉದ್ಯೋಗದ ಮಟ್ಟ ಕೂಡ ಕೆಳಸ್ತರದ್ದಾಗಿದೆ. ಅಂತಹ ಕಷ್ಟದ ಬದುಕನ್ನೇ ಲೇಖಕರು ‘ಬಣ್ಣ ಮಾಸಿದ ಬದುಕು’ ಎಂದಿದ್ದಾರೆ. ಮುನ್ನುಡಿಯಲ್ಲಿ ಪತ್ರಕರ್ತೆ ಮಂಜುಶ್ರೀ ಕಡಕೋಳ ರಂಗಭೂಮಿಯಲ್ಲಿ ನಟಿಯರ ಬದುಕಿನ ಚಾರಿತ್ರಿಕ ಪಲ್ಲಟಗಳನ್ನು ಗುರುತಿಸಿದ್ದಾರೆ.

ಈ ಸಾಮಾಜಿಕ ನಾಟಕಗಳ ಒಂದೆಳೆ ಊರಿನ ಗೌಡ ಅಥವಾ ಶ್ರೀಮಂತರ ದಬ್ಬಾಳಿಕೆ-ಒಳ್ಳೆಯ ಜನರಿಗೆ ಒದಗುವ ಕಷ್ಟದ ಸರಮಾಲೆ, ಕೆಡುಕಿಗೆ ಶಿಕ್ಷೆ, ಒಳಿತಿಗೆ ರಕ್ಷೆ ಎನ್ನುವ ಮುಕ್ತಾಯ. ಇಲ್ಲಿನ ಬಹುಪಾಲು ನಟಿಯರು ಸಾಮಾಜಿಕ ನಾಟಕಗಳಿಗೆ ಸೀಮಿತವಾಗದೆ ಪೌರಾಣಿಕ-ಐತಿಹಾಸಿಕ ಬಯಲಾಟಗಳಲ್ಲಿ ನಟಿಸಿರುವರು. ಸಾಮಾಜಿಕ ನಾಟಕಗಳಿಗೆ ಸಿಗದ ಗೌರವ ಬಯಲಾಟಗಳ ಅಭಿನಯಕ್ಕೆ ಸಿಕ್ಕಿರುವುದು ಅಚ್ಚರಿಯ ಸಂಗತಿ. ಬಯಲಾಟಗಳಲ್ಲಿ ಜನರ ಕಣ್ಣಲ್ಲಿ ದೇವರುಗಳಾದ ಅನೇಕ ಪೌರಾಣಿಕ ಪಾತ್ರಗಳು ಜೀವತಳೆದು ರಂಗಕ್ಕೆ ಬರುವುದೂ ಒಂದು ಕಾರಣವಾಗಿರಬೇಕು.

ವಿಶ್ವವಿದ್ಯಾಲಯಗಳು, ಸಂಶೋಧನ ಸಂಸ್ಥೆಗಳು ಕೈಗೊಳ್ಳಬೇಕಾದ ಕೂಡ್ಲಿಗಿ ರಂಗನಟಿಯರ ಬದುಕಿನ ವಿದ್ಯಮಾನವನ್ನು ಪತ್ರಕರ್ತರೊಬ್ಬರು ಕೈಗೆತ್ತಿಗೊಂಡಿರುವುದು ಮೆಚ್ಚತಕ್ಕ ಸಂಗತಿ. ಹಾಗೆಯೇ ಪತ್ರಿಕಾ ಬರಹಕ್ಕಿರುವ ಚೌಕಟ್ಟನ್ನು ಮೀರಲಾಗದ್ದು ಮತ್ತು ನಟಿಯರ ಸಂಕೀರ್ಣ ಅನುಭವವನ್ನು ಸರಳರೇಖೆಯಂತೆ ಕಟ್ಟಿಕೊಟ್ಟಿರುವುದು ಈ ಕೃತಿಯ ಮಿತಿ. ಗಂಡಿನೆದುರು ನಟಿಯರು ಕೆಲವು ಸಂಗತಿಗಳನ್ನು ಹೇಳಿಕೊಂಡಂತಿಲ್ಲ. ಹಾಗಾಗಿ ಇದೊಂದು ಅಪೂರ್ಣ ಕಥನ. ಈ ಪುಸ್ತಕದಿಂದ ಉತ್ಸುಕರಾಗಿ ಪರಿಚಿತ ನಟಿಯರು ಮತ್ತಷ್ಟು ಮುಕ್ತವಾಗಿ ಮಾಹಿತಿ ನೀಡಿದರೆ, ದಾಖಲೆಗೆ ಹಿಂಜರಿದವರು ಮಾಹಿತಿ ನೀಡಲು ಮುಂದಾದರೆ ಪರಿಷ್ಕೃತ ಮುದ್ರಣದಲ್ಲಿ ಕೃತಿಯನ್ನು ವಿಸ್ತರಿಸಬಹುದಾಗಿದೆ. ಆದಾಗ್ಯೂ ಕೂಡ್ಲಿಗಿ ಪರಿಸರದ ರಂಗನಟಿಯರ ಹಲವು ನೆಲೆಗಳ ಅಧ್ಯಯನಕ್ಕೆ ಈ ಕೃತಿ ನೆರವಾಗುತ್ತದೆ.

ಕೃ: ಬಣ್ಣ ಮಾಸಿದ ಬದುಕು

ಲೇ: ಭೀಮಣ್ಣ ಗಜಾಪುರ

ಪುಟ:128

ಬೆಲೆ: ₹175

ಪ್ರ: ಕಾವ್ಯ ಪ್ರಕಾಶನ ಗಜಾಪುರ.

ಮೊ:9901589218

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT