ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕ ಪರಿಚಯ: ಹೊಸ್ತೋಟ ಮಂಜುನಾಥ ಭಾಗವತರು ಈಗ ‘ಯಕ್ಷಹಂಸ’

Published 26 ಮೇ 2024, 0:05 IST
Last Updated 26 ಮೇ 2024, 0:05 IST
ಅಕ್ಷರ ಗಾತ್ರ

ತಪಃಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಮ್ |
ನಾರದಂ ಪರಿಪಪ್ರಚ್ಛ ವಾಲ್ಮೀಕಿರ್ಮುನಿಪುಂಗವಮ್ ||
ವಾಲ್ಮೀಕಿ ರಾಮಾಯಣದ ಮೊದಲ ಶ್ಲೋಕವಿದು. “ತಪಸ್ಸು ಮತ್ತು ಸ್ವಾಧ್ಯಾಯದಲ್ಲಿ ನಿರತನೂ, ವಾಗ್ವಿಶಾರದನೂ, ಮುನಿಪುಂಗವನೂ ಆದ ನಾರದಮಹರ್ಷಿಯನ್ನು ಕುರಿತು ತಪಸ್ವಿಯಾದ ವಾಲ್ಮೀಕಿಯು ಪ್ರಶ್ನೆಗಳನ್ನು ಕೇಳಿದನು. ಅಷ್ಟೇ ಅಲ್ಲ, ಮತ್ತೆ ಮತ್ತೆ ಕೇಳಿದನು” ಎಂದು ಇದರ ಅರ್ಥ. ‘ತಪಸ್ಸು’ ಎಂದರೆ ನಿರಂತರವಾದ ಚಿಂತನೆ. ‘ಸ್ವಾಧ್ಯಾಯ’ ಅಂದರೆ ಅದರ ಹಿನ್ನೆಲೆಯಲ್ಲಿರುವ ನಿರಂತರ ಅಧ್ಯಯನ. ಚಿಂತನೆ ಮತ್ತು ಅಧ್ಯಯನ, ತಪಸ್ಸು ಮತ್ತು ಸ್ವಾಧ್ಯಾಯ ಎರಡೂ ಬಹಳ ಮುಖ್ಯ. ಕೆಲವರಲ್ಲಿ ಚಿಂತನೆ ಇರುತ್ತದೆ. ಆದರೆ ಅವರಲ್ಲಿ ಅಧ್ಯಯನವೇ ಇರುವುದಿಲ್ಲ. ಇನ್ನು ಕೆಲವರಲ್ಲಿ ಅಧ್ಯಯನವಿರುತ್ತದೆ. ಆದರೆ ಚಿಂತನೆಯೇ ಇರುವುದಿಲ್ಲ. ಒಬ್ಬನಲ್ಲೇ ಎರಡೂ ಮೇಳೈಸಿರುವುದು ಬಹು ಅಪರೂಪ. ಅದು ನಾರದರಲ್ಲಿ ಇತ್ತು. ಅದನ್ನು ಕಂಡವ ಕವಿವರ ವಾಲ್ಮೀಕಿ.

ವಾಲ್ಮೀಕಿ ಕಂಡಿದ್ದನ್ನು, ಅದೇ ಸನ್ನಿವೇಶವನ್ನು ಋಷಿಕಲ್ಪ, ಅವಧೂತ, ಸಂತನಂತೆ ಬದುಕಿದವ, ಪರಿವ್ರಾಜಕ, ಕವಿ, ಯಕ್ಷನಿರ್ದೇಶಕ, ಯಕ್ಷತಪಸ್ವೀ ಹೊಸ್ತೋಟ ಮಂಜುನಾಥ ಭಾಗವತರಿಗೆ ಹೋಲಿಸಬಹುದು. ಹೊಸ್ತೋಟದವರಲ್ಲಿ ಚಿಂತನೆ ಮತ್ತು ಅಧ್ಯಯನ ಎರಡೂ ಇದ್ದವು. ಇದನ್ನೇ ಕವಿ ವಾಲ್ಮೀಕಿ ತಪಸ್ಸು ಮತ್ತು ಸ್ವಾಧ್ಯಾಯ ಅಂತ ಹೇಳಿದ್ದು.

ಇದನ್ನೇ ಆಧುನಿಕ ಪರಿಭಾಷೆಯಲ್ಲಿ ಹೇಳುವುದಾದರೆ- ಇದನ್ನೇ ಏಕಾಗ್ರತೆ, ತನ್ಮಯತೆ, ಧ್ಯಾನ ಎಂದು ಕರೆಯುತ್ತಾರೆ. ಏಕಾಗ್ರತೆಯನ್ನು ಆಳವಾಗಿಸಿದರೆ, ದೀರ್ಘವಾಗಿಸಿದರೆ, ಶಿಸ್ತಾಗಿಸಿದರೆ ಅದು ಧ್ಯಾನದ ರೂಪವನ್ನು ಪಡೆದುಕೊಳ್ಳುತ್ತದೆ. ‘ಧ್ಯಾನ’ ಅನ್ನುವುದು ಒಂದು ಆಂತರಿಕ ಕ್ರಿಯೆ; ಅದರಲ್ಲಿ ಚಿಂತನೆ, ಮರುಚಿಂತನೆ, ತುಲನೆ, ನಿರ್ಧಾರ ಎಲ್ಲವೂ ಇರುತ್ತವೆ. ಹೊಸ್ತೋಟದವರಲ್ಲಿ ಇವೆಲ್ಲವೂ ಮುಪ್ಪುರಿಗೊಂಡು ಅವರೊಬ್ಬ ತಪಸ್ವೀ ಎಂದು ಗುರುತಿಸುವಂತೆ ಮಾಡಿತು. ಅವರಲ್ಲಿ ‘ಧ್ಯಾನಶಕ್ತಿ’ ಅದ್ಭುತವಾಗಿತ್ತು. ಅವರು ಶ್ರಾವಣ ಮಾಸದಲ್ಲಿ ಒಂದು ಅಥವಾ ಎರಡು ತಿಂಗಳು ಮೌನಕ್ಕೆ ಕುಳಿತುಕೊಳ್ಳುತ್ತಿದ್ದುದೇ ಇದಕ್ಕೆ ಸಾಕ್ಷಿ.

ಹೊಸ್ತೋಟದವರ ಅವಧೂತತ್ತ್ವ-ಪರಿವ್ರಾಜಕತ್ತ್ವ-ಬ್ರಹ್ಮಚರ್ಯತ್ತ್ವವನ್ನೂ, ಅವರಾಗಿಯೇ ರೂಪಿಸಿಕೊಂಡ, ರೂಢಿಸಿಕೊಂಡ ಕೆಲವು ಕಠೋರ ನಿಯಮ ಮೊದಲಾದುವನ್ನು ನೋಡಿದರೆ ಬಸವಣ್ಣನವರು ಹೇಳಿದ ಒಂದು ಮಾತು ನೆನಪಿಗೆ ಬರುತ್ತದೆ-
ಉಳ್ಳವರು ಶಿವಾಲಯ ಮಾಡುವರು
ನಾನೇನ ಮಾಡುವೆ, ಬಡವನಯ್ಯಾ
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯಾ
ಕೂಡಲಸಂಗಮದೇವಾ, ಕೇಳಯ್ಯ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ


ಬಡವ ಮತ್ತು ಶ್ರೀಮಂತರ ಬಗ್ಗೆ ಇರುವ ವ್ಯತ್ಯಾಸವನ್ನು ಹೇಳುವ ವಚನವಿದು. “ಶ್ರೀಮಂತರು ದೇವಸ್ಥಾನಗಳನ್ನು ಕಟ್ಟಿಸಬಲ್ಲರು. ಬಡವನಾದ ನಾನೇನು ಮಾಡಬಲ್ಲೆ? ನನ್ನ ಕಾಲೇ ಕಂಬ; ದೇಹವೇ ದೇವಾಲಯ; ನನ್ನ ಶಿರವೇ ಹೊನ್ನ ಕಳಶ” ಎಂದು ಬಸವಣ್ಣನವರು ರೂಪಕದ ಭಾಷೆಯಲ್ಲಿ ದೇವಸ್ಥಾನದ ಪರಿಕಲ್ಪನೆಯನ್ನು ವಿಡಂಬಿಸುತ್ತಾರೆ. ಹಾಗೆಯೇ ಶ್ರೀಮಂತರು ಕಟ್ಟುವ ದೇವಸ್ಥಾನ ಒಂದಲ್ಲ ಒಂದು ದಿನ ನಾಶವಾಗುತ್ತದೆ ಅಥವಾ ಅದು ನಿಂತಲ್ಲೇ ನಿಂತಿರುತ್ತದೆ. ಆದರೆ ಜಂಗಮತ್ವ ಹಾಗಲ್ಲ. ಅದು ಚಲಿಸುತ್ತಿರುತ್ತದೆ. ಅದು ನವೀಕರಣಗೊಳ್ಳುವ, ಜೀವಂತಿಕೆಯುಳ್ಳದ್ದು ಅನ್ನುತ್ತಾ ತಾನು ಅಂತಹ ಜಂಗಮ ಎಂಬುದನ್ನು ಬಸವಣ್ಣನವರು ಧ್ವನಿಸಿದರು.

ಇದರ ಹಿನ್ನೆಲೆಯಲ್ಲೇ ‘ಉಳ್ಳವರು’ ಮತ್ತು ‘ಇಲ್ಲದವರು’ ಎಂಬುದನ್ನು ವ್ಯಾಖ್ಯಾನಿಸಿದರೆ ‘ಉಳ್ಳವರು’ ಎಂದರೆ ಕೇವಲ ಹಣವಿದ್ದವರು ಎಂಬುದು ಮಾತ್ರ ಆಗುವುದಿಲ್ಲ. ಮನಸ್ಸಿನ ಶ್ರೀಮಂತಿಕೆ, ಮಾನುಷೋಪಕಾರ ಗುಣ ಇಲ್ಲದವರು ಅಂತಲೂ ಆಗುತ್ತದೆ. ‘ಇಲ್ಲದವ ಎಂದರೆ ಮಾನಸಿಕ ಶ್ರೀಮಂತಿಕೆ, ಪರೋಪಕಾರ ಗುಣ ಇದ್ದವ ಎಂಬುದೂ ಆಗುತ್ತದೆ.

ಈ ರೂಪಕವನ್ನೇ ಹೊಸ್ತೋಟ ಮಂಜುನಾಥ ಭಾಗವತರಿಗೆ ಅನ್ವಯಿಸಿ ನೋಡುವುದಾದರೆ ಅವರೊಬ್ಬ ಜಂಗಮರೇ ಆಗಿದ್ದರು ಎಂಬುದು ಸೂರ್ಯ ಬೆಳಕಿನಷ್ಟೇ ಸತ್ಯ. ಅವರು ಭೌತಿಕವಾಗಿ ಹಣ, ಸಂಪತ್ತು, ಐಶ್ಚರ್ಯ ಏನೂ ಇಲ್ಲದವರೇ ಆಗಿದ್ದರು. ಬರಿಗೈಯ್ಯ ದಾಸನಾಗಿದ್ದರು. ಅವರು ಸ್ಥಿರವಾಗಿ ಎಲ್ಲೂ ನೆಲೆಸಲಿಲ್ಲ. ಮನೆ ಕಟ್ಟಲಿಲ್ಲ. ದೇವಾಲಯ ನಿರ್ಮಿಸಲಿಲ್ಲ. ಬಸವಣ್ಣವರ ನುಡಿಯಂತೆ ತಮ್ಮ ಕಾಲೆಂಬ ಕಂಬದಿಂದ ನಿರ್ಮಿಸಿಕೊಂಡ ತಮ್ಮ ದೇಹವೆಂಬ ದೇವಾಲಯವನ್ನು ಪವಿತ್ರವಾಗಿಟ್ಟುಕೊಂಡು ಜಗತ್ತೆಲ್ಲ ಸಂಚರಿಸಿದರು. ಬರೆದರು; ಓದಿದರು; ಭಾಗವತಿಕೆ ಮಾಡಿದರು; ಅರ್ಥ ಹೇಳಿದರು; ಪ್ರಸಂಗ ಸಾಹಿತ್ಯ ರಚಿಸಿದರು; ಮಕ್ಕಳಿಗೆ, ಪ್ರೌಢರಿಗೆ, ಯುವಕ-ಯುವತಿಯರಿಗೆ, ಮಹಿಳೆಯರಿಗೆ, ಕುರುಡರಿಗೆ ಅಂತ ಯಾರು ಅಪೇಕ್ಷಿಸಿದರೂ ಯಕ್ಷಗಾನ ಬಯಲಾಟವನ್ನು ನಿರ್ದೇಶನ ಮಾಡಿದರು. ತನ್ಮೂಲಕ ಜನಮಾನಸದಲ್ಲಿ ನೆಲೆಗೊಂಡರು. ಇದೇ ಅವರ ವೈಶಿಷ್ಟ್ಯ.

ಇಂತಹ ಮಹನೀಯರನ್ನು ಕುರಿತು ನಿವೃತ್ತ ಪ್ರಾಧ್ಯಾಪಕ ವಿಜಯ ನಳಿನೀ ರಮೇಶ ಅವರು ಹೊಸ್ತೋಟ ಮಂಜುನಾಥ ಭಾಗವತರ ಕುರಿತಾಗಿ ‘ಯಕ್ಷಹಂಸ’ ಎಂವ ಹೆಸರಿನ ಸಂಸ್ಮರಣ ಗ್ರಂಥವೊಂದನ್ನು ಹೊತಂದಿದ್ದಾರೆ. ಇವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ ಹೊಸ್ತೋಟದವರ ಕುರಿತಾಗಿ ಎಪ್ಪತ್ತಕ್ಕೂ ಹೆಚ್ಚು ಲೇಖಕರ ಲೇಖನಗಳಿವೆ.

‘ಸಿದ್ಧಾಂತ ನಿರ್ವಚನ’, ‘ನವ ನಿರ್ಮಾಣ’, ‘ವಿಸ್ತರಣ’ ಮತ್ತು ‘ಸಂಸ್ಮರಣ’ ಎಂಬ ಹೆಸರಲ್ಲಿ ನಾಲ್ಕು ಭಾಗಗಳನ್ನೊಳಗೊಂಡ ಈ ಕೃತಿ ನಿಜಕ್ಕೂ ಒಂದು ಸಂಗ್ರಾಹ್ಯ ಕೃತಿಯಾಗಿದೆ. ಹೊಸ್ತೋಟ ಭಾಗವತರ ಬದುಕಿನ ಚಿತ್ರವನ್ನೂ, ಅವರ ಬದುಕಿನ ವಿವಿಧ ಮಜಲುಗಳನ್ನೂ, ಅವರ ಆತ್ಮೀಯ ಒಡನಾಡಿಗಳು ಕಂಡುಂಡ ಸವಿಯನ್ನೂ, ಅವರ ಸಾಧನೆಯನ್ನೂ, ಅವರ ಕೃತಿಸಂಪತ್ತನ್ನೂ- ಒಂದೇ ಮಾತಿನಲ್ಲಿ ಹೇಳುವುದಾದರೆ ಅವರ ಬದುಕಿನ ಸಮಗ್ರ ಚಿತ್ರವನ್ನೂ ಪರಿಚಯಿಸುವ ಈ ಗ್ರಂಥ ಯಕ್ಷಪ್ರಪಂಚದ ಒಂದು ಮೈಲುಗಲ್ಲಾಗಿದೆ. ಜೊತೆಗೆ ಒಂದು ದಾಖಲಾರ್ಹ ಕೃತಿಯಾಗಿ, ಯಕ್ಷಗಾನ ಪ್ರಪಂಚದ ಅತ್ಯಮೂಲ್ಯ ಸಂಪತ್ತಾಗಿ, ಹೊರಹೊಮ್ಮಿದೆ. ಹೊಸ್ತೋಟದವರ ಅಭಿಮಾನಿಗಳಿಗೆ, ಶಿಷ್ಯರಿಗೆ, ವಿದ್ವಜ್ಜನರಿಗೆ, ಕಲಾವಿದರಿಗೆ, ಸಾಹಿತಿಗಳಿಗೆ, ಅವರ ಒಡನಾಡಿಗಳಿಗೆ, ಅವರಿಗೆ ಅನ್ನ ಹಾಕಿದ ತಾಯಂದಿರಿಗೆ, ಆಶ್ರಯ ನೀಡಿದ ಹಲವು ಕುಟುಂಬಗಳಿಗೆ, ಆಯಾ ಮನೆಯ ಯಜಮಾನರುಗಳಿಗೆ ಈ ಕೃತಿ ಸಂತೋಷದ ಹೊನಲನ್ನೇ ತಂದಿದೆ.

ಒಬ್ಬ ವ್ಯಕ್ತಿಯ ‘ವ್ಯಕ್ತಿಚಿತ್ರ’ವನ್ನು ಚಿತ್ರವನ್ನು ಕಟ್ಟಿಕೊಡುವುದು ಅಷ್ಟು ಸುಲಭವಲ್ಲ. ಅದರ ಬಣ್ಣ, ರೇಖೆ, ಪಾರ್ಶ್ವನೋಟ, ವ್ಯಕ್ತಿಯ ಸ್ವಭಾವ, ಪ್ರಭಾವ, ಮಹತ್ತು, ಬೃಹತ್ತು, ಸಣ್ಣತನ ದೊಡ್ಡತನ, ವಿಕ್ಷಪ್ತತೆ ಎಲ್ಲಾ ಗೊತ್ತಿರಬೇಕಾಗುತ್ತದೆ. ಅಂತಹ ವ್ಯಕ್ತಿಚಿತ್ರವನ್ನು ಪರಿಚಯಿಸುವಲ್ಲಿ ಅದು ಮೌಖಿಕವಾಗಿರಲಿ, ಲೇಖನದಲ್ಲಾದಲ್ಲಾಗಿರಲಿ, ಭಾಷಣದಲ್ಲಾಗಿರಲಿ ಅದಕ್ಕೆ ನ್ಯಾಯ ಒದಗಿಸುವಲ್ಲಿ, ತಪ್ಪು, ಒಪ್ಪು, ಸರಿಗಳನ್ನು ತೋರಿಸಿಕೊಡುವಲ್ಲಿ ಪ್ರಸಿದ್ಧ ಅರ್ಥಧಾರಿಗಳೂ, ಪ್ರಖರ ಚಿಂತಕರೂ, ಸಾಹಿತಿಗಳೂ ಆದ ಎಂ.ಪ್ರಭಾಕರ ಜೋಶಿಯವರು ಮುಂಚೂಣಿಯಲ್ಲಿರುವವರು. ಈ ಸಂಪುಟದ ಮಾರ್ಗದರ್ಶಕರೂ ಆದ ಅವರು ಹೊಸ್ತೋಟದವರ ಬಗ್ಗೆ ಹೇಳುವ ಮಾತು ಹೊಸ್ತೋಟದವರನ್ನು ಬಲ್ಲವರಿಗೆ ಹೊಸ್ತೋಟದವರನ್ನೇ ಪ್ರತ್ಯಕ್ಷ ನೋಡಿದಂತಾಗುತ್ತದೆ. ಜೋಶಿಯವರ ಮಾತು ಸತ್ಯದ ಕಾವಿನಲ್ಲಿ ಥಳ ಥಳ ಹೊಳೆದಂತಾಗುತ್ತದೆ. ಅವರು ಹೊಸ್ತೋಟದವರ ಚರ್ಯೆಯನ್ನು ಎಷ್ಟು ಸೊಗಸಾಗಿ ಸೆರೆಹಿಡಿದಿದ್ದಾರೆ ಎಂಬುದನ್ನು ಆಸ್ವಾದಿಸುವುದಕ್ಕೆ ಅವರ ಮಾತಿನಲ್ಲೇ ಕೇಳುವುದು ಒಳಿತು. ಅವರು ಹೇಳುತ್ತಾರೆ-
“ಪರಮಹಂಸಭಾವ ಅವರ ವ್ಯಕ್ತಿತ್ವದಲ್ಲೇ ಇದೆ. ಉದಾಸೀನ, ಆಲಸ್ಯ ಇಲ್ಲದ ಮಾತು. ಸದಾ ಭಾಷಣ, ಸಂಭಾಷಣ, ವಿದ್ಯೆ, ಕಥನ-ಎಂದೂ ವಟವಟವಾಗಿ ಕಾಡು ಹರಟೆಯಾಗಿ ಕಾಣುತ್ತಿಲ್ಲ. ಅವರ ವಿವರಣೆ ತೀರಾ ಪಾರಂಪರಿಕ, ತೀರಾ ಅಕಾಡೆಮಿಕ್ ಎರಡೂ ಅಲ್ಲದ ಅದರದೇ ದೇಶೀ ಶಾಸ್ತ್ರ ದ ರೂಪದಲ್ಲಿದ್ದವು. ಅದರಲ್ಲಿ ಐತಿಹಾಸಿಕತೆ, ತಾಂತ್ರಿಕ ವಿವರಣೆ, ತಮಾಷೆಗಳು, ನಡುನಡುವೆ ಹನುಮಂತನ ಲಂಘನ, ವಿಚಿತ್ರ ಕಲ್ಪನೆಗಳೆಲ್ಲಾ ಇದ್ದವು. ಬಿಗಿಯಾದ ಪ್ರಶ್ನೆಗಳಿಗೆ ಬೆರಗಾಗಿಸುವ ಸರಳ ಉತ್ತರಗಳಿದ್ದವು. ಸ್ಪರ್ಧೆ, ಸ್ಥಾನಪ್ರಜ್ಞೆ, ಈಗೋ ಎಂಬ ಈಗೋ ಇಲ್ಲದೆ ಬದುಕಿದ್ದು ಪರಮಹಂಸರ ನಡೆಜಾಡು. ಹಾಗಾಗಿ ಅವರ ಮಾತುಗಳಲ್ಲಿ ತಪ್ಪು, ಒಪ್ಪು, ಭಿನ್ನಾಭಿಪ್ರಾಯಗಳ ಚರ್ಚೆ, ಏನಿದ್ದರೂ ಉದ್ದೇಶ, ಅಜೆಂಡಾ ವಿಧಾನ ಇಲ್ಲವೇ ಇಲ್ಲ. ತಪ್ಪು, ಒಪ್ಪು, ಸಿಟ್ಟು ಎಲ್ಲ ಸರಳ ಸರಳ. ಅದು ಹಾಗಲ್ಲವೆ ಎಂದು ತಿದ್ದಿಕೊಳ್ಳುವರು. ಮಾತಾಡುತ್ತಾ ಮತಾಡುತ್ತಾ ಬಲು ಗಂಭೀರವಾದ ವಿಷಯದ ಮಧ್ಯೆ ವೀಳ್ಯ ಉಗುಳಲು ಹೋಗುವರು. ಒಂದು ಪಾಯಿಂಟ್ ವಿವರಿಸಿ ಯಾರೂ ನಗಾಡದಿದ್ದಾಗ ಅವರೇ ಗಟ್ಟಿಯಾಗಿ ನೆಗಾಡಿ ಕೂಡಲೆ ಸುಮ್ಮನಾದಾರು!” (ಪುಟ-17) ಅವರ ವ್ಯಕ್ತಿಚಿತ್ರಕ್ಕೆ ಇನ್ನೇನು ಬೇಕು? ಜೋಶಿಯವರು ಸಾರಸಂಗ್ರಹವಾಗಿ ಕೆಲವೇ ಮಾತುಗಳಲ್ಲಿ ಕಟ್ಟಿಕೊಟಿದ್ದಾರೆ.

ಯಕ್ಷಗಾನ ಜಗತ್ತಿನಲ್ಲಿ ಕೆರೆಮನೆ ಶಿವರಾಮ ಹೆಗಡೆಯೆಂದರೆ ಜನ ಇಂದಿಗೂ ನತಮಸ್ತಕರಾಗುತ್ತಾರೆ. ಅಂತಹ ಘನ ವ್ಯಕ್ತಿತ್ವ ಅವರದು. ಕೆರಮೆನೆ ಕಲಾವಿದರಲ್ಲಿ ಅವರು ಮೂರು ತಲೆಮಾರಿನ ಹಿಂದಿನ ಹಿರಿಯ ಕಲಾವಿದರು. ಎಷ್ಟೋ ಜನಕ್ಕೆ ಅವರ ಬಗ್ಗೆ ಗೊತ್ತಿಲ್ಲ. ಸುದೈವಕ್ಕೆ ಹೊಸ್ತೋಟದವರು ಶಿವರಾಮ ಹೆಗಡೆಯವರ ಆತ್ಮೀಯ ಒಡನಾಡಿಗಳಗಿದ್ದರು. ಹೆಚ್ಚೂ ಕಡಿಮೆ ಅವರ ಶಿಷ್ಯರಂತಿದ್ದರು. ಅವರಿಂದ ತಾನು ಹೇಗೆ ಸ್ಪೂರ್ತಿ ಪಡೆದೆ ಎಂಬುದನ್ನು ವಿವರಿಸುತ್ತಾ ಅಲ್ಲಲ್ಲಿ ಶಿವರಾಮ ಹೆಗಡೆಯವರ ವ್ಯಕ್ತಿಚಿತ್ರವನ್ನೂ ಮಾಡಿಕೊಟ್ಟಿದ್ದಾರೆ.

ಅದು ಅವರೇ ರಚಿಸಿದ ‘ಯಕ್ಷಲೋಕದ ಧ್ರುವತಾರೆ’ ಎಂಬ ಕಿರುಹೊತ್ತಿಗೆಯಲ್ಲಿ ದಾಖಲಾಗಿದೆ. ಶಿವರಾಮ ಹೆಗಡೆಯವರು ಬಹು ದೊಡ್ಡ ಕಲಾವಿದರಾಗಿದ್ದರು ಎಂಬ ಮಾತಿರಲಿ. ಅದನ್ನು ಮತ್ತೆ ಮತ್ತೆ ಹೇಳಬೇಕಾಗಿದ್ದಿಲ್ಲ. ಹೇಳಿದರೂ ಹೇಳದಿದ್ದರೂ ಅವರು ದೊಡ್ಡ ಕಲಾವಿದರೇ. “1950ರಲ್ಲಿ ಶುಲ್ಕ ಪಡೆದು ಪ್ರವೇಶ ನೀಡಿ ಪ್ರದರ್ಶನ ನೀಡುವ ನಾಟಕ ಕಂಪೆನಿಗಳ ಪ್ರಭಾವದಿಂದ ಬಯಲಾಟವನ್ನು ಟಿಕೆಟಿನ ಸರಕಾಗಿಸಿ ಸಾಹಸ ಕಾಣಿಸಿದ ಮಹತ್ಸಾಧನೆ ಶಿವರಾಮ ಹೆಗಡೆಯವರದ್ದು” ಎಂದು ಹೊಸ್ತೋಟದವರು ಅವರ ಸಾಹಸೋದ್ಯಮವನ್ನು ಬಣ್ಣಿಸುತ್ತಾರೆ.
ಶಿವರಾಮ ಹೆಗಡೆಯವರು ಕೊನೆ ಕೊನೆಗೆ ಕುಣಿಯುತ್ತಿರಲಿಲ್ಲವಂತೆ. ನೀವು ಯಾಕೆ ಕುಣಿಯುವುದಿಲ್ಲ ಅಂತ ಕೇಳಿದಾಗ ಶಿವರಾಮ ಹೆಗಡೆಯವರು-“ಈಗ ಜನರು ನಾಟಕ, ಸಿನಿಮಾ ನೋಡಲು ಶುರು ಮಾಡಿದ್ದಾರೆ. ಬರೀ ವೇಷ ಕಟ್ಟಿಕೊಂಡು ದಿಗಿದಿಗಿ ಕುಣಿದರಾಗಲಿಲ್ಲ. ವೇಷಕ್ಕೆ ತಕ್ಕ ಹಾವ ಭಾವ ಇರಬೇಕು” ಅಂತ ಹೇಳಿದ್ದರಂತೆ. ಶಿವರಾಮ ಹೆಗಡೆಯವರು ಅಂದು ಹೇಳಿದ್ದ ಮಾತು ಎಷ್ಟು ಸತ್ಯ ಎಂಬುದನ್ನು ಮನಗಾಣಬೇಕಿದ್ದರೆ ಇಂದಿನ ಯಕ್ಷಗಾನ ಬಯಲಾಟವನ್ನು ನೋಡಬೇಕು. ಬೆರಳೆಣಿಕೆಯ ಹತ್ತೆಂಟು ಕಲಾವಿದರನ್ನು ಬಿಟ್ಟರೆ ಉಳಿದವರೆಲ್ಲ ಶಿವರಾಮ ಹೆಗಡೆಯವರು ಹೇಳಿದಂತೆ ವೇಷ ಕಟ್ಟಿಕೊಂಡು ದಿಗಿದಿಗಿ ಕುಣಿಯುವವರೇ ಆಗಿದ್ದಾರೆ. ಗಿಂಡೀಮನೆ ಮೃತ್ಯುಂಜಯ ಅವರು ಇಂತಹ ಅನೇಕ ಸಂಗತಿಗಳನ್ನು ತಮ್ಮ ಲೇಖನದಲ್ಲಿ ಪರಿಚಯಿಸಿಕೊಟ್ಟಿದ್ದಾರೆ (ಪುಟ-159)
ಹೊಸ್ತೋಟದವರ ಶಿಸ್ತು, ಬದ್ಧತೆ, ನಿರ್ದೇಶನದ ಮಹತ್ವ, ನಿದೇಶನದಲ್ಲಿ ಮೆರೆದ ಅವರ ಸೃಷ್ಟಿಶಿಲತೆ, ಕವಿತ್ವ, ನಿಸ್ಪೃಹತೆ, ಅವರು ರಚಿಸಿದ ಕೃತಿಗಳು, ಅವರ ಹಾಸ್ಯಮನೋಭಾವ, ವಿಕ್ಷಪ್ತತೆ, ಸಿಟ್ಟು, ಸೆಡವು, ಮೃದುತ್ವ, ಅಮಾಯಕತನ ಹೀಗೆ ಹಲವು ಹದಿನೆಂಟು ವಿಚಾರಗಳು ಹಾಸುಹೊಕ್ಕಾಗಿ ನಮ್ಮನ್ನು ಬೆರಗುಗೊಳಿಸುತ್ತದೆ ಈ ಕೃತಿ. ಜೊತೆಗೆ ಸಂತೋಷದ ಅಲೆಗಳನ್ನೂ ಸೃಷ್ಟಿಸುತ್ತದೆ ಈ ಗ್ರಂಥ.

ಈ ಎಲ್ಲ ಸಂಗತಿಗಳಿಂದ ಈ ಕೃತಿಯ ಮೈದುಂಬಿಸಿದವರು 70ಕ್ಕೂ ಹೆಚ್ಚು ಲೇಖಕರು. ವಿದ್ವಜ್ಜನರು, ಕಲಾವಿದರು, ಸಾಹಿತಿಗಳು, ಭಾಗವತರ ಆತ್ಮೀಯ ಒಡನಾಡಿಗಳು ಮತ್ತು ಅವರ ಬಗ್ಗೆ ಗೊತ್ತಿದ್ದವರು- ಅವರೆಲ್ಲರೂ ಹೊಸ್ತೋಟದವರ ಮೇಲಿನ ಪ್ರೀತಿ, ಅಭಿಮಾನ, ಗೌರವದಿಂದ ಲೇಖನ ಬರೆದು ಹೊಸ್ತೋಟದವರ ಯಶಸ್ಸು, ಕೀರ್ತಿಯನ್ನು ಅಜರಾಮರವಾಗಿಸಿದ್ದಾರೆ. ಇಂತಹ ಮಹನೀಯರನ್ನು ಕಲೆಹಾಕಿ, ಅವರಿಂದ ಲೇಖನ ಬರೆಯಿಸಿ ಬೃಹತ್ ಸಂಪುಟವೊಂದನ್ನು  ವಿಜಯ ನಳಿನೀ ರಮೇಶ ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

ಕೊನೆಯದಾಗಿ ಇಲ್ಲಿ ಬರೆದಿರುವ ಒಬ್ಬೊಬ್ಬ ಲೇಖಕನೂ/ಲೇಖಕಿಯೂ ಹೊಸ್ತೋಟದವರ ಭೂಮ ವ್ಯಕ್ತಿತ್ವವನ್ನು ಸಾದ್ಯಂತವಾಗಿ, ಚಿತ್ತಾಕರ್ಷಕವಾಗಿ, ಹೃದ್ಯವಾಗಿ ಬರೆದು ಓದುಗನ ಕ್ಷಿತಿಜವನ್ನು ವಿಸ್ತರಿಸಿದ್ದಾರೆ. ಒಬ್ಬೊಬ್ಬ ಲೇಖಕನ ಬರಹದ ಸ್ವಾರಸ್ಯವನ್ನೂ, ಒಳನೋಟವನ್ನೂ ಎರಡೆರಡೇ ಮಾತುಗಳಲ್ಲಿ ಬರೆಯಹೊರಟರೂ ಅದೇ ಒಂದು ಪುಸ್ತಕವಾದೀತು! ಅದಕ್ಕೆ ತಡೆಯೊಡ್ಡಿ ಹೊಸ್ತೋಟದವರ ಬಗ್ಗೆ-
“ತನ್ನ ಜನ್ಮವೇ ಯಕ್ಷಗಾನಕ್ಕಾಗಿ ಇದೆ. ಎಂದು ಬಲವಾಗಿ ನಂಬಿಕೊಂಡ ಹಾಗೂ ಆ ನಂಬಿಕಗೆ ಕೊಂಚವೂ ವ್ಯತಿರಿಕ್ತವಾಗದಂತೆ ನಡೆದುಕೊಂಡ ಅಪೂರ್ವ ಚೇತನವೊಂದು ನಮ್ಮ ನಡುವೆ ಬದುಕಿ ಬಾಳಿತು. ಹೀಗೂ ಬದುಕಬಹುದು ಎಂಬ ಸಾಧ್ಯತೆಯನ್ನು ಕಾಣಿಸಿತು” (ಪುಟ-467) ಎಂದು ಅಚ್ಚರಿಯ ಉದ್ಗಾರವೆತ್ತಿದ ಪ್ರಜ್ಞಾ ಮತ್ತಿಹಳ್ಳಿ ಮತ್ತು -
“ನೋಡಿ ಹೇಗಿದೆ! ಹೆತ್ತವರು ಜತೆಗಿಲ್ಲ. ಮಾಡಿಟ್ಟ ಆಸ್ತಿಯಿಲ್ಲ. ವಾಸಕ್ಕೆ ಮನೆಯಿಲ್ಲ. ಖರ್ಚಿಗೆ ಹಣವಿಲ್ಲ. ಅಷ್ಟಕ್ಕೂ ಇವೆಲ್ಲವೂ ಬೇಕೇ ಇರಲಿಲ್ಲ. ಹೇಗೋ ಆ ಭಗವಂತ ಕಾಲಕ್ಕೆ ಸರಿಯಾಗಿ ಏನನ್ನಾದರೂ ಯಾರನ್ನಾದರೂ ಒದಗಿಸಿಬಿಡುತ್ತಿದ್ದ. ಮನುಷ್ಯನಿಗೆ ಸಂಬಂಧ ಪ್ರೀತಿಗಾಗಿಯೂ ಬೇಕು; ಜಗಳಕ್ಕಾಗಿಯೂ ಬೇಕು. ಪ್ರೀತಿ ಇಲ್ಲದಾಗ ಕೋಪ ತೋರಿಸುವುದಾದರೂ ಎಲ್ಲಿ? ಪ್ರೀತಿ ಮತ್ತು ಕೋಪ ಕಟ್ಟಲಾಗದಂತಹ ಭಾವನೆಗಳು. ಇದನ್ನೇ ಜಯಿಸಿದವರು ಪ್ರಪಂಚವನ್ನೇ ಗೆಲ್ಲಬಲ್ಲರು” ಎಂದು ಹೊಸ್ತೋಟದವರ ಬಗೆಗಿನ ಯಥಾರ್ಥವನ್ನೇ ಬಿಚ್ಚಿಟ್ಟ ಮತ್ತು ಅದರಲ್ಲಿ ಜೀವನದ ಸಾರವನ್ನೇ ಹುದುಗಿಸಿಟ್ಟ ಮಮತಾ ಜಿ. ಅನೇಕ ಅವರ ಮಾತುಗಳನ್ನು ಇಲ್ಲಿ ದಾಖಲಿಸಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT