ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಶಿಖಂಡಿ ಪಾತ್ರಕ್ಕೆ ಸಮಕಾಲೀನ ಚೌಕಟ್ಟು

Published 30 ಸೆಪ್ಟೆಂಬರ್ 2023, 23:30 IST
Last Updated 30 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಮಹಾಭಾರತದ ಕೆಲವು ಪಾತ್ರಗಳು ಸಾಹಿತಿಗಳನ್ನು ಹಿಡಿದಿಡುತ್ತಲೇ ಬಂದಿವೆ. ಅಂತಹ ಪಾತ್ರಗಳನ್ನು ಕೇಂದ್ರವಾಗಿಸಿಕೊಂಡು ಸೃಜನಶೀಲ ಸಾಹಿತ್ಯ ರಚನೆಯಾಗುವುದರ ಜೊತೆಗೆ, ಸಮಕಾಲೀನ ಸಂದರ್ಭಕ್ಕೆ ಅವನ್ನು ಅನುಸಂಧಾನ ಮಾಡಿಸುವ ಗಮನಾರ್ಹ ಪ್ರಯತ್ನಗಳೂ ನಡೆದಿವೆ. ಹಿಂದಿಯಲ್ಲಿ ಶರದ್‌ ಸಿಂಹ ರಚಿಸಿರುವ ‘ಶಿಖಂಡಿ’ ಕೃತಿಯೂ ಅಂತಹ ಗುರುತಿಸಬೇಕಾದ ಪ್ರಯತ್ನಗಳಲ್ಲಿ ಒಂದು. ಅದನ್ನು ಕನ್ನಡಕ್ಕೆ ಡಿ.ಎನ್. ಶ್ರೀನಾಥ್ ಅನುವಾದ ಮಾಡಿದ್ದಾರೆ.

‘ಮಹಾಭಾರತದಲ್ಲಿ ಶಿಖಂಡಿಯ ಪಾತ್ರ ಅದ್ಭುತವಾಗಿದೆ. ಶಿಖಂಡಿಯ ಅಸ್ತಿತ್ವ ಭ್ರಾಂತಿಗಳ ಜಾಲದಲ್ಲಿ ಸಿಲುಕಿದೆ. ಮಹರ್ಷಿ ವೇದವ್ಯಾಸರು ಭೀಷ್ಮರಿಂದ ಶಿಖಂಡಿಯ ಅಂಬೋಪಾಖ್ಯಾನ ಕತೆಯನ್ನು ಹೇಳಿಸಿದ್ದಾರೆ. ಭೀಷ್ಮ ಮತ್ತು ಶಿಖಂಡಿಯ ನಡುವೆ ವೈಮನಸ್ಸಿತ್ತು. ಈ ರೋಚಕ ಪಾತ್ರದ ಜೀವನ–ಕತೆ ನಮ್ಮ ಮನಸ್ಸನ್ನು ಸ್ಪರ್ಶಿಸುವುದರಲ್ಲಿ ಸಮರ್ಥವಾಗಿದೆ’ ಎಂಬ ಶರದ್ ಸಿಂಹ ಅವರದ್ದೇ ಮಾರು ಬೆನ್ನುಡಿಯಲ್ಲಿದೆ. ಶಿಖಂಡಿ ಪಾತ್ರವನ್ನು ಶರದ್ ಅವರು ಪದರಗಳನ್ನು ತೆರೆದು ನೋಡುವ ಕ್ರಮಕ್ಕೆ ಒಳಗುಮಾಡಿದ್ದಾರೆ. ಪ್ರಾಚೀನ ಭಾರತದಲ್ಲಿ ಇದ್ದ ವಿಕಸಿತ ಜ್ಞಾನ, ಶಲ್ಯಚಿಕಿತ್ಸೆಯಿಂದ ಲಿಂಗ ಪರಿವರ್ತನೆ ಮಾಡುವ ವಿಧಾನ ಆಗಲೇ ಚಾಲ್ತಿಯಲ್ಲಿ ಇದ್ದುದನ್ನೂ ಅವರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಹೆಣ್ಣಿನ ದೇಹದ ಆಚೆಗಿನ ದೇಹದ ಕತೆಯನ್ನಾಗಿ ಇಡೀ ಕಾದಂಬರಿಯನ್ನು ಹೆಣೆದಿದ್ದಾರೆ. ಶಿಖಂಡಿಯ ಬದುಕಿನೊಂದಿಗೆ ಹೆಣೆದುಕೊಂಡ ಪ್ರಸಂಗಗಳನ್ನೇ ಮುಖ್ಯವಾಗಿಸಿಕೊಂಡರೂ, ಸೃಜನಶೀಲ ಮನಸ್ಸಿನಿಂದಾಗಿ ತಮ್ಮ ಕಲ್ಪನೆಯ ಕವಚವನ್ನೂ ಅವರು ತೊಡಿಸಿದ್ದಾರೆ. ಹೀಗಾಗಿ ಶಿಖಂಡಿಯ ಕಥನವು ಟ್ರಾನ್ಸ್‌ಜೆಂಡರ್‌ಗಳ ಕತೆಯೂ ಆಗಿ ಸಮಕಾಲೀನಗೊಂಡಿದೆ. ‘ಸ್ಪಂದನ್‌ ಕೃತಿ ಸಮ್ಮಾನ್’ ಪುರಸ್ಕಾರಕ್ಕೂ ಆಯ್ಕೆಯಾದ ಈ ಕೃತಿಯನ್ನು ಸಮಕಾಲೀನ ಸಾಹಿತ್ಯದ ಪ್ರಮುಖ ಪುಸ್ತಕ ಎಂದೇ ಪರಿಗಣಿಸಲಾಗಿದೆ. 

ಮಹಾಭಾರತವನ್ನು ಪುನರ್‌ಪಠಣ ಮಾಡಿ, ಶರದ್ ಸಿಂಹ ಶಿಖಂಡಿ ಪಾತ್ರದ ಸೂಕ್ಷ್ಮಗಳನ್ನು ಮನನ ಮಾಡಿಕೊಂಡು ಕೃತಿಯನ್ನು ರಚಿಸಿರುವುದಾಗಿ ಅವರೇ ಬರೆದಿದ್ದಾರೆ. ಶ್ರೀನಾಥ್ ಅವರದ್ದು ಮೂಲ ಕೃತಿನಿಷ್ಠೆಯ ಅನುವಾದ. 

- ಶಿಖಂಡಿ

ಲೇ: ಹಿಂದಿ ಮೂಲ: ಶರದ್ ಸಿಂಹ

ಕನ್ನಡಕ್ಕೆ: ಡಿ.ಎನ್. ಶ್ರೀನಾಥ್

ಪ್ರ: ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ

ಸಂ: 9448110034

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT