ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಷನರಿಗಳ ಕನ್ನಡ ವೃತ್ತಾಂತವು

Last Updated 8 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಪಾಶ್ಚಾತ್ಯರು ಭಾರತಕ್ಕೆ ಬಂದ ಮೂಲ ಉದ್ದೇಶವೇನೋ ವ್ಯಾಪಾರವೇ. ಆದರೆ, ಭಾರತದಂಥ ಸಮೃದ್ಧ ರಾಷ್ಟ್ರದಲ್ಲಿ ಸಂಪತ್ತನ್ನು ಕೊಳ್ಳೆ ಹೊಡೆಯುವುದರ ಜತೆಗೆ ಧರ್ಮಪ್ರಚಾರಕ್ಕೂ ಸಾಕಷ್ಟು ಅವಕಾಶಗಳು ಇವೆ ಎಂದು ಅವರಿಗೆ ಹೊಳೆಯಲು ತಡವಾಗಲಿಲ್ಲ. ಅದರ ಪರಿಣಾಮವಾಗಿ ವ್ಯಾಪಾರಿ ಹಡಗುಗಳಲ್ಲಿ ತಕ್ಕಡಿಯ ಅಡಿಯಲ್ಲಿಯೇ ಕ್ರೈಸ್ತ ಮಿಷನರಿಗಳೂ ಭಾರತದ ನೆಲಕ್ಕೆ ಬಂದಿಳಿದವು.

ಪಾಶ್ಚಾತ್ಯ ದಾಳಿಯಿಂದ ಭಾರತದ ಸಂಪತ್ತು ಕೊಳ್ಳೆಹೋಯಿತು ಎನ್ನುವುದು ಸತ್ಯವೇ ಆದರೂ ಅವರು ಹೊಸ ಜಗತ್ತಿನ ಕಿಂಡಿಯೊಂದನ್ನು ತೆರೆದರು ಎನ್ನುವುದೂ ಅಷ್ಟೇ ಸತ್ಯ. ಈ ಕಿಂಡಿ ಭಾರತದ ಪಾಲಿಗೆ ಮತ್ತೊಂದು ಜಗತ್ತನ್ನು ನೋಡುವ ಕಣ್ಣೂ, ತನ್ನನ್ನು ತಾನೇ ಹೊಸ ಬೆಳಕಿನಲ್ಲಿ ನೋಡಿಕೊಳ್ಳುವ ಕನ್ನಡಿಯೂ ಆಯಿತು. ಬರೀ ಅಭಿವೃದ್ಧಿ, ಸೌಕರ್ಯಗಳ ವಿಷಯದಲ್ಲಷ್ಟೇ ಅಲ್ಲ, ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಿಕವಾಗಿಯೂ ಈ ಮಾತು ಅನ್ವಯಿಸುತ್ತದೆ.

ನಮ್ಮ ಸಾಹಿತ್ಯ, ಸಂಸ್ಕೃತಿಯನ್ನು ಶೋಧಿಸುವ, ದಾಖಲಿಸುವ ಕಾರ್ಯದಲ್ಲಿ ಕ್ರೈಸ್ತ ಮಿಷನರಿಗಳ ಪಾತ್ರ ದೊಡ್ಡದಿದೆ. ಇದು ಕನ್ನಡಕ್ಕೂ ಅನ್ವಯಿಸುತ್ತದೆ. ಕನ್ನಡ ನಾಡಿನಲ್ಲಿ ಕ್ರೈಸ್ತ ಮಿಷನರಿಗಳು, ಅದರ ಪ್ರತಿನಿಧಿಗಳಾಗಿ ಬಂದ ಹಲವು ವಿದ್ವಾಂಸರು ಮಾಡಿದ ಗಣನೀಯ ಕೆಲಸವನ್ನು ಸ್ಮರಿಸಿ ದಾಖಲಿಸುವ ಕೆಲಸವನ್ನು ಕೈಗೊಂಡವರು ಅಪರೂಪ. ಹಾಗಾಗಿಯೇ ಪ್ರೊ.ಎ.ವಿ. ನಾವಡ ಅವರ ‘ಮಿಷನರಿಗಳ ಕನ್ನಡ ವೃತ್ತಾಂತವು’ ಕೃತಿ ಮಹತ್ವದ ಪ್ರಯತ್ನವಾಗಿದೆ.

ಕ್ರೈಸ್ತ ಮಿಷನರಿಗಳು, ಪ್ರಾದೇಶಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಲ್ಲಿನ ಜನರ ಅಗತ್ಯಗಳನ್ನು ಅರಿತುಕೊಂಡು ನಂತರ ಧರ್ಮಪ್ರಚಾರ ಮಾಡಬೇಕು ಎಂದು ತಮ್ಮ ಕಾರ್ಯವೈಖರಿ ರೂಪಿಸಿಕೊಂಡಿದ್ದವು. ಅವರು ಮೊದಲು ಒತ್ತು ನೀಡಿದ್ದು ಶಿಕ್ಷಣಕ್ಕೆ. ಶಾಲೆಗಳನ್ನು ತೆರೆದರು. ನಂತರ ಪ್ರಾದೇಶಿಕ ಸಾಹಿತ್ಯವನ್ನು ಮುದ್ರಣ ತಂತ್ರಜ್ಞಾನದ ಮೂಲಕ ಮುದ್ರಿಸುವ ಕೆಲಸವನ್ನೂ ಮಾಡಿದರು.

1836ರಲ್ಲಿ ಕ್ರೈಸ್ತ ಸುವಾರ್ತೆಗಳನ್ನು ಪ್ರಚುರಪಡಿಸಲು ಭಾರತಕ್ಕೆ ಬಂದ ಹೆರ್ಮನ್‌ ಮ್ಯೋಗ್ಲಿಂಗ್‌ ಮಂಗಳೂರಿಗೆ ಬಂದವನೇ ಕನ್ನಡ ಕಲಿತು, ಕನ್ನಡ ಶಾಲೆ ತೆರೆದ. ಅಷ್ಟೇ ಅಲ್ಲ, ಮಧ್ಯಕಾಲೀನ ಕನ್ನಡ ಕಾವ್ಯಗಳನ್ನು ಸಂಪಾದಿಸಿ, ಕಲ್ಲಚ್ಚಿನಲ್ಲಿ ದಾಸರ ಪದಗಳು, ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ತೊರವೆ ರಾಮಾಯಣ, ಹರಿಭಕ್ತಿ ಸಾರ, ಬಸವಪುರಾಣ, ಚನ್ನಬಸವ ಪುರಾಣ, ರಾವಣ ದಿಗ್ವಿಜಯ (ಯಕ್ಷಗಾನ) ಸೇರಿದಂತೆ ಹಲವು ಕನ್ನಡದ ಮುಖ್ಯ ಕೃತಿಗಳನ್ನು ಮುದ್ರಿಸಿದ. ಕನ್ನಡದ ಮೊತ್ತ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಪ್ರಾರಂಭಿಸಿದವನೂ ಅವನೇ.

ಇದು ಒಂದು ಉದಾಹರಣೆಯಷ್ಟೇ, ಧರ್ಮಪ್ರಚಾರಕ್ಕಾಗಿ ಬಂದ ರೆ. ವಿಲಯಂ ಕೇರಿ, ರೆ.ಜಿ. ವೈಗಲ್, ರೆ. ಫರ್ಡಿನಂಡ್ ಕಿಟೆಲ್‌, ರೆ. ಜೀಗ್ಲರ್ ಸೇರಿದಂತೆ ಹಲವರು ಕನ್ನಡವನ್ನು ಕಲಿತು, ಕನ್ನಡ ಸಂಸ್ಕೃತಿ, ಚರಿತ್ರೆಗಳನ್ನು ಅಭ್ಯಸಿಸಿ ನುಡಿಕಟ್ಟುವ ಕೆಲಸದಲ್ಲಿ ತೊಡಗಿಕೊಂಡವರು. ಫರ್ಡಿನಂಡ್ ಕಿಟೆಲ್ ಅವರಂತೂ ಕನ್ನಡಕ್ಕೆ ಅನನ್ಯವಾದ ಶಬ್ದಕೋಶವನ್ನೇ ಕೊಟ್ಟವರು. ಇಲ್ಲಿನ ಜನರ ಜತೆ ಬೆರೆತು ಕೆಲಸ ಮಾಡಿದ ಕಾರಣಕ್ಕೆ ತಮ್ಮನ್ನು ಭಾರತಕ್ಕೆ ಕಳುಹಿಸಿದ ಮಾತೃಸಂಸ್ಥೆಯ ಕೆಂಗಣ್ಣಿಗೂ ಗುರಿಯಾದವರು.

ಇಂಥ ಹಲವು ವಿದ್ವಾಂಸರ ಕನ್ನಡ ಕೆಲಸಗಳು ಮತ್ತು ಅದರಿಂದ ಕನ್ನಡಕ್ಕೆ ಉಂಟಾದ ಉಪಯೋಗವನ್ನು ಈ ಪುಸ್ತಕದಲ್ಲಿ ಲೇಖಕರು ಸವಿಸ್ತಾರವಾಗಿ ವಿವರಿಸಿದ್ದಾರೆ. ಸಂಶೋಧಕರ, ಸಾಮಾಜಿಕ ಚಟುವಟಿಕೆಗಳ ಕುರಿತಾಗಿ ಹೇಳುವ ಕೃತಿಯಾದರೂ ಇದು ಅನಗತ್ಯ ಪರಿಭಾಷೆಗಳ ಭಾರದಿಂದ ನರಳುವುದಿಲ್ಲ. ಕತೆಯ ರೀತಿಯಲ್ಲಿಯೇ ಓದಿಸಿಕೊಂಡು ಹೋಗುವ ಗುಣ ಈ ಪುಸ್ತಕಕ್ಕಿದೆ.

ವ್ಯಕ್ತಿಗಳು, ಅವರು ಮಾಡಿದ ಕೆಲಸಗಳ ವಿಶ್ಲೇಷಣೆ ಜತೆಗೆ ಸಾಹಿತ್ಯ ಕೃತಿಗಳ ಕುರಿತೂ ಇಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿಯೇ, ಇದು ಸಂಶೋಧನಾ ಆಸಕ್ತರಿಗೂ, ಕನ್ನಡ ಮತ್ತು ಕ್ರೈಸ್ತ ಮಿಷನರಿಗಳ ಸಂಬಂಧದ ಕುರಿತು ಕುತೂಹಲ ಇರುವವರೂ, ಸುಮ್ಮನೇ ಆಸಕ್ತಿಗೆ ಓದಿಕೊಳ್ಳುವವರಿಗೂ ಒದಗಿಬರಬಲ್ಲ
ಕೃತಿಯಾಗಿದೆ.

ಪುಸ್ತಕ: ಮಿಷನರಿಗಳ ಕನ್ನಡ ವೃತ್ತಾಂತವು

ಲೇಖಕರು: ಪ್ರೊ. ಎ.ವಿ. ನಾವಡ

ಪುಟಗಳು: 244 ಬೆಲೆ: ₹ 360

ಪ್ರಕಾಶನ: ಶೋಧನ ಪ್ರಕಾಶನ, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT