ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಶ್ವತತೆಗೆ ಹಂಬಲಿಸುವ ‘ಘಳಿಗೆಯ ಸ್ಮಾರಕ’ಗಳು!

ಫಾಲೋ ಮಾಡಿ
Comments

ಎಚ್‌.ಎಸ್‌. ಮುಕ್ತಾಯಕ್ಕನವರ ಸಮಗ್ರ ಗಜಲುಗಳ ಸಂಕಲನ ‘ಮೈಂ ಅವ್ರ ಮೇರೆ ಲಮ್ಹೆ’ ಪ್ರಕಟವಾಗಿದೆ. ಕನ್ನಡದ ಒಂಟಿ ಕೋಗಿಲೆಯಂತೆ ಭಾಸವಾಗುವ ಮುಕ್ತಾಯಕ್ಕನವರ ಗಜಲುಗಳು ಈಗ ಒಟ್ಟಾಗಿ ಸಿಕ್ಕಿರುವುದು ಕಾವ್ಯದೊಂದಿಗಿನ ಅವರ ನಿಡುಗಾಲದ ಉತ್ಕಟ ಸಂಬಂಧದ ಸಾತತ್ಯವನ್ನು ಓದುಗರೂ ಪರಿಭಾವಿಸಲು ಸಿಕ್ಕ ಅವಕಾಶ ಮತ್ತು ಆವರಣ ಎರಡೂ ಆಗಿದೆ.

ಗಜಲುಗಳ ಮೋಹಕ ಸೌಂದರ್ಯವನ್ನು ಒಪ್ಪಿ ಮೆಚ್ಚಿಯೂ ಕನ್ನಡದಲ್ಲಿ ಗಜಲುಗಳನ್ನೇ ತಮ್ಮ ಮಾಧ್ಯಮವಾಗಿಸಿಕೊಂಡವರು ಇಲ್ಲವೆನ್ನುವಷ್ಟು ಅಪರೂಪ. ರೂಢಿಸಿಕೊಂಡ ಕೆಲವೇ ಕೆಲವು ಮಂದಿಯಾದರೂ ಕಲ್ಯಾಣ ಕರ್ನಾಟಕದವರು. ಸಾಹಿತ್ಯ ಪ್ರಕಾರಗಳಿಗೆ ದೇಶ–ಕಾಲಗಳ ಹಂಗಿಲ್ಲ ಎನ್ನುವುದು ನಿಜವಾದರೂ ಅವುಗಳ ದಟ್ಟ ಪ್ರಭಾವ ಸಾಧ್ಯವಾಗುವುದು, ಅವು ನಮ್ಮೊಂದಿಗೆ ಅಖಂಡ ಸಖ್ಯ ಬೆಳೆಸಲು ಅವುಗಳೊಂದಿಗೆ ನಾನು ಎಳವೆಯಿಂದಲೂ ಕಟ್ಟಿಕೊಳ್ಳುವ ಸಂಬಂಧದ ಪಾತ್ರವೂ ಇದೆ ಎನ್ನುವುದು ನಿರ್ದಿಷ್ಟವಾಗಿ ಕನ್ನಡದ ಈ ವಿಷಯದ ಮಟ್ಟಿಗಂತೂ ನಿಜವೆನ್ನಿಸುತ್ತದೆ.

ಘಳಿಗೆಯ ಸ್ಮಾರಕದಂತೆ ಗಜಲುಗಳ ಸ್ವರೂಪ. ಹೀಗಾಗಿ ಉತ್ಕಟತೆಯೇ ಇವುಗಳ ಜೀವಧಾತು. ಗಂಟಲುಬ್ಬಿ ಬರುವ ಭಾವೋನ್ಮಾದದಲ್ಲಿ ಗಜಲುಗಳು ಅರಳುತ್ತವೆ, ಹಾಗಾಗಿಯೇ ಇವುಗಳು ಬಲು ಕಷ್ಟದವು. ಹುಸಿ ಭಾವುಕತೆಯು ಇವುಗಳ ರಚನೆಯನ್ನೇ ಹುಸಿಗೊಳಿಸಿಬಿಡುತ್ತವೆ. ಎಂದರೆ ಇವು ಎಷ್ಟು ನಾಜೂಕೋ ಅಷ್ಟೇ ಗಟ್ಟಿಯೂ ಆಗಿದ್ದಾಗ ಮಾತ್ರ ಅವುಗಳಿಗೆ ತಾಳಿಕೆಯ ಗುಣ. ಇನ್ನಿತರ ಕಾವ್ಯಗಳಿಗಾಗುವಂತೆ ಕೊನೆಯ ಪಕ್ಷ ವಸ್ತುವಿನ ಕಾರಣಕ್ಕಾದರೂ ಅವುಗಳ ಅಸ್ತಿತ್ವ, ಮಹತ್ವ ಇರಲು ಸಾಧ್ಯ. ಗಜಲುಗಳಲ್ಲಿ ಆ ಅವಕಾಶ ತೀರಾ ಕಡಿಮೆ. ಆತ್ಮದಷ್ಟೇ ದೇಹಕ್ಕೂ ಇಲ್ಲಿ ಸಮಾನ ಬೆಲೆ.

ಮುಕ್ತಾಯಕ್ಕನವರ ಗಜಲುಗಳು ಕನ್ನಡದಲ್ಲಿ ಉಳಿದು ಬಾಳುವುದು ಈ ಧಾರಣ ಶಕ್ತಿಯನ್ನು ಪಡೆದುಕೊಂಡಿರುವ ಕಾರಣಕ್ಕಾಗಿ. ಸಾಮಾನ್ಯವಾಗಿ ಲೇಖಕ ಲೇಖಕಿಯರಲ್ಲಿ ಮೂಲ ಮಾಧ್ಯಮವೊಂದು ಇದ್ದಾಗಲೂ ಇತರ ಪ್ರಕಾರಗಳಲ್ಲಿಯೂ ಅವರು ಸಕ್ರಿಯರಾಗಿರುತ್ತಾರೆ. ಎಲ್ಲೋ ಕೆಲವರಲ್ಲಿ ಮಾತ್ರ ಹಲವು ಪ್ರಕಾರಗಳಲ್ಲಿ ಏಕಪ್ರಕಾರದ ಯಶಸ್ಸೂ ಸಿಗುತ್ತದೆ. ಮುಕ್ತಾಯಕ್ಕನವರು ಏಕೋನಿಷ್ಠೆಯಿಂದ ಗಜಲುಗಳ ಜೊತೆ ಆತ್ಮಸಖ್ಯವನ್ನೇ ಕಟ್ಟಿಕೊಂಡಿದ್ದಾರೆ.

ಗಜಲುಗಳ ಘನತೆ, ಸೌಂದರ್ಯ, ಶಕ್ತಿ ಎಲ್ಲವನ್ನೂ ಮುಕ್ತಾಯಕ್ಕನವರ ಈ ಸಮಗ್ರ ಸಂಕಲನ ಹೆಚ್ಚಿಸಿದೆ. ಒಬ್ಬ ಶಕ್ತ ಕವಿಗೆ ಮಾತ್ರ ಸಾಧ್ಯವಾಗಬಹುದಾದ ಎತ್ತರ ಬಿತ್ತರಗಳು ಈ ಸಂಕಲನದಲ್ಲಿವೆ.

ಮುಕ್ತಾಯಕ್ಕನವರ ಬರವಣಿಗೆ ಅನುಭವವನ್ನು ಬುದ್ಧಿಭಾವಗಳ ಜೊತೆ ಆತ್ಮಸಂವಾದಕ್ಕೂ ಒಡ್ಡಿಯೇ ಹೊರಬಂದಂತಿದೆ. ಅವರ ಗಜಲುಗಳ ವಿಶೇಷ ಸಂಗತಿಯೆಂದರೆ, ಪ್ರೇಮವೋ, ಪ್ರೇಮಭಂಗವೋ, ಏಕಾಂತವೋ, ನಮ್ಮೊಳಗನ್ನೇ ಅಲ್ಲಾಡಿಸಿಬಿಡುವ ದುಃಖವೋ – ಯಾವುದೂ ಇರಲಿ, ಅವುಗಳನ್ನು ಘಳಿಗೆಯ ಸ್ಮಾರಕದ ಅಂಶದ ಜೊತೆಯಲ್ಲಿಯೇ ಅವುಗಳ ಶಾಶ್ವತತೆಗೂ ಕೈಚಾಚುವುದರಲ್ಲಿ. ಹೇಳಿ ಹಗುರಾಗುವುದು ಎನ್ನುವುದು ಇವರಲ್ಲಿಲ್ಲ. ಇವರಿಗೆ ಹೇಳುವುದು ತನ್ನೊಳಗೆ ತನ್ನನ್ನು ಇನ್ನಷ್ಟು ಸ್ಪಷ್ಟಮಾಡಿಕೊಳ್ಳಲು, ಗಟ್ಟಿ ಮಾಡಿಕೊಳ್ಳಲು.

ಮುಕ್ತಾಯಕ್ಕನವರಲ್ಲಿ ದುಃಖವೂ ಎಂದೂ ಸಿನಿಕತನವಾಗಲಿ, ಜೀವದ್ವೇಷಿಯಾಗಲಿ ಆಗುವುದಿಲ್ಲ. ಕಳೆದುಹೋದ, ಫಲಿಸದ ಸಂಬಂಧವೇ ಆಗಲಿ, ಇವರಲ್ಲಿ ವ್ಯಗ್ರತೆಯನ್ನು ಹುಟ್ಟಿಸಿ ಪ್ರೇಮಿಯನ್ನು ಕಣ್ಣೀರಿನಲ್ಲೇ ಸುಟ್ಟುಬಿಡುವ ಭಾವವಂತೂ ಸುಳಿಯುವುದೇ ಇಲ್ಲ. ಇನ್ನೂ ಕುತೂಹಲಕರವಾದ ಸಂಗತಿಯೆಂದರೆ ಹಲವು ಗಜಲುಗಳಲ್ಲಿ, ಈ ಸಂಬಂಧ ಥಟ್ಟೆಂದು ಮುಗಿದು ಹೋಗಿಬಿಡಬಹುದು ಎನ್ನುವ ಸೂಚನೆ ಮೊದಲೇ ಸಿಕ್ಕಿತ್ತಲ್ಲವೇ ಎನ್ನುವ ಭಾವವೂ ಮಿಂಚಿ ಮರೆಯಾಗುತ್ತದೆ. ಸಂಬಂಧವೊಂದರ ಆಯುಸ್ಸು ಎಷ್ಟೋ ಅಷ್ಟು ಮಾತ್ರವೇ ಹೊರತು ಇಲ್ಲದ್ದನ್ನು ಇದೆಯೆಂದು ಭ್ರಮಿಸುವ ಅದಕ್ಕೆ ಎದುರಿನ ವ್ಯಕ್ತಿಯನ್ನು, ಸಂದರ್ಭಗಳನ್ನು ಹೊಣೆಮಾಡುತ್ತಾ ಅದರಲ್ಲೇ ರಾಟೆ ತಿರುಗಿಸುವ ಮನೋಧರ್ಮಕ್ಕೆ ಇಲ್ಲಿನ ಗಜಲುಗಳು ಪಕ್ಕಾಗುವುದಿಲ್ಲ.

ಹೆಣ್ಣುಮಕ್ಕಳಲ್ಲಿ ಸ್ಥಾಯಿಯೆಂದು ಹೇಳಲಾಗುವ ಲೋಕರೂಢಿಯ ನಂಬಿಕೆಗಳು ಇವರಲ್ಲಿ ತಿರುವುಮುರುವುವಾಗುತ್ತವೆ. ಪ್ರೀತಿಯೆನ್ನು
ವುದು ಬದುಕಿನ ಬಹುದೊಡ್ಡ ಅನುಭವ; ಅದರಲ್ಲಿ ಸಿಕ್ಕಿದ್ದು, ಪಡೆದದ್ದು, ಕೊಟ್ಟದ್ದು ಇವೇ ಬದುಕಿನ ಮುಖ್ಯಸಂಗತಿಗಳಾಗಬೇಕಲ್ಲವೆ ಎನ್ನುವ ನಂಬಿಕೆಯಿಂದ ಇಲ್ಲಿನ ಗಜಲುಗಳು ಬದುಕನ್ನು ಇನ್ನೂ ಉತ್ಕಟವಾಗಿ ಪ್ರೀತಿಸಲು ಹಾತೊರೆಯುತ್ತವೆ. ಕೊನೆಗೂ ಏಕಾಂತವೇ ನನ್ನ ಬದುಕಿನ ವಾಸ್ತವವಾಗುವುದಾದರೆ, ಅದೂ ಘನವಾದ ಸ್ಥಿತಿಯೇ. ಪ್ರಫುಲ್ಲಗೊಳಿಸುವ ನೆನಪುಗಳೋ ಧನ್ಯತೆಯನ್ನುಕ್ಕಿಸುವ ಸಂದರ್ಭಗಳೋ, ನನ್ನ ಪಾಡಿಗೆ ನಾನಿರುವ ಅವಕಾಶವಾದರೂ ಬದುಕು ನೀಡಿದ ಒಂದು ವರವೇ ಎನ್ನುವ ಅತುಲ ವಿಶ್ವಾಸ ಏಕಾಂಗಿತನವನ್ನು ಏಕಾಂತದ ದಿವ್ಯ ಭಿತ್ತಿಗೆ ಒಯ್ಯುತ್ತವೆ.

ಮೊದಲನೆಯ ಗಜಲ್‌ನ ಈ ಸಾಲುಗಳು:

ಇರುಳ ತಂಪಿನಲಿ ನೆನಪಾಯಿತು ಬಿಸಿಯಪ್ಪುಗೆಯ ಒಡನಾಟ ತಪ್ಪಿದ್ದು

ಇನ್ನೊಂದು ಬಟ್ಟಲನು ತುಂಬುವವರಾರೆಂದು ಮಧು ಪಾತ್ರೆಯು ಕೇಳಿತು

ಯಾವುದೋ ನೋವೊಂದು ನಯನ ಹೂಗಳಲಿ ಇಬ್ಬನಿಯ ಸುರಿಸುತಿಹುದು

ಕೊನೆಯಿಲ್ಲವೆ ‘ಮುಕ್ತಾ’ ಇದಕೆಂದು ಎಲ್ಲೋ ಅಡಗಿದ್ದ ನಗೆಯು ಕೇಳಿತು

ಆ ನಗು ವಿಷಾದದ್ದೂ ಹೌದು, ಆಶಾವಾದದ್ದೂ ಹೌದು. ಇದು ಬಾಳು ನೋಡು, ಇದ ತಿಳಿದೆನೆಂದ ಧೀರರಿದ್ದಾರೋ ಇಲ್ಲವೋ ಆದರೆ ಬದುಕಂತೂ ಅಸಂತತತೆಯ ಸತತ ಮೆರವಣಿಗೆ. ಆದರೂ ಬದುಕಿನ ಸೆಳೆತವನ್ನು ಏನೆಂಥ ದುರಂತವೂ, ನೋವೂ ಕಸಿಯುವುದಿಲ್ಲವಲ್ಲ, ಅದೇನಿದ್ದೀತು ಬದುಕಿನ ಶಕ್ತಿ ಎನ್ನುವ ಬೆಕ್ಕಸ ಮುಕ್ತಾಯಕ್ಕನವರನ್ನು ಇದಿರಾಗಿದೆ, ಅವರ ಕಾವ್ಯವನ್ನು ಕಾದಿದೆ ಎಂದೇ ಹೇಳಬೇಕು. ಅವರ ಕಾವ್ಯಕ್ಕೆ ಸಾಮಾನ್ಯವಾಗಿ ಗಜಲುಗಳಿಗೆ ದಕ್ಕದ
ಅಸಾಧಾರಣ ಪ್ರಬುದ್ಧತೆ ಸಿಕ್ಕಿರುವುದು ಬದುಕಿನ ಈ ಜೀವಕ್ಷೇತ್ರವನ್ನು ಹಿಡಿದಿರುವುದರಿಂದ. ಇದೇ ಅವರ ಕಾವ್ಯದ ಮೂಲಕೇಂದ್ರವೆಂದರೂ ತಡೆಯುತ್ತದೆ.

ಯಾರಿಗಾಗಿ ಯಾರು ಕಾಯುತ ಬದುಕಿದ್ದಾರೋ ಕಾಣೆ

ಚಂದ್ರನ ತಂಪ ಹೀರಲು ಚಕೋರವಾಗಿ ಕುಳಿತಿದ್ದೇನೆ

ಏಸೋ ಜನರ ಮುಖಗಳು ನೆನಪಿನಿಂದ ಬೇಗ ಮರೆಯಾಗುತ್ತವೆ

ಆದರೆ ಆ ಮುಖದ ಅಂದ ಆ ಮೆರಗು ಥಳಥಳಿಸುತ್ತಿತ್ತು

ನಾನಿಂದು ಖುಷಿಯಾಗಿರುವೆನೋ, ಉದಾಸವಾಗಿರುವೆನೋ ಅರಿಯೆ

ಏನಿದ್ದರೂ ನಿನ್ನ ಬಳಿ ನೋವುಗಳ ಕಳಿಸುವುದ ಬಿಟ್ಟಿದ್ದೇನೆ

ಯಾರ ನೋವನ್ನು ಯಾರೂ ಕೇಳುವುದಿಲ್ಲ ಈ ಜಗದಲಿ ‘ಮುಕ್ತಾ’

ಅಂತೆಯೇ ನಾನು ಎಲ್ಲೆಲ್ಲೂ ಪ್ರೀತಿ ಹುಡುಕುವುದ ಬಿಟ್ಟಿದ್ದೇನೆ

ಮುಟ್ಟಿದಲ್ಲಿ ಮಿಡಿಯುವ ಈ ಕಾವ್ಯಪಂಕ್ತಿಗಳು ಕನ್ನಡ ಕಾವ್ಯದಲ್ಲಿ ನಿರಂತರವಾಗಿ ಉಳಿಯುತ್ತವೆ ಎನ್ನುವುದರಲ್ಲಿ ಅನುಮಾನವಿರಲು ಸಾಧ್ಯವಿಲ್ಲ.

ಕೊನೆಕೊನೆಯ ಗಜಲುಗಳು ಪ್ರಕೃತಿಯೊಂದಿಗೆ ಅದ್ವೈತವನ್ನು ಸಾಧಿಸಲು ಹವಣಿಸುತ್ತವೆ. ಸ್ವಯವನ್ನೇ ಕಳೆದುಕೊಳ್ಳುವಂತಹ ದುಃಖವೇ ಇರಲಿ, ವಿಫಲ ಪ್ರೇಮವಿರಲಿ, ಜೀವಕಾರುಣ್ಯಕ್ಕಾಗಿ ಅಂಡಲೆದ ಅಸಾಧ್ಯ ದಣಿವಿರಲಿ – ಎಲ್ಲವನ್ನೂ ಆರಿಸಿಬಿಡುವ ಮಾಂತ್ರಿಕ ಪ್ರಕೃತಿಯೊಂದಿಗೆ ಸೇರುವುದಕ್ಕಿಂತ ಭಾಗ್ಯ ಮತ್ತಾವುದು? ಸಕಲ ಸಂದೇಹಗಳು ಬಳಲಿ ಬಳಿಗೈತಂದು ಎನ್ನುತ್ತಾರಲ್ಲ ಪುತಿನ, ಹಾಗೆ ಈತನಕದ ಆಸೆ, ನಿರಾಸೆ, ದುಗುಡ ದುಮ್ಮಾನಗಳು ಈ ಎಲ್ಲವನ್ನೂ ಪ್ರಕೃತಿಯ ಮಡಿಲಲ್ಲಿ ಸುರಿದುಬಿಟ್ಟರೆ ಸಾಕು – ಅದೆಂಥ ಶಾಂತಿ, ನೆಮ್ಮದಿ ಎನ್ನುವ ಅಂತಿಮ ಭರವಸೆಯನ್ನು ಇಲ್ಲಿನ ಕವಿತೆಗಳು ಎತ್ತಿ ಹಿಡಿಯುತ್ತವೆ.

ಮನ ಬಂದತ್ತ ಅಲೆಯುವೆ ನನಗಿಲ್ಲ ದುಃಖ ನೋವು ಸಾವುಗಳು

ಈಸು ದಿನದ ಬಂಧನ ಕಳಚಿ ಆಕಾಶದಲ್ಲಿ ತೇಲಿ ಹೋಗುವೆ

ಯಾವ ಆಕಾಂಕ್ಷೆ ಇಚ್ಚೆ ಇಲ್ಲದೆ ಶೂನ್ಯದಲ್ಲಿ ತೇಲಿ ಹೋಗುವೆ

ಗೊತ್ತು ಗುರಿ ಅಂಕೆಶಂಕೆಯೊಂದೂ ಇಲ್ಲದ ‘ಆವಾರಾ’ ನಾನು

ನಗುನಗುತ ಕ್ಷಿತಿಜದಾಚೆ ಬಹುದೂರ ಮುಗಿಲಲ್ಲಿ ತೇಲಿಹೋಗುವೆ

ಇಂಥ ನಿಲುವು ಪಲಾಯನವಾದವಲ್ಲ, ಅದು ಧೀರತೆಯ ನಿಲುವು. ಈಸುವ ಸ್ಥೈರ್ಯದ ನಿಲುವು, ಕೊನೆಯ ಕ್ಷಣದವರೆಗೂ ತನ್ನನ್ನೂ ಲೋಕವನ್ನೂ ಪ್ರೀತಿಯಲ್ಲಿ ತೋಯಿಸಿ ಬದುಕು ಮುಗಿಸುವ ಅನಂತ ಪ್ರೀತಿಯ ನಿಲುವು ಇದು.

ಮುಕ್ತಾಯಕ್ಕನವರ ಕಾವ್ಯವನ್ನು ಸದಾ ಪಕ್ಕಕ್ಕಿಟ್ಟ ಕನ್ನಡದ ವಿದ್ವತ್ ಲೋಕ ಈಗಲಾದರೂ ಈ ಅಪ್ಪಟ ಕಾವ್ಯಕ್ಕೆ ಮರಳುವಂತಾಗಲಿ. ಕನ್ನಡ ಕಾವ್ಯ ಪರಂಪರೆಯಲ್ಲಿ ಇವರ ಕಾವ್ಯಕ್ಕೊಂದು ಶಾಶ್ವತ ಸ್ಥಾನವಿದೆ. ಆದರೆ ಅದು ವರ್ತಮಾನವೇ ಆಗಬೇಕಾಗಿರುವುದು ಅವರ ಕಾವ್ಯದ ಹಕ್ಕು.

ಕೃತಿ: ಮೈಂ ಅವ್ರ ಮೇರೆ ಲಮ್ಹೆ

ಲೇ: ಎಚ್‌.ಎಸ್‌. ಮುಕ್ತಾಯಕ್ಕ

ಬೆ: ರೂ. 270

ಪ್ರ: ಸಂಗಾತ ಪುಸ್ತಕ. ಫೋನ್: 8431113501

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT