ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗತಿಹಳ್ಳಿ ಅವರ ಶತಮಾನದಂಚಿನಲಿ ಪುಸ್ತಕ ‘ಸಾಂಸ್ಕೃತಿಕ ಜಗತ್ತಿನ ಅನನ್ಯ ಚಿತ್ರಣ’

Last Updated 15 ಜನವರಿ 2022, 23:45 IST
ಅಕ್ಷರ ಗಾತ್ರ

ಜಗತ್ತು ಅಭೂತಪೂರ್ವ ಬದಲಾವಣೆಯನ್ನು ಕಂಡ ಕಾಲಘಟ್ಟ – ಕಳೆದ ಶತಮಾನ. ಅದು ಕೈಗಾರಿಕಾ ಕ್ರಾಂತಿಯೇ ಆಗಿರಬಹುದು, ಕಲ್ಪನಾತೀತವಾಗಿದ್ದ ಸಾಮಾಜಿಕ, ರಾಜಕೀಯ ಪಲ್ಲಟಗಳೇ ಆಗಿರಬಹುದು, ಬದುಕಿನ ಗತಿಯನ್ನೇ ಬದಲಿಸಿದ ವೈಜ್ಞಾನಿಕ ಪ್ರಗತಿಯೇ ಆಗಿರಬಹುದು. ಅಬ್ಬಬ್ಬಾ, ಎಂತೆಂಥ ಸೋಜಿಗದ ಸ್ಥಿತ್ಯಂತರಗಳಿಗೆ ಕಳೆದ ಶತಮಾನ ಸಾಕ್ಷಿಯಾಗಿದೆ. ಅಂತೆಯೇ ಜಗತ್ತಿನ ಸಾಂಸ್ಕೃತಿಕ ಚಹರೆಯು ಬದಲಾದ ಕಾಲಘಟ್ಟ ಕೂಡ ಇದಾಗಿದೆ. ಹಾಗಾದರೆ ಆಗ ಭಾರತೀಯ ಸಾಂಸ್ಕೃತಿಕ ಜಗತ್ತಿನಲ್ಲಿ ಏನೆಲ್ಲ ಮಹತ್ತರ ಬದಲಾವಣೆಗಳು ಘಟಿಸಿವೆ? ನಾಗತಿಹಳ್ಳಿ ಚಂದ್ರಶೇಖರ ಅವರು ಸಂಪಾದಿಸಿರುವ ‘ಶತಮಾನದಂಚಿನಲಿ’ ಕೃತಿಯ ಮುಖ್ಯ ಪ್ರಶ್ನೆ ಇದೇ ಆಗಿದೆ. ದಶಕಗಳ ಹಿಂದೆಯೇ ಬಂದ ಈ ಕೃತಿ ಈಗ ಮರುಮುದ್ರಣ ಕಂಡಿದೆ.

ಕಳೆದ ಶತಮಾನದ ಹಲವು ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದ್ದ ಹದಿನೆಂಟು ಜನ ಚಿಂತಕರು, ಲೇಖಕರು ಹಾಗೂ ಕಲಾವಿದರ ಮುಂದೆ ಹನ್ನೆರಡು ಪ್ರಶ್ನೆಗಳನ್ನಿಟ್ಟು, ಪಡೆದ ಉತ್ತರಗಳೇ ಈ ಕೃತಿಯ ಲೇಖನಗಳಾಗಿವೆ. ಸಾಹಿತ್ಯ, ಸಿನಿಮಾ, ರಂಗಭೂಮಿ, ಕಲೆ ಮತ್ತು ಪರಿಸರದ ಕುರಿತು ಇಲ್ಲಿನ ಲೇಖನಗಳು ಮಾತನಾಡುತ್ತವೆ. ಜಿ.ಎಸ್‌. ಶಿವರುದ್ರಪ್ಪ, ಎ.ಎನ್‌.ಮೂರ್ತಿರಾವ್‌, ಎಲ್‌.ಎಸ್‌.ಶೇಷಗಿರಿರಾವ್‌, ಗಿರೀಶ ಕಾರ್ನಾಡ, ಬಿ.ಸಿ. ರಾಮಚಂದ್ರ ಶರ್ಮ, ಎಂ.ಎಚ್‌. ಕೃಷ್ಣಯ್ಯ, ಗಿರಡ್ಡಿ ಗೋವಿಂದರಾಜ್‌, ಗಿರೀಶ ಕಾಸರವಳ್ಳಿ, ಬರಗೂರು ರಾಮಚಂದ್ರಪ್ಪ ಮೊದಲಾದವರ ವಿದ್ವತ್‌ಪೂರ್ಣ ಹಾಗೂ ತಲಸ್ಪರ್ಶಿ ಲೇಖನಗಳು ಇಲ್ಲಿವೆ. ಜಗತ್ತಿನ ಸಂಸ್ಕೃತಿಯ ಹಿನ್ನೆಲೆಯಲ್ಲಿ ಭಾರತೀಯತೆಯನ್ನು ಅವುಗಳು ಚರ್ಚೆ ಮಾಡಿವೆ.

‘ಶತಮಾನದ ಹಿನ್ನೋಟ’ ಎಂಬ ಲೇಖನದಲ್ಲಿ ಜಿಎಸ್‌ಎಸ್‌, ಸಾಹಿತ್ಯ ಪರಂಪರೆಯ ನಿರ್ಮಾಣ ಹಾಗೂ ಮುಂದುವರಿಕೆಯನ್ನು ವಿವರವಾಗಿ ವಿಶ್ಲೇಷಿಸಿ, ಈಗ ಎಲ್ಲ ಚಳವಳಿಗಳೂ ಮುಗಿದಿದ್ದು ಮುಂದಿನ ದಾರಿಯನ್ನು ಕಂಡುಕೊಳ್ಳಬೇಕಿದೆ ಎಂಬ ಅಭಿಪ್ರಾಯವನ್ನು ಮಂಡಿಸಿದ್ದಾರೆ. ನಾವು ನಿಜವಾದ ವೈಚಾರಿಕ ನೆಲೆಯಲ್ಲಿ ಸ್ವತಂತ್ರವಾದ, ಸ್ವಾವಲಂಬಿಯಾದ, ಆತ್ಮ ಗೌರವವುಳ್ಳ ವಿಶಿಷ್ಟ ವ್ಯಕ್ತಿಗಳಾಗಿ ರೂಪುಗೊಳ್ಳುವುದು ಹೇಗೆ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟಿದ್ದಾರೆ.

ಕಾರ್ನಾಡರ ಬರಹವು ಇಂಗ್ಲಿಷರ ಬಳವಳಿಯಾದ ನಗರ ಸಂಸ್ಕೃತಿಯ ಕುರಿತು ಚರ್ಚಿಸಿದೆ. ಸಿನಿಮಾ, ರಂಗಭೂಮಿ ಹಾಗೂ ಪರಿಸರಕ್ಕೆ ಸಂಬಂಧಿಸಿದ ಅನನ್ಯ ಬರಹಗಳು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. ಕೃತಿಗೆ ಲಂಕೇಶರ ಮುನ್ನುಡಿ ಬೇರೆ ಇದೆ. ಆ ಲೇಖನದಲ್ಲಿ ಜಿಎಸ್‌ಎಸ್‌ ಸೇರಿದಂತೆ ಬಹುತೇಕ ಲೇಖಕರನ್ನು ಅವರು ಕುಟುಕಿದ್ದಾರೆ. ‘ತಾರತಮ್ಯದ ಗ್ರಹಿಕೆಯ ಕೊರತೆ’, ‘ಅಸ್ಪಷ್ಟ ಗೊಣಗಾಟ’, ‘ಕುಕಾವ್ಯದ ಅಡ್ಡದಾರಿ’, ‘ಕಣಿ ಹೇಳುವುದು’, ‘ಮೊಸಳೆ ಕಣ್ಣೀರು’, ‘ಚಿಂತನೆಯ ಅಭಾವ’ ಎಂದೆಲ್ಲ ಇಲ್ಲಿನ ಲೇಖನಗಳನ್ನು ಟೀಕಿಸಿದ್ದಾರೆ. ಈ ಅಭಿಪ್ರಾಯವನ್ನು ಒಪ್ಪುವುದಿಲ್ಲ ಎಂದು ನಾಗತಿಹಳ್ಳಿಯವರು ಆರಂಭದಲ್ಲೇ ಸ್ಪಷ್ಟಪಡಿಸಿದ್ದಾರೆ. ‘ಲಂಕೇಶರ ಬೈಗುಳ ಹೊಟ್ಟೆಕಿಚ್ಚಿನ ಹತಾಶ ವ್ಯಕ್ತಿಯ ಕಾರುವಿಕೆಯಾಗಿ ಕಾಣುತ್ತದೆ’ ಎಂದು ಸುಮತೀಂದ್ರ ನಾಡಿಗ್‌ ಅವರು ಈ ಕೃತಿಗೆ ಬರೆದ ವಿಮರ್ಶೆಯಲ್ಲಿ ಅಭಿಪ್ರಾಯಪಟ್ಟಿದ್ದ ನೆನಪು. ‘ಆಹ್ವಾನಿತ ಬರಹಗಳಿಗೆ ಅನಾಯಾಸ ಮಂಗಳಾರತಿ’ ಎನ್ನುವುದು ಅವರ ವಿಮರ್ಶಾಬರಹಕ್ಕೆ ಕೊಟ್ಟಿದ್ದ ತಲೆಬರಹವಾಗಿತ್ತು. ಆಗಿನ ಸಾಂಸ್ಕೃತಿಕ ಚಹರೆಯ ದರ್ಶನಕ್ಕೆ ಈ ಎರಡು ಲೇಖನಗಳೂ ನೆರವಿಗೆ ಬಂದಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT