ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಸಂಸ್ಕೃತಿಯ ಲವಲವಿಕೆಯ ನಿರೂಪಣೆ

Last Updated 15 ಏಪ್ರಿಲ್ 2023, 19:31 IST
ಅಕ್ಷರ ಗಾತ್ರ

ಆಹಾರ ಸಂಸ್ಕೃತಿ ವ್ಯಾಪಕವಾದದ್ದು. ಅದರ ಕುರಿತು ತರಹೇವಾರಿ ಕೃತಿಗಳು ಬಂದಿವೆ. ಖಾದ್ಯ ಮಾಡುವುದು ಹೇಗೆ ಎನ್ನುವ ಬಗೆಗಂತೂ ಓತಪ್ರೋತವಾಗಿ ಲೇಖನಗಳು ಪ್ರಕಟವಾಗುತ್ತವೆ. ಜನಾನುಕೂಲಕ್ಕೆ ಇಂತಹ ಬರವಣಿಗೆ ಮುಖ್ಯವೇನೋ ಹೌದು. ಆದರೆ, ಆಹಾರ ಸಂಸ್ಕೃತಿ ಹಾಗೂ ಖಾದ್ಯ ವೈವಿಧ್ಯವನ್ನು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ನೋಡುತ್ತಲೇ, ಲವಲವಿಕೆಯಿಂದ ಬರೆಯುವವರು ವಿರಳ. ಪ್ರೊ.ಕೆ.ಈ. ರಾಧಾಕೃಷ್ಣ ಅವರ ‘ಊಟಾ...ಹಾರ’ ಕೃತಿಯು ಈ ದೃಷ್ಟಿಯಿಂದ ಅಪರೂಪದ್ದು.

ಲಘು ಧಾಟಿಯಲ್ಲಿ ಅವರು ಇಲ್ಲಿನ ಬರಹಗಳಿಗೆ ಪ್ರವೇಶಿಕೆಯೊಂದನ್ನು ಕಲ್ಪಿಸುತ್ತಾರಾದರೂ, ಅವುಗಳಲ್ಲಿ ಭರಪೂರ ಮಾಹಿತಿಯೂ ಅಡಕವಾಗಿರುವುದು ಗಮನಾರ್ಹ. ಏಳು ಭಾಗಗಳಾಗಿ ಅವರು ಮೂವತ್ತೆಂಟು ಲೇಖನಗಳನ್ನು ವರ್ಗೀಕರಿಸಿದ್ದಾರೆ. ‘ನನ್ನಗೀತೆ–ಧರ್ಮಗೀತೆ’, ‘ಮೂಲಧಾರ–ಮೂಲಾಹಾರ’, ‘ನಿತ್ಯಾನಂದಕರೀ–ಬಲಕರೀ’, ‘ಪಿಬರೇ ಆನಂದರಸಮ್‌’... ಹೀಗೆ ಅಧ್ಯಾಯಗಳಿಗೆ ಅವರು ಶೀರ್ಷಿಕೆ ನೀಡಿರುವುದರಲ್ಲೇ ಓದಿಸಿಕೊಳ್ಳುವ ಗುಣವನ್ನು ದಕ್ಕಿಸಿಕೊಡಬೇಕೆಂಬ ಉಮೇದು ಸ್ಪಷ್ಟ.

ಮೊದಲ ಭಾಗದಲ್ಲಿ ವಿವಿಧ ಧರ್ಮಗಳಲ್ಲಿ ಅನ್ನಾಹಾರದ ಕುರಿತ ಉಲ್ಲೇಖಗಳನ್ನು ಬಳಸಿಕೊಂಡು ರಾಧಾಕೃಷ್ಣ ಅವರು ಲೇಖನಗಳನ್ನು ಬರೆದಿದ್ದಾರೆ. ಸ್ತೋತ್ರಗಳು, ಬೈಬಲ್‌ನಲ್ಲಿನ ಉಲ್ಲೇಖಗಳು, ಇಸ್ಲಾಂ ಧರ್ಮ ಯಾವ್ಯಾವುದನ್ನು ಪವಿತ್ರ ಆಹಾರ ಎನ್ನುತ್ತದೆ ಎನ್ನುವುದರ ಪ್ರಸ್ತಾಪ, ಜೈನಾಹಾರ ಹೇಗಿರುತ್ತದೆ ಎನ್ನುವ ಒಳನೋಟ ಎಲ್ಲವನ್ನೂ ಒಳಗೊಂಡ ಭಾಗವು ಲಘು ಧಾಟಿಯ ಬರಹಗಳಲ್ಲೂ ಇರುವ ಅಧ್ಯಯನಶೀಲ ಗುಣವನ್ನೂ ಅನಾವರಣಗೊಳಿಸುತ್ತದೆ.

ಸಾಂಪ್ರದಾಯಿಕ ತಿನಿಸುಗಳು, ಆಹಾರ ಪದ್ಧತಿಯಷ್ಟೇ ಅಲ್ಲದೆ ಈ ಕಾಲದ ಪಿಡ್ಜಾ ಕುರಿತಂತೆ ಆಸಕ್ತಿಕರ ಲೇಖನವೊಂದು ಕೃತಿಯಲ್ಲಿದೆ. ಅದರಲ್ಲಿ ಬರುವ ಈ ಪ್ಯಾರಾ ಗಮನಿಸೋಣ: ’ಎರಡನೇ ಮಹಾಯುದ್ಧದ ಸಂದರ್ಭ, ’ಮಿತ್ಯಸೈನ್ಯ‘ಗಳು ಇಟಲಿಯಲ್ಲಿ ಬೀಡುಬಿಟ್ಟ ಬಳಿಕ, ಕಾಳಗದ ಮಧ್ಯೆಯೂ ಸುಲಭವಾಗಿ ತಿನ್ನಬಲ್ಲ ಈ ಪಿಜ್ಸಾ ಸೈನಿಕರಿಗೆ ಪ್ರಿಯವಾಯಿತು. ಯುದ್ಧಾನಂತರ ಇಟಲಿಯೇತರರೂ, ಪಿಜ್ಸಾವನ್ನು ಬೇಂಡ್‌ ಬಾಜಾದೊಂದಿಗೆ ಪಲ್ಲಕ್ಕಿ ಮೆರವಣಿಗೆ ಮಾಡಿದರು‘.

ತಿನಿಸೊಂದರ ವ್ಯಾಪಕತೆಯ ಬೀಜವನ್ನು ಹುಡುಕುವ ಇಂತಹ ಪ್ರಯತ್ನಗಳು ಪುಸ್ತಕದಲ್ಲಿ ಢಾಳಾಗಿ ಕಾಣುತ್ತವೆ. ಕವಿವಾಣಿ, ಸ್ತೋತ್ರ, ನುಡಿಗಟ್ಟುಗಳ ಬಳಕೆ, ಪದಗಳ ಚಮತ್ಕಾರ ಎಲ್ಲವೂ ಇರುವುದರಿಂದ ಒಳ್ಳೆಯ ಓದನ್ನು ದಕ್ಕಿಸಿಕೊಡುತ್ತದೆ. ಕಾಯಿಪಲ್ಲೆಗಳ ಪ್ರಸ್ತಾಪ ಮಾಡುವ ಬರಹಗಳಲ್ಲದೆ, ಪಾಶ್ಚಿಮಾತ್ಯ ದೇಶಗಳಿಂದ ಬಂದ ಕೇಕ್ ಮತ್ತಿತರ ತಿನಿಸುಗಳ ಆಕಸ್ತಿಕರ ಮಾಹಿತಿಯೂ ಇದರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT