ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ರಾಜೀವ್ ಜೊತೆ ಕೆಲಸ ಮಾಡಿದ್ದು

Published 23 ಸೆಪ್ಟೆಂಬರ್ 2023, 23:30 IST
Last Updated 23 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಪ್ರಧಾನಮಂತ್ರಿ ನನ್ನದೇ ಪ್ರಾಯ ವರ್ಗದವರಾಗಿದ್ದುದರಿಂದ, ನನಗೆ ನಮ್ಮ ತಲೆಮಾರಿನ ದಿನಗಳು ಆರಂಭಗೊಂಡಿವೆ ಮತ್ತು ನಿಜಕ್ಕೂ ಹೊಸದು ಮಾಡಿ ತೋರಿಸಬಹುದು ಅನ್ನಿಸತೊಡಗಿತ್ತು. ರಾಜೀವ್ ಸಂಪುಟದ ಹೆಚ್ಚಿನ ಹಿರಿಯ ಸದಸ್ಯರು ಪೂರ್ಣಕಾಲಿಕ ರಾಜಕಾರಣಿಗಳಾಗಿದ್ದರು. ಅವರು ಯಾರೂ ಉದ್ಯೋಗದ ಅನುಭವ ಇದ್ದವರಾಗಿರಲಿಲ್ಲ. ಆದರೆ ರಾಜೀವ್, ಇಂಡಿಯನ್ ಏರ್‌ಲೈನ್ಸ್‌ನಲ್ಲಿ ಕಮರ್ಷಿಯಲ್ ಪೈಲಟ್ ಅಗಿ ಕೆಲಸ ಮಾಡಿದ ಅನುಭವ ಇದ್ದವರು. ಇದು ಅವರಿಗೆ ವೃತ್ತಿಪರರ ಜೊತೆ ಹೇಗೆ ಕೆಲಸ ಮಾಡಬೇಕೆಂಬುದನ್ನು ಅರ್ಥೈಸಿತ್ತು. ಅವರು ತಾಂತ್ರಿಕ ಪರಿಣತಿಯನ್ನು ಗೌರವಿಸುತ್ತಿದ್ದರು ಮತ್ತು ಹೊಸ ತಂತ್ರಜ್ಞಾನಗಳ ಅಗತ್ಯದ ಅರಿವು ಅವರಿಗಿತ್ತು ಮತ್ತು ಅದಕ್ಕೆ ತರಬೇತಿ ಅಗತ್ಯ ಎಂಬುದನ್ನು ಅವರು ಮನಗಂಡಿದ್ದರು. ಅವರಿಗೆ ಫೋಕ್ಕರ್ ವಿಮಾನಗಳ ಚಾಲನೆಗೆ ಲೈಸನ್ಸ್ ಇತ್ತು. ಅವರು ತಮ್ಮ ಉದ್ಯೋಗ ಬಿಟ್ಟು ರಾಜಕೀಯ ಸೇರುವ ಹೊತ್ತಿಗೆ, ಜೆಟ್ ವಿಮಾನಗಳನ್ನು ಹಾರಿಸುವ ತರಬೇತಿ ಪಡೆಯಲು ಆರಂಭಿಸುವ ಹಂತದಲ್ಲಿದ್ದರು.
ಎಲ್ಲ ಸಚಿವರು ಮತ್ತು ಬಹುತೇಕ ಎಲ್ಲ ಹಿರಿಯ ಸರ್ಕಾರಿ ಅಧಿಕಾರಿಗಳು ಕಂಪ್ಯೂಟರ್ ನಿರಕ್ಷರಿಗಳಾಗಿರುವ ಹೊತ್ತಿಗೆ, ರಾಜೀವ್ ಗಾಂಧಿ ಬಹಳ ಆರಾಮವಾಗಿ ಕಂಪ್ಯೂಟರ್ ಬಳಸಬಲ್ಲವರಾಗಿದ್ದರು. ಆಗ ರೈಲ್ವೇ ಸಚಿವರಾಗಿದ್ದ ಮಾಧವ ರಾವ್ ಸಿಂಧಿಯಾ ಅವರು ರೈಲ್ವೇಯಲ್ಲಿ ಹೆಚ್ಚುತ್ತಿರುವ ವೆಚ್ಚಗಳನ್ನು ಸರಿದೂಗಿಸಲು, ಸರಕು ಮತ್ತು ಪ್ರಯಾಣಿಕ ರೈಲುಗಳ ದರ ಹೆಚ್ಚಳದ ಪ್ರಸ್ತಾವವನ್ನು PMOಗೆ ತಂದಾಗ, ಈ ಕಂಪ್ಯೂಟರ್ ನಿರಕ್ಷರತೆಯ ವ್ಯತ್ಯಾಸ ಬಹಳ ಢಾಳಾಗಿ ತೋರಿತು. ಪ್ರಧಾನಮಂತ್ರಿಗಳು ಬೇರೆ ಪರ್ಯಾಯ ಸಾಧ್ಯತೆಗಳನ್ನು ಪರಿಶೀಲಿಸಬಯಸಿದ್ದರು. ಅವರು ಈ ಮಾತುಕತೆಯ ವೇಳೆ ಪ್ರತೀ ಬಾರಿ ಸಲಹೆಯೊಂದನ್ನು ಮುಂದಿಟ್ಟಾಗಲೂ, ರೈಲ್ವೇ ಅಧಿಕಾರಿಗಳು ತಮ್ಮ ಎಲೆಕ್ಟ್ರಾನಿಕ್ ಕ್ಯಾಲ್ಕುಲೇಟರ್‌ಗಳನ್ನು ಹೊರತೆಗೆದು, ಒಟ್ಟು ಆದಾಯದ ಮೇಲೆ ಅ ಸಲಹೆ ಬೀರುವ ಪರಿಣಾಮಗಳನ್ನು ಲೆಕ್ಕ ಹಾಕಲು ಪ್ರಯತ್ನಿಸುತ್ತಿದ್ದರು. ಆಗ ರಾಜೀವ್ ಅವರು, ‘ಮಾಧವ್, ಇದನ್ನು ಹೀಗಲ್ಲ ಮಾಡುವುದು. ಇದನ್ನೆಲ್ಲ ಒಂದು ಸ್ಪ್ರೆಡ್ ಶೀಟಿನಲ್ಲಿ ಹಾಕಿ ತಂದರೆ, ನಾಳೆ ಮತ್ತೊಮ್ಮೆ ನಾವು ಭೇಟಿ ಆಗಿ, ಸ್ವಲ್ಪ ಸೂಕ್ಷ್ಮವಾಗಿ ನಿರ್ಧಾರ ತೆಗೆದುಕೊಳ್ಳಬಹುದು’ ಎಂದರು.

ಮರುದಿನ ಸಿಂಧಿಯಾ ಮತ್ತವರ ತಂಡ PMOಗೆ ಬಂತು. ಅವರಲ್ಲಿ ಒಬ್ಬರು ಅಧಿಕಾರಿ ಪ್ರಧಾನಿಯವರ ಮೇಜಿನ ಮೇಲೆ ಬಹಳ ಅಗಲವಾದ ಕಾಗದವೊಂದನ್ನು ಹರಡಿ ಇರಿಸಿದರು. ಆ ಕಾಗದದಲ್ಲಿ ಪರ್ಯಾಯ ದರಗಳ ವಿವಿಧ ಸಂಯೋಜನೆಗಳನ್ನು ಬರೆಯಲಾಗಿತ್ತು. ಜಗತ್ತಿಗೆ ಎರಡನೇ ಅತಿದೊಡ್ಡ ರೈಲ್ವೇ ವ್ಯವಸ್ಥೆಯನ್ನು ನಿಭಾಯಿಸುತ್ತಿದ್ದ ರೈಲ್ವೇಯ ಉನ್ನತ ಅಧಿಕಾರಿಗಳಿಗೆ, ಸ್ಪ್ರೆಡ್ ಶೀಟ್ ಎಂದರೆ ಏನೆಂದು ಗೊತ್ತಿಲ್ಲದ್ದು, ಪ್ರಧಾನಮಂತ್ರಿಗಳಿಗೆ ನಿಜಕ್ಕೂ ಅಚ್ಚರಿ ತರಿಸಿತ್ತು. ಆ ಹೊತ್ತಿಗಾಗಲೇ ಕಂಪ್ಯೂಟರ್ ಜಗತ್ತಿನಲ್ಲಿ ಲೋಟಸ್ 1-2-3 ವಾಣಿಜ್ಯ ಆವೃತ್ತಿ ಬಿಡುಗಡೆಗೊಂಡು ಮೂರು ವರ್ಷಗಳು ಕಳೆದಿದ್ದವು. ಇಲಾಖೆಗಳಲ್ಲಿ ಕಂಪ್ಯೂಟರಿನಲ್ಲಿ ನುರಿತ ಕಿರಿಯ ಅಧಿಕಾರಿಗಳಿದ್ದರು. ಅದರೆ ಅವರಿಗೆ ಪ್ರಧಾನಮಂತ್ರಿಗಳ ಜೊತೆ ಭೇಟಿಗೆ ಅವಕಾಶ ಇರಲಿಲ್ಲ!

ಆ ಬಳಿಕ ಪ್ರಧಾನಮಂತ್ರಿಗಳು ತಮ್ಮ PMOನ ಕಂಪ್ಯೂಟರ್ ಸೆಲ್‌ನಿಂದ ಸಿಬ್ಬಂದಿಯನ್ನು ಕಳುಹಿಸಿಕೊಟ್ಟು, ರೈಲ್ವೇ ಸಚಿವರು ಮತ್ತು ಅವರ ಹಿರಿಯ ಸಿಬ್ಬಂದಿಗೆ ಸ್ಪ್ರೆಡ್‌ಶೀಟ್ ವಿಶ್ಲೇಷಣೆಯ ಬಗ್ಗೆ ಕಲಿತುಕೊಳ್ಳಲು ಮತ್ತು ಅದಕ್ಕೆ ಅಗತ್ಯ ಇರುವ ಸಾಫ್ಟ್‌ವೇರ್ ಪ್ಯಾಕೇಜನ್ನು ಸ್ಥಾಪಿಸಲು ಸಹಾಯಹಸ್ತ ನೀಡಿದರು. ಇದಾಗಿ 24 ತಾಸುಗಳ ಬಳಿಕ, ಪ್ರಧಾನಮಂತ್ರಿಗಳು ಮತ್ತು ರೈಲ್ವೇ ಸಚಿವರು ಬಹಳ ಆರಾಮವಾಗಿ, ಪ್ರಯಾಣಿಕರ ಮತ್ತು ಸರಕಿನ ವಿವಿಧ ಪರ್ಯಾಯ ದರ ಸಂಯೋಜನೆಗಳನ್ನು ಮತ್ತು ಹೆಚ್ಚುವರಿ ಆದಾಯದ ಮೇಲೆ ಅವುಗಳ ಪ್ರಭಾವವನ್ನು ಸುಲಭವಾಗಿ ಪರಿಶೀಲಿಸುವುದು ಸಾಧ್ಯವಾಯಿತು. ಅವರಿಗೆ ಇಬ್ಬರಿಗೂ ಸರಿ ಅನ್ನಿಸಿದ ಪರ್ಯಾಯವು ಸ್ವೀಕಾರಾರ್ಹ ಪರಿಹಾರ ಎಂದು ಇಬ್ಬರಿಗೂ ಅನ್ನಿಸಿತು. ಹೀಗೆ, ಹೊಸ ತಂತ್ರಜ್ಞಾನವು ಅಂತಿಮ ನಿರ್ಧಾರ ಕೈಗೊಳ್ಳುವವರಿಗೆ ಅಗತ್ಯ ಸಾಮರ್ಥ್ಯವನ್ನು ಒದಗಿಸಿತ್ತು, ಆದರೆ ಅಧಿಕಾರಶಾಹಿ ಈ ವ್ಯವಸ್ಥೆಯನ್ನು ನಕಾರಾತ್ಮಕವಾಗಿ ನೋಡಿತ್ತು!

ರಾಜೀವ್ ಗಾಂಧಿ ಹಲವು ಬಾರಿ ಅಧಿಕಾರದ ಶ್ರೇಣಿ ವ್ಯವಸ್ಥೆಯನ್ನು ಮುರಿಯುವ ಬಯಕೆಯನ್ನು ಆಗಾಗ ತೋರ್ಪಡಿಸುತ್ತಿದ್ದರು. ಸಾಂಪ್ರದಾಯಿಕವಾಗಿ ಹಣಕಾಸು ಸಚಿವರು ಬಜೆಟ್ ದಿನ ಬೆಳಿಗ್ಗೆ, ರಾಷ್ಟ್ರಪತಿಗಳನ್ನು ಭೇಟಿ ಮಾಡಿ, ಅವರಿಗೆ ಬಜೆಟ್ ವಿವರಗಳನ್ನು ನೀಡುವ ಕ್ರಮ ಇತ್ತು. 1987–88ನೇ ಸಾಲಿಗೆ ಹಣಕಾಸು ಸಚಿವರಾಗಿ ಬಜೆಟ್ ಮಂಡನೆ ಮಾಡಬೇಕಿದ್ದ ರಾಜೀವ್ ಗಾಂಧಿ ಅವರಿಗೆ, ನಾನು ರಾಷ್ಟ್ರಪತಿಗಳು ಎತ್ತಬಹುದಾದ ಪ್ರಶ್ನೆಗಳ ಬಗ್ಗೆ ವಿವರಣೆಗಳನ್ನು ಒದಗಿಸಿದ್ದೆ. ಅವರು ನೇರವಾಗಿ ನನ್ನನ್ನೇ ರಾಷ್ಟ್ರಪತಿಗಳ ಭೇಟಿಗೆ ಜೊತೆಯಲ್ಲಿ ಬರುವಂತೆ ಆಹ್ವಾನಿಸಿದ್ದರು. ನಾನು ಅವರ ವಾಹನಗಳ ಸರತಿ ಸಾಲಿನಲ್ಲಿದ್ದ ಒಂದು ಕಾರಿನ ಕಡೆ ಹೋಗುತ್ತಿದ್ದಾಗ, ಅವರು ತಾವು ಸಾಗುತ್ತಿದ್ದ SUVಗೆ ನನ್ನನ್ನು ಕರೆದು ಕುಳ್ಳಿರಿಸಿಕೊಂಡು, ತಾವೇ SUV ಚಲಾಯಿಸಿಕೊಂಡು, ರಾಷ್ಟ್ರಪತಿ ಭವನಕ್ಕೆ ನನ್ನನ್ನು ಕರೆದೊಯ್ದರು.

ರಾಜೀವ್ ಗಾಂಧಿ ಅನೌಪಚಾರಿಕ ವ್ಯಕ್ತಿತ್ವ ಹೊಂದಿದ್ದದ್ದು ಮಾತ್ರವಲ್ಲ, ವಿಭಿನ್ನ ದೃಷ್ಟಿಕೋನಗಳನ್ನು ಕೇಳಿಸಿಕೊಳ್ಳುವ ಪ್ರಾಮಾಣಿಕ ಆಸಕ್ತಿಯನ್ನೂ ಹೊಂದಿದ್ದರು. ಅವರು ನೀಡಬೇಕಿದ್ದ ಭಾಷಣವೊಂದನ್ನು ನಾವು ಪರಿಶೀಲಿಸುತ್ತಿದ್ದಾಗ ನಡೆದ ಒಂದು ಘಟನೆ ನೆನಪಾಗುತ್ತಿದೆ. ಆ ಭಾಷಣದಲ್ಲಿ ನಮ್ಮ ಮೌಲ್ಯ ವ್ಯವಸ್ಥೆಯಲ್ಲಿ ಅಹಿಂಸೆ ಆಳವಾಗಿ ಬೇರೂರಿದೆ ಎಂಬ ಮಾತು ಇತ್ತು. ನಾನು ಆ ಬಗ್ಗೆ ಏನೂ ಪ್ರತಿಕ್ರಿಯೆ ನೀಡಿರದಿದ್ದರೂ, ಅವರು ನನ್ನ ಇರುಸುಮುರುಸನ್ನು ಗಮನಿಸಿ, ನನ್ನದೇನಾದರೂ ಸಲಹೆ ಇದೆಯೇ ಎಂದು ಕೇಳಿದರು. ನಾನು ಆ ವಾಕ್ಯ ತೀರಾ ಉತ್ಪ್ರೇಕ್ಷೆಯಾಗಿದ್ದು, ಬೇರೆಲ್ಲ ದೇಶಗಳಂತೆ ನಮ್ಮ ಚರಿತ್ರೆಯಲ್ಲೂ ಹಿಂಸೆ ವ್ಯಾಪಕವಾಗಿ ಇತ್ತು ಎಂದು ಹೇಳಿದೆ. ಸ್ವಲ್ಪ ಹೊತ್ತು ಯೋಚಿಸಿದ ಅವರು ‘ಹೌದು ಆಚರಣೆಯಲ್ಲಿ ನೀವು ಹೇಳಿದ್ದು ಸತ್ಯ ಇರಬಹುದು, ಅದರೆ ಅಹಿಂಸೆ ಒಂದು ತತ್ವವಾಗಿ ನಮ್ಮ ಸಂಸ್ಕೃತಿಯೊಳಗೆ ಆಳವಾಗಿ ಬೇರೂರಿದೆ. ನಾವು ಯಾವಾಗಲೂ ಅನುಸರಿಸದೇ ಇದ್ದರೂ, ಈ ತತ್ವಗಳು ಮುಖ್ಯವಾಗುತ್ತವೆ’ ಎಂದಿದ್ದರು. ಅದು ಒಳ್ಳೆಯ ದೃಷ್ಟಿಕೋನವಾಗಿತ್ತು.

M ಡಾಕ್ಯುಮೆಂಟ್‌

ಲೇ: ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ

ಅನು: ರಾಜಾರಾಂ ತಲ್ಲೂರು

ಪ್ರ: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ

ಸಂ: 9449174662

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT