ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಕುಮಾರವ್ಯಾಸ ಭಾರತ ಇದೋ ನೂತನ ‘ಪರ್ವ’

ಅಕ್ಷರ ಗಾತ್ರ

ಬೆಂಗಳೂರಿನ ‘ಕನ್ನಡ ಗಣಕ ಪರಿಷತ್ತು’ ಟಿ. ವಿ. ವೆಂಕಟಾಚಲಶಾಸ್ತ್ರೀ ಅವರ ಪ್ರಧಾನ ಸಂಪಾದಕತ್ವದಲ್ಲಿ ಎರಡು ಬೃಹತ್‌ ಸಂಪುಟಗಳಲ್ಲಿ ‘ಕುಮಾರವ್ಯಾಸ ಭಾರತ ಎಂಬ ಕರ್ಣಾಟ ಭಾರತ ಕಥಾಮಂಜರಿ’ಯನ್ನು ಪ್ರಕಟಿಸಿದೆ. ಇದು ಕುಮಾರವ್ಯಾಸನ ಕಾವ್ಯಪ್ರತಿಭೆಯನ್ನು ಆಸ್ವಾದಿಸಬಯಸುವ ಸಹೃದಯರಿಗೆ ಹಲವು ವಿಧಗಳಲ್ಲಿ ನೆರವಾಗುತ್ತದೆ.

ಕುಮಾರವ್ಯಾಸನು ಹಾಡಿದನೆಂದರೆ

ಕಲಿಯುಗ ದ್ವಾಪರವಾಗುವುದು

ಭಾರತ ಕಣ್ಣಲಿ ಕುಣಿವುದು! ಮೈಯಲಿ

ಮಿಂಚಿನ ಹೊಳೆ ತುಳುಕಾಡುವುದು!

ಕುಮಾರವ್ಯಾಸನ ಪ್ರಶಸ್ತಿಯನ್ನು ಈ ಪದ್ಯ ಸಮರ್ಥವಾಗಿ ನಿರೂಪಿಸಿದೆ ಎಂಬುದು ‘ಕುಮಾರವ್ಯಾಸಭಾರತ’ವನ್ನು ಓದಿದವರಿಗೂ ಕೇಳಿದವರಿಗೂ ಸ್ಪಷ್ಟವಾಗುತ್ತದೆ. ‘ಕುಮಾರವ್ಯಾಸಭಾರತ’, ‘ಗದುಗುಭಾರತ’, ‘ಕನ್ನಡಭಾರತ’, ‘ದಶಪರ್ವಭಾರತ’, ‘ಕರ್ಣಾಟಕ ಮಹಾಭಾರತ’, ‘ಕರ್ಣಾಟಭಾರತ ಕಥಾಮಂಜರಿ’ – ಹೀಗೆ ಹಲವು ಹೆಸರುಗಳಿಂದ ಪ್ರಸಿದ್ಧವಾಗಿರುವ ಕುಮಾರವ್ಯಾಸನ ಮಹಾಕಾವ್ಯ ದಿಟವಾಗಿಯೂ ಕನ್ನಡದ ಮಹಾಭಾಗ್ಯವೇ ಹೌದು.

ಇಷ್ಟು ಜನಪ್ರಿಯವಾಗಿರುವ ಕೃತಿಯ ಶುದ್ಧಪಾಠವೊಂದರ ಆವಶ್ಯಕತೆ ಹಲವು ವರ್ಷಗಳಿಂದ ಇದೆ. ಈಗ ಅಂಥದೊಂದು ಪ್ರಯತ್ನ ನಡೆದಿದೆ. ಬೆಂಗಳೂರಿನ ‘ಕನ್ನಡ ಗಣಕ ಪರಿಷತ್ತು’ ಟಿ. ವಿ. ವೆಂಕಟಾಚಲಶಾಸ್ತ್ರೀ ಅವರ ಪ್ರಧಾನ ಸಂಪಾದಕತ್ವದಲ್ಲಿ ಎರಡು ಬೃಹತ್‌ ಸಂಪುಟಗಳಲ್ಲಿ ‘ಕುಮಾರವ್ಯಾಸಭಾರತ ಎಂಬ ಕರ್ಣಾಟಭಾರತಕಥಾಮಂಜರಿ’ಯನ್ನು ಪ್ರಕಟಿಸಿದೆ. ಇದು ಕುಮಾರವ್ಯಾಸನ ಕಾವ್ಯಪ್ರತಿಭೆಯನ್ನು ಆಸ್ವಾದಿಸಬಯಸುವ ಸಹೃದಯರಿಗೆ ಹಲವು ವಿಧಗಳಲ್ಲಿ ನೆರವಾಗುತ್ತದೆ. ಹೀಗೆಂದು ಇದು ಪರಿಪೂರ್ಣ ಎಂದೇನೂ ಅಲ್ಲ; ಹೇಗೆ ಮೂಲ ವ್ಯಾಸಮಹಾಭಾರತದ ‘ಇದಮಿತ್ಥಂ’ ಎಂಬಂಥ ‘ಶುದ್ಧಪಾಠ’ವನ್ನು ಸಂಪಾದಿಸುವುದು ಅಸಾಧ್ಯವೋ, ಹಾಗೆಯೇ ಅದನ್ನು ಅನುಸರಿಸಿರುವ ‘ಕುಮಾರವ್ಯಾಸಭಾರತ’ದ ಶುದ್ಧಪಾಠವನ್ನು ಸಂಪಾದಿಸುವುದೂ ಸುಲಭವಲ್ಲ! ಹೀಗಿದ್ದರೂ ಇದುವರೆಗೂ ಪ್ರಟಕವಾಗಿರುವ ‘ಕುಮಾರವ್ಯಾಸಭಾರತ’ದ ಆವೃತ್ತಿಗಳಿಗಿಂತಲೂ ಇದು ವಿಶಿಷ್ಟವಾಗಿದೆ, ಮೌಲಿಕವಾಗಿದೆ, ಶುದ್ಧವಾಗಿದೆ, ಸಮಗ್ರವಾಗಿದೆ ಎಂಬುದು ನಿಸ್ಸಂದೇಹ.

ಈಗ ನಾವೆಲ್ಲರೂ ಬಹುಪಾಲು ಬಳಸುತ್ತಿರುವುದು ‘ಕುವೆಂಪು–ಮಾಸ್ತಿ ಸಂಪಾದಿತ’ ಎಂದು ಜನಪ್ರಿಯವಾಗಿರುವ ‘ಕುಮಾರವ್ಯಾಸಮಹಾಕವಿಯ ಕರ್ಣಾಟ ಭಾರತ ಕಥಾಮಂಜರಿ’ (1958). ಇದು ‘ಎರಡು ರೂಪಾಯಿ ಆವೃತ್ತಿ’ ಎಂದೂ ಜನಜನಿತವಷ್ಟೆ! ಆ ಆವೃತ್ತಿಗೆ ಮುನ್ನುಡಿಯಂತಿರುವ ‘ತೋರಣನಾಂದಿ’ಯ ಕೊನೆಯ ಮಾತುಗಳನ್ನು ಇಲ್ಲಿ ಉಲ್ಲೇಖಿಸಬಹುದೆನಿಸುತ್ತದೆ:

‘ಒಟ್ಟಿನಲ್ಲಿ ನಾವು ಸಿದ್ಧಗೊಳಿಸಿರುವುದು ಜನಪ್ರಿಯ ಪ್ರತಿ ಮಾತ್ರ. ಸಂಶೋಧಿತ ವಿಶುದ್ಧ ಪ್ರತಿ ಬರದತನಕ ಕುಮಾರವ್ಯಾಸನ ಪ್ರತಿಭೆಯ ನಿಜಸ್ವರೂಪ ಸಂಪೂರ್ಣದರ್ಶನವಾಗುವುದಿಲ್ಲ. ಹಾಗೆ ಮಾಡಲು ಅತ್ಯಂತ ಪ್ರಾಚೀನವಾದ ಹಾಗೂ ಗದುಗಿನ ಸುತ್ತಮುತ್ತಣ ಪ್ರದೇಶದಲ್ಲಿ ದೊರೆಯಬಹುದಾದ ಪ್ರತಿಗಳನ್ನೆಲ್ಲಾ ಸಂಗ್ರಹಿಸಬೇಕು; 10–15ನೇ ಶತಮಾನದ ಶಾಸನಗಳನ್ನೆಲ್ಲಾ ಸಂಗ್ರಹಿಸಿ ಅಭ್ಯಸಿಸಬೇಕು. ಇದು ಒಂದೆರಡು ದಶಕದ ನಾಲ್ಕಾರು ವಿದ್ವಾಂಸರ ಕೆಲಸ.’

ಅಂದಿನ ಆಶಯ ಸುಮಾರು ಆರು ದಶಕಗಳ ಬಳಿಕ ಆಂಶಿಕವಾಗಿಯಾದರೂ ನೆರವೇರಿದೆ ಎಂದು ಇಂದು ಸಂತಸಪಡಬಹುದೆನಿಸುತ್ತದೆ. ಸದ್ಯದ ಈ ಪರಿಚಯ, ಪ್ರಕೃತ ಕೃತಿಯ ಸುಮಾರು ಎರಡು ಸಾವಿರ ಪುಟಗಳ ಸಮಗ್ರ ಅವಲೋಕನದಿಂದ ಸಿದ್ಧವಾದುದಲ್ಲ; ಇಂಥದೊಂದು ವಿದ್ವತ್ ಕಾರ್ಯವು ತುಂಬ ಸಮಯಾವಕಾಶವನ್ನೂ ಪರಿಶ್ರಮವನ್ನೂ ಕೋರುತ್ತದೆ ಎಂಬುದನ್ನು ಇಲ್ಲಿ ಮರೆಯುವಂತಿಲ್ಲವೆನ್ನಿ. ಮುಂದಿನ ದಿನಗಳಲ್ಲಿ ಈ ಕೃತಿಯು ವಿದ್ವಾಂಸರ ನಿಕಷಕ್ಕೆ ಒದಗಲಿ; ಆ ಮೂಲಕ ಕೃತಿಯ ಮೌಲ್ಯನಿರ್ಣಯ ನಡೆಯಲಿ ಎಂದು ಹಾರೈಸೋಣ.

ಪ್ರಕೃತ ಕೃತಿಯ ಕೆಲವೊಂದು ವಿಶೇಷಗಳನ್ನು ಇಲ್ಲಿ ಹೇಳಬಹುದು

* ಶಕಟರೇಫ ಮತ್ತು ಸಾಮಾನ್ಯರೇಫದ ಶಬ್ದಗಳನ್ನು ಆಯಾ ರೂಪದಲ್ಲಿಯೇ ಕಾಣಿಸಲಾಗಿದೆ.

* 1958ರ ಆವೃತ್ತಿ, ಅದರ ಅನಂತರದ ಮುದ್ರಣಗಳಲ್ಲಿ ಆಗಿರುವ ಮುದ್ರಣದೋಷಗಳು, ಪದವಿಭಾಗದ ತಪ್ಪುಗಳಂಥವನ್ನು ತಿದ್ದಲಾಗಿದೆ.

* ವಿಸ್ತಾರವಾದ ಪ್ರಸ್ತಾವನೆ ಇದೆ; ಇದರಲ್ಲಿ ಕವಿಚರಿತ್ರೆ, ಕಾವ್ಯಸಮೀಕ್ಷೆ, ಪರಿಷ್ಕರಣಗಳು, ಕಥಾಸಮೀಕ್ಷೆ, ಭಾಷೆ–ಶೈಲಿ, ಸಂಗ್ರಹಗಳು – ಎಂಬ ವಿಭಾಗಗಳಿವೆ.

* ಪ್ರತಿಪದ್ಯಕ್ಕೂ ಅಲ್ಲಲ್ಲಿಯೇ ಹೊಸಗನ್ನಡದಲ್ಲಿ ಗದ್ಯಾನುವಾದವನ್ನು ನೀಡಲಾಗಿದೆ. ಕ್ಷಿಷ್ಟಪದಗಳ ಅರ್ಥವನ್ನೂ ಅಲ್ಲಲ್ಲಿಯೇ ಕೊಡಲಾಗಿದೆ.

* ಪ್ರತಿ ಸಂಪುಟದಲ್ಲೂ ವ್ಯಕ್ತಿವಿವರಗಳನ್ನೂ ಪೂರ್ವಕಥಾ ಸಂದರ್ಭವನ್ನೂ ಪಾಠಭೇದಗಳನ್ನೂ ಕೊಡಲಾಗಿದೆ.

* ಕಾವ್ಯದಲ್ಲಿ ಬಂದಿರುವ ಗಾದೆಗಳ ಪಟ್ಟಿಯನ್ನು ಕೊಡಲಾಗಿದೆ.

* ಇದುವರೆಗೆ ಪ್ರಕಟವಾಗಿರುವ ಕುಮಾರವ್ಯಾಸಭಾರತದ ಆವೃತ್ತಿಗಳು, ಪರಾಮರ್ಶನಗ್ರಂಥಗಳು, ಮಹಾಪ್ರಬಂಧಗಳು, ಲೇಖನಗಳು – ಇವುಗಳ ಪಟ್ಟಿಯನ್ನು ಸಾಧ್ಯವಿದ್ದಷ್ಟು ಒದಗಿಸಲಾಗಿದೆ.

* ಅಜ್ಞಾತಕರ್ತೃಕವಾದ ‘ಕರ್ಣಾಟಕ ಭಾರತ ನಿಘಂಟು’ವಿನ ನೂತನ ಪರಿಷ್ಕರಣವನ್ನು ಗ್ರಂಥಸಂಪಾದನೆಯ ಸಾಮಗ್ರಿಸಹಿತವಾಗಿ ಕೊಡಲಾಗಿದೆ.

* ಸಮಗ್ರ ಕಾವ್ಯದ ಪದ್ಯಗಳ ಅಕಾರದಿ ಸೂಚಿಯನ್ನು ಮೊದಲ ಬಾರಿಗೆ ಸಿದ್ಧಪಡಿಸಿ, ಇಲ್ಲಿ ಅದನ್ನು ಒದಗಿಸಲಾಗಿದೆ.

ಇದುವರೆಗೂ ಕುಮಾರವ್ಯಾಸಭಾರತದ ಸುಮಾರು 120 ಹಸ್ತಪ್ರತಿಗಳಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ.ಕುಮಾರವ್ಯಾಸಭಾರತವನ್ನು ಮೊದಲು ಮುದ್ರಣಕ್ಕೆ ಸಿದ್ಧಪಡಿಸಿದ್ದು 1851ರಲ್ಲಿ. ಅಂದಿನಿಂದ ಇಂದಿನವರೆಗೂ ನೂರಾರು ವಿದ್ವಾಂಸರು ಗ್ರಂಥಸಂಪಾದನೆಯೂ ಸೇರಿದಂತೆ ನಾಲ್ಕಾರು ಆಯಾಮಗಳಲ್ಲಿ ಈ ಕೃತಿಯ ಮುದ್ರಣಕಾರ್ಯದಲ್ಲಿ ಕೊಡುಗೆಗಳನ್ನು ನೀಡಿದ್ದಾರೆ. ಈ ಎಲ್ಲ ಪೂರ್ವಸೂರಿಗಳ ವಿದ್ವತ್ತು, ಪರಿಶ್ರಮ, ಶ್ರದ್ಧೆ, ಸಾರಸ್ವತ ತಪಸ್ಸುಗಳ ಕಾರಣದಿಂದ ಕುಮಾರವ್ಯಾಸನ ಪ್ರತಿಭೆಯ ಹೊಳಹು ನಮಗೆ ಹೆಚ್ಚೆಚ್ಚು ದಕ್ಕುವಂತಾಗಿದೆ. ಈಗ ಟಿ. ವಿ. ವೆಂಕಟಾಚಲಶಾಸ್ತ್ರೀ ಅವರ ಪ್ರಧಾನ ಸಂಪಾದಕತ್ವದಲ್ಲಿ ಅ.ರಾ. ಮಿತ್ರ, ಕೆ.ಆರ್‌. ಗಣೇಶ್, ಎ.ವಿ. ಪ್ರಸನ್ನ, ವಿ. ಕೃಷ್ಣ ಅವರುಗಳ ಸಂಪಾದಕ ಸಮಿತಿಯು ಕನ್ನಡ ಸಾಹಿತ್ಯಲೋಕಕ್ಕೆ ಅಪೂರ್ವ ಕೊಡುಗೆಯನ್ನು ನೀಡಿದೆ. ಇದಕ್ಕಾಗಿ ಸಂಯೋಜಕ ಸಂಪಾದಕ ಜಿ.ಎನ್‌. ನರಸಿಂಹಮೂರ್ತಿ ಅವರಿಗೂ, ಕನ್ನಡ ಗಣಕ ಪರಿಷತ್‌ ಮತ್ತು ತುಮಕೂರು ವಿಶ್ವವಿದ್ಯಾನಿಲಯಕ್ಕೂ ಕೃತಜ್ಞತೆಗಳು ಸಲ್ಲುತ್ತವೆ. ಸರ್ಕಾರಇಂಥ ಯೋಜನೆಗಳಿಗೆ ಇನ್ನೂ ಹೆಚ್ಚೆಚ್ಚು ಸಹಕಾರವನ್ನುಒದಗಿಸಲಿ ಎಂದು ಹಾರೈಸೋಣ. ಈ ಕೃತಿಗೆ ಸಾರ್ಥಕತೆ ಒದಗುವುದು ಸಹೃದಯರ ಸ್ಪಂದನೆಯಿಂದಲೇ ಎಂಬುದನ್ನೂ ಮರೆಯದಿರೋಣ.

(‘ಕರ್ಣಾಟಭಾರತಕಥಾಮಂಜರಿ’ಯು ಬೆಂಗಳೂರಿನ ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಇಂದು ಸಂಜೆ 4.30ಕ್ಕೆ ಲೋಕಾರ್ಪಣೆಯಾಗಲಿದೆ.)

ಕೃತಿ: ಕುಮಾರವ್ಯಾಸಭಾರತ ಎಂಬ ಕರ್ಣಾಟಭಾರತ ಕಥಾಮಂಜರಿ-2 ಸಂಪುಟ

ಪ್ರಧಾನ ಸಂಪಾದಕ:ಟಿ.ವಿ. ವೆಂಕಟಾಚಲಶಾಸ್ತ್ರೀ

ಪ್ರ:ಕನ್ನಡ ಗಣಕ ಪರಿಷತ್ತು

ಸಂ: 98453 62956

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT