ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಢನಂಬಿಕೆಯೋ, ಕಾಕತಾಳಿಯವೋ: ರಾಜಮೌಳಿ ಸಿನಿಮಾ ಬಳಿಕ ನಾಯಕರ ಚಿತ್ರಗಳು ‘ಫ್ಲಾಪ್‘

ಪ್ರಜಾವಾಣಿ ವಿಶೇಷ
ಅಕ್ಷರ ಗಾತ್ರ

ತೆಲುಗು ಸಿನಿಮಾರಂಗದಲ್ಲಿಮೂಢನಂಬಿಕೆಯೋ, ಕಾಕತಾಳಿಯವೋ ಗೊತ್ತಿಲ್ಲ, ಆದರೆ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ಜೊತೆ ಕೆಲಸ ಮಾಡಿದ ಬಳಿಕ ನಾಯಕ ನಟರು, ಬೇರೆ ಸಿನಿಮಾಗಳಲ್ಲಿ ನಟಿಸಿದಾಗ ಆ ಚಿತ್ರಗಳು ಸೋಲು ಕಾಣುತ್ತವೆ. ಇದಕ್ಕೆ ಚಿತ್ರರಂಗದ ದಾಖಲೆಗಳೇ ಸಾಕ್ಷಿಯಾಗಿವೆ.

ನಾಯಕ ನಟರು ರಾಜಮೌಳಿ ಜೊತೆ ಕೆಲಸ ಮಾಡಿದಾಗ ಅವರ ಚಿತ್ರಗಳು ಬಿಗ್‌ ಹಿಟ್‌ ಆಗುತ್ತವೆ. ನಂತರ ಬೇರೆ ನಿರ್ದೇಶಕರ ಜತೆಯಲ್ಲಿನ ಚಿತ್ರಗಳು ಫ್ಲಾಪ್‌ ಆಗುತ್ತವೆ ಎಂಬುದನ್ನು ಚಿತ್ರರಂಗದ ಅನೇಕರು ಹೇಳುತ್ತಾರೆ. ಇದು ಟಾಲಿವುಡ್‌ನಲ್ಲಿ ಮೂಢನಂಬಿಕೆಯಾಗಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಅಂಕಿ ಅಂಶಗಳು ಕೂಡ ಇದನ್ನೇ ಹೇಳುತ್ತವೆ.

ಎರಡು–ಮೂರು ದಶಕಗಳ ತಮ್ಮ ವೃತ್ತಿ ಜೀವನದಲ್ಲಿ ರಾಜಮೌಳಿ 12 ಸಿನಿಮಾಗಳನ್ನು ಮಾಡಿದ್ದಾರೆ. ಆ ಎಲ್ಲಾ ಸಿನಿಮಾಗಳು ಸೂಪರ್‌ ಹಿಟ್‌ ಆಗುವುದರ ಜೊತೆಗೆ ನಾಯಕರಿಗೆ ಹೊಸ ಇಮೇಜ್‌ ತಂದುಕೊಟ್ಟಿವೆ. ಆದರೆ ನಂತರದಲ್ಲಿ ಆ ನಾಯಕರು ನಟಿಸಿದ ಸಿನಿಮಾಗಳು ಫ್ಲಾಪ್‌ ಆಗಿವೆ. ಇದನ್ನು 2001ರಿಂದಲೂ ಗಮನಿಸಬಹುದಾಗಿದೆ.

ರಾಜಮೌಳಿ 2001ರಲ್ಲಿ ಜ್ಯೂನಿಯರ್‌ ಎನ್‌ಟಿಆರ್‌ ಜೊತೆ ‘ಸ್ಟೂಡೆಂಟ್‌ ನಂ1‘ ಸಿನಿಮಾ ಮಾಡಿದರು. ಈ ಚಿತ್ರ ಟಾಲಿವುಡ್‌ನಲ್ಲಿ ಬಿಗ್‌ ಹಿಟ್‌ ಆಗಿತ್ತು. ಹಾಗೇಎನ್‌ಟಿಆರ್‌ ಅವರನ್ನು ಚಿತ್ರರಂಗ ಗುರುತಿಸುವಂತೆ ಮಾಡಿತು. ನಂತರದ ದಿನಗಳಲ್ಲಿ ಅವರು ಸಿನಿಮಾರಂಗದಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದುಕೊಂಡರು. ಎನ್‌ಟಿಆರ್‌ ‘ಸ್ಟೂಡೆಂಟ್‌ ನಂ1‘ ಚಿತ್ರದ ಬಳಿಕ ರುದ್ರರಾಜು ವರ್ಮಾ ನಿರ್ದೇಶನದಲ್ಲಿ ‘ಸುಬ್ಬು‘ ಸಿನಿಮಾದಲ್ಲಿ ನಾಯಕರಾದರು. ಆದರೆ ಈ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಹೀನಾಯವಾಗಿ ಸೋಲು ಕಂಡಿತು. ವಿಮರ್ಶಕರು ಇದೊಂದು ಫ್ಲಾಪ್‌ ಸಿನಿಮಾ ಎಂದರು.

‘ಸ್ಟೂಡೆಂಟ್‌ ನಂ1‘ ಪೋಸ್ಟರ್‌
‘ಸ್ಟೂಡೆಂಟ್‌ ನಂ1‘ ಪೋಸ್ಟರ್‌

ರಾಜಮೌಳಿ 2003ರಲ್ಲಿ ‘ಸಿಂಹಾದ್ರಿ‘ ಎಂಬ ಎರಡನೇ ಸಿನಿಮಾವನ್ನು ನಿರ್ದೇಶನ ಮಾಡಿದರು. ಇದರಲ್ಲಿ ಎನ್‌ಟಿಆರ್‌ ಮತ್ತೆ ನಾಯಕರಾದರು. ಇದು ತೆಲುಗು ಚಿತ್ರರಂಗದಲ್ಲೇ ಹೊಸ ದಾಖಲೆ ಮಾಡಿತು. ನೂರಾರು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಶತದಿನ ಕಂಡಿತು. ಇದಾದ ಬಳಿಕ ಎನ್‌ಟಿಆರ್‌ ಪುರಿ ಜಗನ್ನಾಥ್‌ ನಿರ್ದೇಶನದಲ್ಲಿ ‘ಆಂಧ್ರವಾಲ‘ ಸಿನಿಮಾ ಮಾಡಿದರು. ಇದು ಕೂಡ ಬಾಕ್ಸ್‌ ಆಫೀಸ್‌ನಲ್ಲಿ ನೆಲಕಚ್ಚಿತು. ಈ ಚಿತ್ರದಿಂದ ಪ್ರೇಕ್ಷಕರು ದೂರ ಸರಿದರು.

2004ರಲ್ಲಿ ನಟ ನಿತಿನ್‌ ರೆಡ್ಡಿ ಜೊತೆರಾಜಮೌಳಿ ‘ಸೈ‘ ಸಿನಿಮಾ ಮಾಡಿದರು. ಇದು ಕೂಡ ಹಿಟ್‌ ಆಯಿತು. ನಿತಿನ್‌ಗೆ ಚಿತ್ರರಂಗದಲ್ಲಿ ‘ಸೈ‘ ಸಿನಿಮಾ ಬ್ರೇಕ್‌ ನೀಡಿತ್ತು. ಅವರ ಹಿಂದಿನ ಸಿನಿಮಾಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿತ್ತು. ಬಿಗ್‌ ಬ್ರೇಕ್‌ ಪಡೆದಿದ್ದ ನಿತಿನ್‌ ಸೈ ಚಿತ್ರದ ಬಳಿಕ ರಾಘವೇಂದ್ರ ರಾವ್‌ ನಿರ್ದೇಶನದಲ್ಲಿ ‘ಅಲ್ಲರಿ ಬುಲ್ಲೋಡು‘ ಸಿನಿಮಾ ಮಾಡಿದರು. ಆದರೆ ಈ ಸಿನಿಮಾ ಸಂಪೂರ್ಣವಾಗಿ ನೆಲ ಕಚ್ಚಿತು. ಚಿತ್ರಮಂದಿರಗಳ ಅಬ್ಬರದ ಕಾಲದಲ್ಲಿಯೂ ಈ ಸಿನಿಮಾ ಒಂದು ವಾರ ಕೂಡ ಪ್ರದರ್ಶನ ಕಾಣಲಿಲ್ಲ.

ಬಾಹುಬಲಿ ನಟ ಪ್ರಭಾಸ್‌ ಜತೆಗೆ ರಾಜಮೌಳಿ 2005ರಲ್ಲಿ ‘ಛತ್ರಪತಿ‘ ಸಿನಿಮಾ ಮಾಡಿದರು. ಇದು ಪ್ರಭಾಸ್‌ಗೆ ಮಾಸ್‌ ಲುಕ್‌ ನೀಡಿತು. ವಿಮರ್ಶಕರಿಂದಲೂ ಪ್ರಶಂಸೆ ಪಡೆಯಿತು. ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲೂ ಗೆಲುವು ಕಂಡಿತ್ತು. ಇದರ ಬಳಿಕ ಪ್ರಭಾಸ್‌ ಶಿವಕೇಶವ ನಿರ್ದೇಶನದಲ್ಲಿ ‘ಪೌರ್ಣಮಿ‘ಯಲ್ಲಿ ನಟಿಸಿದರು. ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುವುದರ ಜೊತೆಗೆ ಇಬ್ಬರು ಸ್ಟಾರ್‌ ನಾಯಕಿಯರು ಇದ್ದರೂ ಸಿನಿಮಾವನ್ನು ಪ್ರೇಕ್ಷಕರು ಇಷ್ಟಪಡಲಿಲ್ಲ. ಚಿತ್ರ ಸೋತಿತು.

ಮತ್ತೊಂದು ಮಾಸ್‌ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ರಾಜಮೌಳಿ 2006ರಲ್ಲಿ ನಟ ರವಿತೇಜ ಜತೆಯಲ್ಲಿ ‘ವಿಕ್ರಮಾರ್ಕುಡು‘ ಚಿತ್ರ ಮಾಡಿದರು. ಇದು ರವಿತೇಜಗೆ ಬಿಗ್‌ ಹಿಟ್‌ ನೀಡಿತ್ತು. ಸಾಲು ಸಾಲು ಸಿನಿಮಾಗಳಿಂದ ಸೋತಿದ್ದ ಅವರಿಗೆ ಮಾಸ್‌ ಇಮೇಜ್‌ ತಂದುಕೊಟ್ಟಿತ್ತು. ಈ ಚಿತ್ರದ ಬಳಿಕ ರವಿತೇಜ ‘ಖತರ್ನಾಕ್‌‘ ಸಿನಿಮಾ ಮಾಡಿದರು. ಇದು ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷಿಸಿದಷ್ಟು ಹಣ ಮಾಡದೇ ಸೋಲು ಕಂಡಿತು. ಈ ಸಿನಿಮಾವನ್ನು ಎ ರಾಜಶೇಖರ್‌ ನಿರ್ದೇಶನ ಮಾಡಿದ್ದರು.

2007ರಲ್ಲಿ ರಾಜಮೌಳಿಜ್ಯೂನಿಯರ್‌ ಎನ್‌ಟಿಆರ್‌ ಜೊತೆ ‘ಯಮದೊಂಗಾ‘ ಸಿನಿಮಾ ನಿರ್ದೇಶನ ಮಾಡಿದರು. ಚಿತ್ರದಲ್ಲಿ ಪೌರಾಣಿಕ ಹಾಗೂ ಸಾಮಾಜಿಕ ಕತೆಯನ್ನು ಮರ್ಜ್‌ ಮಾಡಿದ್ದು ಅಭಿಮಾನಿಗಳಿಗೆ ಇಷ್ಟವಾಯಿತು. ಸತತ 6 ಚಿತ್ರಗಳ ಸೋಲಿನ ಬಳಿಕ ‘ಯಮದೊಂಗಾ‘ ಎನ್‌ಟಿಆರ್‌ಗೆ ಮತ್ತೆ ಬ್ರೇಕ್‌ ಕೊಟ್ಟಿತ್ತು. ಪಕ್ಕ ಮನರಂಜನೆಯ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡಿತ್ತು. ಇದಾದ ಬಳಿಕ ಎನ್‌ಟಿಆರ್‌ ಮೇಹರ್‌ ರಮೇಶ್‌ ನಿರ್ದೇಶನದಲ್ಲಿ ‘ಕಂತ್ರಿ‘ ಸಿನಿಮಾ ಮಾಡಿದರು. ಇದು ಎನ್‌ಟಿರ್‌ ವೃತ್ತಿ ಜೀವನದಲ್ಲಿ ಅತ್ಯಂತ ಫ್ಲಾಪ್‌ ಸಿನಿಮಾ ಎಂಬ ನೆಗೆಟಿನ್‌ ಶೇಡ್‌ ಪಡೆಯಿತು. ಇದು ಚಿತ್ರಮಂದಿರಗಳಲ್ಲಿ ಎರಡು ವಾರ ಕೂಡ ಪ್ರದರ್ಶನ ಕಾಣಲಿಲ್ಲ.

ಯಮದೊಂಗಾ ಪೋಸ್ಟರ್‌
ಯಮದೊಂಗಾ ಪೋಸ್ಟರ್‌

ಚಿರಂಜೀವಿ ಪುತ್ರ ರಾಮ್‌ಚರಣ್‌ ಜತೆ ರಾಜಮೌಳಿ 2009ರಲ್ಲಿ ‘ಮಗಧೀರ‘ ಸಿನಿಮಾ ಮಾಡಿದರು. ಇದರ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನೇ ತೆಲುಗು ಕಡೆ ನೋಡುವಂತೆ ಮಾಡಿದ ಕೀರ್ತಿ ರಾಜಮೌಳಿಗೆ ಸಲ್ಲುತ್ತದೆ. ಇದು ರಾಮ್‌ ಚರಣ್‌ಗೆ ವೃತ್ತಿ ಜೀವನದಲ್ಲಿ ಎರಡನೇ ಚಿತ್ರವಾಗಿತ್ತು. ಮಗಧೀರ ಸಿನಿಮಾ ರಾಮ್‌ ಚರಣ್‌ಗೆ ಬಿಗ್‌ ಬ್ರೇಕ್‌ ನೀಡಿತು. ನಂತರ ರಾಮ್‌ ಚರಣ್‌ ಭಾಸ್ಕರ್‌ ನಿರ್ದೇಶನದಲ್ಲಿ ‘ಆರೆಂಜ್‌‘ ಸಿನಿಮಾ ಮಾಡಿದರು. ಇದು ಕೂಡ ಫ್ಲಾಪ್‌ ಆಯಿತು.

ರಾಜಮೌಳಿ, 2010ರಲ್ಲಿಹಾಸ್ಯ ನಟ ಸುನೀಲ್‌ ಅವರನ್ನು ಬೆಳ್ಳಿ ತೆರೆಗೆ ನಾಯಕರಾಗಿ ಪರಿಚಯಿಸಿದರು. ಸುನೀಲ್‌ ಜೊತೆ ‘ಮರ್ಯಾದೆ ರಾಮಣ್ಣ‘ ಸಿನಿಮಾ ಮಾಡಿದರು. ಈ ಹಾಸ್ಯ ಚಿತ್ರವನ್ನು ತೆಲುಗು ಪ್ರೇಕ್ಷಕರು ಇಷ್ಟಪಟ್ಟರು. ಗಲ್ಲಾ ಪೆಟ್ಟಿಗೆಯಲ್ಲೂ ಸಿನಿಮಾ ಯಶಸ್ವಿಯಾಯಿತು. ಇದೇ ಚಿತ್ರದ ಬಳಿಕ ಸುನೀಲ್‌ ಮತ್ತೆ ನಾಯಕರಾಗಿ ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದಲ್ಲಿ ಅಪ್ಪಲಾರಾಜು ಸಿನಿಮಾದಲ್ಲಿ ನಟಿಸಿದರು. ಆದರೆ ಪ್ರೇಕ್ಷಕರು ಸುನೀಲ್‌ ಅವರನ್ನು ನಾಯಕರನ್ನಾಗಿ ನೋಡಲು ಇಷ್ಟಪಡಲಿಲ್ಲ. ಇದು ಕೂಡ ಟಾಲಿವುಡ್‌ನಲ್ಲಿ ನೆಲ ಕಚ್ಚಿತು.

ಕನ್ನಡದ ಸುದೀಪ್‌ ಹಾಗೂ ತೆಲುಗಿನ ನಾನಿ ಕಾಂಬಿನೇಷನ್‌ನಲ್ಲಿ ರಾಜಮೌಳಿ ‘ಈಗ‘ ಸಿನಿಮಾ ಮಾಡಿದರು. ತೆಲುಗ ಮತ್ತು ತಮಿಳಿನಲ್ಲಿ ಸಿನಿಮಾ ಸೂಪರ್‌ ಹಿಟ್‌ ಆಯಿತು. ನಾನಿ ನಾಯಕ ನಟರಾಗಿ ನಟಿಸಿದರೇ, ಸುದೀಪ್‌ ಖಳನಾಯರಾಗಿದ್ದರು. ಈ ಚಿತ್ರದ ಬಳಿಕ ನಾನಿ ‘ಎಟೊ ವೆಳ್ಳಿಪೊಯಿಂದಿ ಮನಸು‘ ಸಿನಿಮಾ ಮಾಡಿದರು. ಈ ಚಿತ್ರ ನಾನಿಗೆ ನಂದಿ ಪ್ರಶಸ್ತಿ ತಂದುಕೊಟ್ಟರೂ ಬಾಕ್ಸ್‌ ಆಪೀಸ್‌ನಲ್ಲಿ ಸೋಲುಂಡಿತು. ಪ್ರೇಕ್ಷಕರಿಂದಲೂ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಇತ್ತ ಕನ್ನಡದಲ್ಲಿ ಸುದೀಪ್ ‘ಈಗ‘ ಚಿತ್ರದ ಬಳಿಕ ‘ವರದನಾಯಕ‘ ಸಿನಿಮಾ ಮಾಡಿದರು. ಅದು ಕೂಡ ಚಂದನವನದಲ್ಲಿ ಸೋಲು ಕಂಡಿತು.

5 ವರ್ಷಗಳಅವಧಿಯಲ್ಲಿ ರಾಜಮೌಳಿ ‘ಬಾಹುಬಲಿ‘ ಸಿನಿಮಾವನ್ನು ಎರಡು ಪಾರ್ಟ್‌ಗಳಲ್ಲಿ ಮಾಡಿದರು. ಪ್ರಭಾಸ್‌ ನಾಯಕರಾಗಿದ್ದ ಈ ಸಿನಿಮಾ ಹೊಸ ದಾಖಲೆಗಳನ್ನು ಮಾಡಿತು. ಹಿಂದಿಯಲ್ಲಿ ಹೆಚ್ಚು ಹಣಗಳಿಸಿದ ಖ್ಯಾತಿ ಪಡೆಯಿತು. ಪ್ರಬಾಸ್‌ಗೆ ಬಿಗ್‌ ಹಿಟ್‌ ನೀಡಿತು. ಇದರ ಬಳಿಕ ಪ್ರಬಾಸ್‌ ‘ಸಾಹೋ‘ ಸಿನಿಮಾದಲ್ಲಿ ನಟಿಸಿದರು. ಸ್ಟಾರ್‌ ನಟ ನಟಿಯರು ಇದ್ದರೂ ಪೇಲವ ಕತೆಯಿಂದಾಗಿ ಸಿನಿಮಾ ಸಂಪೂರ್ಣವಾಗಿ ಸೋಲು ಕಂಡಿತು.

ಇತ್ತೀಚೆಗೆ ಬಿಡುಗಡೆಯಾದ ಪಾನ್‌ ಇಂಡಿಯಾ ಸಿನಿಮಾ ‘ಆರ್‌ಆರ್‌ಆರ್‌‘ ಕೂಡ ಭರ್ಜರಿ ಹಿಟ್‌ ಆಗಿದೆ. ರಾಮ್‌ ಚರಣ್‌, ಎನ್‌ಟಿಆರ್‌ ನಟಿಸಿರುವ ಈ ಸಿನಿಮಾ ಹಿಂದಿಯಲ್ಲಿ ದಾಖಲೆಯ ಮೊತ್ತ ಕಲೆ ಹಾಕಿದೆ. ವಿಮರ್ಶಕರಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ಈ ಚಿತ್ರದ ಬಳಿಕ ರಾಮ್‌ ಚರಣ್‌,ತಂದೆ ಚಿರಂಜೀವಿ ನಾಯಕರಾಗಿರುವ ‘ಆಚಾರ್ಯ‘ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಸಹ ಸಂಪೂರ್ಣವಾಗಿ ಸೋಲು ಕಂಡಿತು. ಈ ಚಿತ್ರದ ವಿತರಕರು ನಷ್ಟ ಭರಿಸಿಕೊಡುವಂತೆ ಚಿರಂಜೀವಿ ಅವರಲ್ಲಿ ಮನವಿ ಮಾಡಿದ್ದಾರೆ.

ರಾಜಮೌಳಿ ಜೊತೆ ಕೆಲಸ ಮಾಡಿದ ಬಳಿಕ ಯಾವ ನಾಯಕ ನಟರ ಚಿತ್ರಗಳು ಕೂಡ ಹಿಟ್‌ ಆಗಿಲ್ಲ. ಆ ಎಲ್ಲಾ ಚಿತ್ರಗಳು ಫ್ಲಾಪ್‌ ಆಗಿವೆ. ಇದನ್ನು 20 ವರ್ಷಗಳ ಅಂಕಿ ಅಂಶಗಳೇ ಹೇಳುತ್ತವೆ. ಇದುಮೂಢನಂಬಿಕೆಯೋ, ಕಾಕತಾಳಿಯವೋ ಎಂಬುದು ಗೊತ್ತಾಗುತ್ತಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT