ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವದ ಹೊಸ ಲೋಕ

Last Updated 21 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಸಾಹಿತ್ಯ ಚಳವಳಿಗಳ ಕಾಲಘಟ್ಟವೊಂದು ಮುಗಿದ ಮೇಲೆ ಬರೆಯುತ್ತಿರುವ ಹೊಸ ಬರೆಹಗಾರರು ಶೋಧಿಸುತ್ತಿರುವ ವಸ್ತುಗಳು ಬಹಳ ಕುತೂಹಲಕರ. ವಿ.ಆರ್. ಕಾರ್ಪೆಂಟರ್ ಕೂಡಾ ಇದೇ ಸಾಲಿಗೆ ಸೇರುವ ಕವಿ. ಬೆಂಗಳೂರು ಮಹಾನಗರವಾಗುತ್ತಾ ತನ್ನ ಪರಿಧಿಯ ಅಂಚಿನಲ್ಲಿದ್ದ ಹಳ್ಳಿಗಳನ್ನೆಲ್ಲಾ `ಬೆಂಗಳೂರು~ ಆಗಿಸಿಬಿಟ್ಟದ್ದು ಈಗ ಪ್ರಾಚೀನ ಇತಿಹಾಸದಂತೆ ಕಾಣಿಸುತ್ತಿದ್ದರೂ ಅದು ಸಂಭವಿಸಿದ್ದು ಕಳೆದ ಮೂರು ದಶಕಗಳ ಅವಧಿಯಲ್ಲಿ. ಎಂಬತ್ತರ ದಶಕದ ಆರಂಭದಲ್ಲಿ ಹುಟ್ಟಿದ ಕಾರ್ಪೆಂಟರ್ ಅಕ್ಷರದ ಲೋಕಕ್ಕೆ ತನ್ನನ್ನು ತೆರೆದುಕೊಂಡದ್ದೇ ಜಾಗತೀಕರಣದ ಆರಂಭದ ನಂತರ. ಈ ಎಲ್ಲಾ ಕಾರಣಗಳೂ ಅವರ ಅಭಿವ್ಯಕ್ತಿಯ ಮೇಲೆ ಬೀರಿರುವ ಪರಿಣಾಮಗಳೂ ವಿಶಿಷ್ಟ.

ಕವಿತೆಗಳಲ್ಲಿ ತನ್ನದೇ ಒಂದು ನುಡಿಗಟ್ಟನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿರುವ ಅವರು ಈಗ ಕಾದಂಬರಿಯೊಂದನ್ನು ಬರೆದಿದ್ದಾರೆ. ಕೇವಲ ಗಾತ್ರವನ್ನಷ್ಟೇ ನೋಡಿದರೆ ಇದನ್ನು ಕಾದಂಬರಿ ಎನ್ನಬೇಕೇ ನೀಳ್ಗತೆ ಎನ್ನಬೇಕೇ ಎಂಬ ಸಂಶಯ ಕಾಡುತ್ತದೆ. ಆದರೆ ಅವರು ಬಳಸಿರುವ ಕಥನ ತಂತ್ರ ಸ್ವಲ್ಪಮಟ್ಟಿಗೆ ಕಾದಂಬರಿಯ ಅನುಭವವೊಂದನ್ನು ನೀಡುತ್ತದೆ ಎಂಬುದಂತೂ ನಿಜ.

ಕಾದಂಬರಿ ಆರಂಭಗೊಳ್ಳುವುದೇ ಕಾಣೆಯಾಗಿರುವ ಅಪ್ಪನನ್ನು ನಿರೂಪಕ ಹುಡುಕಲು ಆರಂಭಿಸುವ ಮೂಲಕ. ಈ ಹುಡುಕಾಟ ಕೇವಲ ಅಪ್ಪನ ಶೋಧನೆ ಮಾತ್ರವಲ್ಲ ಅದು ಅಪ್ಪನ ನೆರಳಲ್ಲಿರುವ ನಿರೂಪಕನ ವ್ಯಕ್ತಿತ್ವದ ಶೋಧನೆಯೂ ಹೌದು. ಅಪ್ಪನನ್ನು ಹುಡುಕುವ ಈ ಮಗನೇನು ಸಣ್ಣವನಲ್ಲ. ಅವನೂ ವಯಸ್ಕನೇ. ತಂಗಿಯರಿಗೆ ಮದುವೆಯೂ ಆಗಿದೆ. ಈ ಹೊತ್ತಿನಲ್ಲಿ ಅಪ್ಪ ಚಿಕ್ಕವಯಸ್ಸಿನ ಅಥವಾ ನಿರೂಪಕ ಪ್ರೀತಿಸುತ್ತಿದ್ದ ಹುಡುಗಿಯನ್ನು `ಪಟಾಯಿಸಿ~ಕೊಂಡು ಹೋಗಿದ್ದಾನೆ. ಸಾಹಿತ್ಯ ಓದಿರುವ, ಹಲವು ಬಗೆಯ ಸಾಮಾನ್ಯ ಜ್ಞಾನವನ್ನು ಹೊಂದಿರುವ ನಿರೂಪಕನಿಗೆ ಇದೊಂದು ಬಗೆಯಲ್ಲಿ ತನ್ನ ಅನನ್ಯತೆಯ ಪ್ರಶ್ನೆ. ಅಪ್ಪನ ಹುಚ್ಚುತನಗಳನ್ನು ಪ್ರೀತಿಸುತ್ತಲೇ ಅವನು ತನಗೇ `ವಿಲನ್~ ಆಗಿಬಿಡುವುದನ್ನು ಎದುರಿಸುವ ದ್ವಂದ್ವ.

ನಿರೂಪಕ ನಿಜಕ್ಕೂ ಅಪ್ಪನನ್ನೂ ಪ್ರೀತಿಸುತ್ತಾನೆಯೇ? ಇಲ್ಲಿಯೂ ಒಂದು ದ್ವಂದ್ವವಿದೆ. ಅಪ್ಪನನ್ನು ವರ್ಣಿಸುವಾಗ, ಅವನ ಹುಚ್ಚುತನಗಳನ್ನು ಹೇಳುವಾಗ ಅವನು ಹುಚ್ಚುಗಳನ್ನು ಬೇರೊಂದು ಬಗೆಯಲ್ಲಿ ತಾನೂ ಅಂಟಿಸಿಕೊಂಡಿರುವುದನ್ನು ವಿವರಿಸುವಾಗ ಈ ಪ್ರೀತಿ ಸುಪ್ತವಾಗಿ ಕಾಣಿಸುತ್ತದೆ. ಆದರೆ ತನ್ನ ಹುಡುಗಿಯನ್ನೇ ಅವನು `ಪಟಾಯಿಸಿದ್ದಾನೆ~ ಎನ್ನುವಾಗ ಅಲ್ಲಿರುವುದು ಸಿಟ್ಟು ಮತ್ತು ತನ್ನ ಅಸಹಾಯಕತೆಯ ಕುರಿತ ವಿಷಾದ. ಇಲ್ಲಿ ಅಪ್ಪ ಪಟಾಯಿಸುವುದು ಒಬ್ಬ ಹುಡುಗಿಯನ್ನೇನೂ ಅಲ್ಲ. ಹದಿಹರೆಯದಲ್ಲಿ `ಮುಟ್ಟುವ~, `ಮುಟ್ಟಿಸಿಕೊಳ್ಳುವ~ ಹುಡುಗಿ ಅಪ್ಪನ ತೋಳಲ್ಲಿದ್ದುದನ್ನೂ ನಿರೂಪಕ ಕಂಡಿದ್ದಾನೆ. ಮತ್ತೆ ಕಾಣೆಯಾದ ಅಪ್ಪನ ಹುಡುಕಾಟದ ಅಂತ್ಯದಲ್ಲಿ ಅವನಿಗೆ ಅರಿವಾಗುವುದೂ ತಮ್ಮ ಮತ್ತೊಬ್ಬಳು ಪ್ರೇಮದ ಪುತ್ಥಳಿಗೆ ತನಗಿಂತಲೂ ಅಪ್ಪನೇ ಇಷ್ಟವಾಗಿಬಿಟ್ಟದ್ದು.

ಅಪ್ಪನ ಹುಡುಕಾಟದಲ್ಲಿ ಬಸ್ಸೇರುವ ನಿರೂಪಕ ಹೇಳುತ್ತಾ ಹೋಗುವ ಕಥೆಯಲ್ಲಿ ಅಪ್ಪನ ಪ್ರೇಯಸಿಯರನ್ನು ಮೀರಿದ ಅನೇಕ ಅಂಶಗಳಿವೆ. ಮಹಾನಗರಗಳ ಅಂಚಿನಲ್ಲಿರುವ ಊರುಗಳಲ್ಲಿ ಸಂಭವಿಸುವ ಮಾನವೀಯ ಸಂಬಂಧಗಳ ಪಲ್ಲಟದ ಕಥನವಿದು. ಕನ್ನಡ ಸಾಹಿತ್ಯ ಅಷ್ಟಾಗಿ ಶೋಧಿಸದೇ ಇರುವ ಈ ಕ್ಷೇತ್ರವನ್ನು ವಿ.ಆರ್. ಕಾರ್ಪೆಂಟರ್ ಆರಿಸಿಕೊಂಡಿರುವುದರಲ್ಲಿ ಕೇವಲ ತಾಂತ್ರಿಕ ಜಾಣತನ ಮಾತ್ರ ಇಲ್ಲ. ಒಂದು ವೇಳೆ ಅದಷ್ಟೇ ಆಗಿದ್ದರೆ ಕಾದಂಬರಿಗೆ ಈಗ ಇರುವ ಒರಟು ಸ್ವರೂಪವಿರುತ್ತಿರಲಿಲ್ಲ. ಎಚ್ಚರದಿಂದ ಬಳಸುವ ಪದಪುಂಜಗಳಿರುವ ಕಾದಂಬರಿಯ ಓಟಕ್ಕೆ ತಕ್ಕುದಾದ ಒಂದು ಭಾಷೆಯೂ ಅಲ್ಲಿ ಆವಿಷ್ಕಾರಗೊಳ್ಳುತ್ತಿತ್ತು. ಈ ಕೊರತೆಯಿಂದಾಗಿ ಓದುಗನಿಗೆ ಅಲ್ಲಲ್ಲಿ `ಸಡನ್ ಬ್ರೇಕ್~ನ ಅನುಭವಾಗುತ್ತದೆ ಎಂಬುದೂ ನಿಜವೇ. ಆದರೆ ಈ ಕಾದಂಬರಿಗೊಂದು ಬಗೆಯ ಸೌಂದರ್ಯವನ್ನು ಕೊಟ್ಟಿರುವುದೂ ಈ ಭಾಷೆಯೇ.

ಕಾವ್ಯದಲ್ಲಿ ವಿ.ಆರ್.ಕಾರ್ಪೆಂಟರ್ ಅವರು ನೀಡುವ ಬಹಳ ಭಿನ್ನವಾದ ಅನುಭವ ಇಲ್ಲಿ ವಸ್ತುವಿಗಷ್ಟೇ ಸೀಮಿತವಾಗಿದೆ ಎಂಬುದು ದೊಡ್ಡ ಕೊರತೆ. ಇದನ್ನು ಮೀರುವುದು ಕಷ್ಟದ ಕೆಲಸವೇನೂ ಆಗಿರಲಿಲ್ಲ ಎಂಬುದು ಕಾದಂಬರಿಯಲ್ಲಿ ಅಲ್ಲಲ್ಲಿ ಇರುವ ಅನೇಕ ಹೊಳಹುಗಳು ಹೇಳುತ್ತವೆ. ನಿರೂಪಕ ತನ್ನ `ಜ್ಞಾನ~ವನ್ನು ಪ್ರದರ್ಶಿಸುವ ಹೊತ್ತಿನಲ್ಲಿ ಇನ್ನೂ ಸ್ವಲ್ಪ ಎಚ್ಚರದಿಂದ ಇದ್ದಿದ್ದರೆ ಅಥವಾ ನಿರೂಪಣಾ ಕ್ರಮವನ್ನು ಅದಕ್ಕೆ ತಕ್ಕಂತೆ ಒಗ್ಗಿಸಿಕೊಂಡಿದ್ದರೆ ಓದು ಇನ್ನಷ್ಟು ಅಪ್ಯಾಯಮಾನವಾಗುತ್ತಿತ್ತು. ಈ ಕೊರತೆಗಳೆಲ್ಲವುಗಳ ಆಚೆಗೂ ಕಾರ್ಪೆಂಟರ್ ಹೊಸ ಕಾಲವನ್ನೂ ಹೊಸ ಅನುಭವದ ಲೋಕವೊಂದನ್ನು ತೆರೆದಿಟ್ಟಿದ್ದಾರೆ ಎಂಬುದನ್ನಂತೂ ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT