ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಿಯ ಭಾಷೆಗೆ ಹೊಸ ದೇಹ

Last Updated 14 ಮೇ 2011, 19:30 IST
ಅಕ್ಷರ ಗಾತ್ರ

ಕನ್ನಡದ ಶಕ್ತ ಕಥೆಗಾರರಲ್ಲಿ ಒಬ್ಬರಾಗಿರುವ; ಆದರೆ ಹೆಚ್ಚಿಗೆ ಬರೆಯದೆ ಇರುವ ಎಸ್. ತುಕಾರಾಮ್ ಅವರ ನೀಳ್ಗತೆ ಎನ್ನಬಹುದಾದ ಕಿರು ಕಾದಂಬರಿ ‘ಆ ಮರದ ಎಲೆ’. ನೀಳ್ಗತೆಯ ಸೃಜನಶೀಲ ಮಾದರಿಗಳೇ ಅಪರೂಪವಾಗುತ್ತಿರುವ ಸಂದರ್ಭವಿದು.

ಹಾಗೆಯೇ ಅನವಶ್ಯಕವಾಗಿ ಅನಗತ್ಯ ಪ್ರಸಂಗಗಳನ್ನು ಧರಿಸಿಕೊಂಡು ಉದ್ದೋಉದ್ದಕ್ಕೆ ಬೆಳೆಯುವ ಕಾದಂಬರಿಗಳ ಕಾಲ ಕೂಡ. ಈ ನಡುವೆ ತುಕಾರಾಮ್ ಅವರ ಈ ಕಿರು ಕಾದಂಬರಿ ಅನೇಕ ಕಾರಣಗಳಿಂದಾಗಿ ಗಮನ ಸೆಳೆಯುವ ಪುಟ್ಟ ಕೃತಿ.

ಈ ಅನೇಕ ಕಾರಣಗಳಲ್ಲಿ ಮುಖ್ಯವಾದದ್ದು ನಮ್ಮ ಕಥೆಗಾರರ ನಡುವೆ ಮರೆಯಾಗುತ್ತಿರುವ ದೇಸಿ ಭಾಷೆಯ ಬನಿ. ನವ್ಯೋತ್ತರದ ನಂತರ ಆರಂಭಗೊಂಡ ದಲಿತ-ಬಂಡಾಯದ ಸಂದರ್ಭದಲ್ಲಿ ದೇಸಿಭಾಷೆಗಳನ್ನು ಸೃಜನಶೀಲವಾಗಿ, ಕಲಾತ್ಮಕವಾಗಿ, ಹಸಿಹಸಿಯಾಗಿ, ಕೆಲವೊಮ್ಮೆ ಒರಟೊರಟಾಗಿ; ಉದ್ದೇಶಪೂರ್ವಕವಾಗಿ ಬಳಸುವ ಪ್ರಕ್ರಿಯೆಯೊಂದು ಚಾಲನೆ ಪಡೆದುಕೊಂಡಿತು; ಅದು ಒಂದು ರೀತಿಯಲ್ಲಿ ಕನ್ನಡ ಸಾಹಿತ್ಯ ಸಂವೇದನೆಗೊಂದು ಹೊಸ ರುಚಿಯನ್ನು ಕೊಟ್ಟಿತು ಕೂಡ.
 
ಆದರೆ ಅದು ತಲುಪಿದ ಅತಿರೇಕ ಮತ್ತು ಕೃತಕತೆಗಳಿಂದಾಗಿ ಬಂಡಾಯ-ದಲಿತ ಕಥೆಗಳು ಒಂದು ಹಂತದಲ್ಲಿ ಉದ್ದೇಶಪೂರ್ವಕ ಬರವಣಿಗೆಗಳಾಗಿ ಕಪ್ಪು-ಬಿಳುಪು ಚಿತ್ರಣಗಳಿಗೆ ತಲುಪಿಬಿಟ್ಟವು.
 
ಆಡುಮಾತನ್ನೇ ತನ್ನ ನಿರೂಪಣಾಭಾಷೆಗೆ ಒಗ್ಗಿಸಿಕೊಂಡ ಅಂದಿನ ತುರ್ತು ಸಾಂಸ್ಕೃತಿಕವಾಗಿ ಬಹಳ ಮುಖ್ಯವೆಂದೆನ್ನಿಸಿದ್ದರೂ ಅದು ತಲುಪಿದ ಏಕತಾನತೆ-ಕೃತಕತೆಯಿಂದಾಗಿ ಅಲ್ಲಿಗೇ ನಿಂತುಬಿಟ್ಟಿತು. ಈ ಏಕತಾನತೆಯ ಭಯದಿಂದಾಗಿಯೂ ನಮ್ಮ ಕೆಲವು ಹಳ್ಳಿಸೊಗಡಿನ ಕಥೆಗಾರರು ‘ನೆಲದ ಭಾಷೆ’ಯನ್ನು ಸೃಜನಶೀಲವಾಗಿ ಬಳಸಿಕೊಳ್ಳುವಲ್ಲಿ ಕೈಸೋತಂತಾದರು.

ಅವೆಲ್ಲವೂ ಮುಗಿದಂತಿರುವ ಇಂದಿನ ಹೊಸ ಸಾಹಿತ್ಯ ಸಂಕ್ರಮಣದ ಈ ಕಾಲಘಟ್ಟದಲ್ಲಿ; ದಲಿತ-ಬಂಡಾಯ ಸಾಹಿತ್ಯದೊಂದಿಗೆ ಒಡನಾಡಿರುವ, ದಲಿತ-ಬಂಡಾಯದ ಸಂವೇದನೆಯನ್ನು ಹತ್ತಿರದಿಂದ ಕಂಡಿರುವ ತುಕಾರಾಮ್ ಅವರ ಈ ಹೊಸ ಕೃತಿ ಅದೇ ಭಾಷೆಯ ಆಕಾರದಿಂದಾಗಿ ಗಮನ ಸೆಳೆಯುವಂತಿದೆ.
 
ಇಲ್ಲಿ ದಲಿತಕೇರಿಯ ಭಾಷೆ ಇದೆ; ಆದರದು ಕೃತಕವಾಗಿಲ್ಲ. ಹಾಗೆಂದು ಅದು ಕಚ್ಚಾ ಭಾಷೆಯಾಗಿಯೂ ಒರಟೊರಟಾಗಿಯೂ ಬಳಕೆಯಾಗಿಲ್ಲ; ಆ ಭಾಷೆಯ ಕುರಿತ ಅನಗತ್ಯ ಮೋಹವೂ ಕತೆಗಾರರಿಗಿಲ್ಲ. ಬದಲಿಗೆ ತನ್ನ ಕೇರಿಯ ಭಾಷೆಯನ್ನು ತನ್ನ ‘ಕತೆಗಾರಿಕೆ’ಯ ನುಡಿಗಟ್ಟಿಗೆ ಒಗ್ಗಿಸಿಕೊಳ್ಳಬಹುದಾದ ಹೊಸ ಶೈಲಿಯೊಂದನ್ನು ತುಕಾರಾಮ್ ತಮ್ಮ ಈ ಕೃತಿಯಲ್ಲಿ ಹುಡುಕಿಕೊಂಡಿದ್ದಾರೆ. ಹಾಗಾಗಿ ಇಲ್ಲಿನ ಭಾಷೆ ಮತ್ತು ನಿರೂಪಣಾ ಶೈಲಿಯನ್ನು ಹೊಸ ಶೈಲಿಯೊಂದರ ಹುಡುಕಾಟದಂತೆಯೂ ನೋಡಬಹುದು.

ಈ ಕೃತಿ ಕುತೂಹಲ ಹುಟ್ಟಿಸಲು ಇನ್ನೂ ಒಂದು ಕಾರಣವೆಂದರೆ, ಚರಿತ್ರೆಯೊಳಗೆ ಆಗಿಹೋಗಿರಬಹುದಾದ ಹತ್ತಾರು ಸಂಗತಿಗಳ ಸೃಜನಶೀಲ ನಿರೂಪಣೆ. ಅವುಗಳಲ್ಲಿ ಕೃತಿಯ ಮುಖ್ಯಪಾತ್ರವಾದ ಲಕ್ಷ್ಮ ಒಂದು ಬಾರಿ ಬೇಸರಗೊಂಡು ಮೈಸೂರು ಅರಮನೆ ದಿಕ್ಕಿಗೆ ನಡೆದುಹೋಗುವ ದೃಶ್ಯ.

ಕೆರೆಯ ಪಕ್ಕದ ದಾರಿಗುಂಟ  ನಡೆದುಹೋಗುವ ಲಕ್ಷ್ಮ ಮಹಾರಾಜರು ಮೀಯುತ್ತಿದ್ದ ‘ತಾನಗಟ್ಟೆ’ಯನ್ನು ಕಂಡು  ಹಳೆಯ ವೈಭವವನ್ನು ಮೆಲುಕು ಹಾಕುವುದು, ಅಲ್ಲಿಂದ ಸಾಗಿ ಮಹಾರಾಜರ ಪ್ರತಿಮೆಯ ಮುಂದೆ ನಿಂತು ಮಂತ್ರಮುಗ್ಧನಾಗುವುದು, ದೊಡ್ಡ ಗಡಿಯಾರದ ಸದ್ದಿಗೆ ಬೆಚ್ಚಿ ಬೀಳುವುದು- ಇವೆಲ್ಲವೂ ಮೈಸೂರು ಹಿಂದೆ ಎಲ್ಲಾ ಹಳ್ಳಿಗಳ ಹಾಗೆಯೇ ಒಂದು ದೊಡ್ಡ ಹಳ್ಳಿಯಾಗಿತ್ತೆಂಬ ಕುತೂಹಲವನ್ನು ಹುಟ್ಟಿಸುವಂತಿದೆ. ಸಾಂಸ್ಕೃತಿಕ ನಗರಿಯೊಂದನ್ನು ಜನಪದರ ಮನೋಚರಿತ್ರೆಯ ಮೂಲಕ ಹುಡುಕುತ್ತಾ ಹೋಗಿರುವುದು ಸೃಜನಶೀಲ ಸವಾಲಿನಂತೆ ತೋರುತ್ತದೆ.

ಇದಲ್ಲದೆ ಈ ನೀಳ್ಗತೆ ಚರಿತ್ರೆಯನ್ನು ಜನಪದೀಯ ಪುರಾಣವಾಗಿ ಮರುನಿರೂಪಿಸುತ್ತದೆ. ಜನಸಮುದಾಯಗಳ ನಡುವೆ ಇರುವ ಹಲವಾರು ನಂಬಿಕೆಗಳನ್ನು, ವೈರುಧ್ಯಗಳನ್ನು ತನ್ನದೇ ಮಾನವೀಯ ನೆಲೆಗಟ್ಟಿನ ಮೂಲಕ ನೋಡಲು ಬಯಸುತ್ತದೆ.
 
ಅದೇ ಕಾರಣಕ್ಕೆ ಬಿಸಿಲು ಮಾರಮ್ಮನಂತಹ ಜನಪದರ ದೇವತೆ ಕೂಡ ಎಲ್ಲ ಮನುಷ್ಯರ ಹಾಗೆ ಉಭಯಸಂಕಟಕ್ಕೆ ಒಳಗಾಗಿ, ತನ್ನ ಕೇರಿಯ ಜನಕ್ಕೆ ಸಹಾಯ ಮಾಡಲು ತನ್ನ ದೇವಾನುದೇವತೆಗಳನ್ನು ನೆನೆಯುತ್ತಾಳೆ! ನಮ್ಮ ನಡುವಿನ ಸಮುದಾಯಗಳು ದೈವೀಶಕ್ತಿ ಎಂಬುದನ್ನು ಅಸಾಮಾನ್ಯ ಎಂಬಂತೆ ಪರಿಗಣಿಸಿರುವ ನಂಬಿಕೆಗಳನ್ನು ಇದು ಬುಡಮೇಲು ಮಾಡುವಂತಿದೆ.
 
‘ಮೈಸೂರು ಮಹಾರಾಜರ ಮಕ್ಕಳಿಗೆ ಗಂಡು ಸಂತಾನವಿಲ್ಲ’ ಎಂಬ ಮಿಥ್ ಅನ್ನು ಕಾದಂಬರಿ ಲಕ್ಷ್ಮ ಮಹಾರಾಜನ ವಂಶಸ್ಥ ಎಂದು ನೋಡುವ ಮೂಲಕ, ಆತ ಈ ರಾಜರ ವಾರಿಗೆಯವನೆಂಬ ಸಮುದಾಯದ ಭಾವನೆಯ ಮೂಲಕ ಹೊಸದಾಗಿ ಕಟ್ಟಿಕೊಡುತ್ತದೆ.

ಹಾಗಿದ್ದೂ ಲಕ್ಷ್ಮನ ಕುಸ್ತಿಯ ಕಲೆಯನ್ನು ನೋಡಲು ರಾಜರು ಬಾರದೆ ಹೋಗುವ ವಿಷಾದ ಎಲ್ಲಾ ಸಮುದಾಯಗಳೂ ಪ್ರಭುತ್ವದ ಮುಂದೆ ಅನುಭವಿಸುವ ತಬ್ಬಲಿತನಕ್ಕೆ ಸಾಕ್ಷಿಯಂತಿದೆ. ಹೀಗಿದ್ದೂ ಅರಮನೆ, ಮಹಾರಾಜರ ಕುರಿತು ಲಕ್ಷ್ಮನಿಗೆ ಇರುವ ಭಾವುಕತೆ-ಭಕ್ತಿ ಕಡಿಮೆಯಾಗುವುದಿಲ್ಲ!

ಇಷ್ಟೆಲ್ಲ ಕಥೆಯನ್ನು, ಪ್ರಸಂಗಗಳನ್ನು ಕತೆಗಾರರು ಭೂತ - ಭವಿಷ್ಯ - ವರ್ತಮಾನಗಳೆಂಬ ವಿಂಗಡಣೆಗಳಿಲ್ಲದೆ ಒಂದೇ ಎಳೆಯಲ್ಲಿ ಕಟ್ಟಿಕೊಡುತ್ತಾ ಹೋಗುವುದು ಕಿರುಕಾದಂಬರಿಯ ಸಂದರ್ಭದಲ್ಲಿ ವಿಶಿಷ್ಟವಾಗಿ ತೋರುತ್ತದೆ. ಅದು ಕಥೆ ತನಗೆ ಕಂಡ ದಾರಿಯಲ್ಲಿ ಸಾಗುವ- ಹಿಂದಿರುಗುವ- ಬೆಳೆಯುವ ನಿರೂಪಣಾ ಪ್ರಕ್ರಿಯೆಗೆ ಹೊಸತೆನ್ನಿಸುವಂತೆ ಇದೆ.

ಮೊದಲಿಗೇ ಹೇಳಿದಂತೆ ಈ ಕೃತಿಯಲ್ಲಿ ಹೆಚ್ಚು ಗಮನ ಸೆಳೆಯುವಂತಿರುವುದು ಕಥೆಗಾರರ ಕೇರಿಯ ಭಾಷೆ, ನುಡಿಗಟ್ಟು ಮತ್ತು ಶಬ್ದಪುಂಜಗಳು. ಈ ಭಾಷಾವೈಶಿಷ್ಟ್ಯ ದೇವನೂರರ ಭಾಷೆಯಿಂದಲೇ ಒಡಮೂಡಿದೆಯೆಂಬಂತೆ ಮೇಲುನೋಟಕ್ಕೆ ಕಾಣಿಸಿದರೂ, ಅಲ್ಲಿಗಿಂತಲೂ ವಿಶಿಷ್ಟವಾದ ಬಾಗು-ಬಳುಕುವಿಕೆಯ, ಹಳ್ಳಿಯ ಶಬ್ದಬನಿಯ, ಎರೆಮಣ್ಣಿನ ವಾಸನೆಯಂತಹ ಭಾಷೆ, ಶಬ್ದಗುಚ್ಛಗಳು ತಕ್ಷಣ ಓದುಗನನ್ನು ಸೆರೆಹಿಡಿಯುತ್ತವೆ.

ಈ ಎಲ್ಲಾ ಸಂವೇದನೆ, ಚರಿತ್ರೆಯನ್ನು ಜನಪದರ ಮೂಲಕ ಕಟ್ಟಿಕೊಡುವ ಪ್ರಯತ್ನಗಳ ನಡುವೆ ಕೂಡ ಕಥೆಯ ಭಿತ್ತಿ ನಿರೂಪಿಸುತ್ತಿದ್ದಿರಬಹುದಾದ ತಾತ್ವಿಕತೆ ಕೆಲವು ಪ್ರಶ್ನೆಗಳನ್ನೂ ಹುಟ್ಟು ಹಾಕುವಂತಿದೆ. ಒಂದು ಕಾಲದ ಮೈಸೂರನ್ನು ಮತ್ತೆ ಮತ್ತೆ ಭಾವನಾತ್ಮಕ ನೆಲೆಯಲ್ಲಿ ಕಟ್ಟಿಕೊಡಲು ಬಯಸುವ ಈ ನೀಳ್ಗತೆ ಎಲ್ಲೋ ಒಂದೆಡೆ ‘ರಾಜಪ್ರಭುತ್ವದ’ ಗುಪ್ತ ಆರಾಧನೆಯಲ್ಲಿ ತೊಡಗಿರಬಹುದೆ?
 
ಈ ಆರಾಧನೆ ಒಂದು ರೀತಿಯಲ್ಲಿ ಊಳಿಗಮಾನ್ಯವನ್ನೂ ಭಾವುಕ ನೆಲೆಯಲ್ಲಿ ಮಾನ್ಯ ಮಾಡುತ್ತಿರಬಹುದೆ?- ಎಂದೆನ್ನಿಸುತ್ತದೆ. ಯಾಕೆಂದರೆ ಪ್ರಭುತ್ವದಿಂದ ಹತ್ತಾರು ಸಂಕಟಗಳಿಗೆ ಒಳಗಾಗುವ ಜನಸಮುದಾಯ ಕೃತಿಯಲ್ಲಿ ಎಲ್ಲಿಯೂ ಒಂದಿನಿತೂ ಸಂಘರ್ಷವನ್ನೇ ತೋರದೆ ಇದ್ದುಬಿಡುವುದು ಪ್ರಭುತ್ವವನ್ನು ಭಕ್ತಿಪೂರ್ವಕವಾಗಿ ಒಪ್ಪಿಕೊಂಡಿರುವ ಮುಗ್ಧತೆಗೆ ಸಾಕ್ಷಿ.
 
ಈ ಮುಗ್ಧತೆಯನ್ನು ಕೃತಿ ಅನಗತ್ಯವಾಗಿ ವೈಭವೀಕರಿಸುತ್ತಿದೆಯೇನೋ ಎಂಬ ಅನುಮಾನ ಉಂಟಾಗುತ್ತದೆ. ಕೊನೆಯಲ್ಲಿ ಅರಮನೆಯನ್ನು ಪ್ರಜಾಪ್ರಭುತ್ವೀಯ ಸರ್ಕಾರ ಸಾರ್ವಜನಿಕಗೊಳಿಸುವುದರ ಬಗ್ಗೆ ಜನರು ಅಸಮಾಧಾನ ತೋರುವುದು ಕೂಡ ರಾಜತ್ವದ ಬಗೆಗಿನ ಜನಸಾಮಾನ್ಯರ ಕುರುಡುಭಕ್ತಿಯನ್ನೇ ಪುಷ್ಟೀಕರಿಸುತ್ತದೆ. 

ನಾಗರಿಕ ಸಮಾಜ, ಆಧುನಿಕತೆ ನಮ್ಮ ಎಲ್ಲಾ ಬಗೆಯ ದೇಸೀಯ ಪೂರ್ವಚಹರೆಗಳನ್ನು ಅಳಿಸಿಹಾಕುತ್ತವೆಯೇನೋ ಎಂಬ ಕಥೆಗಾರರ ಆತಂಕ ಸರಿಯಾಗಿರುವುದೇನೋ ನಿಜ; ಆದರೆ ‘ದೊರೆಯಾಳ್ವಿಕೆ’ಯನ್ನು ಸಾರ್ವಜನಿಕ ಬದುಕಿನೊಂದಿಗೆ ವಿಲೀನಗೊಳಿಸಿ, ಪ್ರಭುತ್ವವನ್ನು ಸಾಮಾನ್ಯೀಕರಿಸುವ ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನು ಜನಪದ ಸಮುದಾಯಗಳು ವಿರೋಧಿಸುವುದು ಸಮುದಾಯದ ಮನಸ್ಸುಗಳು ಮತ್ತೊಮ್ಮೆ ದಾಸ್ಯಕ್ಕೆ ಒಡ್ಡಿಕೊಳ್ಳುವ ಕುರುಡುಭಾವುಕತೆ ಆಗುವುದಿಲ್ಲವೆ ಎಂಬ ಪ್ರಶ್ನೆ ಕೃತಿಯ ಒಟ್ಟು ಓದುವಿಕೆಯಲ್ಲಿ ಎದ್ದು ನಿಲ್ಲುತ್ತದೆ.
 
ಇದು ಕಾದಂಬರಿಯ ಒಟ್ಟು ಆಶಯವೇನೂ ಅಲ್ಲ; ಆದರೆ ಇದು ನಮ್ಮ ಇತಿಹಾಸದೊಳಗಿನಿಂದಲೇ ಒಡಮೂಡಿರುವ ನಿಜವಾಗಿದೆ. ಜನಸಮುದಾಯಗಳ ತಲೆತಲಾಂತರಗಳ ನೆನಪುಗಳ ಮೂಲಕ ಚರಿತ್ರೆಯನ್ನು ಕಟ್ಟಿಕೊಡುವ ಕಥೆಗಾರರ ಭಾವನಾತ್ಮಕ ಹುರುಪಿನಲ್ಲಿ ಇದು ಸಂಭವಿಸಿರಬಹುದಾದರೂ ಲೇಖಕರ ತಾತ್ವಿಕ ಆಶಯವನ್ನು ಬಿಟ್ಟು ಕೃತಿಯೊಂದು ಭಾವುಕತೆಯ ಪಾತಳಿಯಲ್ಲಿ ಜಾರಿಹೋಗುವ ಸಡಿಲತೆಗೂ ಇದು ಎಡೆಮಾಡಿಕೊಡುವಂತಿದೆ.

ಆ ಮರದ ಎಲೆ
ಲೇ: ತುಕಾರಾಮ್ ಎಸ್; ಪು: 72; ಬೆ: ರೂ. 45; ಪ್ರ: ಗ್ರಾಮೀಣ ಪ್ರಕಾಶನ:ನಂ. 134, 1ನೇ ಮಹಡಿ, 10ನೇ ಕ್ರಾಸ್, 5ನೇ ಮೇನ್, ಎನ್‌ಜಿಇಎಫ್ ಲೇ ಔಟ್, ನೃಪತುಂಗನಗರ, ಬೆಂಗಳೂರು-560072.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT