ಕನ್ನಡದಲ್ಲಿ ನವ್ಯ ಪರಂಪರೆಯನ್ನು ಗೋಪಾಲಕೃಷ್ಣ ಅಡಿಗ ಮತ್ತು ವಿ.ಕೃ. ಗೋಕಾಕ್ ಅವರಿಗೂ ಮೊದಲೇ ಪೇಜಾವರ ಸದಾಶಿವರಾವ್ ಅವರು ತಮ್ಮ `ನಾಟ್ಯೋತ್ಸವ~ ಕವಿತೆಯ ಮೂಲಕ ಆರಂಭಿಸಿದ್ದರು. ಅವರ ತಂದೆ ಶಾಮರಾವ್ ಮತ್ತು ತಾಯಿ ಸೀತಮ್ಮ. ತಮ್ಮಂದಿರು ಪೇಜಾವರ ವಾಸುದೇವರಾವ್ ಮತ್ತು ಪೇಜಾವರ ವೆಂಕಟರಾವ್.

ಮಾರ್ಚ್ 8, 1913ರಂದು ಜನಿಸಿದ ಸದಾಶಿವರಾವ್ ಅವರು ಮಂಗಳೂರಿನ ಸಾಹಿತ್ಯ ಚಟುವಟಿಕೆಗಳ ಆಡುಂಬೊಲವಾಗಿದ್ದ `ಮಿತ್ರಮಂಡಲಿ~ಯ ಬೆನ್ನೆಲುಬಾಗಿದ್ದವರು. ಮುಂದೆ ಅವರು ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಸ್ಥಾಪತ್ಯಶಾಸ್ತ್ರದ ವಿಶೇಷ ವ್ಯಾಸಂಗಕ್ಕಾಗಿ ಇಟಲಿಯಲ್ಲಿರುವ ಮಿಲಾನ್ ನಗರಕ್ಕೆ ಹೋದರು.

ವ್ಯಾಸಂಗ ಮುಗಿಸಿ ಭಾರತಕ್ಕೆ ಹಿಂದಿರುಗಬೇಕೆನ್ನುವಷ್ಟರಲ್ಲಿ ಮಾರಣಾಂತಿಕ ಕಾಯಿಲಿಗೆ ತುತ್ತಾಗಿ ಇಟಲಿಯಲ್ಲಿಯೇ ತೀರಿಕೊಂಡರು (ಅ.18, 1939). ಆಗವರಿಗೆ 26 ವರ್ಷ. ರಂ.ಶ್ರೀ.ಮುಗಳಿ ಅವರು ಹೇಳುವಂತೆ- `ಪರಿಪಕ್ವಗೊಳ್ಳುತ್ತಿರುವ ಮೇಧಾಶಕ್ತಿ-ಕವಿತಾಶಕ್ತಿಗಳುಳ್ಳ ತರುಣ ಕನ್ನಡಿಗನನ್ನು ಸಾವಿನ ಹದ್ದು ಕಚ್ಚಿಕೊಂಡು ಹೋಯಿತು~ (`ವರುಣ~ -1952, ಮುನ್ನುಡಿ, ರಂ.ಶ್ರೀ.ಮುಗಳಿ). ಸದಾಶಿವರಾವ್ ಅವರಂತೆಯೇ ಕಿರಿಯ ವಯಸ್ಸಿನಲ್ಲಿಯೇ (22 ವರ್ಷ) ತೀರಿಕೊಂಡ ಕನ್ನಡದ ಮತ್ತೊಬ್ಬ ಕವಿ ಯರ್ಮುಂಜ ರಾಮಚಂದ್ರ.

ಸದಾಶಿವರಾವ್ ಅವರ `ಸರಪಣಿ~, `ಜೀವನ ಸಂಗೀತ~ ಮತ್ತು `ಬೀದಿಗಿಳಿದ ನಾರಿ~ ಎಂಬ ನಾಟಕಗಳು ತ್ರಿವೇಣಿ ಎಂಬ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡಿವೆ. `ಅಂಧಶಿಲ್ಪ ಮತ್ತು ಶ್ರೀಗಂಧ~ ಇವು ಅವರು ಬರೆದ ಸಣ್ಣಕತೆಗಳು. 1952ರಲ್ಲಿ ಅವರ ಪೂರ್ಣಪ್ರಮಾಣದ `ವರುಣ~ ಕವಿತಾ ಸಂಕಲನವನ್ನು ರಂ.ಶ್ರೀ. ಮುಗಳಿ ಅವರು ಪ್ರಕಟಿಸಿದರು. ಈ ಸಂಬಂಧ ಮುಗಳಿಯವರಿಗೆ ನೆರವು ನೀಡಿದವರು ಸದಾಶಿವರಾವ್ ಅವರ ತಮ್ಮಂದಿರಾದ ವಾಸುದೇವರಾವ್ ಮತ್ತು ವೆಂಕಟರಾವ್.

`ಅಲರು~ 1931ರಲ್ಲಿ ಪೇಜಾವರ ಸದಾಶಿವರಾವ್ ಅವರು ಸಂಪಾದಿಸಿ ಪ್ರಕಟಿಸಿದ ಕವಿತಾಸಂಕಲನ. ಅಲರು- ಅಚ್ಚಗನ್ನಡ ಶಬ್ದ. ಅಲರು ಎಂಬುದಕ್ಕೆ ಅರಳು ಮತ್ತು ಹೂವು ಎಂಬ ನಾಮ ಕ್ರಿಯಾರ್ಥಗಳೆರಡೂ ಇವೆ. ಆಗಿನ ಇದರ ಬೆಲೆ ಕೇವಲ ನಾಲ್ಕಾಣೆ.

ಮಂಗಳೂರಿನ ಮಿತ್ರಮಂಡಲಿಯ `ಅಳಿಲು ಸೇವಾಗ್ರಂಥಮಾಲೆ~ಯಡಿ ನಾಲ್ಕನೆಯ ಪುಷ್ಪವಾಗಿ ಈ ಕೃತಿ ಪ್ರಕಟಗೊಂಡಿದೆ. `ಇಣಚಿ~ ಎಂಬ ಅರ್ಥದ ಅಳಿಲು ಶಬ್ದ ಕೂಡ ದೇಸಿಯ ಸೊಗಸಿನ ಪದ. ಅಲರು, ಅಳಿಲು ಈ ಪದಪ್ರಯೋಗಗಳು ಪೇಜಾವರರಿಗಿದ್ದ ದೇಸಿಯ ಒಲವಿನ ದ್ಯೋತಕ. ಮಂಗಳೂರಿನ ರಥಬೀದಿಯ ಮಂಗಳೂರು ಛಾಪಾಖಾನೆಯಲ್ಲಿ ಈ ಕೃತಿ ಮುದ್ರಣಗೊಂಡಿದೆ.

`ಅಲರು~ ಸಂಕಲನದ ಪ್ರಸ್ತುತ ಪ್ರತಿ `ಶ್ರೀಮಾನ್ ವಿ.ಸೀತಾರಾಮಯ್ಯನವರಿಗೆ - ಪ್ರೇಮಪೂರ್ವಕವಾದ ಒಡಲ ಕಾಣಿಕೆ- ಪೇಜಾವರ ಸದಾಶಿವರಾಯ~ ಎಂಬ ಸದಾಶಿವರಾವ್ ಅವರ ಒಕ್ಕಣೆಯನ್ನೊಳಗೊಂಡಿದೆ. ಅಷ್ಟ ಕಿರೀಟಾಕಾರದ 42 ಪುಟಗಳ ಈ ಪುಟ್ಟ ಕೃತಿಯಲ್ಲಿ 16 ಕವಿಗಳ 26 ಕವಿತೆಗಳಿವೆ. ಪೇಜಾವರರ 3 ಕವಿತೆಗಳಿವೆ. ಆರಂಭದಲ್ಲಿ `ಅಲರು~ ಶಬ್ದಾರ್ಥಕ್ಕೆ ಹೊಂದುವ ಬೇಂದ್ರೆಯವರ ಒಂದು ಕವಿತೆಯ ಎಸಳನ್ನು ನೀಡಲಾಗಿದೆ. ಅದು ಹೀಗಿದೆ:

ಕಂಪಿನಲರ ತಂದೆನಿಂದು
ನಿನ್ನ ಅಡಿಯೊಳಿಡಲು ಎಂದು
ಮೂಸಿನೋಡಬೇಕು ಎಂಬ ಭಾವ ಹುಟ್ಟಿತು.
ಭಾವ ಹುಟ್ಟಿ ಮೂಸಿಬಿಟ್ಟೆ
ಹಿಗ್ಗಿ ನಿನ್ನ ಅಡಿಯೊಳಿಟ್ಟೆ
ಗಮಗಮಗಮ ಒಳಗು ಹೊರಗು ಕಂಪು ಇಡುಗಿತು!
-ಅಂಬಿಕಾತನಯದತ್ತ

ನವೋದಯ ಆರಂಭದ ಈ ಕವಿತೆಗಳನ್ನು ಕುರಿತು ಮುನ್ನುಡಿಯಲ್ಲಿ ಸದಾಶಿವರಾವ್ ಹೀಗೆ ಬರೆದಿದ್ದಾರೆ: ಜೀವನಕ್ಕೂ ಕಾವ್ಯಕ್ಕೂ ಅನ್ಯಾದೃಶ್ಯವಾದ ಸಂಬಂಧವಿದೆ. ಜೀವನದ ಭವ್ಯತೆ ದಿವ್ಯತೆಗಳನ್ನು ಜನತೆಗೆ ತೋರಿಸಿಕೊಡಲು ಕಾವ್ಯವೇ ಕೈಗನ್ನಡಿ.

ಹಿಂದಿನ ಜೀವನಕ್ಕೂ ಇಂದಿನ ಜೀವನಕ್ಕೂ ಇರುವ ಭೇದವನ್ನು ನೋಡಿ ಇಂದಿನ ಕವಿಗಳು ಇಂದಿನ ಜೀವನ ಧರ್ಮಕ್ಕೊಪ್ಪುವ ನೂತನ ಪಥದಲ್ಲಿ ಮುಂದುವರೆಯಲು ಯತ್ನಿಸುತ್ತಿದ್ದಾರೆ. ಛಂದಸ್ಸನ್ನು ಹೊಸರೂಪಕ್ಕೆ ಮಾರ್ಪಡಿಸಿಕೊಂಡು ನವಜೀವನದ ಸುಖದುಃಖಗಳನ್ನು ಯಥಾರ್ಥವಾಗಿ ಬಣ್ಣಿಸಲು ಹವಣಿಸುತಲಿದ್ದಾರೆ.

ಹೊಸವಿಚಾರಗಳನ್ನು ಹೊಸ ಸಾಹಿತ್ಯದ ಮೂಲಕ ಜನತೆಗೆ ತಿಳಿಸಿ ವಿಚಾರ ಪಲ್ಲಟವನ್ನುಂಟುಮಾಡಲು ಸನ್ನದ್ಧರಾಗಿದ್ದಾರೆ. ಎಷ್ಟರಮಟ್ಟಿಗೆ ಈ ಧ್ಯೇಯದ ಸಾಫಲ್ಯವಾಯಿತೆಂಬುದು ಸಾಹಿತ್ಯಾಭಿಮಾನಿಗಳಿಗೆ ತಿಳಿದ ವಿಷಯ.

`ಇಂಗ್ಲಿಷ್ ಗೀತಗಳು~ ಪ್ರಕಟವಾದ ಆಸುಪಾಸಿನಲ್ಲಿಯೇ ಬಂದ `ಅಲರು~ವಿನ ಮುನ್ನುಡಿಯ ಮಾತುಗಳು ತುಂಬಾ ಅರ್ಥಪೂರ್ಣವಾಗಿವೆ. ಸಂಕಲನದಲ್ಲಿ ಪೇಜಾವರ ಅವರೊಂದಿಗಿರುವ ಕವಿಗಳೆಂದರೆ:

ಎಸ್.ವೆಂಕಟರಾಜ, ಕ.ರಾಘವಾಚಾರ್, ಪದ್ಮನಾಭ, ಬಾಲಮಿತ್ರ, ಶ್ರೀನಿವಾಸರಾವ್ ಕದಿರೆ, ಬಿ.ಆರ್.ಕಾಮತ್, ಸ್ವರ್ಗೀಯ ಕೆ.ಟಿ.ಆಚಾರ್ಯ, ವಾಮನ, ಬಿ.ಶ್ರೀಧರ ಕಕ್ಕಿಲಾಯ, ಶ್ರೀರಾಜ, ಕೆಮ್ಮಿಂಜೆ ಸುಬ್ರಾಯುಪಾಧ್ಯಾಯ, ಉದ್ಯಾವರ ಬಾಲಕೃಷ್ಣರಾವ್ ಹಾಗೂ ಹಿರಣ್ಮಯ. ಹಿಂದಿನ ಶತಮಾನದ ಮೂವತ್ತರ ದಶಕದ ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯದ ಚಟುವಟಿಕೆ ಈ ಕೃತಿಯಿಂದ ತಿಳಿಯುತ್ತದೆ.

ಇಲ್ಲಿರುವ ಪದ್ಮನಾಭ ಎಂಬ ಕಾವ್ಯನಾಮದ ತೊಟ್ಟೆತ್ತೋಡಿ ನಾರಾಯಣ ಭಟ್ಟರು ಮಂಗಳೂರಿನ ಕೆನರ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದು ಶಿವರಾಮ ಕಾರಂತರಿಗೆ `ಸಿರಿಗನ್ನಡ ಅರ್ಥಕೋಶ~ದಲ್ಲಿ ನೆರವು ನೀಡಿದವರು. ಕೆ.ಟಿ.ಆಚಾರ್ಯರ `ಟಿಟ್ಟಿಭ ಸಾನೆಟ್~,ಎಸ್. ವೆಂಕಟರಾಜರ `ನೇಹ ದ್ವಿಪದಿ~ ಮತ್ತು ಉದ್ಯಾವರ ಬಾಲಕೃಷ್ಣರಾವ್ ಅವರ `ನೆನಹು ಶರ ಷಟ್ಪದಿ~- ಇವುಗಳೆಲ್ಲ, ಆಗ ನಡೆಯುತ್ತಿದ್ದ ಪ್ರಯೋಗಗಳಿಗೆ ಸೂಚನೆಗಳು.
ಪದ್ಮನಾಭ ಅವರ-

ಮೆಲ್ಲಿತೆಲರದೆಲ್ಲ ಹೊಲವ ನಿಲ್ಲದಲುಗಿಸಲ್
ಲಲಿತ ಲಾಸ್ಯ ಕಲಲು ನಟಿಪ ತೆರದೆ ದ್ಯೋತಿಸಲ್

ಎಂಬ ಲಯಗಳು 1930ರಲ್ಲೇ ಕಾಣಿಸಿಕೊಂಡಿದೆ. ಅದಮ್ಯ ಉತ್ಸಾಹದ ಅಪಾರ ಕವಿತಾ ಸಾಮರ್ಥ್ಯದ ಮಹಾಕವಿಯಾಗುವ ಸಾಧ್ಯತೆ ಪಡೆದಿದ್ದ ಪೇಜಾವರ ಸದಾಶಿವರಾವ್ ಅವರ ಪ್ರತಿಭೆಗೆ ಈ ಸಂಪಾದಿತ ಕೃತಿ `ಅಲರು~ ಸಾಕ್ಷಿಯಂತಿದೆ. ಹೊಸಗನ್ನಡ ಕಾವ್ಯಚರಿತ್ರೆಯಲ್ಲಿ `ಅಲರು~ ಸಂಕಲನಕ್ಕೆ ವಿಶಿಷ್ಟ ಸ್ಥಾನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.