ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೇಕೆ ಸಾಯುತ್ತೇವೆ...?: ನೊಬೆಲ್ ಪುರಸ್ಕೃತ ವೆಂಕಿ ರಾಮಕೃಷ್ಣರ ಕೃತಿಯಲ್ಲಿ ಉತ್ತರ

Published 2 ಏಪ್ರಿಲ್ 2024, 11:14 IST
Last Updated 2 ಏಪ್ರಿಲ್ 2024, 11:14 IST
ಅಕ್ಷರ ಗಾತ್ರ

ನವದೆಹಲಿ: ನಮಗೇಕೆ ವಯಸ್ಸಾಗುತ್ತದೆ...? ನಾವೇಕೆ ಸಾಯುತ್ತೇವೆ...? ಇದಕ್ಕೆ ಪರಿಹಾರ ಕಂಡುಕೊಳ್ಳಲು ಮಾರ್ಗೋಪಾಯ ಇದೆಯೇ...? ಎಂಬಿತ್ಯಾದಿ ಮೂಲ ಪ್ರಶ್ನೆಗಳಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಆಣ್ವಿಕ ಜೀವವಿಜ್ಞಾನಿ ವೆಂಕಿ ರಾಮಕೃಷ್ಣನ್ ಅವರು ತಮ್ಮ ಹೊಸ ಕೃತಿಯಲ್ಲಿ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ.

‘ವೈ ವಿ ಡೈ: ದ ನ್ಯೂ ಸೈನ್ಸ್‌ ಆಫ್ ಏಜಿಂಗ್‌ ಅಂಡ್‌ ದಿ ಕ್ವೆಸ್ಟ್ ಫಾರ್ ಇಮ್ಮಾರ್ಟಾಲಿಟಿ’ ಎಂಬ ಕೃತಿ ಬಿಡುಗಡೆಗೆ ಸಿದ್ಧವಾಗಿದ್ದು, ಈ ವಾರ ಮಾರುಕಟ್ಟೆಗೆ ಬರಲಿದೆ. 

ಹಾಷೆಟ್ ಇಂಡಿಯಾ ಪ್ರಕಾಶನ ಈ ಕೃತಿಯನ್ನು ಪರಿಚಯಿಸುತ್ತಿದೆ. ‘ಜೀವ ವಿಜ್ಞಾನ ಕ್ಷೇತ್ರದಲ್ಲಿನ ಆವಿಷ್ಕಾರಗಳ ಮೂಲಕ ನಾವು ಹೇಗೆ ಬದುಕುತ್ತಿದ್ದೇವೆ ಮತ್ತು ಮನುಷ್ಯರ ಜೀವಿತಾವಧಿ ವಿಸ್ತರಿಸಲು ಯಾವೆಲ್ಲ ಪ್ರಯತ್ನಗಳು ನಡೆದಿವೆ’ ಎಂಬ ಅಂಶಗಳು ಈ ಕೃತಿಯಲ್ಲಿವೆ  ಎಂದೆನ್ನಲಾಗಿದೆ.

‘ಅಮರತ್ವ ಎನ್ನುವುದು ಒಂದು ಈಡೇರದ ಭರವಸೆಯಾಗಿತ್ತು. ಅದು ಎಂದೂ ನಮ್ಮ ಹಿಡಿತದಲ್ಲಿ ಇರಲಿಲ್ಲ. ಇತ್ತೀಚಿನ ಕೆಲ ವೈದ್ಯಕೀಯ ಆವಿಷ್ಕಾರ ಹಾಗೂ ಆಧುನಿಕ ತಂತ್ರಜ್ಞಾನವನ್ನು ಆಧರಿಸಿ ಅದೇ ನಿಸರ್ಗದತ್ತವಾದ ದೇಹದಲ್ಲಿನ ಕೆಲ ಬದಲಾವಣೆಗಳು ಹೇಗೆ ಮನುಷ್ಯರ ಜೀವತಾವಧಿ ಹೆಚ್ಚಿಸಿವೆ ಎಂಬದರ ಕುರಿತು ವೆಂಕಿ ಅವರು ವಿವರಿಸಿದ್ದಾರೆ’ ಎಂದು ಪುಸ್ತಕದ ವಿವರಣೆಯಲ್ಲಿ ಹೇಳಲಾಗಿದೆ.

ಮನುಷ್ಯರಿಗೆ ಮುಪ್ಪು ಬಾರದಂತೆ ತಡೆಯುವ ನಿಟ್ಟಿನಲ್ಲಿ ಕಳೆದ ಒಂದು ದಶಕದಲ್ಲಿ ಮೂರು ಲಕ್ಷದಷ್ಟು ವೈಜ್ಞಾನಿಕ ಲೇಖನಗಳು ಪ್ರಕಟಗೊಂಡಿವೆ. ಸುಮಾರು 700ಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳು ಹಲವು ಶತಕೋಟಿ ರೂಪಾಯಿಗಳನ್ನು ಹೂಡಿವೆ. ಇಲಾನ್ ಮಸ್ಕ್‌, ಪೀಟರ್ ಥೀಲ್, ಲ್ಯಾರಿ ಪೇಜ್, ಸರ್ಗಿ ಬ್ರಿನ್, ಜೆಫ್ ಬೆಜೋಸ್ ಹಾಗೂ ಮಾರ್ಕ್ ಝೂಕರಬರ್ಗ್‌ ಸೇರಿದಂತೆ ಬಹಳಷ್ಟು ಸೆಲೆಬ್ರಿಟಿ ಬಿಲಿಯನರ್‌ಗಳು ಈ ಕ್ಷೇತ್ರದ ಕುರಿತು ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಜೈವಿಕ ಕ್ರಿಯೆಯ ಉದ್ದೇಶವನ್ನು ಸಾವು ಪೂರೈಸುತ್ತದೆಯೇ? ದೀರ್ಘಕಾಲ ಬದುಕುವ, ಆರೋಗ್ಯವಾಗಿರುವ ಹಾಗೂ ಸಂಪೂರ್ಣ ಬದುಕನ್ನು ಜೀವಿಸುವ ಅವಕಾಶವನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಪುಸ್ತಕ ಉತ್ತರ ಹುಡುಕುವ ಪ್ರಯತ್ನ ಮಾಡಿದೆ. ದೇಹದ ಅಣುಗಳು ಮತ್ತು ಜೀವಕೋಶಗಳಿಗೆ ದಿನಗಳು ಕಳೆದಂತೆ ಆಗುವ ರಾಸಾಯನಿಕ ಹಾನಿಯೇ ವಯಸ್ಸಾಗಲು ಮುಖ್ಯ ಕಾರಣ ಎಂದು ಕೃತಿಯಲ್ಲಿ ಹೇಳಲಾಗಿದೆ ಎಂದು ವರದಿಯಾಗಿದೆ.

‘ಒಂದು ಸಣ್ಣ ಸಮಸ್ಯೆಯೊಂದಿಗೆ ಪ್ರಾರಂಭವಾಗುವ ಜೀವಕೋಶ ಹಾನಿಯ ಲಕ್ಷಣಗಳು, ನಂತರ ಅದರ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತದೆ. ಮುಂದೆ ವೃದ್ಧಾಪ್ಯ ಕಾಯಿಲೆಯಾಗಿ ಗೋಚರಿಸುತ್ತದೆ. ಅಂತಿಮವಾಗಿ ದೇಹದ ವ್ಯವಸ್ಥೆಗಳ ವೈಫಲ್ಯಕ್ಕೆ ಕಾರಣವಾಗುತ್ತದೆ. ಕೊನೆಯದಾಗಿ ಜೀವಕೋಶಗಳ ಸಾವಿನೊಂದಿಗೆ ಬದುಕು ಅಂತ್ಯಗೊಳ್ಳುತ್ತದೆ’ ಎಂದು ವಿವರಿಸಲಾಗಿದೆ.

ಈ ಕೃತಿಯನ್ನು ವೈದ್ಯ ಸಾಹಿತಿ ಸಿದ್ಧಾರ್ಥ ಮುಖರ್ಜಿ ಹಾಗೂ ಇಂಗ್ಲಿಷ್‌ ನಟ ಸ್ಟೀಫನ್ ಫ್ರೈ ಅವರು ಓದಿ ಮೆಚ್ಚಿದ್ದಾರೆ. ಕೃತಿ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿರುವ ಪುಲಿಟ್ಜರ್ ಬಹುಮಾನ ವಿಜೇತ ಮುಖರ್ಜಿ ಅವರು, ‘ಪ್ರಾಮಾಣಿಕ, ಸ್ಪಷ್ಟ ಮತ್ತು ಆಕರ್ಷಕವಾಗಿದೆ. ಹಲವು ಹೊಸ ಅಂಶಗಳನ್ನು ಈ ಕೃತಿ ಬಹಿರಂಗಗೊಳಿಸಿದೆ. ಅದು ಓದುಗರನ್ನು ರೋಚಕತೆ ಜಾಡಿನಲ್ಲಿ ಕರೆದೊಯ್ಯುತ್ತದೆ’ ಎಂದಿದ್ದಾರೆ.

72 ವರ್ಷದ ವೆಂಕಿ ರಾಮಕೃಷ್ಣನ್ ಅವರು 2009ರಲ್ಲಿ ರಸಾಯನ ವಿಜ್ಞಾನ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದರು. ಬ್ರಿಟನ್‌ನ ಕೇಮ್‌ಬ್ರಿಡ್ಜ್‌ ಆಣ್ವಿಕ ಜೀವವಿಜ್ಞಾನದ ಎಂಆರ್‌ಸಿ ಪ್ರಯೋಗಾಲಯದಲ್ಲಿ ಇವರು ನಡೆಸಿದ ರೈಬೋಸೋಮ್‌ನ ರಚನೆ ಕುರಿತ ಸಂಶೋಧನೆಗೆ ಈ ಪ್ರಶಸ್ತಿ ಲಭಿಸಿತ್ತು.

₹669 ಮುಖಬೆಲೆಯ ಈ ಕೃತಿಯನ್ನು ಆನ್‌ಲೈನ್ ಮೂಲಕ ತರಿಸಿಕೊಳ್ಳಬಹುದು ಎಂದು ಪಿಟಿಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT