ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಥಕ್‌ ಲೋಕದ ಹೊಸ ಮಿಂಚು ಮೀನಾಕ್ಷಿ ಜೆ. ಕಾಮತ್

Last Updated 22 ಅಕ್ಟೋಬರ್ 2022, 5:11 IST
ಅಕ್ಷರ ಗಾತ್ರ

ಓದಿದ್ದು ಮಾರ್ಕೆಟಿಂಗ್ ಅಂಡ್ ಕಮ್ಯುನಿಕೇಷನ್. ವೃತ್ತಿ ಡ್ರೋನ್ ಉತ್ಪಾದನೆ ಸಂಸ್ಥೆಯಲ್ಲಿ ವ್ಯವಸ್ಥಾಪಕ ನಿರ್ದೇಶಕಿ. ಆದರೆ, ಚಿತ್ತ ಮಾತ್ರ ಸದಾ ಕಥಕ್‌ನತ್ತ. ಇದು ನಗರದ ಯುವ ಕಥಕ್ ಕಲಾವಿದೆ ಮೀನಾಕ್ಷಿ ಜೆ. ಕಾಮತ್ ಅವರ ಸಂಕ್ಷಿಪ್ತ ಪರಿಚಯ.

ಅಪ್ಪ ಖ್ಯಾತ ವಕೀಲ ಕೆ.ಜೆ. ಕಾಮತ್, ಅಮ್ಮ ವೀಣಾ ವಾದಕಿ ಶ್ರೀದೇವಿ ಕಾಮತ್ ಅವರ ಮಾರ್ಗದರ್ಶನದಲ್ಲಿ ಬಾಲ್ಯದಲ್ಲೇ ಕಲಾ ಪ್ರಪಂಚದ ಆಗುಹೋಗುಗಳನ್ನು ನೋಡುತ್ತಿದ್ದ ಮೀನಾಕ್ಷಿ ಅವರಿಗೆ ಮುಂದೊಂದು ದಿನ ವೃತ್ತಿಯ ಭಾಗವಾಗಿಯೇ ಕಥಕ್‌ ನೃತ್ಯ ಕಲಿಯುವ ಕಲ್ಪನೆ ಇರಲಿಲ್ಲ. ಸ್ನಾತಕೋತ್ತರ ಪದವಿ ವೇಳೆಗೆ ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್‌ನಲ್ಲಿ ಸಂವಹನದ ಅಗತ್ಯ ಮನಗಂಡ ಅವರು ತಮ್ಮ ಯೋಜನೆಗಳ ಪರಿಕಲ್ಪನೆಗಳನ್ನು ಸಾಕಾರಗೊಳಿಸಲು ಆಯ್ಕೆ ಮಾಡಿಕೊಂಡಿದ್ದು ಕಥಕ್ ನೃತ್ಯಪ್ರಕಾರವನ್ನು.

ಅಮ್ಮ ಮತ್ತು ಅಕ್ಕ ವೀಣಾವಾದಕರಾಗಿದ್ದರೆ, ಮತ್ತೊಬ್ಬ ಅಕ್ಕ ಭರತನಾಟ್ಯ ಕಲಾವಿದೆ. ಅವರನ್ನು ನೋಡುತ್ತಲೇ ಕಲೆಯ ಬಗ್ಗೆ ಮೋಹ ಬೆಳೆಸಿಕೊಂಡ ಮೀನಾಕ್ಷಿ ಉತ್ತಮ ಕೊಳಲು ವಾದಕಿಯೂ ಹೌದು. ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ ಅಮ್ಮ ಮತ್ತು ಅಕ್ಕನನ್ನು ಕರೆಸಿಕೊಂಡು ವೀಣಾ ವಾದನವನ್ನು ಆಸ್ವಾದಿಸಿದ್ದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಅವರು ಒಂಬತ್ತು ವರ್ಷಗಳಿಂದ ಕಥಕ್‌ ನೃತ್ಯಾಭಾಸದಲ್ಲಿ ತೊಡಗಿಕೊಂಡಿದ್ದಾರೆ.

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಹಂತದಲ್ಲೇ ಪಠ್ಯೇತರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ಅವರು ಆರಂಭದ ದಿನಗಳಲ್ಲಿ ಖ್ಯಾತ ಕಥಕ್ ನೃತ್ಯಗಾರ್ತಿ ಮಾಯಾ ರಾವ್ ಅವರ ಬಳಿ ಕಥಕ್ ಕಲಿತರು. ಬಳಿಕ ನಂದಿನಿ ಕೆ. ಮೆಹ್ತಾ ಮತ್ತು ಕೆ. ಮುರಳಿ ಮೋಹನ್ ಅವರ ಬಳಿ ನೃತ್ಯಾಭ್ಯಾಸ ಮುಂದು ವರಿಸಿದರು. ಉನ್ನತ ಶಿಕ್ಷಣ ಕ್ಕಾಗಿ ಬ್ರಿಟನ್‌ನ ಆಕ್ಸ್‌ ಫರ್ಡ್‌ ಬ್ರೂಕ್ಸ್ ವಿಶ್ವವಿದ್ಯಾಲಯಕ್ಕೆ ತೆರಳಿದಾಗಲೂ ಕಥಕ್ ಬಗೆಗಿನ ಮೋಹ ಬಿಟ್ಟವರಲ್ಲ. ಅಲ್ಲಿನ ಹ್ಯಾರೊ ನಗರದಲ್ಲಿ ಸುಜಾತಾ ಬ್ಯಾನರ್ಜಿ ಅವರ ಬಳಿ ನೃತ್ಯಾಭ್ಯಾಸ ಮುಂದುವರಿಸಿದರು.

‘ನೃತ್ಯ ಎಂಬುದು ನಿತ್ಯ ಕಲಿಕೆಯ ಪ್ರಕ್ರಿಯೆ’ ಎಂದು ವಿನಮ್ರವಾಗಿ ನುಡಿಯುವ ಮೀನಾಕ್ಷಿ, ರಂಗಪ್ರವೇಶ ಮಾಡಿದ್ದೂ ವಿಶೇಷ ಸಂದರ್ಭದಲ್ಲಿ. 2022ರ ಮಾರ್ಚ್ 23ರಂದು ತಾತಾ ದಿ. ಮಾಧವ್ ಕಾಮತ್ ಅವರ ಜನ್ಮದಿನದ ಪ್ರಯುಕ್ತ ರಂಗ ಪ್ರವೇಶ ಮಾಡಿದರು. ಅದಕ್ಕಾಗಿ ಅಲ್ಪಾವಧಿಯಲ್ಲೇ ಸತತ ಅಭ್ಯಾಸ ಮಾಡಿ, ಸುಮಾರು ಒಂದು ಸಾವಿರ ಪ್ರೇಕ್ಷಕರ ಮುಂದೆ ‘ತ್ರಿಕಾಲ’ ಪರಿಕಲ್ಪನೆಯ ನೃತ್ಯ ಪ್ರಸ್ತುತಪಡಿಸಿ ಶಹಬ್ಬಾಸ್ ಗಿರಿ ಪಡೆದುಕೊಂಡರು. ತಮ್ಮ ನೃತ್ಯಕ್ಕೆ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಆಶೀರ್ವಾದ ದೊರೆತ ಬಗ್ಗೆ ಸಂತಸ ವ್ಯಕ್ತಪಡಿಸುವ ಮೀನಾಕ್ಷಿ ಇದೆಲ್ಲಾ ಸಾಧ್ಯವಾದದ್ದು ಅಪ್ಪ–ಅಮ್ಮನಿಂದಾಗಿ ಎನ್ನುತ್ತಾರೆ.

ದಕ್ಷಿಣ ಭಾರತದ ವಿವಿಧ ಐತಿಹಾಸಿಕ ದೇವಾಲಯಗಳಲ್ಲಿ ಮತ್ತು ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರಸ್ತುತಪಡಿಸಿರುವ ಮೀನಾಕ್ಷಿ, ಯಾವುದೇ ಭಾರತೀಯ ನೃತ್ಯಪ್ರಕಾರ ಕಲಿಯಲು ತಾಳ್ಮೆ ಅಗತ್ಯ. ಇಂದು ದಿಢೀರ್ ಅಂತ ಕಲಿತು ನಾಳೆಯೇ ಪ್ರದರ್ಶನ ನೀಡಲಾಗದು ಎನ್ನುತ್ತಾರೆ. ನಮ್ಮ ಸಾಂಸ್ಕೃತಿಕ ಪರಂಪರೆ, ಮೌಲ್ಯಗಳನ್ನು ಸಂರಕ್ಷಿಸಬೇಕಾದದ್ದು ಅಗತ್ಯ ಎನ್ನುವ ಅವರು, ಆ ಹಿನ್ನೆಲೆಯಲ್ಲಿ ಆಕ್ಸ್‌ಫರ್ಡ್ ವಿ.ವಿಯ ಸ್ನಾತಕೋತ್ತರ ಪದವಿಯಲ್ಲಿ ‘ಆಧ್ಯಾತ್ಮಿಕ ಪ್ರವಾಸೋದ್ಯಮ’ ಕುರಿತು ಪ್ರಬಂಧ ಸಲ್ಲಿಸಿದ್ದಾರೆ.

‘ಅಮ್ಮ ಒಳಜಗತ್ತು ಪರಿಚಯಿಸಿದರೆ, ಅಪ್ಪ ಹೊರ ಜಗತ್ತು ಪರಿಚಯಿಸಿದರು. ಜಾತಿ– ಧರ್ಮ– ಪಂಥಗಳಾಚೆ ನಾವೆಲ್ಲ ಒಂದೇ ಎಂಬುದನ್ನು ಮನದಟ್ಟು ಮಾಡಿಸಿದರು. ಕ್ರಿಸ್ಮಸ್ ವೇಳೆ ಒಮ್ಮೆ ವ್ಯಾಟಿಕನ್‌ಗೆ ಹೋಗುವ ಅವಕಾಶ ಸಿಕ್ಕಿತ್ತು. ಅಲ್ಲಿಗೆ ಹೋಗುವ ಮುನ್ನ ಅಪ್ಪ ಅಲ್ಲಿನ ಪೋಪ್‌ ಅವರಿಗೆ ಪತ್ರ ಬರೆದಿದ್ದರು. ಅದಕ್ಕೆ ಪ್ರತಿಯಾಗಿ ಪೋಪ್ ಅವರಿಂದ ನಮಗೆ ಆಹ್ವಾನ ಸಿಕ್ಕಾಗ ಆನಂದಕ್ಕೆ ಪಾರವೇ ಇರಲಿಲ್ಲ. ರಾಮ, ಕೃಷ್ಣ, ಏಸು, ಅಲ್ಲಾ ಎಲ್ಲರೂ ಒಂದೇ ಎಂಬುದನ್ನು ಅಪ್ಪ ಸೂಕ್ಷ್ಮವಾಗಿ ಮನದಟ್ಟು ಮಾಡಿಸಿದ್ದರು. ಬಾಲ್ಯದಲ್ಲೇ ಮನೆಗೆ ಬರುತ್ತಿದ್ದ ಖ್ಯಾತ ಕಲಾವಿದರ ಒಡನಾಟ ನಮಗೆಂದೂ ವಿಶೇಷ ಅನಿಸಲಿಲ್ಲ. ಅದೊಂದು ಸಹಜವೆಂಬಂತೆ ಬೆಳೆಸಿದ್ದರು.ಅಪ್ಪನ ಕಚೇರಿಗೆ ಒಮ್ಮೆ ಖ್ಯಾತಕಲಾವಿದ ಎಂ.ಎಫ್. ಹುಸೇನ್ ಬಂದಿದ್ದರು. ಆಗ ಕಚೇರಿಯಲ್ಲಿದ್ದ ಪುಸ್ತಕವೊಂದರಲ್ಲಿ ಅನೇಕ ಸ್ಕೆಚ್‌ಗಳನ್ನು ಮಾಡಿದ್ದರು. ಅದನ್ನು ಬೆರಗುಗಣ್ಣಿನಿಂದ ನೋಡಿದ್ದ ನನಗೆ ಸರಳತೆ ಎಂದರೆ ಹೀಗಿರಬೇಕು ಎಂದೆನಿಸಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

ಉಡುಪಿಯ ನೀಲಾವರದಲ್ಲಿನ ಗೋಶಾಲೆಯಲ್ಲಿನ ವಾತಾವರಣದ ಹಿನ್ನೆಲೆಯಲ್ಲಿ ನೃತ್ಯರೂಪಕದ ಸಿದ್ಧತೆಯಲ್ಲಿರುವ ಮೀನಾಕ್ಷಿ, ಎರಡು ಬಾರಿ ವಿಶ್ವಪರ್ಯಟನೆಯನ್ನೂ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವೃತ್ತಿಯ ಜತೆಗೆ ಕಥಕ್‌ನಲ್ಲಿ ಹೊಸ ಸಾಧ್ಯತೆಗಳನ್ನು ಪ್ರಯೋಗಿಸಬೇಕೆಂಬ ಹಂಬಲ ಮೀನಾಕ್ಷಿ ಕಾಮತ್ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT