ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸೂರೆಗೊಂಡ ಚೆಂಡೆ, ಮೃದಂಗ ವಾದನ

ಹುಬ್ಬಳ್ಳಿ ‘ರಂಗ ಮಿತ್ರರು’ ಸಂಸ್ಥೆ ದಶಮಾನೋತ್ಸವ ಸಂಭ್ರಮ
Last Updated 4 ನವೆಂಬರ್ 2019, 10:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಂಗ ಮಿತ್ರರು’ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ‘ವಾಣಿಜ್ಯ ನಗರಿ’ ಹುಬ್ಬಳ್ಳಿಯಲ್ಲಿ ಭಾನುವಾರ ಪ್ರಥಮ ಬಾರಿಗೆ ನಡೆದ ಚೆಂಡೆ, ಮೃದಂಗ ವಾದನ, ಭಾಗವತರ ಗಾಯನ ಯಕ್ಷಗಾನ ಪ್ರಿಯರ ಮನಸೂರೆಗೊಂಡಿತು.

ತೆಂಕು ಮತ್ತು ಬಡಗು ತಿಟ್ಟಿನ ಕಲಾ ಸಂಘಟಕರಿಗೆ, ಹಿರಿಯ ಯಕ್ಷ ಸಾಹಿತಿಗಳಿಗೆ ಹಾಗೂ ಕಲಾವಿದರಿಗೆ ಗೌರವ ಸನ್ಮಾನ ಮತ್ತು ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ದಿನಪೂರ್ತಿ ನಡೆದ ಭಿನ್ನವಿಭಿನ್ನವಾದ ಯಕ್ಷಗಾನ ಪ್ರದರ್ಶನಗಳು ‘ರಂಗ ಮಿತ್ರರು’ ದಶಮಾನೋತ್ಸವವನ್ನು ರಮಣೀಯ ಮತ್ತು ಸ್ಮರಣೀಯಗೊಳಿಸಿತು.

ಯಕ್ಷಗೀತಾ ನೃತ್ಯ, ‘ಭಾರತ ರತ್ನ’ ಯಕ್ಷ ರೂಪಕ, ‘ಗದಾಯುದ್ಧ’ ಯಕ್ಷ ಹಾಸ್ಯ, ಯಕ್ಷ ಶೃಂಗಾರ, ‘ದ್ರೌಪದಿ ಪ್ರತಾಪ’ ಯಕ್ಷಗಾನ, ದೊಂದಿ ಬೆಳಕಿನಲ್ಲಿ ಪ್ರದರ್ಶನಗೊಂಡ ಯಕ್ಷ ಪರಂಪರಾ ಸಂಭ್ರಮ ನೋಡಲು ಸಾವಿರಾರು ಜನ ನೆರೆದಿದ್ದರು. ಕರಾವಳಿ ಶೈಲಿಯ ಫಲಹಾರ, ಭೋಜನದ ಸವಿಯೂ ಜೋರಾಗಿತ್ತು.

ಚೆಂಡೆ ಬಾರಿಸಿ ಚಾಲನೆ:

ಚೆಂಡೆ ಬಾರಿಸುವ ಮೂಲಕ ‘ರಂಗ ಮಿತ್ರರು’ ಸಂಸ್ಥೆಯ ದಶಮಾನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಸಂಸ್ಥಾಪಕ ಸತೀಶ ಶೆಟ್ಟಿ, ಕರಾವಳಿ ಕರ್ನಾಟಕದ ಶ್ರೇಷ್ಠ ಕಲೆಯಾದ ಯಕ್ಷಗಾನ ಕಲಾವಿದರಿಗೆ ಇಂದು ಪ್ರೋತ್ಸಾಹ ಅಗತ್ಯವಾಗಿದೆ ಎಂದು ಹೇಳಿದರು.

‘ಯಕ್ಷಧ್ರುವ ಪಟ್ಲ ಫೌಂಡೇಷನ್‌ ಇದುವರೆಗೆ ₹ 5 ಕೋಟಿಗೂ ಅಧಿಕ ಹಣವನ್ನು ದಾನಿಗಳಿಂದ ಸಂಗ್ರಹಿಸಿ, ಬಡ ಕಲಾವಿದರಿಗೆ ಸಹಕಾರ ಮಾಡುವ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

‘ದಶಾಂತರಂಗ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಧಾರವಾಡ ಜೆ.ಎಸ್‌.ಎಸ್‌. ವಿತ್ತ ಅಧಿಕಾರಿ ಡಾ.ಅಜಿತ್‌ ಪ್ರಸಾದ್‌, ಪುಸ್ತಕವು ಸಂಗ್ರಹಯೋಗ್ಯವಾಗಿದೆ ಎಂದರು.

ಉದ್ಯಮಿಗಳಾದ ಸುಗ್ಗಿ ಸುಧಾಕರ ಶೆಟ್ಟಿ, ದಿವಾಣ ಗೋವಿಂದ ಭಟ್‌, ಯು.ಬಿ.ಶೆಟ್ಟಿ, ಆರ್‌.ಜಿ.ಭಟ್‌, ಹುಬ್ಬಳ್ಳಿ–ಧಾರವಾಡ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಆನಂದ ಪೂಜಾರಿ, ಹುಬ್ಬಳ್ಳಿ–ಧಾರವಾಡ ನಾಮಧಾರಿ ಸಮಾಜ ಹಿತವರ್ಧಕ ಸಂಘದ ಅಧ್ಯಕ್ಷ ತಿಮ್ಮಪ್ಪ ಡಿ.ನಾಯ್ಕ್‌, ಸ್ವರ್ಣ ಜ್ಯುವೆಲ್ಲರ್ಸ್‌ ಮಾಲೀಕ ಗೋಪಾಲಕೃಷ್ಣ ನಾಯಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT