ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವಾಗ ಬಂದೀತು ‘ಯಾಂಬು’ ಕುಣಿತ?

Published 26 ಆಗಸ್ಟ್ 2023, 23:30 IST
Last Updated 26 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಕೃತಕ ಬುದ್ಧಿಮತ್ತೆ ಬಳಸಿ ಶಾಸ್ತ್ರೀಯ ನೃತ್ಯ ಆಡಿಸಿದರೆ ಪರಿಣಾಮ ಏನೆಲ್ಲ ಆಗಬಹುದು ಎನ್ನುವುದನ್ನು ನೃತ್ಯಗಾರ್ತಿಯೂ ಆದ ಲೇಖಕಿಯು ಲಹರಿಯ ರೂಪದಲ್ಲಿ ಇಲ್ಲಿ ಬರೆದಿದ್ದಾರೆ.

**

ಏರ್‌ಪೋರ್ಟ್‌ನಲ್ಲಿ ವಿಮಾನ ಹತ್ತಲು ಸೆಕ್ಯೂರಿಟಿ ಚೆಕ್‌ಗಾಗಿ ಕ್ಯೂನಲ್ಲಿ ನಿಂತಿದ್ದೆ. ಮನುಷ್ಯರು ಪಾಸ್‌ಪೋರ್ಟ್-ಬೋರ್ಡಿಂಗ್ ಪಾಸ್ ಚೆಕ್ ಮಾಡುವ ಬದಲಿಗೆ, ಅಲ್ಲೊಂದು ತೆರೆ. ಆ ತೆರೆಯ ಮೇಲೊಬ್ಬಳು ಸುಂದರಿ, ಆಕೆ ನಮಸ್ಕಾರ ಮಾಡಿ, ಪ್ರತಿಯೊಬ್ಬರಿಗೂ ಹಲೋ ಹೇಳಿ, ಕೈಯ್ಯಲ್ಲೇ, ಎಲ್ಲಿ ನಮ್ಮ ದಾಖಲೆ ಸ್ಕ್ಯಾನ್ ಮಾಡಬೇಕು ಎಂದು ತೋರಿಸಿ, ನಾವು ಹಾಗೆ ಮಾಡಿದ ನಂತರ, ‘ಟಾಟಾ’ ಎಂದು ಕೈಯ್ಯಾಡಿಸಿ ಮುಂದೆ ಹೋಗಲು ಬಿಡುತ್ತಿದ್ದಳು. ನನಗೆ ಭಾಷೆಯಿಲ್ಲದೆ ಹಾವ-ಭಾವದ ಮೂಲಕವೇ ಎಲ್ಲವನ್ನೂ ನಮಗೆ ತಲುಪಿಸುತ್ತಿದ್ದ ತೆರೆಯ ಮೇಲಿನ ಈ ಗೊಂಬೆ ಒಂದು ನೃತ್ಯದ ಚಲನೆಯನ್ನೇ ಮಾಡುತ್ತಿದ್ದಾಳೆ ಅನಿಸಿಬಿಟ್ಟಿತು. ಸೆಕ್ಯೂರಿಟಿ ಚೆಕ್ ಮುಗಿಸಿ ಒಳಹೋಗಿ ಮೊಬೈಲ್ ತೆರೆದರೆ ವಾಟ್ಸ್ ಆ್ಯಪ್‌ನಲ್ಲೊಂದು ಚಿಕ್ಕ ವಿಡಿಯೊ ತುಣುಕು ಹರಿದಾಡುತ್ತಿತ್ತು. ಯಾವ ವಿಡಿಯೊ ತುಣುಕು? ಚೀನಾದ ಡಿಸ್ನಿಲ್ಯಾಂಡ್‌ನಲ್ಲಿ ಎರಡು ಗೊಂಬೆಗಳು ಮಾಡಿದ ಶಾಸ್ತ್ರೀಯ ನೃತ್ಯ. ಇವು ‘ಯಾಂಬು ಗೊಂಬೆ’ಗಳು. ‘ಯಾಂಬು’ ಅಂದರೆ ಆದಿವಾಸಿ ಗೊಂಬೆಯಾಟವೋ ಅಥವಾ ಯಾವುದೋ ಜನಪದ ನೃತ್ಯವೋ ಅಂತ ನೀವಂದುಕೊಂಡರೆ ಅದು ಪೂರ್ತಿ ತಪ್ಪು! ‘ಯಾಂಬು’ ಅಂದರೆ ‘ಯಾಂತ್ರಿಕ ಬುದ್ಧಿಮತ್ತೆ’- ಆರ್ಟಿಫಿಷಿಯಲ್ ಇಂಟೆಲಿಜೆನ್ಸ್. ‘ಯಾಂಬು’ ಬಗ್ಗೆ ಅಸಹನೆಯಿಂದ ಹಿರಿಯ ತಲೆಗಳು ‘‘ಅವರಿಬ್ಬರು ‘ಯಾಂಬು’ ನರ್ತಕಿಯರಾಗಿರಲು ಸಾಧ್ಯವೇ ಇಲ್ಲ’’ ಎಂದು ವಾಟ್ಸ್ ಆ್ಯಪ್‌ನಲ್ಲಿ ಗಲಾಟೆ ಮಾಡಲಾರಂಭಿಸಿದರು! ಬಿಡದೆ ಕೆದಕಿ ಅದು ‘ಫೇಕ್’ ಮಾಹಿತಿಯೇ ಎಂದು ಖಚಿತಪಡಿಸಿದರು. ಆದರೆ ‘ಯಾಂಬು ಕುಣಿತ’, ಚ್ಯಾಟ್‌ ಜಿಪಿಟಿ ಕಥೆ-ಕವನ-ಕಾದಂಬರಿ ಬರೆಯುತ್ತಿರುವ, ‘ಅಲೆಕ್ಸಾ’ ನಮ್ಮ ಮಕ್ಕಳೊಡನೆ ಮಾತಾಡುತ್ತ ಸ್ನೇಹ ಬೆಳೆಸಿರುವ ಈ ದಿನಗಳಲ್ಲಿ ಅಸಾಧ್ಯ ಎಂದು ತಳ್ಳಿ ಹಾಕುವಂತಿಲ್ಲ!

‘ಯಾಂಬು’ ವನ್ನು ಕೃತಕ ಬುದ್ಧಿಮತ್ತೆ ಎಂದು ಕರೆಯುವುದು, ಅಪಾರ ಸಾಧ್ಯತೆಗಳ, ಆಧುನಿಕ ಮಿತ್ರನೇ ಆಗಿರುವ ಕಂಪ್ಯೂಟರ್‌ಗೂ (ಅಥವಾ ಅಂತಹ ಎಲ್ಲ ಸಾಧನಗಳಿಗೂ), ಅದನ್ನು ರೂಪಿಸಿರುವ ಮಾನವ ಬುದ್ಧಿಮತ್ತೆಗೂ ಅಪಮಾನ ಎಂದು ನಾನು ಭಾವಿಸುತ್ತೇನೆ. ‘ಯಾಂತ್ರಿಕ ಬುದ್ಧಿಮತ್ತೆ’ ಎನ್ನುವುದು ಯಂತ್ರದ ಬುದ್ಧಿಮತ್ತೆ ಎನ್ನುವುದನ್ನು ಸೂಚಿಸಲೂ, ‘ಯಾಂಬು’ ಅಂತ ‘ಕ್ಯೂಟ್‌’ ಆಗಿದೆ ಎಂಬ ಕಾರಣಕ್ಕೂ ‘ಎಐ’ ಅನ್ನು ನಾವು ‘ಯಾಂಬು’ ಎಂದೇ ಕರೆಯೋಣ.

ನೃತ್ಯ ಜಗತ್ತಿನಲ್ಲಿ ‘ಯಾಂಬು’ ಪ್ರವೇಶಿಸಿ ಕೆಲ ವರ್ಷಗಳೇ ಆಗಿವೆ. ಒಂದು ಚಲನೆಯನ್ನು ಗ್ರಹಿಸಿ ಅದನ್ನು ‘ನೊಟೇಟ್’ ಮಾಡುವುದು, ಚಲನೆಗಳನ್ನು ಸರಣಿಯಾಗಿ ಜೋಡಿಸಿ ಒಂದು ನೃತ್ಯ ಬಂಧವನ್ನು ಸೃಷ್ಟಿಸುವುದು, ಕಲಾವಿದೆಯೊಬ್ಬಳ ಶೈಲಿಯನ್ನು ಕರಾರುವಾಕ್ಕಾಗಿ ಹಿಡಿದಿಡುವುದು, ಕಲಾವಿದೆಯ ಮರಣಾನಂತರವೂ ಆಕೆಯ ನೃತ್ಯವನ್ನು ಜೀವಂತವಾಗಿಡುವುದಷ್ಟೇ ಅಲ್ಲ, ಅದನ್ನು ಇತರರು ಕಲಿಯಲೂ ಕಾಪಿಡುವುದು-ಇವು ‘ಯಾಂಬು’ ಈಗಾಗಲೇ ನೃತ್ಯ ಜಗತ್ತಿನಲ್ಲಿ ಮಾಡುತ್ತಿರುವ ಕೆಲಸಗಳು. ‘ಹ್ಯೂಮನಾಯ್ಡ್’- ಮಾನವರಂತಹ ಆದರೆ ಮಾನವರಲ್ಲದ ‘ಯಾಂಬು’ ಗೊಂಬೆಗಳೊಡನೆ ಪ್ರಾಕ್ಟೀಸ್ ಮಾಡುವುದು, ಪ್ರಸಿದ್ಧ ಪಾಪ್ ನೃತ್ಯಗಳನ್ನು ಯಥಾವತ್ತಾಗಿ ಯಾಂಬು ಗೊಂಬೆಗಳು ಅನುಕರಿಸಿ, ಕಲಿಯಬೇಕೆಂಬ ಆಸೆಯಿರುವ ಇತರರಿಗೆ ‘ಮಾಡೆಲ್’ ಆಗುವ ಪ್ರಯೋಗಗಳೂ ಈಗಾಗಲೇ ನಡೆಯುತ್ತಿವೆ. ಸದ್ಯದಲ್ಲೇ ಯಾಂಬು ಕೊರಿಯಾಗ್ರಫರ್ ನೃತ್ಯ ಸಂಯೋಜನೆಗಳು ವೇದಿಕೆಯ ಮೇಲೆ ಕಲಾವಿದರಿಗೆ ಸಹಕರಿಸಲಿವೆ.

ಯಾಂಬು ಚೆಸ್ ಆಡಬಹುದು ಎಂದರೆ, ಯಾಂಬು ಸರ್ಜರಿ ಮಾಡಬಹುದಾದರೆ, ಹಾಡನ್ನೇ ಅದು ಬರೆಯಬಹುದು ಎಂದು ಅದು ತೋರಿಸಬಹುದಾದರೆ, ಶಾಸ್ತ್ರೀಯ ನೃತ್ಯವನ್ನೂ ಅದು ಮಾಡಬಹುದಲ್ಲ? ನೃತ್ಯವನ್ನು ಮಾಡಬಹುದು, ಆದರೆ ಶಾಸ್ತ್ರೀಯ?! ಸಹಜವಾಗಿ ಭರತನಾಟ್ಯದಂತಹ ಶಾಸ್ತ್ರೀಯ ನೃತ್ಯಕ್ಕೆ ತಳಹದಿ ಗಟ್ಟಿಯಾಗಿದೆ. ಕಂಪ್ಯೂಟರ್‌ಗೆ ಸುಲಭವಾಗಿ ಫೀಡ್ ಮಾಡಬಲ್ಲ ಸಂಸ್ಕೃತ ಭಾಷೆಯಲ್ಲಿ ಸೂತ್ರಗಳಿವೆ. ಒಂದು ‘ಜತಿ’ಯನ್ನು, ತಿಲ್ಲಾನವನ್ನು ‘ಕಂಪೋಸ್’ ಮಾಡಲು ಯಾಂಬುವಿಗೆ ಚಿಟಿಕೆ ಹೊಡೆದಷ್ಟು ಅಥವಾ ತೆರೆಯನ್ನು ಒಮ್ಮೆ ‘ರಿಫ್ರೆಷ್’ ಮಾಡಿದಷ್ಟೇ ಇದು ಸುಲಭವಾಗಬೇಕು. ನೃತ್ಯ ತರಗತಿಗಳಲ್ಲಿ ಕಂಪ್ಯೂಟರ್ ಅವಿಭಾಜ್ಯ ಅಂಗ ಅಥವಾ ಅದೇ ಮುಖ್ಯ ಗುರು ಎಂಬ ಕಾಲ ಇನ್ನೇನು ಸನ್ನಿಹಿತ!

ಕಲಾವಿದೆಯಾಗಿ ನನ್ನಲ್ಲಿ ಇದು ಮಿಶ್ರ ಭಾವಗಳನ್ನು ಹುಟ್ಟಿಸುತ್ತದೆ. ಮಾನವನ ಬುದ್ಧಿಶಕ್ತಿ ನಿರಂತರವಾಗಿ ಬೆಳೆಯುವಂತಹದು; ಮಿದುಳಿನ ಸೃಷ್ಟಿಶೀಲತೆಗೆ ಮಿತಿಯೇ ಇಲ್ಲ. ‘ಯಾಂಬು’ ಈ ಸೃಷ್ಟಿಶೀಲತೆಗೆ ಇನ್ನಷ್ಟು ಬೆಂಬಲವೂ ಆಗಬಹುದು. ‘ಗುರು’ವಿಗೊಂದು ಸಮರ್ಥ ಸಹಾಯಕನೂ/ ಸಹಾಯಕಿಯೂ, ಅಥವಾ ‘ಸಹಾಯಕ್’ (ಮಗುವಿನ ಹಾಗೆ?!) ಆಗಬಹುದು.

ಶಾಸ್ತ್ರೀಯ ನೃತ್ಯದೊಳಗೆ ನಾವು ಬಹುವಾಗಿ ಕಾಣುವ ಗುರು-ಶಿಷ್ಯ ಸಂಬಂಧದಲ್ಲಿ ‘ಯಾಂಬು’ ಯಾವ ಕಡೆ ನಿಲ್ಲಬಹುದು?! ಹೇಗೆ ಈ ಸಂಬಂಧವನ್ನು ವರ್ಧಿಸಬಹುದು/ಹದಗೆಡಿಸಬಹುದು? ದೇಹ-ಮನಸ್ಸು-ಆತ್ಮಗಳ ಸಮಾಗಮ ಎಂದು ನೃತ್ಯವನ್ನು ಶಿಷ್ಯನಿಗೆ ಹೇಳಿಕೊಡುವ ಗುರು ದೇಹ-ಮನಸ್ಸು-ಆತ್ಮ-ಯಾಂಬುಗಳನ್ನೂ ಬೆಸೆಯಬೇಕಾಗಬಹುದೆ? ಮುಂದೊಂದು ದಿನ ‘ಯಾಂಬು’ಗಳದ್ದೇ ಜಗತ್ತಿನಲ್ಲಿ ಮಾನವ ಪ್ರೇಕ್ಷಕರ ಜೊತೆ ‘ಯಾಂಬು’ ಪ್ರೇಕ್ಷಕನೂ ಕುಳಿತಿರುವಂತಾದೀತೆ?

ನೃತ್ಯ-ಕೈಕಾಲು ಚಲನೆಗಳು, ರೇಖಾ ಗಣಿತ-ಗಣಿತದ ಲೆಕ್ಕಾಚಾರಗಳ ಚಲನೆ-ತಾಳಗಳು ಇವೆಲ್ಲವನ್ನೂ ಮಾನವನ ಕಲ್ಪನೆಗೂ ಮೀರುವಂತೆ, ಕ್ಷಣಗಳಲ್ಲಿ ಅನುಸರಿಸುವುದು-ಅನುಕರಿಸುವುದು-ಸೃಷ್ಟಿಸುವುದು ‘ಯಾಂಬು’ಗೆ ಸಾಧ್ಯ. ಆದರೆ ಅಭಿನಯ, ಭಾವ-ರಸಗಳು? ‘ಯಾಂಬು’ ಹೇಗೆ ಸೃಷ್ಟಿಸುವ ಪ್ರಯತ್ನ ಮಾಡಬಹುದು ಅಥವಾ ಯಾಂಬು ಗೊಂಬೆಗಳು ಅಭಿನಯದಲ್ಲಿ ಒಂದು ದೇವರ ನಾಮವನ್ನು ಹೇಗೆ ಮಾಡಿ ತೋರಿಸಬಹುದು? ನಾನು ಕುತೂಹಲದಿಂದ ಕೊಂಚ ಬೆರಗು-ಒಂಥರಾ ವಿಷಾದದಿಂದ ಕಾದಿದ್ದೇನೆ! ಗುರು-ಶಿಷ್ಯರ ಮಧ್ಯೆ ಹಲವು ಇರುವ ಭಾವಗಳ ಮಿಶ್ರಣ- ಒಂದು ಅದ್ಭುತ ಚಲನೆಯನ್ನು ವೇದಿಕೆಯ ಮೇಲೆ ನೋಡಿದಾಗ ಉಂಟಾಗುವ ಉದ್ವೇಗ ಇವು ‘ಯಾಂಬು’ವಿನಿಂದಾಗಿ ಹೇಗೆ ಬದಲಾಗಬಹುದು? ಒಟ್ಟಿನಲ್ಲಿ ಅಭಿನಯ-ರಸಗಳನ್ನು ಯಾಂಬುವಿಗೆ ‘ಫೀಡ್’ ಮಾಡಿದರೂ, ಅಂದರೆ ಉಣಿಸಿದರೂ, ಅದು ಸ್ವಲ್ಪ ಹೊತ್ತು ಅಗಿದು, ಆ ಮೇಲೆಯೇ ಹೊರಹಾಕಬೇಕು! ಅಭಿನಯ-ರಸ-ಮಾನವ ಭಾವನೆಗಳ ನೃತ್ಯದ ವಿಷಯದಲ್ಲಿ ಮಾತ್ರ– ‘ಯಾಂಬು’ವಿಗೆ ದೊಡ್ಡ ಮಿದುಳಿದ್ದರೂ, ಎರಡೂ ಎಡಗಾಲುಗಳೇ ಇವೆ! (ಎಐ ಹ್ಯಾಸ್ ಬಿಗ್ ಬ್ರೇನ್ ಬಟ್ ಇಟ್ ವುಡ್ ಸ್ಟಿಲ್ ಹ್ಯಾವ್ ಟೂ ಲೆಫ್ಟ್ ಫೀಟ್) ಎಂಬ ಮಾತು ಸದ್ಯಕ್ಕಂತೂ ಸತ್ಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT