ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದುದ್ದಗಲ ವಚನ ನೃತ್ಯದ ಬಳ್ಳಿ

Published 16 ಸೆಪ್ಟೆಂಬರ್ 2023, 23:31 IST
Last Updated 16 ಸೆಪ್ಟೆಂಬರ್ 2023, 23:31 IST
ಅಕ್ಷರ ಗಾತ್ರ

ಹಲವು ವರ್ಷಗಳ ಹಿಂದಿನ ಮಾತು. ಸಿ. ಅಶ್ವತ್ಥ್ ಕೆಲವು ವಚನಗಳನ್ನು ಆರಿಸಿ, ಅವಕ್ಕೆ ಸ್ವರ ಸಂಯೋಜನೆ ಮಾಡಿದ್ದರು. ಯಾರೋ ಒಬ್ಬರು ಮಠಾಧೀಶರು ಅವುಗಳ ಧ್ವನಿಮುದ್ರಿಸಲು ಬೇಕಾದ ಖರ್ಚು ಭರಿಸುವುದಾಗಿ ಭರವಸೆ ನೀಡಿದ್ದರು. ಇನ್ನೇನು ರೆಕಾರ್ಡಿಂಗ್ ಶುರುವಾಗಬೇಕು ಎನ್ನುವಷ್ಟರಲ್ಲಿ ಅವರು ಕೈಕೊಟ್ಟರು. ಆಗ ತಮ್ಮ ಬಳಿ ಇದ್ದ ಪುಟ್ಟ ವ್ಯಾನನ್ನು ಮಾರಾಟ ಮಾಡಿ, ವಚನಗಳ ಧ್ವನಿಮುದ್ರಣದ ಕೆಲಸವನ್ನು ಅಶ್ವತ್ಥ್ ಮುಗಿಸಿದ್ದರು. ಆಮೇಲೆ ಆ ವಚನಗೀತೆಗಳ ಐದು ಸಿ.ಡಿ.ಗಳೂ ಬಿಡುಗಡೆಯಾದವು. ಆ ವಚನಗಳಲ್ಲಿ 10 ವಚನಗಳನ್ನು ಆಯ್ದು, ಸ್ನೇಹ ಕಪ್ಪಣ್ಣ ಸಾರಥ್ಯದಲ್ಲಿ ನೃತ್ಯರೂಪಕ್ಕೆ ಒಗ್ಗಿಸಿ, 62 ದಿನಗಳಲ್ಲಿ 52 ಪ್ರದರ್ಶನಗಳನ್ನು 24 ಹೆಣ್ಣುಮಕ್ಕಳ ತಂಡ ಹಲವು ರಾಜ್ಯಗಳಲ್ಲಿ ನೀಡಿ ಬಂದಿತು. ಇಡೀ ಸಂಚಾರ ನಡೆದದ್ದು ಒಂದು ಬಸ್‌ನಲ್ಲಿ. ಅಶ್ವತ್ಥ್‌ ತಮ್ಮ ವ್ಯಾನನ್ನು ಮಾರಾಟ ಮಾಡಿ ಧ್ವನಿಮುದ್ರಿಸಿದ್ದ ವಚನಗಳು ಹೀಗೆ ಬಸ್‌ನಲ್ಲಿ ವಿವಿಧೆಡೆ ಸಂಚರಿಸಿ ಬಂದಿರುವುದು ಸಂಸ್ಕೃತಿ ಸೋಜಿಗ.

ಕೋವಿಡ್‌ ವ್ಯಾಪಕವಾಗುವ ಮೊದಲೇ ಅಶ್ವತ್ಥ್ ಅವರ ಆಯ್ದ ವಚನಗಳಿಗೆ ನೃತ್ಯರೂಪ ನೀಡುವ ಕೆಲಸಕ್ಕೆ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೆನ್ನುತಟ್ಟಿದ್ದರು. ಆಗ ಅವರ ಶಾಲೆಯ ನೂರು ಮಕ್ಕಳಿಗೆ ನೃತ್ಯ ಕಲಿಸುವ ಕೆಲಸವನ್ನು ಸ್ನೇಹ ಕಪ್ಪಣ್ಣ ಕೈಗೆತ್ತಿಕೊಂಡರು. ಮೊದಲ ಪ್ರದರ್ಶನಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ನೀರಸವಾಗಿತ್ತು. ಜನಪದ ಹಾಗೂ ವಚನಗಳನ್ನು ಹದವಾಗಿ ಬೆರೆಸಿದ ಶೈಲಿಯ ನೃತ್ಯದ ಮಧ್ಯೆ ವಚನಗಳಿಗೆ ಶಿವಾಚಾರ್ಯ ಸ್ವಾಮೀಜಿ ಅವರೇ ತಮ್ಮ ಕಂಠದಲ್ಲಿ ಧ್ವನಿಮುದ್ರಿಸಿದ್ದ ಅರ್ಥವನ್ನೂ ಕೇಳಿಸುವ ಪ್ರಯೋಗ ಅದಾಗಿತ್ತು. ಆ ಮಕ್ಕಳು ಮುಂಬೈಗೆ ಹೋಗಿ ಮೂರು ಕಡೆ ಪ್ರದರ್ಶನ ನೀಡಿದರು. ಒಂದೊಂದೂ ಪ್ರದರ್ಶನ ಆದಮೇಲೆ ಅಲ್ಲಿನ ಕನ್ನಡಿಗರೇ ಸ್ವಪ್ರೇರಣೆಯಿಂದ ಹಣದ ಕೊಡುಗೆ ನೀಡಿದರು. ಖರ್ಚು ತೂಗಿಸಿಕೊಂಡು ಹೋಗಲು ಅದರಿಂದ ಸಾಧ್ಯವಾಯಿತು. ಮೂರನೇ ಪ್ರದರ್ಶನದ ನಂತರ ಅಲ್ಲಿನ ಕೊಡುಗೈಗಳನ್ನು ಕಂಡು ಸ್ವಾಮೀಜಿ ಕಣ್ತುಂಬಿಕೊಂಡು ನಿಂತಿದ್ದು ಶ್ರೀನಿವಾಸ ಜಿ. ಕಪ್ಪಣ್ಣ ಅವರಿಗೆ ಈಗಲೂ ಕಣ್ಣಿಗೆ ಕಟ್ಟಿದಹಾಗಿದೆ.

ಅಶ್ವತ್ಥ್ ಎಂದೋ ಸಂಯೋಜಿಸಿದ್ದ ವಚನಗೀತೆಗಳನ್ನು ನೃತ್ಯರೂಪಕ್ಕೆ ಒಗ್ಗಿಸಬೇಕೆಂಬ ಕನಸು ಕುಡಿಯೊಡೆದದ್ದು ಕಪ್ಪಣ್ಣ ಹಾಗೂ ಸ್ವಾಮೀಜಿ ನಡುವೆ ನಡೆದ ಸಂವಾದದಿಂದ. ಅಶ್ವತ್ಥ್ ಸ್ವರ ಸಂಯೋಜನೆಯ ವಚನಗಳು ಸಿ.ಡಿ. ರೂಪದಲ್ಲಿ ಬಿಡುಗಡೆ ಆದದ್ದೂ ಕಪ್ಪಣ್ಣ ಅವರ ಪ್ರಯತ್ನದಿಂದ, ಉದ್ಯಮಿ ಷಡಕ್ಷರಿ ಅವರ ನೆರವಿನಿಂದ. ಕೋವಿಡ್‌ ಕಳೆದ ಮೇಲೆ ಮತ್ತೆ ಆ ವಚನಗಳನ್ನು ದೇಶದ ಉದ್ದಗಲ ನೃತ್ಯರೂಪದ ಮೂಲಕ ಹರಡಬೇಕೆಂಬ ಮಹದಾಸೆ ಮೂಡಿತು. ಹಿಂದಿಗೆ ಅನುವಾದಗೊಂಡ ವಚನ ನೃತ್ಯದ ಪರಿಕಲ್ಪನೆ ಬೇರೆ ರಾಜ್ಯಗಳಲ್ಲೂ ಸಂಚರಿಸಿದ್ದು ಹಾಗೆ. ಹಿಂದಿ ಕವಿ ಕುಲವಂತ ಸಿಂಗ್ ಹಾಗೂ ಮುಂಬೈನ ವಿಜ್ಞಾನಿ ಸುರೇಶ್‌ ಕುಮಾರ್ ಅನುವಾದ ಮಾಡಿಕೊಟ್ಟರು. ಈ ವರ್ಷ ಜುಲೈ 2ರಂದು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಆಡಿಟೋರಿಯಂನಲ್ಲಿ ಪ್ರಾರಂಭವಾದ ಸಂಚಾರ ಅಂತ್ಯಗೊಂಡಿದ್ದು ಸಾಣೇಹಳ್ಳಿಯ ಬಯಲು ಮಂದಿರದಲ್ಲಿ, ಸೆಪ್ಟೆಂಬರ್ 2ರಂದು. ಕರ್ನಾಟಕವಷ್ಟೆ ಅಲ್ಲದೆ ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ದೆಹಲಿ, ಚಂಡೀಗಢ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ... ಇಲ್ಲೆಲ್ಲ 24 ನೃತ್ಯಗಾರ್ತಿಯರನ್ನು ಒಳಗೊಂಡ ತಂಡವು 62 ದಿನ ಬಸ್‌ನಲ್ಲೇ ಸಂಚರಿಸಿ ಪ್ರದರ್ಶನ ನೀಡಿ ಬಂದಿತು.

‘ನಾವು ಈ ವಚನಗಳನ್ನು ನೃತ್ಯಕ್ಕೆ ಒಗ್ಗಿಸುವ ಕೆಲಸ ಕೈಗೆತ್ತಿಕೊಂಡಾಗ ಪ್ರೊಡಕ್ಷನ್ ಕ್ವಾಲಿಟಿ ನ್ಯಾಷನಲ್ ಲೆವೆಲ್‌ಗೆ ಇರಬೇಕು ಎಂದು ನಿರ್ಧರಿಸಿದೆವು. ಭರತನಾಟ್ಯದಲ್ಲಿ ವಿದ್ವತ್ ಆದವರು, ರಂಗಪ್ರವೇಶ ಆದವರನ್ನಷ್ಟೆ ಆಯ್ಕೆ ಮಾಡಿಕೊಂಡೆವು. ಬೆಂಗಳೂರಿನ ಕಪ್ಪಣ್ಣ ರಂಗಮಂದಿರಲ್ಲಿ ಒಂದು ತಿಂಗಳು ತಾಲೀಮು ನಡೆಸಿ, ವಚನಗಳನ್ನು ನೃತ್ಯರೂಪಕ್ಕೆ ಒಗ್ಗಿಸಿದೆವು. ಬಳಸುವ ಪರಿಕರಗಳೆಲ್ಲ ಬಸ್‌ನಲ್ಲಿ ಸಲೀಸಾಗಿ ಇಡುವಂತೆ ಇರಬೇಕು, ಹಾಗೆ ನೋಡಿಕೊಳ್ಳಲು ನೆರವಾದವರು ಮಾಲತೇಶ ಬಡಿಗೇರ. 44 ವಚನಗಳಲ್ಲಿ ಹತ್ತನ್ನು ಇದಕ್ಕಾಗಿ ಆಯ್ಕೆಮಾಡಿಕೊಂಡೆವು. ಸ್ವಾಮೀಜಿ ಕಂಠದಲ್ಲಿ ಇದ್ದ ಅರ್ಥವನ್ನು ಹಿಂದಿಗೆ ಅನುವಾದ ಮಾಡಿಸಿ, ಬೇರೆಯವರ ಕಂಠದಲ್ಲಿ ಧ್ವನಿಮುದ್ರಿಸಿದೆವು. ವಸ್ತ್ರಾಲಂಕಾರದ ಹೊಣೆಯನ್ನು ಜಾನಕಿರಾಮನ್‌ ಕೆ. ವಹಿಸಿಕೊಂಡರೆ, ಸವಿತಾ ಜೋಸೆಫ್ ಎಂಬುವವರು ಹೇರ್‌ಸ್ಟೈಲ್‌ ಹಾಗೂ ಮೇಕಪ್‌ ಅನ್ನು ಕಲಾವಿದೆಯರು ತಾವೇ ಮಾಡಿಕೊಳ್ಳುವಂತೆ ಕಮ್ಮಟ ನಡೆಸಿದರು. ಜೀವನಗೌಡ, ಲವಕುಮಾರ್ ಧ್ವನಿ ಮತ್ತು ಬೆಳಕಿನ ಜವಾಬ್ದಾರಿ ವಹಿಸಿಕೊಂಡರು. ಕೋಲಾಟ, ನಂದಿಧ್ವಜ, ತಾಳಗಳು, ಡಮರುಗ ಇವನ್ನೆಲ್ಲ ಬಳಸಿದ ನೃತ್ಯ ಸಂಯೋಜನೆ ಕಣ್ಣು–ಮನಸ್ಸಿಗೆ ಹಿತವಾಗುವಂತೆ ಮೂಡಿಬಂತು’–ಯೋಜನೆ ಸಾಕಾರಗೊಂಡ ಬಗೆಯನ್ನು ಸ್ನೇಹ ಕಪ್ಪಣ್ಣ ವಿವರಿಸಿದ್ದು ಹೀಗೆ.

‘ತೆಲಂಗಾಣದ ತೆಲುಗು ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ ನಡೆದಾಗ ಅಲ್ಲಿನವರು ಈ ಪ್ರಸ್ತುತಿಯನ್ನು ತೆಲುಗಿನಲ್ಲಿ ಮಾಡಿಕೊಡಿ ಎಂದು ಕೇಳಿದರು. ಮಹಾರಾಷ್ಟ್ರದಲ್ಲಿ ಪ್ರದರ್ಶಿಸಿದಾಗ ಸರ್ಕಾರದ ಯೋಜನೆಯೊಂದನ್ನು ಬಳಸಿ ಇದನ್ನು ಅಲ್ಲಿ ಇನ್ನಷ್ಟು ಪ್ರದರ್ಶಿಸುವ ಅವಕಾಶವಿದ್ದು, ಮರಾಠಿ ಭಾಷೆಗೆ ಅನುವಾದಿಸಿಕೊಡುವಂತೆ ಅಲ್ಲಿನ ಮುಖ್ಯಮಂತ್ರಿ ಕಚೇರಿಯಿಂದ ಬೇಡಿಕೆ ಇಟ್ಟರು. ಖರಗ್‌ಪುರದಲ್ಲಿ ಪ್ರದರ್ಶನ ನಡೆದಾಗ ಮಹಿಳಾ ವಿಶ್ವವಿದ್ಯಾಲಯದ 1500 ಜನರಿದ್ದರು. ಬಂಗಾಳಿ ಭಾಷೆಯಲ್ಲಿ ಇದನ್ನು ಮಾಡಿಕೊಡಿ ಎಂದು ಕೇಳಿದವರೂ ಇದ್ದರು. ಹೀಗೆ ನಾವು ಹೋದಕಡೆಯೆಲ್ಲ ಸ್ಮರಣೀಯ ಅನುಭವಗಳು ದಕ್ಕಿವೆ’ ಎಂದರು ಶ್ರೀನಿವಾಸ ಜಿ. ಕಪ್ಪಣ್ಣ.

ಒಟ್ಟು 62 ದಿನಗಳಲ್ಲಿ ಬಸ್‌ನಲ್ಲಿ ಕಲಾರಾಧಕರದ್ದು ಏನಿಲ್ಲವೆಂದರೂ 12 ಸಾವಿರ ಕಿ.ಮೀ. ಪ್ರಯಾಣ. ಕೆಲವೆಡೆ ಉಳಿದುಕೊಳ್ಳುವ, ಊಟದ ವ್ಯವಸ್ಥೆಯಲ್ಲಿ ವ್ಯತ್ಯಾಸವಾಗಿತ್ತು. ಇಂತಹ ಎಲ್ಲ ಸಮಸ್ಯೆಗಳನ್ನೂ ಮೀರಿ, ವೇದಿಕೆ ಮೇಲೆ ಕಲಾವಿದೆಯರು ನೃತ್ಯ ಲಾಲಿತ್ಯವನ್ನು ಕಾಣಿಸಿದರು. ದಣಿವೆನ್ನುವುದೇ ಇಲ್ಲವೆಂಬಂತೆ ವಚನಗಳ ಸಾರ–ಸತ್ವವನ್ನು ಅದರ ಗಂಧ–ಗಾಳಿಯೇ ಇಲ್ಲದೆಡೆಯೂ ಪಸರಿಸಿದರು. ಒಂದೊಂದೂ ಪ್ರದರ್ಶನದ ನಂತರದ ನೆಮ್ಮದಿಯ ನಿಟ್ಟುಸಿರಿಗೆ ಈಗ ಸಿಕ್ಕಿರುವುದು ಸಾರ್ಥಕ್ಯದ ಅರ್ಥ.⇒v

ಶ್ರೀನಿವಾಸ ಜಿ. ಕಪ್ಪಣ್ಣ ಸ್ನೇಹ ಕಪ್ಪಣ್ಣ ಹಾಗೂ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಶ್ರೀನಿವಾಸ ಜಿ. ಕಪ್ಪಣ್ಣ ಸ್ನೇಹ ಕಪ್ಪಣ್ಣ ಹಾಗೂ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

- ಹೀಗೆಲ್ಲ ಹಬ್ಬಿತು ವಚನ ಸಾಹಿತ್ಯ

ಶರಣ ಸಾಹಿತ್ಯದಲ್ಲಿ ನನಗೆ ವಿಶೇಷ ಒಲವು. ಕನ್ನಡಿಗರು ಇರುವೆಡೆ ಅಷ್ಟೇ ಅಲ್ಲದೆ ಬೇರೆ ಕಡೆಯೂ ಶರಣ ಸಾಹಿತ್ಯ ಅನುರಣಿಸಬೇಕು. ಅದರಲ್ಲಿ ಬಂಡಾಯ–ದಲಿತ ಪ್ರಜ್ಞೆ ಇದೆ ಮಹಿಳಾ ಸ್ವಾತಂತ್ರ್ಯದ ಪ್ರತಿಪಾದನೆ ಇದೆ ಮೌಢ್ಯ ಸಲ್ಲದೆನ್ನುವ ಪಾಠವಿದೆ. 2007ರಲ್ಲಿ ಶರಣ ಸಾಹಿತ್ಯ ಆಧರಿಸಿದ ನಾಲ್ಕು ನಾಟಕಗಳನ್ನು ಹಿಂದಿಯಲ್ಲಿ ರಚಿಸುವಂತೆ ಮಾಡಿ ಪ್ರದರ್ಶಿಸಿದ್ದೆವು. 2013ರಲ್ಲೂ ಎರಡು ಹಿಂದಿ ನಾಟಕಗಳು ವಚನ ಸಾಹಿತ್ಯದ ಮಹತ್ವ ಸಾರಿದ್ದವು. ಈಗ ನೃತ್ಯಕ್ಕೆ ವಚನಗಳನ್ನು ಒಗ್ಗಿಸಿದರೆ ಹೇಗೆ ಎಂಬ ಪ್ರಯೋಗಕ್ಕೆ ಕೈಹಾಕಿ ಗೆದ್ದಂತಾಗಿದೆ. ಜನಪದ ನೃತ್ಯ ಮಾಡುವವರನ್ನು ಸೇರಿಸಿ ಅವರಿಂದ ವಚನಗೀತೆಗಳಿಗೆ ನೃತ್ಯ ಮಾಡಿಸಿ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಅವರು ಈ ಪ್ರಯೋಗ ಕಂಡಮೇಲೆ ಹೇಳಿದರು. ಅದರ ವೆಚ್ಚವನ್ನೂ ಭರಿಸಲು ಅವರು ಮುಂದಾಗಿದ್ದಾರೆ. ವಚನ ಸಾಹಿತ್ಯ ಹೀಗೆಲ್ಲ ಹಬ್ಬುತ್ತ ಇರುವುದೇ ಸಂತಸದ ವಿಚಾರ.

–ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾಣೇಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT