ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೃಪ್ತಿಯಲ್ಲಿದೆ ಸಂತೋಷ

ತೃಪ್ತಿಯಲ್ಲಿದೆ ಸಂತೋಷ
Last Updated 5 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಅಭಾವ ಮತ್ತು ಸಮೃದ್ಧಿ – ಇವು ನಾವು ಜೀವನವನ್ನು ನೋಡುವ ಎರಡು ರೀತಿಗಳಾಗಿರಬಹುದೇ?

ನಮ್ಮ ಯಾವೆಲ್ಲಾ ಕ್ರಿಯೆಗಳು ಅಭಾವದಿಂದ ಪ್ರೇರೇಪಿಸಲ್ಪಟ್ಟಿದೆ ಮತ್ತು ಯಾವೆಲ್ಲಾ ಕ್ರಿಯೆಗಳು ಸಮೃದ್ಧಿ, ಸಂತೃಪ್ತಿಯಿಂದ ಪ್ರೇರೇಪಿಸಲ್ಪಟ್ಟಿದೆ ಎಂಬುದನ್ನು ಗ್ರಹಿಸಲು ಸಾಧ್ಯವಾದರೆ ನಾವು ಜೀವನವನ್ನು ಯಾವ ರೀತಿ ನೋಡುತ್ತಿದ್ದೇವೆ ಎಂಬುದು ಸ್ಪಷ್ಟವಾಗುತ್ತದೆ. ಯಾವುದೋ ಅತೃಪ್ತಿಯನ್ನು, ಯಾವುದರ ಅತೃಪ್ತಿಯೆಂದು ಗ್ರಹಿಸಲಾರದೆ ಹೋದಾಗ ಅದನ್ನು ನಿವಾರಿಸುವುದು ಹೇಗೆ? ಕೆಲವು ಚಿಕ್ಕ ಮಕ್ಕಳನ್ನು ಗಮನಿಸಿ, ಒಮ್ಮೊಮ್ಮೆ ತಾಯಿಯ ಸಾಮೀಪ್ಯದ ಹಸಿವಾದಾಗಲೂ ಮಗು ಅದನ್ನು ಹೊಟ್ಟೆಯ ಹಸಿವು ಎಂಬಂತೆ ತೋರ್ಪಡಿಸುತ್ತದೆ; ಭಯ, ಬೇಸರ, ಸಿಟ್ಟು ಎಲ್ಲವನ್ನೂ ಹಸಿವು, ನಿದ್ದೆ, ಆಯಾಸ ಎಂಬಂತೆ ಗ್ರಹಿಸಲಾರಂಭಿಸಿದಾಗ ತಮಗೆ ನಿಜವಾಗಲೂ ಏನು ಬೇಕು ಎಂಬುದರ ಅರಿವು ಅವುಗಳಿಗೆ ಉಂಟಾಗಲು ಸಾಧ್ಯವೇ?

ತೃಪ್ತಿಯೆನ್ನುವುದನ್ನು ಭೌತಿಕವಾಗಿ ಅರ್ಥ ಮಾಡಿಕೊಳ್ಳುವುದು ಸುಲಭ. ಆದರೆ ಭಾವನಾತ್ಮಕವಾಗಿ ಗ್ರಹಿಸಿವುದು ಅಷ್ಟು ಸುಲಭವಿಲ್ಲ. ಒಬ್ಬ ಮನುಷ್ಯನಿಗೆ ಎಷ್ಟು ಆಹಾರ, ಆಸ್ತಿ, ಹಣ, ಅಂತಸ್ತು, ಅಧಿಕಾರ ಬೇಕು ಎಂದು ನಿರ್ಧರಿಸಬಹುದು, ಅನುಭವಿಸಿದಷ್ಟೂ ಹೆಚ್ಚಾಗುವ ದಾಹವನ್ನು ಕಷ್ಟವಾದರೂ ನಿಯಂತ್ರಿಸಲೂಬಹುದು. ಆದರೆ ಪ್ರೀತಿ, ಬೆಂಬಲ, ಮೆಚ್ಚುಗೆ, ಗೌರವ – ಇವುಗಳನ್ನು 'ಇಷ್ಟು ಸಾಕು' ಎಂದು ನಿರ್ಧರಿಸಲು ಸಾಧ್ಯವಿದೆಯೇ? ಈ ಭಾವನಾತ್ಮಕ ಅತೃಪ್ತಿಯನ್ನು ಗ್ರಹಿಸಿ, ನಿವಾರಿಸುವ ಬಗೆ ಹೇಗೆ? ಭೌತಿಕ ಅತೃಪ್ತಿಗಳು ಯಾವುದೋ ಭಾವನಾತ್ಮಕ ಅತೃಪ್ತಿಯ ಛಾಯೆಯಾದಾಗ ಎಷ್ಟು ದುಡಿದರೂ ದಣಿದರೂ ಸಂಗ್ರಹಿಸಿದರೂ ಸಾಧಿಸಿದರೂ ಸಾಲದು ಎನಿಸಿಬಿಡಬಹುದೇ? ಮೆಚ್ಚುವವರು, ಪ್ರೀತಿಸುವವರು ಇಲ್ಲದೆ ಹೋದಾಗ ಯಾವ ಸಾಧನೆಯೂ ಶೂನ್ಯ ಎಂಬುದನ್ನು ಅರಿಯದೆ, ತಾನು ಸಾಧಿಸಿದ್ದು ಕಡಿಮೆಯಾಗಿರಬಹುದು, ಇನ್ನು ಹೆಚ್ಚು ಸಾಧಿಸಬೇಕೇನೋ ಎಂಬ ಕೊರತೆಯ ಅನುಭವವಾದಾಗ ಬದುಕು ಎಷ್ಟು ಈಜಿದರೂ ದಡ ಕಾಣದ ದುರ್ಗಮ ಸಾಗರವಾಗಿ ಕಾಣಬಹುದಲ್ಲವೇ?

ಅತೃಪ್ತಿಯ ಹಿಂದಿರುವ ಈ ಭಯ ಮತ್ತು ಅಭಾವ ಯಾವುದರ ಕುರಿತಾದದ್ದು ಎಂದು ತಿಳಿದರೆ ತೃಪ್ತಿಯ, ಸಮೃದ್ಧಿಯ ಕಡೆಗಿನ ಜೀವನದ ಮೊದಲ ಮೆಟ್ಟಿಲು ಏರಿದಂತೆಯೇ. ಅಗಾಧ ಸಂಪತ್ತು ತುಂಬಲಾಗದ ಖಾಲಿತನವನ್ನು ಒಂದು ಹನಿ ಪ್ರೀತಿಯಿಂದ ತುಂಬಿದ್ದು, ಹತ್ತಾರು ವರ್ಷಗಳ ಸಹವಾಸ ನೀಗಿಸಲಾಗದ ಒಂಟಿತನವನ್ನು ಒಂದು ನೋಟ, ಮಾತು, ಸ್ಪರ್ಶ ನೀಗಿಸಿದ್ದು ನಮ್ಮ ಎಷ್ಟೋ ಪೌರಾಣಿಕ, ಸಾಹಿತ್ಯಿಕ ಕಥೆ, ಕೃತಿಗಳ ಮುಖ್ಯ ತಂತು. ಸಮಸ್ಯೆ ಇರುವುದು ನಮ್ಮ ಅಗತ್ಯಗಳಲ್ಲಿ ಅಲ್ಲ, ಅದನ್ನು ಪೂರೈಸಬಹುದು ಎಂದು ನಾವು ನೆಚ್ಚಿಕೊಂಡಿರುವ ಮೂಲದಲ್ಲಿ. ಬತ್ತಿದ ಬಾವಿಯಿಂದ ನೀರು ತರುವುದು ಹೇಗೆ? ಕೇವಲ ಸಂಪತ್ತು, ಕೀರ್ತಿ ಸುಖವನ್ನು ತರಬಹುದೇ? ಪ್ರೀತಿಸುವ ಸಾಮರ್ಥ್ಯವಿಲ್ಲದವರಿಂದ ಪ್ರೇಮವನ್ನು ನಿರೀಕ್ಷಿಸಿದರೆ? ಅದಕ್ಕೂ ಮಿಗಿಲಾಗಿ ಏನು ಮಾಡಿದರೂ ಪಡೆದರೂ ಕಡಿಮೆಯೇ ಎಂಬ ಧ್ವನಿ ನಮ್ಮಲ್ಲೇ ಸದಾ ಮೊಳಗುತ್ತಿರುವಾಗ ತೃಪ್ತಿಯ ಕಡೆಗಿನ ದಾರಿ ಸುಗಮವೇ?

ತೃಪ್ತಿಯೆನ್ನುವುದು ಸುಳ್ಳು ಸಮಾಧಾನವಾಗದೆ, ಪಡೆಯಲಾಗದ್ದನ್ನು ಆಶಿಸಿ ಅವಮಾನ ನಿರಾಸೆಯಾದಾಗ, 'ಏನೋ ಇದ್ದುದರಲ್ಲೇ ತೃಪ್ತಿಯಾಗಿದ್ದೀನಿ' ಎಂಬ ತನಗೆ ತಾನೇ ಮೋಸ ಮಾಡಿಕೊಳ್ಳುವ ಒಣ ವೇದಾಂತದ ಮಾತಾಗದೇ ಇರಬೇಕಾದರೆ ನಮ್ಮ ನಿಜವಾದ ಅಭಾವವನ್ನು ನೀಗಿಸುವಂತಹ ಆ ಅಪೂರ್ವ ನಿಧಿಯ ಹುಡುಕಾಟವನ್ನು ಕೈಗೊಳ್ಳಲೇಬೇಕು. ಆಗ ಮಾತ್ರ ತೃಪ್ತಿ ಎನ್ನುವುದು ನಿಜವಾದ ಸಂತೋಷದ ಹಾದಿಯಾಗಬಲ್ಲುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT