ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯತ್ವದ ಹಾಡು ಹಾಡಿದ ಮಹಾಕೋಗಿಲೆ ಎಸ್.ಪಿ.ಬಾಲಸುಬ್ರಹ್ಮಣ್ಯಂ

Last Updated 27 ಸೆಪ್ಟೆಂಬರ್ 2020, 9:35 IST
ಅಕ್ಷರ ಗಾತ್ರ

ಒಮ್ಮೆ ಪ್ಯಾರಿಸಿನ ಹೋಟೆಲ್ ಒಂದರಲ್ಲಿ ಅಕ್ಕಪಕ್ಕದ ಎರಡು ಕೊಠಡಿಗಳಲ್ಲಿ ಭಾರತದ ಇಬ್ಬರು ಸಂಗೀತ ದಿಗ್ಗಜರು ವಾಸ್ತವ್ಯವಿರುತ್ತಾರೆ. ಸಂಗೀತ ಕಛೇರಿ ನಡೆಸಿಕೊಡಲು ಬಂದಿದ್ದ ಅವರಿಗೆ ಕಾರ್ಯಕ್ರಮದ ನಿರ್ವಾಹಕರು ಊಟದ ವ್ಯವಸ್ಥೆ ಮಾಡುವಲ್ಲಿ ಕೊಂಚ ಏರುಪೇರಾಗಿರುತ್ತದೆ. ಎಷ್ಟು ಹೊತ್ತಾದರೂ ಒಂದು ಕೊಠಡಿಗೆ ಯಾವುದೇ ಊಟ ಬಂದು ಹೋಗದ ಸ್ಥಿತಿಯನ್ನು ಗಮನಿಸಿದ ಪಕ್ಕದ ಕೊಠಡಿಯಲ್ಲಿದ್ದ ದಿಗ್ಗಜನಿಗೆ ಸಂಕಟವೆನಿಸುತ್ತದೆ. ಕಾರ್ಯಕ್ರಮದ ಸಂಘಟಕರನ್ನು ವಿಚಾರಿಸಿದಾದ ಭೋಜನ ವ್ಯವಸ್ಥೆಯನ್ನು ಮಾಡದಿರುವುದು ಗಮನಕ್ಕೆ ಬರುತ್ತದೆ. ಆಗ ತಾನು ತಂದಿಟ್ಟುಕೊಂಡಿದ್ದ ಕುಕ್ಕರ್ ಮತ್ತು ಆಹಾರ ಪದಾರ್ಥಗಳಿಂದ ತಯಾರಿಸಿದ್ದ ಭೋಜನವನ್ನು ತೆಗೆದುಕೊಂಡು ಹೋಗಿ, ಇನ್ನೊಬ್ಬ ದಿಗ್ಗಜನಿದ್ದ ಕೊಠಡಿಯ ಬಾಗಿಲನ್ನು ತಟ್ಟುತ್ತಾನೆ.

“ಸಾರ್….. ಸಾರ್…..”.
ಕೊಠಡಿಯಿಂದ ಯಾವುದೇ ಸದ್ದಾಗುವುದಿಲ್ಲ.

“ಸಾರ್, ರೂಮ್ ಸರ್ವೀಸ್..”

ಒಳಗೆ ಮಲಗಿದ್ದ ದಿಗ್ಗಜನಿಗೆ ಆಶ್ಚರ್ಯ. “ಇದೇನು ಈಗ ರೂಮ್ ಸರ್ವೀಸ್. ನಾನು ಇನ್ಫಾರ್ಮ್ ಮಾಡಿರಲಿಲ್ಲವಲ್ಲ. ಮತ್ತೆ ರೂಮ್ ಸರ್ವೀಸ್ ಅನ್ನೋ ವಾಯ್ಸ್ ಪರಿಚಿತ ಇದ್ದಂಗಿದೆಯಲ್ಲ..!” ಎಂದುಕೊಂಡು ಬಾಗಿಲು ತೆರೆದರೆ, ಪಕ್ಕದ ರೂಮಿನಲ್ಲಿದ್ದ ದಿಗ್ಗಜ ತನ್ನೆದುರು ಪ್ರತ್ಯಕ್ಷ… ಜೊತೆಗ ಅನ್ನದ ಪಾತ್ರೆಯಿಡಿದು ನಿಂತಿದ್ದಾನೆ..!

“ಏನಪ್ಪ, ಇಷ್ಟೊತ್ತಿನಲ್ಲಿ ಬಾಗಿಲು ತಟ್ಟುತ್ತಿದೀಯಲ್ಲ. ಅದೂ ಅಲ್ಲದೇ, ರೂಮ್ ಸರ್ವೀಸ್ ಅಂತ ಬೇರೇ ಅಂತಿದಿಯಲ್ಲ, ಯಾಕೆ?”

“ಇಲ್ಲಾ ಅಣ್ಣಾವ್ರೆ, ನಿಮ್ಮ ರೂಮಿನ ಬಾಗಿಲನ್ನೂ ಯಾರೂ ತಟ್ಟಲಿಲ್ಲ. ನಿಮಗೆ ಊಟ ತಂದುಕೊಟ್ರೋ ಇಲ್ಲಾಂತ..”

“ಅವರು ಎಲ್ಲೋ ಮರೆತುಹೋಗಿದ್ದಾರನ್ನಿಸುತ್ತೆ. ಏನ್ಮಾಡೋದು, ನೀರು ಕುಡಿದು ಮಲಗಿಕೊಂಡೆ…”

“ನಿಮಗೆ ಇಷ್ಟಾ ಆಗುತ್ತೋ ಇಲ್ವೋ… ನಾವಿಲ್ಲೇ ರೂಮಲ್ಲೇ ಮಾಡಿಕೊಂಡದ್ದು…” ಎಂದು ಪಾತ್ರೆಯಲ್ಲಿದ್ದ ಅನ್ನವನ್ನು ಈ ದಿಗ್ಗಜ ನೀಡುತ್ತಾನೆ. ಅದನ್ನು ಸ್ವೀಕರಿಸಿದ ಆ ದಿಗ್ಗಜ ತಿನ್ನತೊಡಗುತ್ತಾನೆ…..ಆ ಅನ್ನ ತಿನ್ನುತ್ತಲೇ ಆತನ ಕಣ್ಣುಗಳಿಂದ ಹನಿಗಳು ತಂತಾನೇ ಹರಿಯತೊಡಗುತ್ತವೆ..

“ಜೀವನದಲ್ಲಿ ಹಸಿವು ಅನ್ನೋದನ್ನು ಬಹಳ ಅನುಭವಿಸಿದೀನಿ..ಎಷ್ಟೋ ಕಷ್ಟಪಟ್ಟುಕೊಂಡು ಬದುಕ್ತಾ ಬಂದಿದೀನಿ…ಎಷ್ಟೋ ದೇವಾಲಯಗಳತ್ತ ತಿರುಗಿ ಬಂದೆ. ಎಷ್ಟೋ ದೇವರುಗಳ ಮೇಲೆ ಹಾಡಿದೆ. ಇಂಥ ಒಳ್ಳೆಯ ಪ್ರಸಾದ ನನಗೆಲ್ಲೂ ಸಿಗಲಿಲ್ಲ ಕಣಪ್ಪ...”

-ಹೀಗೆ, ಮಹಾನದಿಗಳೆರಡೂ ಕೂಡಿದ ಸಾಗರಸಂಗಮದಂತೆ ಅಂದಿನಿಂದ ಆ ಇಬ್ಬರೂ ದಿಗ್ಗಜರು ಸಂಗೀತ ಕ್ಷೇತ್ರದಲ್ಲಿ ಆಳವಾದ ಪ್ರೀತಿ ಮತ್ತು ಅಸೀಮ ಮೈತ್ರಿಯ ಸಾಧಕಸೋದರರಾಗಿ ಕಂಗೊಳಿಸಿದವರು. ಅಂದು ಅನ್ನ ಹಂಚಿಕೊಂಡು ಆಪ್ತರಾದವರೇ ಗಾನಗಂಧರ್ವರೆನಿಸಿದ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಅನ್ನ ಉಂಡು ಅಣ್ಣಯ್ಯರಾದವರೇ ಸ್ವರಬ್ರಹ್ಮರೆನಿಸಿದ ಡಾ.ಕೆ.ಜೆ.ಯೇಸುದಾಸ್. ಭಾರತದ ಕಲೆ ಮತ್ತು ಭಕ್ತಿ ಚರಿತ್ರೆಯಲ್ಲಿ ಇಂತಹ ಅನೇಕ ಘಟನೆಗಳನ್ನು ನಾವಿಲ್ಲಿ ಅನುಸಂಧಾನ ಮಾಡಬಹುದು. ಯೇಸುದಾಸ್ ಅವರು ತಮ್ಮ ಜೀವನದಲ್ಲಿ ತಾವೆಂದೂ ಮರೆಯಲಾದ “ಅನ್ನದ ಪ್ರಸಂಗ”ವಿದೆಂದು ಮತ್ತೆ ಮತ್ತೆ ನೆನೆಯುತ್ತಾರೆ. “ಅಂದು ಬಾಲು ಬ್ರದರ್ ನೀಡಿದ ಅನ್ನವು ಬರೀ ಅನ್ನವಾಗಿರಲಿಲ್ಲ.. ಬರೀ ಪಾತ್ರೆಗಳಿಂದ ಅನ್ನವನ್ನು ಹಂಚಿಕೊಂಡ ಮಾತ್ರಕ್ಕೆ ಬ್ರದರ್ಸ್ ಆಗಿಬಿಟ್ಟೆವೂ ಅಂತಲ್ಲ… ಅದು ಪದಗಳಿಗೆ ನಿಲುಕದ ಅನುಪಮ ಬಾಂಧವ್ಯ... ನನ್ನ ಜೀವನ ಸಾಧನೆಯು ಎಷ್ಟು ಎತ್ತರಕ್ಕೇರಿದರೂ ನಾನೆಂದೂ ಮರೆಯಲಾರದ ಅಜರಾಮರ ಸ್ಮೃತಿಯದು..” ಎಂದು ಎಸ್.ಪಿ.ಬಿ ಅವರನ್ನು ತಮ್ಮ ಸ್ವಂತ ಸಹೋದರನಂತೆ ಕಾಣುತ್ತ ಮಾನವತಾ ಗೀತೆಯನ್ನು ಮನದುಂಬಿಕೊಂಡು ಒಟ್ಟಾಗಿ ಹಾಡತೊಡಗಿದರು.

ವಿಶ್ವದಾದ್ಯಂತ ಕೋಟ್ಯಾಂತರ ಕಲಾ ರಸಿಕರ ಹೃದಯಗಳಲ್ಲಿ ನೆಲೆಸಿರುವ ಗಾಯನ ಲೋಕದ ಮಹಾಪ್ರತಿಭೆ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು. ಮತ್ತೆ ಮತ್ತೆ ಮೆಲುಕು ಹಾಕುವ ಸಾವಿರಾರು ಹಾಡುಗಳನ್ನು ಹಾಡಿದ ಎಸ್.ಪಿ.ಬಿ ಅವರು ತಮ್ಮ ಜೀವನದುದ್ದಕ್ಕೂ ಮನುಷ್ಯತ್ವದ ಹಾಡನ್ನೂ ಹಾಡಿದ್ದು ಅವಿಸ್ಮರಣೀಯ. ಹಾಡಾಡುತ್ತಾ ಮನುಷ್ಯತ್ವವನ್ನೇ ಜೀವಿಸಿದ ಮಹಾಚೇತನ. ಇಂಜಿನಿಯರಿಂಗ್ ಓದನ್ನು ಅರ್ಧಕ್ಕೆ ಬಿಟ್ಟು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ ಸಾಧಕರು. ಸ್ವತಃ ಎಸ್.ಪಿ.ಬಿ ಅವರೇ ಒಮ್ಮೊಮ್ಮೆ, ತಾವು ಹೆಚ್ಚೇನೂ ಓದಲಾಗಲಿಲ್ಲ, ಕಲಿಯಲಾಗಲಿಲ್ಲ ಎನ್ನುತ್ತಿದ್ದರಾದರೂ ಶ್ರೀಸಾಮಾನ್ಯನಂತೆ ಸಂಗೀತವನ್ನು ಜೀವಿಸಿದರು. ಕೆಲವೊಮ್ಮೆ ಅವರು ಸಂಗೀತದಲ್ಲಿ ಶಾಸ್ತ್ರೀಯವಾಗಿ ಶಿಕ್ಷಣ ಪಡೆದಿಲ್ಲವೆಂದು ಪ್ರಶ್ನೆಗಳನ್ನು ಎದುರಿಸುತ್ತಿದ್ದರು. ಆದರೆ ಆ ಕ್ರಮವಿಲ್ಲದೆಯೇ ಯಾರೂ ಸಾಧಿಸಲಾಗದ ಅದ್ಭುತವಾದ ಸಾಧನೆಗೈದ ಮೇಧಾವಿಯಾದರು. ಅವರಲ್ಲಿ ತಾನು ಶ್ರೇಷ್ಠ ಗಾಯಕ, ಸಂಗೀತ ಸಾಧಕ ಎಂಬ ಕಿಂಚಿತ್ತೂ ಹಮ್ಮುಬಿಮ್ಮುಗಳಿರಲಿಲ್ಲ. ಗಾಯನವಿಶ್ವದ ಗುರುಪರಂಪರೆಯನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದ ಅವರು ಡಾ.ಕೆ.ಜೆ.ಯೇಸುದಾಸ್ ಅವರನ್ನು ತಮ್ಮ ಅಚ್ಚುಮೆಚ್ಚಿನ ಗುರು, ಅಣ್ಣ, ತೀರ್ಥರೂಪ ಸಮಾನರೆಂದು ಗೌರವದಿಂದ ಕಾಣುತ್ತಿದ್ದುದ್ದು ಸಂಗೀತ ಕ್ಷೇತ್ರದ ಒಂದು ಅಪೂರ್ವ ಚರಿತ್ರೆ.

ಭಾರತದ ಸ್ವರಬ್ರಹ್ಮರೆಂದೇ ವಿಶ್ವ ಪ್ರಸಿದ್ಧರಾದ ಡಾ.ಕೆ.ಜೆ.ಯೇಸುದಾಸ್ ಅವರೊಂದಿಗೆ ಎಸ್.ಪಿ.ಬಿ ಅವರ ಒಡನಾಟವು ಎರಡು ಮೇರುಪರ್ವತಗಳ ನಿಲುವಿನಂತಿತ್ತು. ಪರಸ್ಪರ ಯಾವುದೇ ರೀತಿಯ ಅಹಂಕಾರವಾಗಲೀ, ಅಸೂಯೆಯಾಗಲೀ, ತಪ್ಪುಗ್ರಹಿಕೆಗಳಾಗಲೀ, ಅಂತರಗಳಾಗಲೀ ಇರಲಿಲ್ಲ. ತಮಗಿಂತ ಹಿರಿಯರೂ ಸಂಗೀತ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆಗೈದ ಯೇಸುದಾಸರನ್ನು ಅತ್ಯಂತ ಭಕ್ತಿಯಿಂದ ಕಾಣುತ್ತಿದ್ದ ಎಸ್.ಪಿ.ಬಿ ಅವರು ಯಾವುದೇ ಸಂಗೀತ ಕಾರ್ಯಕ್ರಮಗಳಲ್ಲಿ ಭೇಟಿಯಾದಾಗ ವಿನಯಪೂರ್ವಕವಾಗಿ ಪಾದಮುಟ್ಟಿ ನಮಸ್ಕರಿಸುತ್ತಿದ್ದರು. ಕೆಲವು ಕರ್ಮಠರು, ‘ಅವ ಎಷ್ಟೇ ಸಾಧಕನಾಗಿದ್ದರೂ ನೀವೊಬ್ಬ ಬ್ರಾಹ್ಮಣರಾಗಿ ಹೀಗೆ ಆ ದಲಿತನೊಬ್ಬನ ಕಾಲಿಗೆ ಬಿದ್ದು ನಮಸ್ಕಾರ ಮಾಡುವುದು ಸರಿಯಲ್ಲ’ ಎಂದು ಕೊಂಕು ಮಾತಾಡಿದ್ದೂ ಉಂಟು. ಮಾತ್ರವಲ್ಲದೇ, ಕೇರಳದ ದೇವಾಲಯವೊಂದರಲ್ಲಿ ವಿಶ್ವಪ್ರಸಿದ್ಧ ಗಾಯಕರಾದ ಯೇಸುದಾಸ್ ಅವರನ್ನು ಅಸ್ಪೃಶ್ಯರಾಗಿ ನಡೆಸಿಕೊಂಡು ಅವಮಾನವನ್ನೂ ಮಾಡಿದ್ದು ಜಗಜ್ಜಾಹಿರು. ಆದರೆ, ಅದಾವುದನ್ನೂ ಲೆಕ್ಕಿಸದ ಎಸ್.ಪಿ.ಬಿ ಅವರು ತಮ್ಮ ಜೀವನದುದ್ದಕ್ಕೂ ಸೀಮಾತೀತ ಸೋದರತೆ ಮತ್ತು ಮಾನವತೆಯಿಂದ ‘ಸಾಧಕಂಗೆ ಸಾಧಕಂ ಮಣಿವುದೇ ಮಹಾಸಾಧನೆ’ಯೆಂಬಂತೆ ಯೇಸುದಾಸ್ ಅವರೊಂದಿಗೆ ಘನತೆಯಿಂದ ನಡೆದುಕೊಂಡು ಬಂದರು. ಮಾನವೀಯ ಭಕ್ತಿಯ ಕಲಾನಿಧಿಯೇ ತಾವಾದರು.

ಎಸ್.ಪಿ.ಬಿ ಅವರು 2016ರಲ್ಲಿ ತಮ್ಮ ಸಿನಿಮಾ ಗಾಯನಯಾನದ 50ವರ್ಷ ಪೂರೈಸಿದ ಸವಿನೆನಪಿಗೆ ತಮ್ಮ ಗುರುವರ್ಯ ಡಾ.ಯೇಸುದಾಸ್ ಅವರಿಗೆ ‘ಪಾದಪೂಜೆ’ಯ ಮೂಲಕ ಗುರುಗೌರವ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ, ‘ಡಾ.ಯೇಸುದಾಸ್ ಅವರು ತಮ್ಮ ಗಾನಜೀವನದ ಯಾನದಲ್ಲಿ ನನಗಿಂತ ನೂರಾರು ಮೈಲಿ ಮುಂದೆಯಿದ್ದಾರೆ. ಅವರ ಸಮೀಪಕ್ಕೆ ನಾವು ತಲುಪುವುದು ಅಸಾಧ್ಯದ ಮಾತು. ಆದರೆ ಅವರ ಗುರುತನ, ಸೋದರತ್ವ ಹಾಗೂ ಸಂಗೀತ ಸ್ವಾತಂತ್ರ್ಯಗಳಿಂದ ನನಗೆ ಇಷ್ಟೊಂದು ಸಾಮೀಪ್ಯ ಸಾಧ್ಯವಾಗಿದ್ದು ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಧನ್ಯಪೂರ್ಣ ಸಂಗತಿ..”ಎನ್ನುತ್ತಾರೆ. ಇದೇ ಸಂದರ್ಭದಲ್ಲಿ ಯೇಸುದಾಸ್ ಅವರು, “..ಬಾಲು ನನ್ನ ಆತ್ಮೀಯ ಸೋದರರು. ನಾವು ಬೇರೆ ಬೇರೆ ಅಲ್ಲ; ನಾವಿಬ್ಬರೂ ಒಬ್ಬರೇ. ವಾಗ್ದೇವಿಯ ಪುತ್ರರಾದ ನಾವೆಲ್ಲರೂ ಒಂದೇ. ಹೆಚ್ಚು ಓದಲಾಗಲಿಲ್ಲವೆನ್ನುವ ಬಾಲು ತಮ್ಮ ಅನುಭವ, ಜ್ಞಾನ, ಶ್ರದ್ಧೆ, ಶ್ರಮದಿಂದ ಈ ಸಂಗೀತಯಾತ್ರೆಯಲ್ಲಿ ವಿಶ್ವವೇ ವಂದಿಸುವ ಅಗಾಧ ಎತ್ತರದ ಸಾಧನೆ ಮಾಡಿರುವುದು ನಮ್ಮೆಲ್ಲರ ಹೆಮ್ಮೆ. ತಮ್ಮ ಸಾಧನೆಯಿಂದ ತಾವು ಕೊಟ್ಟ ಕೊಡುಗೆ ಏನೆಂಬುದು ಇಡೀ ಜಗತ್ತಿಗೇ ಗೊತ್ತಿದೆ. ಹೀಗಾಗಿ ಬಾಲು ಇನ್ಮುಂದೆ ತಾವೇನೂ ಕಲಿಯಲಿಲ್ಲ ಎಂದುಕೊಳ್ಳಬಾರದು. ಬಾಲುವಿನ ಸಂಗೀತ ಜ್ಞಾನ ತುಂಬಾ ವಿಶಾಲವಾದುದು…” ಎಂದು ತಮ್ಮ ಸಾಧಕಸಹೋದರನನ್ನು ಅತ್ಯಂತ ಪ್ರೀತಿಯಿಂದ ಹೃತ್ಪೂರ್ವಕವಾಗಿ ಅಭಿನಂದಿಸುತ್ತಾರೆ.

ಸಂಗೀತ ಕ್ಷೇತ್ರದಲ್ಲಿ ಸಮಾನಾಂತರವಾಗಿ ದುಡಿಯುತಿದ್ದ ಸಾಧಕರಿಬ್ಬರು ಯಾವುದೇ ಅಹಂಕಾರ ಮೊದಲಾದ ಮತಿವಿಕಾರಗಳಿಲ್ಲದೆ ಒಂದೇ ವೇದಿಕೆಯಲ್ಲಿ ಸಮಾಗಮಗೊಳ್ಳುವುದು ದುಸ್ಸಾಧ್ಯ. ಆದರೆ ಎಸ್.ಪಿ.ಬಿ. ಮತ್ತು ಯೇಸುದಾಸ್ ಅವರು ಯಾವುದೇ ಅಂತರಗಳಿಲ್ಲದೆ, ಪರಸ್ಪರ ಗೌರವ ಮತ್ತು ಸಮಾನ ಭಾವಸಂಗಮದಿಂದ ಸುಮಾರು ಮೂವತ್ತು ವರ್ಷಗಳಿಂದ ಅನೇಕ ವೇದಿಕೆಗಳಲ್ಲಿ ಒಟ್ಟಾಗಿ ಹಾಡಿದ್ದು ಮಹತ್ತರವಾದ ಸಂಗತಿ. ತಾನು ಕಿರಿಯ, ಅವರು ಹಿರಿಯ ಎಂಬ ವಯೋಮಾನ ಭೇದಭಾವವಾಗಲೀ, ತಾನು ಈ ಜಾತಿ, ಅವರು ಆ ಜಾತಿ ಎಂಬ ಜಾತಿವ್ಯಸನವಾಗಲೀ, ತನಗಿಂತ ಅವರು ಅಥವಾ ಅವರಿಗಿಂತ ತಾನು ಹೆಚ್ಚು ಚೆನ್ನಾಗಿ ಹಾಡುವುದು ಎಂಬ ಪರಸ್ಪರ ಮೇಲು-ಕೀಳು ಭಾವಾಭಿವ್ಯಕ್ತಿಗಳಿಗಾಗಲೀ ಇಬ್ಬರಲ್ಲೂ ಕಿಂಚಿತ್ತೂ ಜಾಗವಿರಲಿಲ್ಲ. ಒಬ್ಬರೊಳಗೊಬ್ಬರು ಕಾಲೂರಿಕೊಂಡುಬಿಟ್ಟಿದ್ದರು.

ಸಮಾನಾಂತರವಾಗಿ ಸಾಧನೆ ಮಾಡುತ್ತಿರುವ ಸಾಧಕರಿಬ್ಬರು ಮುಖಾಮುಖಿಯಾದ ಅನೇಕ ಸಂದರ್ಭಗಳಲ್ಲಿ ಅವರವರ ಅಹಮ್ಮುಗಳು ಕಂಡುಬರುವುದುಂಟು. ಆದರೆ ಆ ಬಗೆಯ ಯಾವುದೇ ಅಹಮ್ಮುಗಳೂ ಇವರಿಬ್ಬರಲ್ಲಿ ಇರಲಿಲ್ಲ. ಹೀಗಾಗಿ ಸಂಗೀತಸನ್ನಿಧಿಯಲ್ಲಿ ಸಹಯಾನಿಗಳಾಗಿದ್ದ ಅವರ ನಡುವೆ ಯಾವುದೇ ಅಸಂಗತ ಸಂಶಯಗಳಾಗಲೀ, ಅನಾರೋಗ್ಯಕರ ಸ್ಪರ್ಧೆಗಳಾಗಲೀ ಏರ್ಪಡಲಿಲ್ಲವೆಂಬುದು ಮನನೀಯ.

ಯೇಸುದಾಸರೊಂದಿಗಿನ ಸಂಗೀತಯಾನವನ್ನು ಎಸ್.ಪಿ.ಬಿ ಅವರು ಮತ್ತೆ ಮತ್ತೆ ಅವಲೋಕನ ಮಾಡಿಕೊಳ್ಳುತ್ತಿದ್ದರು. ತೆಲುಗಿನ ಟಿವಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತ, “ಪ್ರತಿಯೊಬ್ಬರಿಗೂ ಅವರವರದೇ ಆದ ಪ್ರತಿಭೆ, ಪರಿಪಕ್ವತೆ ಇರುತ್ತದೆ. ಎಂದೂ ನಾವಿಬ್ಬರೂ ಪರಸ್ಪರ ಮೇಲು-ಕೀಳು ಅಂತ ಅಂದುಕೊಳ್ಳಲೇ ಇಲ್ಲ. ಅವರು ಶಾಸ್ತ್ರೀಯ ಸಂಗೀತ ಸಾಧಕರಾದ್ದರಿಂದ ವೇದಿಕೆಯಲ್ಲಿ ವಿವಿಧ ರೀತಿಯಲ್ಲಿ ಹಾಡುತ್ತಿದ್ದರು. ಆದರೆ ನಾನು ಶಾಸ್ತ್ರೀಯ ಸಾಧಕನಲ್ಲದಿದ್ದರೂ ಸಿನಿಮಾ ಹಾಡುಗಳನ್ನು ವಿವಿಧ ರೀತಿಯಲ್ಲಿ ಹಾಡುತ್ತಿದ್ದೆ. ನಾನು ಅವರಂತೆ ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ನಡೆಸಿಕೊಡುವುದು ಅಸಾಧ್ಯ. ಸಿನಿಮಾ ಹಾಡುಗಳನ್ನು ಹಾಡುವಾಗ ನಾನೂ ಅವರಂತೆಯೇ ಚೆನ್ನಾಗಿ ಹಾಡಲು ಪ್ರಯತ್ನಿಸುತ್ತೇನೆ. ಅವರೂ ಸಹ ಸಿನಿಮಾ ಹಾಡುಗಳನ್ನು ನನ್ನಂತೆ ಚೆನ್ನಾಗಿ ಹಾಡಬೇಕೆಂದು ಪ್ರಯತ್ನ ಮಾಡುತ್ತಾರೆ. ಆದರೆ ಹಾಡುವ ಸಂದರ್ಭದಲ್ಲಿ ಅವರಂತೆಯೇ ನಾನು-ನನ್ನಂತೆಯೇ ಅವರು ಹಾಡಬೇಕಲ್ಲ ಎಂದುಕೊಳ್ಳದೆ ಹಾಡಬೇಕಾದ ಹಾಡನ್ನು ಚೆನ್ನಾಗಿ ಹಾಡಬೇಕೆಂದು ಆಲೋಚಿಸುತ್ತಿದ್ದೆವು. ಈ ಬಗೆಯಲ್ಲಿ ನಾವಿಬ್ಬರೂ ತುಂಬಾ ಆಪ್ತತೆಯಿಂದ ಹಾಗೂ ಆನಂದದಿಂದ ಹಾಡಾಡಿಕೊಂಡು ಬಂದೆವು…” ಎನ್ನುವ ಅವರ ಆಂತರ್ಯದ ನುಡಿಗಳನ್ನು ಕಿವಿಗೊಟ್ಟು ಆಲಿಸಿದರೆ ಹೃದಯ ತುಂಬಿಬರುತ್ತದೆ. ಇಂತಹ ಕಲಾಯಾನದ ಅನನ್ಯ ಸಾಧಕಮೈತ್ರಿ ಕಾಣುವುದು ಸಮಕಾಲೀನ ಸಂದರ್ಭದಲ್ಲಿ ಅಪರೂಪದಲ್ಲೇ ಅಪರೂಪವಾಗಿದೆ. ಅಹಂಕಾರದಲ್ಲಿ ಮೆರೆವ, ಅಲ್ಪಸಾಧನೆಯಲ್ಲಿ ಮೈಮರೆವ, ಪರಸ್ಪರ ಕಾಲೆಳೆವ, ಬೆನ್ನಿಗೆ ಚೂರಿ ಹಾಕುವ, ಜಾತಿಮತಿಯಲ್ಲೇ ಮುಳುಗಿಹೋಗುವ, ಅಸಹನೆ-ಅಸೂಯೆಗಳಲ್ಲೇ ಕಳೆದುಹೋಗುವ ವಾತಾವರಣ ವಿಪರೀತವಾಗುತ್ತಿದೆ. ಹೀಗಿರುವಾಗ, ಎಂದಾದರೂ ಯೇಸುದಾಸ್-ಎಸ್.ಪಿ.ಬಿ ಅವರು ಕಲಾಸಾಧನೆಯ ಯಾತ್ರಿಗೆ-ಮೈತ್ರಿಗೆ ದಿಕ್ಸೂಚಿಯಾಗುವಲ್ಲಿ ಯಾವುದೇ ಸಂಶಯವಿಲ್ಲ.

ಇಂದು ಯಾವುದೇ ಕ್ಷೇತ್ರದಲ್ಲಿ ಕಾಣುತ್ತಿರುವ ‘ಭಕ್ತಿಯ ಮೆರವಣಿಗೆ’ಯು ಸಾಧಕರ ಸುಪ್ತಪ್ರಜ್ಞೆಯೋ ಅಥವಾ ಗುಪ್ತಕಾರ್ಯಸೂಚಿಯೋ ಎಂಬ ಅನುಮಾನಗಳು ಹುಟ್ಟಿಕೊಂಡಿರುವಾಗ, ಶರಣರ ತತ್ವಜ್ಞಾನದಲ್ಲಿ ಮೂಡಿಬಂದಂತೆ ‘ಭಕ್ತಿಯೆಂಬುದು ತೋರುಂಬ ಲಾಭ’ವಾಗುತ್ತಿರುವಾಗ, ಭಕ್ತಿ-ಜಾತಿ-ರಾಜಕಾರಣವು ಅಮಾನವೀಯ ಅಪವಿತ್ರ ಮೈತ್ರಿಯಾತ್ರಿಯಾಗಿರುವಾಗ, ದೇವರುಗಳನ್ನೇ ನೆತ್ತಿಗೆ ಕಟ್ಟಿಕೊಂಡು ದೌರ್ಜನ್ಯವೆಸಗಲು ಹವಣಿಸುತ್ತಿರುವಾಗ, ಶಿಷ್ಟ-ಪರಿಶಿಷ್ಟಗಳ ಅಂತರಗಳು ಮತ್ತಷ್ಟು ಆಳವಾಗುತ್ತಿರುವಾಗ, ಮನಸ್ಸುಳ್ಳವರಿಗೆ ಬೇಕಾದ ಅರಿವನ್ನೂ ಆನಂದವನ್ನೂ ಮೇಲಾದ ಜೀವನ-ಸಾಧನೆಗೆ ಬೇಕಾದ ವಿವೇಕಯುತ ವಿನಯವನ್ನೂ ನೀಡುವ ಎಸ್.ಪಿ.ಬಿ ಅವರ ಸಂಗೀತಯಾನವು ಮಾನವೀಯತೆಯ ಭಕ್ತಿ ಮತ್ತು ಶ್ರದ್ಧಾಶಕ್ತಿಗಳ ಜೈವಿಕ-ಸಮ್ಮಿಲನದಿಂದ ಭವಿಷ್ಯದ ಕಲಾಸಾಧಕರಿಗೆ ಮಹಾಪಾಠವಾಗಿದೆ. ಅಪರಿಮಿತ ಅರಿವು ಹಾಗೂ ಅಂತಃಕರಣವನ್ನು ಬಿತ್ತಿಬೆಳೆದ ಈ ನೆಲದ ಪ್ರಜ್ಞಾಪರಂಪರೆಯ ಪಾರಮಿತ ಹೃದಯಸೂತ್ರಕ್ಕೆ ದ್ಯೋತಕವಾಗಿದೆ.

ಲೇಖಕರು: ಸಹಸಂಶೋಧಕರು, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ, ಮಾನಸಗಂಗೋತ್ರಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT