ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವನ | ಇಲ್ಲಿ ಯಾರಿಗೂ ವಿಳಾಸವಿಲ್ಲ.. 

Published 31 ಡಿಸೆಂಬರ್ 2023, 0:30 IST
Last Updated 31 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ಅಂಚೆ ಡಬ್ಬಿಗೆ ಬಂದು ಬೀಳುವ ಪತ್ರಗಳಲ್ಲಿ

ಹೋಗಿ ಸೇರುವವರ ಹೆಸರಿನ

ಕೆಳಗೆ

ಕೇರ್ ಆಫ್ ಇರುತ್ತದೆ

ಇಲ್ಲವೆ

ವೈಫ್ ಆಫ್

ಸನ್ ಆಫ್

ಡಾಟರ್ ಆಫ್‌ಗಳೂ ಕೂಡ..

ಕೆಲವಕ್ಕೆ ಈ ಆಫ್‍ಗಳು ಇರುವುದಿಲ್ಲ

ಬದಲಿಗೆ

ಅಧ್ಯಾಪಕ

ಹಿರಿಯ ವಕೀಲ

ಕಿರಿಯ ಅಭಿಯಂತರ

ವೈದ್ಯ.. ಹೀಗೆ ಹತ್ತು ಹಲವು..

ರಮೇಶ

ಪದ್ಮಾವತಿ

ಮಧುಕರ

ಮಂಗಳ.. ಹೀಗೆ ಬರೆದರೆ ಸಾಲದೆ

ಬರೀ ಹೆಸರು ಬರೆದರೆ ಸೇರಲಾರವೆ

ಊರನು, ಮನೆಯನು!?

ಎಷ್ಟೊಂದು ಜನರಿದ್ದಾರೆ ಇಲ್ಲಿ 

ಒಂದು ಹೆಸರಿಗೆ

ಒಂದೇ ಊರಲಿ ನೂರಾರು ಹನುಮರು

ಇರಬಹುದು ಹಾಗೆಯೇ

ಹತ್ತಾರು ದೀಪು, ದಿಲೀಪು 

ತುಳುಕುವ ಬಸ್ಸುಗಳಲಿ

ದೈನಿಕದ ರೈಲುಗಳಲಿ

ರಸ್ತೆಗಳಲಿ, ಬೀದಿಗಳಲಿ

ಹೆಗಲಿಗೆ ಬ್ಯಾಗು ಸಿಕ್ಕಿಸಿಕೊಂಡು 

ಈ ಜನ ಎತ್ತ ನಡೆದಿದ್ದಾರೆ..?

ರಾತ್ರಿಯ ಪಾಳಿಯಲ್ಲಿ

ಕಂಪ್ಯೂಟರ್ ಮುಂದೆ ಕೂತು

ಏನನ್ನು ತಡಕಾಡುತ್ತಿದ್ದಾರೆ?

ಏನ್ನನ್ನೊ ಹುಡುಕುವ ಧಾವಂತ

ಏನ್ನನ್ನೊ ಕಳೆದುಕೊಂಡ

ಆತಂಕ! 

ತಪ್ಪಿಸಿಕೊಂಡವರಂತೆ, ತಪ್ಪಿಸಿಕೊಳ್ಳಲು

ಹವಣಿಸುವವರಂತೆ

ಯಾರನ್ನೊ ಬೆನ್ನತ್ತಿದ್ದವರಂತೆ 

ಜನ ಯಾಕೆ ಓಡುತ್ತಿದ್ದಾರೆ? 

ಏನನ್ನು ಹುಡುಕುತ್ತಿದ್ದಾರೆ?

ಕಳೆದು ಹೋಗಿರಬಹುದೆ ಅವರ 

ವಿಳಾಸ?

ಅಸಲಿಗೆ ಅವರಿಗೆ ಒಂದು ವಿಳಾಸವಾದರೂ

ಎಲ್ಲಿತ್ತು?

ಇಲ್ಲಿ ಯಾರಿಗೆ ಇದೆ ಅವರಿಗೆ 

ಅವರದೆ ವಿಳಾಸ.?

ಹೊರಟಿರಬಹುದೆ 

ಅವರ ವಿಳಾಸವನನ್ನೆ ಅವರೇ

ಹುಡುಕಿಕೊಂಡು?

ಸಿಗಬಹುದೇ ಅವರಿಗೆ ಸರ್ಕಲ್ಲಿನಲ್ಲಿ

‘ಮುಂದೆ ಎಡಕ್ಕೆ ತಿರುಗಿ ಸ್ವಲ್ಪ ನಡೆದು

ಮತ್ತು ಬಲಕ್ಕೆ ತಿರುಗಿರಿ’ ಎಂದು 

ಹೇಳುವ ಅಸಾಮಿಯೊಬ್ಬ!?  

ಹೇಗೆ ತಲುಪಬೇಕು ಟಪಾಲು ಗಾಡಿ

ಯಾವ ಅಭಿಧಮನಿಯಿಂದ

ಹೊರಟು

ಇನ್ಯಾರದೊ ಅಪಧಮನಿಗೆ

ಉಗುಳು ಬಳಿದು ಹಚ್ಚುವ ಅಂಚೆ ಚೀಟಿ

ಶ್ರೀ, ಕ್ಷೇಮ, 

ಉಭಯ ಕುಶಲೋಪರಿ ಸಾಂಪ್ರತ

ಕೈ ಕಾಲು ನಿರುಮ್ಮಳವಾಗಿ ಚಾಚಿ ಮಲಗಿದ

ಶಾಯಿ ಅಕ್ಷರಗಳು

ಕಾಯುವ ಒಕ್ಕಣೆಗಳು

ಹೇಳಬೇಕಾದ ಬವಣೆಗಳು

ಮುದ್ರೆ ಬೀಳಿಸಿಕೊಂಡ ಖುಷಿಯಾದ

ಅಂಚೆಚೀಟಿಯೊಳಗಿನ ನವಿಲು

ತಲುಪಬೇಕಿತ್ತು

ಹೃದಯದ ಪಿನ್‍ಕೋಡ್‍ಗಳ

ಹುಡುಕಿಕೊಂಡು ಹೋಗಿ..

ಕ್ಷಮಿಸಿ

ಈಗ ಪಿನ್‍ಕೋಡ್‍ಗಳು ಲಭ್ಯವಿಲ್ಲ

ಇಲ್ಲಿ ಯಾರಿಗೂ ವಿಳಾಸವಿಲ್ಲ

ಹಾಂ, 

ಪಿನ್‍ಕೋಡ್ ಎಂದರೆ

ಪೋಸ್ಟೆಲ್ ಇಂಡೆಕ್ಸ್‌ ನಂಬರಷ್ಟೇ

ಅಲ್ಲ,

ಪರ್ಸನಲ್ ಇನ್ಟಿಮೇಟ್ ನಂಬರ್ 

ಕೂಡ!

ಕಟ್ಟಿದ ಮನೆಗಳು ವಿಳಾಸವಾಗುತ್ತವೆ

ಪೊರೆದವರು ವಿಳಾಸವಾಗುತ್ತಾರೆ

ಪೊರೆಯಬೇಕಾದರು

ಕೈ ಹಿಡಿದವರು

ಕೆಲಸಗಳು, ಹೆಸರುಗಳು, ಧನಕನಕ

ಕೀರ್ತಿ ಮುಕುಟದ ನವಿಲುಗರಿಗಳು

ಎಲ್ಲವೂ ವಿಳಾಸವಾಗುತ್ತವೆ

ಆದರೆ ಅವನಿಗೆ ಅವನೇ

ವಿಳಾಸವಿಲ್ಲದ ದಾರಿಹೋಕ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT