ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈ.ಕೆ.ಸಂಧ್ಯಾ ಶರ್ಮ ಅವರ ಕವನ: ಗಡಿಯಾರ ಕಳೆದುಹೋಗಿದೆ

Published 13 ಜನವರಿ 2024, 23:30 IST
Last Updated 13 ಜನವರಿ 2024, 23:30 IST
ಅಕ್ಷರ ಗಾತ್ರ

ಗಡಿಯಾರ ಕಳೆದುಹೋಗಿದೆ

ನಮ್ಮ ಮನೆಯ ಅತ್ಯಮೂಲ್ಯ

ಜೀವದುಸುರಿನ

ಗಡಿಯಾರ ಕಳೆದುಹೋಗಿದೆ

ಅಸೀಮ-ಅಪೂರ್ವ

ಪರ್ಯಾಯವಿರದ ಅಸ್ಮಿತೆಯ

ಗಡಿಯಾರ ಕಳೆದುಹೋಗಿದೆ

ಪಾದರಸದ ಚುರುಕು

ಶಿಸ್ತಿಗನ್ವರ್ಥ ಬದುಕು

ಜಡ್ಡು - ಜಡತೆಗೆ ಜಾಗಟೆ

ಲಯದ ಬದುಕಿನ ಹಳಿಗೆ

ಸಾಮರಸ್ಯದ ತೂಕ

ಸುಸ್ಥಿತಿಯಲ್ಲಿದ್ದೂ ನಮ್ಮ

ಗಡಿಯಾರ ಕಳೆದುಹೋಗಿದೆ

ಕಾಲ ಚೌಕ್ಕಟಿನ ನಿಯತಿ

ಮೀರದ ಮಹತಿ

ನಿತ್ಯನೂತನ ಗಂಗೆ

ಕಸವಾಗಿ ಕೊಳೆಯದಂತೆ

ರಸವಾಗಿ ಹೊಮ್ಮಿಸುವ

ಚಿಗುರ ಜೀವಧಾತು

ಚೈತನ್ಯ ಪ್ರತಿಫಲನದ

ಗಡಿಯಾರ ಕಳೆದುಹೋಗಿದೆ

ಜೀವದ್ರವ್ಯದ ಸೊಗಡು

ಪರೋಪಕಾರಿಯ ಹೊಳಪು

ಗಡಿ ಹಾರದ ಸಂಯಮದ ಒನಪು

ಅತಿರೇಕವಿರದ ನಡೆ ನುಡಿಯ

ಟಿಕ್ ಟಿಕ್ ಎಂಬೋ

ಗಡಿಯಾರ ಕಳೆದುಹೋಗಿದೆ

ಕಳ್ಳತನದ ವಂಚನೆಗೆ

ದೂರು ನೀಡುವುದೆಲ್ಲಿ?

ಯಮನೂರ ವಿಳಾಸಕೆ

ಗಿರಕಿ ಹುಡುಕಾಟ

ವ್ಯರ್ಥ ಮೊರೆದಾಟ

ಸರ್ಪಗಾವಲ ಸುಪರ್ದಿನಲಿದ್ದೂ

ಗಡಿಯಾರ ಕಳೆದುಹೋಗಿದೆ

ಇಡಿಯಾಗಿ ಕಳೆದ ಗಡಿಯಾರ

ಬಿಡಿಯಾಗಿ ಚೆದುರಿಹೋಗಿದೆ

ಭಿನ್ನ ತುಣುಕುಗಳ ಬಣವೆ

ಅಸ್ತಿತ್ವ ಕರಗಿದ ನಮ್ಮ

ಗಡಿಯಾರ ಕಳೆದೇಹೋಗಿದೆ

ಅಗಮ್ಯ -ಅಗೋಚರ

ಮರಳು ಯತ್ನ

ಕರುಳ ಕುರುಹಿಲ್ಲ

ಎದೆಬಡಿತ ಸ್ತಬ್ಧ-ನಿಶ್ಶಬ್ದ

ನಿರ್ಜೀವ ಝರಿ – ನಿಷ್ಪಂದ

ಅಕ್ಕನೆಂಬೋ ಚಿನ್ನಲೇಪಿತ

ವಜ್ರ ಹರಳಿನ

ಗಡಿಯಾರ ಕಳೆದುಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT