೧ ಮಳೆಗಾಲದ ಮೋಡಗಳು ಒಂದು ಚೂರೂ ಹೊರಪು ಕೊಡದೇ ಸುರಿಸುತ್ತಿವೆ ಅವಳ ನೆನಪು ಹೀಗೇ ಸದಾ ಯಾಕೆ ಕಾಡಬೇಕು ನನ್ನ!? ಅದೇ ಒದ್ದೆ ಬಟ್ಟೆ ಮತ್ತದೇ ಕೆಸರ ದಾರಿ ಆಕಾಶದಲಿ ಇತ್ತಿಂದತ್ತ ಹರಿದ ಕೋಲ್ಮಿಂಚಿನ ಸೆಳಕು!
೨ ಬಿಸಿಲು ಹಸಿದು ಬಂದವರಂತೆ ಅಂಗಳದಲ್ಲೇ ಕುಳಿತಿದೆ ನನ್ನೊಳಗಿನ ಅವಳ ನೆನಪ ಜ್ವಾಲೆಗೆ ಮತ್ತಷ್ಟೂ ಬೆಂಕಿ ಸುರಿದಿದೆ ಒಲೆ ಹಚ್ಚದೆಯೇ ರೊಟ್ಟಿ ಸೀದು ಹೋಗಿದೆ ತಿನ್ನಲು ಚಾಚಿದ ಕೈಯ್ಯೊಳಗೆ ಕೆಂಡದುಂಡೆಗಳ ಹೊಳಪು
೩ ಕಂಬಳಿಯೊಳಗೆ ಗಡಗಡಾ ನಡುಗುತ್ತಾ ಕುಳಿತಿರುವ ಚಳಿ ಒಂದು ಸಣ್ಣ ನೆನಪು ಬೂದಿ ಮುಚ್ಚಿದ ಒಲೆಗೆ ತಿದಿಯೊತ್ತಿದಂತಾಯ್ತು ಎದ್ದು ಹೊರಗೆ ಬಂದು ಮೋಟು ಬೀಡಿಗೆ ಕಡ್ಡಿಗೀರಿ ಉರಿವ ಸೂರ್ಯನಿಗೆ ಸಡ್ಡು ಹೊಡೆದೆ
೪ ಅದೇಕೋ ಒಣಗಿದ ಕೆರೆಯಂಗಳದ ಬಿರುಕಿನ ತುಣುಕುಗಳು ನನ್ನ ಈ ತುಟಿಯನ್ನಾವರಿಸಿವೆ ಕಡಲ ತುಂಬಾ ಅಪ್ಪಿಕೊಂಡಿದ್ದ ಉಪ್ಪು ಇಂದೇಕೋ ಕಣ್ಣ ಕುಳಿಯೊಳಗೆ ಅವಿತು ಕುಳಿತಿದೆ ಅಗೋ ಅಲ್ಲಿ ಈಗವಳ ಕಾಲ ಗೆಜ್ಜೆಯ ಸಪ್ಪಳ ಎದೆಯ ರಾಗಕೆ ಇದ್ದಕ್ಕಿದ್ದಂತೆ ಉಕ್ಕಿ ಹರಿವ ಭರಪೂರ ಪ್ರವಾಹ
೫ ಹೀಗೇಕೆ ಹಾಳು ಬಿದ್ದ ಗೋಡೆಗೆ ಹಾರೆ ಹಾಕಿ ಮೀಟಿ ಕೆಡವುವ ಉಮೇದು ಉಫ್ ಎಂದರೆ ತಾನೇ ಹಾರಿ ಹೋಗುವ ಹಾಗಿರುವಾಗ ಗಾವುದ ಗಾವುದ ದೂರ ಥೂ ಈ ಹಾಳು ಒಂಟಿ ಕೂದಲು ಎಲ್ಲಿಂದ ಹಾರಿ ಬಂತೋ ಸೋಜಿಗಕ್ಕೆ ಕೈ ಬೆರಳುಗಳು ವಸಂತದಲಿ ಚಿಗಿವ ಮಾವಿನ ಮರದಂತೇಕಾದವೋ
೬ ಸಂತೆಯೊಳಗಿನ ಸಂತನಂತೆ ಮೌನವೇ ಮಾತಾದವನಿಗೆ ಅದಾವಳೋ ಮುಡಿದ ಮಲ್ಲಿಗೆಯ ವಾಸನೆಯ ರುಚಿ ಹೂವ ಹುತ್ತದೊಳಗೆ ಕೈಯಿಟ್ಟರೆ ಮೈ ತುಂಬಾ ಮರಿ ನಾಗರಗಳ ಮೆರವಣಿಗೆ ಇರುಳ ಹಾದಿಯ ತುದಿಯೇರಿದ ಸೂರ್ಯ ನಿಬ್ಬೆರಗಾಗಿ ನಿಂತಲ್ಲಿಯೇ ನಿಂತ ಕನಸುಗಳು ಬಣ್ಣದಲ್ಲಿದ್ದರೆ ಅವರಪ್ಪನ ಗಂಟೇನು ಹೋಗುತ್ತಿತ್ತು!