ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಉಮೇಶ ತಿಮ್ಮಾಪುರ ಅವರ ಕಥೆ: ದೈವದ ಹೆಣ

Published 24 ಫೆಬ್ರುವರಿ 2024, 23:30 IST
Last Updated 24 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಇಳಿಹೊತ್ತು ಆದಂಗೆಲ್ಲ ಜನ ನವಿಲುಕೊಳ್ಳ ಬಾವಿಗೆ ಜಮಾ ಆಗಲಿಕ್ಕೆ ಹತ್ತಿದ್ರು. ಕೆಲವು ಜನ ಇನ್ನೂ ಊರಾಗ ಗುಡಿ ಕಟ್ಟಿಮ್ಯಾಗ ಕುಂತು ಈಗಿನ್ನು ಗದಗ ಬಿಟ್ಟಾರಂತ ಊರು ಮುಟ್ಟಾಕ ಇನ್ನೂ ಮೂರು ತಾಸು ಬೇಕು, ಅಲ್ಲಿಗೆ ಹೋಗಿ ಕುಂತರ ಏನು ಮಾಡೋದು ಹಾರೋಗೇರಿ ಸನ್ಯಾಕ ಬಂದಾರಂದ್ರ ಹೋಗಾಕ ರ‍್ತ ಅಂತಾ ಲೆಕ್ಕ ಹಾಕೊಂಡು ಕುಂತಿದ್ರು. ಹೆಣ್ಣು ಮಕ್ಕಳು ಮೊದಲ ಕಳ್ಳಹರಕರು. ಹಂಗಾಗಿ ಸುದ್ದಿ ಕೇಳಿದ ಕೂಡಲೇ ತ್ವಾಟದ ಮನಿಯಾಗ ಜಮಾ ಆಗಿದ್ರು. ಅಳೋರು, ಅಳೋರನ ಸಂಭಾಳಸೋದು ನಡೆದ ಇತ್ತು. ಅದಕ ಅನ್ನೋದು ಮನಿಯಾಗ ಹೆಣ್ಣು ಮಕ್ಕಳ ಇರಬೇಕು.


ಕಡೀಕ ಸತ್ತಾಗ ಚಂದಂಗ ಹಾಡ್ಯಾಡಿಕೊಂಡು ಅಳುತಾವು. ತ್ವಾಟದ ಮನಿಯಾಗ ಸತ್ತಾಕಿ ಸುದ್ದಿ ಆಕಿ ಹುಟ್ಟಿದಾಗಿಂದ ಸಾಯೋತನಕ ಕೊಂಡಾಡಿ ಅಳೋದನ್ನು ಕೇಳೋದು ಒಂದು ಚಂದಾಗಿತ್ತು. ಇತ್ತಲಾಗ ಗಂಡಸರ ಕೆಲಸನ ಬ್ಯಾರೆ. ಹೊಲದ ತುಂಬ ಅಲ್ಲಲ್ಲಿ ನೆರಳಿಗೆ ಕುಂತಗೊಂಡು ಎಣ್ಣಿ ಸಡಗರ ನಡೆಸಿದ್ರು, ಸತ್ತ ಮನಿ ಸಂಕಟ ಇವರಿಗೆ ಗೊತ್ತಾಗೋದು ಹೊಟ್ಟಿಗೆ ಎಣ್ಣಿ ಬಿದ್ದ ಮ್ಯಾಗ, ನಾವು ಅದೀವಿ ನೀ ಅಂಜಬ್ಯಾಡ ತಮ್ಮ ಸಲೀಸಾಗಿ ಕೆಲಸ ಮುಗಿಸಿಬಿಡ್ತಿವಿ. ಅವನವ್ವನ ನಮಕಿಂತ ದೊಡ್ಡದೈತನು ಅದು, ಅಂತಾ ಒಬ್ಬ ಅಂದ್ರ, ಅಕ್ಕನ ಸಲುವಾಗಿ ಇಷ್ಟೆಲ್ಲಾ ಖರ್ಚು ಮಾಡತೀ ಅಂದ್ರ ಅಕ್ಕನ ಮ್ಯಾಗ ಎಷ್ಟು ಜೀವಿದ್ದಿ ಅಂತ ಇದರ ಮ್ಯಾಗ ಗೊತ್ತಾಗುತ್ತ ಅಂತಾ ಮತ್ತೊಬ್ಬ, ಸತ್ತವರಿಂದ ಯಾರರ ಸಾಯಕಾಗುತ್ತನು ತಮ್ಮ ಚಂದಂಗ ಅಕೀ ನಮ್ಮವ್ವನ ಚಾಕರಿ ಮಾಡಿ ಮುಗಿಸಿಬಿಡನು. ಒಡ ಹುಟ್ಟಿದ ಅಕ್ಕ ಅಲ್ಲದಿದ್ದರು ಸ್ವಂತ ಅಕ್ಕನಂಗ ನೋಡಿಕೊಂಡು ಬಂದಿದ್ದಿ ಸತ್ತಮ್ಯಾಗೂ ಇಷ್ಟೆಲ್ಲ ಖರ್ಚ ನೋಡಿಕೊಂಡಿದಿ ಅಂದ್ರ
ನಿನ್ನಂಥ ಶೂರ ಯಾರದರ ನಮ್ಮೂರಾಗ. ಅತ್ತ ಮಕ್ಕಳ ಕೈಯಾಗ ಹತ್ತು ರೂಪಾಯಿ ಕೊಡದ ಕಾಲ ಇದು ಅಂತಾ ಇನ್ನೊಬ್ಬ ಹೇಳಿ ಯಲ್ಲನಗೌಡನ ಅಟ್ಟಕ್ಕೇರಿಸಿ ಹೊಟ್ಟಿ ತುಂಬ ಕುಡಿದು ಹೆಣ ಬರೋದ್ರೊಳಗ ನಿಶೆ ಏರಿ ತೂರಾಡುತ್ತಿದ್ರು.


ಗಾಡಿ ಪಾಪನಾಶಿ ದಾಟಿದೆ ಅಂತ ವರ್ತಮಾನ ತಿಳಿದು ಊರ ಜನ ಮತ್ತೊಮ್ಮೆ ಖಾತರಿ ಮಾಡಿಕೊಂಡು ಗುಡಿಕಟ್ಟಿಯಿಂದ ಎದ್ದು ನವಿಲುಕೊಳ್ಳದ ದಾರಿ ಹಿಡ್ದಿದ್ರು. ತ್ವಾಟದ ಮನಿ ಸುತ್ತ ಅಲ್ಲಲ್ಲಿ ಜಮಾಯಿಸಿದ ಮಂದಿ, ಗುಡ್ಡದ ವರ‍್ಯಾಗ ಗಿಡದ ನೆಳ್ಳಿಗೆ ಕುಂತು ಮಾತಿಗಿಳಿದ ಜನ, ಹೆಣ ಇನ್ನೇನು ಬಂದೆ ಬಿಡ್ತು ಅಂದಾಗಲೆಲ್ಲ ಜೋರಾಗುವ ಅಳೋ ದನಿ, ದಾರು ಗುಂಗಿನ್ಯಾಗ ತೂರಾಡಿ ನೆಲಕಟ್ಟಿದವರ ಕಡೆ ಕಣ್ಣಾಡಿಸೊ ಹಿರಿಕರು ಅಷ್ಟರೊಳಗ ಹೆಣ ಹೇರಿಕೊಂಡು ಬಂದ ಗಾಡಿ ಊರ ಬಾಗಲ ಸೇರಿಕೊಂಡಿತ್ತು. ಸಾಯೋ ಮೊದಲು ತೋರಿಸೋ ಖರ್ಚಿನಕ್ಕಿಂತ ಸತ್ತಮ್ಯಾಗ ಮಾಡೋ ಖರ್ಚು ಜಾಸ್ತಿಯಾಗಿರೋ ಈ ಕಾಲದಾಗ ಮನಿ ಯಜಮಾನಗ ಹೆಣದ ದುಃಖಕ್ಕಿಂತ ದುಡ್ಡಿನ ಹೊಟ್ಟಿಬ್ಯಾನಿ ಜಾಸ್ತಿ ಆಗಿರತೈತಿ. ಸ್ಮಶಾನದಾಗ ಕಟ್ಟಿಗಿ ಕೂಡಿ ಹಾಕೋರದು, ಹಲಗಿ ಹೊಡಿಯೋರದು, ಮಂತ್ರ ಹೇಳೋರದು, ಹೆಣದ ಮುಂದ ಮಂದಿ ಸೇರಿಸೋರ ತೆವಲ ತೀರಸೋದು ಸಣ್ಣ ಮಾತಲ್ಲ. ಇದನ್ನೆಲ್ಲ ಅರ್ಥ ಮಾಡಿಕೊಂಡಿದ್ದ ಸುಬ್ಬಣ್ಣ ರಾತ್ರೋ ರಾತ್ರಿ ನಡೆಯೋ ಭಜನಾದೊಳಗ-
ಬಡವರು ಸತ್ತರ
ಸುಡಲು ಸೌದೆಗಳಿಲ್ಲ
ಒಡಲ ಬೆಂಕ್ಯಾಗ ಹೆಣ ಬೆಂದು |
ಒಡಲ ಬೆಂಕ್ಯಾಗ ಹೆಣ ಬೆಂದು ದೇವರೆ
ಬಡವರಿಗೆ ಸಾವು ಕೊಡಬ್ಯಾಡ ||
ಅಂತ ಹಾಡ ಹಾಡಿಕೋಂತ ಮಂದಿಗೆ ದಿಗಿಲು ಮುಟ್ಟಿಸಿದ್ದ.
ಬಾಳವ್ವನ ಹೆಣ ಮೈ ತೊಳಿಸಿ ಗ್ವಾಡಿಗೆ ಚಂದಾ ಮಾಡಿದ್ರು ಇನ್ನೇನು ಪೂಜೆ ಸಲ್ಲಬೇಕು ಸ್ವಾಮಿಗಳ ಬಂದಿಲ್ಲ. ದೌಡ ಕರಕ್ಕೊಂಡು ಬಾರಲೇ ಹನುಮ ಅಂತ ಹಿರಿಯರು ಬಾಲ ಹನಮಗ ಹೇಳದ ತಡ ಗಾಡಿ ಕಿಕ್ಕ ಹೊಡದ ಬಿಟ್ಟ. ಪಕ್ಕದ ಊರ ಷಡಕ್ಷರಿ ಸ್ವಾಮಿ ಸುತ್ತಲೂ ಊರಿಗೆ ಬೇಕಾದ ಮನುಷ್ಯ. ಈ ವರ್ತಮಾನ ಕಿವಿಗೆ ಬಿದ್ದಿತ್ತು. ಯಾರಾದ್ರು ಕರಿಯಾಗ ಬಂದೇ ಬರತಾರ ಅನ್ನೋ ಖಾತ್ರಿಯೊಳಗ ತಯಾರಾಗಿ ಕುಂತಿದ್ರು. ಅಷ್ಟೊತ್ತಿಗೆ ಬಾಲ ಹನುಮ ಬಂದಿದ್ದ ನೋಡಿ ತಡಮುರಿಸಿ ಬಂದವರ ಗಾಡ್ಯಾಗ ಕುಂತ ಬಿಟ್ರು. ಸ್ವಾಮಿ ಅವಸರ ನೋಡಿದ ಹನುಮ ಅವಕ್ಕಾದ. ಸತ್ತವರ ಮನಿಯವರಿಗೆ ಇಷ್ಟ ಅವಸರಿಲ್ಲ, ಅಂತದರಾಗ ಈ ಸ್ವಾಮಿಗೆ ಯಾಕ ಇಷ್ಟು ಅವಸರ. ಇದಕ್ಕ ಬ್ರೇಕ್ ಹಾಕಬೇಕು ಅಂದುಕೊಂಡು ಊರು ದಾಟಿ ತಾಂಡೆ ಕತ್ರಿಗೆ ಬಂದು ಗಾಡಿ ನಿಲ್ಲಿಸಿ ಯಜ್ಜ ನೀನು ಈ ಪೂಲಿನ ಕಟ್ಟಿಮ್ಯಾಗ ಕುಂದುರು ನಾ ಸ್ವಲ್ಪ ಒಳಗ ಹೋಗಿರ‍್ತಿನಿ ಅಂದು ತಾಂಡಾದಾಗ ಹೋದ. ಹೋದ ಹನುಮ ತಾಸಾದ್ರು ಬರಲಿಲ್ಲ. ಇಲ್ಲಿ ಸ್ವಾಮಿಗೆ ದೊಡ್ಡ ಸಂಕಟ, ದಾರಿ ಹಿಡಿದು ಹೋಗುವರು, ಬರೋವರು ಯಾಕ ಸ್ವಾಮಿಗಳ ಇಲ್ಲಿ ಕುಂತಿರಿ. ನೀವರ ಇತ್ಲಾಗ ಹಾಯೋರಲ್ಲ ಅಂತಾ ಕಿಚಾಯಿಸುವ ಮಂದಿಗೆ ಉತ್ತರ ಕೊಡಲಾರದ ಒದ್ದಾಡತಿದ್ರು.


ಕೆಲವರಂತೂ ಸ್ವಾಮಿ ಯಾವಾಗ ಸುರು ಹಚ್ಚಗೊಂಡಾನ ಅಂದು ಹಲ್ಲು ಕಿಸ್ತು ಹೋಗೊ ಜನರಿಂದ ತಪ್ಪಿಸಿಕೊಳ್ಳಲಾರದೆ ಧರ್ಮ ಸಂಕಟಕ್ಕ ಸಿಕ್ಕೊಂಡು ಹನುಮ ಮಾಡಿದ ಪಿಕಲಾಟಕ್ಕೆ ಕಂಗಾಲಾಗಿ ಹೋಗಿದ್ದ.
ಎಷ್ಟೋತ್ತಿನ ಮ್ಯಾಗ ಬಂದ ಹನುಮ ಇನ್ನೂ ಇಲ್ಲೆ ಕುಂತಿರೆನು ನೆಡಕೊಂಡು ಊರು ಮುಟ್ಟೇ ಬಿಟ್ಟರಂತ ತಿಳಕೊಂಡಿದ್ದೆ, ನಿಮ್ಮ ಅವಸರನ ಹಂಗಿತ್ತಲ್ಲ ಅಂದ. ಸಾವಕಾಸ ಬಂದು ಗಾಡಿ ಹತ್ತಿದ ಸ್ವಾಮ್ಯಾರು ಸವಕಾಸ ಬಿಡು ಯಾಕೋ ಮನುಷ್ಯ ಪರಕ ಆಗಿದಿ, ಗಡಿಬಿಡಿ ಮಾಡಬೇಡ ಅಂದ್ರು. ನಂದೇನು ಗಡಿಬಿಡಿ ಇಲ್ಲ ಬೇಕಂದ್ರ ಇನ್ನೂ ತಾಸು ತಡದ ಹೋಗೋಣಂದ್ರ ಹೋಗೋನು.


ಊರಾಗಿಂದ ಹತ್ತು ಸಲ ಫೋನ ಬಂದ್ರು ಹೆದಿರಿಲ್ಲ ಮಗ ನಾನು. ಸ್ವಾಮಿ ಅನುಷ್ಠಾನಕ್ಕ ಕುಂತಾನ ಬರೋದು ಇನ್ನೂ ತಾಸು ಲೇಟಾಗುತ್ತ ಅಂತಾ ಹೇಳಿನಿ. ಸತ್ತ ಹೆಣ ಸುಟ್ಟು ಬರಾಕ ತಾಸು-ಎರಡು ತಾಸು ತಡ ಆದ್ರ ಜಗತ್ತು ಪ್ರಳಯ ಆಗುತ್ತನು ಅಂದ. ಮುಂದಕತ ಹೋಗಿ ಮತ್ತ ಗಾಡಿ ನಿಲ್ಲಿಸಿ ಸ್ವಲ್ಪ ಇಳಿರಿ ಇನ್ನೊಂದು ಕೆಲಸ ಬಾಕಿ ಐತಿ ಅದನೊಂದು ಮುಗಿಸಿ ಬಿಡ್ತಿನಿ ಅಂದು ಬಕ್ಕಣದಾಗಿನ ಸ್ಟಾರ ತಗದ ಬಾಯಿಗೆ ಹಾಕೊಂಡ, ಅವಸರ ಮಾಡಬ್ಯಾಡ್ರಿ ಅಂತಾ ಹೇಳಿ ಬಿಟ್ಟಿನಿ, ಸತ್ತರ‍್ನ ಅಷ್ಟು ದೌಡ ತಗೊಂಡು ಹೋಗಿ ಸುಟ್ಟು ಬಂದ್ರ ಹೆಣಕ್ಕೇನ ಬೆಲೆ ಐತಿ ಅಂದ. ಷಡಕ್ಷರಿ ಸ್ವಾಮಿಗಳ ಮೈಯಾಗಿನ ಶಕ್ತಿ ಹಂತ ಹಂತವಾಗಿ ಸೋರಿ ಹೋಗಿ ವಾಪಸ್ ಮನಿ ಮುಟ್ಟಿಸಿದ್ರ ಸಾಕು ಅನ್ನೋ ಹಂತಕ್ಕ ಬಂದು ನಿಂತಿದ್ರು, ಹನುಮ ಈಗ ತತ್ವಜ್ಞಾನಿ ಆಗಿ ಹೋಗಿದ್ದ. ಸ್ವಾಮಿಯ ಪ್ರಶ್ನೆಗಳಿಗೂ ಅವನ ಹತ್ರ ಉತ್ತರ ರೆಡಿ ಇತ್ತು. ಹಂಗಾಗಿ ಸ್ವಾಮಿ ತುಟಿ ಒಣಗಿಸಿಕೊಂಡು ಮುಖನ ಕೂಡಿ ಹಾಕಿದ ಖೌದಿಯಂಗ ಮಾಡಿಕೊಂಡು ನಿಂತಿದ್ರು.


ಹತ್ತರಿ ಸಾವಕಾಸ ಹೋಗೋಣ ಅಂದ ಹನುಮನ ಮ್ಯಾಗಲ ಖಾತ್ರಿ ಕಳಕೊಂಡ ಸ್ವಾಮಿಗಳು ಕೈಯಾಗ ಜೀವ ಹಿಡಕೊಂಡು ಕುಂತ್ರು. ಈಗ ಅವರಿಗೆ ನರಕ ಮೂರಗೇಣು ಕಂಡಂಗ ಆಗುತ್ತಿತ್ತು. ಇತ್ತ ಹನುಮನ ದಾರೀನ ಕಾಯ್ಕೊಂಡು ಕುಂತ ಊರಾಗಿನ ಜನಕ ಕಳವಳ ಸುರು ಆತು. ಇಷ್ಟ ಹೊತ್ತಾದ್ರು ಯಾಕ ಬರಲಿಲ್ಲ, ಕುಡುಕನನ ಮಗ ಎಲ್ಲಿ ಹೋಗಿ ತಾಂಡಾದಾಗ ಕುಡಕೋಂತ ಕುತ್ನೊ ಏನೋ ಅಂತಾ ಮಾತಾಡೊ ಹೊತ್ತಿಗೆ ಓಡಿ ಬಂದ ಹುಡುಗ ಹನಮ ಕಳ್ಳಿ ಸಾಲಾಗ ಸ್ವಾಮಿಗಳ ಹಾಕ್ಕೊಂಡು ಬಿದ್ದಾನಂತ ಅಂದ. ಹುಡುಗನ ಮಾತಕೇಳಿ ಹಿರಿಕರಿಗೆ ಚಿಂತ್ಯಾತು. ಸ್ವಾಮಿಗೆ ಏನಾಗೆತೋ ಏನೋ ಮೊದಲ ಹೋಗಿ ನೋಡ್ರಿ, ಇಲ್ಲಂದ್ರ ಇಲ್ಲಿ ಎಲ್ಲಾ ಕೆಲಸ ನಿಂತು ಹೋಗ್ತಾವ ಅನ್ನದ್ರೊಳಗ ಕೂನ ದೇವಪ್ಪ ಗಾಡಿ ತಗೊಂಡು ಹೋದ. ಕಳ್ಳಿ ಸಾಲಾಗ ಗಾಡಿ ಬಿದ್ದು ಮೂರಾಬಟ್ಟಿ ಆಗಿತ್ತು. ಸ್ವಾಮಿ ಕಾಲಿಗೆ ಪೆಟ್ಟಾಗಿತ್ತು. ಹನುಮ ಮೊಬೈಲದೊಳಗಿನ ಜೋಕ ಕೇಳಿಕೊಂತ ಕುಂತಿದ್ದ. ದೇವಪ್ಪ ಸ್ವಾಮಿನ ಎತ್ತಿ ಗಾಡಿಗೆ ಹಾಕೊಂಡು ಊರಿಗೆ ಬಂದ. ಸ್ವಾಮಿ ಬರೋದನ್ನ ನೋಡಿಕೊಂಡಿದ್ದ ಜನ ಬಂದುದ್ದ ನೋಡಿ ಕೆಲಸ ಬೇಗ ಮುಗದ ಹೋಗುತ್ತ ಅಂತಾ ನಿರಾಳಾದ್ರು.

ದಪನ ಕಾರ್ಯ ಮುಗಿಸಿ ಊರ ಮಂದಿ ಮನಿ ಸೇರಿದ್ರು. ದೇವಪ್ಪ ಸ್ವಾಮಿನ ಊರ ಮುಟ್ಟಿಸಿದ.
ಇದೆಲ್ಲ ನಡೆಯೋ ದಿನಮಾನದಾಗ ನಮ್ಮೂರ ಕೆರಿಗೆ ಮುಳುಗಡೆ ಆಗುವ ಆಸ್ತಿ ಸರ್ವೆ ಕಾರ್ಯ ಮಾಡಾಕ ಸರ್ವೆ ಆಫೀಸರ ನನ್ನ ಗೆಳೆಯ ಜಯಂತ ಬಂದಿದ್ದ. ಇದೆಲ್ಲ ನೋಡಿದ ಅವನಿಂದ ಒಂದು ಪ್ರಶ್ನೆ ಬಂತು. ಯಾರು ಈ ಸತ್ತ ಮಹಿಳೆ, ನಿನ್ನೆ ನಿಶೆಯಲ್ಲಿದ್ದ ಆ ಮನುಷ್ಯ ಮಾತಾಡ್ತಾ ಇದ್ನಲ್ಲ. ಒಡಹುಟ್ಟಿದ ಅಕ್ಕ ಅಲ್ದ ಇದ್ರು ಇಷ್ಟೊಂದು ಮುತವರ್ಜಿ ವಹಿಸಿ ಕೆಲಸ ಮಾಡುವ ನಿನ್ನಂಥ ಮನುಷ್ಯ ನಮ್ಮೂರಾಗ ಯಾರ ಅದಾರ ಅಂತ. ಅದು ಅಲ್ಲದೆ ಗಿಡದ ನೆರಳಿಗೆ ಕುಂತ ಜನ ಏನೇನೋ ಮಾತಾಡ್ತಾ ಇದ್ರು, ಏನು ಇದರ ಕಥೆ ಅಂದ. ನನ್ನ ಕಥೆ ಅಲ್ಲಿಂದ ಸುರುವಾತು.


ಸಾವಂತ್ರವಗ ಬಾಳವ್ವ ಒಬ್ಬಾಕಿನ ಮಗಳು ಪರಮೇಶಿ ಪ್ಯಾಲಿಯಂತ ಮನುಷ್ಯ. ಬಾಳೇದ ಮ್ಯಾಗ ಕಾಳಜಿ ಅಷ್ಟಕಷ್ಟ. ಉಂಡ ಕೈ ಕುಂಡಿಗೆ ಒರಿಸಿಕೊಂಡು ತಿರುಗಾವ, ಸಾವಂತ್ರವ್ವ ಅಂತ ಅರಪ್ಯಾಲಿ ಗಂಡನ ಕಟ್ಟಕೊಂಡುಬಾಳವ್ವನ ಜೊತೆಗೆ ಇಟಗೊಂಡು ಬಾಳಡೋಣಿ ನೂಕುತ್ತಿದ್ಲು. ಹರೆದ ಹೆಣ್ಮಗಳು ಆಸೆ ಆಕಾಂಕ್ಷೆ ಇರತಾವಲ್ಲ. ಉಪ್ಪು ಹುಳಿ ಕಾರ ತಿಂದ ಜೀವ ಹಂಗಾಗಿ ತುಂಬ್ರಿ ಎಲಿ ಸಾಬನ ಸಂಗತ್ಯಾಗ ಇದ್ಲು ಅಂತ ಹೇಳತಾರ, ಸಾಬ ಆಗಾಗ ಮನಿಗೆಬಂದು ಹೋಗೋದು ಪರಮೇಶಿಗೆ ತಿಳಿಲಾರದ್ದೇನಲ್ಲ. ಒಂದು ಕ್ವಾಟರ ಒಳ ಹೊರಗಿನ ಗಿರಾಕಿ, ಹಂಗಾಗಿ ಸಾಬಗೂ ಮನಿತನಕ ಬರೋದು ಸಲೀಸಾಗಿತ್ತು. ಊರಾಗೂ ಇವರ ಬಗ್ಗೆ ಪುಕಾರ ಹುಟ್ಟಿ ಸತ್ತು ಹೋಗಿದ್ವು.

ಗಂಡನ ಸುಮ್ನ ಇರಬೇಕಾದ್ರ ನಮ್ಮ ತಕರಾರು ವರ್ಕೌಟ ಆಗೋದಿಲ್ಲ ಅಂತ ಮನಗಂಡು ಮುಚಗೊಂಡು ಕುಂತಿದ್ರು. ಬಾಳವ್ವಗೂ ಇದು ಮನವರಿಕೆ ಆಗಿತ್ತು. ಸಾವಂತ್ರೆವ್ವ ಸಾಬನ್ನ ಕಾಕ ಅಂತ ಬಾಳವ್ವಗ ಬಾಯಿಪಾಠ ಮಾಡ್ಸಿದ್ಲು. ಹಂಗಾಗಿ ತುಂಬ್ರಿ ಎಲಿ ಸಾಬ ಬಾಳವ್ವನ ಕಣ್ಣಾಗ ಕಾಕ ಆಗಿ ಕುಂತಿದ್ದ.
ಈ ತುಂಬ್ರಿ ಎಲಿ ಸಾಬ ಊರಾಗ ವಕ್ಕರಿಸಿಕೊಂಡಿದ್ದು ಹೆಂಗ ಅಂದ್ರ, ಊರು ಅಡವ್ಯಾಗ ಇರೋದ್ರಿಂದ ಊರ ಜನರಿಗೆ ಉದ್ಯೋಗ ಸಿಗೋದು ಕಷ್ಟ ಆಗಿತ್ತು. ಗೇಣು ಚೋಟು ಹೊಲದಾಗಿನ ಕೆಲಸ ಮುಗುದ್ರ ಮುಂದ ಕೆಲಸ ಇಲ್ದಂಗ ಆಕ್ಕಿತ್ತು. ಹಂಗಾಗಿ ಗಂಡಸರು ತಮ್ಮ ತಮ್ಮ ಹೆಂಗಸುರನ ಬೇವಿನಬೀಜ ಆರಸೋದು, ತುಂಬ್ರಿ ಎಲಿ ಹರಕೊಂಡು ಬಂದು ಸೂಡು ಕಟ್ಟಿ ಮಾರಾಟ ಮಾಡೋದು ಉದ್ಯೋಗ ಆಗಿತ್ತು. ಬದುಕಿನ ಬಂಡಿ ಸಾಗಸಾಕ ಹೊಲ ಇಲ್ಲದ ಹೆಣ್ಮಕ್ಕಳಿಗೆ ಪೂರ್ಣ ಪ್ರಮಾಣದ ಕೆಲಸ ಇದ ಆಗಿತ್ತು. ಇಂತ ಸಮಯದಾಗ ಬಂದಾವ ತುಂಬ್ರಿ ಎಲಿ ಸಾಬ, ಶಿರಹಟ್ಟಿಯಿಂದ ಬಂದು ತುಂಬ್ರಿ ಎಲಿ ತುಂಬಿಸುತ್ತಿದ್ದ.

ಕಷ್ಟ ಕಾಲದಾಗ ಹೆಣ್ಣುಮಕ್ಕಳ ಪಾಲಿಗೆ ಈ ಸಾಬ ದೇವರು ಕಂಡಂಗ ಆಗಿದ್ದ. ಹೆಣ್ಣು ಗಂಡು ಸೇರಿ ಅಡಿವ್ಯಾಗಿಂದ ಎಲಿ ತಂದು ಸೋಸಿ ಸೂಡು ಕಟ್ಟಿ ಕೊಡ್ತಿದ್ರು. ಸಾಬ ಬುಡ್ರಿಯರ ಹಿತ್ತಲ ದೊಡ್ಡ ಜಾಗದಾಗ ಆರಿ ಹಾಕಿ ಒಣಗಿಸಿ ಮಾರಾಟ ಮಾಡುತ್ತಿದ್ದ ಬೀಡಿ ಕಟ್ಟು ಕಾರ್ಖಾನೆಯವರು ಎಲಿ ತುಂಬಿಸಿಕೊಂಡು ಹೋಗುತ್ತಿದ್ರು. ಈ ಸಲಿಗೆ ಒಳಗ ಸಾವಂತ್ರವ್ವ ಸಾಬಗ ಪರಿಚಯ ಆಗಿ ಸಲಿಗ್ಯಾಗ ಬಿದ್ದು ಹೋಗಿದ್ಲು. ಸಾಬನೂ ಆಕಿನ ಚಂದಂಗ ನಡೆಸಿಕೊಂಡು ಹೋಗುತ್ತಿದ್ದ ಇರತನಕ ತಿಂದುಂಡು ಹೋಗಿದ್ದ. ಕೆಂಪು ಚರ್ಮದ ಹೆಣ್ಮಗಳು ಸಾವಂತ್ರೆವ್ವನೂ ಸಾಬನ ಜೊತೆ ಚಂದ ಹೊಂದಿಕೊಂಡು ಹೋಗುತಿದ್ಲು ಸುಮ್ನ ಅನಬಾರದು ದೇವರಂತ ಹೆಣ್ಮಗಳು.


ಇಂತಹ ಪರಿಸರದಾಗ ಬೆಳದ ಹುಡುಗಿ ಬಾಳವ್ವ ಕೆಸರಿನ್ಯಾಗ ಬೆಳದ ಕಮಲ ಇದ್ದಂಗ ಇದ್ಲು. ತಾಯಿ ಹಂತಾಕಿ ಇದ್ರು ಬಾಳವ್ವ ಯಾವ ಗಂಡಸರನು ಕಣ್ಣೆತ್ತಿ ನೋಡುತಿರಲಿಲ್ಲ. ನೋಡಕರ ಕಟದ ಮಾಡಿದ ಗೊಂಬಿ ಆಗಿದ್ಲು. ಹೆಣ್ಣಿಗೆ ಇರಬೇಕಾದ ಅಂದ ಅವಳಿಗಿತ್ತು. ಅಂತಾ ಸುಂದರಿ ಅಂತಾ ಮನಿಯಾಗ ಯಾಕರ ಹುಟ್ಟಿದ್ಲೊ ಅಂದುಕೊಳ್ಳತಿದ್ರು ಜನ. ಆದರ ಹುಡುಗಿ ಗುಣ ಹಲಕಾ ಆಗಿರಲಿಲ್ಲ. ತಾಯಿಯ ವಿರುದ್ಧವಾದ ಗುಣ ಅವಳದು. ವಯಸ್ಸಿಗೆ ಬಂದಹೆಣ್ಮಗಳನ್ನು ಮನಿಯಾಗ ಇಟಗೊಂಡು ಕುಂದ್ರೋದು ಸರಿ ಅಲ್ಲ ಅಂತ ಅನಿಸಿ ಸಾವಂತ್ರವ್ವ ಒಂದು ವರ ನೋಡಿ ಮದುವೆ ಮಾಡಿ ಕೊಟ್ಟರ ಚಿಂತಿ ತಪ್ಪುತ್ತ ಅಂದುಕೊಂಡು ಪುಟಗಾಂವ ಬಡ್ನಿ ಊರಾಗ ಒಂದು ವರ ಗೊತ್ತು ಮಾಡಿ ಮದುವಿ ಮಾಡಿ ಕೊಟ್ಲು. ಹುಡುಗಿ ಚಂದ ನೋಡಿ ಹುಡುಗ ದುಸರ ಮಾತಾಡ್ದ ಒಪ್ಪಿಗೊಂಡು ಬಿಟ್ಟಿದ್ದ. ಗಂಡನ ಮನಿಗೆ ಬಂದ ಹೊಸದಾಗ ಬಾಳಚಂದ ನಡಿಸಿಕೊಂಡ್ರು. ಹುಡುಗನೂ ಬಾಳ ಒಳ್ಳೆವಿದ್ದ. ಅತ್ತೇನು ಸರಿ ಇದ್ಲು.


ಬನ್ನಿಕೊಪ್ಪದ ಜಾತ್ರೆಗೆ ಹೋಗಿ ಬಂದ ಮ್ಯಾಗ ಅತ್ತಿ ಪರಕಾಗಿದ್ಲು. ಅಲ್ಲಿ ಯಾರ‍್ಯಾರು ಕಿವಿ ಚುಚ್ಚಿ ಕಳಿಸಿದ್ರೋ ಏನೋ ಸಾವಂತ್ರೆವ್ವನ ಜಾತಕ ಜಾಲಾಡ್ಸಿಕೊಂಡು ಅರದ ಕುಡಿದು ಬಂದಿದ್ಲು. ಹಂಗಾಗಿ ಸೊಸಿ ಬಾಳವ್ವನ ಮ್ಯಾಗಒಂದು ನೆದರ ಇಟ್ಟಿದ್ಲು. ಚೂರುಕು ಚಾರುಕು ಸೊಸಿ ಜೊತೆ ಕಾಲ ಕೆದರಿ ಜಗಳ ಮಾಡತಿದ್ಲು. ತಾಯಿ ಚಾಳಿ ಮಗಳಿಗೆ, ಚಂದ ನೋಡಿ ತಂದು ಚಾಳಿ ನೋಡಿ ಬಿಡೋದಾತು ನನ್ನ ಮಗನ್ನ ಬಾಳೆ, ಇವರ ಮನಿ ಬಗ್ಗೆ ಯಾರ ಬಾಯಾಗರಚಂದನ ಮಾತು ಊರಾಗ, ಹುಟ್ಟು ಹಾದರಗಿತ್ತಿ ಇವರವ್ವ, ನೀನರ ಏನು ಸುದ್ದ ಅಂತ ಹೇಳಬೇಕು, ಅಂತಾ ಅವಕಾಶ ಸಿಕ್ಕಾಗಲೆಲ್ಲ ಅವಮಾನ ಮಾಡಿ ಛೀಮಾರಿ ಹಾಕಿ ಬಡಿತಿದ್ಲು. ಎಷ್ಟು ದಿನಾಂತ ಈ ಅವಮಾನ ಬಂಗಾರದಂತ ಹುಡುಗಿ ಬಾಳವ್ವಗ, ಬಾಳೇದಾಗ ಬಾಳ ನೊಂದು ಬದುಕುವ ಯಾವ ಭರವಸೆನೂ ಕಾಣದಂಗಾಗಿ ಮನಿ ಬಿಟ್ಟು ತವರಮನಿ ಸೇರಿದ್ಲು.ಇತ್ತ ತುಂಬ್ರಿ ಎಲಿ ಸಾಬ ಊರು ಉಸಾಬರಿ ಬಿಟ್ಟಿದ್ದ. ಸಾವಂತ್ರವ್ವ ಶುದ್ಧ ಶಾಖಾಹಾರಿ ಆಗಿದ್ಲು. ಲೋಕ ಕಲ್ಯಾಣದ ಮಾತನ್ನ ಈಗ ಆಕಿ ಬಾಯಾಗ ಕೇಳಬೇಕು. ಅಷ್ಟೊಂದು ಶುದ್ಧಿಕರಣಾಗಿ ನೀರಿಗಿಂತ ತೆಳುವಾಗಿತ್ತು ಆಕಿ ಗುಣ. ಮಗಳು
ಗಂಡನ ಮನಿ ಹಂಗ ಹರಕೊಂಡು ಮನಿ ಸೇರಿದ್ದು ಆಕಿಗೇನು ಸಂಕಟ ಅನಿಸಲಿಲ್ಲ.

ಅಂತ ಉಪದ್ರವದಾಗ ಸಿಕ್ಕು ಸಾಯೋಕಿಂತ ನನ್ನ ಮಗಳು ನನ್ನ ಕಣ್ಮುಂದ ಚಂದಂಗ ಇದ್ರ ಸಾಕಂತ ಮಗಳನ್ನು ಜ್ವಾಪಾನ ಮಾಡಿಕೊಂಡು ಹೊಂಟಿದ್ಲು. ತುಂಬ್ರಿ ಎಲಿ ಸೀಜನ್ ಮುಗದ ಮ್ಯಾಗ ಸಾವಂತ್ರವ್ವ ಬುರಗ ಮಲ್ಲಪ್ಪನ ತ್ವಾಟದಾಗ ದುಡಿಯಾಕ ನಿಂತಿದ್ಲು. ಬುರಗ ಮಲ್ಲಪ್ಪ ಸೆಟ್ರು ಊರಾಗ ಗಟ್ಟಿ ಕುಳ, ಊರಾಗ ಎದ್ದು ಕಾಣೋ ಆಸ್ಸಾಮಿ. ರಾಜಕಾರಣಿಗಳು ಊರಿಗೆ ಬಂದ್ರ ಅವನ ಮನಿಗೆ ಬಂದ ಹೋಗಬೇಕು ಹಂಗ ಹವ ಮೆಂಟೇನ ಮಾಡಿದ್ದ. ಸಾವಂತ್ರೆವ್ವಗ ಹನ್ನೆರಡು ತಿಂಗಳನೂ ಕೆಲಸ ಸಿಗತಿತ್ತು. ಆಕಿ ಬಾಳೆ ಚಂದಂಗ ನಡೆದಿತ್ತು. ಬಾಳವ್ವಗ ಬಾಳೆ ಬ್ಯಾಸರಾಗಿ ಹೋಗಿತ್ತು. ನನ್ನ ಜೀವನದಾಗ ತಪ್ಪೆ ಮಾಡದ ಇದ್ರು ಯಾಕ ಹಿಂಗಾತು. ಅಂದುಕೊಂಡು ಮರುಗುತ್ತಿದ್ಲು. ದೇವರು ಪರೀಕ್ಷೆ ಮಾಡಲಿಕತ್ತಾನ ಅಂದುಕೊಂಡ್ಲು ಸೀತವ್ವಗ ಶಾಪ ಬಿಡಲಿಲ್ಲ. ನನ್ನಂತವರ ಪಾಡೇನು ಅಂದುಕೊಂಡು ಗಟ್ಟಿ ಮನಸ್ಸಿ ಮಾಡಿಕೊಂಡಿದ್ಲು. ಒಂದಿನ ತಾಯಿಗೆ ಹೇಳಿದ್ಲು ಬಾಳವ್ವ, ಯವ್ವ ನಾನರ ಮನಿಯಾಗ ಕುಂತು ಏನು ಮಾಡ್ಲಿ ಬ್ಯಾಸರಾಗಲಾಕ ಹತ್ತೇತಿ ನಿನ್ನ ಜೊತಿಗೆ ನಾನು ಬಂದ್ರ ಮನಸ್ಸಿಗೆ ಸಮಾಧಾನ ಇರತೈತಿ ಅಂದ್ಲು. ಸಾವಂತ್ರವ್ವಗೂ ಸರಿ ಅನಿಸ್ತು ಮನಿಯಾಗ ಒಬ್ಬಾಕಿ ಕುತಗೊಂಡ್ರ ಹಿಂಗಾತಲ್ಲ ನನ್ನ ಬಾಳೆ ಅಂತಾ ಹನ್ನೆರಡು ತಾಸು ಅದ ಗ್ಯಾನದಾಗ ಇರತಾಳ, ಕೆಲಸದಾಗ ಬಿದ್ರ ನಾಕ ಮಂದ್ಯಾಗ ಎಲ್ಲಾ ಮರಿತಾಳ ಅಂದುಕೊಂಡು ಮಲ್ಲಪ್ಪ ಸೆಟ್ರು ಕಡೆ ಹೋದ್ಲು. ಸಾವುಕಾರ ನನ್ನ ಜೊತೆ ನನ್ನ ಮಗಳೂ ಕೆಲಸಕ್ಕರ‍್ತಿನಿ ಅಂತಾಳ ಬ್ಯಾಡ ಅನಬ್ಯಾಡ್ರಿ ಬಾಳ ನೊಂದಾಳ.


ನಿಮಗ ಗೊತ್ತಿದ್ದ ಮಾತು ಐತಿ ನೀವು ಹೂ ಅಂದ್ರ ನಾಳೀನ ಕರಕೊಂಡುರ‍್ತಿನಿ ಅಂದ್ಲು. ನಿನ್ನ ಮಗಳಿಗೆ ಕೆಲಸ ಮಾಡಾಕ ಬರಬೇಕಲ್ಲ ಅಂದ್ರು, ಅಪ್ಪಾರ ಅಷ್ಟು ಇಷ್ಟು ಮಾಡ್ತಾಳ ನಾ ಕಲಿಸಿ ಕೊಡ್ತಿನಿ ನಾಕು ದಿನ ನೋಡಿಕೊಂಡ್ರ ತಾನ ಮಾಡ್ತಾಳ ಅಂದ್ಲು. ಹೋರಿ ಹರೆದಾಗ ಒಬ್ಬ ಮಗನ್ನ ಕೈಯಾಗ ಕೊಟ್ಟು ಕಣ್ಣುಮುಚಗೊಂಡ ಹೆಂಡತಿ ಕಡೆ ತನಕ ಸುಖ ಕೊಡಲಿಲ್ಲ ಅನ್ನೋ ಹಳವಂಡದಾಗ ಸಿಕ್ಕು ಒದ್ದಾಡತಿದ್ದ ಮಲ್ಲಪ್ಪಗ ಈಗ ಹೊಸ ಹುರುಪು ಹುಟ್ಟಿಕೊಂಡು ಮೈಯಾಗಿನ ನರ ಬಿರುಸುಗೊಂಡವು. ಆಕಿ ಮೊದಲ ಗಂಡನ ಬಿಟ್ಟ ಬಂದ ಹೆಣ್ಣು, ನೋಡಕರ ಎಷ್ಟು ಚಂದ ಅದಾಳು ಹೆಂಗರ ಮಾಡಿ ಬಲಿ ಹಕ್ಕೊಂಡ್ರಾತು ಅಂತ ಮೂರು ಜಾಗಕ್ಕೂ ಮುಕ್ತಿ ಸಿಕ್ಕವರಂಗ ಖುಷಿಗೊಂಡು ಆಯ್ತು ಬೇ ಪಾಪ ದುಡಿಯೋ ಮಕ್ಕಳಿಗೆ ನಾ ಯಾಕ ಬ್ಯಾಡ ಅನ್ಲಿ ಆಕಿ ಒಬ್ಬಾಕಿ ಹೆಚ್ಚಾಗತಾಳೆನು ನನಗ, ನಾಳೆ ಕರಕೊಂಡು ಬಾ ಅಂದ. ಎದಿ ಮ್ಯಾಗಲ ಬಾರ ಕಳಚಿ ಬಿದ್ದಂಗಾದ ಸಾವಂತ್ರೆವ್ವ ನಿರಾಳಗೊಂಡು ಮನಿಗೆ ಬಂದ್ಲು.


ಮಾರು ಹೊತ್ತು ಮ್ಯಾಗ ಬಂದ ಮ್ಯಾಲೆ ಚಾದರಜ್ಜನ ಕೂಡಿಕೊಂಡು ಬುರುಗ ಮಲ್ಲಪ್ಪ ಸೈಕಲ್ ಮೋಟಾರ ಹತ್ತಿಕೊಂಡು ಒಬ್ಬಿ ದಾರಿ ಹಿಡಿದ ಹೊಲದ ಕಡೆ ಮುಖ ಮಾಡಿದ್ದ. ಹೊಲದ ತಲಿದಿಂಬಿಗೆ ಗಾಡಿ ನಿಲ್ಲಿಸಿ ಹೊಲದಾಕ ಇಳಿದ. ಕೂಲಿ ಆಳು ಶೆಂಗಾದಾಗಿನ ಕಳೆ ತಗಿತ್ತಿದ್ರು ಹತ್ತಾರು ಆಳುಗಳ ನಡುವೆ ಎದ್ದು ಕಾಣುವ ಬಾಳವ್ವಂದು ಅವತ್ತು ಹೊಸ ಹಾಜರಿ. ವಾರಿಗಣ್ಣಲ್ಲೇ ಬಾಳವ್ವನ್ನ ನೋಡಿದ. ನೋಡತನ ನಿಂತುಕೊಂಡ. ಆದರ ಬಾಳವ್ವ ಮುಖ ಎತ್ತಿ ನೋಡಲಿಲ್ಲ. ಕಣ್ಣಾಗ ಆಕಿ ಚಂದನ ಅಳದ ತೂಗಿದ. ಆದರ ಸೆಟ್ಟರ ಲೆಕ್ಕಕ್ಕು ಮೀರಿ ನಿಂತ ಸೌಂದರ್ಯ ಅದು. ಕಾದು ನೋಡೋಣ ಎಲ್ಲಿ ಹೋಗುತ್ತ, ಅವಸರ ಮಾಡಿ ಗೋತ್ರ ಕೆಡಿಸಿಕೊಳ್ಳಬಾರದು ಅಂದುಕೊಂಡು ಸಾವಂತ್ರವ್ವನ್ನ ಮಾತಾಡಿಸಿ ಮತ್ತೊಮ್ಮೆ ಬಾಳವ್ವನ ಕಣ್ಣಾಗ ಹೀರಿಕೊಂಡು ಗಾಡಿ ಕಡೆ ಬಂದ. ಚಾದರದಜ್ಜ ಹೆಗಲ ಮ್ಯಾಗ ಖಾಲಿಚೀಲ ಹೇರಿಕೊಂಡು ಸೆಟ್ಟರನ ಹಿಂಬಾಲಿಸಿದ.


ಕಾಳು ಕಡಿ ತುಂಬಿಸಿಕೊಂಡು ಊರು ಊರು ತಿರುಗಿ ನಾಕು ದುಡ್ಡು ಗೊಳೆ ಮಾಡಿಕೊಂಡು ರಾತ್ರಿಯಾದರ ಸಾಕು ಕಣ್ತುಂಬ ನಿದ್ದಿ ಮಾಡುತ್ತಿದ್ದ ಸೆಟ್ಟಿಗೆ ಈಗ ರಾತ್ರಿ ನಿದ್ದಿ ಬರದಂಗ ಆಗಿತ್ತು. ಬಾಳವ್ವನ ಬಾಳೆ ಹಂಚಿಕೊಂಡು ತಿನ್ನಾಕ ಹೊಂಚ ಹಾಕಿದ್ದ. ಕಿರಾಣಿ ಅಂಗಡ್ಯಾಗ ಕುಂತು ಖಿರ್ದಿ ಬರದೊಷ್ಟು ಸುಲಭ ಆಗಿರಲಿಲ್ಲ. ಹುಡುಗಿ ಬಿಗಿ ಬಾಳ ಅದಾಳ ಹೆಂಗ ಹದ್ದು ಬಸ್ತಿಗೆ ತರಬೇಕನ್ನೋದು ತಾಳೇನ ಆಗವಲ್ದಾಗಿತ್ತು. ಸೆಟ್ರ ಒದ್ದಾಡದ ನೋಡಿ ಹಿಂಗಾದ್ರ ಇವು ಕೈ ಬಿಡ್ತಾನ ಅಂದುಕೊಂಡು, ಅಲ್ರಿ ಸೆಟ್ರ ಕೈಯಾಗ ಬೆಣ್ಣಿ ಇಡಗೊಂಡು ಕರಗಸಾಕ ಬರುವಲ್ದು ಅಂದ್ರ ಹೆಂಗ. ಹೆಂಗೂ ಸಾವಂತ್ರವ್ವ ನಿಮ್ಮ ಕೈಯಾಗಿನ ಕಲ್ಲುಇದ್ದಂಗ ಅದಾಳ, ಆಕೀನ ಕೈಯಾಗ ತಗೊರೆಲ್ಲ ಅಂದ. ಅದು ಸರಿ ಆದರ ಹುಡುಗಿ ಅವರವ್ವನ ಹಾದಿಗೆ ಬರಬೇಕಲ್ಲ. ಕಾಳ ಹಾಕಿ ನೋಡ್ರಿ ಮುಂದಲ ಮಾತು ಮುಂದ ಅಂದ ಚಾದರನ ಮಾತು ಸರಿ ಅನಿಸಿತು.
ಬೆಳಗಾದ್ರು ವ್ಯಾಪಾರ ವ್ಯವಹಾರ ಅಂತ ಬೀಜಿ ಆಗಿದ್ದ ಬುರಗ ಮಲ್ಲಪ್ಪಗ ಹೊಲದ ಕಡೆ ಕಾಳಜಿ ಹೆಚ್ಚಾಗಿತ್ತು. ಊರು ಊರು ತಿರುಗಿ ಕಾಳು ಕಡಿ ಹೊತ್ತು ಸಾಕಾಗಿ ಹೋಗಿದ್ದ ಚಾದರದಜ್ಜಗ ಇದು ನಿದ್ದಿ ಬಂದೊರಗೆ ಹಾಸಿ ಕೊಟ್ಟಂಗಾಗಿತ್ತು. ಮಲ್ಲಪ್ಪನ ಆಸೆಗೆ ಇನ್ನಷ್ಟು ತುಪ್ಪ ಸುರಿದು ಬೆಂಕಿ ಇಟ್ಟಿದ್ದ. ಸಾವಂತ್ರವ್ವಗ ಸೆಟ್ರಸಾವಕಾರಿಕೆ ಮಾತು ಹೇಳಿ ಹುಚ್ಚು ಹಿಡಿಸಿದ್ದ. ನಾ ಹೇಳಿದ ಕೆಲಸ ನೀ ಸರಿ ಮಾಡಿದ್ರ ನಿನ್ನ ರೊಟ್ಟಿ ಜಾರಿ ತುಪ್ಪಕ ಬಿದ್ದಂಗ ನೋಡು. ಅವುಗರ ಹೆಂಡರ ಮಕ್ಕಳ.
ಇರೋ ಒಬ್ಬ ಮಗನ್ನ ದೂರಲ ದೇಶದಾಗ ಓದಾಕ ಇಟ್ಟಾನ, ಅವ ಮುಗಿಸಿ ಬರೊವಷ್ಟತ್ತಿಗೆ ಎಲ್ಲ ಮುಗದ ಹೋಗಿರತೈತಿ. ನೀ ಮನಸ್ಸು ಮಾಡು ಸಾವಂತ್ರವ್ವ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನಂಗಾಗಬಾರದು ಅಂತಾ ಹೇಳಿ ತಲ್ಯಾಗ ಹುಳ ಬಿಟ್ಟು ಮನಿಗೆ ಬಂದಿದ್ದ.
ಸಾವಂತ್ರಗೂ ಹರಾಮಿ ತಿಂದು ಹಲಗಾ ಹತ್ತಿದ ಚಾಳಿ. ಹೆಂಗೂ ಮಗಳಿಗೆ ಗಂಡನ ಮನಿ ಹಂಗ ಹರದೈತಿ. ಸೆಟ್ಟರನ ಒಳಗ ಹಾಕ್ಕೊಂಡು ಮಿಂಡ ಮೆರದರಾತು ಅನ್ನೋ ಅಶಿಸ್ತು ಅವಳ ತಲ್ಯಾಗ ಮೂಡಿ ಹಗಲಿ ರಾತ್ರಿ ಮಲ್ಲಪ್ಪನ ಗುಣಗಾನ ಮಾಡಿ ಮಗಳ್ನ ಒಂದು ಹಂತಕ್ಕ ತಂದು ನಿಲ್ಲಿಸಿದ್ಲು.
ಬಾಳವ್ವಗ ತಾಯಿ ಮಾತು ಮೊದಲ ಮೊದಲ ಅಸಹ್ಯ ಅನಿಸ್ತು, ಆದರ ನನ್ನ ಬದುಕಾದ್ರು ಏನು ಸುದ್ದ ಐತಿ ಹೆಂಗು ಸರಿ ಹೋಗೋದಿಲ್ಲ. ಇದ್ದದರಾಗ ಹೊಂದಾಣಿಕಿ ಮಾಡಿಕೊಂಡು ಹೋದ್ರ ಸಾಕಲ್ಲ. ನಮ್ಮ ಮನಿ ಪರಿಸ್ಥಿತಿಗೆ ನನ್ನ ಮೆಚ್ಚಿ ಯಾರರ‍್ತಾರ, ನಾಕ ಕಾಸು ಕೈಯಾಗ ಇಟ್ಟಕೊಂಡ್ರ ಬದುಕು ಹಸನ ಆಗುತ್ತ ಅಂದುಕೊಂಡು ಬಾಳವ್ವ ಅವರವ್ವನ ತಾಳಕ್ಕ ಕುಣಿಯಾಕ ಹತ್ತಿದ್ಲು.


ದಸರಾ ಹಬ್ಬದಾಗ ಮಗಳ ಕರಕೊಂಡು ಬಂದ ಸಾವಂತ್ರವ್ವ ಸೆಟ್ಟರ ಮನಿ ಬಾಗಲದಾಟಿ ನಿಂತ್ಲು. ಬಾರಬೆ ಒಳಗ, ಅಲ್ಲೆ ನಿಂತ್ಯಾಕ ಮಗಳು ಹೊಸದಾಗಿ ಮನಿ ಹೊಸ್ತಲ ದಾಟ್ಯಾಳ ಅಲ್ಲೆ ನಿಲ್ಲಸದನು ಅಂದ. ಇಲ್ಲ ಸಾವುಕಾರ ಬನ್ನಿ ಹಬ್ಬ ಬನ್ನಿ ಕೊಟ್ಟು ಹೋದರಾತು ಅಂತ ಬಂದೀವಿ, ಬಾಳವ್ವ ಧಣೇರಿಗೆ ಬನ್ನಿ ಕೊಟ್ಟು ಕಾಲಿಗೆ ನಮಸ್ಕಾರ ಮಾಡು ಅಂದ್ಲು. ಯಾಕೋ ಬಾಳವ್ವಗೂ ತನ್ನ ಬಾಳಿನ ಚೌಕಟ್ಟು ಮೀರಬಾರದು ಅನಿಸಿರಬೇಕು. ಬನ್ನಿ ಕೊಟ್ಟು ನಮಸ್ಕಾರ ಮಾಡಿ ಮನಿಗೆ ಹೋದ್ಲು. ಎಪ್ಪ ಮಳ್ಳ ಬುದ್ಧಿ ನೀನ ಹಣ್ಣು ಮಾಡು. ನಿಮ್ಮನ್ನ ಬಿಟ್ಟರೆ ನಮಗರ ಯಾರ ಅದಾರ ನೀವ ಕಾಯ್ಕೊಂಡು ಹೋಗಬೇಕು. ನನ್ನ ಮಗಳನ ನಿಮ್ಮ ಉಡಿಯಾಗ ಹಾಕಿನಿ, ಹಾಲಾಗರ ಎದ್ದರಿ ನೀರಾಗರ ಎದ್ದರಿ ಅಂದು ಕೈಮುಗುದು ಮನಿಗೆ ಹೋದ್ಲು.
ವಿಷಯ ಹಣ್ಣಾಗೇತಿ ಅಂತಾ ಖಾತ್ರಿ ಮಾಡಿಕೊಂಡ ಮಲ್ಲಪ್ಪಸೆಟ್ಟಿ ಸಾವಂತ್ರೆವ್ವನ್ನ ಸಹವಾಸ ಹತ್ರ ಮಾಡಿಕೊಂಡ. ಬಾಳವ್ವನ ಬಾಳೇದಾಗಿನ ವಾರಸುದಾರನಾದ. ಬಾಳವ್ವಗೂ ಭದ್ರತೆ ಬೇಕಾಗಿತ್ತು ಸಹಕರಿಸಿಕೊಂಡು ಹೋದ್ಲು. ಹೆಂಡತಿ ಕಳಕೊಂಡು ಸೆಟ್ಟರಿಗೆ ಐದು-ಆರು ವರ್ಷ ವನವಾಸ ಆಗಿತ್ತು, ತಡದ ಮಳಿ ಸುರಿದ ಇರುತ್ತನು, ಕಾದ ಹಂಚಾದ ಬಾಳವ್ವನ ಒಡಲ ಬೆಂಕಿಗೆ ಸ್ವಾತಿ ಮಳಿ ಸುರದಂಗಾಗಿ ಮುಗಲಾಗಿನ ಚಿಕ್ಕಿ ಎಣಸಾಕ ಹತ್ತಿದ್ಲು. ನಾಲ್ಕು ದಿನದಿಂದ ಬಿಡದ ಸುರಿದ ಮಳಿಗೆ ಮಣ್ಣಿನ ಮಾಳಿಗೆ ಕುಸುದು ಬಿದ್ದು ಬುಗುಟಗೇರ ಭೀಮವ್ವ ಮಲಕೊಂಡಲ್ಲೆ ಸತ್ತು ಹೋಗಿದ್ಲು. ಬೆಳ್ಳಬೆಳತಾನ ಸುರಿದ ಮಳಿಗೆ ಆ ಕಡೆ ಯಾರೂ ಹೋಗಿರಲಿಲ್ಲ. ದಿಕ್ಕಿಲ್ಲದ ಮುದುಕಿ ಬಾಗೇವಾಡಿ ಸಂತ್ಯಾಗ ಜೋಗೇರ ಸ್ವಾಮಾನು ಮಾರಿಕೊಂಡು ಬದುಕಿತ್ತು. ಮಳಿ ಆವಾಂತರಕ ಶಿವಾಯ ನಮಃ ಅಂದಿದ್ಲು, ಮುಂಜಾನೆದ್ದು ಊರಾಗಿನ ಮಂದಿ ಬಂದು ಮಣ್ಣು ತಗದು ಹೆಣ ಹೊರಗ ಹಾಕಿ ಮೈ ತೊಳದು ಗೂಟಕ್ಕ ಬಡದ ಕೂಡ್ಸಿದ್ರು. ಬಂದು ಬಳಗ ಇಲ್ಲದ ಭೀಮವ್ವ ದೈವದ ಹೆಣ ಆಗಿದ್ಲು. ಗಂಡ ನರಸ್ಯಾ ಊರಾಗ ಸರ್ಕಸ್ ಮಾಡಾಕ ಬಂದ ಮಂದಿ ಮೋಡಿಕ್ಯಾರ ಆಟಕ್ಕ ಮಳ್ಳಾಗಿ ಮದುವಿ ಆಗಿ ಮೂರು ವರ್ಷಕ್ಕ ಭೀಮವ್ವನ ಕೈಯಾಗ ಸೋಡಾ ಚೀಟಿ ಕೊಟ್ಟು ಹೋದಾವ ಊರು ಮೆಟ್ಟಿರಲಿಲ್ಲ. ಬದುಕ್ಯಾನೋ, ಸತ್ತಾನೋ ಅಂತಾನೂ ಗೊತ್ತಿಲ್ಲ. ಭೀಮವ್ವ ಹುಡುಕೋ ಗೋಜಿಗೂ ಹೋಗಿರಲಿಲ್ಲ.


ಊರಾಗಿನ ಮಂದಿನ ನನ್ನ ತಂದೆ ತಾಯಿ ಅಂದುಕೊಂಡು ತಾನಾತು ತನ್ನ ಬದುಕಾತು ಅಂತ ಜೀವನ ನಡಿಸಿಕೊಂಡು ಹೊಂಟಿದ್ಲು. ಊರು ಮಂದೆಲ್ಲ ಆ ದಿನದ ಖರ್ಚು ನೋಡಿಕೊಂಡ್ರು. ಭೀಮವ್ವನ ಹೆಣಕ್ಕ ನಾಕ ಕಣ್ಣೀರ ಹಾಕಿ ಹೋದರಾತು ಅಂತ ಬಂದ ಹೆಣ್ಮಕ್ಕಳ ಬಾಯಾಗ ಬಾಳವ್ವ
ಆಹಾರ ಆಗಿದ್ಲು. ಮದುವಿ ಆಗಿ ಮೂರು ವರ್ಷದಾಗ ಗಂಡ ಬಿಟ್ಟು ಹೋದ್ರು ಒಬ್ಬ ಗಂಡ್ಸನ್ನ ಕಣ್ಣು ಎತ್ತಿ ನೋಡಲಾರದ ಹರೇದ ಜೀವನ ಕಳೆದು ಸೈ ಅನಿಸಿಕೊಂಡು ಮುತ್ತೈದಿ ಆಗಿ ಸತ್ತು ಹೋದ್ಲು ಭೀಮವ್ವ. ಆದರ ನಮ್ಮೂರಾಗ ಅರ್ಧ ವಯಸ್ಸು ಹೋದವರು ಬಿಡವಲ್ಲರಾಗೇರ. ದುಡ್ಡಿನ ಮುಂದ ಶೀಲಕ್ಕೇನು ಬೆಲೆ ಐತಿ. ಕಾಲಮಾನ ಪರಕ ಆಗಿ ಬಿಟೈತಿ ಆನ್ನೊರ‍್ಯಾರೊ, ಆಕಿ ಯಾರ ಮಗಳು? ತಾಯಿ ಸುದ್ದ ಇದ್ದರ ಮಗಳು ಸುದ್ದ ಇದ್ದಾಳಾ.........ತಾಯಿಯಂಗ ಮಗಳು. ಮುಸಿನ್ಯಾಗ ಮೂವತ್ತು ಅನ್ನೋ ಮಳ್ಳಿ ಅನ್ನುರ‍್ಯಾರೋ, ಗಂಟ್ಟುಳ್ಳ ಗಿರಾಕಿನ ನೋಡಿಕೊಂಡಾಳ, ತುಂಬ್ರಿ ಎಲಿ ಸಾಬನಂಗ ಸೆಟ್ಟಿನ ಯಾವಾಗ ಮೆಟ್ಟಿಗೆ ಹಚ್ಚುತಾರೋ ನೋಡಬೇಕು ಅಂದುಕೊಂಡುಹಿಡಿ ಶಾಪ ಹಾಕತಿದ್ರು. ಅಯ್ಯೋ ಬಿಡ್ರೆಯವ್ವ ಇಂತ ತಂಪನ್ಯಾಗ ಅಂತವರ ಸುದ್ದಿ ಯಾಕ ತಗದೀರಿ ಅಂದುಕೊಂಡು ಮೂಗು ಮುರಿಯುವ ಮಂದ್ಯಾಗ ಬಾಳವ್ವ ಕಾಸಿಪಂಚಾರಕ್ಕಿಂತ ಕಡೀ ಆಗಿದ್ಲು.


ಗಂಡನ ಬಿಟ್ಟು ಬಂದಾಳಂದ್ರ, ನಾವು ಒಂದು ಕೈ ನೋಡಬೇಕು ಅನ್ನೋ ವಾರಿಗಿ ಹುಡುಗರ ಕಣ್ಣಾಗ ಮಲ್ಲಪ್ಪ ವಿಲನ್ ಆಗಿದ್ದ. ಏನು ಮಾಡೋದು ಹೊಟ್ಯಾಗಿನ ಸಿಟ್ಟು ರಟ್ಯಾಗ ಇಲ್ಲ ಅಂದುಕೊಂಡು ಹತ್ತಿಕ್ಕೊಂಡು ಸುಮ್ನ ಕುಂತಿದ್ರು. ಆದರ ಸೆಟ್ಟಿ ಮಾತ್ರ ತುಪ್ಪದಾಗ ಕೈ ತೊಳಿತಿದ್ದ. ಕಾಳ ಕಡಿ ತುಂಬಿಸೊ ಕೆಲಸ ಚಾದರದಜ್ಜ ಮಾಡಕತ್ತಿದ್ದ, ಅವ ಮಾಡಿದ್ದ ಬಂತು. ಪೈಸಾಕ ಪೈಸಾ ಲೆಕ್ಕ ಹಾಕಿ ಇಡುತ್ತಿದ್ದ ಸೆಟ್ಟಿ ಎಲ್ಲಾ ಹೋಗಲಿ ಬಾಳವ್ವ ಉಳಲಿ ಅನ್ನೋ ಸ್ಟೇಜಿಗೆ ಬಂದು ನಿಂತಿದ್ದ. ಹೊಲದಾಗಿನ ವ್ಯವಹಾರ ಆಳು ಕಾಳು ನೋಡಿಕೊಳ್ಳೊದು ಸಾವಂತ್ರವ್ವಗ ಒಪ್ಪಿಸಿದ್ದ. ಇನ್ನೇನು ಕೆಲಸ ಸೆಟ್ಟಿಗೆ ಇಪ್ಪತ್ತುನಾಕು ತಾಸು ಬಾಳವ್ವನ ಸೆರಗಿನ್ಯಾಗ ಸುಸ್ತಾಗಿ ಬಿದ್ದಿರುತ್ತಿದ್ದ. ಈಗ ಬಾಳವ್ವನ್ನ ನೋಡಾಕ ಎರಡು ಕಣ್ಣು ಸಾಲತಿರಲಿಲ್ಲ. ಮನಿಬಿಟ್ಟು ಹೊರಗ ಹೋಗತಿರಲಲ್ಲ. ಸೆಟ್ಟಿ ಹಂಗ ನೋಡಿಕೊಂಡಿದ್ದ. ಆಕಿ ಚಂದಕ್ಕ ಮಳ್ಳಾಗಿ ತನ್ನ ತೆಲಿ ಕೊಡಾಕು ಹಿಂದ ಮುಂದ ನೋಡಲಾರದಷ್ಟು ಹುಚ್ಚಾಗಿ ಹೋಗಿದ್ದ.
ಹಂಗಾಗಿ ಬಾಳವ್ವ ನಾಕು ದುಡ್ಡು, ಬಂಗಾರ ಸಂಪಾದನೆ ಮಾಡಿಕೊಂಡು ಸುಖವಾಗಿ ಇದ್ಲು. ಈಕಿ ಮಾಡೋ ಕೆಲಸಕ್ಕ ಸಿಡಿಮಿಡಿಕೊಂಡ ಊರಾಗಿನ ದೂರದ ಸಂಬಂಧಿ ಯಲ್ಲನಗೌಡನ ಒಳಗ ಒಕ್ಕೊಂಡು ಬಿಟ್ಲು. ಖರ್ಚಿಗೆ ದುಡ್ಡು ಕೊಟ್ಟು ಖುಷಿ ಪಡಿಸಿದ್ಲು. ಅವನ ಹೊಲದಾಗ ಬೋರ ಹಾಕಿಸಿ ನೀರಾವರಿ ಮಾಡ್ಸಿದ್ಲು. ಸಾಲದು ಅನ್ನುವಂಗ ತ್ವಾಟದಾಗ ಒಂದು ಮನೀನು ಕಟ್ಟಿಸಿಕೊಟ್ಲು. ಯಲ್ಲನಗೌಡ ಮುಚಕೊಂಡು ಕುಂದ್ರಾಕ ಇನ್ನೇನು ಬೇಕು. ನಾಕ ದುಡ್ಡು ಗಳಿಸ್ಯಾಳ ನಮ್ಮಕ್ಕ ಆಕೀಕೂಡ ಗುದ್ದ್ಯಾಡಿದ್ರ ನನಗೇನು ಸಿಗುತ್ತ. ಅಂದು ಹೊಂದಿಕೊಂಡ. ಸೆಟ್ರ ಅನ್ನೊ ಸೆಟ್ರು ಇವನ ಬಾಯಾಗ ಮಾವಾಗಿ ಕುಂತ.


ಹಿಂಗ ದಿನಮಾನಗಳು ಕಳದು ಹೋದ್ವು, ಶೆಟ್ಟರಿಗೆ ವಯಸ್ಸು ಇಳಿತಾ ಬಂದಂಗ ಸಂಪತ್ತೂ ಇಳಿತಾ ಬಂತು. ಸೈಡ ಕುಂತ ಮೇದವರು ಹೊಟ್ಟಿ ತುಂಬಿಸಿಕೊಂಡಿದ್ರು. ಕುಂತ ಉಚ್ಚಿ ಹೋದರ ಹಿಂಬಡಕ ಸಿಡಿಯೋ ಹೊತ್ನಿನ್ಯಾಗ ಬಾಳವ್ವನ ಹತ್ರ ಸೆಟ್ಟರದೇನು ಕೆಲಸ. ನನ್ನ ಬಿಟ್ಟರ ಸಾಕು ಅಂತ ಹತ್ತಿ ಇಳಿದು ಸುಸ್ತಾದ ಸೆಟ್ಟರು ಹೈರಾಣಾಗಿ ಮನಿ ಹಿಡಿದ್ರು. ಈಗ ಬಾಳವ್ವನ ಎಲ್ಲಾ ವ್ಯವಹಾರ ಯಲ್ಲನಗೌಡನಿಂದ ನಡಿತಿತ್ತು. ಹಂಗಾಗಿ ಬಾಳವ್ವ ಅವನ್ನ ನಂಬಿದ್ಲು. ಶೆಟ್ಟರ ಕತಿ ಮುಗದ ಮ್ಯಾಗ ಮತ್ಯರ‍್ಯಾರದೋ ಜೊತೆ ಸಂಬಂಧ ಇತ್ತು ಅಂತ ಊರಾಗ ಮಾತಾಡಿಕೊಂತಿದ್ರು. ತೋಯಿಸಿಕೊಂಡ ಮ್ಯಾಲೆ ಮಳಿ ಅಂಜಿಕಿ ಯಾಕ ಅಂತ ಬಾಳವ್ವಗೂ ಅನಿಸಿರಬೇಕು. ಬರೋದನ್ನ ಬಾಚಿಕೊಂಡರಾತು ಅಂತ ತೀರ್ಮಾನ ಮಾಡಿದ್ಲೊ ಏನೋ ಗೊತ್ತಿಲ್ಲ. ಎಲ್ಲ ಮುಗಿಸಿ ಯಲ್ಲನಗೌಡನ ಮನಿ ಹಿಡಿದಿದ್ಲು. ಸಾವೆಂತ್ರವ್ವ ಈ ನಡುವೆ ತೀರಿ ಹೋಗಿದ್ಲು ಆ ದಂಡೆಗೆ ಈ ದಂಡೆಗೆ ಬಡದ ಹಣ್ಣಾದ ಬಾಳವ್ವನ ಆರೋಗ್ಯ ಹದಗೆಟ್ಟಿತ್ತು.


ಗಂಟು ಮಾಡಿಕೊಂಡಿದ್ದ ಬಾಳವ್ವನ ಕಾಳಜಿ ಮಾಡೋದು ಯಲ್ಲನಗೌಡಗ ತ್ರಾಸ ಅನಿಸಲಿಲ್ಲ. ಈಕಿ ಸತ್ತ ಮೇಲೆ ಕೂಡಿ ಇಟ್ಟಿದ್ದು ನನಗ ಬರೋದಲ್ಲ ಅಂದುಕೊಂಡು ಸಂಭ್ರಮಿಸಿದ್ದ. ಎಷ್ಟೋ ದಿನಗಳ ಕಾಲ ಬಾಳವ್ವ ತ್ವಾಟದ ಮನಿಯಾಗ ಇದ್ಲು. ಅದು ಎಂಥದ್ದೊ ಕಾಯಿಲೆ ಒತ್ತರಿಸಿ ಬಂದು ಹುಬ್ಬಳ್ಳಿ ದವಾಖಾನಿಗೆ ಸೇರಿದ್ಲು. ಈಗ ಹೆಣ ಆಗಿ ಊರು ಸರ‍್ಯಾಳ. ಕಾಲ ಕಲ್ಲಾಗಿ ಕೂಡಲಾರದ ವರ್ತಮಾನದ ಸತ್ಯಾನ ಬಿಚ್ಚಿ ತೋರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT