ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶಕನ ಹೆಂಡತಿಗೆ ಕತೆಗಾರ ಓದಿ ಹೇಳಿದ ಕತೆ

ಕಥೆ
Last Updated 30 ಜೂನ್ 2018, 14:37 IST
ಅಕ್ಷರ ಗಾತ್ರ

ವಿಮರ್ಶಕನ ಹೆಂಡತಿ ಜ್ಯುರಿಕ್ ಸರೋವರದಲ್ಲಿನ ದೊಡ್ಡ ಕ್ಯಾಬಿನ್ ಮಾದರಿಯ ತನ್ನ ಮನೆಯಲ್ಲಿ ಏಕಾಂಗಿಯಾಗಿ ಇದ್ದ ಒಂದು ದಿನ. ಆ ಮನೆಯನ್ನು ತಲುಪಲು ಇದ್ದುದು ಒಂದು ಖಾಸಗಿ ದಾರಿ ಮಾತ್ರ. ಆದ್ದರಿಂದ ಯಾರೂ ಸುಲಭವಾಗಿ ಅಲ್ಲಿಗೆ ಬಂದು ಅವರ ಏಕಾಂತಕ್ಕೆ ಭಂಗ ತರಲು ಸಾಧ್ಯ ಇರಲಿಲ್ಲ. ಆ ದಿನ ವಿಮರ್ಶಕನ ಹೆಂಡತಿ ಚಹಾ ಮಾಡುತ್ತಿರುವಾಗ ಯಾರೋ ಅವಳನ್ನು ಗಮನಿಸುತ್ತಾ ಇದ್ದಾರೆ ಎಂದು ಅವಳಿಗೆ ಭಾಸವಾಯಿತು. ಅವಳು ತಲೆ ಎತ್ತಿ ನೋಡಿದಾಗ ಕಿಟಕಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯ ಮುಖ ಕಾಣಿಸಿತು. ತರುಣನ ಹಾಗೆ ಕಾಣುತ್ತಿದ್ದ ಅವನ ಮುಖದಲ್ಲಿ ಗಡುಸಾದ ಬಿಗುವಾದ ಚಹರೆ ಎದ್ದು ಕಾಣುತ್ತಿತ್ತು. ಅವಳು ಬಾಗಿಲನ್ನು ತೆರೆದಳು. ನಮಸ್ಕಾರವನ್ನೂ ಮಾಡದೆ ಯಾವ ವಿವರಣೆಯನ್ನೂ ಕೊಡದೆ ಆ ಅಪರಿಚಿತ ವ್ಯಕ್ತಿ ಅವಳನ್ನು ಪಕ್ಕಕ್ಕೆ ಸರಿಸಿ ಮನೆಯೊಳಗೆ ಕಾಲಿರಿಸಿದ. ಒಳಗೆ ಬಂದವನೇ ಅಲ್ಲಿ ಯಾವುದೇ ಧ್ವನಿ ಕೇಳಿಸದ ಕಾರಣ ಬೆದರಿಕೆಯ ಧಾಟಿಯಲ್ಲಿ ಆತ ಕೇಳಿದ-

‘ಅವನು ಎಲ್ಲಿದ್ದಾನೆ?’

ವಿಮರ್ಶಕನ ಹೆಂಡತಿ ಮಾರುತ್ತರ ಕೊಡದೆ ಆತ್ಮೀಯ ಮುಗುಳ್ನಗೆ ಬೀರಿ ಅವನಿಗೆ ಕುಳಿತುಕೊಳ್ಳಲು ಸೂಚಿಸಿದಳು. ಅವನ ಹರಕುಮುರುಕಾದ ಬ್ರೀಫ್‌ಕೇಸ್‌ನ ಮೇಲೆ ಕಣ್ಣಾಡಿಸಿ, ಅವನ ಒದ್ದೆಯಾದ ಕೋಟನ್ನು ಕಳಚಲು ಹೇಳಿದಳು. ಆ ಅಪರಿಚಿತನು ಅಸಮಾಧಾನದಿಂದಲೇ ಅವಳ ಸಲಹೆಯನ್ನು ಪಾಲಿಸಿದನು. ಅವಳು ಕೇಳಿದಳು-

‘ಆತನು ಒಬ್ಬ ಲೇಖಕನೇ’ ಎಂದು. ಅವನು ಯಾವುದೇ ಬಗೆಯ ಆಶ್ಚರ್ಯವನ್ನು ಪ್ರಕಟಿಸದೆ ಅಸಮಾಧಾನದಿಂದಲೇ ತನ್ನ ಹೆಸರನ್ನು ಹೇಳಿದನು- ‘ಬೀಟ್ ರೊಬೆಲ’. ತಾನು ಯಾವ ಊರಿನಿಂದ ಬಂದೆ ಎಂದು ಊರಿನ ಹೆಸರನ್ನೂ ಹೇಳಿದನು- ‘ಬಾದೆನ್ ಬಾದೆನ್.’ ತಾನು ಒಬ್ಬ ಲೇಖಕ ಎಂಬುದನ್ನೂ ಖಚಿತಪಡಿಸಿದನು. ತನ್ನನ್ನು ಸಂಕಷ್ಟಕ್ಕೆ ಒಳಗು ಮಾಡಿದ ಘೋರ ಅಪರಾಧದ ಬಗ್ಗೆ ಅವಳ ವಿಮರ್ಶಕ ಗಂಡನಿಂದ ಸೂಕ್ತ ವಿವರಣೆಯ ಹಕ್ಕೊತ್ತಾಯಕ್ಕಾಗಿ ತಾನು ಅಲ್ಲಿಗೆ ಧಾವಿಸಿ ಬಂದುದಾಗಿ ತಿಳಿಸಿದನು.

ವಿಮರ್ಶಕನ ಹೆಂಡತಿ ಸಹಾನುಭೂತಿಯಿಂದ ಮುಗುಳ್ನಕ್ಕು ಆ ಆಗಂತುಕನಿಗೆ ಚಹಾ ಮಾಡಿಕೊಟ್ಟಳು. ಚಹಾ ಕುಡಿಯುವ ಮೊದಲು ಆತನು ವಿಮರ್ಶಕನ ಹೆಂಡತಿಯಲ್ಲಿ ಅವಳ ಗಂಡ ಎಷ್ಟು ಹೊತ್ತಿಗೆ ಮನೆಗೆ ಬರಬಹುದು ಎಂದು ಕೇಳಿದನು. ಅವಳು ಹೇಳಿದಳು- ‘ನನ್ನ ಗಂಡ ಅವನ ಗೆಳೆಯ ಮ್ಯಾಕ್ಸ್‌ಫ್ರಿಶ್‌ನ ಜೊತೆಗೆ ಹರಟೆ ಹೊಡೆಯಲು ಹೋಗಿದ್ದಾನೆ. ಅವನ ಆ ಗೆಳೆಯನಾದರೋ ತನ್ನ ಯೋಜನೆಗಳ ಬಗ್ಗೆ ಉತ್ಸಾಹದಿಂದ ಬಹಳ ಮಾತಾಡುವ ಸ್ವಭಾವದವನು. ಹಾಗಾಗಿ ಅವರ ಮಾತುಕತೆ ಯಾವಾಗ ಮುಗಿಯಬಹುದು ಎಂದು ಹೇಳಲು ಸಾಧ್ಯವಿಲ್ಲ.’ ಇದನ್ನು ಕೇಳಿದ ಆ ಆಗಂತುಕ ಒಂದು ಗುಟುಕು ಚಹಾ ಹೀರಿ, ತನ್ನ ವಾಚ್‌ನ ಕಡೆಗೆ ಕಣ್ಣು ಹಾಯಿಸಿ ಚಿಂತಾಕ್ರಾಂತನಾಗಿ, ವಿಮರ್ಶಕನ ಹೆಂಡತಿಯನ್ನು ದಿಟ್ಟಿಸಿ ನೋಡಿದನು. ಸ್ವಲ್ಪ ಹೊತ್ತು ಅವಳ ನಿರಾಳವಾದ ಪ್ರಸನ್ನತೆಯ ಮುಖವನ್ನು ನೋಡುತ್ತಾ ಯಾವುದೇ ಬಗೆಯ ತೀರ್ಮಾನಕ್ಕೆ ಬಾರದ ಮನಸ್ಥಿತಿಯಲ್ಲಿ ಇದ್ದನು.

ಕೂಡಲೇ ಮತ್ತೆ ಕೋಪೋದ್ರಿಕ್ತನಾಗಿ ಜಿಗಿದು ಮುಂಬಾಗಿಲ ದಿಕ್ಕಿನ ಕಡೆಗೆ ನೋಡುತ್ತಾ ಆಪಾದನೆಯ ಧ್ವನಿಯಲ್ಲಿ ಅವಳಲ್ಲಿ ಕೇಳಿದನು-

‘ಅವನು ಹಾಗೆ ಮಾಡಬಹುದೇ? ಒಬ್ಬ ವಿಮರ್ಶಕನು ಒಂದು ಕೃತಿಯ ಸಂರಚನೆ, ಸಂಘರ್ಷ, ಪಾತ್ರಗಳ ಮನೋವಿಜ್ಞಾನ ಇವನ್ನೆಲ್ಲಾ ಗಮನಿಸದೆ, ಕೃತಿಯ ಸಂವಿಧಾನವನ್ನು ಮಾತ್ರ ಆಧರಿಸಿಕೊಂಡು ವಿಮರ್ಶೆ ಮಾಡಬಹುದೇ? ತನ್ನ ವ್ಯಕ್ತಿಗತ ಓದಿನ ಪೂರ್ವಗ್ರಹದಿಂದ ಆ ಕೃತಿ ಅತ್ಯಂತ ಬೋರ್ ಹೊಡೆಸುವಂತಾದ್ದು ಎಂದಷ್ಟೇ ಟಿಪ್ಪಣಿ ಮಾಡಬಹುದೇ? ಅಂತಿಮವಾಗಿ ಅದು ಬೇಜಾರಿನ ಬಗೆ ಇರುವ ಕೃತಿ, ಬೋರ್ ಹೊಡೆಸುತ್ತದೆ ಎಂದು ಆ ಕೃತಿಯ ಲೇಖಕನನ್ನು ನಿಂದಿಸಬಹುದೆ?’

ಕಹಿ ಭಾವನೆಯ ಕಂಪನದಿಂದಲೇ ಆತ ವಿಮರ್ಶಕನ ಹೆಂಡತಿಯ ಕಡೆಗೆ ತಿರುಗಿ ನೋಡಿ ಕೇಳಿದ- ‘ಅವನು ನಿಜವಾಗಿಯೂ ಹಾಗೆ ಮಾಡಬಹುದೆ?’

ವಿಮರ್ಶಕನ ಹೆಂಡತಿ ಅವನಿಗೆ ಮತ್ತಷ್ಟು ಚಹಾ ಕುಡಿಯಲು ಉತ್ತೇಜನ ನೀಡಿದಳು. ಅದು ಅರ್ಲ್‌ಗ್ರೇ ಟೀ. ಹಡಗೊಂದು ಬಿರುಗಾಳಿಯಲ್ಲಿ ಅಪಘಾತಕ್ಕೆ ಸಿಕ್ಕಿದ ಪರಿಣಾಮವಾಗಿ ದೊರೆತ ಚಾ ಹುಡಿ. ಅವಳು ಒಂದು ಸಿಗರೇಟನ್ನು ನೈಲ್ ಕಟ್ಟರ್‌ನಿಂದ ಮೂರು ತುಂಡು ಮಾಡಿದಳು. ಅವುಗಳಲ್ಲಿ ಒಂದು ತುಂಡನ್ನು ಸಿಗರೇಟ್ ನಳಿಗೆಯಲ್ಲಿ ತುರುಕಿ ಸೇದಲು ಸುರು ಮಾಡಿದಳು. ಆಗಂತುಕನು ತನ್ನ ಬ್ರೀಫ್‌ಕೇಸನ್ನು ತೆರೆದಾಗ ಅವಳಿಗೆ ಆಶ್ಚರ್ಯವಾಗಲಿಲ್ಲ. ಅವನು ಆ ಬ್ರೀಫ್‌ಕೇಸಿನಿಂದ ಒಂದು ಹಸ್ತಪ್ರತಿಯನ್ನು ಹೊರಗೆ ತೆಗೆದನು. ಅದರ ಹಾಳೆಗಳನ್ನು ತಿರುವಿ ಸರಿಯಾಗಿ ಜೋಡಿಸಿದನು. ಇಂತಹ ಸಂದರ್ಭದಲ್ಲಿ ವಿಮರ್ಶಕನು ಮನೆಯಲ್ಲಿ ಇಲ್ಲದಿರುವುದಕ್ಕೆ ಬೇಸರವನ್ನು ಪ್ರಕಟಿಸಿದನು.

ತಾನು ಬರೆದ ಕತೆಯನ್ನು ಆ ವಿಮರ್ಶಕನ ಮುಂದೆ ಓದಿ ಆತನು ತಾನು ಮಾಡಿದ ತಪ್ಪು ತೀರ್ಮಾನವನ್ನು ಹಿಂದಕ್ಕೆ ಪಡೆಯುವಂತೆ ಮಾಡುವ ಉದ್ದೇಶದಿಂದ ಅವನು ಅಲ್ಲಿಗೆ ಬಂದಿದ್ದನು. ಆ ವಿಮರ್ಶಕನು ತನ್ನ ಬರಹದ ಬಗ್ಗೆ ಮಾಡಿದ ತಪ್ಪು ಟೀಕೆಗಾಗಿ ಅವನ ಸಮಯವನ್ನು ಹಾಳು ಮಾಡುವ ಹಕ್ಕು ತನಗಿದೆ ಎನ್ನುವುದು ಅವನ ಧೋರಣೆಯಾಗಿತ್ತು. ವಿಮರ್ಶಕನ ಹೆಂಡತಿ ತಲೆ ಆಡಿಸಿದಳು; ತಾನು ಸಿದ್ಧಮಾಡಿದ ಸಾಲ್ಮನ್ ಸ್ಯಾಂಡ್‌ವಿಚ್ ಮತ್ತು ಚಿಕನ್ ಸಲಾಡ್‌ಅನ್ನು ಅವನಿಗೆ ತಿನ್ನಲು ಕೊಟ್ಟಳು. ತನ್ನ ಗಂಡ ತಡವಾಗಿ ಬಂದರೆ ಅವನಿಗಾಗಿ ತಾನು ತಯಾರಿಸಿದ್ದು ಇದು ಎಂದಳು. ಆಗಂತುಕನು ಒಂದು ಸ್ಯಾಂಡ್‌ವಿಚ್‌ ಅನ್ನು ಸ್ವಲ್ಪ ಕಚ್ಚಿ ಕೂಡಲೇ ಅದನ್ನು ತಟ್ಟೆಯಲ್ಲಿ ಇಟ್ಟನು. ಮೊದಲ ಬಾರಿ ಕಚ್ಚಿದಾಗಲೇ ಅವನಲ್ಲಿ ಅನಿರೀಕ್ಷಿತವಾಗಿ ಯಾವುದೋ ಒಂದು ಬಗೆಯ ಸ್ಫೂರ್ತಿ ಬಂದಂತೆ ಆಯಿತು.

ಅವನು ವಿಮರ್ಶಕನ ಹೆಂಡತಿಯನ್ನು ಅನ್ವೇಷಣೆಯ ದೃಷ್ಟಿಯಿಂದ ಅಳೆದು ನೋಡುವ ರೀತಿಯಲ್ಲಿ ಅವಲೋಕಿಸಿ, ಯಾವುದೇ ಆಕ್ಷೇಪಣೆಯ ಮುಖಭಾವ ಇಲ್ಲದ ಧ್ವನಿಯಲ್ಲಿ ಹೇಳಿದನು- ‘ನಾನು ಓದುವುದನ್ನು ನೀನು ಕೇಳುತ್ತೀಯ? ನಾನು ಬರೆದ ಹಸ್ತಪ್ರತಿಯನ್ನು ಓದುತ್ತೇನೆ. ನೀನು ಕೇಳು. ಈ ಕತೆಯ ಹೆಸರು ‘ಒಂದು ದಾರಿಯ ವರ್ಣನೆ’ ಅರ್ಥ ಆಯಿತೇ?’ ವಿಮರ್ಶಕನ ಹೆಂಡತಿ ಆತ್ಮೀಯತೆಯಿಂದ ತಲೆ ಆಡಿಸಿದಳು. -‘ದಯವಿಟ್ಟು ಓದು. ಅರ್ಥ ಮಾಡಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ.’ ಪ್ರೋತ್ಸಾಹದ ಧ್ವನಿಯಲ್ಲಿ ಅವಳು ಹೇಳಿದಳು. ಆಗಂತುಕನು ತನ್ನ ಕತೆಯನ್ನು ಓದಲು ಸುರು ಮಾಡಿದನು.

“ಹ್ಯಾಂಬರ್ಗ್ ಪಟ್ಟಣದಲ್ಲಿ ಮಧ್ಯಾಹ್ನದ ಹೊತ್ತು ಒಬ್ಬ ಮುದುಕನು ಒಂದು ಪಾರ್ಕ್‌ನ ದಾರಿಯಲ್ಲಿ ಏನನ್ನೋ ಹುಡುಕುತ್ತಾ ನಡೆಯುತ್ತಿದ್ದನು. ಆ ಪಾರ್ಕಿನಲ್ಲಿ ಒಂದು ಬೆಂಚನ್ನು ಕಂಡ ಕೂಡಲೇ ಆ ಕಡೆಗೆ ಹೆಜ್ಜೆ ಹಾಕಿದನು. ಅವನು ಬೆಂಚಿನ ಹತ್ತಿರಕ್ಕೆ ಬಂದಾಗ ಅಲ್ಲಿ ಬೆಂಚಿನ ಮೇಲೆ ಶುಭ್ರವಾದ ಬಟ್ಟೆಗಳನ್ನು ತೊಟ್ಟಿರುವ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬನನ್ನು ಕಂಡನು. ಆ ವ್ಯಕ್ತಿ ಒಂದು ಫೈಲನ್ನು ನೋಡುತ್ತಾ, ಅದರಲ್ಲಿ ಅಲ್ಲೊಂದು ಕಡೆ ಇಲ್ಲೊಂದು ಕಡೆ ಗುರುತು ಮಾಡಿಕೊಳ್ಳುತ್ತಾ ಇದ್ದನು.

ಆ ಮುದುಕನು ಬೆಂಚಿನಲ್ಲಿ ಕುಳಿತವನನ್ನು ಉದ್ದೇಶಿಸಿ ಮಾತನಾಡುತ್ತಾ ಬಾಲ್ದೊವಿಯ ಇನ್ಸೂರೆನ್ಸ್ ಕಂಪನಿಯ ಪ್ರಧಾನ ಕಚೇರಿಯ ಕಟ್ಟಡಕ್ಕೆ ಹೋಗುವ ದಾರಿ ಯಾವುದು ಎಂದು ಕೇಳಿದನು. ಆ ಕಟ್ಟಡವು ಮುಖ್ಯ ಸ್ಟೇಷನ್‌ನ ಪೂರ್ವ ಪ್ರವೇಶ ದ್ವಾರದಿಂದ ಬಹಳ ದೂರ ಇಲ್ಲ ಎಂದು ತಾನು ಕೇಳಿದ್ದೇನೆ ಎಂದು ಹೇಳಿದನು. ಬಾಲ್ದೊವಿಯ ಇನ್ಸೂರೆನ್ಸ್ ಕಂಪನಿಯ ಹೆಸರನ್ನು ಕೇಳಿದೊಡನೆಯೇ ಬೆಂಚಿನಲ್ಲಿ ಕುಳಿತಿದ್ದವನು ತಲೆ ಎತ್ತಿ ನೋಡಿದನು, ಪ್ರಶ್ನಿಸಿದವನನ್ನು ಒಂದು ಕ್ಷಿಪ್ರ ನೋಟದಿಂದ ಒಟ್ಟಾರೆಯಾಗಿ ಗ್ರಹಿಸಿದನು; ಫೈಲನ್ನು ಮುಚ್ಚಿ ತನ್ನಷ್ಟಕ್ಕೇ ಒಂದು ಕ್ಷಣ ಯೋಚಿಸಿ, ಬಳಿಕ ಅಲ್ಲಿಗೆ ಹೋಗಬೇಕಾದ ದಾರಿಯ ವಿವರಗಳನ್ನು ಕೊಟ್ಟನು.

‘ಈ ಪಾರ್ಕಿನ ಗುಲಾಬಿ ಹೂಗಳ ಎರಡನೆಯ ಪಾತಿಯ ಪಕ್ಕದಿಂದ ಹೊರಗೆ ಹೋಗಿ, ರಿಂಗ್ ರೋಡಿಗೆ ಬಂದು, ಆ ರಸ್ತೆಯಲ್ಲಿ ದೊಡ್ಡ ಸರ್ಕಲ್‌ವರೆಗೆ ನಡೆಯಬೇಕು. ಅಲ್ಲಿ ಬಹಳ ಎಚ್ಚರ ವಹಿಸಬೇಕು. ಅದು ನಗರದ ಅತ್ಯಂತ ಅಪಾಯಕಾರಿ ಸ್ಥಳ. ಜನದಟ್ಟಣೆಯ ಮೂರು ರಸ್ತೆಗಳು ಆ ಸರ್ಕಲ್‌ನಲ್ಲಿ ಒಟ್ಟು ಸೇರುತ್ತವೆ. ಆ ಸರ್ಕಲ್‌ನಲ್ಲಿ ಬಹುಸಂಖ್ಯೆಯಲ್ಲಿ ಬೀದಿದೀಪಗಳು ಇದ್ದರೂ ಇಲ್ಲಿ ಯಾರ ಪ್ರಾಣದ ರಕ್ಷಣೆಯ ಭರವಸೆಯೂ ಸಂಪೂರ್ಣವಾಗಿ ಇಲ್ಲ.’

‘ಸರಿ’ ಎಂದ ಆ ಮುದುಕ, ‘ಆ ಟ್ರಾಫಿಕ್ ಸರ್ಕಲ್ ಬಳಿಕ ಹೇಗೆ ಮುಂದಕ್ಕೆ ಹೋಗಬೇಕು?’

‘ಬಳಿಕ ಒಂದು ಪೆಟ್ರೋಲ್ ಸ್ಟೇಷನ್ ದಾಟಿ ಮುಂದಕ್ಕೆ ಹೋಗಬೇಕು. ಅದು ಪೂರ್ಣ ಪ್ರಮಾಣದ ಸ್ವಯಂ ಸೇವೆಯ ಪೆಟ್ರೋಲ್ ಬಂಕ್. ಅಲ್ಲಿ ಪ್ರತಿ ವಾರ ಒಂದಲ್ಲ ಒಂದು ರೀತಿಯ ದರೋಡೆ ನಡೆಯುತ್ತಿರುತ್ತದೆ. ಈಗಾಗಲೇ ಎರಡು ಮಂದಿಯನ್ನು ಅಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಆದರೆ ಅದು ನಡೆದದ್ದು ಸುಮಾರು ಮಧ್ಯರಾತ್ರಿಯ ಹೊತ್ತು. ಆದರೂ ಆ ಸ್ಥಳವನ್ನು ದಾಟಿ ಹೋಗುವಾಗ ತಮ್ಮ ತಮ್ಮ ರಕ್ಷಣೆ ಮಾಡಿಕೊಳ್ಳುವುದು ಒಳ್ಳೆಯದು.’

ಆ ಆಗಂತುಕ ತನ್ನ ಕತೆ ಓದುವುದನ್ನು ಅರ್ಧಕ್ಕೆ ನಿಲ್ಲಿಸಿ, ವಿಮರ್ಶಕನ ಹೆಂಡತಿಯ ಕಡೆಗೆ ಚೇಷ್ಟೆಯ ನೋಟವನ್ನು ಬೀರಿದನು. ಅವಳಾದರೋ ಆಸಕ್ತಿಯಿಂದ ಆಲಿಸುತ್ತಿದ್ದಳು. ಅವಳಲ್ಲಿ ಆತ ಕೇಳಿದ- ‘ನಾನು ಸರಿಯಾಗಿ ಓದುತ್ತಿದ್ದೇನಲ್ಲವೇ?’

‘ಬಹಳ ಸರಿಯಾಗಿ’ ಪ್ರೋತ್ಸಾಹದ ಧಾಟಿಯಲ್ಲಿ ಅವಳು ಹೇಳಿದಳು ‘ದಯವಿಟ್ಟು ಓದುವುದನ್ನು ಮುಂದುವರಿಸು’. ಸಹಜವಾಗಿಯೇ ಅವಳ ಮಾತಿನಿಂದ ಸಂತುಷ್ಟನಾದ ಆತ ತನ್ನ ಕತೆ ‘ಒಂದು ದಾರಿಯ ವರ್ಣನೆ’ಯ ಓದನ್ನು ಮುಂದುವರಿಸಿದನು.

‘ಆ ಪೆಟ್ರೋಲ್ ಬಂಕ್‌ನ ಬಳಿಕ ನೀನು ಬಾಲ್ದೊವಿಯ ಕಟ್ಟಡಕ್ಕೆ ಹೋಗುವ ದಾರಿಯಲ್ಲಿ ಒಂದು ಮೀನಿನ ಹೋಟೆಲನ್ನು ದಾಟುತ್ತಿ. ಆ ಹೋಟೆಲ್ ಈ ಹೊತ್ತಿಗೆ ಮುಚ್ಚಿರುತ್ತದೆ. ಅಲ್ಲಿ ಆಫ್ರಿಕನ್ ಸರೋವರದಲ್ಲಿ ಹಿಡಿದ ಪರ್ಚ್ ಮೀನುಗಳನ್ನು ಬೇಯಿಸಿ ಕೊಡುತ್ತಾರೆ. ಅಲ್ಲಿಂದ ಮುಂದೆ ಹೋದರೆ ಎಡಬದಿಗೆ ತಿರುಗಿದರೆ ನೀನು ಒಂದು ಸುರಂಗವನ್ನು ಪ್ರವೇಶ ಮಾಡುತ್ತಿ. ಪಟ್ಟಣದ ಅನೇಕ ಭಿಕ್ಷುಕರು ಆ ಸುರಂಗವನ್ನು ತಮ್ಮ ವಾಸಸ್ಥಾನ ಮಾಡಿಕೊಂಡಿದ್ದಾರೆ. ಅವರು ಬಹಳ ಆಸೆಬುರುಕರೇನೂ ಅಲ್ಲ. ಕೇವಲ ಒಂದು ಮಾರ್ಕ್ ಹಣವನ್ನು ಕೇಳುತ್ತಾರೆ. ಆದ್ದರಿಂದ ಕಿಸೆಯಲ್ಲಿ ಕೆಲವು ಮಾರ್ಕ್ ನಾಣ್ಯಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಆ ಬಳಿಕ ಮುಂದೆ ಹೋದರೆ ಒಂದು ಸೇತುವೆ ಸಿಗುತ್ತದೆ. ಅದನ್ನು ದಾಟಿ ಮುಂದಕ್ಕೆ ಹೋದರೆ ಕೆಲವು ಉಗ್ರಾಣ ಕಟ್ಟಡಗಳಿಂದ ಮೇಲುಗಡೆ ಎತ್ತರದಲ್ಲಿ ಮುಖ್ಯ ಕಟ್ಟಡದ ಮಾಡಿನ ಮೇಲೆ ‘ಬಾಲ್ದೊವಿಯ’ ಹೆಸರಿನ ಅಕ್ಷರಗಳು ದೊಡ್ಡದಾಗಿ ಕಾಣಿಸುತ್ತವೆ.’

ಆಗಂತುಕ ಮತ್ತೆ ಕತೆ ಓದುವುದನ್ನು ನಿಲ್ಲಿಸಿದ. ವಿಮರ್ಶಕನ ಹೆಂಡತಿಯ ಕಡೆಗೆ ಬೆರಗಿನಿಂದ ನೋಡಿದ. ಅವಳಲ್ಲಿ ಅಸಹನೆ ಅಥವಾ ಅಸಮಾಧಾನದ ಯಾವ ಲಕ್ಷಣವೂ ಕಾಣಿಸಲಿಲ್ಲ. ಆಕೆ ತುಂಬಾ ಸಹಾನುಭೂತಿಯಿಂದ ಕತೆಯಲ್ಲಿ ಸಂಪೂರ್ಣವಾಗಿ ಮಗ್ನಳಾಗಿದ್ದವಳು ಒಂದು ಪ್ರಶ್ನೆಯನ್ನು ಕೇಳಿದಳು- ‘ಆ ಮುದುಕನು ಆ ಎಲ್ಲಾ ಲ್ಯಾಂಡ್‌ಮಾರ್ಕ್‌ಗಳನ್ನು ದಾಟಿಕೊಂಡು ಹೋದನಲ್ಲವೇ? ಆ ಟ್ರಾಫಿಕ್ ಸರ್ಕಲ್, ಪೆಟ್ರೋಲ್ ಸ್ಟೇಷನ್, ಮೀನಿನ ಹೋಟೆಲ್, ಸುರಂಗ ಮತ್ತು ಕೊನೆಯಲ್ಲಿ ಸೇತುವೆ. ಇವೆಲ್ಲವೂ ಅನಿವಾರ್ಯ ತಾನೇ?’ ಆಗಂತುಕ ಆಶ್ಚರ್ಯದಿಂದ ಹೇಳಿದ - ‘ಆ ಮುದುಕನು ಈ ಎಲ್ಲಾ ಲ್ಯಾಂಡ್ ಮಾರ್ಕ್‌ಗಳನ್ನು ಪುನರಾವರ್ತಿಸಿದನು. ಆದರೆ ಆ ಭಾಗವನ್ನು ಓದುವುದನ್ನು ನಾನು ಕೈಬಿಡುತ್ತಿದ್ದೇನೆ.’ ‘ದಯವಿಟ್ಟು ಮುಂದಕ್ಕೆ ಓದು’ ವಿಮರ್ಶಕನ ಹೆಂಡತಿಯ ಒತ್ತಾಸೆ.

ಆತ ಓದನ್ನು ಮುಂದುವರಿಸಿದ. ಆದರೆ ಅವನ ಓದುವಿಕೆಯಲ್ಲಿ ಉತ್ಸಾಹದ ಕೊರತೆಯನ್ನು ಅವಳು ಗುರುತಿಸಿದಳು. ಅವನು ಅವಸರದಲ್ಲಿ ಓದುತ್ತಿದ್ದನು. ಓದುವ ಧಾಟಿಯಲ್ಲಿ ಏಕತಾನತೆ ಇತ್ತು. ಅವನು ಮತ್ತೆ ಸ್ವಲ್ಪ ಚಾ ಕುಡಿದ ಬಳಿಕವೂ ಅವನ ಓದುವ ಧಾಟಿಯಲ್ಲಿ ಬದಲಾವಣೆ ಆಗಲಿಲ್ಲ. ಅವನ ವಿವರಣೆಯು ಆ ಲ್ಯಾಂಡ್‌ಮಾರ್ಕ್‌ಗಳನ್ನು ಬಡಬಡಿಸುವುದಕ್ಕಷ್ಟಕ್ಕೆ ಸೀಮಿತವಾಯಿತು. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಅವನು ತನ್ನ ಶಾಂತ ಮನಸ್ಥಿತಿಗೆ ಬಂದು, ಬೆಂಚಿನಲ್ಲಿ ಕುಳಿತ ವ್ಯಕ್ತಿಯ ಬಗ್ಗೆ ಮತ್ತು ಆತನು ಹೇಳುವ ದಾರಿಯ ವರ್ಣನೆಯ ಬಗ್ಗೆ ಕತೆಯನ್ನು ಮುಂದುವರಿಸಿದನು.

‘ಈ ಎಲ್ಲ ಮಾಹಿತಿ ಕೇಳಿದ ಮುದುಕನಿಗೆ ಬೆಂಚಿನಲ್ಲಿ ಕುಳಿತ ವ್ಯಕ್ತಿ ಕೊಟ್ಟ ಶಿಫಾರಸು ಏನೆಂದರೆ, ಅವನು ಉಗ್ರಾಣಗಳನ್ನು ದಾಟಿ ಒಂದು ಚರ್ಚ್‌ನ ಕಡೆಗೆ ಹೋಗಬೇಕು. ಆ ಚರ್ಚ್‌ ಅನ್ನು ದಾಟಿಕೊಂಡು ಹೋದರೆ ಮುಂದೆ ಲೂಥರ್ ಸ್ಕ್ವೇರ್‌ ಸಿಗುತ್ತದೆ. ಈ ಲೂಥರ್ ಸ್ಕ್ವೇರ್‌ ನಲ್ಲಿ ಪ್ರತೀದಿನ ಒಂದಲ್ಲ ಒಂದು ಬಗೆಯ ಚಳವಳಿಗಳು ಪ್ರತಿಭಟನೆಯ ಪ್ರದರ್ಶನಗಳು ನಡೆಯುತ್ತಿರುತ್ತವೆ. ಈ ಸ್ಕ್ಯೆರ್‌ನಲ್ಲಿ ಸಿಕ್ಕಿಬಿದ್ದವರು ತಮ್ಮ ತಮ್ಮ ಪಂಥ ಬಣ್ಣ ಪಕ್ಷಗಳನ್ನು ಘೋಷಿಸಬೇಕು. ಇವುಗಳಿಗೆ ಸಂಬಂಧಿಸಿದಂತೆ ತಮ್ಮ ನಿರ್ದಿಷ್ಟ ಅಭಿಪ್ರಾಯಗಳನ್ನು ಕೊಡದೆ ಯಾರೂ ಮುಂದೆ ಹೋಗುವಂತಿಲ್ಲ.

ಇದನ್ನು ಗಮನಿಸಿಯೇ ಸರಕಾರವು ಲ್ಯೂಥರ್ ಸ್ಕ್ವೇರ್‌ನ ಬಳಿಯಲ್ಲಿ ವೈದ್ಯಕೀಯ ಚಿಕಿತ್ಸೆಯ ಒಂದು ವಿಶಾಲವಾದ ಟೆಂಟ್ ಅನ್ನು ಹಾಕಿದೆ. ಆ ಚಿಕಿತ್ಸಾ ಕೇಂದ್ರದಲ್ಲಿ ತರಬೇತಿ ಪಡೆದ ಸಿಬ್ಬಂದಿಯು ಪ್ರಥಮ ಚಿಕಿತ್ಸೆಯನ್ನು ಕೊಡುತ್ತಾರೆ. ಇದನ್ನು ಕೇಳುತ್ತಲೇ ಮುದುಕನ ಮುಖದಲ್ಲಿ ಆತಂಕದ ಛಾಯೆ ಕಾಣಿಸಿಕೊಂಡಿತು. ಬೆಂಚಿನಲ್ಲಿ ಕುಳಿತ ವ್ಯಕ್ತಿಯು ಹೇಳಿದ ದಾರಿಯ ಹೆಜ್ಜೆ ಗುರುತುಗಳನ್ನು ಮುದುಕನು ನೆನಪು ಮಾಡಿಕೊಳ್ಳುತ್ತಿದ್ದನು; ಬಾಲ್ದೊವಿಯ ಕಟ್ಟಡಕ್ಕೆ ಹೋಗುವ ದಾರಿಯಲ್ಲಿನ ಅಪಾಯಗಳನ್ನು ಕುರಿತು ಅವನು ಚಿಂತಿಸುತ್ತಿದ್ದನು.’

ಮಾತಿನ ನಡುವೆ ಆಗಂತುಕನು ಫಕ್ಕನೆ ತನ್ನ ಹಸ್ತಪ್ರತಿಯ ಹಾಳೆಗಳನ್ನು ಒಟ್ಟು ಮಾಡಿ ಮೇಜಿನ ಮೇಲೆ ಇಟ್ಟನು. ಅವನ ಮುಖದಲ್ಲಿ ನಿರಾಶೆಯ ಛಾಯೆ ಕಾಣಿಸುತ್ತಿತ್ತು. ‘ಏನು ವಿಷಯ? ಯಾಕೆ ನಿನ್ನ ಕತೆಯ ಓದನ್ನು ಮುಂದುವರಿಸುತ್ತಿಲ್ಲ?’ ವಿಮರ್ಶಕನ ಹೆಂಡತಿ ಕೇಳಿದಳು. ತಾನು ಓದುವುದನ್ನು ನಡುವಿನಲ್ಲಿ ನಿಲ್ಲಿಸಿದ್ದಕ್ಕೆ ಕಾರಣವನ್ನು ಅವಳಿಗೆ ಕೊಡುವುದಕ್ಕೆ ಮೊದಲು ಅವನು ಒಮ್ಮೆ ತಲೆಯನ್ನು ಕೊಡಹಿಕೊಂಡನು; ಸಿಗರೇಟಿನ ಒಂದು ತುಂಡನ್ನು ಉರಿಸಿ, ಅವಳ ಕಡೆ ತಿರುಗಿ ಕೇಳಿದನು- ‘ನೀನು ಇನ್ನೂ ಬಹಳಷ್ಟು ಕೇಳಬೇಕಾಗಿದೆ, ಆಗಬಹುದು ತಾನೇ?’

‘ಓ, ಆಗಬಹುದು. ನಾನು ಕೇಳಲು ಇಷ್ಟಪಡುತ್ತೇನೆ. ಇದನ್ನು ಕೇಳುವುದಕ್ಕಿಂತ ಹೆಚ್ಚಿನ ಸಂತೋಷ ನನಗೆ ಬೇರೆ ಯಾವುದೂ ಇಲ್ಲ. ಸರಿಯಾಗಿ ಕೇಳುತ್ತಾ ಹೋದರೆ ನಾವು ಕತೆಯಲ್ಲಿ ಬಹಳ ಮುಂದಕ್ಕೆ ಹೋಗಿಬಿಡುತ್ತೇವೆ. ಕೇಳುವುದು ಎಂದರೆ ಮುಂದಕ್ಕೆ ಧಾವಿಸುವುದು, ಅದು ಕೆಲವೊಮ್ಮೆ ಸಂತೋಷ ಕೊಡದೆ ಹೋದರೂ ಕೂಡ.’

ಆಗಂತುಕನು ಅವಳ ಮಾತಿನ ಸೂಕ್ಷ್ಮ ಧ್ವನಿಯನ್ನು ಕುರಿತು ಯೋಚಿಸುತ್ತಾ ಅವಳಲ್ಲಿ ಕೇಳಿದನು- ‘ಹಾಗಾದರೆ ನನ್ನ ಕತೆ ಯಾವ ಕಡೆಗೆ ಚಲಿಸುತ್ತದೆ ಎಂದು ನಿನಗೆ ಗೊತ್ತಾಗುತ್ತದೆಯೇ?’ ಆಕೆ ಹೇಳಿದಳು- ‘ಅದನ್ನು ನೀನು ಬಹಳ ಮೊದಲೇ ಹೇಳಿಬಿಟ್ಟಿದ್ದೀಯಲ್ಲ! ಹೋಗುವ ದಾರಿಯ ಸರಳ ವರ್ಣನೆ ಮಾಡುವಾಗ ದಾರಿಯಲ್ಲಿ ಎದುರಾಗಬಹುದಾದ ಅಪಾಯ ಸರಣಿಯ ಬೆದರಿಕೆಯನ್ನು ಮೊದಲೇ ಸೂಚಿಸಿದ್ದಿಯಲ್ಲ! ಆದ್ದರಿಂದ ಬಹಳ ಉತ್ತಮವಾದ ಸಲಹೆ ಎಂದರೆ ಆ ಮುದುಕ ಒಂದು ಜೀವವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವುದು.

ಆ ಪಾರ್ಕಿನಲ್ಲಿ ಬೆಂಚಿನಲ್ಲಿ ಕುಳಿತು ಫೈಲ್‌ ಹಿಡಿದುಕೊಂಡ ವ್ಯಕ್ತಿ ನನ್ನ ಊಹೆಯ ಪ್ರಕಾರ ಬಾಲ್ದೊವಿಯ ಜೀವವಿಮಾ ಕಂಪೆನಿಯಲ್ಲಿ ಕಮಿಷನ್ ಆಧಾರದಲ್ಲಿ ಕೆಲಸ ಮಾಡುವ ಒಬ್ಬ ಏಜಂಟ್. ನನ್ನ ಊಹೆ ತಪ್ಪಲ್ಲದಿದ್ದರೆ ಅವನು ಆ ದಾರಿಹೋಕ ಮುದುಕನಿಗೆ ಕೊಟ್ಟ ಸಲಹೆ ಏನೆಂದರೆ ‘ಅವನು ಆ ಇನ್‌ಶ್ಯುರೆನ್ಸ್ ಕಂಪನಿಯ ಕಟ್ಟಡದವರೆಗೆ ಹೋಗುವ ಕಷ್ಟ ತೆಗೆದುಕೊಳ್ಳಬೇಕಾಗಿಲ್ಲ. ಅದರ ಬದಲು ಬೆಂಚಿನಲ್ಲಿ ಕುಳಿತ ಆ ವ್ಯಕ್ತಿಯ ಕೈಯಲ್ಲಿ ಇರುವ ಒಂದು ಅರ್ಜಿ ನಮೂನೆಯಲ್ಲಿ ಸಹಿ ಹಾಕಿದರೆ ಸಾಕು.’

ವಿಮರ್ಶಕನ ಹೆಂಡತಿಯ ಈ ಮಾತುಗಳನ್ನು ಕೇಳುತ್ತಲೇ ಆಗಂತುಕನು ಥಟ್ಟನೆ ಎದ್ದುನಿಂತನು. ತನ್ನ ಬಗ್ಗೆಯೇ ಅತೃಪ್ತಿಗೊಂಡ ಅವನು ಕತೆಯ ಹಸ್ತಪ್ರತಿಯ ಹಾಳೆಗಳನ್ನು ತನ್ನ ಬ್ರೀಫ್‌ಕೇಸ್‌ನಲ್ಲಿ ಒತ್ತಿ ತುಂಬಿಸಿ, ಅವಳ ಕಡೆ ಕಣ್ಣೆತ್ತಿ ಕೂಡಾ ನೋಡದೆ ಹೇಳಿದನು- ‘ನಿನ್ನ ಗಂಡ ಮನೆಗೆ ಬಂದಾಗ ನಾನು ಇಲ್ಲಿಗೆ ಬಂದುಹೋದ ವಿಷಯ ತಿಳಿಸಬಹುದೇ?’

‘ಖಂಡಿತ ತಿಳಿಸುತ್ತೇನೆ’ ಎಂದಳು ಆಕೆ.

‘ನಾನು ಈಗ ಹೋಗುವುದಕ್ಕೆ ನಿನ್ನ ಆಕ್ಷೇಪ ಇಲ್ಲ ತಾನೇ?’

‘ನಾನು ನಿನ್ನನ್ನು ತಡೆಯಲಾರೆ’ ವಿಮರ್ಶಕನ ಹೆಂಡತಿ ಹೇಳಿದಳು- ‘ಆದರೆ ನಿನ್ನ ದಾರಿಯ ಪ್ರಯಾಣಕ್ಕಾಗಿ ನಾನು ನಿನಗೆ ತಿಂಡಿಯನ್ನು ಕಟ್ಟಿಕೊಡುತ್ತೇನೆ. ನಮ್ಮ ಊರಿನಲ್ಲಿ ಇರುವ ಪದ್ಧತಿಯಂತೆ ಮನೆಗೆ ಬಂದ ಅತಿಥಿಗಳಗೆ ಅವರು ಹಿಂದಿರುಗುವಾಗ ಏನನ್ನಾದರೂ ಕಟ್ಟಿಕೊಡಬೇಕು.’

ಅವಳು ಮನೆಯಲ್ಲಿಯೇ ತಯಾರಿಸಿದ ಗಸಗಸೆ ಬೀಜದಿಂದ ಮಾಡಿದ ಕೇಕಿನ ಕೆಲವು ತುಂಡುಗಳನ್ನು ಕಟ್ಟಿಕೊಟ್ಟಳು. ‘ಇದು ನನ್ನ ಗಂಡನಿಗೆ ಬಹಳ ಇಷ್ಟವಾದ ಕೇಕ್.’ ಆಗಂತುಕ ಕೇಳಿದ - ‘ಗಸಗಸೆಯದ್ದೋ?’

ಅವಳು ಹೇಳಿದಳು- ‘ಹೌದು. ಗಸಗಸೆ ಸಹನೆಯ ಭಾವನೆಯನ್ನು ಉಂಟು ಮಾಡುತ್ತದೆ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.’ ಆಗಂತುಕನು ಮರುಮಾತಾಡದೆ ಅವಳು ಕೊಟ್ಟ ಆ ಉಡುಗೊರೆಯನ್ನು ಸ್ವೀಕರಿಸಿದನು. ಅವನು ಹೊರಡುವಾಗ ಅವಳ ನಿರೀಕ್ಷೆಯನ್ನು ಮೀರಿದ ರೀತಿಯಲ್ಲಿ ಅವಳಿಗೆ ತಲೆಬಾಗಿ ನಮಸ್ಕರಿಸಿ ಬೀಳ್ಕೊಂಡನು.

ಜರ್ಮನ್ ಮೂಲ: ಸಿಯೆಗ್ ಫ್ರೈಡ್ ಲೆಂಜ್ (Siegfried Lenz)

ಕನ್ನಡಕ್ಕೆ: ಬಿ.ಎ. ವಿವೇಕ ರೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT