ಚರ್ಡಪ್ಪ ಕಾಮತರ ಹೋಟೆಲಿನ ಮೂಲೆಯಲ್ಲಿ ಸೌದೆ ಒಲೆಯ ಮೇಲಿರಿಸಿದ ತಾಮ್ರದ ಪಾತ್ರೆಯ ಒಳಗಿದ್ದ ನೀರು ಕೊತಕೊತ ಕುದಿಯುತ್ತಿದೆ ಎಂಬುದಕ್ಕೆ ಪಾತ್ರೆಗೆ ಹಾಕಿದ್ದ ಹಳೆಯ ತಾಮ್ರದ ನಾಣ್ಯ ಎಬ್ಬಿಸುತ್ತಿದ್ದ ಕಣಕಣ ಸದ್ದೇ ಸಾಕ್ಷಿಯಾಗಿತ್ತು. ಹಳೆಯ ಬೆಂಚಿನ ಮೇಲೆ ಕುಳಿತು ನಾಲ್ಕಾರು ಮಂದಿ ಹಳ್ಳಿಯವರು ಲೊಟ್ಟೆ ಪಟ್ಟಾಂಗ ಮಾತನಾಡುತ್ತ ಪ್ಲೇಟಿನಲ್ಲಿದ್ದ ಕಡ್ಲೆ ಅವಲಕ್ಕಿ ತಿನ್ನುತ್ತಾ ಕಾಮತರು ಒಂದು ಪಾಟೆಯಲ್ಲಿದ್ದ ಚಹಾವನ್ನು ಎತ್ತರಕ್ಕೊಯ್ದು ಜಲಪಾತದ ಹಾಗೆ ಇನ್ನೊಂದು ಪಾಟೆಗೆ ಹೊಯ್ಯುವುದನ್ನೇ ನೋಡುತ್ತಿದ್ದರು.

ಚಹಾ ತಂದುಕೊಡುತ್ತ ಕಾಮತರು, ʻಇನ್ನು ಎಷ್ಟು ದಿನ ನಿಮಗೆಲ್ಲ ಚಹಾ ತಂದು ಕೊಡುತ್ತೇನೋ ಗೊತ್ತಿಲ್ಲ. ನನ್ನ ಅಜ್ಜ, ಮುತ್ತಜ್ಜನ ಕಾಲದಿಂದಲೂ ಇಲ್ಲೇ ಹೋಟ್ಲು ಹಾಕಿಕೊಂಡು ಇದ್ದೆ ನೋಡಿ. ಈ ಊರಲ್ಲಿ ತುಂಬ ಸುಖವಾಗಿದ್ದೆ ಬಿಡಿ. ಆದರೆ ಯಾಕೋ ಯಂಕಟ್ರಮಣ ದೇವ್ರಿಗೆ ಸರಿ ಬರಲಿಲ್ಲ ಅನ್ಸುತ್ತೆ' ಎಂದರು.

ಯಾಕೋ ಕಾಮತರ ಮಾತಿನಲ್ಲಿ ಭಾರವಾದ ಹೃದಯದಿಂದ ಹೊರಹೊಮ್ಮಿದ ದುಃಖರಸ ಮಡುಗಟ್ಟಿದ ಹಾಗೆ ಅನಿಸಿತು. ಚೀಂಕ್ರ, ʻಯಾಕೆ ಕಮ್ತೀರೇ, ಬ್ಯಾರೆ ಊರಿಗೆ ಹೋಗಿ ಹೋಟ್ಲು ಹಾಕ್ತೀರಾ ಹೇಗೆ?ʼ ಕೇಳಿದ.

“ಒಂದೂ ಗೊತ್ತಾಗೋದಿಲ್ಲ ಮಾರಾಯಾ. ಬೇರೆ ಊರಿಗೆ ನಾನೊಬ್ನೇ ಏನು ನೀವೂ ಹೋಗುವ ಪರಿಸ್ಥಿತಿ ಬಂದಿದೆ. ಯಾವ ಮಾರಿ ಬರೋದು ಬೇಡ ಅಂತಿದ್ದೆವೋ ಅದು ಬರ್ತಾ ಇದೆ' ಕಾಮತರು ಹೇಳಿದರು.

ಹಳ್ಳಿಯವರು ಮೆಟ್ಟಿಬಿದ್ದರು. ಅಂದರೆ ನೀರಕಟ್ಟೆ ಜಲವಿದ್ಯುತ್ ಸ್ಥಾವರ ಬರಲಿದೆ ಅಂತಾಯಿತು. ಕಾಮತರು ಹೇಳಿದರೆಂದರೆ ಸುದ್ದಿ ನಿಜವೆಂದೇ ಆಯಿತು. ಹಳ್ಳಿಯಲ್ಲಿ ಹುಡುಗಿಯೊಬ್ಬಳು ಯಾರ ಜತೆಯಲ್ಲೋ ಪಲಾಯನ ಮಾಡಿದುದರಿಂದ ಆರಂಭಿಸಿ, ಕಳ್ಳಭಟ್ಟಿ ಸಾರಾಯಿ ಮಾಡುವ ಕಿಸ್ತು ಪರ್ಬುನ ವರೆಗೆ ಮೊದಲ ಸುದ್ದಿ ಸಿಗುವುದು ಕಾಮತರಿಗೆ. ಹರಿಭಟ್ಟರು ಕಾಮತರ ಹೋಟ್ಲನ್ನು ʻಪೇಪರಿನಂಗಡಿʼ ಅಂತ ತಮಾಷೆ ಮಾಡುವುದೂ ಇತ್ತು. ಕಾಮತರು ಸುದ್ದಿ ಹೇಳಿದರೆಂದರೆ ಅದು ಸುಳ್ಳು ಆಗುತ್ತಿರಲಿಲ್ಲ.

ʻಅಂದರೆ ನೀರಕಟ್ಟೆಯಲ್ಲಿ ಅಣೆಕಟ್ಟು ಕಟ್ಟಿ ಕರೆಂಟು ಮಾಡುವುದು ನಿಜ ಅಂತಲೇ ಆಯಿತೇನು ಕಾಮತರೇ?' ಹಳ್ಳಿಯವರು ಚಹಾ ಅರ್ಧ ಕುಡಿದು ಲೋಟ ಕೆಳಗಿರಿಸಿ ಅವರತ್ತ ನೋಡಿದರು.

''ಹೌದಯ್ಯ, ನಾನು ಸುಳ್ಳು ಹೇಳ್ತೀನಾ? ನಿನ್ನೆ ನಾಲ್ಕಾರು ಮಂದಿ ಆಫೀಸರುಗಳು ದೊಡ್ಡ ಹ್ಯಾಟು ಧರಿಸಿಕೊಂಡು ಮಧ್ಯಾಹ್ನ ಬಂದಿದ್ದರಲ್ಲ? ಇಲ್ಲಿಗೆ ಬಂದು, ʻಹಸಿವಾಗ್ತಿದೆ ಊಟ ಕೊಡಿʼ ಅಂದ್ರು. ಅಷ್ಟು ಜನಕ್ಕೆ ಊಟ ಎಲ್ಲಿರ್ತದೆ? ಇದ್ದಷ್ಟು ಉಪ್ಪಿಟ್ಟು ತಿಂದು ಹೋದ್ರು. ಇನ್ನು ಒಂದು ತಿಂಗಳಲ್ಲಿ ಮೆಷಿನುಗಳು ಬರ್ತಾವಂತೆ, ಡೈನಾಮೈಟ್ ಹಾಕಿ ಕಲ್ಲು ಒಡೀತಾರಂತೆ, ಬರುವ ವರ್ಷ ಕರೆಂಟು ತೆಗಿಲಿಕ್ಕೆ ಸುರು ಮಾಡ್ತಾರಂತೆ. ಸ್ವಲ್ಪ ಸ್ವಲ್ಪ ಕೇಳಿ ತಿಳಿದುಕೊಂಡೆ. ಬಡ್ಡಿಮಕ್ಳು ಎಲ್ಲ ಸತ್ಯ ಹೇಳ್ಳಿಲ್ಲ. ಅಂತೂ ಇಲ್ಲಿಂದ ಗಾಡಿ ಕಟ್ಟುವ ಕಾಲ ಸನ್ನಿಹಿತವಾಯಿತು ಅಂತ ನನಗನಿಸಿತ್ತು' ಕಾಮತರು ರೋಚಕವಾಗಿ ಹೇಳಿದರು.

'ಹೌದಾ?' ಹಳ್ಳಿಗರು ಹೌಹಾರಿದರು. 'ನಮ್ಮ ಮನೆ, ಕೃಷಿಗೆ ಅಪಾಯ ಉಂಟಂತೆಯಾ?' ಬೂಬ ಕೇಳಿದ. ʻರಕ್ತೇಶ್ವರಿಯ ಗುಡಿ ಏನಾಗ್ತದಂತೆ? ಅಣೆಕಟ್ಟಿನ ನೀರಿನಲ್ಲಿ ಮುಳುಗಿ ಹೋಗ್ತದಂತೆಯಾ? ಅದು ಅನಾದಿ ಕಾಲದ್ದು.. ಅದಕ್ಕೆ ಸ್ವಲ್ಪ ಅಪಾಯ ತಂದ್ರೂ ರಕ್ತ ಕಾರಿ ಸಾಯ್ತಾರೆ' ತನಿಯ ಹಿಡಿಶಾಪ ಹಾಕಿದ. 'ನನ್ನಲ್ಲಿ ಎಂಟು ದನಗಳಿವೆ ಮಾರಾಯರೇ. ಇಷ್ಟರ ವರೆಗೆ ಗುಡ್ಡಕ್ಕೆ ಹೋಗಿ ಮೇದು ಮನೆಗೆ ಬರ್ತಿದ್ವು. ಇನ್ನು ಕರೆಂಟು ಆದರೆ ದನಗಳನ್ನು ಬಿಡಲಿಕ್ಕೆ ಗೊತ್ತಿಲ್ಲ. ಶಾಲೆಗೆ ಮಕ್ಕಳು ಹೇಗೆ ಹೋಗೋದಂತೆ?” ಹೀಗೆ ಅಲ್ಲಿದ್ದ ಎಲ್ಲರೂ ಸಾಲು ಸಾಲು ಪ್ರಶ್ನೆಗಳನ್ನು ಒಟ್ಟಿಗೆ ಕೇಳಿದ್ದು ಕಾಮತರಿಗೆ ʻಹಾಗೆಲ್ಲ ಕೇಳಿದರೆ ನನಗೆ ಗೊತ್ತುಂಟಾ ಮಾರಾಯರೇ? ಇಲ್ಲಿ ಅವರಿದ್ದದ್ದು ಅರ್ಧ ತಾಸು. ಆ ಹೊತ್ತಿನಲ್ಲಿ ಚಾ ಮಾಡಿಕೊಳ್ಳೋದೋ ಅಲ್ಲ ಅದೆಂತಾಗ್ತದೆ, ಇದೆಂತಾಗ್ತದೆ ಅಂತ ವಿಚಾರಿಸುತ್ತಾ ಕುಳಿತುಕೊಳ್ಳೋದಾ? ಅಂತೂ ಅಣೆಕಟ್ಟು ಕಟ್ಟುವುದು ಖಂಡಿತ ಅಂತ ಆಗಿದೆ' ಹೇಳಿದರು ಕಾಮತರು.

ಚಿಂತೆಯ ಬೆಟ್ಟವನ್ನೇ ತಲೆಯ ಮೇಲೆ ಹೊತ್ತರು ಅಲ್ಲಿದ್ದ ಎಲ್ಲರೂ. ವರುಷಗಳ ಹಿಂದೆ ಅಲ್ಲೊಂದು ವಿದ್ಯುತ್ ಸ್ಥಾವರ ಮಾಡುತ್ತೇವೆ ಅಂತ ಜನ ಸರ್ವೆಗೆ ಬಂದಾಗ ಯಾರೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಆಗ ಕಾಮತರು ಎಚ್ಚರಿಸಿದ್ದರು. 'ಇಲ್ಲಿ ಆ ಯೋಜನೆ ಜಾರಿಗೆ ಬಂದರೆ ತುಂಬ ಮನೆಗಳು ಮುಳುಗಡೆಯಾಗುತ್ತವೆ. ಕಲ್ಲು ಒಡೆಯುವಾಗ ಕಲ್ಲಿನ ಚೂರು ಸಿಡಿದು ಮನೆಗಳ ಹೆಂಚು ಒಡೆಯುತ್ತದೆ. ಗೋಡೆಗಳು ಬಿರುಕು ಬಿಡುತ್ತವೆ. ಮಕ್ಕಳು ಶಾಲೆಗೆ ಹೋಗಲು ಕಷ್ಟವಾಗುತ್ತದೆ. ಕೃಷಿ ಹಾಳಾಗುತ್ತದೆ. ಜಾನುವಾರಿಗೆ ಮೇವಿಲ್ಲದ ಹಾಗಾಗುತ್ತದೆ' ಎಂದೆಲ್ಲ ಅವರು ಹೇಳಿದ ಮೇಲೆಯೇ ಜನರಿಗೆ ಎಚ್ಚರವಾದದ್ದು.

'ಹೌದಾ ಕಾಮತರೇ, ನಾವೆಲ್ಲ ಬದುಕುವುದು ಹೇಗೆ?' ಜನ ಭೀತಿಯಿಂದ ತತ್ತರಿಸಿದ್ದರು. ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಇಂಥ ಯೋಜನೆ ಬರಬಾರದೆಂದು ನಿರ್ಣಯ ಮಾಡಿಸಿದ್ದರು. ಒಂದು ಸಲ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯಿಸಿದರೆ ಸುಪ್ರಿಂಕೋರ್ಟ್ಗೆ ಹೋದರೂ ಬದಲಾಯಿಸುವುದಕ್ಕೆ ಆಗುವುದಿಲ್ಲ ಎಂದು ಅಧ್ಯಕ್ಷರು ಹೇಳಿದ್ದರಿಂದ ಇನ್ನು ಏನೂ ಆಗುವುದಿಲ್ಲ ಎಂದು ಎಲ್ಲ ಧೈರ್ಯದಿಂದ ಇದ್ದರು.

ಆದರೆ ಕಾಮತರು ಹೇಳುವುದು ಕೇಳಿದರೆ ಆ ನಿರ್ಣಯದಿಂದ ಏನೂ ಲಾಭವಾಗಿಲ್ಲ ಎಂಬುದು ನಿರ್ಧಾರವಾಗುತ್ತದೆ. ಬೂಬನ ಮನೆ ಅಣೆಕಟ್ಟು ಮಾಡುವ ನದಿಯ ಸನಿಹದಲ್ಲೇ ಇದೆ. ಚೋಮ ಸರಕಾರಿ ಭೂಮಿ ಅತಿಕ್ರಮಣ ಮಾಡಿ ತೆಂಗು ಕಂಗು ನೆಟ್ಟಿದ್ದಾನೆ. ಅದು ಉಳಿಯುವ ಹಾಗಿಲ್ಲ. ಡೈನಾಮೈಟ್ ಇಟ್ಟು ಕಲ್ಲು ಸಿಡಿಸಿದರೆ ತುಕ್ರನ ಮನೆಯ ಒಂದು ಹೆಂಚೂ ಬಾಕಿಯಾಗದು. ಎಲ್ಲರೂ ಕಂಗಾಲಾದರು. ಏನು ಮಾಡುವುದು, ಮಕ್ಕಳು ಮರಿಗಳನ್ನು ಕಟ್ಟಿಕೊಂಡು ಹೋಗುವುದಾದರೂ ಎಲ್ಲಿಗೆ?

“ಊರಿಗೆ ಹೇಗೆ ಕಾಲಿಡ್ತಾರೋ ನೋಡೋಣ. ಇಲ್ಲಿ ಅಣೆಕಟ್ಟು ಮಾಡ್ಬೇಡಿ ಅನ್ನೋಣ. ತಪ್ಪಿದರೆ ದೊಣ್ಣೆ ತೆಗೆದರೆ ಆಯಿತು' ಎಂದು ತುಕ್ರ ಬುದ್ಧಿವಂತಿಕೆ ಹೇಳಿಕೊಡುವುದರಲ್ಲಾಗಲೆ ಕಾಮತರು ನಡುವೆ ಬಾಯಿ ಹಾಕಿ, 'ಅದೆಲ್ಲ ನಡೆಯೋದಿಲ್ಲ ಮಾರಾಯಾ, ಸರಕಾರ ಆದೇಶ ಕೊಟ್ಟ ಕಾರಣ ಇವರು ಅಣೆಕಟ್ಟು ಮಾಡ್ತಾರೆ. ನೀವು ಅಡ್ಡ ನಿಂತ್ರೆ ಪೊಲೀಸರನ್ನು ಕರೆಸಿ ಒಳಗೆ ಹಾಕ್ತಾರೆ. ಇದಕ್ಕೆಲ್ಲ ಗಾಂಧಿ ಮಹಾತ್ಮರ ಹಾಗೆ ಸತ್ಯಾಗ್ರಹ ಮಾಡ್ಬೇಕು. ಉಪವಾಸ ಸತ್ಯಾಗ್ರಹ ಅದೊಂದೇ ದಾರಿ ಇರೋದು' ಎಂದರು.

ʻಉಪವಾಸ ಸತ್ಯಾಗ್ರಹ ಮಾಡುವುದು ಯಾರು?' ಎಂಬ ಪ್ರಶ್ನೆ ಬಂತು. ಬೂಬನಿಗೆ ಗ್ಯಾಸ್ ಟ್ರಬಲ್ ಇರೋದ್ರಿಂದ ʻಹೊತ್ತು ಹೊತ್ತಿಗೆ ಆಹಾರ ತಿನ್ನದಿದ್ರೆ ಸತ್ತು ಹೋಗುತ್ತೀ ಅಂತ ವೈದ್ಯರು ಎಚ್ಚರಿಸಿದ್ದರು. ತನಿಯನಿಗೆ ಊಟ ಬಿಟ್ಟು ಅಭ್ಯಾಸ ಇದೆ. ಆದರೆ ಸಂಜೆ ಒಂದು ತೊಟ್ಟೆ ಸಾರಾಯಿ ಕುಡಿಯದಿದ್ದರೆ ಜೀವ ಉಳಿಯಲಿಕ್ಕಿಲ್ಲ ಅಂತಲೇ ಅವನ ಭಾವನೆ. ನಿತ್ಯ ಕೆಲಸಕ್ಕೆ ಹೋಗುವವ ಇಲ್ಲಿ ಕುಳಿತರೆ ಹೆಂಡತಿ ಮಕ್ಕಳಿಗೇನು ಗತಿ? ಅಥವಾ ಬಂದವರು ಬಂದೂಕಿನಿಂದ ಎದೆಗೆ ನೇರವಾಗಿ ಗುಂಡುಹಾಕಿ ಕೊಂದರೆ? ಹೀಗೆ ತಮ್ಮೊಳಗೆ ಹಲವು ಪ್ರಶ್ನೆಗಳೆದ್ದು ಅವರೆಲ್ಲ ತಾಕಲಾಟಕ್ಕೆ ಸಿಲುಕಿಬಿಟ್ಟರು.

ಎಲ್ಲರ ಮನದಲ್ಲಿಯೂ ಚಿಂತೆಯ ಕಾವಳ ಹೆಪ್ಪುಗಟ್ಟುತ್ತಿದ್ದಂತೆ ಕಾಮತರು ಹೇಳಿದ ಮಾತು ಸುಳ್ಳಾಗಲಿಲ್ಲ. ನೋಡನೋಡುತ್ತಿದ್ದಂತೆ, ಲಾರಿಗಳಲ್ಲಿ ಸಲಕರಣೆಗಳು ಬಂದವು. ಊರನ್ನು ಬಳಸಿ ಸಾಗಿದ ನದಿಯ ದಂಡೆಯಲ್ಲಿ ಕೆಲಸಗಾರರು ವಾಸವಾಗುವ ಡೇರೆಗಳು ತಲೆಯೆತ್ತಿದವು, ಕಾಳಭೈರವರಂತಿದ್ದ ನೂರಾರು ಮಂದಿ ಕೆಲಸಗಾರರು ಬಂದರು. ನದಿಯ ಬಂಡೆಗಳನ್ನು ಒಡೆಯಲು ಡೈನಾಮೈಟ್ ಇಡುವುದಕ್ಕೆ ರಂಧ್ರ ಕೊರೆಯಲು ಯಂತ್ರಗಳು ಸಿದ್ಧವಾದವು. ಭೈರಿಗೆಯ ಕರ್ಕಶ ಸದ್ದಿಗೆ ಕಿವಿಯ ತಮಟೆಯೇ ಹರಿದು ಹೋಗುತ್ತಿದೆ ಅನಿಸಿತು.

ತುಕ್ರ ಸೀನನ ಮನೆಗೆ ಓಡಿದ. “ಬನ್ರೋ, ಆ ರಾಕ್ಷಸರು ಬಂದೇಬಿಟ್ಟರು. ನಾವು ಮೊನ್ನೆಯೇ ಮಾತನಾಡಿಕೊಂಡಿದ್ದೆವಲ್ಲ. ಎಲ್ಲರೂ ಒಟ್ಟಾಗಿ ಹೋರಾಡುವುದು. ಹೋಗುವುದಿದ್ದರೆ ಎಲ್ಲರ ಜೀವ ಒಮ್ಮೆಲೇ ಹೋಗಲಿ ಅಂತ. ನೀವೆಲ್ಲ ಜತೆಗಿದ್ದರೆ ಸಾಕು. ಅವರು ಕೆಲಸ ಆರಂಭಿಸದಂತೆ ನಾವು ತಡೆಯೋಣ' ಎಂದ.

ಸೀನನ ಹೆಂಡತಿ ಹೊರಗೆ ಬಂದಳು. 'ಹೌದಣ್ಣ. ನೀವು ಹೇಳ್ತೀರಿ ನಿಜ. ಈಗ ಅಣೆಕಟ್ಟಿನಿಂದ ಮೊದಲು ಅಪಾಯ ಇರುವುದು ನಿಮಗೆ. ಅಷ್ಟು ಜನ ಇದ್ದಾರೆ ಅವರು. ಅಂಥ ಧಾಂಡಿಗರಲ್ಲಿ ನೀವಿಬ್ಬರೂ ಎಂಥ ಹೋರಾಟ ಮಾಡ್ತೀರಿ ಮಣ್ಣಂಗಟ್ಟಿ? ಅವರು ಹೊಡೆದು ಹಾಕ್ತಾರೆ. ನಾಳೆ ಪೊಲೀಸ್ ಗೀಲಿಸ್ ಅಂತ ಕುಣಿದಾಡ್ಲಿಕ್ಕೆ ನಿಮಗಾದರೆ ಅನುಕೂಲ ಉಂಟು. ನಮ್ಮಲ್ಲಿ ಏನುಂಟು ಹೇಳಿ? ಇವತ್ತು ದುಡಿದು ತಂದರೆ ಮಕ್ಕಳಿಗೆ ತಿಳಿಯಾದರೂ ಕೊಡಬಹುದು. ನಮ್ಮಲ್ಲಿ ಏನಿದೆ? ಇವರು ಅದಕ್ಕೆಲ್ಲ ಬರುವುದಿಲ್ಲ' ಎಂದು ನಿಷ್ಠುರವಾಗಿ ಹೇಳಿ ಗಂಡನ ಕಡೆಗೊಮ್ಮೆ ಕೆಕ್ಕರಿಸಿ ನೋಡಿದಳು. ಸೀನನಿಗೆ ಅಷ್ಟೇ ಸಾಕಾಯಿತು. ತುಕ್ರನಿಗೆ ಯಾವ ಉತ್ತರವೂ ಹೇಳದೆ ಅವನು ಮನೆಯೊಳಗೆ ನುಸುಳಿಬಿಟ್ಟ.

ʻಅವನೊಬ್ಬ ಹೋದರೆ ಏನು? ನಿನ್ನ ಜತೆಗೆ ನಾವು ಗಟ್ಟಿ ನಿಲ್ಲುತ್ತೇವೆʼ ಎಂದು ಧೈರ್ಯ ಹೇಳಿದ್ದ ಬಾಬಣ್ಣ, ಚೋಮ ಇದ್ದಾರಲ್ಲ, ತುಕ್ರ ಅವರ ಮನೆಗೂ ಹೋಗಿ ಗೋಗರೆದ. ʻಬರಬಹುದಿತ್ತಲ್ಲ ತುಕ್ರಣ್ಣ. ಇವತ್ತೊಂದು ಅರ್ಜೆಂಟು ಕೆಲ್ಸ ಇದೆ. ಹೋಗದೆ ಗೊತ್ತೇ ಇಲ್ಲ. ಬರುವಾಗ ಎಂಟು ದಿವಸ ಆದೀತು. ಆಮೇಲೆ ಖಂಡಿತ ಬರ್ತೇನೆ' ಎಂದು ಜಾರಿಕೊಂಡ ಬಾಬಣ್ಣ ಎಲ್ಲಿಗೂ ಹೋಗದೆ ಸಂಜೆ ಕಾಮತರ ಹೋಟೆಲಿನಲ್ಲಿ ಪಟ್ಟಾಂಗ ಹೊಡೆಯುತ್ತ ಇದ್ದ ಅನ್ನುವುದು ತುಕ್ರನಿಗೆ ಗೊತ್ತಾಯಿತು. ಚೋಮನೂ ಅಷ್ಟೆ. ಆಗತಾನೇ ಶುರುವಾಗುವ ಹೊಟ್ಟೆನೋವು ಚಾಪೆ ಬಿಟ್ಟೇಳಲಾಗದ ಸ್ಥಿತಿಗೆ ತಂದಿತ್ತು.

ತುಕ್ರನಿಗೆ ಏನು ಮಾಡುವುದೆಂದೇ ತಿಳಿಯಲಿಲ್ಲ ಬಂಡೆಗಳಿಗೆ ತೂತು ಕೊರೆಯುವ ಕೆಲಸ ಮುಗಿದಿತ್ತು. ಅದರೊಳಗೆ ಸಿಡಿಮದ್ದಿರಿಸಿ, ಬೆಂಕಿ ಕೊಟ್ಟು ಕೆಲಸದವರು ದೂರದೂರ ಓಡುವುದು ಕಾಣಿಸಿತು.. ಸ್ವಲ್ಪ ಹೊತ್ತಿನಲ್ಲಿ ಕರ್ಣರಂಧ್ರವನ್ನು ಬಿರಿಯುವಂತೆ ಬಂಡೆ ಆಸ್ಫೋಟಿಸಿತು. ಆಕಾಶದೆತ್ತರ ಹೊಗೆ-ಬಂಡೆಯ ಚೂರುಗಳು ತರಗೆಲೆಯಂತೆ ಮೇಲಕ್ಕೇರಿ ಕಣಕಣನೆ ಕೆಳಗೆ ಬೀಳುವುದು ಕಾಣಿಸಿತು. ಒಂದರ ಜತೆಗೆ ಒಂದರ ಹಾಗೆ ಸ್ಫೋಟವಾಗುತ್ತಲೇ ಇತ್ತು. ತುಕ್ರ ಭಯಭೀತನಾಗಿದ್ದ. ಅಷ್ಟರಲ್ಲಿ ಕಲ್ಲಿನ ಚೂರುಗಳು ಬಂದು ಮನೆಯ ಮಾಡಿಗೆ ಎರಗಿದವು. ಹೆಂಚಿನ ಚೂರುಗಳು ಒಡೆದು ಹುಡಿಹುಡಿಯಾಗಿ ಕೆಳಗುದುರಿ ಅಷ್ಟಗಲ ಬಿಸಿಲು ಒಳಗೆ ಹರಡಿತು. ತುಕ್ರನ ಮೈಮೇಲೆ ಬೀಳಬೇಕಾದ ಕಲ್ಲಿನ ತುಂಡು ಪಾದದ ಬಳಿಗೆ ಬಂದು ಬಿದ್ದಿತು.

ಮೈಯೊಮ್ಮೆ ನಡುಗಿಹೋಯಿತು ತುಕ್ರನಿಗೆ. ಆ ಕಲ್ಲು ಒಂದೊಮ್ಮೆ ಅವನ ತಲೆಯ ಮೇಲೆ ಬಂದು ಬೀಳುತ್ತಿದ್ದರೆ ತನ್ನ ಅಡ್ರೆಸ್ಸೇ ಇರುತ್ತಿರಲಿಲ್ಲ ಎಂಬುದನ್ನು ಊಹಿಸಿ ಬೆವತುಬಿಟ್ಟ. ಸ್ವಲ್ಪ ಹೊತ್ತಿನಲ್ಲಿ ಸ್ಫೋಟದ ಸದ್ದು ನಿಂತಿತು. ದೂರ ಹೋಗಿದ್ದ ಕೆಲಸದವರು 'ಕೂ...' ಎಂದು ಕೂಗಿ ಸ್ಫೋಟ ಮುಗಿಯಿತು ಎಂಬ ಸಂಕೇತ ನೀಡಿದರು. ಮತ್ತೆ ನದಿಗೆ ಬಂದರು. ಕಲ್ಲಿಗೆ ಗುಳಿ ತೋಡಲಾರಂಭಿಸಿದರು.

ನಡೆದ ಘಟನೆಯಿಂದ ಆಗ ತಾನೇ ಎಚ್ಚೆತ್ತಿದ್ದ ತುಕ್ರ ನದಿಗೆ ಓಡಿದ. ಕೋಪದಿಂದ ಅವನ ದೇಹ ಕಂಪಿಸುತ್ತಿತ್ತು. ಕೆಲಸದಲ್ಲಿ ಮಗ್ನರಾಗಿದ್ದವರ ಎದುರು ನಿಂತ. 'ಏನ್ರೋ, ನೀವು ಮನುಷ್ಯರಾ? ಇಷ್ಟು ಹತ್ತಿರ ಮನೆ ಇರುವಾಗ ಬಂಡೆ ಸಿಡಿಸುತ್ತೀರಲ್ಲ? ನಿಮಗೆ ಪ್ರಜ್ಞೆ ಮೈಯಲ್ಲುಂಟಾ?ʼ ಕೇಳಿದ.

ಕೆಲಸಗಾರರು ವಿಚಿತ್ರವಾಗಿ ಅವನತ್ತ ನೋಡಿದರು. ಏನೋ ಹೇಳುತ್ತಿದ್ದಾನೆಂಬುದನ್ನು ಬಿಟ್ಟರೆ ಬೇರೇನೂ ಅವರಿಗೆ ಅರ್ಥವಾಗಲಿಲ್ಲ. ಎಲ್ಲಿಂದಲೋ ಬಂದವರು ಅವರು, ತುಕ್ರ ಎಷ್ಟು ಕೂಗಾಡಿದರೂ ಅದು ನಮ್ಮಲ್ಲಿ ಅಲ್ಲ ಎಂಬ ಭಾವನೆಯಲ್ಲಿ ಅವರ ಕೆಲಸ ಮುಂದುವರಿದಿತ್ತು. ತುಕ್ರನ ಹೆಂಡತಿ ಹೆದರಿಕೆಯಿಂದ ಅಂಗಳದಲ್ಲಿ ನಿಂತು 'ಬನ್ನಿ ಮಾರಾಯರೇ, ಅವರಲ್ಲಿ ನಿಮ್ಮದೆಂಥ ಮಾತು? ಊದಿದರೆ, ಗಾಳಿಗೆ ಹಾರಿ ಹೋಗುವ ಹಾಗಿದೀರಿ, ಅವರೇನಾದ್ರೂ ಮಾಡಿದ್ರೆ ನೀವೆಂತದು ಮಾಡ್ತೀರಿ?ʼ ಎಂದು ಕೂಗಿದಳು.

ಶುಕ್ರನಿಗೆ ಊಟ ಸೇರಲಿಲ್ಲ. ಮಲಗಿದರೆ ನಿದ್ದೆ ಬರಲಿಲ್ಲ. ಇದೇ ರೀತಿ ಸ್ಫೋಟ ಮಾಡಿದರೆ ಮನೆಯೂ ಉಳಿಯುವುದಿಲ್ಲ. ಮನೆಯೊಳಗೆ ಇದ್ದರೆ ಬದುಕುವ ಆಶೆಯೂ ಅವನಿಗಿರಲಿಲ್ಲ. ಸಂಜೆ ಪಂಚಾಯತ್ ಅಧ್ಯಕ್ಷರ ಮನೆಗೆ ಹೋದ, ಅವರಿಗೆ ಖುಷಿಯಾಗಲಿ ಅಂತ ಒಂದು ಹುಂಜವನ್ನೂ ಕಾಣಿಕೆಯಾಗಿ ತೆಗೆದುಕೊಂಡು ಹೋಗಿದ್ದ. ಹುಂಜ ನೋಡಿ, ಅದರ ಮೈಯಲ್ಲಿ ಎರಡು ಸೇರು ಮಾಂಸಕ್ಕೆ ಅಡ್ಡಿ ಇಲ್ಲ ಎಂದು ಲೆಕ್ಕ ಹಾಕಿ ಅವರಿಗೆ ಸಂತೋಷವಾಯಿತಾದರೂ ಅವನ ಅಹವಾಲು ಕೇಳಿ ಬೇಸರವೂ ಆಯಿತು. ಅಣೆಕಟ್ಟು ಮಾಡಿ ವಿದ್ಯುತ್ ಸ್ಥಾವರ ಸ್ಥಾಪಿಸುವವರು ದೊಡ್ಡ ಕಂಪೆನಿಯವರು. ಬೇರೆ ಬೇರೆ ಊರಿನಲ್ಲಿ ಅವರಿಗೆ ಈ ಕೆಲಸ ಮಾಡಿ ನೈಪುಣ್ಯ ಇತ್ತು. ಆರಂಭದಲ್ಲಿ ಅಧ್ಯಕ್ಷರ ಮನೆಗೆ ಭೇಟಿ ನೀಡಿದ ಕಂಪೆನಿಯ ಎಂ.ಡಿ. ಸರ್ವ ಸಹಾಯದ ಭರವಸೆ ಕೋರಿದ್ದರು. ಬೇಡ ಎಂದರೂ ಅಧ್ಯಕ್ಷರಿಗೊಂದು ಫಾರಿನ್ನಿನ ಕೈಗಡಿಯಾರ ಉಡುಗೊರೆ ನೀಡಿ ಹೋಗಿದ್ದರು. ʻಗಡಿಯಾರದಲ್ಲಿ ವಜ್ರದ ಹರಳುಗಳಿವೆ. ಅದರ ಬೆಲೆ ಹತ್ತು ಸಾವಿರಕ್ಕೆ ಕಮ್ಮಿ ಇಲ್ಲ' ಅಂತ ಬಂಗಾರದ ಆಚಾರಿ ಶಿವಣ್ಣ ನೋಡಿ ಹೇಳಿದ ಮೇಲೆ ಅಧ್ಯಕ್ಷರಿಗೆ ಕಂಪನಿಯವರ ಮೇಲೆ ಪ್ರೀತಿ ಹುಟ್ಟಿತ್ತು.

ಹೀಗಾಗಿ, ಕಂಪೆನಿ ಊರಿಗೆ ಬರಬಾರದೆಂದು ಗ್ರಾಮಸಭೆಯಲ್ಲಿ ನಿರ್ಧರಿಸಿದ್ದರೂ ಅಧ್ಯಕ್ಷರು ಹೇಗೆ ವಿರೋಧಿಸಿಯಾರು? ಅದಕ್ಕಾಗಿ ತುಕ್ರನಿಗೆ, 'ಅವರ ವಿರೋಧ ಕಟ್ಟಿಕೊಳ್ಳುವುದು ತುಂಬ ಕಷ್ಟ ಉಂಟು ತುಕ್ರಾ, ಸರಕಾರ ಅವರಿಗೆ ಸಪೂರ್ಟ್ ಮಾಡ್ತಾ ಉಂಟು. ನಾಳೆ ನಿನ್ನ ಜೊತೆ ವಿರೋಧಿಸಲು ಬಂದರೆ ನಾನೂ ಕೂಡ ಏಳು ವರ್ಷ ಜೈಲಿನಲ್ಲಿ ಕುಳಿತುಕೊಳ್ಳಬೇಕಾದೀತು. ಮನೆಗೆ ಉಪದ್ರ ಆಗ್ತದೆ ಅಂತಾದ್ರೆ ನೀನು ಬೇರೆ ಕಡೆ ಹೋಗುವುದೇ ಒಳ್ಳೇದು' ಎಂದು ಬುದ್ಧಿ ಹೇಳಿದರು.

ಇಂಥ ಮಾತನ್ನು ಕೇಳೋದಕ್ಕೆ ಇದ್ದ ಒಂದು ಹುಂಜವನ್ನು ಇಲ್ಲಿಗೇ ತರಬೇಕಿತ್ತಾ? ಎಂದು ಮನದಲ್ಲೇ ಶಪಿಸುತ್ತಾ ತುಕ್ರ ಹೊರಟಿದ್ದ.

ʻಯಾವುದಾದರೂ ದೇವರಿಗೋ, ದೈವಕ್ಕೋ ಹರಕೆ ಹೇಳಿ, ನಂಬಿದ ದೈವ ಅವರಿಗೇನಾದರೂ ಗಂಡಾಂತರ ತಂದುಹಾಕಿ ಊರಿನಿಂದ ಓಡಿಸಲಿಕ್ಕಿಲ್ಲವೆ?ʼ ಎಂದ ಹೆಂಡತಿಯ ಮಾತಿಗೆ ಇಲ್ಲವೆನ್ನದೆ ತುಕ್ರ ಸಾಲು ಸಾಲು ದೈವಗಳಿಗೆ ಹರಕೆ ಹೊತ್ತಿದ್ದ. ತನ್ನ ಮುತ್ತಾತನ ಕಾಲದಿಂದಲೂ ಕಲ್ಲುರ್ಟಿಯನ್ನು ನಂಬಿಕೊಂಡು ಬಂದಿದ್ದ. ಅವನ ತಾತನ ಕೈಯಿಂದ ತೆರಿಗೆ ವಸೂಲಿಗೆ ಬಂದ ಬ್ರಿಟಿಷ್ ಅಧಿಕಾರಿಗೆ ಹೊಟ್ಟೆನೋವುಂಟು ಮಾಡಿ, ಅದೇ ಅಧಿಕಾರಿ ತಾತನ ಕ್ಷಮೆ ಕೇಳಿ ಕೈಗೆ ಚಿನ್ನದ ತೋಡ ತೊಡಿಸಿದ್ದ ಕತೆ ಕೇಳಿದ್ದ ತುಕ್ರ. ತೋಡವನ್ನು ನೋಡಿರಲಿಲ್ಲ. ಬರಗಾಲ ಬಂದಾಗ ತಾತ ಆ ತೋಡವನ್ನು ಮಾರಿದ್ದರಂತೆ. ಆದರೆ ಈಗ ಅದೇ ಕಲ್ಲುರ್ಟಿಯ ಕಲೆಗೆ ಹೇಗೆ ಊನ ಬಂತೋ ಗೊತ್ತಿಲ್ಲ. ಅಣೆಕಟ್ಟಿನ ಕೆಲಸಗಾರರಿಗೆ ಗಂಡಾಂತರ ಬರುತ್ತದೆ, ಕೆಲಸ ನಿಲ್ಲುತ್ತದೆಂದು ಕಾದದ್ದೇ ಬಂತು. ಬಂಡೆಗಳು ರಾಶಿ ಬೀಳುತ್ತಿದ್ದವು, ತುಕ್ರನ ಮನೆಯ ಹೆಂಚುಗಳು ಒಡೆಯುತ್ತಲೇ ಇದ್ದವು.

ತಲೆಯನ್ನಿಡೀ ಹುಳ ಕೊರೆಯುತ್ತಿದ್ದಾಗ ಏನಾದರೂ ಸಮಾಧಾನ ಸಿಕ್ಕೀತಾ ಅಂತ ಒಂದು ಸಂಜೆ ತುಕ್ರ ಕಾಮತರ ಹೋಟೆಲಿಗೆ ಹೋಗಿದ್ದ. ಕಾಮತರು ಚಾ ಸೋಸುತ್ತ, 'ಗಾಂಧಿ ಮಹಾತ್ಮನ ಹೋರಾಟ ಎಲ್ಲಿವರೆಗೆ ಬಂತು?ʼ ಎಂದು ನಗುತ್ತ ಕೇಳಿದರು. ತುಕ್ರ ತಲೆ ತಗ್ಗಿಸಿದ. ''ಎಲ್ಲಿಯ ಹೋರಾಟ ಕಾಮತರೇ. ಇವತ್ತೋ ನಾಳೆಯೋ ತಲೆಗೆ ಬಂಡೆ ಚೂರು ಸಿಡಿದು ನಾವು ಸಾಯಬೇಕಷ್ಟೆ' ಎಂದ ಖಿನ್ನತೆಯಿಂದ.

ಡಾಕ್ಯುಮೆಂಟ್ ರೈಟರ್ ಬಷೀರ್ ಅಲ್ಲೇ ಚಾ ಕುಡಿಯುತ್ತ ಕುಳಿತವನು ಕಿವಿ ನಿಗುರಿಸಿದ. ʻಎಂಥಾದ್ದು ನಿನ್ನ ಕತೆ? ಸುಮ್ಮನೆ ಕೂತರೆ ಸಾಯದೆ ಇನ್ನೇನಾದೀತು? ಒಂದೇ ಒಂದು ಮೂರ್ಗಜಿ ಬರೆದರೆ ಸಾಕು. ಇಪ್ಪತ್ನಾಲ್ಕು ಗಂಟೆಯಲ್ಲಿ ಅವರು ಗಾಡಿ ಕಟ್ಟದೆ ನಿರ್ವಾಹವಿಲ್ಲ. ಅದು ಗೊತ್ತುಂಟಾ?ʼ ಕೇಳಿದ.

ಕತ್ತಲಿನಲ್ಲಿ ದಾರಿ ಕಾಣದವನಿಗೆ ದೊಡ್ಡ ದೀವಟಿಗೆ ಕಂಡ ಹಾಗಾಯಿತು. ತುಕ್ರ ಆತುರದಿಂದ 'ಹೌದಾ? ನಿಲ್ಲಿಸಲಿಕ್ಕೆ ಸಾಧ್ಯವುಂಟಾ? ಸಾಧ್ಯ ಇಲ್ಲ ಅಂದ್ರು ಪಂಚಾಯತ್ ಅಧ್ಯಕ್ಷರು. ಓಹೋ, ಹಾಗಾದ್ರೆ ಸಾಧ್ಯವಿದೆ ಅಂತ ಆಯಿತು. ಇದಕ್ಕೆ ಎಷ್ಟು ಖರ್ಚಾಗ್ತದೆ?' ಎಂದು ಬಷೀರನಿಗೆ ದುಂಬಾಲುಬಿದ್ದ.

"ನಾಳೆ ನನ್ನ ಆಫೀಸಿಗೆ ಬಾ. ನಾನೆಲ್ಲ ಮಾಡ್ತೇನೆ. ಖರ್ಚಿಗೆ ಒಂದು ಇನ್ನೂರು ರೂಪಾಯಿ ತೆಗೆದುಕೊಂಡರೆ ಸಾಕು. ಈ ವಿಷಯ ಬೇರೆ ಯಾರಿಗೂ ಗೊತ್ತು ಮಾಡದೆ ಬಂದುಬಿಡು' ಎಂದು ಹೇಳಿದ ಬಷೀರ್.

ಮರುದಿನ ತುಕ್ರ ಬಷೀರನಿರುವಲ್ಲಿಗೆ ಹೊರಟುನಿಂತ. ಹಣ ಬೇಕಲ್ಲ, ನಾಲ್ಕು ಮನೆಗಳಿಗೆ ಸಾಲ ಕೇಳಿಕೊಂಡು ಸುತ್ತಾಡಿದ, ಕಡೆಗೆ ಹೆಂಡತಿಯ ಮಾಂಗಲ್ಯ ಸರ ತೆಗೆದುಕೊಂಡು ಹೋಗಿ ಅಡವಿಟ್ಟು ಹಣ ಹೊಂದಿಸಿದ. ಬಷೀರನ ಆಫೀಸ್ ಎಲ್ಲಿದೆ ಅಂತ ಹುಡುಕಿದ. ಅವನಿಗೆಲ್ಲಿಯ ಆಫೀಸು? ಒಂದು ಮರದ ಕೆಳಗೆ ಕುಳಿತು ಅರ್ಜಿ ಬರೆದುಕೊಡುತ್ತಿದ್ದ. ತುಕ್ರನ ಪರಿಸ್ಥಿತಿ ವಿವರಿಸಿ, ಬಡವನಿಗೆ ನ್ಯಾಯ ಒದಗಿಸಬೇಕೆಂದು ಪ್ರಾರ್ಥಿಸಿ ಬರೆದ ಅರ್ಜಿಗೆ ತುಕ್ರನ ಸಹಿ ಒತ್ತಿಸಿ 'ತಹಶೀಲ್ದಾರರಿಗೆ ಕೊಟ್ಟು ಬಾ' ಎಂದ. ಹೆದರುತ್ತಲೇ ತುಕ್ರ ತಾಲ್ಲೂಕು ಕಚೇರಿಗೆ ಹೋದ, ಬಾಗಿಲಲ್ಲಿ ಕುಳಿತ ಅಟೆಂಡರ್ 'ಇವತ್ತು ತಹಸೀಲ್ದಾರರಿಗೆ ಪುರುಸೊತ್ತಿಲ್ಲ. ಒಳಗೆ ಹೋಗಲಾಗುವುದಿಲ್ಲʼ ಎಂದು ತಡೆದು ಐವತ್ತು ರೂಪಾಯಿ ಕೊಟ್ಟ ಮೇಲೆ ಪ್ರಸನ್ನನಾದ. ಮುಂದಿಟ್ಟ ಅರ್ಜಿಯತ್ತ ಕಣ್ಣೂ ಹಾಯಿಸದೆ ತಹಶೀಲ್ದಾದಾರರು 'ನೋಡ್ತೇನೆ, ಹೋಗುʼ ಎಂದರು.

ಇಪ್ಪತ್ನಾಲ್ಕು ಗಂಟೆಯಲ್ಲಿ ಕೆಲಸಗಾರರೆಲ್ಲ ಖಾಲಿಯಾಗುತ್ತಾರೆಂದು ತುಕ್ರ ಕಾದರೆ ಹಾಗೇನೂ ಆಗಲಿಲ್ಲ. ಅವರ ಕೆಲಸ ನಡೆಯುತ್ತಲೇ ಇತ್ತು. ಮನೆಯ ಗೋಡೆಗಳು ಬಿರುಕು ಬಿಟ್ಟವು. ತಹಶೀಲ್ದಾರರು ಪರಿಸ್ಥಿತಿ ನೋಡಲು ಆಗಮಿಸುತ್ತಾರೆಂದು ತುಕ್ರ ಕಾದದ್ದೇ ಬಂತು. ಒಂದು ದಿನ ಗ್ರಾಮ ಕರಣಿಕರ ಉಗ್ರಾಣಿ ಬಂದ. ʻನೀನು ಕಂಪೆನಿಯವರ ಮೇಲೆ ತಹಶೀಲ್ದಾದಾರರಿಗೆ ಅರ್ಜಿ ಕೊಟ್ಟಿದ್ದೀಯಾ? ನಿನ್ನ ಕರ್ಬಾರು ಅತಿಯಾಯಿತು' ಎಂದು ಗದರಿಸಿದ.

ʻಅವರ ಸಿಡಿಮದ್ದಿನಿಂದ ಮನೆ ಬೀಳುವ ಸ್ಥಿತಿಗೆ ತಲುಪಿದರೂ ಸುಮ್ಮನಿರಬೇಕಾ?' ತುಕ್ರ ಕೇಳಿದ

ʻನೀನು ಸರಕಾರದ ಜಮೀನು ಅತಿಕ್ರಮಣ ಮಾಡಿ ಮನೆ ಕಟ್ಟಿ ಕುಳಿತಿದ್ದಿ ಅಂತ ನಿನಗೆ ನೆನಪುಂಟಾ? ಇದಕ್ಕೀಗ ಒಂದು ಲಕ್ಷ ರೂಪಾಯಿ ಜುಲ್ಮಾನೆ ಕಟ್ಟಬೇಕಾಗುತ್ತದೆ' ಉಗ್ರಾಣಿ ಎಚ್ಚರಿಸಿದ.

'ಇದು ಅತಿಕ್ರಮಣದ ಸ್ಥಳವಾ? ನನ್ನ ಮುತ್ತಜ್ಜನ ಕಾಲದಿಂದ ಈ ಮನೆಯಲ್ಲಿ ವಾಸವಾಗಿದ್ದರೂ ಇಂಥ ಮಾತು ಹೇಳಿದವರಿಲ್ಲ. ಇದೇನು ಹೊಸಾ ಸಂಗತಿ?' ತುಕ್ರ ಬೆಕ್ಕಸ ಬೆರಗಾದ.

'ಸರಕಾರದವರು ಪಾಪ ಪುಣ್ಯ ನೋಡಿ ನಿನ್ನನ್ನು ಬಿಟ್ಟಿದ್ದರೆ ನೀನು ಸರಕಾರಕ್ಕೆ ತಿರುಗಿಸಿ ಇಡಲು ಹೋಗುವುದಾ? ಸರಕಾರದ ಯೋಜನೆಗೆ ಅಡ್ಡಗಾಲು ಇಡಲು ಹೋದರೆ ಸುಮ್ಮನಿರಲು ಬಿಡ್ತಾರಾ? ನಿನ್ನನ್ನು ಕಿತ್ತು ಬಿಸಾಡ್ತಾರೆ. ತಲೆಗೆ ಕಲ್ಲು ಬಿದ್ದು ಸತ್ತರೆ ಪರಿಹಾರ ಕೂಡ ಸಿಗುವುದಿಲ್ಲ. ಯಾರ ಬೆನ್ನ ಹಿಂದೆಯೋ ತಿರುಗಾಡ್ಲಿಕ್ಕೆ ಹೋಗಿ ಹೀಗೆಲ್ಲ ಮಾಡ್ಬೇಡʼ ಎಂದು ಬುದ್ಧಿ ಹೇಳಿದ ಉಗ್ರಾಣಿ.

ತುಕ್ರ ನಿಬ್ಬೆರಗಾದ. ಮೊನ್ನೆ ತಾನೇ, ಮಗಳಿಗೆ ಮದುವೆಯಿದೆ, ಏನಾದರೂ ಸಹಾಯ ಮಾಡಣ್ಣಾʼ ಎಂದು ಕೇಳಿಕೊಂಡು ಬಂದಿದ್ದ ಉಗ್ರಾಣಿಗೆ ಹತ್ತು ತೆಂಗಿನಕಾಯಿ, ಐನೂರು ರೂಪಾಯಿ ಕೊಟ್ಟಿದ್ದ ತುಕ್ರ. ದೇವರು ನಿನ್ನನ್ನು ಚೆನ್ನಾಗಿ ಇಟ್ಟಿರಲಿʼ ಎಂದು ಹರಸಿಹೋದ ಉಗ್ರಾಣಿ ಈಗ ಎಂತಹ ಮಾತು ಹೇಳುತ್ತಿದ್ದಾನೆ. ತುಕ್ರ ಸುಮ್ಮನಿರದೆ, ʻಇದು ನನ್ನ ಸ್ವಂತ ಜಾಗ. ಇಲ್ಲಿ ಇರಲು ನನಗೆ ಹಕ್ಕು ಇಲ್ಲವಾ? ಈ ಕಂಪೆನಿಯವರು ತೊಂದರೆ ಕೊಡುವಾಗಲೂ ಸುಮ್ಮನಿರಬೇಕಾ?ʼ ಮತ್ತೆ ಕೇಳಿದ.

''ತಹಶೀಲ್ದಾರರು ಮನಸ್ಸು ಮಾಡಿದರೆ ನಿನ್ನನ್ನು ಏನೂ ಮಾಡಿಯಾರು. ನೀನು ಬರೆದುಕೊಟ್ಟ ಅರ್ಜಿ ಗ್ರಾಮ ಕರಣಿಕರಲ್ಲಿಗೆ ಬಂದಿದೆ. ಇದು ನಾನು ಮನಃಪೂರ್ವಕ ಬರೆದದ್ದಲ್ಲ. ಯಾರದೋ ಒತ್ತಾಯಕ್ಕೆ ಬರೆದದ್ದು ಅಂತ ತಪ್ಪೊಪ್ಪಿಗೆ ಬರೆದುಕೊಟ್ಟರೆ ನಿನಗೆ ಜೈಲು ಆಗುವುದು ತಪ್ಪುತ್ತದೆ. ಇಲ್ಲದಿದ್ದರೆ ಒಂದು ಲಕ್ಷ ರೂಪಾಯಿ ಜುಲ್ಮಾನೆ ಕಟ್ಟಬೇಕಾಗುತ್ತದೆʼ ಎಂದು ಗ್ರಾಮ ಕರಣಿಕರು ಬರೆದ ಕೊಟ್ಟಿದ್ದ ವಾಕ್ಯಗಳಿಗೆ ತುಕ್ರನ ಸಹಿ ಹಾಕಿಸಿಕೊಂಡು ಉಗ್ರಾಣಿ ಹೋಗಿಬಿಟ್ಟ.

ಮೇಯಲು ಬಿಟ್ಟ ದನವನ್ನು ಹುಡುಕುತ್ತಾ ನದಿ ಕಿನಾರೆಯಲ್ಲಿ ಹೋಗುತ್ತಿದ್ದ ತುಕ್ರನಿಗೆ ಕಂಪೆನಿಯವರ ಡೇರೆಯ ಹೊರಗೆ ಉಗ್ರಾಣಿಯು ಮೆಟ್ಟಿಕೊಂಡು ಬಂದ ಚಪ್ಪಲಿಗಳು ಕಂಡು ಬಂದವು. ಅಲ್ಲೇ ಗ್ರಾಮಕರಣಿಕರ ಬೈಕೂ ಕಾಣಿಸಿತು. ಡೇರೆಯ ಒಳಗಿನಿಂದ ನಗು, ಕೇಕೆ, 'ಬೋ....ಮಗನನ್ನು ಹೆದರಿಸಿಯೇ ಹೆಬ್ಬೆಟ್ಟು ಹಾಕಿಸಿದೆ' ಎನ್ನುವ ಉಗ್ರಾಣಿಯ ಪೌರುಷ; ʻಬೇಡ ಅನ್ಬೇಡಿ. ಇನ್ನೂ ಒಂದು ಪೆಗ್ ಹಾಕಿ. ಇದು ನಮ್ಮ ದೇಶದ್ದಲ್ಲ. ಫಾರಿನ್ನಿನದ್ದು' ಎನ್ನುವ ಆತಿಥ್ಯದ ಒತ್ತಾಯ ಬೇಡವೆಂದರೂ ತುಕ್ರನ ಕಿವಿಗೆ ಅಪ್ಪಳಿಸಿ ಬಂದು ಹೃದಯವನ್ನೊಮ್ಮೆ ಹಿಂಡಿತು.

ಸಂಜೆ ತುಕ್ರ ಬಷೀರನನ್ನು ಭೇಟಿಯಾಗಿ ನಡೆದ ಕತೆ ಹೇಳಿದ. ಬಷೀರ್ ತುಂಬ ವ್ಯಥೆಪಟ್ಟ.. 'ನೀನು ಅವರ ಬೆದರಿಕೆಗೆ ಹೆದರಿ ಸಹಿ ಮಾಡಬಾರದಾಗಿತ್ತು. ಹೇಳಿಕೆ ಅಂತ ಏನೆಲ್ಲ ಬರೆದಿದ್ದರೆನ್ನುವುದೇ ಗೊತ್ತಿಲ್ಲ. ಹೋಗಲಿ, ಇನ್ನೊಂದು ಸಾವಿರ ರೂಪಾಯಿ ಸಾಧ್ಯವಿದ್ದರೆ ತೆಗೆದುಕೊಂಡು ಬಾ. ಇದಕ್ಕಿಂತ ಮೇಲಿನ ಅಧಿಕಾರಿ ಇದ್ದಾರಲ್ಲ. ಅವರಿಗೊಂದು ಖಾರವಾದ ಅರ್ಜಿ ಬರೆದು, ಬಲವಂತ ಮಾಡಿ ಸಹಿ ಪಡೆದಿರುತ್ತಾರೆಂದು ತಿಳಿಸೋಣ. ಕರಣಿಕರು ಬಂದು ನಿನ್ನ ಕಾಲಿಗೆ ಬೀಳುತ್ತಾರೆ ನೋಡು' ಎಂದ.

ಹಾಗೆ ಸಾವಿರ ರೂಪಾಯಿ ತುಕ್ರನ ಬಳಿ ಇರಲಿಲ್ಲ. ಹೆಂಡತಿ ಹಟ್ಟಿಯ ಮೂಲೆಗೆ ನೋಡಿದಳು. ಮುದಿ ಕಪಿಲೆ ದನ ಮೆಲುಕು ಹಾಕುತ್ತಾ ನಿಂತಿತ್ತು. ʻಸಾವಿರ ರೂಪಾಯಿಗಾದ್ರೆ ಇರಲಿ ಅಂತ ಕಸಾಯಿಖಾನೆ ಅಬ್ಬು ಆವತ್ತಿನಿಂದ ಕೇಳುತ್ತಾ ಇದ್ದಾನೆ ಕೊಡಬಾರದೆ?ʼಎಂದಳು.

ತುಕ್ರನಿಗೆ ಕಣ್ಣುಗಳಿಂದ ನೀರಿಳಿಯಿತು.'ಮಾರಾಯ್ತೀ, ಯಾವ ಕಾಲದಿಂದ ಅದು ನಮ್ಮ ಮನೆಯಲ್ಲಿದೆ ಗೊತ್ತಾ? ಎಷ್ಟು ಕರು ಹಾಕಿತು, ನಮ್ಮ ಮಕ್ಕಳೆಲ್ಲ ಅದರ ಹಾಲು ಕುಡಿದೇ ದೊಡ್ಡವರಾದದ್ದು. ನಿನಗೆ ಎದೆಹಾಲು ಇರಲಿಲ್ಲ ಅಲ್ಲವಾ? ಈಗ ಮುದಿಯಾಗಿದೆ ಅಂತ ಅದನ್ನು ಕೊಡೋದಾ?ʼ ಗದ್ಗದಿತನಾದ.

ʻಬೇರೆ ದಾರಿ ಇದ್ದರೆ ನನ್ನ ಒತ್ತಾಯ ಏನಿದೆ? ಅದೆಲ್ಲಾದರೂ ಕಣ್ಣು ಮುಚ್ಚಿದರೆ ಗುಂಡಿ ತೆಗೆದು ಹೂಳಲಿಕ್ಕೆ ಅಷ್ಟು ಹಣ ಬೇಕು. ಈಗಿನ ಕಾಲದಲ್ಲಿ ಪಾಪ ಪುಣ್ಯ ಯಾರು ನೋಡ್ತಾರೆ? ಏನೂ ಮಾಡದೆ ಸುಮ್ನೆ ಕುಳಿತರೆ ಕಲ್ಲಿನ ಹೊಡೆತಕ್ಕೆ ಮನೆ ಬಿದ್ದು ಹೋಗ್ತದೆ ಅಷ್ಟೇ' ಎಂದಳು ಹೆಂಡತಿ.

ತುಕ್ರ ಚಿಂತಿಸಿದ, ಕಂಪೆನಿಯವರ ವಿರೋಧ ಕಟ್ಟಿಕೊಳ್ಳಲು ಮುಂದಾದ ಮೇಲೆ ಅವನ ಪ್ರಾಣ ಸ್ನೇಹಿತರು ಎಂದು ಭಾವಿಸಿದ್ದವರೆಲ್ಲ ದೂರ ಹೋಗಿದ್ದರು. ಹತ್ತು ರೂಪಾಯಿ ಸಾಲ ಕೇಳಿದರೂ ತಾರಮ್ಮಯ್ಯ ಮಾಡುತ್ತಿದ್ದರು. 'ಪ್ರಾಣ ಹೋದರೂ ಕಂಪೆನಿಯವರನ್ನು ಕಾಲಿಡಲು ಬಿಡುವುದಿಲ್ಲ' ಎಂದು ಪ್ರತಿಜ್ಞೆ ನಾಡಿದ್ದ ಬಾಬು ಈಗ ಅದೇ ಕಂಪೆನಿಯ ಕೆಲಸಗಾರರಿಗೆ ಮೇಸ್ತ್ರಿ ಆಗಿದ್ದ. ತನಿಯನ ಮಗನಿಗೆ ಕಂಪೆನಿಯಲ್ಲಿ ಸೂಪರ್ವೈಸರ್ ಕೆಲಸ ಕೊಡುವುದಾಗಿ ಹೇಳಿದ್ದರಂತೆ. ಹಾಗಾಗಿ ಅವನು 'ಬಹಿರಂಗವಾಗಿ ಕಂಪೆನಿ ವಿರುದ್ಧ ಸೆಣಸಲು ಹೊರಟಿರುವುದು ತುಕ್ರನಿಗೆ ಮರುಳು. ಅವರ ದುಡ್ಡು, ಸಾಮರ್ಥ್ಯದ ಮುಂದೆ ಇವನ ಯಾವ ಆಟವೂ ನಡೆಯಲಿಕ್ಕಿಲ್ಲ. ಉಟ್ಟ ಬಟ್ಟೆಯಲ್ಲಿ ಊರು ಬಿಟ್ಟು ಓಡುವ ಬದಲು ಅವರಿಗೆ ದಮ್ಮಯ್ಯ ಹಾಕಿ ಏನಾದರೂ ಕೊಟ್ಟರೆ ತೆಗೆದುಕೊಳ್ಳುವುದು ಒಳ್ಳೆಯದು' ಎನ್ನುತ್ತಿದ್ದ.

ಇಂಥವರು ತುಕ್ರನಿಗೆ ಹಣದ ನೆರವು ಕೊಡಲಿಕ್ಕಿಲ್ಲ ಎಂಬುದು ತಿಳಿದೇ ಆವನು, 'ನನಗೆ ಆ ಕಪಿಲೆಯನ್ನು ಕಸಾಯಿಯವನು ಎಳೆಯುವುದು ಕಣ್ಣಿನಿಂದ ನೋಡಲಿಕ್ಕಾಗುವುದಿಲ್ಲ. ನಾನು ಅವನಿಗೆ ಹೇಳಿ ರಾತ್ರಿವರೆಗೆ ಹೋಟ್ಲಿನಲ್ಲಿ ಕುಳಿತು ಬರುತ್ತೇನೆ. ಅಷ್ಟಾಗುವಾಗ ಅವನು ಬಂದರೆ ಕೊಟ್ಟುಬಿಡು' ಎಂದು ಹೆಂಡತಿಗೆ ಹೇಳಿ ಹೋಗಿದ್ದ. ರಾತ್ರೆ ಮನೆಗೆ ಬಂದಾಗ ಅವನೆಣಿಕೆಯಂತೆಯೇ ಆಗಿತ್ತು. ಆದರೆ ಕಸಾಯಿ ಬರೇ ಎಂಟುನೂರು ಕೊಟ್ಟಿದ್ದ. ʻಅವತ್ತೇ ಕೊಡಿ ಎಂದೆ, ಕೊಡಲಿಲ್ಲ. ಅದರ ಮೈಯಲ್ಲಿ ಎಲುಬು-ಚರ್ಮ ಬಿಟ್ಟರೆ ಬೇರೆ ಇನ್ನೇನಿಲ್ಲ.
ಆದರೂ ನಿಮ್ಮ ಒತ್ತಾಯಕ್ಕೆ ಇಷ್ಟಾದರೂ ಕೊಟ್ಟು ಕೊಂಡೊಯ್ಯುತ್ತಿದ್ದೇನೆʼ ಎಂದಿದ್ದ.

ನೋಟಗಳನ್ನು ಎದೆಗವಚಿಕೊಂಡು ತುಕ್ರ ಬಿಕ್ಕಿ ಬಿಕ್ಕಿ ಅತ್ತ. ಜತೆಗೆ ಎಂಟುನೂರು ರೂಪಾಯಿ ಸಾಲದು, ಇನ್ನೂ ಇನ್ನೂರು ಎಲ್ಲಿಂದ ತರೋದು ಎಂದು ಚಿಂತಿಸಿದೆ. ʻಮೊನ್ನೆ ಕರಿಮಣಿ ಆಡವಿರಿಸಿ ಸಾಲ ತೆಗೆದಿದ್ದೀರಲ್ಲ, ಬಿಡಿಸಲಿಕ್ಕೆ ಸದ್ಯ ನಮ್ಮಿಂದಾಗದು, ಮಾರಾಟವೇ ಮಾಡಿದರೆ ಇನ್ನೂರು ಸಿಗಬಹುದುʼ ಎಂದಳು ಹೆಂಡತಿ. ತುಕ್ರ ಹಣ ಹೊಂದಿಸಿ ಬಷೀರನನ್ನು ಕಂಡುಬಂದ. 'ಈ ಸಲದ ಅರ್ಜಿಯಲ್ಲಿ ನಿನ್ನ ಕರುಣಕತೆ ಓದಿ ಕಲ್ಲೂ ಕರಗಬೇಕು. ಸರಕಾರ ಬಡವರ ಪರವಾಗಿದೆ. ನಿನಗಾದ ಅನ್ಯಾಯವನ್ನು ಮೇಲಧಿಕಾರಿಗಳು ಕೂಡಲೇ ಸರಿಪಡಿಸುತ್ತಾರೆ' ಎಂದು ಭರವಸೆಯನ್ನೂ ನೀಡಿದ.

ಅಣೆಕಟ್ಟಿನ ಕೆಲಸ ಕಾರ್ಯ ನಿಲ್ಲಲಿಲ್ಲ. ದಿನದಿಂದ ದಿನಕ್ಕೆ ಡೈನಾಮೈಟ್ ಇರಿಸಿ ಬಂಡೆ ಸಿಡಿಸುವ ಕೆಲಸ ಹೆಚ್ಚುತ್ತಲೇ ಹೋಯಿತು. ಇನ್ನೇನು, ಮಳೆಗಾಲ ಬರುತ್ತಾ ಇತ್ತು. ತುಕ್ರನ ಮನೆ ಗೋಡೆಗಳೆಲ್ಲ ಬಿರುಕು ಬಿಟ್ಟಿದ್ದವು. ಒಡೆದು ಹೋದ ಹಂಚುಗಳ ಬದಲು ಹೊಸದು ತರಲು ಅವನಲ್ಲಿ ಹಣವೇ ಇರಲಿಲ್ಲ. ಫಲಭಾರದಿಂದ ತೂಗುತ್ತಿದ್ದ ತೆಂಗು ಕಂಗುಗಳ ತಲೆಗಳು ಬಂಡೆಗಲ್ಲಿನ ಹೊಡೆತಕ್ಕೆ ಸಿಲುಕಿ ನಜ್ಜುಗುಜ್ಜಾದುದರಿಂದ ಮುಂದಿನ ವರ್ಷದ ಊಟದ ಪ್ರಶ್ನೆಯೂ ಬೃಹದಾಕಾರವಾಗಿ ಮುಂದೆ ನಿಂತಿತ್ತು. ʻಒಂದು ಮಳೆ ಬಂದರೆ ಗೋಡೆಗಳು ಬೀಳುತ್ತವೆ, ಆದರೆ ಕೆಳಗೆ ಸಿಕ್ಕಿ ನಾವು ಸಾಯುತ್ತೇವೆʼ ಹೆಂಡತಿ ನಿಟ್ಟುಸಿರು ಬಿಡುವಾಗ ತುಕ್ರನಿಗೂ ಹಾಗೆಯೇ ಅನಿಸುತ್ತಿತ್ತು. ಆದರೆ ಅಳುಕನ್ನು ಹೊರಗೆಡವದೆ, 'ಸುಮ್ನಿರೇ, ಈ ಸಲದ ಅರ್ಜಿ ತುಂಬ ಖಾರವಾಗಿ ಬರೆಸಿದ್ದೇನೆ. ನಮಗೆ ನ್ಯಾಯ ಸಿಕ್ಕೇ ಸಿಕ್ಕುತ್ತದೆʼ ಎಂದು ಭರವಸೆ ನೀಡಿದ್ದ.

ತುಕ್ರ ಎಷ್ಟು ಖಾರವಾಗಿ ಬರೆದರೂ ಮೇಲಧಿಕಾರಿಗಳು ತನಿಖೆಗೆ ಬರಲೇ ಇಲ್ಲ. ಅರ್ಜಿ ತಹಶೀಲ್ದಾರರಿಗೆ ವರದಿ ಸಲ್ಲಿಸುವಂತೆ ಮೇಲಿನಿಂದ ಕೆಳಗಿಳಿಯಿತು. ಅದರಲ್ಲಿ 'ಅರ್ಜಿದಾರ ತನಗೆ ಯಾವ ಬಾಧೆಯೂ ಇಲ್ಲ. ಬೇರೆಯವರ ಮಾತು ಕೇಳಿ ತಪ್ಪಾಗಿ ಆರೋಪ ಮಾಡಿರುವುದಾಗಿ ಈ ಹಿಂದೆ ಬರೆದುಕೊಟ್ಟಿದ್ದಾನೆ. ಮರು ತನಿಖೆ ಮಾಡಿದಾಗಲೂ ಇದು ಆಧಾರ ರಹಿತ ಆರೋಪವೆಂದು ತಿಳಿದು ಬಂದಿದೆ' ಎಂದು ಅವರು ಷರಾ ಬರೆದು ಕಳುಹಿಸಿ ಅದಕ್ಕೊಂದು ಗತಿ ಕಾಣಿಸಿಬಿಟ್ಟರು.

ಎಷ್ಟು ಸಮಯ ಕಾದರೂ ತುಕ್ರನಿಗೆ ನ್ಯಾಯ ಸಿಗಲಿಲ್ಲ. ಒಂದು ಸಲ ಜನಗಣತಿಗಾಗಿ ಅವನಲ್ಲಿಗೆ ಬಂದ ಶಿವಣ್ಣ ಮೇಷ್ಟ್ರು ಬಿರುಕುಬಿಟ್ಟ ಗೋಡೆ, ಮುರಿದ ಮಾಡು ನೋಡಿ ಹೌಹಾರಿದರು. 'ಕಂಪೆನಿ ಅಭಿವೃದ್ಧಿ ಅನ್ನುತ್ತಾ ಹಣವಿದ್ದವರು ದಬ್ಬಾಳಿಕೆ ಮಾಡಿದರೆ ಕೇಳುವವರೇ ಇಲ್ಲದ ಹಾಗಾಗುತ್ತಾ? ಸರಕಾರವನ್ನು ಬಡಿದೆಬ್ಬಿಸಲು ಪತ್ರಿಕೆಗಳಿಂದ ಸಾಧ್ಯ. ನಮ್ಮ ಊರಿನಲ್ಲೇ ʻರೈತಬಂಧುʼ ಅಂತ ಪತ್ರಿಕೆ ಇದೆಯಲ್ಲ. ಅದರ ಎಡಿಟರು ರಂಗಸ್ವಾಮಿ, ನನ್ನ ಶಿಷ್ಯ. ಅವನನ್ನು ನಿನ್ನಲ್ಲಿಗೆ ಕಳುಹಿಸಿ ನಿನಗೆ ಆದ ಅನ್ಯಾಯದ ವಿರುದ್ಧ ಹೋರಾಡಲು ಹೇಳ್ತೀನಪ್ಪಾ' ಎಂದರು. 'ಅಷ್ಟು ಮಾಡಿ ಪುಣ್ಯ ಕಟ್ಟಿಕೊಳ್ಳಿಯಪ್ಪಾ, ನಮ್ಮಂಥ ಬಡವರಿಗೆ ಯಾರು ದಿಕ್ಕಿದ್ದಾರೆ?' ಎಂದು ಅವರ ಕಾಲು ಹಿಡಿದ ತುಕ್ರ.

ರಂಗಸ್ವಾಮಿ ಶುಕ್ರನ ಮನೆಗೆ ಬಂದದ್ದು, ಅವನಿಗಾದ ಅನ್ಯಾಯದ ಪ್ರತಿ ವಿವರವನ್ನೂ ಬರೆದುಕೊಂಡದ್ದು, ಬೇರೆ ಬೇರೆ ಕೋನಗಳಿಂದ ಮನೆಯ ಫೋಟೋ ತೆಗೆದದ್ದು ನೊಂದ ತುಕ್ರನಿಗೆ ಎಲ್ಲಿಲ್ಲದ ಧೈರ್ಯ ತುಂಬಿತ್ತು. ಕಾಮತರ ಹೋಟ್ಲಲ್ಲಿ ಕುಳಿತು ಹೇಳಿದ, “ನೋಡಿ ಇವತ್ತೋ ನಾಳೆಯೋ ನನ್ನ ಕಥೆ ಪತ್ರಿಕೆಯಲ್ಲಿ ಬರ್ತದೆ. ನೇರ ಸರಕಾರಕ್ಕೆ ಗೊತ್ತಾಗಿ ನ್ಯಾಯ ನನ್ನ ಹುಡುಕಿಕೊಂಡು ಬರ್ತದೆʼ ಕೆಲವು ದಿನಗಳಾದರೂ ತುಕ್ರನ ಕತೆ ಬರಲಿಲ್ಲ. ಒಂದು ದಿನ ಕಾಮತರೇ ಅಂದಿನ 'ರೈತಬಂಧು' ಪತ್ರಿಕೆಯನ್ನು ತುಕ್ರನ ಎದುರಿಗಿಟ್ಟು, 'ನಿನ್ನ ಕಥೆ ಇದರಲ್ಲಿ ಇವತ್ತು ಬರಲಿಲ್ಲ. ಇನ್ನು ಬರೋದೂ ಇಲ್ಲ. ಕಂಪೆನಿಯವರು ಇದಕ್ಕೆ ಒಂದು ಇಡೀ ಪುಟದ ಜಾಹೀರಾತು ಕೊಟ್ಟಿದ್ದಾರೆ. ಕಥೆಯನ್ನು ಮುಂದಿಟ್ಟುಕೊಂಡು, ಪತ್ರಿಕೆಯ ಸಂಪಾದಕರು ಕಿಸೆ ತುಂಬಿಸಿಕೊಂಡರೆನ್ನುವುದು ಬಿಟ್ಟರೆ ನಿನಗೆ ಯಾವ ಲಾಭವೂ ಆಗಿಲ್ಲ' ಎಂದರು.

ತುಕ್ರ ಹತಾಶನಾದ. 'ಹಾಗಿದ್ದರೆ ನನಗೆ ಯಾವ ದಾರಿಯೂ ಇಲ್ಲವೇ ಕಾಮತರೇ?' ಕೇಳಿದ, 'ನೋಡು ತುಕ್ರಾ, ಸರಕಾರ ಅವರಿಗೆ ಇಲ್ಲಿ ವಿದ್ಯುತ್ ಸ್ಥಾವರ ಮಾಡಲು ಒಪ್ಪಿಗೆ ಕೊಟ್ಟಿದೆ. ಅವರು ದೊಡ್ಡವರಿಗೆಲ್ಲ ಬೇಕಾದ್ದನ್ನು ಕೊಟ್ಟು ತಮ್ಮ ಪರವಾಗಿ ಮಾಡಿಕೊಂಡಿದ್ದಾರೆ. ನೀನಿನ್ನು ನ್ಯಾಯಾಲಯಕ್ಕೆ ಹೋಗಿ ಕೈಯಲ್ಲಿದ್ದರೆ ಕೆಲವು ಸಾವಿರ ವಕೀಲರಿಗೆ ಕಾಣಿಕೆ ಹಾಕಬಹುದು. ಆಗಲೂ ನಿನಗೆ ನ್ಯಾಯ ಸಿಕ್ಕೀತು ಅನ್ನಲು ಸಾಧ್ಯವಿಲ್ಲ. ಯಾಕೆಂದರೆ ಅವರಿಗೆ ಅನುಕೂಲವಾಗುವಂತೆ ಸರಕಾರವೇ ಎಲ್ಲ ಮಾಡಿದೆ' ಎಂದರು ಕಾಮತರು.

ಆ ಹೊತ್ತಿಗೆ ಚುನಾವಣೆ ಸಮೀಪಿಸಿತು. ವಿರೋಧಪಕ್ಷದಿಂದ ಸ್ಪರ್ಧಿಸಿದ್ದ ಓಂಕಾರಪ್ಪ ತುಕ್ರನ ಮನೆ ಬಾಗಿಲಿಗೆ ಮತ ಕೇಳಿಕೊಂಡು ಬಂದಾಗ ಅವನ ಮನೆಯ ಪರಿಸ್ಥಿತಿ ನೋಡಿ ಕಂಬನಿ ಮಿಡಿದರು. 'ಈಗಿನ ನಿಷ್ಕ್ರಿಯ ಶಾಸಕರು ಈ ಕಂಪೆನಿಯವರ ಎಂಜಲು ಕಾಸಿಗೆ ಕೈಯೊಡ್ಡಿ ಬಡವರಿಗೆ ಅನ್ಯಾಯವಾದಾಗಲೂ ಸಹಿಸಿಕೊಂಡಿದ್ದರು. ನನ್ನನ್ನು ಗೆಲ್ಲಿಸಿದರೆ ಈ ಕಂಪೆನಿಯನ್ನು ಊರಿನಿಂದ ಓಡಿಸಿ ನೊಂದವರಿಗೆ ಯೋಗ್ಯ ಪರಿಹಾರ ತೆಗೆಸಿಕೊಡುತ್ತೇನೆʼ ಎಂದು ಭರವಸೆ ನೀಡಿದರು.

ಗೆದ್ದವರು ಓಂಕಾರಪ್ಪ. ಅವರಿಗೆ ತಾಲೂಕಿನಲ್ಲಿ ಅದ್ದೂರಿಯ ಸಮಾರಂಭ ನಡೆಸಿ ಆನೆಯ ಮೇಲೆ ಮೆರವಣಿಗೆ ಮಾಡಿಸಿದರು. ಸಮಾರಂಭದ ಎದುರಿನಲ್ಲಿ ದೊಡ್ಡ ಬ್ಯಾನರ್ ರಾರಾಜಿಸುತ್ತಿದ್ದುದು ನೀರಕಟ್ಟೆ ವಿದ್ಯುತ್ ಸ್ಥಾವರದವರದೇ. ಆಮೇಲೆ ತುಕ್ರ ಆಸೆಯ ಕಂಗಳಿಂದ ಹಲವು ಸಲ ಶಾಸಕರ ಮನೆಗೆ ಹೋದ. ಶುರುವಿನಲ್ಲಿ ಅವನ ಬಗೆಗೆ ತಿಳಿಯದವರಂತೆ ಮಾತನಾಡಿದರು. 'ನಾಳೆ ಬಾ,
ನಾಡಿದ್ದು ಬಾʼ ಎಂದು ಕುಣಿದಾಡಿಸಿದರು. ಕಡೆಗೆ ʻಊರಿನ ಅಭಿವೃದ್ಧಿಯಾಗಬೇಕಾದರೆ ಊರವರು ತ್ಯಾಗ ಮಾಡಬೇಕಾದ್ದು ಅನಿವಾರ್ಯ. ವಿದ್ಯುತ್ ಅಭಾವದಿಂದ ರಾಜ್ಯ ಒದ್ದಾಡುತ್ತಿದೆ. ರೈತರಿಗೆ ಉಚಿತ ವಿದ್ಯುತ್ ಬೇಕು. ಕಂಪೆನಿಯವರು ಏನಾದರೂ ಪರಿಹಾರ ಕೊಟ್ಟರೆ ತೆಗೆದುಕೊಂಡು ಜಾಗ ಖಾಲಿ ಮಾಡಿಬಿಡು. ನಿನ್ನೊಬ್ಬನ ಸಲುವಾಗಿ ಅಭಿವೃದ್ಧಿಯನ್ನು ನಿಲ್ಲಿಸಿದರೆ ನನ್ನನ್ನು ಹುಚ್ಚ ಎಂದಾರು' ಅಂತ ನಿಷ್ಠುರವಾಗಿ ಹೇಳಿದರು.

ಈ ಮಾತು ಕೇಳಿ ಕಾಲೇಜಿಗೆ ಹೋಗುವ ತುಕ್ರನ ಮಗಳು ವಸುಧಾ ಕೆರಳಿ, 'ಆ ದಿನ ವೋಟಿಗಾಗಿ ಅಷ್ಟು ಆಶ್ವಾಸನೆ ಕೊಟ್ಟವರು ಇವತ್ತು ಹೀಗೆ ಹೇಳುತ್ತಾರಾ? ನಾನು ನೇರ ಅವರ ಹತ್ತಿರ ಹೋಗಿ ಕೇಳುತ್ತೇನೆʼ ಎಂದು ಓಂಕಾರಪ್ಪನ ಮನೆಗೆ ಹೋಗಿದ್ದಳು. ಅವಳ ಮೇಲೆ ಕಣ್ಣಾಡಿಸಿ, ನಾಲಿಗೆಯಿಂದ ಜೊಲ್ಲು ಸುರಿಸಿದ ಓಂಕಾರಪ್ಪ, 'ನಾಳೆ ಐ.ಬಿ.ಗೆ ಮುಖ್ಯಮಂತ್ರಿಗಳು ಬರ್ತಾರೆ. ಒಳಗೆ ಯಾರೂ ಇಲ್ಲದಾಗ ನೀನೇ ಹೋಗಿ ಮಾತನಾಡು. ಮುದುಕ ನಿನ್ನಪ್ಪನನ್ನು ಕರೆದುಕೊಂಡು ಹೋಗಬೇಡ. ಖಂಡಿತ ನಿನಗೆ ನ್ಯಾಯ ಸಿಗುತ್ತದೆʼ ಎಂದು ಅರ್ಥಗರ್ಭಿತವಾಗಿ ಹೇಳಿ ನಕ್ಕಿದ್ದರು. ಆ ಮಾತು ಅರ್ಥವಾಗಿ ಮೈಯಿಡೀ ಬೆಂಕಿಯ ಉಂಡೆಯಂತಾಗಿ ಮರಳಿದ್ದಳು ವಸುಧಾ.

ಅದೇ ಊರಿನಲ್ಲಿದ್ದರು ಪರಿಸರ ಹೋರಾಟ ಸಮಿತಿಯ ಮರ್ತಪ್ಪ ಸಾಮಾನಿಗಳು. ಅವರು ತುಕ್ರನನ್ನು ಹುಡುಕಿಕೊಂಡು ಬಂದರು. ʻನಿನಗೆ ಹೀಗೆ ಅನ್ಯಾಯವಾಗಿದೆಯಾ? ಧೈರ್ಯವಾಗಿರು. ನಮ್ಮ ಹೋರಾಟದಿಂದ ಸರಕಾರವನ್ನು ಮಣಿಸುತ್ತೇವೆ. ಇಲ್ಲಿ ವಿದ್ಯುತ್ ಸ್ಥಾವರ ಬೇಡವೇ ಬೇಡ. ನಾಳೆಯೇ ನಮ್ಮ ತಂಡದ ನೂರಾರು ಮಂದಿ ಹೋರಾಟ ಆರಂಭಿಸುತ್ತೇವೆ' ಎಂದು ಆಶೆಯ ಕಿಡಿ ಹೊತ್ತಿಸಿದರು.

ಪರಿಸರ ಸಮಿತಿಯ ಹೋರಾಟ ಅದ್ದೂರಿಯಿಂದ ಆರಂಭವಾಯಿತು. ಅಣೆಕಟ್ಟಿನ ಕೆಲಸವಾಗುವ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿ ಘೋಷಣೆಗಳನ್ನು ಕೂಗುವುದು ಕೇಳಿ ತುಕ್ರ ಆನಂದತುಂದಿಲನಾದ. ಈಸಲ ನಮಗೆ ನ್ಯಾಯ ಸಿಕ್ಕಿಯೇ ಸಿಕ್ಕುತ್ತದೆʼ ಎಂದು ಅದೇ ಸಂತೋಷದಲ್ಲಿ ಹೆಂಡತಿಗೆ ಹೇಳಿದ..

ಪೊಲೀಸರು ಬಂದರು. ಪ್ರತಿಭಟನಾಕಾರರನ್ನು ಕರೆದುಕೊಂಡು ಹೋದರು. ಅಣೆಕಟ್ಟಿನ ಕೆಲಸ ನಿರ್ವಿಘ್ನವಾಗಿ ಸಾಗಿತು. ಹೀಗೊಂದು ದಿನ ಅಲ್ಲಿಯ ಕೆಲಸಗಾರರು ಆಡುವ ಮಾತು ತುಕ್ರನ ಕಿವಿಗೂ ಬಿದ್ದಿತ್ತು. ʻಪರಿಸರ ಸಮಿತಿಯ ಅಧ್ಯಕ್ಷ ಸಾಮಾನಿಯವರು ಕೋಟಿ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿಸಿದ್ದಾರಲ್ಲ... ನಾಳೆ ಅದರ ಪ್ರವೇಶೋತ್ಸವ. ನಮ್ಮನ್ನೆಲ್ಲ ಊಟಕ್ಕೆ ಕರೆದಿದ್ದಾರೆ. ಸುಮ್ಮನೆ ಅಲ್ಲ, ಅವರ ಮನೆಗೆ ಟೈಲ್ಸ್ ಹಾಕಿಸಿಕೊಟ್ಟಿರೋದು ನಮ್ಮ ವಿದ್ಯುತ್ ಸ್ಥಾವರದ ಧನಿಗಳು'.

ತುಕ್ರನ ಮುಂದೆ ಬರೀ ಕತ್ತಲು, ಒಂದೇ ಒಂದು ಆಶೆಯ ಕಿರಣವೂ ಉಳಿಯಲಿಲ್ಲ.

ಅಣೆಕಟ್ಟಿನ ಕೆಲಸ ಮುಗಿಯಿತು. ವಿದ್ಯುತ್ ಉತ್ಪಾದನೆಯ ಯಂತ್ರಗಳೂ ಸ್ಥಾಪನೆಯಾದವು. 'ನಾಳೆಯಿಂದ ಅಣೆಕಟ್ಟಿನಲ್ಲಿ ನೀರು ತುಂಬುತ್ತದೆ. ನದಿ ಕಿನಾರೆಯಲ್ಲಿ ಇನ್ನೂ ಉಳಿದುಕೊಂಡಿರುವವರು ಸುರಕ್ಷಿತ ಸ್ಥಳಗಳಿಗೆ ಹೋಗಬೇಕು' ಎಂದು ಮೈಕ್ ಮೂಲಕ ಇಡೀ ಊರಿಗೆ ಸಾರಿ ಬಂದರು.

ಮರುದಿನ ತುಕ್ರ ಮನೆಯ ಕಡೆ ಮರಳಿದಾಗ ಸೊಂಟದವರೆಗೆ ನೀರು! ಅವನ ಹರಕು ಮನೆ ಕುಸಿದು ಅದರ ಅವಶೇಷವೂ ಉಳಿಯದಂತೆ ನೀರು ತುಂಬಿಕೊಂಡಿತ್ತು. ತುಕ್ರ ಬಹು ವರ್ಷಗಳಿಂದ ಜೋಪಾನವಾಗಿರಿಸಿದ ಮಹಾತ್ಮ ಗಾಂಧೀಜಿಯ ಫೋಟೋ ಕುಲುಕುಲು ನಗುತ್ತಾ ಇತ್ತು. ಅದು ತೇಲುತ್ತಾ ಅವನ ಬಳಿಗೆ ಬಂದಿತು. ಅದನ್ನು ಎದೆಗವಚಿಕೊಂಡು ಭಾರವಾದ ಹೆಜ್ಜೆಗಳನ್ನಿಡುತ್ತಾ ಅವನು ಅಲ್ಲಿಂದ ಹೊರಟ. ಆಗ 'ನಿಲ್ಲೋ ತುಕ್ರಾ, ನಾವೂ ನಿನ್ನೊಂದಿಗೆ ಬರ್ತೇವೆ' ಎಂದು ಕರೆದಂತೆ ಕೇಳಿಸಿತು.

ತುಕ್ರ ಹಿಂತಿರುಗಿ ನೋಡಿದ. ಬಾಬಣ್ಣ, ಮೋಂಟ, ತನಿಯ ಹೀಗೆ ಸುಮಾರು ಮಂದಿ ಅವನ ಹಾಗೆಯೇ ಉಟ್ಟ ಬಟ್ಟೆಯಲ್ಲಿಯೇ ಸೊಂಟಮಟ್ಟ ನೀರಿನಲ್ಲಿ ಹೆಜ್ಜೆಯಿಡುತ್ತಾ ಬರುತ್ತಿದ್ದರು.

ʻನೀವು? ನೀವೇಕೆ ನನ್ನ ಹಿಂದೆ ಬರುತ್ತಿದ್ದೀರಿ?' ತುಕ್ರ ಬೆರಗಾಗಿ ಕೇಳಿದ.

'ಕಂಪೆನಿಯವರು ನಮಗೆ ಕೊಟ್ಟ ಮಾತು ತಪ್ಪಿದರು ಕಣೋ. 'ತುಕ್ರನ ಜತೆಗೆ ಹೋಗದಿರಿ. ಹಾಗಿದ್ದರೆ ನಿಮ್ಮ ಕೃಷಿಗೆ, ಮನೆಗೆ ಏನೂ ಹಾನಿಯಾಗದ ಅಣೆಕಟ್ಟು ಕಟ್ತೀವಿ' ಅಂದಿದ್ರು. ಸತ್ಯ ಅಂತ ನಂಬಿ ನಿನ್ನನ್ನು ದೂರ ಇಟ್ಟು ತಪ್ಪು ಮಾಡಿದೆವು. ನಿನ್ನೆ ಸಂಜೆ ಇದ್ದಕ್ಕಿದ್ದಂತೆ ನೀರು ಏರಿ ನಮ್ಮ ಮನೆ, ತೋಟ ಮುಳುಗಿತು. ಯಾವ ವಸ್ತುವನ್ನೂ ಹೊರಗೆ ತರಲು ಆಗಲಿಲ್ಲ. ಉಟ್ಟ ಬಟ್ಟೆ ಬಿಟ್ಟರೆ ಇನ್ನೇನೂ ಇಲ್ಲ' ಬಿಕ್ಕಿ ಬಿಕ್ಕಿ ಅಳುತ್ತ ತನಿಯ ಅವರಿಗಾದ ಅನ್ಯಾಯವನ್ನು ಬಿಡಿಸಿ ಹೇಳಿದ.

ತುಕ್ರ ಈ ವರೆಗೆ ಅಳುತ್ತಿದ್ದವನು ಈಗ ನಕ್ಕ! ಜೋರಾಗಿ ನಕ್ಕ. ʻನಿಮಗೆ ಸುಖವಿದ್ದಾಗ ನನ್ನೊಂದಿಗೆ ಯಾರೂ ಇರಲಿಲ್ಲ. ಒಂಟಿ, ಏಕಾಂಗಿ ಅಂತ ಅಳುತ್ತ ಇದ್ದೆ. ಆದರೆ ಕಷ್ಟ ಅನಿಸಿದಾಗ ಜತೆಗೆ ಬಂದಿದ್ಧೀರಿ. ನಾನೀಗ ಏಕಾಂಗಿ ಅಲ್ಲವೇ ಅಲ್ಲʼ ಎಂದು ನಗುತ್ತಲೇ ಇದ್ದ.
ಅವನ ನಗು ಕಂಡರೂ ಉಳಿದವರಿಗೆ ನಗು ಬರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.