ಕಚೇರಿಯ ಗಾಂಭೀರ್ಯವನ್ನು ಭೇದಿಸುತ್ತಾ ಸುಭಾಷ್ ನನ್ನ ಬಳಿಗೆ ಓಡಿ ಬಂದ. ಅವನ ಮುಖ ಅರಳಿತ್ತು. ಅವನು ನನ್ನ ಕಿವಿಗಳ ಸಮೀಪಕ್ಕೆ ಬಂದು ಎದುಸಿರು ಬಿಡುತ್ತಾ ಹೇಳಿದ, “ಆ ಪ್ರೋಗ್ರಾಮ್ ನಿಶ್ಚಿತವಾಗಿದೆ; ಇಂದು ರಾತ್ರಿ ಒಂಬತ್ತು ಗಂಟೆಗೆ ಜಲ್-ದರ್ಶನ್ ಬಂಗ್ಲೆಯಲ್ಲಿ.”
“ಯಾವ ಪ್ರೋಗ್ರಾಮ್?” ನನಗೇನೂ ಹೊಳೆಯದೆ ಕೇಳಿದೆ.
“ಈಗ್ಯೆ ಮೂರು ತಿಂಗಳ ಹಿಂದೆ ನಾನು ನಿನಗೆ ಹೇಳಿದ್ದೆನಲ್ಲ...”
“ನನಗೇನೂ ನೆನಪಿಲ್ಲ.” ನಾನು ಅಸಡ್ಡೆಯಿಂದ ಹೇಳಿದೆ.
“ನೀನೊಳ್ಳೆ ವಿಚಿತ್ರ ಮನುಷ್ಯ!” ಸುಭಾಷ್ ರೇಗಿದ. ನಂತರ ಸಿಗರೇಟ್ ಹೊಗೆಯ ವಾಸನೆಯ ಬಾಯಿಯನ್ನು ನನ್ನ ಕಿವಿಯ ಬಳಿಗೆ ತಂದು ಬಡಬಡಿಸಿದ, “ಬ್ಲೂ-ಫಿಲ್ಮ್ ಪ್ರೋಗ್ರಾಮ್!”
ನನ್ನ ಶರೀರದಲ್ಲಿ ಶಾಕ್ ಹೊಡೆದಂತಾಯಿತು. ಸುಭಾಷ್ ಮೂರು ತಿಂಗಳ ಹಿಂದೆ ರಸ್ತೆಯಲ್ಲಿ ಭೇಟಿಯಾಗಿ, ಒಂದು ಅಗ್ಗದ ಹೊಟೇಲ್ಗೆ ನನ್ನನ್ನು ಕರೆದುಕೊಂಡು ಹೋಗಿ ಚಹಾ ಕುಡಿಸುತ್ತಾ ಹೇಳಿದ್ದ, “ನೋಡು, ನೀನೊಂದು ವಿಚಿತ್ರ ಅನುಭವವನ್ನು ಪಡೆಯಲು ಬಯಸ್ತೀಯಾ?”
“ಏಕೆ, ಹೊಸ ಹುಡುಗಿ ಬಲೆಗೆ ಬಿದ್ದಿರುವಳೇ?” ನನಗೆ ಸುಭಾಷ್ನ ಸ್ವಭಾವದ ಪರಿಚಯವಿತ್ತು.
ಸುಭಾಷ್ ಹೊಗೆಯ ಸುರುಳಿಯನ್ನು ಸೃಷ್ಟಿಸುತ್ತಾ ಹೇಳಿದ್ದ, “ಜಗತ್ತಿನ ಯಾವುದೇ ಹುಡುಗಿ ಈಗ ನನಗೆ ವಿಚಿತ್ರವಲ್ಲ!”
“ಅದಕ್ಕೆ?”
“ನೀನು...” ಅವನು ಸ್ವಲ್ಪ ಭಾಗಿ ಹೇಳಿದ, “ಎಂದಾದರೂ ಬ್ಲೂ-ಫಿಲ್ಮ್ ನೋಡಿದ್ದೀಯಾ?”
“ಬ್ಲೂ-ಫಿಲ್ಮ್!” ನಾನು ಆಶ್ಚರ್ಯದಿಂದ ಹೇಳಿದೆ.
ಆಗ ಸುಭಾಷ್ ನನಗೆ ಕಣ್ಣು ಹೊಡೆದಿದ್ದ.
“ಇಲ್ಲ, ಆದರೆ ಅದರ ಬಗ್ಗೆ ಖಂಡಿತ ಕೇಳಿದ್ದೇನೆ. ಪತ್ರಿಕೆಗಳಲ್ಲಿ, ಅಶ್ಲೀಲ ಸಿನೆಮಾ ವೀಕ್ಷಿಸುತ್ತಿದ್ದ ಅಪರಾಧದಲ್ಲಿ ಕೆಲವರನ್ನು ಬಂಧಿಸಲಾಗಿದೆ ಎಂಬ ಸುದ್ದಿಯನ್ನು ಓದಿದ್ದೇನೆ.”
“ಹೂಂ, ಅಂಥ ಬ್ಲೂ-ಫಿಲ್ಮ್ ನೋಡೋ ಆಸೆಯಿದೆಯಾ?” ಸುಭಾಷ್ ಮತ್ತೆ ಕಣ್ಣು ಹೊಡೆದ. ನನ್ನ ಮನಸ್ಸಿನಲ್ಲಿ ಕುತೂಹಲ ಹುಟ್ಟಿತು. ನಾನು ಮೆಲ್ಲನೆ ಹೇಳಿದ್ದೆ, “ಸರಿ. ಯಾವುದೇ ಅಪಾಯ ಇಲ್ಲದಿದ್ರೆ ನಾನು ಆ ಅದ್ಭುತವನ್ನು ನೋಡಲು ಸಿದ್ಧ.”
“ಅಪಾಯಕ್ಕೆ ಗೋಲಿ ಹೊಡಿ!” ಎನ್ನುತ್ತಾ ಸುಭಾಷ್ ಗ್ಲಾಸಿನಲ್ಲಿದ್ದ ನೀರನ್ನು ಸಂಪೂರ್ಣವಾಗಿ ಗುಟುಕರಿಸಿದ್ದ.
ಸುಭಾಷ್ ಹೊರಡುವಾಗ ಹೇಳಿದ್ದ, “ಪ್ರೋಗ್ರಾಮ್ ನಿರ್ಧಾರವಾದಾಗ, ನಿನಗೆ ತಿಳಿಸ್ತೇನೆ.” ನಂತರ ಅವನು ಇದುವರೆಗೆ ಕಂಡಿರಲಿಲ್ಲ. ವಿಷಯ ಮರತೇ ಹೋದಂತಿತ್ತು. ಆದರೆ ಇಂದು ಸುಭಾಷ್...
“ಪ್ರೋಗ್ರಾಮ್ ರೆಡಿಯಾಗಿದೆ. ನೀನು ಕಾರಿನೊಂದಿಗೆ ಎಂಟೂ ಮುಕ್ಕಾಲು ಗಂಟೆಗೆ ಸಿದ್ಧವಾಗಿರು. ವಿಷಯ ಯಾರಿಗೂ ಗೊತ್ತಾಗಬಾರದು.” ಅವನು ಸೂಚನೆಗಳ ಒಂದು ಪಟ್ಟಿಯನ್ನು ಕೊಟ್ಟು, ಬಂದಿದ್ದ ವೇಗದಲ್ಲಿಯೇ ಕಚೇರಿಯಿಂದ ಹೊರಟು ಹೋದ. ನಾನು ನನ್ನ ಪಕ್ಕದಲ್ಲಿ ಕೂತಿದ್ದ ಸುಹಾಸಿನಿ ಸೇಠಳ ಮುಖದಲ್ಲಿ ಕುತೂಹಲ ಮೂಡಿದ್ದನ್ನು ಗಮನಿಸಿದೆ. ನನಗೆ ನಗು ಬಂತು. ನಾನು ಅವಳ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಅವಳು ಕೇಳಿದಳು, “ಯಾವ ಪ್ರೋಗ್ರಾಮ್ ಮಿಸ್ಟರ್...”
ತಕ್ಷಣ ನಾನು ಹೇಳಿದೆ, “ಅಂಥ ವಿಶೇಷವೇನೂ ಇಲ್ಲ. ಹರಿದ್ವಾರದಿಂದ ಸ್ವಾಮೀಜಿಯೊಬ್ಬರು ಬಂದಿದ್ದಾರೆ.”
“ಡ್ಯಾಮ್ ಇಟ್!” ಎಂದು ಸುಹಾಸಿನಿ ಟೈಪ್ ಮಾಡುವಲ್ಲಿ ಮಗ್ನಳಾದಳು. ನಾನು ಅವಳನ್ನೇ ನೋಡುತ್ತಿದ್ದೆ. ಇದ್ದಕ್ಕಿದ್ದಂತೆ ನನಗೆ, ನಾನು ಸುಹಾಸಿನಿಯನ್ನು ಒಂದು ಹೊಸ ರೂಪದಲ್ಲಿ ನೋಡುತ್ತಿದ್ದೇನೆ ಎಂದು ಅನ್ನಿಸಿತು. ಒಂದು ಜಾದೂ-ದೊಣ್ಣೆಯ ಸ್ಪರ್ಶದಿಂದ ಅವಳ ಶರೀರದ ಮೇಲಿದ್ದ ಬಟ್ಟೆಗಳೆಲ್ಲವೂ ಕಣ್ಮರೆಯಾದವು. ಅವಳ ಬೆತ್ತಲೆ ದೇಹ ನನ್ನ ಮೆದುಳಿನಲ್ಲಿ ಮೂಡುತ್ತಿದೆ...ನಂತರ ನನಗೆ ಸುಹಾಸಿನಿಯಿಂದ ನನ್ನ ದೃಷ್ಟಿಯನ್ನು ಕಿತ್ತು, ನನ್ನ ಕೆಲಸದಲ್ಲಿ ತೊಡಗಿಕೊಳ್ಳಲು ಕಷ್ಟವಾಯಿತು. ಗಡಿಯಾರದ ಗತಿ ಮಂದವಾಯಿತು ಎಂದು ಅನ್ನಿಸಿತು. ಮನಸ್ಸು ಪದೇ-ಪದೇ ಒಂಬತ್ತರ ಮುಳ್ಳಿಗೆ ಹಾರುತ್ತಿತ್ತು.
ಆರು ಗಂಟೆಯಾಯಿತು. ನಾನು ಕಚೇರಿಯಿಂದ ಕೂಡಲೇ ಹೊರ ಬಂದೆ. ಸುಹಾಸಿನಿ ನನ್ನ ಹಿಂದಿದ್ದಳು. ಅವಳು ನನ್ನನ್ನು ತಡೆದು ಕೇಳಿದಳು, “ಏಕೆ ಅವಸರ?”
“ಹೂಂ, ಆ ಸ್ವಾಮೀಜಿಯವರ ದರ್ಶನ...”
“ನೀವು ಸಮಯಕ್ಕೆ ಮೊದಲೇ ವೃದ್ಧರಾದಿರಿ ಎಂದು ನಿಮಗೆ ಅನ್ನಿಸುವುದಿಲ್ಲವೇ? ಇದು ಸ್ವಾಮೀಜಿಯನ್ನು ನೋಡುವ ವಯಸ್ಸೋ ಅಥವಾ ಬ್ಲೂ-ಫಿಲ್ಮ್ ನೋಡುವ ವಯಸ್ಸೋ?” ಸುಹಾಸಿನಿ ಹಿಂಜರಿಯದೆ ಕೇಳಿದಳು.
ಒಮ್ಮೆಲೆ ನನ್ನ ಬಾಯಿಯಿಂದ ಮಾತು ಹೊರಟಿತು, “ಬ್ಲೂ-ಫಿಲ್ಮ್?”
“ಎಂದಾದರು ನೋಡಿದ್ದಿರ?”
“ಇಲ್ಲ.”

“ಅದಕ್ಕೇ...”
“ನೀವು ನೋಡಿದ್ದೀರ?”
“ನಿಮಗೆ ಹೇಗನ್ನಿಸುತ್ತೆ?”
ನಾನು ಉತ್ತರಿಸದೆ, ಅವಳೆಡೆಗೆ ನೋಡುತ್ತಿದ್ದೆ, ನಂತರ ಹೇಳಿದೆ, “ನೀವು ಬ್ಲೂ-ಫಿಲ್ಮ್ನಲ್ಲಿ ಬಹುಶಃ ಕೆಲಸವನ್ನೂ ಮಾಡಿದ್ದೀರ ಎಂದು ನನಗೆ ಅನ್ನಿಸುತ್ತೆ.”
ನಾನು ಬೇರೇನೂ ಹೇಳದೆ ಮುಗುಳ್ನಗುತ್ತಾ ಮುಂದುವರೆದು ಹೋದೆ. ಮನೆಗೆ ಹೋದ ನಂತರ, ನೀರಾ ಅಡುಗೆ ಮನೆಯಲ್ಲಿ ಬ್ಯೂಜಿಯಾಗಿರುವುದನ್ನು ನೋಡಿದೆ. ನಾನು ಮುಗುಳ್ನಗುತ್ತಾ ಮುಂದುವರೆದೆ. ಮನೆಗೆ ಬಂದಾಗ, ನೀರಾ ಅಡುಗೆ ಮಾಡುವಲ್ಲಿ ಮೈಮರೆತಿದ್ದಳು. ನಾನು ಹಿಂದಿನಿಂದ ಬಂದು ಅವಳನ್ನು ಬಾಹುಗಳಲ್ಲಿ ಬಂಧಿಸಿಕೊಂಡು, ಅವಳ ಕೊರಳನ್ನು ಚುಂಬಿಸಿದೆ. ಅವಳ ಕಣ್ಣುಗಳಲ್ಲಿ ಆಶ್ಚರ್ಯ ಮೂಡಿತು.
ಅವಳು ನನ್ನನ್ನು ನೋಡುತ್ತಾ ಕೇಳಿದಳು, “ಏನು, ನೀವು ಇವತ್ತು ಒಳ್ಳೇ ಮೂಡಿನಲ್ಲಿದ್ದೀರ?”
“ಹೀಗೇ...”
“ಖಂಡಿತ ಏನೋ ವಿಷಯವಿದೆ. ನೀವು ನಿತ್ಯ ಕಚೇರಿಯಿಂದ ಮನೆಗೆ ಬಂದಾಗ, ಸಿಡಿಸಿಡಿ ಹಾಯುತ್ತ ಇರ್ತೀರ. ನೇರವಾಗಿ ಮಾತನಾಡುವುದಂತೂ ದೂರ, ನಿಮಗೆ ನನ್ನನ್ನು ನೋಡಲೂ ಪುರುಸೊತ್ತು ಇರುವುದಿಲ್ಲ. ನಿಮ್ಮ ಸಾಹೇಬರು ನಿಮಗೆ ಪ್ರಮೋಶನ್ ಕೊಟ್ಟಿಲ್ಲ ತಾನೇ?” ನೀರಾ ತನ್ನ ಅಭ್ಯಾಸ ಬಲದಂತೆ ಸಾಕಷ್ಟು ಮಾತನಾಡಿದಳು.
“ಅಂಥದ್ದೇನೂ ಇಲ್ಲ. ನೀನು ವ್ಯರ್ಥವಾಗಿ ಊಹೆ ಮಾಡುವುದನ್ನು ನಿಲ್ಲಿಸು. ದಿನವೆಲ್ಲಾ ಕೆಲಸ ಮಾಡಿ, ಸುಸ್ತಾಗಿ ಮನೆಗೆ ಬಂದು ನಿನ್ನನ್ನು ತಬ್ಬಿಕೊಂಡರೆ, ನೀನು ಶರ್ಲಾಕ್ ಹೋಮ್ಸ್ ಆಗ್ತಿದ್ದೀಯ!”
“ಸರಿ. ಈಗ ನಾನು ಅಡುಗೆ ಮಾಡಬೇಕು. ತಡವಾದರೆ ನೀವೇ ರಂಪಾಟ ಮಾಡ್ತೀರ.” ಎನ್ನುತ್ತಾ ನೀರಾ ಒಲೆಯ ಸಮೀಪಕ್ಕೆ ಹೋದಳು. ನಾನು ಅವಳ ಅಂಗೈ ಹಿಡಿದು ಹೇಳಿದೆ, “ನಾನು ರಂಪಾಟ ಮಾಡಲ್ಲ, ತಿಳೀತಾ! ನೀನಿವತ್ತು ನನಗೆ ಊಟ ಹಾಕದಿದ್ದರೂ ಚಿಂತೆಯಿಲ್ಲ.” ಹೀಗೆಂದು ಅವಳನ್ನು ಮಲಗುವ ಕೋಣೆಗೆ ಎಳೆದೊಯ್ದೆ. ಈಗ ಅವಳ ಮುಖದಲ್ಲಿದ್ದ ಆಶ್ಚರ್ಯ ಅನುಮಾನದಲ್ಲಿ ಬದಲಾಗಿತ್ತು ಎಂಬುದು ನನಗೆ ತಿಳಿಯಿತು. ಆದರೂ ಅದನ್ನು ಗಮನಿಸದೆ ಅವಳನ್ನು ಎಳೆದುಕೊಂಡು ಬಂದೆ. ಬಾಗಿಲನ್ನು ಮುಚ್ಚಿ ಅವಳ ತುಟಿಗಳು, ಗಲ್ಲಗಳು, ಹಣೆ, ಕೊರಳು, ಭುಜಗಳನ್ನು ಚುಂಬಿಸಿದೆ...ಅವಳು ನನ್ನ ಹಿಡಿತದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಾ ಹೇಳಿದಳು, “ಇವತ್ತು ನಿಮಗೇನಾಗಿದೆ?”
“ಬ್ಲೂ-ಫಿಲ್ಮ್!” ನಾನು ರಹಸ್ಯದ ಧ್ವನಿಯಲ್ಲಿ ಹೇಳಿದೆ.
“ಏನೆಂದಿರಿ?” ಅವಳಿಗೆ ಅರ್ಥವಾಗಲಿಲ್ಲವೆಂದು ಅನ್ನಿಸಿತು.
“ಇವತ್ತು ನಾನೊಂದು ಬ್ಲೂ-ಫಿಲ್ಮ್ ನೋಡಲು ಹೋಗ್ತಿದ್ದೇನೆ.” ನಾನು ಅವಳಿಗೆ ಮತ್ತೊಮ್ಮೆ ಚುಂಬಿಸಿದೆ.
“ಬ್ಲೂ-ಫಿಲ್ಮ್ ಅಂದ್ರೆ...?”
“ಹೂಂ, ಅದೇ!” ಎಂದು ಮತ್ತೆ ಅವಳನ್ನು ತಬ್ಬಿದೆ. ಅವಳು ನನ್ನನ್ನು ಮೆಲ್ಲನೆ ತಳ್ಳುತ್ತಾ ಗಂಭೀರ ಧ್ವನಿಯಲ್ಲಿ, “ಬಿಡಿ ನನ್ನ! ಎಂದಳು. ನಾನು ಯೋಚಿಸುವುದಕ್ಕೆ ಮೊದಲೇ ಮಲಗುವ ಕೋಣೆಯ ಬಾಗಿಲನ್ನು ತೆರೆದು ಹೊರಗೆ ಹೋದಳು. ನಾನು ಒಣ ನಗೆ ಬೀರುತ್ತಾ ಹೇಳಿದೆ, ‘ಹೆಣ್ಣು! ಹೆಣ್ಣಿನ ಇನ್ನೊಂದು ಅರ್ಥ ಹೊಟ್ಟೆಕಿಚ್ಚು!’
ಎಂಟೂ ಮುಕ್ಕಾಲು ಗಂಟೆಗೆ ಸರಿಯಾಗಿ ಸುಭಾಷನ ಕಾರು ಬಂತು. ನಾನು ಸಿದ್ಧನಾಗಿ ಬರುವವರೆಗೆ ಸುಭಾಷ್ ಪದೇ-ಪದೇ ಹಾರ್ನ್ ಮಾಡುತ್ತಿದ್ದ. ನಂತರ ಹೊರ ಬಂದು ಕಾರಿನಲ್ಲಿ ಕೂತಾಗ, ಸುಭಾಷನೊಂದಿಗೆ ಮತ್ತೊಬ್ಬ ಸಜ್ಜನರು ಕೂತಿದ್ದರು. ನಾನು ಅವರನ್ನು ಮೊದಲ ಬಾರಿಗೆ ನೋಡುತ್ತಿದ್ದೆ. ಆ ವ್ಯಕ್ತಿ ಪ್ರೌಢನಾಗಿದ್ದು, ಧೋತ್ರ, ತೋಳಿಲ್ಲದ ಅಂಗಿ ಮತ್ತು ಬಿಳಿ ಟೋಪಿಯನ್ನು ಧರಿಸಿದ್ದ. ಅವನು ಹಿಟ್ಲರ್ನಂತೆ ಮೀಸೆ ಬಿಟ್ಟಿದ್ದ. ಅವನ ಕಣ್ಣುಗಳು ಬೆಕ್ಕಿನ ಕಣ್ಣುಗಳಂತಿದ್ದವು. ಅವನ ತುಟಿಗಳಲ್ಲಿ ರಹಸ್ಯದ ಮುಗುಳ್ನಗೆಯಿತ್ತು.
ಆ ವ್ಯಕ್ತಿ ನನ್ನನ್ನು ನೋಡಿ ಎರಡೂ ಕೈಮುಗಿದ.
ಸುಭಾಷ್ ಕಾರನ್ನು ಸ್ಟಾರ್ಟ್ ಮಾಡುವುದಕ್ಕೆ ಮೊದಲು ಪರಿಚಯಿಸಿದ, “ಇವರು ಲಲ್ಲೂ ಭಾಯಿ...ಪ್ರೊಜೆಕ್ಟರ್ ಮತ್ತು ಬ್ಲೂ-ಫಿಲ್ಮ್ನ ರೋಲ್ ಇವರದ್ದೇ.” ನನಗೆ ಆಶ್ಚರ್ಯವಾಯಿತು. ಅವರ ಬಳಿ ಪ್ರೊಜೆಕ್ಟರ್ ಇರುವುದು ಅಪರಾಧವಲ್ಲ, ಆದರೆ ಬ್ಲೂ-ಫಿಲ್ಮ್ನ ಪ್ರಿಂಟ್...? ಆಗಲೇ ನನ್ನ ದೃಷ್ಟಿ ಅವನ ಕಾಲುಗಳ ಬಳಿಯಿದ್ದ ಒಂದು ಬಾಕ್ಸ್ನಲ್ಲಿದ್ದ ಪ್ರೊಜೆಕ್ಟರ್ ಮೇಲೆ ಬಿತ್ತು; ಅವನ ಕೈಯಲ್ಲಿ ಕಾಗದಲ್ಲಿ ಸುತ್ತಿದ್ದ ರೋಲ್ ಇತ್ತು...
ನಾನು ಮತ್ತೆ ಲಲ್ಲೂ ಭಾಯಿಯನ್ನು ಗಮನವಿಟ್ಟು ನೋಡಿದೆ- ಎಲ್ಲೂ ತಪ್ಪಾಗುತ್ತಿಲ್ಲ ತಾನೇ? ಸುಭಾಷ್ ತುಂಬಾ ಉತ್ಸಾಹದಿಂದ ಕಾರನ್ನು ಚಾಲನೆ ಮಾಡುತ್ತಿದ್ದ. ಸ್ವಲ್ಪ ಹೊತ್ತಿನಲ್ಲಿ ನಾವು ‘ಜಲ ದರ್ಶನ್’ ಬಂಗ್ಲೆಗೆ ಬಂದೆವು. ನಿರ್ಜನ ಪ್ರದೇಶದಲ್ಲಿದ್ದ ಈ ಬಂಗ್ಲೆ ಅಂಧಕಾರದಲ್ಲಿ ಮುಳುಗಿತ್ತು. ನಾವು ಕಾರಿನಿಂದ ಇಳಿದಾಗ ಹಿಪ್ಪಿಯಂತಿದ್ದ ಯುವಕನೊಬ್ಬ ನಮ್ಮ ಬಳಿಗೆ ಓಡಿ ಬಂದು ಹೇಳಿದ, “ಯಾರು, ಸುಭಾಷ್ ಅಣ್ಣನೇ? ಬನ್ನಿ, ಎಲ್ಲರೂ ನಿಮ್ಮನ್ನೇ ಕಾಯುತ್ತಿದ್ದಾರೆ.”
‘ಎಲ್ಲರೂ’ ಶಬ್ದ ಕೇಳಿ ನನಗೆ ಸ್ವಲ್ಪ ಗಾಬರಿಯಾಯಿತು. ಹಿಪ್ಪಿಯಂತಿದ್ದ ಯುವಕ ನನ್ನನ್ನು ನೋಡುತ್ತಾ ಸುಭಾಷ್ನನ್ನು ಕೇಳಿದ, “ಈ ಸಾಹೇಬ್ರು ನಿಮ್ಮ ಜೊತೆಗೆ...”
ಸುಭಾಷ್ ತಕ್ಷಣ ಹೇಳಿದ, “ಡೋಂಟ್ ವರಿ. ಇವರು ನಮ್ಮ ಆತ್ಮೀಯ ಗೆಳೆಯರು.”
ನಂತರ ಸುಭಾಷ್ ಮತ್ತು ಹಿಪ್ಪಿ ಯುವಕ ಪ್ರೊಜೆಕ್ಟರ್ ಇಳಿಸುವಲ್ಲಿ ಲಲ್ಲೂ ಭಾಯಿಗೆ ಸಹಾಯ ಮಾಡಿದರು. ಲಲ್ಲೂ ಭಾಯಿ ಎರಡೂ ಕೈಗಳನ್ನು ಮುಗಿದು ಆ ಹಿಪ್ಪಿ ಯುವಕನಿಗೆ ನಮಸ್ಕಾರ ಮಾಡಿದರು. ಯುವಕನ ಮುಖದಲ್ಲಿ ಆಶ್ಚರ್ಯ ಮೂಡಿತು.
ನಾವು ‘ಜಲ ದರ್ಶನ’ದ ಹಿಂದೆ, ಸಂಕೀರ್ಣ ಮತ್ತು ಅಂಧಕಾರದ ಗಲ್ಲಿಯಿಂದ ಹಾದು ಬಂಗ್ಲೆಯನ್ನು ಪ್ರವೇಶಿಸಿದೆವು. ಆಗ ಅಲ್ಲಿ ಶಾಂತಿಯಿತ್ತು. ಮೇಲೆ ಸಣ್ಣ ಬೆಳಕಿನ ಒಂದು ಬಲ್ಬ್ ಉರಿಯುತ್ತಿತ್ತು. ಅಲ್ಲಿ ಸುಮಾರು ಮೂವತ್ತು-ಮೂವತ್ತೆರಡರ ಸಂಖ್ಯೆಯಲ್ಲಿ ಜನರಿದ್ದು, ಅವರಲ್ಲಿ ಹೆಚ್ಚಿನವರು ಯುವಕರಾಗಿದ್ದರು. ನಾವು ಒಳಗೆ ಪ್ರವೇಶಿಸುತ್ತಲೇ ಎಲ್ಲರ ಗಮನ ನಮ್ಮೆಡೆಗೆ ಹರಿಯಿತು, “ನೋಡಿ, ಲಲ್ಲೂ ಭಾಯಿ ಬಂದರು.”
“ಸುಭಾಷ್ ಅಣ್ಣ ಸಹ ಜೊತೆಯಲ್ಲಿದ್ದಾರೆ!”
“ಜೊತೆಯಲ್ಲಿರುವವರು ಯಾರು?”
“ಬಹುಶಃ ಸುಭಾಷರ ಗೆಳೆಯರು!”
ಇಂಥ ಮೆಲು ಮಾತುಗಳಿಂದ ಗುಂಪು ನಮ್ಮನ್ನು ಸ್ವಾಗತಿಸಿತು. ನಾನು ಸುತ್ತಮುತ್ತ ದೃಷ್ಟಿ ಹರಿಸಿದೆ. ಯುವಕರ ಮಧ್ಯದಲ್ಲಿ ಯುವತಿಯೊಬ್ಬಳು...
ಓಹ್, ಇವಳು ಸುಹಾಸಿನಿ ಸೇಠ್! ನನಗೆ ಆಶ್ಚರ್ಯವಾಯಿತು. ನಮ್ಮ ಕಣ್ಣುಗಳು ಕೂಡಿದವು. ಅವಳು ನನ್ನನ್ನು ಬಿಂದಾಸ್ ಆಗಿ ಕೇಳುತ್ತಿದ್ದಳು, “ಮಿಸ್ಟರ್! ನೀವು ಸ್ವಾಮೀಜಿಯೊಬ್ಬರ ಪ್ರವಚನಗನ್ನು ಕೇಳಲು ಹೋಗುತ್ತಿದ್ದಿರಲ್ವ?”
ನಾನು ಅವಳ ಕಣ್ಣುಗಳಲ್ಲಿದ್ದ ತೀಕ್ಷ್ಣತೆಯನ್ನು ಸಹಿಸದಾದೆ. ಹೀಗಾಗಿ ತಲೆ ತಗ್ಗಿಸಿದೆ. ಸ್ವಲ್ಪ ಹೊತ್ತಿನ ನಂತರ ಅವಳನ್ನು ಮತ್ತೆ ನೋಡಿದೆ. ಅವಳು ಮೂರ್ನಾಲ್ಕು ಯುವಕರ ನಡುವೆ ಮಹಾರಾಣಿಯಂತೆ ಕೂತಿದ್ದಳು. ಅವಳ ತೊಡೆಯ ಮೇಲೆ ಯುವಕನೊಬ್ಬನ ಕೈಯಿತ್ತು. ಅವನು ಖುದ್ದು ಬೇರೊಬ್ಬ ಯುವಕನ ಕೈಯನ್ನು ಹಿಡಿದಿದ್ದ. ಮೂರನೆಯ ಯುವಕ ಸಿಗರೇಟಿನ ದಮ್ ಎಳೆದು ಒಂದು ರಾಶಿ ಹೊಗೆಯನ್ನು ಸುಹಾಸಿನಿಯ ಮುಖದ ಮೇಲೆ ಚೆಲ್ಲಿದ. ಸುಹಾಸಿನಿ ಕಿಲಕಿಲನೆ ನಕ್ಕಳು. ಆಗಲೇ ಇನ್ನೊಬ್ಬ ಯುವಕ ಹೇಳಿದ, “ಸುಭಾಷ್ ಅಣ್ಣ! ಇನ್ನು ತಡ ಮಾಡಬೇಡಿ. ನಾವು ಸುಮಾರು ಹೊತ್ತಿನಿಂದ ನಿರೀಕ್ಷಿಸುತ್ತಿದ್ದೇವೆ.”
“ಹೌದು ಸುಭಾಷ್! ಈಗ ಧೈರ್ಯ ಕಳೆದು ಹೋಗುತ್ತಿದೆ.”
“ಲಲ್ಲೂ ಭಾಯಿ! ಸ್ವಲ್ಪ ಬೇಗ ಪ್ರೊಜೆಕ್ಟರ್ ಫಿಟ್ ಮಾಡಿ!”
“ಯಾರಾದ್ರು ಅವರಿಗೆ ಸಹಾಯ ಮಾಡಿ.”
“ಸುಭಾಷ್! ಈ ಸಲ ಪ್ರಿಂಟ್ ಚೆನ್ನಾಗಿದೆಯಲ್ಲ?”
“ಸಿಂಗಲ್ ನಡೆಯಲ್ಲ, ಡಬ್ಬಲ್ ಬೇಕು! ಎಕ್ಸೈಟಿಂಗ್! ಪ್ರೊವೆಕ್ಟಿವ್! ಮನೆಗೆ ಹೋಗಿ...”
ನಾನಾ ತರಹದ ಮಾತುಗಳು ಕೇಳಿ ಬರುತ್ತಿದ್ದವು. ಸುಭಾಷನ ಸಹಾಯದಿಂದ ಲಲ್ಲೂ ಭಾಯಿ ಪ್ರೊಜೆಕ್ಟರನ್ನು ವಿದ್ಯುತ್ ವೈರಿಗೆ ಸೇರಿಸಲು ಆರಂಭಿಸಿದರು. ಇದಕ್ಕೆ ಸಾಕಷ್ಟು ಸಮಯ ಹಿಡಿಯಿತು. ನಂತರ ವೈರ್ ಕಡಿಮೆಯಾಯಿತು. ವೈರ್ ಪ್ಲಗ್ವರೆಗೆ ಹೋಗುತ್ತಿರಲಿಲ್ಲ, ಲೆನ್ಸ್ ಅಡ್ಜೆಸ್ಟ್ ಆಗುತ್ತಿರಲಿಲ್ಲ.
“ಸುಭಾಷ್! ಸಾಕಷ್ಟು ಸಮಯವಾಗ್ತಿದೆ...”
“ಹೌದು, ಇನ್ನು ತಡೆದುಕೊಳ್ಳಲು ಆಗ್ತಿಲ್ಲ.”
ಯುವಕರ ಉದ್ರೇಕ ಹೆಚ್ಚುತ್ತಿತ್ತು. ಸುಭಾಷ್ ಅವರಿಗೆ ಧೈರ್ಯ ಹೇಳುತ್ತಿದ್ದ. ಆಗಾಗ ಅಶ್ಲೀಲ ಮತ್ತು ದ್ವಂದ್ವಾರ್ಥದ ಶಬ್ದಗಳೂ ಪ್ರಯೋಗವಾಗುತ್ತಿದ್ದವು. ಲಲ್ಲೂ ಭಾಯಿ ಮಾತ್ರ ಶಾಂತರಾಗಿರುವಂತೆ ತೋರುತ್ತಿತ್ತು. ಅವರ ತುಟಿಗಳಲ್ಲಿ ಈ ಮೊದಲಿನ ಮುಗುಳ್ನಗೆಯಿತ್ತು. ನಾನು ಸುಹಾಸಿನಿಯನ್ನು ನೋಡಿದೆ. ಅವಳು ನನ್ನನ್ನು ನೋಡಿಯೂ ನೋಡದವಳ ಹಾಗೆ ವರ್ತಿಸುತ್ತಿದ್ದಳು.
ಕೊಠಡಿಯಲ್ಲಿ ಸಂತಸ ಮೂಡಿತು. ಎದುರಿನ ಗೋಡೆಯ ಮೇಲೆ ಬಿಳಿ ಬೆಳಕಿನ ಒಂದು ಚಚ್ಚೌಕ ಮೂಡಿತು.
“ಹಾಯ್...ಈಗಿದೆ ಮಜಾ!”
“ಸಂಥಿಂಗ್ ಎಕ್ಸೈಟಿಂಗ್”
“ಫ್ರೆಂಡ್, ನೈಟ್ ಆಯ್ತು.”
“ಸುಹಾಸಿನಿ, ನೋಡ್ತಿರಿ, ಹೂಂ...”
‘ನನಗೇನು ಹೊಸದಲ್ಲ...”
ಕೋಣೆಯಲ್ಲಿ ಪಿನ್ಡ್ರಾಪ್ ಸೈಲೆನ್ಸ್ ಕವಿಯಿತು. ಪ್ರೊಜೆಕ್ಟರ್ ಶಬ್ದ ಮಾತ್ರ ಕೇಳಿಸುತ್ತಿತ್ತು...ನನ್ನ ಮನಸ್ಸಿನಲ್ಲಿ ಕಲ್ಪನೆಯ ಚಿತ್ರಗಳು ಮೂಡುತ್ತಿದ್ದವು. ಪ್ರೊಜೆಕ್ಟರ್ನಲ್ಲಿ ಓಡುತ್ತಿದ್ದ ಫಿಲ್ಮ್ ರೀಲ್ ಅಗತ್ಯಕ್ಕಿಂತ ಹೆಚ್ಚು ವೇಗವಾಗಿತ್ತು.
ಈಗ ವಾಸ್ತವವಾಗಿ ಫಿಲ್ಮ್ ಆರಂಭವಾಗಿತ್ತು. ಇದೆಂಥ ದೃಶ್ಯ? ಅರ್ಥವಾಗುತ್ತಿಲ್ಲ. ಹೂಂ...ಈಗೊಂದು ಸ್ಪಷ್ಟ ಚಿತ್ರ ಮೂಡುತ್ತಿದೆ. ಓಹ್...ಬಿಳಿ ಟೋಪಿಯಂತೆ ಏನೋ ಕಾಣಿಸುತ್ತಿದೆ? ಕಾರ್ಟೂನ್ ಚಿತ್ರಗಳಂತೆ ಆ ಟೋಪಿ ಮೇಲೆ-ಕೆಳಗಾಗುತ್ತಿತ್ತು. ಟೋಪಿ ಹಾರುತ್ತಿದೆ, ಓಡುತ್ತಿದೆ...ಬೇರೆ ಟೋಪಿಗಳು ಸಹ ಕಲೆಯುತ್ತವೆ...ಬಿಳಿ ಟೋಪಿಗಳೆಲ್ಲವೂ ಕೂಡಿ ಬೇರೆ-ಬೇರೆ ಚಿತ್ರಗಳನ್ನು ರಚಿಸುತ್ತಿವೆ...ಅವು ಒಳಗೊಳಗೆ ಜಗಳವಾಡುತ್ತಿವೆ, ಬೇರೆ-ಬೇರೆ ಗ್ಯಾಂಗ್ ಕಟ್ಟುತ್ತಿವೆ ಎಂದು ಅನ್ನಿಸುತ್ತದೆ. ಅವು ಮತ್ತೆ ಕಲೆಯುತ್ತವೆ, ಮತ್ತೆ ಬೇರೆಯಾಗುತ್ತವೆ...ಇದೇನು? ಕುರ್ಚಿ ಅಲ್ಲ ತಾನೇ? ಬಿಳಿ ಟೋಪಿಗಳು ಇರುವೆಗಳ ಸಾಲುಗಳಂತೆ ಕುರ್ಚಿ ಹತ್ತಲು ಯೋಚಿಸುತ್ತಿವೆ...
ಕೊಠಡಿಯಲ್ಲಿ ಶಬ್ದಗಳು ಪ್ರತಿಧ್ವನಿಸುತ್ತವೆ:
“ಇದೆಂಥ ಸಿನೆಮಾ?”
“ಬ್ಲೂ-ಫಿಲ್ಮ್ ಹೀಗಿರುತ್ತಾ?”
“ಬಹುಶಃ ಮಾಡ್ರನ್ ಕಲಾಕಾರ ಬಿಡಿಸಿರಬೇಕು!”
“ಸ್ವಲ್ಪ ನೋಡೋಣ...ಈಗ ತಾನೇ ಆರಂಭವಾಗಿದೆ.”
“ಆದರೆ...”
ಫಿಲ್ಮ್ ಮುಂದುವರೆಯುತ್ತಿತ್ತು. ಕುರ್ಚಿ ಹತ್ತಲು ಪ್ರಯತ್ನಿಸುತ್ತಿದ್ದ ಅನೇಕ ಟೋಪಿಗಳು ನೆಲದ ಮೇಲೆ ಹೊರಳುತ್ತವೆ. ಕಾಲುಗಳ ಕೆಳಗೆ ತುಳಿಯಲ್ಪಡುತ್ತವೆ. ಮತ್ತೆ ಏಳುತ್ತವೆ. ತಲೆ ಕಣ್ಮರೆಯಾದಾಗ್ಯೂ ರಜಪೂತನಂತೆ ಮತ್ತೆ ಕುರ್ಚಿ ಹತ್ತಲು ಪ್ರಯತ್ನಿಸುತ್ತವೆ. ಕೊನೆಯಲ್ಲಿ ಒಂದು ಟೋಪಿ ಕುರ್ಚಿ ಹತ್ತುವಲ್ಲಿ ಯಶಸ್ಸು ಪಡೆಯುತ್ತದೆ. ಅದರ ಕೈಯಲ್ಲಿ ಒಂದು ಹಂಟರ್ ಇದೆ, ಅದು ಆ ಹಂಟರ್ನಿಂದ ಬೇರೆ ಟೋಪಿಗಳನ್ನು ಥಳಿಸುತ್ತದೆ. ಟೋಪಿಗಳು ಕುರ್ಚಿಯ ಕಾಲುಗಳ ಬಳಿ ಹೊರಳುತ್ತವೆ...ಕುರ್ಚಿಯಲ್ಲಿ ಕೂತಿದ್ದ ಟೋಪಿಯ ಕೈಯಲ್ಲಿ ಈಗ ಹಂಟರ್ ಬದಲು ಮಾಯದ ದೊಣ್ಣೆ ಬರುತ್ತದೆ...ಅದನ್ನು ಗೋಳಾಕಾರವಾಗಿ ತಿರುಗಿಸುತ್ತದೆ. ಗಾಳಿಯಿಂದ ಇಂಪಾಲಾ ಕಾರು, ವೈಭವದ ಬಂಗ್ಲೆ, ಏಯರ್ಕಂಡೀಶನರ್ ಮತ್ತು ನೌಕರರ ಸೈನ್ಯ ಪ್ರತ್ಯಕ್ಷವಾಗುತ್ತವೆ.
ಕೋಣೆಯಲ್ಲಿ ಗದ್ದಲ ಹೆಚ್ಚುತ್ತದೆ-
“ಏಯ್ ಸುಭಾಷ್! ಇದೆಂಥ ಸಿನೆಮಾ?”
“ಪ್ರಿಂಟ್ ಬದಲಾಯ್ತ?”
“ಸಮಯ ಹಾಳು ಮಾಡುತ್ತಿದ್ದೀರ.”
“ಸ್ಟಾಪ್ ದಿಸ್ ನಾನ್ಸೆನ್ಸ್!”
ಆದರೆ ಸಿನೆಮಾ ಸಾಗುತ್ತಲೇ ಇದೆ:
ಬ್ಯಾಂಕುಗಳ ಪಾಸ್ಬುಕ್ಗಳ ರಾಶಿ, ತಿಜೋರಿಗಳ ಸಾಲುಗಳು ಎಲ್ಲವೂ ಮುಂದೆ ಬರುತ್ತಾ ಬಿಳಿ ಟೋಪಿಯ ಬಳಿ ಕಲೆಯುತ್ತಿವೆ...
ಈಗ ಕೊಠಡಿ ಗದ್ದಲದಿಂದ ಕಂಪಿಸುತ್ತಿದೆ. ಹತ್ತು-ಹನ್ನೆರಡು ಯುವಕರು ಎದ್ದು ನಿಂತರು. ಒಬ್ಬ ಗೋಡೆಯ ಬಟನ್ ಒತ್ತಿ ಲೈಟ್ ಆನ್ ಮಾಡುತ್ತಾನೆ, ಆಗ ಪರದೆಯ ದೃಶ್ಯ ಮಂದವಾಗುತ್ತದೆ. ಆ ಹಿಪ್ಪಿ ಯುವಕ ಸುಭಾಷನ ಸಮೀಪಕ್ಕೆ ಬಂದು ಗದರಿಸುತ್ತಾನೆ, “ಸುಭಾಷ್! ಇದೆಂಥ ಹುಡುಗಾಟಿಕೆ? ನಾವು ಬ್ಲೂ-ಫಿಲ್ಮ್ ನೋಡಲು...”
ಸುಭಾಷ್ ಲಲ್ಲೂ ಭಾಯಿಯೆಡೆಗೆ ಬೆರಳು ತೋರಿಸುತ್ತಾ ಹೇಳಿದ, “ನನಗ್ಗೊತ್ತಿಲ್ಲ, ಈ ಎಲ್ಲಾ ಜವಾಬ್ದಾರಿ ಲಲ್ಲೂ ಭಾಯಿಯದು.”
ಲಲ್ಲೂ ಭಾಯಿ ಪ್ರೊಜೆಕ್ಟರ್ ಸಮೀಪ ಮೊಣಕಾಲೂರಿ ಶಾಂತರಾಗಿ ನಿಂತಿದ್ದರು. ಅವರ ಮುಖದ ಮೇಲೆ ಸದಾ ಇರುವಂಥ ಶಾಂತ ಮುಗುಳ್ನಗೆಯಿದೆ. ಹಿಪ್ಪಿ ಯುವಕ ಅವರ ಸಮೀಪಕ್ಕೆ ಹೋದ. ಅವನೊಂದಿಗೆ ಇತರೆ ನಾಲ್ಕೈದು ಯುವಕರೂ ಆಕ್ರಮಣವೆಸಗುತ್ತಾರೆ.
“ಲಲ್ಲೂ ಭಾಯಿ, ಇದೆಲ್ಲಾ ಏನು?”
“ನೀವು ನಮಗೆ ಮೋಸ ಮಾಡಿದಿರಿ!”
“ಬ್ಲೂ-ಫಿಲ್ಮ್ ಹೀಗಿರುತ್ತಾ?”
ಆವೇಶದ ಪ್ರಶ್ನೆಗಳು...ಆದರೆ ಲಲ್ಲೂ ಭಾಯಿ ಲೇಶಮಾತ್ರವೂ ಉತ್ತೇಜಿತರಾಗಲಿಲ್ಲ. ಕೊಠಡಿಯಲ್ಲಿ ಕೆಲವು ಕ್ಷಣ ಮೌನ ಆವರಿಸಿತು. ಲಲ್ಲೂ ಭಾಯಿ ಪರದೆಯ ಮೇಲೆ ಓಡುತ್ತಿದ್ದ ಸಿನೆಮಾದ ಮೇಲೆ ದೃಷ್ಟಿ ಹರಿಸಿ ಕಂಪಿಸುತ್ತಾ ಹೇಳಿದರು, “ಮಿತ್ರರೇ, ನಿಮಗೆ ನಿರಾಸೆಯಾಗಿರಬೇಕು. ಆದರೆ...”
“ಆದರೇನು?”
“ಈಗಿನ ನಿಜವಾದ ಬ್ಲೂ-ಫಿಲ್ಮ್ ಇದೇ.” ಈಗ ಲಲ್ಲೂ ಭಾಯಿಯ ಮುಖದ ಮೇಲೆ ಮುಗುಳ್ನಗೆಯಿರಲಿಲ್ಲ.

ಮೂಲ: ಭಗವತೀಕುಮಾರ್ ಶರ್ಮಾ, ,ಕನ್ನಡಕ್ಕೆ: ಡಿ.ಎನ್. ಶ್ರೀನಾಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.