ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ | ಸಂತೆಯಲ್ಲಿ ನಕ್ಕವನು

Published 13 ಆಗಸ್ಟ್ 2023, 0:30 IST
Last Updated 13 ಆಗಸ್ಟ್ 2023, 0:30 IST
ಅಕ್ಷರ ಗಾತ್ರ

ಜಯರಾಮ ಚಾರಿ

ದಿನವೂ ಕನ್ನಡಿಯಲ್ಲಿ ನಮ್ಮನ್ನು ನಾವು ನೋಡಿಕೊಂಡರೂ, ಎಂದೋ ಒಂದು ದಿನ ‘ಅರೇ ಹೊಟ್ಟೆ ಯಾವಾಗ ಇಷ್ಟು ಅಗಲವಾಯ್ತು? ಕೂದಲು ಯಾವಾಗ ನೆರೆದು ಹೋಯ್ತು?’ ಎಂದು ಆಶ್ಚರ್ಯವಾಗುತ್ತದೆ, ದುಃಖ ಒತ್ತರಿಸಿಕೊಂಡು ಬಂದು ನಿಲ್ಲುತ್ತದೆ. ಈ ದಿನ ಅವನಿಗೆ ಅಂತಂದೊಂದು ದಿನ. ಸ್ನಾನ ಮಾಡಿ ಮೈ ಒರೆಸಿಕೊಳ್ಳುತ್ತ ಕನ್ನಡಿ ಮುಂದೆ ಬೆತ್ತಲು ನಿಂತಾಗ ಸೊಂಟದ ಕೆಳಗೆ ಅವನ ಅಳತೆ ಮೀರಿದ ಹೊಟ್ಟೆ ಜೋತಾಡುತ್ತಿತ್ತು, ಎದೆಯ ಭಾಗದ ಹತ್ತಿರ ಭುಜಗಳ ಹತ್ತಿರ ಮೂಡಿರುವ ಬಿಳಿ ಕೂದಲುಗಳು, ಗಡ್ಡದಲ್ಲಿ ಕಿವಿಯ ಪಕ್ಕ ಕಿವಿಯ ಮೇಲೆ ಇಣುಕುತ್ತಿರುವ ನೆರೆ ಕೂದಲುಗಳು, ‘ಅರೇ! ಮೂವತ್ತೆರಡಕ್ಕೆ ಇದೆಂತ ಬಾಲ ಮುಪ್ಪು’ ಅಂದುಕೊಂಡ. ‘ಇರಲಿ ಇದನ್ನೇ ಅಲ್ವ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಅನ್ನುವುದು ಎಂದು’ ಸಮಾಧಾನ ಮಾಡಿಕೊಂಡ, ಹತ್ತಿರದಲ್ಲೇ ಯಾವುದಾದರೂ ಜಿಮ್ಮಿಗೆ ಸೇರಿಕೊಂಡು ಹೊಟ್ಟೆಯನ್ನು ಇನ್ನೊಂದು ಮೂರು ತಿಂಗಳಿಗಾದರೂ ಕರಗಿಸಬೇಕೆಂದು ನಿರ್ಧರಿಸಿ ಯೂನಿಫಾರ್ಮ್ ಹಾಕಿಕೊಂಡು ಮನೆಯಿಂದ ರಾಜೇಶ್ ಹೊರಬಿದ್ದ.


ಎಂತಹುದೋ ಒಂದು ಅಸಹನೆ ಅವನೊಳಗೆ ಮನೆ ಮಾಡಿತ್ತು. ಒಳಗೊಳಗೇ ಕೆಂಡದಂತೆ ಉರಿಯುತ್ತಿರುವ ಸಿಟ್ಟು. ಏನೇನೋ ಸುಳ್ಳು ಸಮಾಧಾನಕ್ಕೆ ನೆಪ ಕೊಟ್ಟರೂ ಸುಮ್ಮನಾಗುತ್ತಿಲ್ಲ. ಒಲೆಯೊಳಗಿನ ಕೆಂಡದಂತೆ ಧಿಗಿಧಿಗಿ ಹತ್ತಿ ಉರಿಯುತ್ತಿದೆ. ಅಸಲು ಕಾರಣ ‘ಹೊಸ ಸ್ಟೇಷನ್ - ಹೊಸ ಆಫೀಸ್ ಆರ್ಡರ್ - ಹೊಸ ಟ್ರಾನ್ಸ್ಫರ್’ ಇದು ಅವನಿಗೆ ಹನ್ನೆರಡನೆಯ ಸ್ಟೇಷನ್, ಪ್ರತಿ ಸಲ ಹೀಗೆ ಹೊಸ ಸ್ಟೇಷನ್ ಕಡೆಗೆ ಹಳೆ ಸಿಟ್ಟನ್ನು ಕೋಪವನ್ನು ದ್ವೇಷವನ್ನು ಇಟ್ಟುಕೊಂಡೆ ಒಳಗೆ ಹೋಗೋದು. ಇವತ್ತು ಕೂಡ ಅದೇ ತರ ಅಸಹನೆಯಲ್ಲೇ ಹೊಸ ಸ್ಟೇಷನ್ ಒಳಕ್ಕೆ ಹೋದ, ಒಳಗೆ ಡ್ಯೂಟಿಯಲ್ಲಿದ್ದ ಸ್ಟೇಷನ್ ಕಂಟ್ರೋಲರನನ್ನ ನೋಡಿ ನಾಟಕೀಯದಲ್ಲೇ ಮುಗುಳ್ನಕ್ಕ, ಎದುರಿಗಿದ್ದವನು ಕೂಡ ನಕ್ಕ. 'ಬನ್ರೀ ರಾಜೇಶ್ ಬನ್ನಿ, ನಮ್ ಹೊಸ ಸ್ಟೇಷನ್ ಇನ್-ಚಾರ್ಜ್ ಬನ್ನಿ' ಎಂದ, ಅವನ ಮಾತಿನಲ್ಲಿ ವ್ಯಂಗ್ಯವಿತ್ತ? ಗೊತ್ತಾಗಲಿಲ್ಲ. ಆದರೆ ಆ ಕ್ಷಣಕ್ಕೆ ರಾಜೀವನೋ ಸಂದೀಪನೊ ಅವನ ಹೆಸರು ನೆನಪಾಗಲಿಲ್ಲ ಗೊತ್ತಾಗಲಿಲ್ಲ. ಆದರೂ ಅವನನ್ನ ತಾನು ಮರೆತಿಲ್ಲದವನ ತರ 'ಓ ಹೇಗಿದ್ದೀರ?' ಎಂದು ರಾಜೇಶ್ ಕೇಳಿ ಕೂತುಕೊಂಡ. ‘ಸರಿ ಸರ್ ತಗೊಳ್ಳಿ ನಿಮ್ ಸ್ಟೇಶನ್’ ಎಂದು ಅವನು ಎದ್ದ, ಅವನ ಶಿಫ್ಟ್ ಮುಗೀತು, ಕೈಗೆಟುಕುವಷ್ಟು ಹತ್ತಿರದಲ್ಲಿ ಫೋನ್ ಚಾರ್ಜರ್ ಹಾಕಿದ್ದ ಅದನ್ನ ಕಿತ್ತು ಬ್ಯಾಗಿಟ್ಟುಕೊಂಡ, ಟೇಬಲ್ ಮೇಲೆ ಬಿಸಿನೀರಿನ ಬಾಟಲಿ ಇತ್ತು ಅದನ್ನ ಎತ್ತಿಕೊಂಡು ಬ್ಯಾಗಿನ ಸೈಡ್ ಪ್ಯಾಕಿನಲ್ಲಿ ಸಿಗಿಸಿಕೊಂಡ, ಜೇಬಿನಿಂದ ಇಯರ್ ಬಡ್ಸ್ ತೆಗೆದು ಕಿವಿಗಳಿಗೆ ಸಿಗಿಸ್ಕೊಂಡ, ಕೈ ಬೀಸಿಕೊಂಡು ಹೊರಟುಹೋದ.

ಅವನು ಹೋದ ಕೂಡಲೇ ಅಲ್ಲಿ ಸದ್ದೇ ಇರಲಿಲ್ಲ, ಸ್ಟೇಷನ್ ಕಂಟ್ರೋಲ್ ರೂಮು ಮೌನವಾಗಿತ್ತು, ರಾಜೇಶನೊಳಗೆ ಜ್ವಾಲಾಮುಖಿಯಂತ ಅಸಹನೆ. ಒಂದು ಸ್ಟೇಷನ್ನಿಂದ ಇನ್ನೊಂದು ಸ್ಟೇಷನ್ನಿಗೆ ಅಂತ ಘನ ವ್ಯತ್ಯಾಸಗಳಿಲ್ಲ. ಇಲ್ಲೂ ಸಹ ಅವೇ ಬಿಳಿ ಗೋಡೆಗಳು, ಅವುಗಳ ಪಾಡಿಗೆ ಸುಮ್ಮನೆ ಕೆಲಸ ಮಾಡುತ್ತಿರುವ ಕಂಪ್ಯೂಟರುಗಳು, ಒಂದು ಕ್ಷಣವೂ ದಣಿವೆಂದು ಕೂರದೇ ತಮ್ಮ ಪಾಡಿಗೆ ಪ್ರಯಾಣಿಕರನ್ನು ಸೆರೆಹಿಡಿಯುತ್ತಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳು, ಮೇಲಿಂದ ಕೆಳಗೆ ಕೆಳಗಿನಿಂದ ಮೇಲಕ್ಕೆ ಓಡಾಡುವ ಜೀವವಿಲ್ಲದ ಲಿಫ್ಟುಗಳು ಎಸ್ಕಲೇಟರುಗಳು, ಮತ್ತವೇ ಅತ್ತಿಂದ ಇತ್ತ ಇತ್ತಿಂದ ಅತ್ತ ಓಡಾಡುತ್ತಿರುವ ನಿಂತು ಸುಧಾರಿಸಿಕೊಳ್ಳುವಂತೆ ಕಾಣುವ ಹಸಿರು ನೇರಳೆ ಮೆಟ್ರೋರೈಲುಗಳು. ಬೇಡವೆಂದರೂ ಅತಿ ಬಾಗುವ ಅತಿ ವಿನಯದಿಂದ ಸೆಲ್ಯೂಟ್ ಹೊಡೆಯುವ ಸೆಕ್ಯೂರಿಟಿ ಗಾರ್ಡುಗಳು, ಹೌಸ್ ಕೀಪಿಂಗಿನವರು.  


ಸ್ಟೇಷನ್ ಒಂದು ರೌಂಡ್ ಹೊಡೆದು ಬಂದು ಕೂತ, ಹೆಂಡತಿ ಕಾಲ್ ಮಾಡಿ ‘ಹೇಗಿದೆ ಸ್ಟೇಷನ್?’ ಎಂದು ಕೇಳಿದಳು, ‘ಏನು ವಿಶೇಷವಿಲ್ಲ ಅದೇ ಸ್ಟೇಷನ್ ಅದೇ ಕತೆ’ ಎಂದು ಮಾತನಾಡಿ ಮುಗಿಸಿದ. ಒಂದು ಸ್ಟೇಷನ್ ಒಗ್ಗಿಕೊಂಡು ನಿಶ್ಚಿಂತೆಯಿಂದ ಕೆಲಸ ಮಾಡುತ್ತ ಇರುವಾಗ ಸಡನ್ನಾಗಿ ಈ ಟ್ರಾನ್ಸ್ಫರ್ ಯಾಕೆ ಮಾಡ್ತಾರೋ? ಒಂದು ಗೊತ್ತಿಲ್ಲ, ಸಾಲದು ಅಂತ ಇಂತ ವಿಷಯಗಳಲ್ಲಿ ಜಾತಿ ರಾಜಕಾರಣ, ಬ್ಯಾಚ್ ರಾಜಕಾರಣ, ಬೇಕಾದವರನ್ನ ಎಲ್ಲಿಯೂ ಕಳಿಸದೇ ಅಲ್ಲೇ ಗೂಟ ಹೊಡೆಸಿಕೊಂಡು ಕೂರುವ, ಕಣ್ಣಿಗೆ ಎದ್ದು ಕಾಣುವ ಬಕೆಟುಗಿರಿ ಇಂತಹವುಗಳೇ ರಾಜೇಶನ ಸಿಟ್ಟಿಗೆ ಕಾರಣ. ಒಂದೇ ಕೆಲಸ ಒಂದೇ ದರ್ಜೆ ಒಂದೇ ಸ್ಯಾಲರಿ ಇದ್ದ ಕಡೆ ಇಂತ ಮಿಟುಕಲಾಡಿತನಗಳು ಯಾಕೆ? ಮಾತನಾಡಿ ಚರ್ಚಿಸಿ ಪ್ರಯೋಜನವಿಲ್ಲ. ಇನ್ನು ಕೂತರೆ ಅದೇ ತಲೆಗೆ ಬರುತ್ತೆ ಎಂದು ಊಟಕ್ಕೆ ಎದ್ದ. ಅವನ ಚೇರಿನ ಹಿಂಭಾಗದ ಗೋಡೆಯಲ್ಲಿ ಸುಮಾರು ಐದು ಅಡಿಯ ನಿಂತ ಗಾಂಧಿಯ ಫೋಟೋವಿತ್ತು. ಅದು ನೆಲದ ಮೇಲೆ ನಿಲ್ಲಿಸಿ ಗೋಡೆಗೆ ಒರಗಿಸಿದ್ದರು, ಮಹಾತ್ಮಗಾಂಧಿ. ಐದು ಅಡಿ ಎತ್ತರದ ಸಾದಾ ಉಡುಪಿನ, ನೇರ ನಿಲುವಿನ, ಅಷ್ಟೇನೂ ಹೇಳಿಕೊಳ್ಳದ ದೇಹದ, ನಗದ, ಕನ್ನಡಕದ ಒಳಗಿನ ಕಣ್ಣುಗಳಲ್ಲಿ ಏನನ್ನೋ ಕೇಳುತ್ತ ಕೈಯಲ್ಲಿ ಹಾಳೆಗಳನ್ನು ಹಿಡಿದುಕೊಂಡು ರಾಜೇಶನತ್ತಲೇ ನೋಡುತ್ತಿರುವ ಗಾಂಧಿ.  


**

ಗಾಂಧಿ ತನ್ನ ಕಾಲೇಜು ಮುಗಿಸಿ ಲಾ ಪ್ರಾಕ್ಟೀಸ್ ಮಾಡಲು ಮುಂಬೈಗೆ ಬಂದಾಗ ಅವನಿಗದು ಸಾಧ್ಯವಾಗಲೇ ಇಲ್ಲ, ಅಪರಾಧಿಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ಕ್ರಾಸ್ ಎಕ್ಸಾಮಿನೇಷನ್ ಮಾಡಲಾಗದೆ ತನ್ನೂರಿಗೆ ಓಡಿ ಹೋದವ, ದೈಹಿಕವಾಗಿ ಮಾನಸಿಕವಾಗಿ ಗಾಂಧಿ ಬಲಹೀನ ಆಗಿದ್ದ, ಶ್ರೀಮಂತ ಮನೆತನದ ಗಾಂಧಿಗೆ ಕಾಡುತ್ತಿದ್ದುದ್ದು ತನ್ನೊಳಗಿನ ಬೇಗುದಿ, ಏನು ಮಾಡಲಾಗದ ಅಸಹಾಯಕತೆ. ಶ್ರೀಮಂತ ಮನೆತನದ ಯುವಕರ ಮಾನಸಿಕ ತಾಕಲಾಟಗಳು ಅಷ್ಟಿಷ್ಟಲ್ಲ, ಅದೇ ಗಾಂಧಿಗೂ ಇದ್ದಿದ್ದು, ಅವನು ಅವನಿಂದ ತನ್ನವರಿಂದ ಓಡಿಹೋಗಲು ಹೊಂಚು ಹಾಕುವ ವೇಳೆಗೆ ಅವನ ಅದೃಷ್ಟಕ್ಕೆ ಅವನಿಗೆ ದಕ್ಷಿಣ ಆಫ್ರಿಕಾದ ವ್ಯಾಪಾರಿಯಿಂದ ಬುಲಾವ್ ಬಂತು ‘ತನ್ನ ವ್ಯಾಪಾರದ ಕಾನೂನು ಸಲಹೆಗಾರ ಆಗಿಬಿಡು ಲೀಗಲ್ ಎಲ್ಲ ನೋಡಿಕೋ’ ಎಂದು, ಗಾಂಧಿಗೊಂದು ಜೀವ ಬಂತು ಅಲ್ಲಿಂದ ಹೊರಟ. ಗಾಂಧಿ ತಾನು ಭಾರತೀಯ ಎಂದು ಅಲ್ಲಿವರೆಗೂ ಅಂದುಕೊಂಡಿರಲೇ ಇಲ್ಲ, ಅವನು ಶ್ರೀಮಂತ ಮನೆಯಲ್ಲಿ ಹುಟ್ಟಿ, ಶ್ರೀಮಂತನಾಗೆ ಬೆಳೆದು, ಇಂಗ್ಲೆಂಡಿಗೆ ಹೋಗಿ ಲಾ ಓದಿಕೊಂಡವನು, ಅವನಿಗೆ ತಾನು ಬ್ರಿಟಿಷ್ ಆಫೀಸರ್ ಅಂತಲೇ ತಲೆಯಲ್ಲಿ ಇದ್ದಿದ್ದು, ಮೊದಲಾಗಿ ತಾನು ಬ್ರಿಟಿಷವ ಎರಡನೇಯವನಾಗಿ ನಾನು ಭಾರತೀಯ ಎಂದುಕೊಂಡಿದ್ದ, ಈಗಿನ ಟಿಪಿಕಲ್ ಅನಿವಾಸಿ ಭಾರತೀಯರ ತರ,  ಆ ಒಂದು ಧಿಮಾಕಿನಿಂದಲೇ ದಕ್ಷಿಣ ಆಫ್ರಿಕಾದ ರೈಲಿನಲ್ಲಿ ಕೂತಿದ್ದ. ಕೂತಿದ್ದ ಕಂಪಾರ್ಟುಮೆಂಟಿಗೆ ಬಂದ ಬೆಳ್ಳನೆಯ ಬ್ರಿಟಿಷ್ ಅಧಿಕಾರಿಗಳು ತೆಳ್ಳನೆಯ ಕಪ್ಪು ಬಣ್ಣದ ಗಾಂಧಿಯನ್ನು ಒಮ್ಮೆ ದಿಟ್ಟಿಸಿ, ಟಿಕೇಟು ಕೇಳಿದರು, ಅವನು ಕೊಟ್ಟ, ಒಮ್ಮೆ ಮೇಲಿನಿಂದ ಕೆಳಗಿನವರೆಗೂ ದಿಟ್ಟಿಸಿ, ‘ಹೀಗೆಲ್ಲ ಬಿಳಿ ಅಧಿಕಾರಿಗಳು ಕೂರುವ ಕಂಪಾರ್ಟುಮೆಂಟಲ್ಲಿ ನೀನು ಕೂರುವ ಆಗಿಲ್ಲ’ ಎಂದರು, ಗಾಂಧಿ ಅದಕ್ಕೆ ವಿರೋಧಿಸಿದ, ಗಾಂಧಿಯನ್ನು ಯಾವ ದಯೆಯಿಲ್ಲದೆ ಆ ಬಿಳಿಯ ಅಧಿಕಾರಿಗಳು ಟ್ರೈನಿಂದ ಹೊರದಬ್ಬಿದರು.

ಬಂಗಲೆಯಲ್ಲಿ ಬದುಕುತ್ತಿದ್ದ ಗಾಂಧಿ ಮೊದಲ ಸಲ ಬೀದಿಗೆ ಬಿದ್ದ, ಯಾವಾಗ ಭ್ರಮೆಗಳಿಂದ ಕೂಡಿದ ಗಾಂಧಿಯನ್ನು ಎರಡು ಸಲ ಟ್ರೈನ್ ನಿಂದ ಹೊರದಬ್ಬಿದರೋ ಆಗ ಗಾಂಧಿಗೆ ಗೊತ್ತಾಯ್ತು. ಬೇರೆ ದೇಶ ಅವನನ್ನು ಮೂರನೇ ದರ್ಜೆಯ ಭಾರತೀಯ ಎಂದೇ ನೋಡುವುದು, ಗಾಂಧಿಯೊಳಗಿನ ಗಾಂಧಿ ಸತ್ತು ನಿಜವಾದ ನಮ್ಮೊಳಗಿನ ಗಾಂಧಿಯಾಗಿ ಹುಟ್ಟಿದ ಕ್ಷಣವದು, ಅವತ್ತು ಪರದೇಶದಲ್ಲಿ ಅವಮಾನದಲ್ಲಿ ಗಾಂಧಿ ಮಹಾತ್ಮನಾಗುವ ಮೊದಲ ದಾರಿ ಸಿಕ್ಕಿತ್ತು. ಆ ದಾರಿ ಅಷ್ಟೇನೂ ಸಲೀಸಾಗಿರಲಿಲ್ಲ, ಅದು ಯಾರು ತುಳಿಯದ ಹಾದಿಯಾಗಿತ್ತು, ಯಾರು ಸವೆಸದ ದಾರಿಯಾಗಿತ್ತು, ಆ ದಾರಿಯಲ್ಲಿ ಗಾಂಧಿಯಷ್ಟೇ ನಡೆಯಬಹುದಿತ್ತು. 


**

ರಾಜೇಶ ಕಡುಬಡತನದಲ್ಲಿ ಹುಟ್ಟಿದವನು, ಅವನಿಗೆ ವಿದ್ಯೆ ಒಲಿದು ಚೆನ್ನಾಗಿ ಓದಿ ಎಂಜಿಯರಿಂಗ್ ಮಾಡಿಕೊಂಡಿದ್ದ, ದೂರದೇಶಕ್ಕೆ ಹೋಗಿ ನ್ಯಾನೋಟೆಕ್ನಲಾಜಿಯಲ್ಲಿ ಮಾಸ್ಟರ್ಸ್ ಮಾಡಬೇಕೆಂದವನಿಗೆ ಬೆಂಗಳೂರಿನ ಮೆಟ್ರೋದಲ್ಲಿ ಕೆಲಸ ಸಿಕ್ಕು, ಪಬ್ಲಿಕ್ ಸೆಕ್ಟರನ್ನು ಅವರ ಮನೆಯ ಹಿರಿಯರು ಸರ್ಕಾರಿ ಸೆಕ್ಟರ್ ಎಂದು ತಿಳಿದು ‘ಒಲಿದು ಬಂದಿರೋ ಗೋರ್ಮೆಂಟ್ ಕೆಲಸ ಬಿಡ್ತೀಯ?’ ಎಂದು ಉಗಿದು, ‘ಮಾಸ್ಟರ್ಸ್ ಬೇಡ ಏನು ಬೇಡ’ ಎಂದು ಈ ಕೆಲಸಕ್ಕೆ ಗಂಟು ಹಾಕಿದ್ದರು, ಕೈ ತುಂಬಾ ಸಂಬಳವಾದ್ದರಿಂದ ರಾಜೇಶನು ಶುರುವಿನಲ್ಲಿ ಸ್ವಲ್ಪ ವಿರೋಧ ತೋರಿ ಆಮೇಲೆ ಹೊಂದಿಕೊಂಡಿದ್ದ, ತಾನು ಓದಿದ ಎಂಜಿನಿಯರಿಂಗಿಗೂ ತಾನು ಮಾಡುವ ಕೆಲಸಕ್ಕೂ ಏನು ಸಂಬಂಧವಿಲ್ಲ ಎಂದು ಅವನಿಗೆ ಪ್ರೊಬೆಷನರಿ ಪಿರಿಯಡ್ ಮುಗಿದ ಕೂಡಲೇ  ಗೊತ್ತಾಯ್ತು, ಪ್ರೊಬೆಷನರಿ ಮುಗಿದ ಕೂಡಲೇ ರೈಲು ಓಡಿಸುವ ಟ್ರೈನಿಂಗ್ ಕೊಡಿಸಿ ಟ್ರೈನ್ ಆಪರೇಟರ್ ಎಂದು ಟ್ರೈನ್ ಓಡಿಸಲು ಬಿಟ್ಟರು.

ಭವಿಷ್ಯದ ಬಗ್ಗೆ ಏನೇನೋ ಕನಸುಗಳನ್ನ ಇಟ್ಟುಕೊಂಡಿದ್ದ, ನ್ಯಾನೋಟೆಕ್ನಲಾಜಿಯಲ್ಲಿ ಏನಾದರು ಕಿಸಿಯಬೇಕೆಂದು ಆಮೇಲೆ ಅದನ್ನು ಕೂಡ ಬಿಟ್ಟಿದ್ದ, ಬೈಯಪ್ಪನಹಳ್ಳಿಯಿಂದ ಮೈಸೂರು ರೋಡಿನವರೆಗೂ ರೈಲನ್ನು ಓಡಿಸುವಾಗ ಬದುಕಿನ ಬಗ್ಗೆ ಯೋಚಿಸಲೂ ಭಯವಾಗುತ್ತಿತ್ತು, ಒಂದೊಂದು ಸಲ ಅವನ ಎಂಜಿನಯರಿಂಗ್ ಸ್ನೇಹಿತರು ಹೀಗೆ ಯಾವುದಾದರೂ ಮೆಟ್ರೋ ಸ್ಟೇಶನ್ ಪ್ಲಾಟ್ ಫಾರ್ಮಿನಲ್ಲಿ ಕಾಣಿಸಿಕೊಂಡಾಗ ಅವರ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ.


ಕೆಲಸಕ್ಕಿಂತಲೂ ಅವನಿಗೆ ಹಿಂಸೆಯಾಗಿದ್ದು ಭಾನುವಾರ ಕೆಲಸವಿದ್ದು, ಬುಧವಾರ ರೆಸ್ಟ್ ಡೇ ಆಗಿತ್ತು, ಎರಡು ವಾರ ಆಗುವಷ್ಟರಲ್ಲಿ ನೈಟ್ ಶಿಫ್ಟ್ ಒಕ್ಕರಿಸಿಕೊಂಡು ಬರುತ್ತಿತ್ತು, ಸಾಲದು ಅಂತ ಅಪರೂಪಕ್ಕೆ ರಜೆ ಕೇಳಿದರೆ ಸಿಗುತ್ತಿರಲಿಲ್ಲ, ಆಗೊಮ್ಮೆ ಈಗೊಮ್ಮೆ ಸಣ್ಣ ಪುಟ್ಟ ತಪ್ಪುಗಳಾದಾಗ ದೊಡ್ಡ ಶಿಕ್ಷೆ ಬೇರೆ, ಇವೆಲ್ಲವುಗಳಿಂದ ಬೇಸತ್ತು ಹೋಗಿದ್ದ, ಆದಷ್ಟು ಬೇಗ ಈ ಕೆಲಸ ಬಿಡಬೇಕೆಂದುಕೊಂಡೇ ನಾಲ್ಕೈದು ವರ್ಷ ಪೂರೈಸಿದ. ಒಂದು ಸಲ ಯಾವುದೊ ಯೋಚನೆಯಲ್ಲಿದ್ದು ರೈಲು ಓಡಿಸುವಾಗ ರೆಡ್ ಸಿಗ್ನಲ್ ದಾಟಿಬಿಟ್ಟ, ಅದಕ್ಕೆ ಅವನಿಗೆ ಹದಿನೈದು ರಜೆ ಕಟ್ ಮಾಡಿಯೇ ಬಿಟ್ಟರು, ಅದರಿಂದ ರೊಚ್ಚಿಗೆದ್ದು ಅಧಿಕಾರಿಗಳಿಗೆಲ್ಲ ಉಗಿದ ಮೇಲೆ ಅವನ ಉದ್ಯೋಗದ ಬದುಕು ಇನ್ನು ಹದಗೆಟ್ಟು ಹೋಗಿತ್ತಲ್ಲದೆ ಅವನ ಬಗ್ಗೆ ಮ್ಯಾನೇಜ್ಮೆಂಟ್ ಲಿ ಕೆಟ್ಟ ಹೆಸರೊಂದು ಉಳಿದು ಹೋಯ್ತು.

ಆರೇಳು ವರ್ಷವಾದ ಮೇಲೆ ಟ್ರೈನ್ ಆಪರೇಟರ್ ಇಂದ ಸ್ಟೇಷನ್ ಕಂಟ್ರೋಲರ್ ಆದ, ಅಲ್ಲಿ ಕೂಡ ಅದು ಇದು ಆಗಿ ಅವನನ್ನು ಸುಖಾಸುಮ್ಮನೆ ಯಾವುಯಾವುದೋ ಸ್ಟೇಷನ್ ಗೆ ಎತ್ತಿ ಹಾಕೋದು ಇದೆ ಆಗಿ ಹೋಯ್ತು. ಇಷ್ಟೆಲ್ಲಾ ಮಧ್ಯದಲ್ಲಿ ಒಂದು ಮದುವೆ ಒಂದು ಮಗು, ಮುಕ್ಕಾಲು ಸ್ಯಾಲರಿಯನ್ನು ಕಿತ್ತುಕೊಳ್ಳುವ ಲೋನುಗಳು, ವಕ್ಕರಿಸಿಕೊಂಡ ಗ್ಯಾಸು ಶುಗರ್ರು ಎಲ್ಲ ಸೇರಿ ಅವನ ಬದುಕು ಇನ್ನು ಬಿಗಡಾಯಿಸಿತ್ತು ಆದರೂ ತಾನು ಒಳ್ಳೆಯ ಜೀವನ ನಡೆಸುತ್ತಿದ್ದೇನೆ ಎನ್ನುವ ಭ್ರಮೆಯೊಂದು ಇತ್ತು.


ರಾಜೇಶನಿಗೆ ಒಂದು ವಾರದಲ್ಲಿ ಹೊಸ ಸ್ಟೇಷನ್ ಹಳೆಯ ಸ್ಟೇಷನ್ ಆಯ್ತು, ಸ್ಟೇಷನ್ ಇಂಚಿಂಚು ಗೊತ್ತಾಯ್ತು, ಯಾವ ಕೆಲಸಗಾರರು ಕಳ್ಳ ಬೀಳುತ್ತಾರೆ, ಯಾರು ಕೆಲಸ ಮಾಡುತ್ತಾರೆ, ಯಾವ ಟೈಮ್ ಅಲ್ಲಿ ಪ್ರಯಾಣಿಕರು ಹೆಚ್ಚು ಯಾವ ಟೈಮ್ ಅಲ್ಲಿ ಪ್ರಯಾಣಿಕರು ಕಮ್ಮಿ, ಯಾರು ಯಾರಿಗೆ ಈ ಲವ್ವು ಅಫೇರು, ಯಾರಿಗೆ ಏನೆಲ್ಲಾ ಕಷ್ಟ ಗೊತ್ತಾಯ್ತು, ಅವೆಲ್ಲ ತಿಳಿದು ತಿಳಿಯದಂತಿರಬೇಕು ಅದೇ ಬುದ್ದಿವಂತಿಕೆ.


ಎಲ್ಲವು ಚೆನ್ನಾಗಿತ್ತು ಆದರೆ ಚೇರು ಹಿಂದೆ ನಿಂತ ಗಾಂಧಿ ಮಾತ್ರ ನನ್ನನೇ ನೋಡುತ್ತಿದ್ದಾನೆ ಅನಿಸಲು ರಾಜೇಶನಿಗೆ ಶುರುವಾಯ್ತು, ಒಬ್ಬನೇ ರಾಜಾರೋಷವಾಗಿ ಇರಬೇಕಾದ ಸ್ಟೇಷನ್ ಕಂಟ್ರೋಲ್ ರೂಮಿನಲ್ಲಿ ಇನ್ನೊಬ್ಬ ಅಪರಿಚಿತನೊಬ್ಬ ಇದ್ದ ಹಾಗೆ ಅನಿಸಲು ಶುರುವಾಯ್ತು, ಹಿಂದೆ ತಿರುಗಿ ನೋಡಿದರೆ ಗಾಂಧಿ ಫೋಟೋದಿಂದ ಅವನನ್ನ ನೋಡುತ್ತಿದ್ದ, ಬೇರೆ ಕಡೆ ಎಷ್ಟೋ ಗಾಂಧಿ ಭಾವಚಿತ್ರಗಳನ್ನು ನೋಡಿದ್ದ ಅದರಲ್ಲಿ ಅವನು ಬೊಚ್ಚು ಬಾಯಿಯಿಂದ ನಗುತ್ತಲಿರುವನು, ಆದರೆ ಈ ಭಾವಚಿತ್ರದಲ್ಲಿ ನಗುವೇ ಇಲ್ಲ, ಸಿಕ್ಕಿಕೊಂಡ ಕಳ್ಳನನ್ನು ಪೊಲೀಸರು ನೋಡುತ್ತಾರಲ್ಲ ಆ ತರವಿತ್ತು ಗಾಂಧಿಯ ನೋಟ, ಅದನ್ನು ನೋಡಲು ಭಯಪಡಲು ಶುರುಮಾಡಿದ, ‘ಅರೆ! ಗಾಂಧೀಜಿ ಯಾಕೆ ಬರೀ ಧೋತಿ ಶಾಲನ್ನು ಅಷ್ಟೇ ಧರಿಸಿರುತ್ತಾನೆ?’ ಎಂದು ಕೆಲಸವಿಲ್ಲದ ಬಡಗಿ ತರ ಅದನ್ನು ಗೂಗಲ್ ಮಾಡಿದ, ಮಾಡಬಾರದಿತ್ತು. ಅವನು ಬಟ್ಟೆ ತೊಟ್ಟರೆಷ್ಟು ಬಿಟ್ಟರೆಷ್ಟು ನನಗೇನು ಎಂದು ಸುಮ್ಮನಿರಬೇಕಿತ್ತು. 


**

ಹುಟ್ಟು ಶ್ರೀಮಂತನಾದ ಗಾಂಧಿ ಲಾ ಓದಿಕೊಂಡು ಬ್ರಿಟಿಷ್ ಆಫೀಸರ್ ಎಂದುಕೊಂಡಿದ್ದ, ಗಾಂಧಿ  ದಕ್ಷಿಣ ಆಫ್ರೀಕಾದಲ್ಲಿ ಅಕ್ಷರಶಃ ಪರದೇಶಿಯಾಗಿದ್ದ. ದಕ್ಷಿಣ ಆಫ್ರೀಕಾದಲ್ಲಿ ಗೋಧಿ ಕಪ್ಪು ಬಣ್ಣದವರಿಗೆ ಕಿಂಚಿತ್ತೂ ಮರ್ಯಾದೆಯಿರಲಿಲ್ಲ, ಒಂದೆರಡು ಕಡೆ ಅವರು ಬದುಕಬಹುದಿತ್ತು, ಅವರು ನೆಲವನ್ನೇ ಖರೀದಿಸುವಂತಿರಲಿಲ್ಲ, ಸ್ಥಳೀಯ ಚುನಾವಣೆಗಳಲ್ಲಿ ಅವರು ಲೆಕ್ಕಕ್ಕೆ ಇರುತ್ತಿರಲಿಲ್ಲ, ಅವರಿಗೆ ವೋಟಿಂಗ್ ಮಾಡುವ ಹಕ್ಕು ಕೊಟ್ಟಿರಲಿಲ್ಲ ಅಷ್ಟೇ ಯಾಕೆ ಕಪ್ಪು ಜನರು ರಸ್ತೆಗಳಲ್ಲಿ ಕೂಡ ನಡೆಯುವಂತಿರಲಿಲ್ಲ. ರಸ್ತೆಗಳಲ್ಲಿ ಅವರು ಕಾಣಿಸಿಕೊಂಡರೆ ಬಿಳಿ ಬಣ್ಣದವರು ಹಿಡಿದು ಬಾರಿಸುತ್ತಿದ್ದರು, ಹೀಗೆ ಒಂದು ಸಲ ಗಾಂಧಿ ಸ್ಥಳೀಯ ಅಧಿಕಾರಿ ನೋಡಲು ಹೋಗುವಾಗ ಅಲ್ಲಿನ ಪೊಲೀಸರು ಗಾಂಧಿಯನ್ನು ಹಿಡಿದು ತದುಕಲು ಕಾದಿದ್ದರು, ಅದೃಷ್ಟವಶಾತ್ ಗಾಂಧಿ ಅವತ್ತು ತಪ್ಪಿಸಿಕೊಂಡಿದ್ದ, ಅವತ್ತು  ಗಾಂಧಿಯನ್ನು ರಕ್ಷಿಸಿದ್ದು ಕಸ್ತೂರ ಬಾ ! 


ತನ್ನ ಜನರಿಗೆ ಸಿಗಬೇಕಾದ ಹಕ್ಕುಗಳನ್ನು ದೊರಕಿಸಿಕೊಡಲು ನಿರ್ಧಿರಿಸಿದ್ದು ಗಾಂಧಿ ಬೇರೆ ನೆಲದಲ್ಲೇ ! ಗಾಂಧಿ ಗಾಂಧಿ ಆಗಲು ಅದೆಷ್ಟು ಒದ್ದಾಡಿ ಹೋಗಿರಬೇಕು. ಗಾಂಧಿ ಕಣ್ಣಲ್ಲಿ ಮೂರು ದೇಶಗಳಿದ್ದವು ಒಂದು ಬಡವರೇ ತುಂಬಿಕೊಂಡ ತನ್ನ ಮೂಲ ದೇಶ ಭಾರತ, ಆದರೆ ಅಲ್ಲಿ ಗಾಂಧಿಗೆ ಬಡವರೇ ಕಾಣಲಿಲ್ಲ ಕಾರಣ ಅಲ್ಲಿ ಗಾಂಧಿ ಶ್ರೀಮಂತನಾಗಿದ್ದ, ಎರಡನೆಯದು ಬ್ರಿಟನ್ ಅಲ್ಲಿ ಗಾಂಧಿ ಸೋಗು ಹಾಕಿಕೊಂಡು ಶ್ರೀಮಂತಿಕೆಯ ಸಹಾಯದಿಂದ ಓದುತ್ತ ಡ್ಯಾನ್ಸ್ ಮಾಡುತ್ತ ವಯೊಲಿನ್ ಕಲಿಯುತ್ತ ಬ್ರಿಟಿಷನಾಗಲು, ಅಧಿಕಾರಿ ಆಗಲು ಒದ್ದಾಡುತ್ತಿದ್ದ, ಮೂರನೆಯದು ದಕ್ಷಿಣ ಆಫ್ರಿಕಾ ಇಲ್ಲಿ ಅವನಿಗೆ ತನ್ನ ದಿಕ್ಕೆಟ್ಟ ಸ್ಥಿತಿ ಅರಿವಾಯ್ತು ಭಾರತೀಯರನ್ನು ಬೇರೆಯವರು ನೋಡುವ ರೀತಿ ಗೊತ್ತಾಯ್ತು ತಮ್ಮ ನೆಲದಲ್ಲಿ ಹಕ್ಕಿಗಾಗಿ ಬದುಕಿಗಾಗಲಿ ಒದ್ದಾಡುವ ಬದುಕಿನ ಘೋರ ಸತ್ಯ ಕಾಣಿಸಿತು. ಆ ಸತ್ಯದಲ್ಲೇ ಗಾಂಧಿ ಹುಟ್ಟಿಕೊಂಡ, ಹಳೆ ಗಾಂಧಿ ಸತ್ತು ಹೋದ.  


ಮನುಷ್ಯ ಸಮೂಹಜೀವಿ, ಮನುಷ್ಯ ಗುಂಪಿನಲ್ಲಿ ಬದುಕಲು ಮೂಲ ಕಾರಣ ಭಯ , ಕತ್ತಲೆಯ ಭಯ, ಪ್ರಾಣಿಗಳ ಭಯ, ಮನುಷ್ಯನು ನಾಗರೀಕನಾದ ಮೇಲು ಅವನು ಸಂಘಜೀವಿ ಆಗಲು ಕಾರಣ ಮತ್ತದೇ ಭಯ, ಮನುಷ್ಯನ ಮೇಲಿನ ಭಯ, ಆ ಭಯ ಗಾಂಧಿಯನ್ನು ಕೂಡ ಕಾಡಿತ್ತು, ರಸ್ತೆಯಲ್ಲಿ ನಡೆದರೆ ಭಯ, ರೈಲಿನಲ್ಲಿ ಹೊರಟರೆ ಭಯ, ಆ ಭಯವನ್ನು ಗಾಂಧೀಜಿ ಹತ್ತಿಕ್ಕಬೇಕಿತ್ತು ಆಗಾಗಿ ಭಾರತೀಯರನ್ನು ಒಂದು ಮಾಡಲು ಶುರುಮಾಡಿದರು, ತಮ್ಮ ಹಕ್ಕುಗಳಿಗಾಗಿ ಒಂದು ಘನ ಬದುಕಿಗಾಗಿ ಹೋರಾಟಗಳನ್ನು ಶುರುಮಾಡಿದರು, ಪ್ರಯೋಗಕ್ಕೆ ಒಡ್ಡಿಕೊಂಡರು, ಗಾಂಧಿ ಒಬ್ಬ ನಾಯಕನಾಗಿ ಅರಳತೊಡಗಿದರು. ಒಂದು ಸಲ ಅವಮಾನವನ್ನು ಎದುರಿಸಿದ ಗಾಂಧಿ ಅದನ್ನು ಮೆಟ್ಟಿ ನಿಂತ, ಒಂದೊಂದಾಗಿ ಕಲಿತು ಬೆಳೆದ, ಆ ಮಧ್ಯದಲ್ಲೇ ಸಸ್ಯಾಹಾರ ಸೇವನೆ, ಸತ್ಯಾಗ್ರಹ, ಖಾದಿ, ಪರ್ಯಾಯ ವ್ಯವಸಾಯದ ಪ್ರಯೋಗಗಳು ನಡೆದು ಕೈ ಹಿಡಿದವು, ಅಲ್ಲಿನ ಭಾರತೀಯರಿಗೆ ನಿಧಾನವಾಗಿ ಹಕ್ಕುಗಳು, ಘನ ಬದುಕು ಸಿಗತೊಡಗಿತು, ಇಪ್ಪತ್ತು ವರ್ಷಗಳಲ್ಲಿ ಗಾಂಧಿಯ ರೂಪಾಂತರ ವ್ಯಕ್ತಿಯಿಂದ ವ್ಯಕ್ತಿತ್ವವಾಯ್ತು.


ಗಾಂಧಿಗೆ ಭಾರತದ ಕನವರಿಕೆ ಶುರುವಾಯ್ತು, ಗಾಂಧಿ ಭಾರತಕ್ಕೆ ಬಂದ 


ಹೋಗುವಾಗ ಕಾಫ್ಕ ಕತೆಯ ನಾಯಕನಂತೆ ತನ್ನ ನೆಲೆಗಾಗಿ ಅಸ್ಮಿತೆಗಾಗಿ ಒಳಗೊಳಗೇ ಒದ್ದಾಡುತ್ತಿದ್ದ ಗಾಂಧಿ ಮತ್ತೆ ಭಾರತಕ್ಕೆ ಬರುವಾಗ ಅಕ್ಷರಶಃ ನಾಯಕನಾಗಿದ್ದ. ಆದಿಯಿಂದಲೂ ಭಾರತೀಯರು ದಾಸರಾಗಿ ಬದುಕಿದವರು, ದಾಸರಿಗೊಬ್ಬ ನಾಯಕ ಬೇಕು, ರಾಜ ಬೇಕು, ಆ ನಾಯಕ ಆ ರಾಜ ಗಾಂಧಿಯಾಗಿದ್ದರು, ಗಾಂಧಿ ಬೇರೆ ನೆಲದಲ್ಲಿ ಮಾಡಿದ ಹೋರಾಟಗಳು ಚಳುವಳಿಗಳು ಪ್ರಯೋಗಗಳು ಇಲ್ಲಿನ ಎಲೈಟ್ ನಾಯಕರುಗಳಿಗೆ ತಲುಪಿತ್ತು. ಅವರೆಲ್ಲ ಗೊತ್ತು ಗುರಿಯಿಲ್ಲದ ನಾಯಕರಾಗಿದ್ದರು, ಅವರಿಗೆ ಗೊತ್ತು ಮತ್ತು ಗುರಿಯನ್ನು ಕೊಟ್ಟಿದ್ದು ಮತ್ತದೇ ಗಾಂಧಿ, ಗಾಂಧಿ ಭಾರತಕ್ಕೆ ಬಂದ ಕೂಡಲೇ ಅನಾಯಾಸವಾಗಿ ಕಾಲಬುಡಕ್ಕೆ ಬಂದ ನಾಯಕನ ಪಟ್ಟ ತೆಗೆದುಕೊಂಡು ಮೆರೆಯಬಹುದಿತ್ತು ಆದರೆ ಗಾಂಧಿ ಮೆರೆಯಲಿಲ್ಲ ಬದಲಾಗಿ ನಡೆದರು, ಇಡೀ ದೇಶ ನಡೆದರು, ನಡೆಯುತ್ತಲೆ ನಡೆಯುತ್ತಲೇ ಭಾರತದೊಳಗಿನ ಕಿತ್ತು ತಿನ್ನುವ ಬಡತನ, ಇಲ್ಲಿನ ಅರಾಜಕತೆ, ಅನಿಶ್ಚಿತತೆ, ಗುಳ್ಳೆನರಿಗಳು, ಎದ್ದು ಕಾಣುವ ಭ್ರಷ್ಟಾಚಾರ ಎಲ್ಲವು ನೋಡಿದರು, ಹಾಗೆ ನೋಡುತ್ತಲೇ ಅವರಿಗೆ ಅನಿಸಿದ್ದು ಭಾರತೀಯರಿಗೆ ಬರೀ ಸ್ವಾತಂತ್ರ್ಯ ಅಷ್ಟೇ ಅಲ್ಲ ಬೇಕಾಗಿರೋದು ಎಂದು. ತನ್ನ ಜನರನ್ನು ಅರಿಯಲು ಜನರ ಹತ್ತಿರವೇ ನಡೆದುಹೋಗಿದ್ದು ಕೆಲವೇ ಕೆಲವರು.


ಗಾಂಧಿ ತನ್ನ ಕೋಟು, ತಲೆಗೆ ಹಾಕುತ್ತಿದ್ದ ಟೋಪಿ, ಶ್ರೀಮಂತ ಗುಜರಾತಿ ಬಟ್ಟೆ ಎಸೆದದ್ದು ಮಧುರೈನಲ್ಲಿ, ರೈಲಿನಲ್ಲಿ ಹೋಗುವಾಗ. ತಮ್ಮ ದಿರಿಸು ಧರಿಸಿ ರೈಲಿನಲ್ಲಿ ಕೂತ ನಿಂತ ಪ್ರಯಾಣಿಕರಿಗೆ ‘ವಿದೇಶಿ ಬಟ್ಟೆ ಬಳಸಬೇಡಿ ಸ್ವದೇಶಿ ಬಟ್ಟೆ ಬಳಸಿ’ ಎಂದು ತಮ್ಮ ಖಾದಿ ಬಟ್ಟೆಯ ಬಗ್ಗೆ ಪ್ರಚಾರ ಮಾಡುವಾಗ ಅಲ್ಲೊಬ್ಬ 'ಸ್ವಾಮಿ ಬಟ್ಟೆ ವಿದೇಶದ್ದೋ ಸ್ವದೇಶದ್ದೋ ಅದಿರಲಿ ಹಾಕೊಳ್ಳಕ್ಕೆ ನಮ್ಮಲ್ಲಿ ಬಟ್ಟೆ ಇದ್ದರೆ ತಾನೇ? ಬಟ್ಟೆ ತೆಗೆದುಕೊಳ್ಳುವಷ್ಟು ಸಿರಿತನ ನಮಗೆಲ್ಲಿದೆ ಸ್ವಾಮಿ' ಎಂದುಬಿಟ್ಟ, ಗಾಂಧಿಗೆ ಒಮ್ಮೆಲೇ ಬಟ್ಟೆಯಿಲ್ಲದ, ಇದ್ದರೂ ಹರಿದ ಮಾಸಿದ ಬಟ್ಟೆಗಳೇ ಕಾಣಿಸಿದವು, ಬಡತನದ ದೇಹಗಳು, ಹೊಟ್ಟೆ ತುಂಬದ ಶರೀರಗಳು, ಅಸಹಾಯಕತೆಯ ಕಣ್ಣುಗಳು ಎದುರಾದವು. ಸುತ್ತಲೂ ಅಂತ ಜನರ ನಡುವೆ ಗಾಂಧೀಜಿ ಮೈ ತುಂಬಾ ಬಟ್ಟೆ ಹೊದ್ದುಕೊಂಡು ಬಟ್ಟೆಯ ಮಹತ್ವ ಹೇಳಲು ಬಂದಿದ್ದರು, ಅವರೆಲ್ಲರ ನಡುವೆ ಮೊದಲ ಸಾರಿ ಗಾಂಧೀಜಿ ಬಟ್ಟೆ ಇದ್ದು ಬೆತ್ತಲಾದ.


ಕೆಲವೇ ದಿನಗಳಲ್ಲಿ ತಿರುನೆಲ್ವೇಲಿಲಿ ಗಾಂಧೀಜಿ ಮೊದಲ ಬಾರಿ ಅಸಲು ಗಾಂಧೀಜಿಯಾಗಿ ಕಾಣಿಸಿಕೊಂಡರು, ಒಂದು ಸಾಧಾರಣ ಧೋತಿ, ಒಂದು ಶಾಲು ಅಷ್ಟೇ ! ಅವರು ಸತ್ತಾಗ ಕೂಡ ಅದೇ ದಿರಿಸಿನಲ್ಲಿದ್ದರು.  


**

ಸುಮ್ಮನಿರಲಾಗದೇ ರಾಜೇಶ ಫಕೀರ ಗಾಂಧಿಯ ಬಗ್ಗೆ ಓದಬಾರದಿತ್ತು ಅವನ ಸೋಮಾರಿತನಕ್ಕೆ, ಜೋತಾಡುವ ಹೊಟ್ಟೆಗೆ, ‘ಇಲ್ಲಿ ಯಾರು ಸರಿಯಿಲ್ಲ ಇಲ್ಲಿ ಏನು ಬದಲಾಗೋಲ್ಲ’ ಎಂದು ಜಗತ್ತನ್ನು ಬೈದಾಡಿಕೊಂಡು ಅವನ ದೌರ್ಬಲ್ಯಗಳನ್ನು ಮುಚ್ಚಿಡುವ ಹಿಪಾಕ್ರಸಿಗೆ ಗಾಂಧಿ ನಕ್ಕಂತೆ ಭಾಸವಾಗುತ್ತಿತ್ತು, ಒಂದು ವಾರ ಚಡಪಡಿಸಿ ಹೋದ. ಬಡ್ಡಿಮಗ ಒಬ್ಬ ಮನುಷ್ಯ ಹಾಗೆ ಹೇಗೆ ಬದುಕಲು ಸಾಧ್ಯ? ಬದುಕನ್ನೇ ಪ್ರಯೋಗ ಮಾಡಿಕೊಳ್ಳಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಜೊತೆಗೆ ಸಿಟ್ಟು ಕೂಡ ಬರುತ್ತಿತ್ತು ಆ ಸಿಟ್ಟು ಅವನ ಮೇಲಿನದೇ ಆಗುತ್ತಿತ್ತು. ಇಡೀ ದಿನ ಗಾಂಧಿ ಅವನ ಹಿಂದೆ ನಿಂತಂತೆ ಅವನ ಪಕ್ಕ ನಡೆದಂತೆ ಅವನ ಪಕ್ಕ ಕೂತಂತೆ ಅವನನ್ನೇ ಹಿಂಬಾಲಿಸುವಂತೆ ಭ್ರಮೆಯಾಗುತ್ತಿತ್ತು, ಅವನು ಸಮಯಕ್ಕನುಸಾರವಾಗಿ ಸುಳ್ಳು ಕಟ್ಟಿದಾಗ ಹೊಟ್ಟೆ ಬಿರಿಯುವಂತೆ ತಿಂದು ನಿದ್ರಿಸುವಾಗ, ಸಿಟ್ಟಾದಾಗ, ಜಗತ್ತಿನ ಬಗ್ಗೆ ಕೋಪಗೊಂಡಾಗ ಅವನ ಬಗ್ಗೆ ಕೀಳರಿಮೆ ಉಂಟಾದಾಗ ಗಾಂಧಿ ನಕ್ಕಂತೆ ಭಾಸವಾಗುತ್ತಿತ್ತು, ಒಂದು ರಾತ್ರಿ ಮಲಗಿದವನು ಮಂಚದ ಪಕ್ಕದ ಚೇರಿನಲ್ಲಿ ಗಾಂಧಿ ಅವನ್ನನ್ನೇ ನೋಡುತ್ತಿದ್ದ ಹಾಗೆ ಭಯವಾಗಿ ರೂಮಿನ ಲೈಟ್ಸ್ ಬೆಳಗಿಕೊಂಡು ನಿದ್ರೆ ಬರದೇ ಒದ್ದಾಡಿಹೋದ, 'ಅಲ್ಲೋ ಗಾಂಧಿ ಯಾಕೋ ನನ್ನ ಹಿಂಬಾಲಿಸುತ್ತಿ ಅಂತ ಬೈಯಬೇಕು ಅನಿಸುತ್ತಿತ್ತು'


ಆಫೀಸಲ್ಲಿ ಸುಮ್ಮನೆ ಕೂರಲು ಕೂಡ ಆಗುತ್ತಿರಲಿಲ್ಲ ಕೈಯಲ್ಲಿ ಕೋಲು ಹಿಡಿದು ಧೋತಿ ಅರ್ಧ ಮೇಲುಭಾಗದ ಮೇಲೆ ಹರಡುತ್ತಿರುವ ಶಾಲು ಮುಖದಲ್ಲೊಂದು ನಗು ಹೊತ್ತುಕೊಂಡು ಶುದ್ಧ ಅಲೆಮಾರಿಯಂತೆ ಹುಟ್ಟು ಫಕೀರನಂತೆ ಯಾರು ಬರಲಿ ಬಿಡಲಿ ನಾನು ನಡೆದೇ ತೀರುವೆ ಎಂದು ನಡೆಯುತ್ತಿದ್ದ ಗಾಂಧಿ ನೆನಪಾಗುತ್ತಿದ್ದ, ನಾನೆಲ್ಲೋ ದೂರದಲ್ಲಿ ಕೂತಿದ್ದೇನೆ ಎದ್ದು ನಡೆಯಬೇಕು ಅನಿಸಲು ಶುರುವಾಯ್ತು ಹಾಗೆ ಅನಿಸಿದ ಕೂಡಲೇ ಸ್ಟೇಷನ್ ರೌಂಡ್ಸ್ ಎಂದು ಎದ್ದುಬಿಡುತ್ತಿದ್ದ ಹುಚ್ಚು ಬಂದವನಂತೆ ಇಡೀ ಸ್ಟೇಷನ್ ಎರಡು ಮೂರು ರೌಂಡ್ ಹೊಡೆದುಬಿಡುತ್ತಿದ್ದ, ಅದರ ಉಪಯೋಗ ನಿಧಾನವಾಗಿ ಗೊತ್ತಾಯ್ತು, ಸ್ಟೇಷನ್ ನ ಪ್ರತಿ ಕೆಲಸಗಾರರು ಪರಿಚಯವಾದರು, ಅವರ ಕಷ್ಟಗಳು ಇಷ್ಟಗಳು ಗೊತ್ತಾದವು, ಏನಿಲ್ಲವೆಂದರೂ ಅವನಿಗೂ ಅವರಿಗೂ ಒಂದು ವಿಶ್ವಾಸದ ಮಾನವ ಪ್ರೀತಿಯ ನಗುವಂತೂ ವಿನಿಮಯವಾಗುತ್ತಿತ್ತು, ದಿನನ ಓಡಾಡುವ ಪ್ರಯಾಣಿಕರು ಸಹ ಒಂದು ಸ್ನೇಹದ ನಗು ಚೆಲ್ಲಿ ಹೋಗುತ್ತಿದ್ದರು, ಇಷ್ಟು ವರ್ಷ ಅವನು ಹಾಗೆ ಎದ್ದು ಓಡಾಡಿದವನೇ ಅಲ್ಲ.


ಜಾಸ್ತಿ ತಿನ್ನಲು ಭಯ ಗಾಂಧಿ ಕೋಲು ಹಿಡಿದು ಬಂದಾರು ಎಂದು. ಆಫೀಸಿನಲ್ಲಿ ನಡೆಯುತ್ತಿದ್ದ ಕ್ಷುಲ್ಲಕ ಜಾತಿ ರಾಜಕಾರಣಕ್ಕೆ ಬ್ಯಾಚಿನ ರಾಜಕಾರಣಕ್ಕೆ ಬೆನ್ನು ತೋರಿಸಲು ಶುರು ಮಾಡಿದ, ಮಾಡಲು ಕೂತರೆ ದಂಡಿ ಕೆಲಸವಿರುವಾಗ ಅನವಶ್ಯಕ ವಿಷಯಗಳಿಗೆ ಕಿವಿ ಕೊಡುವುದು ಸರಿಯಲ್ಲ ಅನಿಸಿತು, ಇಲ್ಲೇ ಗೂಟ ಹೊಡೆದುಕೊಂಡು ಇರುವ ಬದಲು ಸುತ್ತಾಡಬೇಕು ಅನಿಸಿತು ಭಾರತವನ್ನ ಸುತ್ತಲೂ ಶುರುಮಾಡಿದ. ರಾಜ್ಯ ರಾಜ್ಯಗಳ ಮ್ಯಾಪನ್ನು ಹಿಡಿದು ವರ್ಷಕ್ಕೆ ಎರಡು ಸಲ ಹದಿನೈದು ದಿನ ರಜೆ ಹಾಕಿ ಒಂದೊಂದೇ ರಾಜ್ಯವನ್ನ ಸುತ್ತಾಡತೊಡಗಿದ.


ಮೂರು ಹೊತ್ತು ಊಟ ನಿಂತು ಎರಡು ಹೊತ್ತು ಊಟ ಆಯ್ತು, ದಿನ ನಡೆಯೋದು ಜಾಸ್ತಿಯಾಯ್ತು, ಅನ್ಯಾಯವಾದಾಗ ಸುಮ್ಮನೆ ಅಧಿಕಾರಿಗಳ ಆಫೀಸು ಮುಂದೆ ನಿಂತುಬಿಡುತ್ತಿದ್ದ, ಕೆಲಸ ಮುಗಿಸಿಕೊಂಡು ಅವರ ಮೇಲೆ ಸಿಟ್ಟು ಕಾರುತ್ತಿರಲಿಲ್ಲ ಏನು ಬೇಡಿಕೊಳ್ಳುತ್ತಿರಲಿಲ್ಲ ಆದ ಅನ್ಯಾಯ ಅವರೇ ಮಾಡಿರುವಾಗ ಅವರು ಮಾಡಿದ ಅನ್ಯಾಯವನ್ನ ಬಿಡಿಸಿ ಹೇಳುವ ಅವಶ್ಯ ಏನಿದೆ, ಸುಮ್ಮನೆ ನಿಲ್ಲುತ್ತಿದ್ದ. ಅವರು ಹೋಗುವವರೆಗೂ ‘ಇವನೇನ್ನ್ರಿ ಹುಚ್ಚ ನನ್ಮಗ’ ಅಂತ ಬೈದು ಓಡಾಡುತ್ತಿದ್ದರು.


**

ಅದೇ ಸ್ಟೇಷನಿನ್ನಲ್ಲಿ ಮೂರು ವರ್ಷಗಳು ಕಳೆದುಹೋಯ್ತು, ನಡೆದು ನಡೆದು ಯಾವತ್ತಿಗೂ ನಾನು ನಿಲ್ಲೆನು ಅನಿಸಿಬಿಟ್ಟಿತು, ಬರೋಬ್ಬರಿ ಇಪ್ಪತ್ತು ಕೆ.ಜಿ.ಗಳು ನಡೆದೇ ಕಳೆದುಕೊಂಡಿದ್ದ, ನೇರ ಕುಳಿತು ಆಫೀಸಿನ ಯಾವುದೋ ಮೇಲ್ ಮಾಡುವಾಗ ಮತ್ತೊಂದು ಆಫೀಸ್ ಆರ್ಡರ್ ಬಂತು, ತೆರೆದು ನೋಡಿದರೆ ಮತ್ತೊಂದು ಟ್ರಾನ್ಸ್ಫರ್. ‘ಮರುದಿನವವೇ ಹೊಸ ಸ್ಟೇಷನ್ ಗೆ ರಿಪೋರ್ಟ್ ಮಾಡಿಕೊಳ್ಳಬೇಕು’ ಎಂದು. 


ಕೂಡಲೇ ಮೇಲಧಿಕಾರಿಗೆ ಕಾಲ್ ಮಾಡಿದ, ‘ಹಲೋ’ ಎಂದಿದ್ದಷ್ಟೇ ಆಕಡೆಯಿಂದ 'ನೋಡಿ ರಾಜೇಶ್ ನಿಮ್ ಬಗ್ಗೆ ಒಳ್ಳೆ ಮಾತು ನನ್ನ ಕಿವಿಗೂ ಬಿದ್ದಿದೆ, ನನಗೂ ನಿಮ್ಮನ್ನ ಟಚ್ ಮಾಡೋಕ್ಕೆ ಇಷ್ಟ ಇಲ್ಲ ಆದರೆ ಮ್ಯಾನೇಜ್ಮೆಂಟ್ ನಮ್ ಮಾತು ಕೇಳ್ಬೇಕಲ್ಲ, ಟ್ರಾನ್ಸ್ಫರ್ ಮಾಡಿ ಅಂದ್ರು ಮಾಡುದ್ವಿ, ಡೋಂಟ್ ವರಿ ಒಂದು ಸಲ ಹೋಗಿ ರಿಪೋರ್ಟ್ ಮಾಡ್ಕೊಳ್ಳಿ, ಆಮೇಲೆ ಮ್ಯೂಚುವಲ್ ತಗೊಂಡ್ರೆ ಆಯ್ತು, ಪಕ್ಕ ಮಾಡಿಕೊಡ್ತೀನಿ’ ಎಂದು ಬೆಣ್ಣೆ ಹಚ್ಚುತ್ತಿದ್ದರು, ರಾಜೇಶನಿಗೆ ನಗು ಬರುತ್ತಿತ್ತು, ಮುಂಚೆ ಆದರೆ ಸಿಟ್ಟು ಬಂದು ಬೈಯುತ್ತಿದ್ದೆನೋ ಇಲ್ಲ ಅಸಹಾಯಕನಾಗಿ ಬೇಡಿಕೊಳ್ಳುತ್ತಿದ್ದೆನೋ ಆದರೆ ಈ ಕ್ಷಣಕ್ಕೆ ಎರಡು ಮಾಡಬೇಕು ಅನಿಸಲಿಲ್ಲ. ಇಲ್ಲಿನ ನನ್ನ ಕರ್ತವ್ಯ ಮುಗಿತು ಅಷ್ಟೇ ಮತ್ತೊಂದು ಹೊಸ ಸ್ಟೇಷನ್ ಹೊಸ ಪಯಣ ಅಷ್ಟೇ ಅವನ ವೃತ್ತಿಪಯಣಕ್ಕೆ ಈ ಸ್ಟೇಷನ್ ಒಂದು ಸ್ಟಾಪ್ ಅನಿಸಿತು, ಅವನು 'ಸಾರ್ ಒಂದು ರಿಕ್ವೆಸ್ಟ್' ಎಂದ, ಅವರು ಮತ್ತೆ ಏನೋ ಹೇಳಲು ಶುರುಮಾಡಿದರು, ಅವನು 'ಸರ್ ಅದೇನು ಇಲ್ಲ ನೀವು ಎಲ್ಲಿ ಹಾಕುದ್ರು ನನ್ನ ಕೆಲಸ ನಾನು ಮಾಡ್ತೀನಿ, ನನ್ನ ರಿಕ್ವೆಸ್ಟ್ ಈ ಸ್ಟೇಷನ್ ಲಿ ಇರೋ ದೊಡ್ಡ ಗಾಂಧೀಜಿ ಫೋಟೋವನ್ನ ನನ್ನ ಜೊತೆ ತಗೊಂಡು ಹೋಗಬಹುದಾ?' ಎಂದು ಕೇಳಿದ, ಆ ಕಡೆಯಿಂದ '....ಗಾಂಧೀಜಿ ಫೋಟೋನ? ದೊಡ್ಡದ? ಎಲ್ಲಿ ಆ ಸ್ಟೇಷನಲ್ಲಿ ಇದ್ದೀಯ?..." ಮಾತು ಮೌನವಾಗಿ ಹೋಯ್ತು ಆ ಕಡೆಯಿಂದ. 


ರಾಜೇಶ್ ಅವರ ಅನುಮತಿಗಾಗಿ ಕಾಯುತ್ತ ಕೂತ. 

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT