ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ಎಸ್‌.ಅನಿಲ್‌ ಕುಮಾರ್‌ ಅವರ ಕಥೆ: ಸುರಂಗ

Published 22 ಏಪ್ರಿಲ್ 2023, 20:28 IST
Last Updated 22 ಏಪ್ರಿಲ್ 2023, 20:28 IST
ಅಕ್ಷರ ಗಾತ್ರ

ಸುರಂಗದೊಳಗೆ ರೈಲು ನುಗ್ಗುವ ವೇಳೆಯಲ್ಲಿ, ಅಂಧಕಾರದ ಗೋಡೆಯೊಂದು ಸದ್ದಿಲ್ಲದೆ ನಿಲ್ಲುತ್ತಿದೆ, ನಂತರ ತನ್ನಷ್ಟಕ್ಕೆ ತಾನು ದೂರಕ್ಕೆ ಹೋಗುತ್ತದೆ, ಬೇರೇನೂ ಒಳಗೆ ಬರುವುದಿಲ್ಲ ಎಂದು ಅನ್ನಿಸುತ್ತದೆ. ಎ.ಸಿ.ಯಿಂದಾಗಿ ಬೋಗಿ ತುಂಬಾ ತಣ್ಣಗಿದೆ. ರೈಲಿನಲ್ಲಿ ಇಷ್ಟು ಚಳಿಯೊಂದಿಗೆ ಮೊದಲ ಬಾರಿಗೆ ನಾನು ಪ್ರವಾಸ ಮಾಡುತ್ತಿದ್ದೇನೆ.

ಮುಂದೆ ಕೂತ ಯುವಕ ಪ್ರಾರಂಭದಿಂದಲೂ ನನ್ನೆಡೆಗೆ ಓರೆಗಣ್ಣಿನಿಂದ ನೋಡಿ ಮುಗುಳ್ನಗತ್ತಾ ನನ್ನ ಪರಿಚಯ ಮಾಡಿಕೊಳ್ಳಲು ಯತ್ನಿಸುತ್ತಿದ್ದ. ಅವನಲ್ಲಿ ಒಂದು ರೀತಿಯ ಕುತೂಹಲವೂ ಕಂಡು ಬರುತ್ತಿತ್ತು. ಯೌವನದ ಅನೇಕ ಚಿಹ್ನೆಗಳು ಅವನಲ್ಲಿ ಕಂಡು ಬರುತ್ತಿದ್ದವು. ನಿತ್ಯ ಶೇವ್ ಮಾಡಿಕೊಳ್ಳುತ್ತಿದ್ದರಿಂದಾಗಿ ಮೀಸೆ ಮತ್ತು ಗಡ್ಡದ ಜಾಗದಲ್ಲಿ ತೆಳು ಹಸಿರು ಬಣ್ಣ ಹಚ್ಚಿದಂಥ ಮುಖ, ಕಿವಿಗಳಲ್ಲಿ ವಾಕ್‌ಮನ್, ಮಡಿಲಿನಲ್ಲಿ ದಪ್ಪನೆಯ ಕಾದಂಬರಿ ಇಟ್ಟುಕೊಂಡಿದ್ದ ಅವನ ಗಮನ ಸದಾ ಲ್ಯಾಪ್‌ಟಾಪ್-ಬ್ಯಾಗ್ ಕಡೆಗೇ ಹರಿಯುತ್ತಿತ್ತು. ಬರಮುಡಾ, ಟೀ-ಶರ್ಟ್ ಮೇಲೆ ದೊಡ್ಡ ಅಕ್ಷರಗಳಲ್ಲಿ ‘ಐ ಆ್ಯಮ್ ರೆಡಿ’ ಎಂದು ಬರೆಯಲಾಗಿತ್ತು. ತನ್ನ ಅಡೀಡಾಸ್ ಕಂಪನಿಯ ಶೂಗಳನ್ನು ಕಳಚಿ ಕೆಳಗಿಟ್ಟಿದ್ದ. ಆಗ ಅವನು ಗಮನವಿಟ್ಟು ತನ್ನ ಕಿವಿಗಳಲ್ಲಿದ್ದ ವಾಕ್‌ಮೆನ್ ಮತ್ತು ಮಡಿಲಲ್ಲಿದ್ದ ದಪ್ಪ ಕಾದಂಬರಿಯನ್ನು ಪಕ್ಕಕ್ಕೆ ಸರಿಸಿದ, ನಂತರ ನನ್ನೆಡೆಗೆ ಹೊರಳಿ ಒಳ್ಳೆಯ ಇಂಗ್ಲಿಷ್‌ನಲ್ಲಿ ಕೇಳಿದ, ‘ಕ್ಷಮಿಸಿ, ನೀವೆಲ್ಲಿಗೆ ಹೋಗ್ತಿದ್ದೀರಿ?’

ನಾನು ಅವನಿಗೆ, ‘ನಾನು ದಿಲ್ಲಿಯ ಒಂದು ರಾಷ್ಟ್ರೀಯ ಸೆಮಿನಾರ್‌ನಲ್ಲಿ ಭಾಗವಹಿಸಿ ಮರಳಿ ಕೇರಳದ ದಕ್ಷಿಣ ಮೂಲೆಯಲ್ಲಿರುವ ನನ್ನ ಹಳ್ಳಿಗೆ ಹೋಗುತ್ತಿದ್ದೇನೆ’ ಎಂದೆ.

‘ಸಾರ್, ನಿಮ್ಮನ್ನು ನೋಡಿ, ನೀವು ಗೋವಾದವರು ಎಂದು ಭಾವಿಸಿದೆ. ಇಟ್ ಇಸ್ ಸೊ ಡಿಸೆಪ್ಟೀವ್.’ ಅವನು ಸ್ವಲ್ಪ ಮಲೆಯಾಳಂ ಭಾಷೆ ಸೇರಿಸಿ ಹೇಳಿದಾಗ ನನಗೆ ಆಶ್ಚರ್ಯವಾಯಿತು. ಅವನ ರೂಪ ನೋಡಿ, ಅವನು ಮಲೆಯಾಳಿ ಎಂಬುದನ್ನು ಅಂದಾಜು ಮಾಡದಾದೆ. ಹೀಗಾಗಿ ಅವನೂ ನನ್ನನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ರೂಪ-ಸೌಂದರ್ಯಕ್ಕೆ ಸಂಬಂಧಿಸಿದ ಹಳೆಯ ವಿಚಾರಗಳನ್ನು ಕೈಬಿಡದಿದ್ದರಿಂದಾಗಿ ಹೀಗಾಗಿರಬಹುದು! ಒಟ್ಟಿನಲ್ಲಿ ಎಲ್ಲವೂ ಸರಿಯಾಯಿತು.

‘ನನ್ನ ಹೆಸರು ರಾಜೇಶ್ ಪೀಟರ್. ನಾನು ಶಂಕರ ಜಾತಿಗೆ ಸೇರಿದವನು...ಸಾರ್, ನೀವು ನೋಡೋದಕ್ಕೆ ನನ್ನ ಚಿಕ್ಕಪ್ಪ ಅಂದರೆ ನನ್ನ ತಂದೆಯವರ ತಮ್ಮನಂತಿದ್ದೀರ. ಅವರದ್ದು ವಯಸ್ಸಿಗಿಂತ ಹೆಚ್ಚು ಬಿಳುಪಾದ ತಲೆಗೂದಲು, ದೊಡ್ಡ ಹೊಟ್ಟೆ, ದೊಡ್ಡ-ದೊಡ್ಡ ಕಣ್ಣುಗಳು, ಯಾರಿಗೂ ಮೊದಲ ಬಾರಿಗೆ ಹತ್ತಿರ ಬಿಟ್ಟುಕೊಳ್ಳದ ಗಾಂಭೀರ್ಯ–ಇವುಗಳಿಂದಾಗಿ ನೀವು ನನ್ನ ಚಿಕ್ಕಪ್ಪನಂತೆ ಕಂಡಿರಿ. ಅದಕ್ಕೇ ನಾನು ನಿಮ್ಮ ಹತ್ರ ಮಾತನಾಡೋದಕ್ಕೆ ಇಷ್ಟಪಟ್ಟೆ. ಹೀ ಇಸ್ ಸೊ ಹ್ಯೂಮನ್. ಸಾರ್, ನೀವೇನು ಮಾಡ್ತಿದ್ದೀರ?’

‘ಮೈ ಡಿಯರ್ ಯಂಗ್ ಮ್ಯಾನ್! ನಾನೊಂದು ಯೂನಿವರ್ಸಿಟಿಯಲ್ಲಿ ನೌಕರಿ ಮಾಡ್ತಿದ್ದೀನಿ. ಇದಕ್ಕೂ ಹೆಚ್ಚಿಗೆ ಏನಿಲ್ಲ.’


‘ಮೈ ಗುಡ್‌ನೆಸ್! ನನ್ನ ಚಿಕ್ಕಪ್ಪ ಸಹ ಯೂನಿವರ್ಸಿಟಿಯ ಪ್ರೊಫೆಸರ್. ಸಾರ್, ನೀವು ಜೀವಾಜಿ ಯೂನಿವರ್ಸಿಟಿಯ ಹೆಸರನ್ನು ಕೇಳಿದ್ದೀರ?’

‘ಹೂಂ, ಕೇಳಿದ್ದೇನೆ. ನನ್ನ ಹತ್ರ ಭಾರತದ ಎಲ್ಲಾ ಯೂನಿವರ್ಸಿಟಿಗಳ ಹೆಸರಿರುವ ಒಂದು ಬ್ಲೂ ಡೈರಿಯಿದೆ. ಅದನ್ನು ಭಾರತೀಯ ವಿಶ್ವವಿದ್ಯಾಲಯದ ಸಂಘ ಹಂಚಿತ್ತು. ನಿನಗೆ ಗೊತ್ತ?’

‘ಓ.ಕೆ....ಓಕೆ...ಸಾರ್, ನೀವು ಪ್ರಯಾಣ ಮಾಡುವಾಗ ಇಷ್ಟು ಯಾಂತ್ರಿಕರಾಗ್ತೀರ ಅಂತ ನಾನು ಯೋಚಿಸಿರಲಿಲ್ಲ. ಕ್ಷಮಿಸಿ, ನೀವು ನನ್ನ ಈ ಕ್ಯಾಜುವೆಲ್ ಡ್ರೆಸ್ಸನ್ನು ವ್ಯರ್ಥ ಎಂದು ಸಾಬೀತು ಮಾಡಿದಿರಿ. ಸಾರ್, ಹೇಳಿ ನೋಡೋಣ, ನಾನು ಯಾರು ಅಂತ? ಜೆಸ್ಟ್ ಗೆಸ್!’
ನನ್ನ ಬಳಿ ಇದಕ್ಕಿಂತ ಹೆಚ್ಚು ಯೋಚಿಸಲು ಬೇರೇನೂ ಇರಲಿಲ್ಲ. ಹೀಗಾಗಿ ಹೇಳಿದೆ, ‘ನೀವು ಕಡಿಮೆ ವಯಸ್ಸಿನವರಿರಬೇಕು, ನೀವು ಒಂದು ದೊಡ್ಡ ಕಂಪನಿಯಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿ ಇರಬೇಕು...ಅಥವಾ ನಿಮ್ಮ ಪ್ರತಿಭೆಗೆ ಅನುಗುಣವಾಗಿ ಮ್ಯಾನೇಜರ್ ಆಗಿರಬೇಕು...ಅಲ್ವಾ?’

‘ಯೂ ಆರ್ ಗ್ರೇಟ್ ಸಾರ್! ನನ್ನ ಶರೀರ ನೋಡಿ ಇಷ್ಟು ಸರಿಯಾಗಿ ಹೇಳೋದು...ಆದ್ರೆ...ಐ ವಾಸ್...ಇದ್ದೆ...ಈಗಿಲ್ಲ.’ ರಾಜೇಶ್ ಪೀಟರ್ ದುಃಖದ ಮುಖ ಮಾಡಿಕೊಂಡು ಕೂತ. ಒಂದು ಕ್ಷಣ ಅವನು ತನ್ನಲ್ಲಿ ತಾನು ಕರಗಿ ಹೋದ. ನನ್ನಿಂದ ದೂರಕ್ಕೆ ಸರಿದ. ವಾಕ್‌ಮನ್ ಕಿವಿಗಳಿಗೆ ತೂರಿಸಿಕೊಂಡು ದಪ್ಪನೆಯ ಕಾದಂಬರಿಯನ್ನು ತಾನು ಈಗಾಗಲೇ ಓದಿ ಮಡಚಿದ್ದ ಪುಟವನ್ನು ತೆರೆದು ಮತ್ತೆ ಓದಲು ಪ್ರಾರಂಭಿಸಿ ನನಗೆ ಅಪರಿಚಿತನಾದ.

ನಾನು ಯುವಕರಿಂದಾಗಿ ಹೀಗೆ ನಿರಾಶೆಗೊಳ್ಳುವುದು ಇದು ಮೊದಲ ಸಲವೇನಲ್ಲ. ಇದು ನನ್ನಲ್ಲಿರುವ ದೌರ್ಬಲ್ಯದಿಂದಲೂ ಆಗಬಹುದು! ಆದರೂ...ಈ ಯುವಕರು ಯಾಕೆ ಹೀಗಾಗುತ್ತಾರೆ? ಅವನು ತನ್ನ ಜಾಗದಲ್ಲಿದ್ದುಕೊಂಡು, ನಾನು ನನ್ನ ಜಾಗದಲ್ಲಿದ್ದುಕೊಂಡು, ನಮ್ಮ-ನಮ್ಮ ಕಾಲುಗಳನ್ನು ಚಾಚಿಕೊಳ್ಳುವಾಗ ಅಥವಾ ನಮಗೇ ಅರಿವಿಲ್ಲದಂತೆಯೂ, ಒಬ್ಬರಿಗೊಬ್ಬರು ಸ್ಪರ್ಶಿಸದೆ ಈ ಪ್ರಯಾಣವನ್ನು ಮುಗಿಸಬಹುದಿತ್ತು.
ಕಿಡಕಿ ಗಾಜುಗಳ ಹೊರ ಭಾಗದಲ್ಲಿ ನೀರಿನ ತೇವಾಂಶ ಜಮಾಯಿಸಿತ್ತು. ಹೊರಗೆ ದೂರದವರೆಗೆ ಚಾಚಿದ ಹಳದಿ ಹೂವುಗಳ ಸಾಸಿವೆ ಹೊಲಗಳು ಹಿಂದಕ್ಕೆ ಸರಿದು ಹೋಗುತ್ತಿದ್ದವು. ನಾನು ಈ ದೃಶ್ಯವನ್ನು ತುಂಬಾ ಹೊತ್ತು ನೋಡಿದೆ. ನಂತರ ನನ್ನ ಕಣ್ಣುಗಳನ್ನು ಮುಚ್ಚಿಕೊಂಡೆ, ಭೋಗಿಯೊಳಗೆ ಅಗತ್ಯಕ್ಕಿಂತ ಹೆಚ್ಚು ಚಳಿಯಿತ್ತು, ಇದರ ಪ್ರಭಾವದಿಂದ ಸ್ವಲ್ಪ ಹೊತ್ತು ನಿದ್ದೆಗೆ ಶರಣಾದೆ.

ನನಗೆಚ್ಚರವಾದಾಗಲೂ ಅಲ್ಲಿ ರಾಜೇಶ್ ಪೀಟರ್ ಮಾತ್ರ ಜೊತೆಗಿದ್ದ. ಉಳಿದ ಬರ್ತ್‌ಗಳ ಹಕ್ಕುದಾರರು ರೈಲು ಹತ್ತುವಾಗಲೇ ತಮ್ಮ-ತಮ್ಮ ಸೂಟ್ ಕೇಸ್ ಮತ್ತು ಲಗ್ಗೇಜುಗಳನ್ನು ಸೀಟುಗಳ ಅಡಿಯಲ್ಲಿ ಮತ್ತು ಮೇಲ್ಭಾಗದಲ್ಲಿಟ್ಟು ಕಣ್ಮರೆಯಾಗಿದ್ದರು. ಒಂದೆರಡು ಗಿಟಾರ್‌ಗಳು ಮತ್ತು ವಾದ್ಯ-ಯಂತ್ರಗಳು ಮೇಲೆ ಕಾಣಿಸುತ್ತಿದ್ದವು.

ರಾಜೇಶ್ ಪೀಟರ್ ತನ್ನ ಭಾಗದ ಕಿಡಕಿಯ ಪರದೆಯನ್ನು ಎಳೆದು, ಪ್ರಯಾಣದ ನಡುವೆ ಹೊರ ನೋಡುವುದಿಲ್ಲ ಎಂಬ ಪ್ರತಿಜ್ಞೆಯೊಂದಿಗೆ, ಕಿವಿಗಳಿಗೆ ಸಂಗೀತವನ್ನು ಉಣಬಡಿಸುತ್ತಾ, ಕೈಯಲ್ಲಿ ದಪ್ಪ ಕಾದಂಬರಿಯನ್ನು ಹಿಡಿದು ಕೂತಿದ್ದಾನೆ. ಅವನಿಗೆ ಸದ್ಯ ನಾನು ಕಾಣುತ್ತಿರಲಿಲ್ಲ. ನನಗೆ ಆಲಸ್ಯ ಕಾಡಿತು. ಆಟದ ಬಯಲಿನಲ್ಲಿ ನನ್ನ ಮತ್ತು ಬೇರೆ ಗುಂಪಿನ ಕ್ರೀಡಾಪಟುಗಳಿಲ್ಲದೆ, ಒಂಟಿಯಾಗಿ ನಿಂತ ಫಾರ್‌ವರ್ಡ್ನಂತಾಗಿತ್ತು ನನ್ನ ಪರಿಸ್ಥಿತಿ.

‘ಸಾರಿ ರಾಜೇಶ್ !...ಮಾತಿನ ಮಧ್ಯೆ ನಾನು ನಿದ್ರೆ ಮಾಡಿದ್ದೆನೇ?’ ನಾನು ಪ್ರಶ್ನಿಸಿದೆ.

‘“ಓಹ್, ಇಲ್ಲ ಸಾರ್!’ ಅವನು ಮತ್ತೆ ಕಿವಿ ಮತ್ತು ಕೈಗಳಿಂದ ತನ್ನ ಸಾಧನಗಳನ್ನು ಸರಿಸುತ್ತಾ ರಾಜೇಶ್ ನಕ್ಕ, ‘ಬಹಶಃ, ನಾನು ನಿದ್ರೆಗೆ ಜಾರಿದ್ದೆ, ನನ್ನ ಮೂಡ್ ಬೇಗ ಔಟ್ ಆಗಿತ್ತು.’

ನಾನೆದ್ದು ಕೂತು ರಾಜೇಶನನ್ನು ನೋಡಿದೆ. ಅವನು ಕಾದಂಬರಿಯನ್ನು ಅರ್ಧದಷ್ಟು ಓದಿದ್ದ . ಓದುವದರಲ್ಲಿ ಅವನಿಗಿದ್ದ ವೇಗ, ಮನುಷ್ಯನಿಗೆ ಸಾಧ್ಯವಾದ ವೇಗಕ್ಕಿಂತಲೂ ಅನೇಕ ಪಟ್ಟು ಹೆಚ್ಚಿತ್ತು. ಈ ರೀತಿಯಲ್ಲಿ ಓದುವುದರಿಂದ ಯಾವ ಉಪಯೋಗವಿರಲಿಲ್ಲ. ನನ್ನ ಯೋಚನೆಗೆ ಭಂಗ ತರಲು ಯತ್ನಿಸುತ್ತಾ ರಾಜೇಶ್ ಹೇಳಿದ, ‘ನಾನು ಒಂದು ಕಾಲದಲ್ಲಿ ದೋಸ್ತೋವ್‌ಸ್ಕಿಯನ್ನು ಸಂಪೂರ್ಣವಾಗಿ ಓದಲು ಕಾತುರನಾಗಿದ್ದೆ. ಆಮೇಲೆ ಬಶೀರ್ ಮತ್ತು ಮಾಧವಕುಟ್ಟಿ, ಆ ಹಳೆ ಕಾಲ...’

ಅವನ ಹಳೆ ಕಾಲದ ಬಗ್ಗೆ ಕೇಳಿ ನನಗೆ ನಗು ಬಂತು. ಸುಮಾರು ಮುವತ್ತು ವರ್ಷದ ಅವನ ಹಳೆ ಕಾಲ! ಆದರೆ ಅವನು ನನ್ನ ಈ ಯೋಚನೆಯನ್ನೂ ಗ್ರಹಿಸಿದ.

‘ಹೌದು ಸಾರ್! ಇಪ್ಪತ್ತು ವರ್ಷ ಅಂದರೆ ಹಳೆಯದೇ ಆಯ್ತಲ್ಲ? ನನ್ನ ಎಂಟನೇ ವಯಸ್ಸಿಗೆ ನಾನು ದೋಸ್ತೋವ್‌ಸ್ಕಿಯ ಪಾವಂಗಲ್ ಓದಿದೆ. ಹ್ಯೂಗೋನ ಪಾವಂಗಲ್ ಅಲ್ಲ. ಮೂರ್ಛೆ ರೋಗದೊಂದಿಗೆ ಬದುಕುವ, ಕಠಿಣ ಚಳಿಗಾಲದಲ್ಲೂ ಒಂದು ಜೊತೆ ಚಪ್ಪಲಿ ಕೊಳ್ಳಲಾರದಂಥ ಪರಿಸ್ಥಿತಿಯಲ್ಲಿ ಅವನು ಅವಮಾನಕ್ಕೊಳಗಾಗುತ್ತಾನೆ. ಅದೆಲ್ಲಾ ಹಳೆಯ ಕಾಲದಲ್ಲಿ... ಈಗ ನಾನು ಹಾಗೆ ಓದಿ ಚಿಂತೆಗೊಳಗಾಗಲ್ಲ. ನಿಮಗೆ ಗೊತ್ತಿದೆ, ನೀವು ಮತ್ತು ಜೀವಾಜಿ ಯೂನಿವರ್ಸಿಟಿಯ ನನ್ನ ಚಿಕ್ಕಪ್ಪ ಪಡೆಯುವ ಸಂಬಳಕ್ಕೆ ಮೂರು ಪಟ್ಟು ಹೆಚ್ಚು ವೇತನವನ್ನು ನಾನು ಪಡೆಯುತ್ತಿದ್ದೇನೆ, ಅ್ಯಂಡ್ ವಿತ್ ಪರ್ಕ್ಸ್. ಒಂದು ವೇಳೆ ಮುಂದಿನ ಶ್ರೇಣಿಗೆ ಹೋಗಿದ್ದರೆ, ವ್ಹಾಹ್! ಎಲ್ಲಾ ಸವಲತ್ತುಗಳೊಂದಿಗೆ ಬಂಗ್ಲೆ ಮತ್ತು ನೌಕರರು ಸಿಗುತ್ತಿದ್ದರು. ಕಂಪನಿಯವರು ಕಾರನ್ನೂ ಕೊಡುತ್ತಿದ್ದರು. ಒಟ್ಟಿನಲ್ಲಿ ಹೇಳಬೇಕೆಂದರೆ ಒಂದು ಹೆವಿಲಿ ಪೇಯಿಡ್ ಹೆಲ್! ಸಾರ್, ನಿಮಗೆ ಗೊತ್ತಿರಬಹುದು! ಬೌದ್ಧ-ದರ್ಶನದಲ್ಲಿ ಎಂಟು ನರಕಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಅ್ಯಂಡ್ ಐ ಡೋಂಟ್ ವಾಂಟ್ ಟೂ ಲೂಸ್ ಇಟ್! ಬ್ರದರ್ ಕಾರಮಾಜೋವ್, ಪಾತ್ತುಮ್ಮಾಳ ಕುರಿ ಮತ್ತು ಕ್ರೈಮ್ ಅ್ಯಂಡ್ ಪನಿಶ್‌ಮೆಂಟ್ ಮುಂತಾದವುಗಳನ್ನು ಓದಿದೆ, ಮಲೆಯಾಳಂ ಪತ್ರಿಕೆಗಳನ್ನು ಅಂಚೆಯಲ್ಲಿ ತರಿಸಿಕೊಂಡೆ, ನನ್ನನ್ನು ನಾನು ಅಂದಂದಿಗೆ ತಜ್ಞನನ್ನಾಗಿಸಿಕೊಂಡು, ಸಂಪಾದಕರಿಗೆ ಪತ್ರಗಳನ್ನು ಬರೆದು, ಚರ್ಚೆಗಳಲ್ಲಿ ಭಾಗವಹಿಸಿದೆ....ಇದನ್ನೆಲ್ಲಾ ನಾನು ಕಳೆದುಕೊಳ್ಳಲಾರೆ.’

ರಾಜೇಶ್ ಪೀಟರ್ ಎದುಸಿರುಬಿಡುತ್ತಿದ್ದಾನೆ ಎಂದು ಅನ್ನಿಸಿ ನಾನು ಹೇಳಿದೆ, ‘ರಾಜೇಶ್, ನೀನು ನಿನ್ನ ದೌರ್ಬಲ್ಯಗಳನ್ನು ನೋಡಿಕೊಂಡು ಉತ್ತೇಜಿತನಾಗುತ್ತಿರುವೆ, ಸೆಂಟಿಮೆAಟಲ್ ಆಗುತ್ತಿರುವೆ.’

‘ಪ್ರತಿಯೊಂದು ಹೆಜ್ಜೆ ಮುನ್ನೆಡೆದಾಗ ಕಾಲ ನಿಶ್ಶಬ್ದದಲ್ಲಿ ಕೊನೆಗೊಳ್ಳುವುದು ನಿಮಗೆ ತಿಳಿದಿದೆ...ಐ ಶುಡ್ ಫೀಲ್ ಬ್ಲಾಂಕ್ ಬಿಹೈಂಡ್. ನನಗೆ, ಹಿಂದಾಗುತ್ತಿರುವ ಅನುಭವ ಎಂದೂ ಆಗಬಾರದು...ನಿಮಗೆ ಗೊತ್ತಾ?’

‘ಮತ್ತೆ ಅದು ಹೇಗೆ ಮೂಡ್ ಔಟ್ ಆಗ್ತೀಯ?’ ನಾನು ಕುತೂಹಲದಿಂದ ಕೇಳಿದೆ. ‘ಚಿಂತೆ ಮತ್ತು ವ್ಯಗ್ರತೆಯಿಂದ ಪಾರಾಗಿ ಸುಖದ ಜೀವನ ಸಾಗಿಸಲು ನೀನು ಅದೆಷ್ಟು ಪುಸ್ತಕಗಳನ್ನು ಪಠ್ಯಕ್ರಮದ ಭಾಗವನ್ನಾಗಿ ಮಾಡಿಕೊಂಡು, ಇನ್ನಿತರ ವಿಧಾನದಲ್ಲಿ ಓದಿರಬಹುದು?’

‘ಹೌ ಟು ಸ್ಟಾಪ್ ವರೀಯಿಂಗ್ ಅ್ಯಂಡ್ ಸ್ಟಾರ್ಟ್ ಲಿವಿಂಗ್‌ನಿಂದ ಯಶಸ್ಸಿನೆಡೆಗೆ ಮತ್ತು ಮೂರು ಮಾರ್ಗಗಳಿಂದ ನೂರಾ ಒಂದು ಮಾರ್ಗಗಳ ಬಗ್ಗೆ ಹೇಳುವ ಪುಸ್ತಕಗಳು ಮತ್ತು ಲೇಖನಗಳ ಬಗ್ಗೆ ನಾನು ಓದಿದ್ದೇನೆ. ಇವೆಲ್ಲಾ ನಮ್ಮಂತಹವರಿಗೆ ಮಾತ್ರ ಇವೆಯೇ?’

ರಾಜೇಶ್ ಪೀಟರ್ ಕೂಡಲೇ ಏನೂ ಹೇಳಲಿಲ್ಲ. ನಾನು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿ ಅವನಿಗೆ ಚಿಂತೆಗೀಡುಮಾಡುತ್ತಿದ್ದೇನೆ, ನನ್ನ ನಂತರದ ಸಮಯವನ್ನು ಪೂರ್ಣ ಪ್ರಶ್ನಿಸಿ ಅವಮಾನ ಪಡಿಸುವ ಯೋಚನೆ ಒಳ್ಳೆಯದಲ್ಲ ಎಂದು ಅನ್ನಿಸಿತು.

ಆಗಲೇ ಪೆಂಟ್ರಿ ಕಾಫಿ ಬಂತು.

‘ಸೆಲ್ವ ಮುತ್ತು, ಇಲ್ಲೂ ಎರಡು ಕಾಫಿ ಕೊಡು’ ಎಂದೆ. ಆದರೆ ರಾಜೇಶ್ ತಕ್ಷಣ ತಡೆದ, ‘ನನಗೆ ಬೇಡ ಸಾರ್.’

“ನನ್ನ ಖುಷಿಗಾಗಿ ತಗೋ ರಾಜೇಶ್!”

“ಬೇಡ ಸಾರ್. ಪ್ಲೀಸ್, ಹೆಚ್ಚು ಒತ್ತಾಯ ಮಾಡ್ಬೇಡಿ. ನೋ ಕಂಪಲ್ಶನ್ಸ್. ಮತ್ತೆ ಯಾರಾದರೂ ವಡೆ ತಂದರೆ, “ಸಾರ್, ನೀವು ವಡೆ ತಿನ್ತೀರ?” ಅಂತ ಕೇಳಬೇಕಾಗುತ್ತೆ..!”

ನಾನು ಸ್ವಲ್ಪ ಗಾಬರಿಗೊಂಡೆ. ಸೆಲ್ವ ಮುತ್ತು ಗ್ಲಾಸ್‌ನಿಂದ ಕಾಫಿ ತೆಗೆದು ಕೊಟ್ಟು ಕೇಳಿದ, “ಸಾರ್, ಮಧ್ಯಾಹ್ನಕ್ಕೆ ಊಟ ಬೇಕಾ?”
ರಾಜೇಶ್ ಕೇಳಿದ, “ಸಾರ್, ಇವರ ಹೆಸರೆಲ್ಲಾ ನಿಮಗೆ ಹೇಗೆ ಗೊತ್ತು?”

“ಇವರೆಲ್ಲಾ ನನ್ನ ಅಧೀನದಲ್ಲಿರುವ ನಿರರ್ಥಕ ನೌಕರರಂತೂ ಅಲ್ಲ, ರಾಜೇಶ್. ನಾನು ಮನುಷ್ಯನಲ್ವ! ಪರಿಚಯ ಮತ್ತು ಗೆಳತನಕ್ಕಾಗಿ ಇಷ್ಟೇ ಸಾಕು!” ಎಂದೆ.

“ಓ.ಕೆ....ಓ.ಕೆ...ನೀವು ಮತ್ತೆ ನನ್ನ ಕೊರತೆ ಬಗ್ಗೆ ಸಂಕೇತ ಕೊಡುತ್ತಿದ್ದೀರಿ. ಲಾರ್ಡ್ ಪಾದರಿಯ ಮತ್ತು ಆಧಿಕಾರ ಶ್ರೇಣಿಯ ಬಗ್ಗೆ ...ಅರ್ಥವಾಗ್ತಿದೆ ಸಾರ್!”

ನಾನು ಕಾಫಿ ಕುಡಿಯುವ ಮಧ್ಯೆ ರಾಜೇಶ್ ಬ್ಯಾಗಿನಿಂದ ತನ್ನ ಲ್ಯಾಪ್‌ಟಾಪ್ ಹೊರತೆಗೆದು ಏನೋ ಮಾಡಲು ಪ್ರಾರಂಭಿಸಿದ್ದ. ಬಹುಶಃ ಈ-ಮೇಲ್ ಓದಿ ಅದಕ್ಕೆ ಉತ್ತರಿಸುತ್ತಿದ್ದ. ವೆಬ್ ಸೈಟಿನಲ್ಲಿ ಹೊಸ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರಬೇಕು. ಪ್ರಯಾಣದ ನಡುವೆ ನೆಟ್‌ವರ್ಕ್ ಕನೆಕ್ಶನ್ ಸಿಗುವುದು ಕಷ್ಟವಾಗುತ್ತಿರಬೇಕು. ಆ ಬಗ್ಗೆ ತಲೆಹಾಕಲು ನನಗೆ ಅನುಮತಿಯಿಲ್ಲ.

ಆಗ ರಾಜೇಶ್ ಮತ್ತೆ ಲ್ಯಾಪ್‌ಟ್ಯಾಪ್‌ನಿಂದ ತನ್ನ ಗಮನವನ್ನು ಹೊರಗೆ ಹರಿಸಿ ಹೇಳಿದ, “ಕ್ಷಮಿಸಿ ಸಾರ್! ನಿಮಗೆ ನಾನು ಕೆರಿಯರಿಸ್ಟ್ ಅಂತ ಅನ್ನಿಸುತ್ತಿರಬೇಕು. ಈ ಶಬ್ದಕ್ಕೆ ಸಮಾನಾರ್ಥವಾದ ಶಬ್ದ ಮಲೆಯಾಳಂನಲ್ಲಿದೆಯಾ, ಸಾರ್?”

“ಬಳಸಲು ಮಾತ್ರ ‘ಪ್ರಸಿದ್ಧ’ ಅಂತ ಹೇಳಬಹುದು. ನಾನೇ ಅದಕ್ಕೆ ಸಮಾನಾರ್ಥ ಶಬ್ದವನ್ನು ಕಂಡುಹಿಡಿದಿದ್ದೆ.”

“ಅದು ಒಳ್ಳೇ ಶಬ್ದ ತಾನೇ?” ರಾಜೇಶ್ ಕೇಳಿದ.

ನಾನು ದೃಢಪಡಿಸುತ್ತಾ ಹೇಳಿದೆ, “ ಒಂದು ಶಬ್ದಕ್ಕೆ ತನ್ನದೇ ಆದ ಒಳಿತು-ಕೆಡುಕುಗಳಿಲ್ಲ. ಈಎಮ್‌ಎಸ್‌ನಂತೆ ತೊದಲುವುದಷ್ಟೇ. ಪ್ರಯೋಗಿಸುವಾಗ ಮಾತ್ರ ಸ್ಪಷ್ಟವಾಗಿ ತಿಳಿಯುತ್ತೆ.”

ರಾಜೇಶ್ ಲ್ಯಾಪ್‌ಟ್ಯಾಪನ್ನು ಒಂದು ಮಗುವಿನಂತೆ ತನ್ನ ಮಡಿಲಿನಲ್ಲಿಟ್ಟುಕೊಂಡು ಮುದ್ದು ಮಾಡುತ್ತಿದ್ದ. ಮುಚ್ಚಿಕೊಳ್ಳುತ್ತಿದ್ದ ತನ್ನ ಕಣ್ಣುಗಳಿಂದ ಏನೋ ಯೋಚಿಸುತ್ತಿದ್ದ. ಮಳೆಗಾಲದಲ್ಲಿ ಮಿಂಚಿನಂತೆ ಮಿನುಗುವ ರಾಜೇಶ್ ಪೀಟರ್‌ನನ್ನು ಹೀಗೆ ನೋಡಿ ನನ್ನ ಕುತೂಹಲ ಹೆಚ್ಚುತ್ತಿತ್ತು. ನಾನು ಹೊರಳಿ ನೇರವಾಗಿ ಕೂರಬೇಕೆಂದಿದ್ದೆ, ಆಗಲೇ ಅವನು ಉತ್ಸಾಹದಿಂದ ಹೇಳಿದ, “ಸನ್ ಐವತ್ತೇಳರ ಮಂತ್ರಿಮಂಡಳ. ಅದು ಅತ್ಯುತ್ತಮವಾಗಿತ್ತು. ಅಲ್ವಾ ಸಾರ್? ನಾನು ಬಹುಶಃ ಅದರ ಮೂರನೇ ಪೀಳಿಗೆಯ ಕಸ್ಟಮರ್. ಬಟ್ ವಿ ಫೀಲ್ ಟೋಟಲಿ ಔಟ್ ಸೈಡೆಡ್!”

“ಆ ಹೆಸರಿನ ಒಂದು ಕಾದಂಬರಿಯಿದೆ...” ನಾನು ಯಾವುದೇ ಭೇದಭಾವನೆಯಿಲ್ಲದೆ ಹೇಳಿದಾಗ ರಾಜೇಶ್ ಪೀಟರ್ ತುಂಬಾ ಖುಷಿಯಿಂದ ಹೇಳಿದ, “ಕಾಫ್ಕಾ ಅಥವಾ ಕಮು –ಇವರಲ್ಲಿ ಯಾರು ಅಂತ ನನಗೆ ನೆನಪಿಲ್ಲ. ಯಾರ ತಾಯಿ ಅಥವಾ ಅಜ್ಜಿಯು ಸತ್ತಿದ್ದರು ಎಂಬುದೂ ನೆನಪಿಲ್ಲ. ಅವರಲ್ಲಿ ಒಬ್ಬರು ತಾವು ಚಲಾಯಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದಾಗಿ ಸತ್ತಿದ್ದರು ಎಂಬುದೂ ನೆನಪಿಲ್ಲ. ಸಾರ್, ಒಂದು ರೀತಿಯ ಮಾನಸಿಕ ರೋಗವಾಗಿತ್ತು, ಆದರೆ ನೀವು ಪ್ರೀತಿಯಿಂದ ಕಾಫಿ ಕುಡಿಸುವುದಾಗಿ ಹೇಳಿದ್ದಿರಿ, ಅದನ್ನು ಬೇಡವೆಂದಿದ್ದೆ. ಆದ್ರೆ ಯಾಕೆ ಅಂತ ನೀವು ಕೇಳಲಿಲ್ಲ.”

“ಸರಿ, ಹೇಳು.”

“ನೀವು ಮತ್ತೆ ನನ್ನನ್ನು ಅವಮಾನಿಸಿದಿರಿ. ಓ.ಕೆ. ಪರ‍್ವಾಗಿಲ್ಲ. ನಾನು ಹೇಳ್ತೀನಿ. ನಾನು ಕಾಫಿಯನ್ನು ಕುಡಿಯಲಾರೆ, ಸಾರ್! ಯಾಕೆಂದರೆ ಕಾಫಿ ಹೊಟ್ಟೆಗೆ ಹೋದರೆ ಇಡೀ ವಿಷಯ ಗಲಿಬಿಲಿಗೊಳ್ಳುತ್ತೆ. ಹಾಲಿದೆಯಾ?” ಅವನು ಸಾಫ್ಟ್ ಡ್ರಿಂಕ್‌ನ ಒಂದೂವರೆ ಲೀಟರ್ ಬಾಟಲಿ ತೋರಿಸಿ ಹೇಳಿದ, “ರೈಲು ಗ್ವಾಲಿಯರ್‌ಗೆ ಹೋಗುವುದಕ್ಕೂ ಮೊದಲು ನಾನು ನನ್ನ ಸ್ನೇಹಿತನಿಗೆ ಎಸ್.ಎಮ್.ಎಸ್. ಮಾಡಿದ್ದೆ. ರೋಮಿಂಗ್ ಇದ್ದರೆ ಅವನ ಮತ್ತು ನನ್ನ ಹಣ ಉಳಿಯತ್ತಲ್ಲ! ಅವನೇ ತಂದುಕೊಟ್ಟಿದ್ದ. ನಿಮಗೆ ಗೊತ್ತಿಲ್ಲದೆ ಸೇರಿಸಿದೆ. ಕಿತ್ತಲೆ ಬಣ್ಣಕ್ಕೆ ಸೇರಿಸಿದರೆ ಹೊರಗಿನವರಿಗೆ ತಿಳಿಯಲ್ಲ. ಇದು ಸಂಪೂರ್ಣ ಹೆಂಡವೇ. ಮೊದಲಾಗಿದ್ದರೆ ಬಿಲ್ ಮೇಲೆ ಸಹಿ ಮಾಡಿದ್ದರೆ ಸಾಕಾಗುತ್ತಿತ್ತು. ಕಂಪನಿ ಕೊಡ್ತಿತ್ತು. ಆತಿಥ್ಯ, ಮನರಂಜನೆ ಭತ್ತೆ, ದೇಸೀ ಶರಾಬು, ಸೆಕ್ಸ್–ಎಲ್ಲಾ ಈಡೇರಿಸುವುದು. ಸೆಕ್ಸ್ಗೆ ಒಂದು ‘ನಾಮಕಾವಾಸ್ತೆ’ ಬಿಲ್ ಬೇಕು, ಅಷ್ಟೆ. ನಮ್ಮ ಉತ್ಪನ್ನಗಳನ್ನು ಮಾರುವಲ್ಲಿ ಸಹಾಯ ಮಾಡುವ ಯಾರಿಗೇ ಆದರೂ ಮನರಂಜನೆಯ ಅನುಕೂಲಗಳನ್ನು ಒದಗಿಸುತ್ತೇವೆ. ಸಾರ್, ನಿಮಗೆ ಬೇಸರವಾಗುತ್ತಿಲ್ಲ ತಾನೇ? ಸಾರಿ, ನಾನಿದನ್ನು ನಿಮಗೆ ಕೊಡಲಾರೆ.”

“ಪರ‍್ವಾಗಿಲ್ಲ. ಹಾಗಂತ ನಾನು ಎಲ್ಲಿ ಬೇಕೋ ಅಲ್ಲಿ ಮದ್ಯ ಕುಡಿಯಲ್ಲ.”

“ಓ.ಕೆ.! ನೀವು ನನ್ನನ್ನು ತಮಾಶೆ ಮಾಡ್ತಿಲ್ಲ ತಾನೇ? ಓ.ಕೆ...ಈ ಕಡೆ ಇಲ್ಲದ ಯಾರಿಗೂ ಏನೂ ಆಗಬಹುದಲ್ಲ, ಸಾರ್! ನನ್ನ ಕಾಲುಗಳು, ಮೈ ಫೂಟ್, ಇದುವರೆಗೆ ಇದನ್ನು ಜಗತ್ತಿನಲ್ಲಿ ಎಲ್ಲೂ ಇಟ್ಟಿಲ್ಲ. ಕಾಲುಗಳು ತುಂಡಾದಂತಿರುವ ನನ್ನ ಈ ಶೂಗಳನ್ನು ನೋಡ್ತಿಲ್ವ?”
“ರಾಜೇಶ್, ನಿನ್ನ ಇಂಥ ಮಾತುಗಳನ್ನು ಕೇಳಿದ ಮೇಲೆ ನಾನೊಂದು ವಿಷಯ ಹೇಳ್ಲಾ? ವ್ಯಾಪಾರ-ವ್ಯವಸ್ಥೆಯ ಕ್ಷೇತ್ರದಲ್ಲಿ ಅಂದ್ರೆ ಪೂರ್ಣವಾಗಿ ವ್ಯಾಪಾರ-ಕ್ಷೇತ್ರದಲ್ಲಿ ತೊಡಗಿದ ವ್ಯಕ್ತಿ ಹೀಗೆ ವೈಯಕ್ತಿಕವಾಗಿ ತನ್ನ ವಿಕಾರಗಳಿಗೆ ಉತ್ತೇಜಿತನಾಗುವುದು...ಸಾರಿ, ನನ್ನನ್ನು ಹೇಗೋ ಮಾಡಿ ಖುಷಿಪಡಿಸಲಾಗುತ್ತಿದೆ.”

“ವ್ಯಾಪಾರದಲ್ಲಿ ಯಾವುದೇ ಮನೋವಿಕಾರಗಳಿಗೆ ಸ್ಥಾನವಿಲ್ಲ. ಓ.ಕೆ.! ಆದ್ರೆ ನಾನು ನಿಮಗೆ ಒಂದು ಗಾಬರಿ ಹುಟ್ಟಿಸುವ ಪ್ರಶ್ನೆಯನ್ನು ಕೇಳ್ಲಾ? ನಿಮ್ಮ ಯೂನಿವರ್ಸಿಟಿಯಲ್ಲಿ ಭ್ರಷ್ಟಾಚಾರ ಇದೆಯಾ? ಐ ಮೀನ್ ಕರಪ್ಶನ್ . ನಮಗೆ ಬೇಕಾದವರ ಪರವಾಗಿರುವುದು , ಇನ್ನೊಬ್ಬರ ಕೇಡನ್ನು ಬಯಸುವುದು, ಆರ್ಥಿಕ ಅವ್ಯವಸ್ಥೆ...?”

“ಯಾಕೆ?” ಖಂಡಿತ ಗಾಬರಿಪಡಿಸುವ ಪ್ರಶ್ನೆ . ಹೌದು ಅಥವಾ ಇಲ್ಲ ಎಂದು ಹೇಳುವುದಕ್ಕೆ ಬದಲು ಹೀಗೆ ಪ್ರಶ್ನಿಸಿದ.

“ನಾನು ಹೇಳ್ತೀನಿ. ಸರ್ಕಾರಿ ಸಂಬಳ ಪಡೆಯುವವರ ಬಗ್ಗೆ ನನ್ನ ಮನಸ್ಸಿನಲ್ಲಿ ಜಿಗುಪ್ಸೆಯಿದೆ. ಸಾರ್, ನಾನು ಎಮ್.ಬಿ.ಎ.ಗಾಗಿ ದಾಖಲು ಪಡೆಯಲು ಒಂದು ಪ್ರಮಾಣ-ಪತ್ರಕ್ಕಾಗಿ ಅಂದರೆ ಆದಾಯ ಪ್ರಮಾಣ ಪತ್ರಕ್ಕಾಗಿ ಒಂದು ತಿಂಗಳು ಒಂದೇ ಸಮನೆ ಗ್ರಾಮ-ಪಂಚಾಯಿತಿಯ ಕಾರ್ಯಾಲಯಕ್ಕೆ ಅಲೆದೆ. ಕಡೆಗೆ ಗ್ರಾಮದ ಅಧಿಕಾರಿ ಅಂದರೆ ‘ಹೆಚ್ಚು ದೋಚುವವ’ ಅಂತ ಜನ ಹೇಳ್ತಾರಲ್ಲ, ಅವನ ಮನೆಯ ಬೀದಿಯಲ್ಲಿ ನಿಂತು ಅವನು ಮನೆಗೆ ಹೋಗುವಾಗ ಅವನಿಗೆ ಕಪಾಳಮೋಕ್ಷ ಮಾಡಿದೆ, ಆಗ ನನಗೆ ಮರುದಿನವೇ ಪ್ರಮಾಣ-ಪತ್ರ ಸಿಕ್ಕಿತ್ತು. ನಿಮಗೆ ಅರ್ಥ ಆಗ್ತಿದೆಯಲ್ಲಾ, ಸಾರ್?”

“ರಾಜೇಶ್, ನೀನೇ ಹೇಳು...!”

“ಹೇಳ್ತೀನಿ...ನೀವು ಒಪ್ಪಿಗೆ ಕೊಟ್ಟರೆ ಹೇಳ್ತೀನಿ...!”

“ಇದಕ್ಕೆ ನನ್ನ ಒಪ್ಪಿಗೆ ಯಾಕೆ...?”

“ಓ.ಕೆ...ಐ ಮೀನ್ ಅಂದ್ರೆ ಕಳೆದ ಆರು ವರ್ಷಗಳಿಂದ ನನ್ನ ಕಠಿಣ ಶ್ರಮದಿಂದ ಸ್ಥಾಪಿಸಿದ ಕಂಪನಿ ಮುಚ್ಚಿ ಹೋಗ್ತಿದೆ; ಇನ್ನೊಂದು ದೊಡ್ಡ ಕಂಪನಿ ಅದನ್ನು ನುಂಗುವುದರಲ್ಲಿದೆ. ಈ ವಿಷಯದ ಬಗ್ಗೆ ಪ್ರಶ್ನೆ ಹಾಕಿದಾಗ ನನಗೆ ಹೊರಗಿನ ರಸ್ತೆಯನ್ನು ತೋರಿಸಲಾಯಿತು...ಇದನ್ನೆಲ್ಲಾ ನಾನು ಹೇಳಲೇ ಬೇಕಾಗಿದೆ.”

ಅರ್ಧಕ್ಕಿಂತ ಹೆಚ್ಚು ಖಾಲಿಯಾದ ಸಾಫ್ಟ್ ಡ್ರಿಂಕ್‌ನ ಬಾಟಲಿಯನ್ನು ರಾಜೇಶ್ ತನ್ನ ಮಡಿಲಿನಲ್ಲಿಟ್ಟುಕೊಂಡ, ಆಗ ನನಗೆ ಈ ಬಾಟಲಿ ಹೆಚ್ಚು ದೊಡ್ಡದು ಎಂದು ಅನ್ನಿಸಿತು. ಆ ಬಾಟಲಿಯ ಹಿಂದೆ ರಾಜೇಶ್ ಅಡಗಿ ಕೂರುತ್ತಿದ್ದಾನೆ. ಈಗ ರಾಜೇಶ್ ಲ್ಯಾಪ್‌ಟಾಪ್ ಬಗ್ಗೆ ತನ್ನ ಗಮನವನ್ನು ಕೇಂದ್ರೀಕರಿಸುತ್ತಿದ್ದಾನೆ. ಒಳಗೆ-ಹೊರಗೆ ಕತ್ತಲು ಕವಿಯುತ್ತಿದೆ, ದೀಪ ಹಚ್ಚಲು ಮರೆತಿದ್ದರಿಂದ ಲ್ಯಾಪ್‌ಟ್ಯಾಪಿನ ನೀಲಿ ಬೆಳಕು ಸ್ವಲ್ಪ ಹೆಚ್ಚೇ ಕಾಡಿಸುತ್ತಿತ್ತು. ನಾನು ಎದ್ದು ನಿಂತು ಲೈಟ್ ಆನ್ ಮಾಡಿದೆ. ಬೆಳದಿಂಗಳಿನಂಥೆ ಹೊಳೆಯುವ ಟ್ಯೂಬ್‌ಲೈಟ್‌ಗಳು. ನಾನು ರಾಜೇಶನಿಗೆ, ‘ರಾಜೇಶ್’ ಎಂದು ಕರೆದೆ, ಆಗಲೇ ರೈಲು ಒಂದು ಸುರಂಗದೊಳಗೆ ನುಗ್ಗಿತು. ಹೀಗಾದಾಗ, ಇನ್ನೊಂದು ದಿಕ್ಕಿನಲ್ಲಿ ಸುರಂಗದ ಮಾರ್ಗ ತೆರೆದಿದೆಯೋ, ಇಲ್ಲವೋ ಎಂಬ ಅನುಮಾನ ಕಾಡುತ್ತದೆ! ನಂತರ ಮನುಷ್ಯ ಕೂಗುವ ಎಲ್ಲಾ ರೀತಿಯ ಧ್ವನಿಗಳು, ಸುರಂಗದ ಗೋಡೆಗಳಿಗೆ ಭೋಗಿಗಳ ಟಿನ್ ಡಿಕ್ಕಿ ಹೊಡೆದು ಚೆಲ್ಲಾಪಿಲ್ಲಿಯಾಗುವ ಸದ್ದು-ಎಲ್ಲವೂ ಒಳಗೇ ಹತ್ತಿಕ್ಕುತ್ತಾ ಸಾಗಿತು. ಶೌಚಾಲಯದ ಹೊರಗಿನಿಂದ ನಾನು ಕೂಡಲೇ ಒಳಗೆ ನುಗ್ಗಿ ಬಂದೆ.

ಬರ್ಥ್ಗಳ ಹಕ್ಕುದಾರರಾದ ಯುವಕರು, ಎಡ-ಬಲ ಭಾಗಗಳಿಂದ ರಾತ್ರಿಯ ಊಟ ಮುಗಿಸಿ ನಿದ್ರಿಸಿಲು ಬಂದರು. ಆಗ ಲ್ಯಾಪ್‌ಟಾಪ್‌ನ ಬೆಳಕು ಆರಿತು, ಖಾಲಿಯಾದ ಸಾಫ್ಟ್ ಡ್ರಿಂಕ್ ಬಾಟಲಿಯ ಹಿಂದಿದ್ದ ರಾಜೇಶ್ ಎದುರಾಗಿದ್ದ. ಶರೀರಕ್ಕಂಟಿದ ಗೆದ್ದಲು ಮಣ್ಣು ಅಥವಾ ಕಸವನ್ನು ಕೊಡವಿಕೊಂಡ ಅವನು ಏಳುತ್ತಾ-ಬೀಳುತ್ತಾ, ಬೇರೊಂದು ಧ್ವನಿಯೊಂದಿಗೆ ಕಿರುಚಿದ, “ಸಾರ್ ...ನೀವೆಲ್ಲಿದ್ದೀರ?”

ನಿದ್ರಿಸಲು ಹವಣಿಸುತ್ತಿದ್ದವರೊಂದಿಗೆ ನಾನೂ ಗಾಬರಿಗೊಂಡೆ. ನನ್ನ ಈ ಆಘಾತವನ್ನು ಸ್ವಲ್ಪ ಹದ್ದು ಬಸ್ತಿಗೆ ತಂದುಕೊಂಡು ಅವನಿಗೆ ಹೇಳಿದೆ, “ ರಾಜೇಶ್, ಪ್ಲೀಸ್...ನಾನಿಲ್ಲೇ ಇದ್ದೇನೆ.”

ಅವನು ತನ್ನ ಕಳೆದ ಹೋದ ದೃಷ್ಟಿಯಿಂದ ಹುಡುಕುತ್ತಾ ಹೇಳಿದ, “ಸಾರ್, ನಾನು ಹೆದರಿದೆ! ರೀಸಸ್ ಮಾಡುವಾಗ ರೈಲು ಸುರಂಗದೊಳಗೆ ಹೋಯ್ತು, ಆಗ ನಾನು ಭೂಕಂಪವಾದಂಥ ಶಬ್ದ ಕೇಳಿದೆ . ನೀವು ಅದರಲ್ಲಿ ಸಿಲುಕಿದಿರ?...ನಾನು ಮುಂದಿನ ಪ್ರಯಾಣವನ್ನು ಒಂಟಿಯಾಗಿ ಮಾಡಬೇಕೆ?...ರಿಯಲಿ, ನಾನು ತುಂಬಾ ಹೆದರಿದ್ದೆ, ಹೀಗಾಗಿ ಗಾಬರಿಗೊಂಡಿದ್ದೆ.”

“ರಾಜೇಶ್! ಮುಂದಿನ ಪ್ರಶ್ನೆಗಳ ಉತ್ತರಗಳೂ ಆಬ್ಜೆಕ್ಟೀವ್ ಆಗಿರಬೇಕು. ಇಟ್ಸ್ ಗೆಟಿಂಗ್ ಲೇಟ್. ತುಂಬಾ ತಡವಾಗಿದೆ...!”

“ಸಾರಿ ಸಾರ್!” ಅವನು ಸ್ವಲ್ಪ ಕಳೆಗುಂದಿ, ಮುಗುಳ್ನಗುತ್ತಾ ಹೇಳಿದ, “ಇಂದಿನ ಕೊನೆಯ ಪ್ರಶ್ನೆಗೆ ಒಂದು ಪ್ಯಾರಾಗ್ರಾಫ್‌ನಲ್ಲಿ ಉತ್ತರಿಸಲು ಒಪ್ಪಿಗೆ ಕೊಡಿ.”

“ಸಾರ್, ಇವನು ನಿಮ್ಮ ಮಗನಾ?” ಪಕ್ಕದ ಬರ್ತ್‌ನವನು ಕೇಳಿದ.

ನಿಮ್ಮಪ್ಪ ನಿನ್ನನ್ನು ಸಾರ್ ಅಂತ ಕರೀತಾನಾ? ಎಂದು ಅವನಿಗೆ ನಾನು ಕೇಳಲಿಲ್ಲ.

“ದಯವಿಟ್ಟು ಮಲಗಿ” ಎಂದು ಹೇಳಿ ಅವನು ಮಲಗಲು ಆಗ್ರಹಿಸಿದೆ.

“ಈ ಗಲಾಟೆ ಮಧ್ಯೆ ನಾವು ಹೇಗೆ ನಿದ್ರಿಸೋದು?”

ನಾನು ಬೆರಳಿನಿಂದ ಸಂಜ್ಞೆ ಮಾಡಿ ನಗುತ್ತಾ ಹೇಳಿದೆ, “ನಿದ್ರೆ ಮಾಡದಿದ್ದರೆ.ಶಾಂತ ಗೊಳಿಸುವ ಗುಂಡು ಹೊಡೀತೀನಿ.”

ಆಮೇಲೆ ಯಾವ ಪ್ರಶ್ನೆಯೂ ಬರಲಿಲ್ಲ. ಮೊದಲ ಸಂಗತಿ ಬಗ್ಗೆ ತಿಳಿದಿರಲಿಲ್ಲ, ಆದರೂ ರಾಜೇಶ್ ಹೇಳಿದ ಪ್ಯಾರಾಗ್ರಾಫ್ ಬಗ್ಗೆ ಉತ್ತರ ಕೇಳಲು ಅವರಿಗೂ ಕುತೂಹಲವಿತ್ತು.

ರಾಜೇಶ್ ಒಮ್ಮೆ ಎದುಸಿರು ಬಿಟ್ಟು, ಮಡಿಲಿನಲ್ಲಿದ್ದ ಲ್ಯಾಪ್‌ಟಾಪನ್ನು ಮತ್ತೂ ಹತ್ತಿರಕ್ಕೆ ಹಿಡಿದುಕೊಂಡು ಯಾರನ್ನೂ ನೋಡದೆ, ಯಾರೆಡೆಗೂ ಗಮನಕೊಡದೆ ಹೇಳಿದ, “ಹಿ ವಾಸ್ ಎ ಸ್ಪೈ..ಅವನೊಬ್ಬ ಗೂಢಚಾರನಾಗಿದ್ದ. ನಮ್ಮ ಅತಿ ಹೊಸಬ ಮ್ಯಾನೇಜರ್...ಡಾ.ಪಿ.ಕೆ.ಆರ್. ಸಿಂಹ ಅವರು ಕೇವಲ ಆರು ವರ್ಷಗಳಲ್ಲಿ ನಮ್ಮ ಕಂಪನಿಯನ್ನು ದೇಶದ ದೊಡ್ಡ ಕಂಪನಿಯಾಗಿ ಪರಿವರ್ತಿಸಿದ್ದರು. ಅವರು ಕೇಂದ್ರಿಯ ಸರ್ಕಾರದ ಸಲಹಾಕಾರರಾಗಿ ಹೋದಾಗ ಇವರನ್ನು ಹುಡುಕಿದ್ದರು. ಹ್ಯೂಮನ್ ರಿಸೋರ್ಸ್ ಅಂದರೆ ಮಾನವ ಸಂಪನ್ಮೂಲ ಸಲಹಾಕಾರರ ಬಗ್ಗೆ ನಿಮಗೇನು ಗೊತ್ತು, ಸಾರ್? ಅಂಥ ಒಂದು ಸಲಹಾಕಾರ ಸಂಸ್ಥೆಯಿಂದ ಉನ್ನತ ಮಟ್ಟದ ಸಲಹೆ ಪಡೆದು ಡೌನ್ ಲೋಡ್ ಮಾಡಿಕೊಂಡಿದ್ದೆ. ಅದೊಂದು ವಿಶಾಲ ನೆಟ್‌ವರ್ಕ್, ಸಾರ್! ಸರ್ಕಾರದ ಸಂಬಳ ಪಡೆಯುವವರು ಮತ್ತು ಅಲ್ಲಿಯ ಭ್ರಷ್ಟಾಚಾರಗಳ ಬಗ್ಗೆ ತಿಳಿದಿರುವ ನಿಮಗೆ ಇದರ ಮಹತ್ವದ ಬಗ್ಗೆ ಅನುಮಾನವಾಗಲಾರದು! ಕೋಟ್ಯಂತರ ರೂಪಾಯಿಗಳು...ಹೌದು ಸಾರ್, ಕೋಟ್ಯಂತರ ರೂಪಾಯಿಗಳು. ಮೋಸವೆಸಗಲು, ಹಾಳು ಮಾಡಲು ಮತ್ತು ವಿಶ್ವಾಸವನ್ನು ಭಗ್ನಗೊಳಿಸಲು ಈ ಸಲಹಾ-ಸಂಸ್ಥೆಗಳು ಕೋಟ್ಯಂತರ ರೂಪಾಯಿಗಳ ಹಣವನ್ನು ಸುರಿಯುತ್ತಿದೆ.”

“ಒಂದು ಪ್ಯಾರಾಗ್ರಾಫ್ ಆಯ್ತ?” ನಿದ್ರಿಸಲು ಕಾಲುಚಾಚುತ್ತಾ ಒಬ್ಬ ಕೇಳಿದ.

“ಇನ್ನೊಬ್ಬರಿಗೆ ಮಾತನಾಡಲು ಅವಕಾಶ ಕೊಡೋಣವೇ?” ನಾನು ತುಟಿಗಳ ಮೇಲೆ ಬೆರಳಿಟ್ಟುಕೊಂಡು ಕೇಳಿದೆ.

ಇದೆಲ್ಲದರ ಬಗ್ಗೆ ಅರಿವಿಲ್ಲದ ರಾಜೇಶ್ ಹೇಳಿದ, “ಆ ಹರಾಮ್‌ಜಾದಾ ಒಬ್ಬ ಮೈಕ್ರೋ ವ್ಯಾಸ್ಕುಲರ್ ಸರ್ಜನ್ ಆಗಿದ್ದ. ಅವನು ಬಹಳಷ್ಟು ರೋಗಿಗಳನ್ನು ಜೀವನದೆಡೆಗೆ ಮರಳಿ ತರಬಲ್ಲನಾಗಿದ್ದ! ಅಂತೆಯೇ ದೇವರಿಗೆ ಅತಿ ಪ್ರಿಯನೂ ಆಗವಂಥ ವ್ಯಕ್ತಿಯಾಗಿದ್ದ. ಬಟ್ ಹಿ ಥಾಟ್ ಅದರವೈಸ್. ಹೀಗೆ ಮಾಡಿದರೆ ಆಗಲ್ಲವೆಂದು ಯೋಚಿಸಿ ಅವನು ಎಮ್.ಬಿ.ಎ. ಮಾಡಿದ್ದ. ನಂತರ ಒಂದು ದೊಡ್ಡ ಕಂಪನಿಗೆ ಗೂಢಚಾರನಾದ. ಅವರಿಗಾಗಿ ಕೆಲಸ ಮಾಡಲು ಪ್ರಾರಂಭಿಸಿದ ...ನನಗೆ ಗೊತ್ತಿದೆ, ಸಾರ್. ಎಲ್ಲಾ ಗೊತ್ತಿದೆ ...ಅವನು ನಮ್ಮ ಕಂಪನಿಯ ಉನ್ನತ ಹುದ್ದೆಗೇರಿದ. ಅವನಿಗೆ ಪೂರ್ಣ ಅಧಿಕಾರವನ್ನು ಕೊಡಲಾಯಿತು. ಎಬ್ಸಲ್ಯೂಟ್ ಎವರ್. ಸಾರ್, ನೀವು ಆರ್‌ವೆಲ್‌ನನ್ನೂ ಓದಿರಬಹುದು! ಆರು ವರ್ಷಗಳ ಕಾಲ ಜೀವ ತೇಯ್ದು ಕೆಲಸ ಮಾಡುವ ವ್ಯಕ್ತಿ ಹೊರಗೆ...”

ಯಾಕೋ ಏನೋ, ಅವನಿಗೆ ಸಮಾಧಾನ ಮಾಡಲು ನನಗೆ ಮನಸ್ಸಾಗುತ್ತಿರಲಿಲ್ಲ. ನಾನಾದರೂ ಹೇಗೆ ಸಮಾಧಾನಪಡಿಸುವುದು? ಪ್ರತಿಯಾಗಿ ಅವನಿಗೆ ಹೇಳಿದೆ, “ಈಗ ನೀನು ನಿದ್ರೆ ಮಾಡಬೇಕು!”

“ಓ.ಕೆ.ಸಾರ್! ನಾನು ನಿದ್ದೆ ಮಾಡುತ್ತೇನೆ...ಗುಡ್ ನೈಟ್...ಹಸಿರು ಬಣ್ಣದ ರಗ್ಗು ಹೊದ್ದ ಸಹ್ಯಾದ್ರಿ ಬೆಟ್ಟದ ಮೇಲೆ ತಲೆಯಿಟ್ಟು...!”

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT