ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮವೆಂದರೆ ಪ್ರೇಮವಷ್ಟೇ!

Last Updated 3 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಮೈ ತೆನೂ ಫಿರ್ ಮಿಲಾಂಗಿ... ನಾ ನಿನಗೆ ಮತ್ತೆ ಸಿಗುವೆ...

ಆದರೆ ಎಲ್ಲಿ? ಹೇಗೆ ನನಗೂ ತಿಳಿಯದು,ಈ ನಶ್ವರ ಲೋಕದ ಹಂಗು ಆತ್ಮಕ್ಕಿಲ್ಲ, ನಾ ಯಾವ ಸ್ವರೂಪದಲ್ಲಾದರೂ ಮತ್ತೆ ಸಿಗುವೆ’ ಎಂದು ತಮ್ಮ ಸಂಗಾತಿ ಇಮರೋಜ್‍‍ರಿಗೆ ಮಾತು ಕೊಟ್ಟು ಹೋದ ಅಮೃತಾ ಪ್ರೀತಂ ಹೆಸರು ಯಾರಿಗೆ ಗೊತ್ತಿಲ್ಲ?! ಸಮಕಾಲೀನ ಭಾರತದ ಶ್ರೇಷ್ಠ ಕವಯತ್ರಿ, ಕಾದಂಬರಿಕಾರ್ತಿ, ಕತೆಗಾರ್ತಿಯಾಗಿ ಅಮೃತಾ ಪ್ರೀತಂ ಅಗ್ರಗಣ್ಯರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಪಡೆದ ಪಂಜಾಬಿನ ಮೊದಲ ಬರಹಗಾರ್ತಿ. ಭಾರತ ಹಾಗೂ ಪಾಕಿಸ್ತಾನದ ಸರಹದ್ದಿನಾಚೆ, ಸಪ್ತಸಾಗರದಾಚೆಗೂ, ಸಮಾನವಾಗಿ ಅಪಾರ ಮೆಚ್ಚುಗೆಯನ್ನು, ಕೀರ್ತಿ- ಗೌರವಗಳನ್ನು ಪಡೆದವರು.

ಸ್ವಾತಂತ್ರ್ಯಪೂರ್ವದ ಪಂಜಾಬಿನ ಗುಜರನ್‍ವಾಲಾದಲ್ಲಿ ಅಗಸ್ಟ್ 31, 1919ರಲ್ಲಿ ಹುಟ್ಟಿದ ಅಮೃತಾ ಚಿಕ್ಕಂದಿನಲ್ಲೆ ತಾಯಿಯನ್ನು ಕಳೆದುಕೊಂಡರು. ತಂದೆ ನಂದ್ ಸಾಧೂ (ಕರತಾರ್ ಸಿಂಗ್) ಸ್ವತಃ ಕವಿಯಾಗಿದ್ದು ಮಗಳಿಗೂ ಕವಿತೆ ಕಟ್ಟಲು ಪ್ರೋತ್ಸಾಹಿಸುತ್ತಿದ್ದರಂತೆ. ನಂದ ಸಾಧು ಅವರ ಕಟ್ಟಾ ಸಾಂಪ್ರದಾಯಿಕ ಹಾಗೂ ಧಾರ್ಮಿಕ ನಿಗರಾನಿಯಲ್ಲಿ ತುಂಬಾ ಕಟ್ಟುನಿಟ್ಟಿನಲ್ಲಿ ಬಾಲ್ಯ ಕಳೆದ ಅಮೃತಾ ಮುಂದೆ ತಮ್ಮ ಬದುಕನ್ನು ಯಾವುದೇ ಧಾರ್ಮಿಕ ಕಟ್ಟುಪಾಡುಗಳಲ್ಲಿ ಕಟ್ಟಿಹಾಕಿಕೊಳ್ಳದೇ ತನಗೆ ಒಳಿತೆನಿಸಿದ ಅಸಾಂಪ್ರದಾಯಿಕ ಹಾದಿಯನ್ನು ಆರಿಸಿಕೊಂಡಿದ್ದು ಅವರ ದಿಟ್ಟತನಕ್ಕೆ ಸಾಕ್ಷಿಯಾಗಿದೆ.

ಅಂದಿನ ಸ್ವಾತಂತ್ರ್ಯಪೂರ್ವದ ಹಾಗೂ ಸ್ವಾತಂತ್ರ್ಯೋತ್ತರದ ವಿಭಜನೆಯ ಕರಾಳ ಹಿಂಸಾಚಾರದ ಇತಿಹಾಸ ಅಮೃತಾ ಪ್ರೀತಮ್ ಅವರ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮಹಿಳೆಯರು ಹಿಂದುಳಿದಿದ್ದ, ತೀರಾ ಕಟ್ಟುಪಾಡುಗಳಿದ್ದ ಕಾಲಘಟ್ಟದಲ್ಲಿ ಅಮೃತಾರ ಬದುಕು ಬಾಲ್ಯದಿಂದಲೂ ಸಂಘರ್ಷಮಯ ವಾಗಿದ್ದು ಮುಂದೆ ಆಕೆಗೆ ಬದುಕೇ ಬಹಳಷ್ಟನ್ನು ಕಲಿಸಿತು. ಇಷ್ಟವಿಲ್ಲದ್ದನ್ನು ಪ್ರತಿಭಟಿಸುವ, ಬೇಡದ್ದನ್ನು ಪ್ರತಿರೋಧಿಸುವ ಹಾಗೂ ತನ್ನದೇ ಶರತ್ತು, ಸಿದ್ಧಾಂತಗಳ ಮೇಲೆ ಇಚ್ಛಿತ ಬದುಕನ್ನು ರೂಪಿಸಿಕೊಳ್ಳುವ ಆತ್ಮಸ್ಥೈರ್ಯ.

ಜೀವನವೆಂದರೆ ಪ್ರೀತಿಯ ಹುಡುಕಾಟ! ನಿರಂತರ ಅನ್ವೇಷಣೆ! ಹತ್ತು ವರ್ಷಕ್ಕೇ ತಾಯಿಯನ್ನು ಕಳೆದುಕೊಂಡ ಅಮೃತಾ ಇಮರೋಜ್ ಅವರ ಬದುಕಿನಲ್ಲಿ ಬರುವವರೆಗೂ ಹಿಡಿ ಪ್ರೀತಿಗಾಗಿ ತಹತಹಿಸುತ್ತಿದ್ದರು. ಸಾಹಿರ್ ಜತೆಗಿನ ವಿಫಲ ಪ್ರೇಮ ಅವರನ್ನು ಖಿನ್ನತೆಗೆ ತಳ್ಳಿತ್ತು. ಪತಿ ಪ್ರೀತಂ ಸಿಂಗ್ ಅವರೊಂದಿಗೆ ಮನಸ್ಸು ಬೆಸಗೊಳ್ಳಲೇ ಇಲ್ಲ.

ಉರ್ದು ಪತ್ರಿಕೆ “ಶಮಾ”ದಲ್ಲಿ ವಿನ್ಯಾಸಕಾರರಾಗಿದ್ದ ಇಮರೋಜ್ ಪಟೇಲ್ ನಗರದಲ್ಲಿ ಅಮೃತಾ ಮನೆ ಹತ್ತಿರವೇ ಒಂದು ಬಾಡಿಗೆ ಕೋಣೆಯಲ್ಲಿರುತ್ತಿದ್ದರು. ಅಮೃತಾ ಪತಿ ಪ್ರೀತಂ ಸಿಂಗ್‍ರೊಂದಿಗೆ ಇದ್ದಾಗಲೂ ಇಮರೋಜ್ ತಾವೇ ಮಕ್ಕಳ ಸ್ಕೂಲ್ ಬಿಟ್ಟ ನಂತರ ತಮ್ಮ ಕಚೇರಿಯಿಂದ ಹೋಗಿ ಸ್ಕೂಟರ್ ಮೇಲೆ ಕೂರಿಸಿಕೊಂಡು ಮನೆಗೆ ತಂದು ಬಿಡುತ್ತಿದ್ದರಂತೆ. ಅವರಿಗೆ ಯಾರೂ ನೀನು ಈ ಕೆಲಸ ವಹಿಸಿಕೋ ಎಂದು ಹೇಳಲಿಲ್ಲ. ಅವರೇ ಖುದ್ದಾಗಿ ಮಕ್ಕಳನ್ನು ಕರೆತರುವ ಕೆಲಸವನ್ನು ಮಾಡತೊಡಗಿದ್ದರು. ಅಲ್ಲಿಯವರೆಗೆ ಅಮೃತಾ ಯಾವತ್ತೂ ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ. ಅಡುಗೆಯವನಿದ್ದ. ಇಮರೋಜ್ ಮಕ್ಕಳನ್ನು ಕರೆತರುವ ಕೆಲಸ ವಹಿಸಿಕೊಂಡ ಮೇಲೆ ಅಮೃತಾ ತಾವೇ ಅಡುಗೆ ಮಾಡತೊಡಗಿದರು. ಇಮರೋಜ್ ಮಕ್ಕಳನ್ನು ಬಿಟ್ಟು ಕಚೇರಿಗೆ ಹೋಗುತ್ತಿದ್ದರಂತೆ. ಆಗೆಲ್ಲ ಅಮೃತಾ ಆಗ್ರಹಪಡಿಸಿ ಊಟಕ್ಕೆ ನಿಲ್ಲಿಸಿಕೊಳ್ಳುತ್ತಿದ್ದರಂತೆ.

ಒಮ್ಮೊಮ್ಮೆ ಪ್ರೀತಂ ಸಿಂಗರೂ ‘ನಿನ್ನಿಂದಾಗಿ ಅಮೃತಾ ಕೈಊಟ ಸಿಗುತ್ತಿದೆ, ಊಟ ಮಾಡು’ ಎನ್ನುತ್ತಿದ್ದರಂತೆ. ಪ್ರೀತಂ ಸಿಂಗ್ ಕೊನೆಗಾಲದಲ್ಲಿ ತುಂಬಾ ಅನಾರೋಗ್ಯದಲ್ಲಿದ್ದಾಗ ಅಮೃತಾ ಮತ್ತು ಇಮರೋಜ್ ಅವರನ್ನು ತಮ್ಮ ಹೌಸ್‍ಖಾಸ್ ಮನೆಗೆ ಕರೆತಂದು ಆರೈಕೆ ಮಾಡಿದ್ದನ್ನು ಇಮರೋಜ್ ಈಗಲೂ ನೆನಪಿಸಿಕೊಳ್ಳುತ್ತಾರೆ. ಪಟೇಲ್ ನಗರದಲ್ಲಿದ್ದಾಗ ಅಮೃತಾ ಆಗ ರೇಡಿಯೋದಲ್ಲಿ ಪಂಜಾಬಿ ಉದ್ಘೋಷಕಿಯಾಗಿ ಕೆಲಸ ಮಾಡುತ್ತಿದ್ದರು. ಸಂಬಳ ಕೇವಲ 5 ರೂಪಾಯಿ! ಆಗಲೂ ಇಮರೋಜ್ ಅವರೇ ಸ್ಕೂಟರಿನಲ್ಲಿ ಅವರನ್ನು ಆಕಾಶವಾಣಿಗೆ ಬಿಡುತ್ತಿದ್ದರು.

ಭಾರತದ ವಿಭಜನೆಯ ನಂತರ ಪಂಜಾಬಿನಿಂದ ದೆಹಲಿಗೆ ವಲಸೆ ಬಂದ ನಿರಾಶ್ರಿತರಿಗೆ ಸರಕಾರದಿಂದ ನೂರು ಗಜದ ಭೂಮಿ ಹಂಚಿಕೆಯಾಗುತ್ತಿತ್ತು. ಅಮೃತಾ ಮತ್ತು ಇಮರೋಜ್ ತಮ್ಮಲ್ಲಿದ್ದ ಹಣ ಹೂಡಿ K-25, ಹೌಜ್ ಖಾಸಿನ ಮನೆ ಕಟ್ಟಿಕೊಂಡರು. ಕೆಳಗಿನ ಮಜಲು ಮಕ್ಕಳಿಗೆ, ಮೇಲಿನ ಮಜಲಿನಲ್ಲಿ ಅಮೃತಾ ಹಾಗೂ ಇಮ್ರೋಜರಿಗೆ ಪ್ರತ್ಯೇಕ ಕೋಣೆಗಳು. ಮನೆಯ ಒಳವಿನ್ಯಾಸ, ಹೊರ ವಿನ್ಯಾಸ, ಹೆಸರಿನ ಕ್ಯಾಲಿಗ್ರಾಫೀ ಬರಹ ಎಲ್ಲ ಇಮರೋಜ್ ತಾವೇ ಬರೆದಿದ್ದರು. K-25 ಇಬ್ಬರೂ ಕಟ್ಟಿದ ಪ್ರೀತಿಯ ಗೂಡು! ಇಬ್ಬರೂ ಸೇರಿ ಪಾರಿಜಾತದ ಮರವನ್ನು ನೆಟ್ಟರು. ಶರದೃತುವಿನ ಮುಂಜಾವಿನಲ್ಲಿ ತಟ್ಟೆ ತುಂಬಾ ಪಾರಿಜಾತ ಆರಿಸಿ ತಂದು ಅಮೃತಾಳ ಮೇಜಿನ ಮೇಲಿಡುತ್ತಿದ್ದರು ಇಮರೋಜ್. ಆ ಮನೆಯ ಫಲಕದಲ್ಲಿ ಇಮರೋಜ್ ಹೀಗೆ ಬರೆಯುತ್ತಾರೆ...

ಯೇ ಮೈ- ಔರ್ ಯೇ ತೂ, ಔರ್ ಬೀಚ್ ಮೇ ಸಪನಾ…

ಅಮೃತಾ ಪ್ರಸಿದ್ಧಿಯ ಉತ್ತುಂಗದಲ್ಲಿದ್ದಾಗ ಸಾಹಿತ್ಯಿಕ ವಲಯದಲ್ಲಿ ಅವರ ಬಗ್ಗೆ ಕೆಟ್ಟ ಪ್ರಚಾರಗಳು, ಫಲಿಸದ ಸಾಹಿರ್ ಪ್ರೇಮ ಅವರನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದರೂ ಇಮರೋಜ್ ಯಾವುದಕ್ಕೂ ಬೆಲೆ ಕೊಡದೇ ಬೆನ್ನಿಗೆ ಹಿಮಾಲಯದಂತೆ ಅಚಲವಾಗಿ ನಿಂತಿದ್ದರು. ಇಮರೋಜ್ ಆಸರೆಯೊಂದು ಇರದಿದ್ದರೆ ಅಮೃತಾ ಯಾವತ್ತೋ ಚೂರುಚೂರಾಗಿರುತ್ತಿದ್ದರು. ನಿಜಕ್ಕೂ ಆಕೆ ಅದೃಷ್ಟವಂತೆ.

ಒಮ್ಮೆ ಅಮೃತಾ ಮಗ ನವರಾಜ್ ತಾಯಿಯನ್ನು ಕೇಳಿದನಂತೆ…

‘ಮಮ್ಮಾ… ನಾನು ಸಾಹಿರ್ ಅಂಕಲ್ ಮಗನಾ?' ಎಂದು

ಅಮೃತಾ ಶಾಂತವಾಗಿ ಹೇಳಿದರಂತೆ, ‘ಇಲ್ಲಾ…ಆಗಿದ್ದರೆ ಚೆನ್ನಾಗಿತ್ತು!’

ಹೀಗಿದ್ದರು ಅಮೃತಾ. ಸಾಹಿರ್ ಜತೆಗಿನ ಪ್ರೇಮವನ್ನೂ ಬಚ್ಚಿಡಲಿಲ್ಲ. ತನ್ನ ಮಗು ಗರ್ಭದಲ್ಲಿದ್ದಾಗಲು ಕೂಡ ಅದು ಸಾಹಿರ್‌ನನನ್ನೇ ಹೋಲಲಿ ಎಂದು ಬಯಸಿದ ಅಪ್ಪಟ ಪ್ರೇಮಿ. ಯಾವತ್ತೂ ಆಕೆ ಸುಳ್ಳನ್ನು ಬದುಕಲಿಲ್ಲ.

ಅಮೃತಾ ಹುಟ್ಟಾ ಬಂಡಾಯಗಾರ್ತಿ, ಆಕೆ ಚಿಕ್ಕವಳಿದ್ದಾಗಿನ ಒಂದು ಘಟನೆಯನ್ನು ‘ರಸೀದಿ ಟಿಕೇಟ್’ ನಲ್ಲಿ ಹೇಳುತ್ತಾರೆ.

ಬಹಳಷ್ಟು ಸ್ಟೀಲ್ ಗ್ಲಾಸುಗಳನ್ನು ಅಜ್ಜಿ ತೊಳೆದು, ಒರೆಸಿ ಶೆಲ್ಫಿನ ಮೇಲೆ ಜೋಡಿಸುತ್ತಿದ್ದಳಂತೆ. ಮೂರು ಗ್ಲಾಸುಗಳು ಮಾತ್ರ ಅಡುಗೆಕೋಣೆಯ ಹೊರಗೆ ಅನಾಥ ಮಕ್ಕಳಂತೆ ಕೂತಿರುತ್ತಿದ್ದವು. ಪುಟ್ಟ ಹುಡುಗಿ ಅಮೃತಾ ಅಜ್ಜಿಗೆ ಕೇಳುತ್ತಾಳೆ, ‘ಈ ಮೂರು ಗ್ಲಾಸುಗಳು ಇಲ್ಲ್ಯಾಕೆ ಇಡ್ತಿದ್ದೀ, ಅವೇಕೆ ಒಳಗಿಲ್ಲ?’ ಅಂತಾ. ಅಜ್ಜಿ ಹೇಳುತ್ತಾಳೆ, ‘ಇವು ಮನೆಗೆ ಬರುವ ಮುಸ್ಲಿಮರಿಗೆ ಚಹ ಮತ್ತು ಲಸ್ಸಿ ಕುಡಿಯಲು ಕೊಡೋಕೆ ಇಟ್ಟದ್ದು…’ ಅಂತ. ಆ ಮಾತು ಅಮೃತಾರಿಗೆ ಚೂರೂ ಹಿಡಿಸುವುದಿಲ್ಲ. ಆಕೆ ಅಜ್ಜಿಯೊಂದಿಗೆ ಜಗಳ ಕಾದು, ಉಪವಾಸ ಹೂಡಿ, ಮನೆಯಲ್ಲಿ ‘ಹಿಂದೂ’ ಗ್ಲಾಸು, ‘ಮುಸ್ಲಿಂ’ ಗ್ಲಾಸು ಅಂತ ಬೇರೆ ಬೇರೆ ಇರಕೂಡದು ಎಂದು ಹಠ ಹಿಡಿಯುತ್ತಾರೆ. ಕೊನೆಗೆ ಅಜ್ಜಿ ಸೋತು, ಮೊಮ್ಮಗಳು ಗೆಲ್ಲುತ್ತಾಳೆ. ಆಗ ಬಹುಶಃ ಅಜ್ಜಿಗೂ ಗೊತ್ತಿರಲಿಕ್ಕಿಲ್ಲ ಮೊಮ್ಮಗಳು ಮುಂದೆ ಮುಸ್ಲಿಮನೊಬ್ಬನ ಪ್ರೇಮದಲ್ಲಿ ಬೀಳುತ್ತಾಳೆಂದು.

ಸಾಹಿರ್ ಸೇದಿ ಬಿಟ್ಟ ಸಿಗರೇಟ್ ತುಂಡುಗಳನ್ನು ಎತ್ತಿಟ್ಟುಕೊಂಡು ತಮ್ಮ ಏಕಾಂತದಲ್ಲಿ ಕೂತು ಆ ತುಂಡುಗಳನ್ನು ಸೇದುತ್ತಿದ್ದಳಂತೆ. ಸಾಹಿರ್ ಮಿತಭಾಷಿ. ಗಂಟೆಗಟ್ಟಲೆ ಇಬ್ಬರೂ ಮಾತಿಲ್ಲದೇ ಮೌನದಲ್ಲಿ ಕೂತಿರುತ್ತಿದ್ದರು. ಅಮೃತಾ ‘ಮಾತಾಡು ಮಾತಾಡು’ ಎಂದರೂ ಹೆಚ್ಚು ಮಾತಾಡುತ್ತಿರಲಿಲ್ಲವಂತೆ. ‘ರೋಶನೀ ಮೇ ಮೈ ಬಾತ್ ನಹೀ ಕರ್ ಸಕತಾ’ ಅಂತಿದ್ದರಂತೆ. ಆಗ ಅಮೃತಾ ರೋಸಿಹೋಗಿ ‘ಈ ಸೂರ್ಯನನ್ನೇ ಬಚ್ಚಿಡಬೇಕು ಆಗಲಾದರೂ ನೀನು ಮಾತನಾಡುತ್ತೀ’ ಅನ್ನೋ ಪದ್ಯ ಬರೆದರು. ಸಾಹಿರ್‌ಗಾಗಿ ಬಹಳಷ್ಟು ಪದ್ಯಗಳನ್ನು ಬರೆದರು. ನೋವು- ಹತಾಶೆಯಲ್ಲಿ ಖಿನ್ನತೆ ಅವರನ್ನು ಸಾಯಿಸುತ್ತಿತ್ತು.

ಸಿಗರೇಟಿನಂತೆ ನಾನು ಮೌನವಾಗಿ ನೋವನ್ನು ಕುಡಿಯುತ್ತಿದ್ದೆ.

ಸಿಡಿಸಿದ ಬೂದಿಯಿಂದ ಕೆಲವು ಕವಿತೆಗಳು ಉದುರಿದವು!

**

ಅಮೃತಾ ಬರೆಯುತ್ತಾರೆ…..

ಆಯುಷ್ಯದ ಸಿಗರೇಟು ಉರಿದುಹೋಯಿತು

ನನ್ನ ಪ್ರೇಮದ ಗಂಧ

ಒಂದಿಷ್ಟು ನಿನ್ನುಸಿರಲ್ಲಿ

ಒಂದಿಷ್ಟು ಗಾಳಿಯಲ್ಲಿ ಬೆರೆಯಿತು!

ಅಮೃತಾಗೆ ಸಾಹಿರ್ ಪ್ರೀತಿ ಸಿಗಲಿಲ್ಲ! ಇಮರೋಜ್ ಕರಾರುವಾಕ್ಕಾಗಿ ಹೇಳುತ್ತಾರೆ- ‘ಸಾಹಿರ್ ಅಮೃತಾ ಕೋ ಕಭೀ ನಹೀ ಮಿಲತಾ!’ ಕಾಲಕ್ರಮೇಣ ಸಾಹಿರ್ ಬಗೆಗಿನ ಮೋಹವೇನೊ ಬಿಟ್ಟಿತು, ಆದರೆ ಸಿಗರೇಟ್ ಸೇದುವ ಚಟ ಅಮೃತಾಳನ್ನು ಕಚ್ಚಿಹಿಡಿಯಿತು.

ಇಮರೋಜ್, ಅಮೃತಾರಿಗೆ ಬದುಕೇ ನೀಡಿದ ಪ್ರೇಮದ ಉಡುಗೊರೆ. ಜನ್ಮವೊಂದು ಕರುಣಿಸಿದ ಅಮೂಲ್ಯವಾದ ಬದುಕನ್ನು ಇಬ್ಬರೂ ತಮ್ಮ ಉನ್ನತವಾದ ಪ್ರೇಮದಿಂದ ಸಾಕಾರಗೊಳಿಸಿದರು. ಇದು ಸಾಧ್ಯವಾದುದು ಇಬ್ಬರಲ್ಲಿನ ಧೃಡವಾದ ಪ್ರೀತಿ, ಅಚಲವಾದ ನಂಬಿಕೆ, ಷರತ್ತುಗಳಿರದ ನಿರ್ವ್ಯಾಜ್ಯ ಪ್ರೀತಿ ಹಾಗೂ ಸಮರ್ಪಣಾಭಾವದಿಂದಾಗಿ.

ತೀರಾ ಅನಾರೋಗ್ಯದಲ್ಲಿ ಬಳಲುವಾಗಲೂ ಅಮೃತಾ ಇಮರೋಜರನ್ನು ತಮ್ಮ ಹತ್ತಿರವೇ ಕೂರಲು ಆಗ್ರಹಪಡಿಸುತ್ತಿದ್ದರು. ಯಾವ ಆಸ್ಪತ್ರೆಗೂ ದಾಖಲಾಗಲು ಇಷ್ಟಪಡಲಿಲ್ಲವಂತೆ. ಕೊನೆಗಾಲದಲ್ಲಿ ಅವರು ತಮ್ಮ ಪ್ರಿಯ ಇಮರೋಜರಿಗೆ ಮತ್ತೆ ನಾನು ನಿನಗೆ ಸಿಗುತ್ತೇನೆ– ಎಂದು ಪದ್ಯ ಬರೆಯುತ್ತಾರೆ. ಅದಕ್ಕೆ ಇಮರೋಜ್ ಹೀಗೆ ಉತ್ತರಿಸುತ್ತಾರೆ…

ನಮ್ಮ ಗೂಡೀಗ ನಲವತ್ತು ವರ್ಷದ್ದಾಯಿತು, /ನೀನೂ ಹಾರುವ ತಯಾರಿಯಲ್ಲಿದ್ದೀಯಾ/ ಇಂದು ಈ ಹಾರುವಿಕೆಗೂ /ಈ ಹೋಗುವಿಕೆಗೂ /ಈ ಮನೆಯ ಕಣ ಕಣವೂ/ನಿನಗೆ ವಿದಾಯ ಹೇಳುತ್ತಿದೆ...

ಇಮರೋಜರ ಈ ಸಾಲುಗಳನ್ನು ಓದುವಾಗ ಕಣ್ಣು ಮಂಜಾಗುತ್ತವೆ.

ಸಮಕಾಲೀನ ಪುರುಷ ಬರಹಗಾರರ ನೆರಳಿನಿಂದ ಹೊರಬಂದು ಪಂಜಾಬಿ ಸಾಹಿತ್ಯದಲ್ಲಿ ಸ್ವತಂತ್ರವಾಗಿ ಎತ್ತರಕ್ಕೇರಿದ ಮಹಿಳೆಯಾಗಿ ಅವರು ವಿಶಿಷ್ಟರು. ಆಕೆ ಕವಿ ಮಾತ್ರವಾಗದೇ ನಿಜಕ್ಕೂ ಕ್ರಾಂತಿಯ ವ್ಯಕ್ತಿಯಾಗಿದ್ದರು. ಬದುಕಿನ ಆಯ್ಕೆ, ಸಾಹಿತ್ಯ, ವೈಚಾರಿಕತೆ ಅವರಿದ್ದ ಕಾಲಕ್ಕಿಂತಲೂ ಮುಂದುವರಿದವಾಗಿದ್ದವು. ಅವರ ಅದಮ್ಯವಾದ ಜೀವನಪ್ರೀತಿ, ಸಂಘರ್ಷ, ಹಿಡಿ ಪ್ರೀತಿಗಾಗಿ ತಹತಹಿಸಿದ ಯಾತನೆಗಳೆಲ್ಲವೂ ಎಲ್ಲೋ ಒಂದು ಕಡೆ ನಮ್ಮೆಲ್ಲರದೂ ಆಗಿಬಿಡುವ ಅನನ್ಯತೆಯಲ್ಲೇ ಅಮೃತಾ ಆಪ್ತವಾಗುತ್ತಾರೆ.

ಅಕ್ಟೋಬರ್ 31 ಅವರ ಪುಣ್ಯತಿಥಿ! ಈ ವರ್ಷ ಅಮೃತಾರ ಜನ್ಮ ಶತಮಾನೋತ್ಸವ ಕಾಲ. ನನ್ನ ಪ್ರೀತಿಯ ಅಮೃತಾ ಈಗಿಲ್ಲ ಆದರೆ ಆಕೆ ಇಲ್ಲೆ ನಮ್ಮೊಳಗೇ, ಅನಂತವಾದ ಪ್ರೇಮವನ್ನೂ, ವಿರಹವನ್ನೂ ಅನುಭವಿಸುವ ಪ್ರತಿ ಪ್ರೇಮಿಯ ಹೃದಯಗಳಲ್ಲೂ ಜೀವಂತವಿದ್ದಾರೆ...

‘ಅವಳು ಶರೀರ ತ್ಯಜಿಸಿದ್ದಾಳೆ, ಸಾಂಗತ್ಯವನ್ನಲ್ಲ!’ ಎನ್ನುವ ಇಮರೋಜರ ದನಿ ಕೇಳಿದಂತಾಗಿ ಎದೆಭಾರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT