ಮಂಗಳವಾರ, ಅಕ್ಟೋಬರ್ 26, 2021
21 °C

‘ಅನಿಶ್ಚಿತತೆ’ಯ ನಿಶ್ಚಿತ ಮುದ್ರಕಗಳು

ಡಾ.ಎಂ.ಎಸ್.ಮೂರ್ತಿ Updated:

ಅಕ್ಷರ ಗಾತ್ರ : | |

Prajavani

‘ಅನಿಶ್ಚಿತ’ ಸ್ಥಿತಿ ಕುರಿತಂತೆ ನಿಶ್ಚಿತವಾದ ಒಂದು ಕಲಾಪ್ರದರ್ಶನ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿದೆ. ದೃಶ್ಯಕಲೆಯ ಈ ಹೊತ್ತಿಗೆ ಇದು ಒಂದು ಮಹತ್ವದ ಕಲಾ ಪ್ರದರ್ಶನವಾಗಿದೆ.

ನೋಟದ ಸಂವೇದನೆಯನ್ನು ಅವಲಂಬಿಸಿರುವ ದೃಶ್ಯಕಲೆ, ಅಕ್ಷರದಂತೆ ಧ್ವನಿಸಿ ಮಾತನಾಡಲಾರದು; ಅದರ ಸಂವಹನ ನಿಶ್ಯಬ್ದ. ಕಣ್ಣಿಗೆ ಕಾಣುವ ಆಕಾರ, ರೂಪಗಳ ಮೂಲಕ ಆಲೋಚನೆ, ಸಂವೇದನೆ ಮತ್ತು ಚಿಂತನೆಗಳನ್ನು ರೂಪಕವಾಗಿ ನಿರೂಪಿಸುವ ಕಲೆ ಸಂಕೀರ್ಣವೂ ಅದೇ ಕಾಲಕ್ಕೆ ಸರಳವೂ ಹೌದು. ಸಮಾಜದ ಇಂದಿನ ದುರಿತ ಕಾಲದ ಪರಿಣಾಮವನ್ನು ಮತ್ತು ದೃಶ್ಯಕಲಾ ಸಮುದಾಯದ ಅನಿಶ್ಚಿತತೆಯನ್ನು ಪ್ರತಿನಿಧಿಸಿದಂತೆ ಕಾಣುವ ಕರ್ನಾಟಕದ 75 ಕಲಾವಿದರ ರಚನೆಗಳು ಒಂದೇ ಅಳತೆಯ, ಒಂದೇ ಮಾಧ್ಯಮದಲ್ಲಿ ಸಂರಚನೆಗೊಂಡು ಸಾರ್ವಜನಿಕವಾಗಿ ಪ್ರದರ್ಶನ ಗೊಂಡಿವೆ.

ಕಾಣುವ ಕಣ್ಣಿಗೆ ಒಂದು ಕಲಾಕೃತಿ ತನ್ನ ರಾಚನಿಕ ಕೌಶಲದಿಂದ ಅಥವಾ ಕೃತಿಯಲ್ಲಿನ ಅವ್ಯಕ್ತ ವೈಚಾರಿಕ, ಸೈದ್ಧಾಂತಿಕ ದೃಶ್ಯರೂಪಕಗಳ, ತರ್ಕ ಮೀಮಾಂಸೆಗಳ ಕಲಾ ಸಮೀಕರಣಗಳಿಂದ ಆಕರ್ಷಣೆಯಾಗಿ ಗಮನ ಸೆಳೆಯಬಹುದು. ಇಂತಹ ಸಕಾರಣಗಳು ಅಲ್ಲದೆಯೂ ಕೆಲವೊಮ್ಮೆ ಕಲಾ ಸಂದರ್ಭದ ವಸ್ತು, ವೈವಿಧ್ಯ, ಪ್ರಯೋಗ, ನೂತನ ಆವಿಷ್ಕಾರಗಳೆಲ್ಲ ಕಲೆಯ ವಸ್ತುವಾಗಿ ಕಲಾವಿದರು ವಿಶಿಷ್ಟವಾದ ನೆಲೆಯಲ್ಲಿ ನಡೆಸುವ ಕಲಾ ಪ್ರದರ್ಶನಗಳೂ ಸಾಮಾಜಿಕವಾಗಿ ಗಮನಾರ್ಹವಾಗುತ್ತವೆ. ಅಂತಹ ವಿಭಿನ್ನ ಆಲೋಚನೆಯ, ಚಿಂತನೆಯ ಪ್ರಾಯೋಗಿಕ ಕಲಾಪ್ರದರ್ಶನಗಳು ಚಾರಿತ್ರಿಕವಾಗಿಯೂ ಕಲಾ ಸಮುದಾಯದ ನಡೆಯನ್ನು, ಅದರ ಕರ್ತೃವಿನ ಆಶಯ ಮತ್ತು ಅಸ್ತಿತ್ವವನ್ನು ಲೋಕಕ್ಕೆ ಸ್ಪಷ್ಟಪಡಿಸಲು ಸಾಕ್ಷಿಪ್ರಜ್ಞೆಯಾಗಿ ದಾಖಲಾಗುತ್ತವೆ.

ಕಲಾವಿದನನ್ನು, ಸಮುದಾಯವನ್ನು ಮತ್ತು ನೋಡುಗರನ್ನು ಏಕಕಾಲಕ್ಕೆ ಸಂಚಲನಗೊಳಿಸುವ ಆಧುನಿಕ ಆಲೋಚನಾ ಕ್ರಮಗಳು ಒಂದಷ್ಟು ಹೊಸ ಪ್ರೇಕ್ಷಕರನ್ನೂ ಸೃಷ್ಟಿಸಿಕೊಳ್ಳಬಹುದು. ‘ಅನಿಶ್ಚಿತತೆ’ ಪ್ರದರ್ಶನ ಕೂಡ ಕರ್ನಾಟಕದ ಕಲಾವಲಯದ ಇಂತಹುದೇ ಸಂಚಲನವನ್ನು ಉಂಟುಮಾಡುವ ಕ್ರಿಯಾಶೀಲ ಪ್ರಯತ್ನವಾಗಿದೆ. ಕಲಾವಿದರಾದ ಅರ್ಪಿತಾ ಆರ್.ಜಿ., ಅನಿತಾ ಎನ್. ಮತ್ತು ಮನುಚಕ್ರವರ್ತಿ ಕೆ.ಎನ್. ತಮ್ಮ ಇತರ ಕಲಾವಿದ ಮಿತ್ರರೂ ಸೇರಿ ರಾಜ್ಯದಾದ್ಯಂತ ಕಲಾವಿದರನ್ನು ಸಂಪರ್ಕಿಸಿ ಯೋಜಿಸಿದ ಫಲವಾಗಿ ರಾಜ್ಯದಲ್ಲಿ ಪ್ರಪ್ರಥಮ ‘ಮರ ಮುದ್ರಕ’ಗಳ (wood print) ಕಲಾವಿದರ ಕಲಾಕೃತಿಗಳ ಪ್ರದರ್ಶನ ಯಶಸ್ವಿಯಾಗಿ ನಡೆದಿದೆ.

ಸಿದ್ಧ ಮಾದರಿ ಕ್ಯೂರೇಟರ್, ಗ್ಯಾಲರಿಗಳ ಹಂಗಿಲ್ಲದೆ ಕಲಾವಿದರೇ ಕಲಾ ಸಮುದಾಯದ ಪರವಾಗಿ ಆಯೋಜಿಸಿದ ಈ ಪ್ರದರ್ಶನದಲ್ಲಿ ತಾರತಮ್ಯವಿಲ್ಲದೆ ಸ್ಪಂದಿಸಿದ ಎಲ್ಲ ಕಲಾವಿದರನ್ನು ಆಯ್ಕೆ ಮಾಡಿರುವುದು ವಿಶೇಷ ಮತ್ತು ಪ್ರಸ್ತುತ ಕಲಾಸಮುದಾಯದ ಸಂಘಟನೆಯ ದೃಷ್ಟಿಯಿಂದ ಮಹತ್ವದ ಪ್ರಗತಿಪರ ನಿಲುವಾಗಿ ಶ್ಲಾಘನೀಯ ಪ್ರಯತ್ನವಾಗಿದೆ.


ಮಲಗಿದ ನಾಯಿಗೆ ಏನೇನ್‌ ಕನಸೋ...

1980ರ ದಶಕದಿಂದ ಕರ್ನಾಟಕ ಕಲಾ ಚಟುವಟಿಕೆಗಳು ಅತಿ ಉತ್ಸಾಹದಲ್ಲಿ ಆರಂಭವಾಗಿ ಅದರ ಮೂಲ ಉದ್ದೇಶಗಳನ್ನು ಸ್ಪಷ್ಟಪಡಿಸಿಕೊಳ್ಳಲಾಗದೆ ನೆಲ ಕಚ್ಚಿವೆ. ಈ ಹಿನ್ನೆಲೆಯಿಂದ ಪ್ರಾಮಾಣಿಕ, ನಿಷ್ಠೆಯಿಂದ ಸಾಕಾರಗೊಂಡಂತೆ ಕಾಣುವ ಈ ಮಹತ್ವದ ಪ್ರದರ್ಶನವು ಮೂಡಿಸಿದ ಪ್ರೇರಣೆ ಸಕಾರಾತ್ಮಕ ಬೆಳವಣಿಗೆಗೆ ಸ್ಫೂರ್ತಿಯಾಗುವ ಎಲ್ಲ ಸೂಚನೆಗಳನ್ನು ನೀಡುತ್ತಿದೆ.

ಸಂಸ್ಕೃತಿಯ ಅಂಚಿಗೆ ಬಂದು ನಿಂತಿರುವ ಕಲಾ ಸಮುದಾಯವು ನಮ್ಮ ಸಮಾಜದ ಸಾಂಸ್ಕೃತಿಕ ಪ್ರಜ್ಞೆಯ ಕೇಂದ್ರಕ್ಕೆ ಸಾಗುವ ವೈಚಾರಿಕ, ತಾತ್ವಿಕ ನೆಲೆಯಲ್ಲಿ ಈ ಯಶಸ್ವಿ ಪ್ರದರ್ಶನದ ರೂವಾರಿಗಳಾದ ಯುವಕಲಾವಿದರು ದುಡಿದಿದ್ದಾರೆ. ಇಂತಹ ಪ್ರಯತ್ನಗಳು ಹೆಚ್ಚಿದಲ್ಲಿ ದೃಶ್ಯಕಲೆಯ ಮೌಲ್ಯ ಮತ್ತು ಘನತೆ ಹೆಚ್ಚಿ ಇನ್ನಷ್ಟು ಯುವ ಕಲಾವಿದರ ಬೆಳವಣಿಗೆಗೆ ಸಕಾರಣವಾಗಬಹುದು.


ಭೂಮಿಯ ಕುಟುಂಬವೇನು ಸಣ್ಣದೇ ಮತ್ತೆ?
ಕಲಾಕೃತಿ: ವಿಷ್ಣು ಪಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು