ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಗುಣಿಯ ಗೆರೆಗಳಲ್ಲಿ ಬುದ್ಧನ ಬೆಳಕು

Last Updated 25 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಎಂ.ಎಸ್‌. ಮೂರ್ತಿ ಅವರ ‘ದಿ ಬೌಲ್‌’ ಕಲಾಕೃತಿಗಳ ಪ್ರದರ್ಶನದಲ್ಲಿ ಬೌಲ್‌ ಅಥವಾ ಬೋಗುಣಿ, ಗೌತಮ ಬುದ್ಧನ ಭಿಕ್ಷಾ ಪಾತ್ರೆಯ ರೂಪಕ. ಬುದ್ಧ, ಬೆಳಕು, ನಿಶ್ಶಬ್ದ, ಅದರೊಳಗಿನ ಭಾವಾಭಿವ್ಯಕ್ತಿ, ಬುದ್ಧ ಭಿಕ್ಷೆಗೆ ಒಡ್ಡಿದ ಪಾತ್ರೆ, ತುತ್ತು ಖಾಲಿಯಾಗುತ್ತಲೇ ಬೋರಲಾಗಿ ಕೂರುವ ಅದೇ ಪಾತ್ರೆ... ಬುದ್ಧನ ಮೂಲಕ ನಮ್ಮೊಳಗನ್ನು ಬೆಳಗುವ ಚಿಂತನೆಗಳಿಗೆ ಹಚ್ಚುವ ಸರಣಿ ಕಲಾಕೃತಿಗಳ ಗುಚ್ಛವೇ ‘ದಿ ಬೌಲ್‌’.

ತಮ್ಮ ಕಲಾಕೃತಿ, ಭಿಕ್ಷಾಪಾತ್ರೆಯ ಮೂಲಕ ಅವರು ಹೇಳಹೊರಟಿರುವ ಸಂಗತಿಗಳು, ಸಮಕಾಲೀನ ಜಗತ್ತಿಗೆ ಬುದ್ಧ ತತ್ವಗಳನ್ನು ಅನ್ವಯಿಸುವ ಬಗೆಗಳನ್ನು ಎಂ.ಎಸ್.ಮೂರ್ತಿ ಅವರು ಹೀಗೆ ವಿವರಿಸುತ್ತಾರೆ...

‘ಎರಡು ದಶಕ ಬುದ್ಧನನ್ನು ಓದಿ ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದೆ. ಅಕ್ಷರವೆಂದರೆ ನಾವು ಕಂಡುಕೊಂಡ ಆಯಾಮದಲ್ಲಿ ಬುದ್ಧನನ್ನು ವಿವರಿಸುವುದು! ಬುದ್ಧನನ್ನು ನಮ್ಮ ಒಳನೋಟಗಳಿಗೆ ದಕ್ಕಿಸಿಕೊಂಡು ಹೋದಂತೆ ಅವನು ಅಮೂರ್ತನಾಗುತ್ತಾ ಹೋಗುತ್ತಾನೆ. ಭಿಕ್ಷಾ ಪಾತ್ರೆ ಒಂದು ರೂಪಕವಷ್ಟೇ. ಬುದ್ಧ ಹೇಳಿದ ‘ಆಸೆಯೇ ದುಃಖಕ್ಕೆ ಮೂಲ’ ಎಂಬ ಲೋಕಮಾನ್ಯ ತತ್ವಕ್ಕೆ ಭಿಕ್ಷಾಪಾತ್ರೆಗಿಂತ ದೊಡ್ಡ ರೂಪಕ ಇನ್ನೊಂದಿಲ್ಲ. ಭಿಕ್ಷೆಗೆ ಒಡ್ಡುವಾಗ, ಆಹಾರ ಸ್ವೀಕರಿಸಿದ ಬಳಿಕ ತೊಳೆದು ಬೋರಲು ಹಾಕಿದಾಗ ಹಾಗೂ ಮುಂದಿನ ಸಲ ಭಿಕ್ಷೆಗೆ ಒಡ್ಡುವಾಗ ಒಂದೊಂದು ಜೀವನಸತ್ಯಗಳನ್ನು ಅವನು ತೋರಿಸಿಕೊಟ್ಟಂತೆ ನನಗನಿಸಿತು. ಹಾಗೆ ನನ್ನನ್ನು ಕಾಡಿದ, ಕಾಡುತ್ತಲೇ ಇರುವ ಒಳನೋಟಗಳಿಗೆ ದೃಶ್ಯ ರೂಪ ನೀಡಬೇಕು ಎಂದು ನಿರ್ಧರಿಸಿದೆ. ಹಾಗಾಗಿ ಅಂದಾಜು 10 ವರ್ಷ ಈ ನಿಟ್ಟಿನಲ್ಲಿ ಕೆಲಸ ಮಾಡಿದೆ.

‘ಭಿಕ್ಷಾ ಪಾತ್ರೆಯ ಮೂರು ನೋಟಗಳಲ್ಲಿ ಬುದ್ಧನ ತ್ರಿಪಿಟಕಗಳನ್ನು ನಾನು ಕಾಣುತ್ತೇನೆ. ಸ್ವೀಕಾರ, ನಿರಾಕರಣೆ ಮತ್ತು ಸಂತೃಪ್ತಭಾವದ ದ್ಯೋತಕವಾಗಿ ನಾನು ಕಾಣುತ್ತೇನೆ. ಭಿಕ್ಷೆ ಸ್ವೀಕರಿಸಲು ಸಿದ್ಧವಾಗಿರುವ ಪಾತ್ರೆಯನ್ನು, ಹೊಸತನಕ್ಕೆ ಅಥವಾ ಬದಲಾವಣೆಗೆ ಒಡ್ಡಿಕೊಳ್ಳಲು ಸಿದ್ಧನಿರುವ ವ್ಯಕ್ತಿಗೆ ಹೋಲಿಸಬಹುದು. ಬೋರಲು ಹಾಕಿದ ಬೋಗುಣಿ ಎಲ್ಲವನ್ನೂ ನಿರಾಕರಿಸುವ ವ್ಯಕ್ತಿಯಾಗಬಹುದು. ಬೋಗುಣಿಯ ಮೂರನೆಯ ನೋಟವು ಸ್ವೀಕಾರ ಮನೋಭಾವದ ವ್ಯಕ್ತಿಯ ಸಂತೃಪ್ತಿಯ ದ್ಯೋತಕವೆಂದು ನಾನು ಭಾವಿಸುತ್ತೇನೆ’ ಎಂದು ಅವರು ವಿವರಿಸುತ್ತಾರೆ.

‘ದಿ ಬೌಲ್‌’ ಸಂಗ್ರಹದಲ್ಲಿ ಪ್ರದರ್ಶನಕ್ಕಿಟ್ಟಿರುವುದು ಕೇವಲ ಐದು ಕಲಾಕೃತಿಗಳನ್ನು. ಬೃಹತ್ ಆಕಾರದ ಈ ಕಲಾಕೃತಿಗಳಲ್ಲಿ ಸೀಮಿತ ಬಣ್ಣಗಳನ್ನು ಬಳಸಿರುವುದು ಗಮನಾರ್ಹ. ಬುದ್ಧನ ಸರಳತೆಗೆ, ಲೋಕಾಂತತೆಗೆ ಹೊಂದುವಂತಿವೆ ಈ ಬಣ್ಣಗಳು. ಗಾಢ ನೀಲಿಯಿಂದ ತಿಳಿನೀಲಿ, ತಿಳಿಯಾದ ಆಕಾಶವನ್ನು ನೆನಪಿಸುವ ನೀಲಿ ಮಿಶ್ರಿತ ಕಂದು ಬಣ್ಣ, ಮೋಡವನ್ನೂ ಬುದ್ಧ ಹೇಳುವ ಬೆಳಕನ್ನೂ ಪ್ರತಿನಿಧಿಸುವಂತಿರುವ ಬಿಳಿ, ನೀಲಿಮಿಶ್ರಿತ ಕಪ್ಪು ಬಣ್ಣಗಳೇ ಈ ಐದೂ ಕಲಾಕೃತಿಗಳಲ್ಲಿ ಬಳಕೆಯಾಗಿವೆ.

‘ಬುದ್ಧನ ಸಂದೇಶಗಳಿಗೆ ಪ್ರಾತಿನಿಧಿಕವಾಗಿ ಈ ಬಣ್ಣಗಳನ್ನು ಆರಿಸಿದ್ದೀರಾ?’ ಎಂದು ಕೇಳಿದರೆ ಇಲ್ಲ ಎನ್ನುತ್ತಾರೆ, ಮೂರ್ತಿ. ಅಮೂರ್ತ ಕಲಾಕೃತಿಯೊಂದು ಪ್ರತಿ ನೋಡುಗನಲ್ಲೂ ಅವನದ್ದೇ ಆದ ಕಲ್ಪನೆಯನ್ನು ಮೂಡಿಸಿದಾಗ ಅಮೂರ್ತತೆಗೆ ನ್ಯಾಯ ಸಿಗುವುದು. ನನಗೆ ಕಪ್ಪಾಗಿ ಕಂಡ ಬಣ್ಣ ಬೇರೊಬ್ಬ ನೋಡುಗನಿಗೆ ಅವನ ಆ ಕ್ಷಣದ ಭಾವನೆಗೆ ಸರಿಯಾಗಿ ಕೆಂಪಾಗಿ ಕಾಣಬಹುದಲ್ಲ?’ ಎಂದು ನಗುತ್ತಾರೆ.

ಐದರಲ್ಲಿ ಎರಡು ಕಲಾಕೃತಿಗಳು ಸಂಯುಕ್ತ ಕಲಾಕೃತಿಗಳು. ಅಂದರೆ ಎರಡು ಪ್ರತ್ಯೇಕ ಕಲಾಕೃತಿಗಳನ್ನು ಜೋಡಿಸಿ ರೂಪಿಸಿದ ಕಲಾಕೃತಿ. ಗಾಢ ಮತ್ತು ಮಂದ ಬಣ್ಣಗಳ ಸಮ ಸಂಯೋಜನೆ ಬೋಗುಣಿಯ ಚಿತ್ರಣವನ್ನು ಕಟ್ಟಿಕೊಟ್ಟರೂ ಬುದ್ಧನೆಂಬ ಪರಿಕಲ್ಪನೆ ಆ ಪಾತ್ರೆಯೆಂಬ ಮೂರ್ತದಾಚೆ ನಮ್ಮನ್ನು ಚಿಂತನೆಗೆ ಹಚ್ಚುವುದು ವಿಶೇಷ.

‘ಬುದ್ಧ ಎಂಬ ಅಸ್ಮಿತೆಯಿಂದ ಸಂಪೂರ್ಣ ಭಿನ್ನವಾದ ಶಬ್ದ ಮತ್ತು ನಿಶ್ಶಬ್ದದ ಪರಿಕಲ್ಪನೆಯಲ್ಲಿ ‘ಸೈಲೆನ್ಸ್‌’ (ನಿಶ್ಶಬ್ದ) ಎಂಬ ಕಲಾಕೃತಿಗಳನ್ನು ರಚಿಸಿದ್ದೆ. ಅದಕ್ಕೂ ಮೊದಲು ‘ಬುದ್ಧನೆಂಬ ಬೆಳಕು’ ಎಂಬ ಕಲಾಕೃತಿಗಳಿಗಿಂತ ಭಿನ್ನವಾಗಿ ಈ ಸಂಗ್ರಹ ಮೂಡಿಬಂದಿತ್ತು. ಆದರೆ ಅವರೆಡಕ್ಕಿಂತಲೂ ಹೆಚ್ಚು ಲೋಕಾಂತವಾಗುವ ಸಿದ್ಧಾಂತ ಬುದ್ಧನ ಭಿಕ್ಷಾಪಾತ್ರೆಯಲ್ಲಿದೆ ಎಂದು ಅನಿಸಿದ ಕಾರಣ ‘ದಿ ಬೌಲ್‌’ ಎಂಬ ಈ ಕಲಾಕೃತಿಗಳನ್ನು ರಚಿಸಿದೆ’ ಎಂದು ಹೇಳುತ್ತಾರೆ ಎಂ.ಎಸ್.ಮೂರ್ತಿ.

‘ವಾಸ್ತವವನ್ನು ನಾವು ಹೇಗೆ ಪರಿಭಾವಿಸುತ್ತೇವೆಯೋ ಅದಕ್ಕೆ ತಕ್ಕುದಾಗಿ ನಾವು ಬೋಗುಣಿಯಾದರೂ (ಕಂಟೇನರ್‌) ಆಗಬಹುದು, ಅದರೊಳಗಿನ ಆಹಾರವಾದರೂ (ಕಂಟೆಂಟ್‌) ಆಗಬಹುದು! ಆದರೆ ನಮ್ಮ ನಿತ್ಯ ಬದುಕಿನಲ್ಲಿ ನಾವು ಯಾವಾಗ ಕಂಟೇನರ್‌ ಆಗುತ್ತೇವೆ, ಯಾವಾಗ ಕಂಟೆಂಟ್‌ ಆಗುತ್ತೇವೆ ಎಂಬುದನ್ನು ಪ್ರಶ್ನಿಸಿಕೊಂಡರೆ ಬುದ್ಧನ ಬೆಳಕು ನಮ್ಮೊಳಗನ್ನು ಬೆಳಗುವುದು ಖಚಿತ’ ಎಂದು ಮೂರ್ತಿ ತಮ್ಮ ಕಲಾಕೃತಿಯ ಒಳಭಾವವನ್ನು ಬಿಚ್ಚಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT