ಗುರಿ ಬದಲಾದರೂ, ಜೀವನ ಸಾಗಲಿ: ನಿರಂಜನ್‌ ವಿ. ನೇರ್ಲಿಗೆ ಮನದಾಳ

ಬುಧವಾರ, ಮಾರ್ಚ್ 20, 2019
31 °C

ಗುರಿ ಬದಲಾದರೂ, ಜೀವನ ಸಾಗಲಿ: ನಿರಂಜನ್‌ ವಿ. ನೇರ್ಲಿಗೆ ಮನದಾಳ

Published:
Updated:
Prajavani

ತಮ್ಮ 29ನೇ ವಯಸ್ಸಿನಲ್ಲಿ ಅಂಗವಿಕಲರಾದ ಐಐಟಿ ಪದವೀಧರ ನಿರಂಜನ್‌ ವಿ. ನೇರ್ಲಿಗೆ ಅವರು ತಮ್ಮ ಚೊಚ್ಚಲ ಪುಸ್ತಕ ‘ಐ ಚೂಸ್‌ ಟು ಬಿ ಅನ್‌ಸ್ಟಾಪೆಬಲ್‌’ (I Choose to be unstoppable) ಕೃತಿ ರಚಿಸಿದ್ದಾರೆ. ತಮ್ಮ ಜೀವನ, ಹೋರಾಟ, ತಿರುವು, ತೆಗೆದುಕೊಂಡ ನಿರ್ಧಾರ, ಅನುಭವ, ಜೀವನದ ಗುರಿಯಲ್ಲಿ ಆದ ಬದಲಾವಣೆ, ಅದನ್ನು ಸಾಧಿಸಲು ಪಟ್ಟ ಪಣದ ಕುರಿತು 11 ಚಾಪ್ಟರ್‌ಗಳಲ್ಲಿ ವಿವರಿಸಿದ್ದಾರೆ.

ಅವರ ಹೊಸ ಕೃತಿ ಇತ್ತೀಚೆಗೆ ನಗರದ ಲ್ಯಾವೆಲ್ಲೆ ರಸ್ತೆಯ ರೋಟರಿ ಕ್ಲಬ್‌ನಲ್ಲಿ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಅವರು ‘ಮೆಟ್ರೊ’ದೊಂದಿಗೆ ಮಾತನಾಡಿದ್ದಾರೆ.

* ಪುಸ್ತಕ ಬರೆಯಲು ಪ್ರೇರಣೆಯಾದ ಅಂಶಗಳಾವವು?

ನಾನು ಹಾಸನದ ಆಕಾಶವಾಣಿ ಕೇಂದ್ರದಲ್ಲಿ ಎರಡು ವಾರದ ಎಪಿಸೋಡ್‌ನಲ್ಲಿ ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದೆ. ಇದನ್ನು ಕೇಳಿ ಆಕರ್ಷಿತರಾದ ಅಲ್ಲಿನ ಮಲ್ನಾಡ್‌ ಎಂಜಿನಿಯರಿಂಗ್‌ ಕಾಲೇಜಿನ ಆಡಳಿತ ಮಂಡಳಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ 2016ರಲ್ಲಿ ಸಂವಾದ ಏರ್ಪಡಿಸಿತ್ತು. ಆ ವೇಳೆ ನನ್ನ ಜೀವನಗಾಥೆಯನ್ನು ಕೇಳಿದ ವಿದ್ಯಾರ್ಥಿಗಳು, ‘ನಿಮ್ಮ ಜೀವನ ಹಲವರಿಗೆ ಸ್ಫೂರ್ತಿಯಾಗುತ್ತದೆ. ಹಾಗಾಗಿ ಈ ಕುರಿತು ಪುಸ್ತಕ ಬರೆಯಿರಿ’ ಎಂದು ಒತ್ತಾಯಿಸಿದರು. ಆಗ ಈ ಕುರಿತು ಮನಸ್ಸು ಮಾಡಿದೆ. ಆರು ತಿಂಗಳಿಂದ ಈ ಕುರಿತು ಕಾರ್ಯಮಗ್ನನಾಗಿದ್ದೆ.

* ಈ ಪುಸ್ತಕದ ವಸ್ತು ವಿಷಯವೇನು?

ನನ್ನ ಜೀವನದಲ್ಲಿ ಎದುರಾದ ಅಪಘಾತ, ಆ ನಂತರ ಜೀವನದ ಏಳುಬೀಳು, ಹೋರಾಟ, ಎದುರಿಸಿದ ಸವಾಲುಗಳ ಕುರಿತು ಬರೆದಿದ್ದೇನೆ. ಅಪಘಾತಕ್ಕೂ ಮುನ್ನ ನನ್ನ ಜೀವನದ ಗುರಿ ಏನಾಗಿತ್ತು? ಅಪಘಾತದಿಂದ ಶಾಶ್ವತ ಅಂಗವಿಕಲನಾದ ಮೇಲೆ ನನ್ನ ಗುರಿ ಮತ್ತು ಅದನ್ನು ಸಾಧಿಸುವ ದಾರಿಗಳು ಹೇಗೆ ಬದಲಾದವು. ನನ್ನ ಏಳಿಗೆಯಲ್ಲಿ ಸ್ನೇಹಿತರು, ಸಂಬಂಧಿಕರ ಪಾತ್ರ ಎಲ್ಲವನ್ನೂ ಬರೆದಿದ್ದೇನೆ. ಐಐಟಿ ಪದವಿಯ ನಂತರ ಸಿಕ್ಕ ಉದ್ಯೋಗ ನನ್ನನ್ನು ಅಮೆರಿಕಕ್ಕೆ ಕರೆದೊಯ್ಯಲಿತ್ತು. ಆದರೆ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದ ನಂತರ ನನ್ನ ಜೀವನದಲ್ಲಿ ಬದಲಾವಣೆಗಳಾದವು. ಕಾಲು ಸ್ವಾಧೀನ ಕಳೆದುಕೊಂಡಿತು. ನಡೆದಾಡಲು ಆಗಲಿಲ್ಲ. ಶಾಶ್ವತ ಅಂಗವಿಕಲನಾದೆ. ಗಾಲಿಕುರ್ಚಿ ನನಗೆ ಶಾಶ್ವತವಾಯಿತು. ಬಳಿಕ ನಾನು ಸ್ವಂತವಾಗಿ ‘ಎಕ್ಸೆಲ್‌ಪ್ಲಸ್‌ ಸರ್ವಿಸ್‌’ ಕನ್ಸಲ್ಟೇಷನ್‌ ಸ್ಥಾಪಿಸಿ, ಐಟಿ ಉದ್ಯೋಗಿಗಳಿಗೆ, ಬಹುರಾಷ್ಟ್ರೀಯ ಕಂಪನಿಗಳ ಸಿಬ್ಬಂದಿಗೆ ಕೌಶಲ ತರಬೇತಿದಾರನಾಗಿ ನಿಯೋಜನೆಗೊಂಡೆ. ಹತ್ತಾರು ದೇಶಗಳಿಗೆ ಹೋಗಿ ಅಲ್ಲಿನ ಎಂಎನ್‌ಸಿಗಳ ಸಿಬ್ಬಂದಿಗೆ ತರಬೇತಿ ನೀಡಿದ್ದೇನೆ. ಅಲ್ಲದೆ ನಾನೇ ಹಲವರಿಗೆ ಉದ್ಯೋಗ ಕೊಟ್ಟಿದ್ದೇನೆ. ಇವೆಲ್ಲ ಒಂದೆರಡು ದಿನದಲ್ಲಿ ಆದ ಸಾಧನೆಯಲ್ಲ. ಈ ಎಲ್ಲ ವಿಷಯಗಳನ್ನು 220 ಪುಟಗಳ ಪುಸ್ತಕದಲ್ಲಿ ದಾಖಲಿಸಿದ್ದೇನೆ.

* ನಿಮ್ಮ ಪುಸ್ತಕ ಅಂಗವಿಕಲರಿಗೆ ಹೇಗೆ ಸ್ಫೂರ್ತಿದಾಯಕ?

ನಾನು ಅಂಗವಿಕಲರನ್ನು ದೃಷ್ಟಿಯಲ್ಲಿಟ್ಟುಕೊಂಡು ಪುಸ್ತಕ ಬರೆದಿಲ್ಲ. ಇಂದು ವಿಶ್ವದಲ್ಲಿ ದೈಹಿಕ ಅಂಗವೈಕಲ್ಯಕ್ಕಿಂತ ಮಾನಸಿಕ ದೌರ್ಬಲ್ಯಗಳಿಂದ ಜನರು ನರಳುತ್ತಿದ್ದಾರೆ. ಉದ್ಯೋಗ, ಸಂಬಂಧ, ವ್ಯಾಸಂಗ, ಹಣಕಾಸು, ವ್ಯಾಪಾರ, ವಹಿವಾಟು ಇತ್ಯಾದಿ ಕ್ಷೇತ್ರಗಳಲ್ಲಿ ನೊಂದು ಬೆಂದು ಮಾನಸಿಕ ನೆಮ್ಮದಿ ಕಳೆದುಕೊಂಡವರಿದ್ದಾರೆ. ಅಂದುಕೊಂಡ ಗುರಿ ಸಾಧಿಸಲಾಗದೆ, ಜೀವನದಲ್ಲಿ ವೈಫಲ್ಯ ಎದುರಿಸಿದ್ದೇವೆ ಎಂಬ ಮನೋಭಾವ ಹಲವರಲ್ಲಿ ಬಂದುಬಿಟ್ಟಿದೆ. ಅಂಥವರಿಗೆ ನನ್ನ ‘ಐ ಚೂಸ್‌ ಟು ಬಿ ಅನ್‌ಸ್ಟಾಪೆಬಲ್‌’ ಪುಸ್ತಕ ಹೊಸ ಚೈತನ್ಯ, ಸ್ಫೂರ್ತಿ ನೀಡುತ್ತದೆ. ನಮ್ಮ ಅಗತ್ಯಕ್ಕೆ ತಕ್ಕಂತೆ ಗುರಿಯನ್ನೂ ಬದಲಿಸಿಕೊಂಡು ಜೀವನ ಸಾಗಿಸಬೇಕು. ಗುರಿ ಬದಲಾದ ಮಾತ್ರಕ್ಕೆ ಜೀವನ ಕೊನೆಯಾಗುವುದಿಲ್ಲ ಎಂಬ ಸಂದೇಶ ಈ ಪುಸ್ತಕದಲ್ಲಿದೆ.

* ನಿಮ್ಮ ಮಗನನ್ನು ಹೇಗೆ ಬೆಳೆಸಿದ್ದೀರಿ?

ಅಪಘಾತದ ಬಳಿಕ ನರ್ಸ್‌ ಒಬ್ಬರೊಡನೆ ನನ್ನ ವಿವಾಹ ಆಯಿತು. ನನಗೆ ಮಗುವಾಗುವುದಿಲ್ಲ ಎಂದು ಗೊತ್ತಾದ ಬಳಿಕ, 9 ತಿಂಗಳ ಮಗುವನ್ನು ದತ್ತು ಪಡೆದೆವು. ಮಗುವಿಗೆ ಎರಡೂವರೆ ವರ್ಷವಾಗುವಷ್ಟರಲ್ಲಿ ಪತ್ನಿ ನನಗೆ ವಿಚ್ಛೇದನ ನೀಡಿ ದೂರಾದಳು. ಮಗನಿಗೀಗ 19 ವರ್ಷ. ಬಿ.ಕಾಂ ಓದುತ್ತಿದ್ದಾನೆ. ಮಗುವನ್ನು ಸಾಕಿ, ಬೆಳೆಸಿದ ರೀತಿಯನ್ನೂ ಪುಸ್ತಕದಲ್ಲಿ ಅಕ್ಷರರೂಪಕ್ಕಿಳಿಸಿದ್ದೇನೆ.

* ಕನ್ನಡದಲ್ಲಿ ನಿಮ್ಮ ಪುಸ್ತಕ ತರುವ ಉದ್ದೇಶ ಇದೆಯಾ?

ಹೌದು, ಈ ಪುಸ್ತಕವನ್ನು ಕನ್ನಡದಲ್ಲೂ ತರುವ ಉದ್ದೇಶವಿದೆ. ನಾನು ದಾವಣಗೆರೆಯ ಜಿಲ್ಲೆಯವನಾಗಿದ್ದು, ಅಪ್ಪಟ ಕನ್ನಡಿಗ. ನನ್ನ ಭಾವನೆಗಳನ್ನು ಕನ್ನಡ ರೂಪಕ್ಕಿಳಿಸಿ, ಕನ್ನಡದ ಓದುಗರಿಗೂ ಪುಸ್ತಕ ಸಿಗುವಂತೆ ಮಾಡುತ್ತೇನೆ. 

**

ನಿರಂಜನ್‌ ಕುರಿತು: ದಾವಣಗೆರೆಯಲ್ಲಿ ಬಿ.ಇ (ಸಿವಿಲ್‌) ಪದವಿ ಮುಗಿಸಿದ ಬಳಿಕ ಅವರು ಮುಂಬೈನ ಐಐಟಿ ಸೇರಿದರು. ಬಳಿಕ ಅಲ್ಲಿನ ‘ಬಾಂಬೆ ಫೋರ್ಟ್‌’ನಲ್ಲಿ ಅವರಿಗೆ ಕೆಲಸ ಸಿಕ್ಕಿತು. ಆ ನಂತರ ಫಿಲಿಪ್ಸ್‌ ಕಂಪನಿಯ ‘ಹಾರಿಜನ್‌ ಟೆಕ್ನಾಲಜಿಸ್’ನಲ್ಲಿ ಕೆಲಸ ದೊರೆಯಿತು. ಇದೇ ಕಂಪನಿಯು ಅವರನ್ನು ಅಮೆರಿಕದಲ್ಲಿದ್ದ ತನ್ನ ಶಾಖೆಗೆ ಕಳುಹಿಸಲು ನಿರ್ಧರಿಸಿತ್ತು. ಇದರಿಂದ ಖುಷಿಯಾಗಿದ್ದ ನಿರಂಜನ್‌ ಅವರಿಗೆ, 1994ರ ನವೆಂಬರ್‌ 13ರಂದು ಆಘಾತ ಎದುರಾಯಿತು. ಅಂದು ಅವರು ವಾಸವಿದ್ದ ಮನೆಯ ನಾಲ್ಕನೇ ಮಹಡಿಯ ಮೊಗಸಾಲೆಯಿಂದ ಅರಿವಿಲ್ಲದೆ ನೆಲಕ್ಕೆ ಬಿದ್ದರು. ಈ ಆಪಘಾತ ಅವರ ಎರಡೂ ಕಾಲುಗಳ ಸ್ವಾಧೀನವನ್ನೇ ಕಸಿದುಕೊಂಡಿತು. ಬಲಗೈ ಮೂಳೆ ಎರಡು- ಮೂರು ಜಾಗದಲ್ಲಿ ಮುರಿದಿತ್ತು. ಅದೃಷ್ಟವಷಾತ್‌ ಅವರ ತಲೆಗೆ ಯಾವುದೇ ಪೆಟ್ಟು ಬಿದ್ದಿರಲಿಲ್ಲ. ಈ ಭೀಕರ ಸ್ಥಿತಿಯಿ೦ದ ಒ೦ದು ಘಟ್ಟದ ಪರಿಹಾರ ಕಾಣಲು ಅವರಿಗೆ ಬರೋಬ್ಬರಿ ಎರಡು ವರ್ಷಗಳೇ ಬೇಕಾಗಿತ್ತು.

‘ಇದು ನನ್ನ ಜೀವನದ ಪ್ರಮುಖ ತಿರುವು. ಇದರಿಂದಾಗಿ ಇಂದು ನಾನು ಹಲವರಿಗೆ ಸ್ಫೂರ್ತಿಯಾಗಿದ್ದೇನೆ. ನನ್ನ ಅನುಭವವನ್ನು ಆಧರಿಸಿ ‘ಸ್ಟಾಂಡ್‌ ಅಪ್‌’ ಎಂಬ ಕಾರ್ಯಕ್ರಮವನ್ನು ಕನ್ನಡ ಮತ್ತು ಇಂಗ್ಲಿಷ್‌ ರೂಪಿಸಿದ್ದೇನೆ. ಸದ್ಯದಲ್ಲಿಯೇ ಅದನ್ನು ಅನುಷ್ಠಾನಗೊಳಿಸಲಿದ್ದೇನೆ. ಇದು 90 ದಿನಗಳ ಕಾರ್ಯಕ್ರಮವಾಗಿದ್ದು ಗುರಿ, ಧ್ಯೇಯಗಳನ್ನು ಸಾಧಿಸಲು, ಸವಾಲುಗಳನ್ನು ಎದುರಿಸಲು ಜನರಿಗೆ ಆತ್ಮಸ್ಥೈರ್ಯ ತುಂಬುತ್ತದೆ. ಐದು ವರ್ಷಗಳಲ್ಲಿ ಲಕ್ಷ ಜನರಿಗೆ ಈ ಕಾರ್ಯಕ್ರಮ ತಲುಪಿಸುವ ಯೋಜನೆ ಹೊಂದಿದ್ದೇನೆ’ ಎನ್ನುತ್ತಾರೆ ನಿರಂಜನ್‌. ಅಮೆಜಾನ್‌ನಲ್ಲಿ ಅವರ ಪುಸ್ತಕ ಲಭ್ಯವಿದೆ. (ನಿರಂಜನ್‌ ಮೊಬೈಲ್‌: 9900055943) 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !